ಮಕ್ಕಳ ಚಿತ್ತವೃತ್ತಿಗಳು, ಕನಸುಗಳು ಎಲ್ಲವೂ ಅಮ್ಮನನ್ನು ಹಾದು ಹೋಗುವುದು. ಹಾಗಾಗಿ ಮಕ್ಕಳಿಗೆ ಅಮ್ಮನಿಂದ ಏನನ್ನೂ ಬಚ್ಚಿಡಲಾಗದು.
___

ಭಗವಾನ್ ಶ್ರೀ ಕೃಷ್ಣನು ಶುದ್ಧ ಬೋಧನು. ನೀವು ಬಯಕೆಗಳನ್ನು ಪೂರ್ಣವಾಗಿ ತ್ಯಜಿಸಿದಲ್ಲಿ ನಿಮ್ಮ ಮನದಲ್ಲಿ ಕೃಷ್ಣನ ನಿಜ ರೂಪ ಸ್ಪಷ್ಟವಾಗುವುದು.
___
ಮರಗಳು, ಬಳ್ಳಿಗಳು, ವಾತಾವರಣವೆಲ್ಲವೂ ರಾತ್ರಿ ನಿಶ್ಚಲವಾಗುತ್ತದೆ. ಪ್ರಾಣಿಗಳಲ್ಲದೆ, ಲೌಕಿಕರಾಗಿ ಜೀವಿಸುವವರವರನ್ನೂ, ನಿದ್ದೆ ಜಯಿಸುತ್ತದೆ. ಈ ಕಾರಣದಿಂದ, ವಾತಾವರಣದಲ್ಲಿ ಲೌಕಿಕ ವಿಚಾರಗಳ ತರಂಗಗಳು ಕಮ್ಮಿಯಾಗುತ್ತದೆ. ರಾತ್ರಿಯ ಅಂತಿಮ ಜಾವದಲ್ಲಿ ಹೂವುಗಳು ಅರಳುವುದು. ವಾತಾವರಣದಲ್ಲಿ ಆಗ ಒಂದು ವಿಶೇಷ ಜಾಗೃತಿ ಇರುತ್ತದೆ. ಈ ಸಮಯದಲ್ಲಿ ಧ್ಯಾನ ಮಾಡಿದರೆ ಕೂಡಲೆ ಮನಸ್ಸು ಏಕಾಗ್ರವಾಗುವುದು. ಬೇಕಷ್ಟು ಸಮಯ ತಪಸ್ಸಿನಲ್ಲಿ ಕೂತಿರಲೂ ಸಾಧ್ಯವಾಗುತ್ತದೆ. ಆದಕಾರಣ ತಪಸ್ವಿಗಳು ರಾತ್ರಿಗಾಗಿ ಕಾದಿರುತ್ತಾರೆ.
___

ಅಮ್ಮ ಸ್ವಾಭಾವಿಕವಾಗಿಯೆ ನಿರ್ಮಲೆ. ಮಕ್ಕಳ ವಿಚಾರಗಳಿಗೆ, ಕೃತಿಗಳಿಗೆ ಅನುಗುಣವಾಗಿ ಅಮ್ಮನ ಸ್ವಭಾವ ಬದಲಾಗುತ್ತದೆ. ಘರ್ಜಿಸಿ ಹಿರಣ್ಯಕಶಿಪುವಿನ ಎದುರಿಗೆ ಜಿಗಿದ ಘೋರನರಸಿಂಹನು, ಪ್ರಹ್ಲಾದನ ಬಳಿ ಸಾರಿದಾಗ ಶಾಂತನಾದ. ಹಿರಣ್ಯಕಶಿಪುವಿನ ಹಾಗೂ ಪ್ರಹ್ಲಾದನ ಪ್ರವೃತ್ತಿಗಳಿಗನುಗುಣವಾಗಿ ಗುಣಾತೀತನೂ, ನಿರ್ಮಲನೂ ಆದ ಭಗವಂತನು ಎರಡು ವಿರುದ್ಧ ಭಾವಗಳನ್ನು ತಾಳಿದನು. ಹಾಗೆಯೇ, ಮಕ್ಕಳ ಭಾವಗಳಿಗನುಗುಣವಾಗಿ ಅಮ್ಮನ ಭಾವವು ಬದಲಾಗುತ್ತದೆ. ’ಸ್ನೇಹಮಯಿ’ ಎಂದು ಹೊಗಳಲ್ಪಟ್ಟ ಅಮ್ಮ ಕೆಲವೊಮ್ಮೆ ತಟ್ಟನೆ ’ಕ್ರೂರಿ’ಯಾಗಿ ಬಿಡುತ್ತಾಳೆ. ಅದು ಮಕ್ಕಳ ವರ್ತನೆಯಲ್ಲಿರುವ ತಪ್ಪುಗಳನ್ನು ಸರಿಪಡಿಸಲೆಂದು ಮಾತ್ರ. ಮಕ್ಕಳು ಸರಿಯಾಗಿ ಅನುಷ್ಠಾನ ನಡೆಸದಿದ್ದಾಗ, ಶಿಸ್ತು ಸರಿಯಾಗಿ ಪಾಲಿಸದಿದ್ದಾಗ, ವಿನಯ ಭಾವ ಬಿಟ್ಟು ವರ್ತಿಸುವಾಗ, ಸಮಯ ಸುಮ್ಮನೆ ಪೋಲು ಮಾಡುತ್ತಿರುವಾಗ ಸ್ನೇಹಮಯಿಯಾದ ಅಮ್ಮ ಥಟ್ಟನೆ ಕ್ರೂರಿಯಾಗಿ ಬಿಡುತ್ತಾಳೆ. ಅಮ್ಮನ ಎಲ್ಲ ನಡತೆಯೂ ಮಕ್ಕಳ ಏಳಿಗೆಗಾಗಿಯೇ ಇರುತ್ತದೆ.
___
ದೇವರು ಸರ್ವವ್ಯಾಪಿಯಾಗಿದ್ದರೂ, ಸಾಧನೆಯಿಂದ ಮಾತ್ರವೇ ದೇವರನ್ನು ಅರಿಯಲೂ, ಆನಂದಿಸಲೂ ಸಾಧ್ಯವಾಗುತ್ತದೆ.
___
ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು.
___
ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ.
___

ಪ್ರಶ್ನೆ: ದೇವರ ಕೃಪೆಗೂ, ಮಹಾತ್ಮರ ಕೃಪೆಗೂ ಏನು ವ್ಯತ್ಯಾಸ ?

“ಆತ್ಮಕ್ಕೆ ಭೇದವಿಲ್ಲ. ಅದು ಎಲ್ಲರಲ್ಲೂ ಒಂದೇ. ಮಹಾತ್ಮರು ಆತ್ಮದ ಸ್ವರೂಪವನ್ನು ತಮ್ಮ ಅರಿವಿನ ಸ್ತರಕ್ಕೆ ತರುತ್ತಾರೆ, ಅಷ್ಟೆ. ನಾವೆಲ್ಲರೂ ಕನ್ನಡಿಗಳು. ಆದರೆ ನಮ್ಮಲ್ಲ್ಲಿ ಪಾದರಸವಿಲ್ಲ. ಮಹಾತ್ಮರ ತಪಸ್ಸಿನಿಂದ ಪಾದರಸ ಉದ್ಭವವಾಗುತ್ತದೆ. ಪಾದರಸವಿರುವ ಕನ್ನಡಿಯಲ್ಲಿ ತಾನೇ ಸ್ಪಷ್ಟವಾದ ಪ್ರತಿಬಿಂಬ ಕಾಣಿಸುವುದು ? ಒಬ್ಬ ಮಹಾತ್ಮನೆದುರಿಗೆ ಹೋದಾಗ ನಮ್ಮ ನಿಜವಾದ ಸ್ವರೂಪ ಅವರಲ್ಲಿ ಪ್ರತಿಫಲಿಸಿ ಕಾಣಲು ಸಾಧ್ಯವಾಗುತ್ತದೆ. ಅದನ್ನು ನೋಡಿ ನಮ್ಮ ಕುರೂಪವನ್ನೂ ಮಲಿನತೆಗಳನ್ನೂ ತೊರೆಯಲು ಸಾಧ್ಯವಾಗುತ್ತದೆ.

ಕರೆಂಟು ಬಲ್ಬಿನಲ್ಲಿ ಪ್ರಕಾಶಿಸುವ ಹಾಗೆ, ದೇವರು ಮಹಾತ್ಮರಲ್ಲಿ ಪ್ರತಿಫಲಿಸುತ್ತಾನೆ. ಅವನೆಂದಿಗೂ ತನ್ನಲ್ಲೇ ನೆಲೆ ನಿಂತಿರುತ್ತಾನೆ. ಮಹಾತ್ಮರು ತಮ್ಮಲ್ಲಿ ಶಕ್ತಿಯನ್ನು ಜಾಗೃತಗೊಳಿಸಿ, ಜೀವದುಂಬಿಸುತ್ತಾರೆ. ಭಗವದ್ಕೃಪೆ ಜಗತ್ತಿಗೆ ತಲಪುವುದು – ಜನಗಳಿಗೆ ಪ್ರಯೋಜನಕಾರಿಯಾಗುವುದು – ಮಹಾತ್ಮರಿಂದಾಗಿ. ಅದು ಮಹಾತ್ಮರಿಂದಲ್ಲದೆ ನಿಮಗೆ ನೇರವಾಗಿ ದೊರಕಬೇಕಾದರೆ, ಮೊದಲೇ, ನೀವು ಅದಕ್ಕೆ ಅನುಗುಣವಾಗಿ ಜೀವಿಸಿರಬೇಕು.”

ಪ್ರಶ್ನೆ: ಮಹಾತ್ಮರ ಹತ್ತಿರ ಹೋದರೆ ನಮಗೆ ಯಾವ ತರದ ಅನುಭವವಾಗುತ್ತದೆ? ಅದರಿಂದ ಏನು ಪ್ರಯೋಜನ?

“ಸಮುದ್ರ ತೀರದಲ್ಲಿ ಬಹಳ ಹೊತ್ತು ಕೂತಿದ್ದಮೇಲೆ ದೇಹವನ್ನು ನೆಕ್ಕಿ ನೋಡಿದರೆ ಉಪ್ಪೆನಿಸುವುದಿಲ್ಲವೇ ? ಊದುಬತ್ತಿ ಮಾಡುವ ಕಂಪೆನಿಗೆ ಹೋಗಿ ಹಿಂತಿರುಗಿ ಬಂದಾಗ ನಿಮ್ಮ ದೇಹವನ್ನು ಮೂಸಿ ನೋಡಿದರೆ ಆ ಪರಿಮಳ ನಿಮ್ಮಲ್ಲೂ ಇರುವುದು ಕಂಡು ಬರುತ್ತದೆ. ಆದರೆ ಅದು ನಿಮಗೆ ಯಾರೂ ಕೊಟ್ಟು ಸಿಕ್ಕಿದ್ದಲ್ಲ; ಅಲ್ಲಿ ಹೋದುದರಿಂದಾಗಿ ಸಿಕ್ಕಿದ್ದು. ಇದೇ ತರವಾಗಿರುತ್ತದೆ ಮಹಾತ್ಮರ ಬಳಿ ತಲಪಿದರೆ ಸಿಗುವ ಫಲ.

ನಮಗೆ ತಿಳಿಯದೆಯೇ, ನಮ್ಮೊಳಗೆ ಒಳ್ಳೆಯ ಸಂಸ್ಕಾರಗಳು ಹುಟ್ಟಿಕೊಳ್ಳುತ್ತವೆ. ಅವರ ಸಾಮೀಪ್ಯದಿಂದಾಗಿ ನಮ್ಮ ಕೆಟ್ಟ ಸ್ವಭಾವ ಬಿಟ್ಟು ಹೋಗುವುದು. ಉಪ್ಪುನೀರು ನದಿ ಸೇರಿ, ಶುದ್ಧ ಜಲವಾಗುವುದಿಲ್ಲವೇ. ಆ ಸಾಮೀಪ್ಯದಿಂದಲೇ ಉಪ್ಪುನೀರಿನಲ್ಲಿ ಬದಲಾವಣೆ ಆಯಿತು. ಇದೇ ರೀತಿ ಮಹಾತ್ಮರ ಸಾಮೀಪ್ಯವೇ ನಮ್ಮನ್ನು ಒಳ್ಳೆಯವರನ್ನಾಗಿ ಮಾಡುತ್ತದೆ.”

ಪ್ರಶ್ನೆ: ಅಧ್ಯಾತ್ಮ ಒಂದು ತರದ ಸ್ವಾರ್ಥವಲ್ಲವೇ ?

“ಅದು ಹಾಗಲ್ಲ ಮಕ್ಕಳೇ, ಒಂದುಕಡೆ ಇಬ್ಬರು, ಕತ್ತಿ ಮಾರುವ ಅಂಗಡಿಗೆ ಹೋಗುತ್ತಾರೆ. ಇಬ್ಬರೂ ಒಂದೊಂದು ಕತ್ತಿ ಕೊಂಡುಕೊಳ್ಳುತ್ತಾರೆ. ಒಬ್ಬನು ಆ ಕತ್ತಿಯಿಂದ ಸಿಕ್ಕ ಸಿಕ್ಕವರನ್ನೆಲ್ಲಾ ಇರಿದು ಕೊಲ್ಲಲು ತೊಡಗುತ್ತಾನೆ. ಇನ್ನೊಬ್ಬ ಡಾಕ್ಟರನಾಗಿದ್ದ. ತನ್ನ ಕತ್ತಿಯಿಂದ ರೋಗಿಗಳ ಶಸ್ತ್ರಕ್ರಿಯೆ ನಡೆಸಿ, ರೋಗ ಮುಕ್ತರನ್ನಾಗಿ ಮಾಡುತ್ತಾನೆ. ಇಬ್ಬರೂ ಕತ್ತಿ ಕೊಂಡು ಕೊಂಡದ್ದು ಸ್ವಾರ್ಥಕ್ಕಾಗಿ. ಕೊಲೆಗಾರನ ಸ್ವಾರ್ಥ ಸಮಾಜಕ್ಕೆ ಕುತ್ತಾಯಿತು. ಡಾಕ್ಟರನ ಸ್ವಾರ್ಥ ಸಮಾಜಕ್ಕೊಂದು ವರವಾಯಿತು. ಆಧ್ಯಾತ್ಮಿಕ ಜೀವಿಗಳ ಸ್ವಾರ್ಥ ಲೋಕೋಪಕಾರಕ್ಕಾಗಿರುತ್ತದೆ. ಮಕ್ಕಳು ಕೇಳಬಹುದು, ಆಧ್ಯಾತ್ಮಿಕ ಜೀವಿಗಳು ಯಾರೂ ಸುಖಿಗಳಲ್ಲವೇ ಎಂದು. ಅವರು ಯಾರಿಗೂ ತೊಂದರೆ ಬಗೆಯುವುದಿಲ್ಲ. ಎಲ್ಲರನ್ನೂ ಪ್ರೀತಿಸುತ್ತಾರೆ; ಎಲ್ಲರಿಗೂ ಸಹಾಯ ಮಾಡುತ್ತಾರೆ.

  • *[ಮಲೆಯಾಳದಲ್ಲಿ ದೇವರನ್ನು ಸೂಚಿಸಲು “ಈಶ್ವರ” ಎಂಬ ಶಬ್ದವನ್ನು ಸಾಮಾನ್ಯವಾಗಿ ಬಳಸುತ್ತಾರೆ]
  • ಪ್ರಶ್ನೆ: ಈ ಲೋಕದಲ್ಲಿ ಎಷ್ಟೋ ಜನರು ಕಷ್ಟ ಪಡುತ್ತಾರೆ; ಉಪವಾಸ ಅಲೆಯುತ್ತಾರೆ. ಇನ್ನು ಕೆಲವರು ಹಣವಂತರಾಗಿ ಸುಖ ಅನುಭವಿಸುತ್ತಾರೆ. ದೇವರು ಕರುಣಾಮಯನೆಂದು ಹೇಳುತ್ತಾರೆ. ಆದರೆ ಅವನ ಕೆಲವು ವಿಷಯಗಳನ್ನು ನೋಡುವಾಗ ಎದ್ದು ಕಾಣುವುದು ಕರುಣೆಯಲ್ಲ, ಕ್ರೂರತನ.

    ಮಕ್ಕಳೇ, ತಪ್ಪು ದೇವರದಲ್ಲ. ದೇವರು ಕರುಣಾಮಯನೆ. ಮಕ್ಕಳೇ, ನಮ್ಮ ತಾಯಿ ನಮ್ಮನ್ನು ಹೆರುತ್ತಾಳೆ; ಬೆಳೆಯಬೇಕಾದ ಮಾರ್ಗವನ್ನೂ ನಮಗೆ ಹೇಳಿ ಕೊಡುತ್ತಾಳೆ. ಅದನ್ನನುಸರಿಸದಿದ್ದರೆ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗೆಂದು ದೇವರ ಮೇಲೆ ಕ್ರೂರತನದ ಆರೋಪಣೆ ಮಾಡುವುದೆಂದರೆ ಅದು ನಮ್ಮತಾಯಿಯ ಮೇಲೆ ಅಪವಾದ ಹೊರಿಸಿದಂತೆ.

    ಒಂದೂರಿನಲ್ಲಿ ಒಬ್ಬಳು ತಾಯಿಗೆ ವಿವೇಕಿ ಮತ್ತು ಅವಿವೇಕಿಯೆಂದು ಇಬ್ಬರು ಮಕ್ಕಳಿದ್ದರು. ತಾಯಿ ಅವರನ್ನು ಹತ್ತಿರದ ಪಟ್ಟಣದಿಂದ ಹಾಲು ತರಲು ಕಳುಹಿಸುತ್ತಾಳೆ. ಹೊರಡುವ ಮೊದಲು ತಾಯಿ ಮಕ್ಕಳಿಗೆ ಬುದ್ಧಿ ಹೇಳುತ್ತಾಳೆ, “ನೀವು ಹೋಗುವ ದಾರಿಯಲ್ಲಿ ಎರಡು ಹಲಗೆಯ ಸಂಕಗಳಿದೆ. ಒಂದು ತೇಗಿನ ಹಲಗೆಯಿಂದ ಮಾಡಿದ್ದು – ಅಲ್ಲಿಗೆ ಸ್ವಲ್ಪ ದೂರವಿದೆ; ಪೂರ್ವದ ಕಡೆಗೆ – ಒಳ್ಳೆ ದಪ್ಪವಾಗಿಯೂ ಗಟ್ಟಿಯಾಗಿಯೂ ಇದೆ. ಕುಸಿಯುವುದಿಲ್ಲ. ಹಾಲಿಗೆ ಹೋಗಬೇಕಾದರೆ ನೀವು ಆ ಸಂಕದಿಂದ ಮಾತ್ರ ಹೋಗಬೇಕು. ಈ ಕಡೆ ಬರಲಿಕ್ಕೆ ಇನ್ನೊಂದು ಸುಲಭದ ದಾರಿಯಿದೆ. ಪಶ್ಚಿಮದ ಕಡೆಗಿರುವ ಆ ಸಂಕ ’ಮುರಿಕ್ಕ್’ (ನುಗ್ಗೆ) ಮರದ್ದು. ಅಗಲ ಕಮ್ಮಿಯಾಗಿರುವ ಅದರಲ್ಲಿ ನಡೆದರೆ ಕಾಲು ಜಾರುತ್ತದೆ. ಅದು ಕುಸಿದು ಬಿಡಬಹುದು. ಹಾಲು ತರುವ ಮನೆಯಲ್ಲಿ ಒಂದು ಬೆತ್ತ ಕೊಡುತ್ತಾರೆ. ಆ ಬೆತ್ತವನ್ನು ನೀರಿನ ತಳಕ್ಕೆ ಊರಿ ಬಲ ಕೊಡಬೇಕಾಗುತ್ತದೆ, ನುಗ್ಗೆಯ ಸಂಕ ದಾಟಲು. ಯಾವುದೇ ಕಾರಣಕ್ಕಾಗಿಯೂ, ಅತ್ತ ಕಡೆ ಹೋಗುವಾಗ ಮಾತ್ರ, ಮಕ್ಕಳು ಆ ಸಂಕದಿಂದ ಹೋಗದಿರಿ.

    ಪ್ರಯಾಣ ಶುರು ಮಾಡಿದೊಡನೆಯೇ, ಅವಿವೇಕಿ ಹೇಳುತ್ತಾನೆ, ’ನಾನು ಪಶ್ಚಿಮದಿಂದಲೇ ಹೋಗುತ್ತೇನೆ.’ ವಿವೇಕಿ ಹೇಳಿದ, ’ನಾನು ಅಲ್ಲಿಂದ ಬರುವುದಿಲ್ಲ. ಅಲ್ಲಿಂದ ಹೋದರೆ ಬೀಳುತ್ತೇವೆಂದು ಅಮ್ಮ ಹೇಳಿದ್ದಾರೆ.’ ’ನನಗೆ ಅದೆಲ್ಲ ಚೆನ್ನಾಗಿ ಗೊತ್ತು. ನುಗ್ಗೆ ಸಂಕದಿಂದ ಹೋದರೆ ನಾನು ಬೀಳುವುದಿಲ್ಲ. ಬೆತ್ತ ಗಿತ್ತ ಏನೂ ಇಲ್ಲದೆ ನಾನು ದಾಟುತ್ತೇನೆ,’ ಅವಿವೇಕಿ ಪುನಃ ಹೇಳಿದ. ’ನಾನು ಬರುವುದಿಲ್ಲ. ಅಮ್ಮ ಹೇಳಿದ ಹಾಗೇ ನಾನು ಕೇಳುತ್ತೇನೆ.’ ವಿವೇಕಿ ಹೀಗೆ ಹೇಳಿ ಪೂರ್ವದ ಕಡೆಯಿರುವ ದಾರಿಯಲ್ಲೇ ಪ್ರಯಾಣ ಮಾಡಿದ; ಅವಿವೇಕಿ ಪಶ್ಚಿಮದ ದಾರಿಯಲ್ಲಿ ಸಾಗಿದ.

    ತಾಯಿ ಹೇಳಿ ಕೊಟ್ಟ ಹಾಗೆ, ತೇಗಿನ ಸಂಕದ ಮೇಲಿಂದ ಹೋಗಿ, ಹಾಲು ತೆಗೆದುಕೊಂಡು, ಪಟ್ಟಣದಿಂದ ಹಿಂತಿರುಗಿದ ವಿವೇಕಿ ನುಗ್ಗೆ ಸಂಕ ಮುಟ್ಟುತ್ತಾನೆ. ಅವನ ಕೈಯಲ್ಲಿ ಬೆತ್ತವಿತ್ತು. ಸಂಕ ತಲಪಿದಾಗ ವಿವೇಕಿ ಕಂಡದ್ದು ನೀರಿನಲ್ಲಿ ಬಿದ್ದಿರುವ ಅವಿವೇಕಿಯ ದಯನೀಯ ಪರಿಸ್ಥಿತಿಯನ್ನು. ’ನಾನು’ ಎಂಬ ಮನೋಭಾವದಿಂದಾಗಿ ಅವಿವೇಕಿ ತಾಯಿಯ ಮಾತನ್ನು ಕೇಳಲಿಲ್ಲ. ಅಹಂಕಾರದಿಂದಾಗಿ ವಿವೇಚನೆಯಿಲ್ಲದವನಾಗಿ ಅವಿವೇಕಿ ಬಿದ್ದದ್ದು. ದೇವರ ವಿಷಯವೂ ಹೀಗೆಯೇ. ಸೃಷ್ಟಿಕರ್ತನಾದ ಈಶ್ವರನು* ನಿತ್ಯಾನಿತ್ಯ ವಿವೇಚನೆ ಮಾಡುವ ಶಕ್ತಿಯನ್ನು ಮನುಷ್ಯನಿಗೆ ನೀಡಿದ್ದಾನೆ. ಹಾಗೆ ವಿವೇಚನೆ ಮಾಡದೆ ನಾವು ತಪ್ಪುಗಳನ್ನು ಮಾಡುತ್ತಿದ್ದೇವೆ. ದುಃಖವು ಅದರ ಫಲ. ಈಗ ಹೇಳಿದ ಕಥೆಯಲ್ಲಿದ್ದಂತೆ ವಿವೇಕ ಎನ್ನುವ ಭಗವಂತನ ಬೆತ್ತವನ್ನು ತೆಗೆದುಕೊಳ್ಳಲು ನಾವು ಸಿದ್ಧವಿಲ್ಲ. ಎಲ್ಲರೂ ಈಶ್ವರನ ಮಾತು ಪಾಲಿಸಿದರೆ ಯಾವುದೇ ರೀತಿಯ ಅವಘಡ ಸಂಭವಿಸುವುದಿಲ್ಲ. ನಮಗೆ ಆನಂದದಿಂದ ಜೀವಿಸಲಿಕ್ಕೂ ಸಾಧ್ಯವಾಗುತ್ತದೆ. ಪ್ರೀತಿಯ ಮಕ್ಕಳೇ, ಆದಕಾರಣ ಎಲ್ಲರೂ ಭಗವಂತನನ್ನು ಮನಸ್ಸಿನಲ್ಲಿ ಪ್ರಾರ್ಥಿಸಿರಿ. ದೇವರ ನುಡಿಗನುಸಾರವಾಗಿ ನಡೆದುಕೊಂಡರೆ, ಅವನು ರಕ್ಷಿಸುವನು. ದೇವರಲ್ಲಿ ಹೀಗೆ ಗಟ್ಟಿಯಾಗಿ ಮೊರೆಯಿಡಿರಿ: ’ಅಪ್ಪಾ, ಅಮ್ಮಾ, ಯಾರು ನನ್ನ ನಿಜವಾದ ತಂದೆ, ತಾಯಿಯೆಂಬುದನ್ನರಿಯೆ; ನೀನು ಹೇಳಿಕೊಟ್ಟರೆ ಸಹ. ಅಮ್ಮಾ, ಯಾರೋ ಈ ಸಂಸಾರವೆನ್ನುವ ಕಾಡಿನಲ್ಲಿ ಹೆತ್ತು ಬಿಟ್ಟು ಹೋದರು. ನನ್ನನ್ನು ಕೊನೆಗಾಣಿಸಲು ಕ್ರೂರ ಪ್ರಾಣಿಗಳು ತಿನ್ನಲು ಬರುತ್ತಿವೆ. ಶಾಶ್ವತೆಯಾದ ತಾಯಿಯೇ, ನೀನೆಲ್ಲಿ ? ನೀನಲ್ಲದೆ ಯಾರು ನನ್ನ ಬರಮಾಡಿಕೊಳ್ಳುವರು ?’ ಮೆಚ್ಚಿನ ಮಕ್ಕಳೇ, ಈಶ್ವರನನ್ನು ಈ ರೀತಿಯಾಗಿ ಅತ್ತು ಕರೆಯಿರಿ. ನಮ್ಮ ಜಗನ್ಮಾತೆ ನಮ್ಮನ್ನು ಆದರದಿಂದ ಅಂಗೀಕರಿಸುವುದು ನಿಶ್ಚಯ.”

    ಪ್ರಶ್ನೆ: ಜನಗಳು ದುಃಖ ಅನುಭವಿಸುತ್ತಿರುವುದು ಮತ್ತು ಕಷ್ಟ ಪಡುತ್ತಿರುವುದು ಯಾತಕ್ಕಾಗಿ ?

    “ಅದು ಆ ಮಕ್ಕಳ ಕರ್ಮಫಲ. ಅವರು ಮಾಡಿದ ತಪ್ಪಿನ ಫಲವನ್ನು ಅವರು ಅನುಭವಿಸುತ್ತಿದ್ದಾರೆ. ಪಕ್ಕದ ಮನೆಗೆ ಹೋಗಲು ಎರಡು ದಾರಿಗಳಿವೆ. ತಾಯಿ ಮಗನಿಗೆ ಹೇಳುತ್ತಾಳೆ, ’ಒಂದು ದಾರಿ ನಡೆಯಲಿಕ್ಕೆ ಮಾತ್ರ ಬಹಳ ದೂರವಿದ್ದರೂ ಅದು ಒಳ್ಳೆಯ ದಾರಿ. ಹುಡುಗ ಅದನ್ನು ಕೇಳದೆ ಒಳದಾರಿಯಿಂದ ಹೋಗುತ್ತಾನೆ. ಅಲ್ಲಿ ಮುಳ್ಳುಬೇಲಿ ಇತ್ತು. ಅದರ ಎಡೆಯಿಂದ ಆ ಕಡೆಗೆ ದಾಟಿ ಹೋಗಲು ಪ್ರಯತ್ನಿಸುತ್ತಾನೆ. ಅವನಿಗೆ ಗಾಯಗಳಾದವು. ಅದಕ್ಕೆ ತಾಯಿ ತಪ್ಪಿತಸ್ಥಳೇ ? ಆದರೂ ತಾಯಿ ಔಷಧ ಹಚ್ಚಿ ಚಿಕಿತ್ಸೆ ಮಾಡುತ್ತಾಳೆ. ಮುಂದಿನ ಬಾರಿಯೂ ಹುಡುಗ ಹೇಳಿದ್ದನ್ನು ಅನುಸರಿಸಲಿಲ್ಲ. ಶರೀರದಲ್ಲ್ಲಿ ಗಾಯಗಳಾದವು. ಆಗಲೂ ತಾಯಿ ಔಷಧಿ ಹಚ್ಚುತ್ತಾಳೆ. ಮೂರನೆಯಬಾರಿಯೂ ಶರೀರಕ್ಕೆ ಗಾಯ ಮಾಡಿಕೊಂಡು ಬಂದಾಗ, ತಾಯಿ ಜಪ್ಪೆನ್ನಲಿಲ್ಲ. ಗಾಯ ಮಾಗಿತು.’ನಿನಗೆ ಗಾಯದ ನೋವು ಗೊತ್ತಾಗಿರಲಿಲ್ಲ. ಆದಕಾರಣ ನೀನು ತಪ್ಪು ದಾರಿಯಲ್ಲಿ ಹೋದಿ. ಹಾಗಾಗಿ ಔಷಧಿ ಹಚ್ಚಲಿಲ್ಲ. ಔಷಧಿ ಹಚ್ಚದಿದ್ದದ್ದು ನಿನ್ನಲ್ಲಿ ಪ್ರೀತಿಯಿಲ್ಲವೆಂದಲ್ಲ. ಆದು ನಿನ್ನಲ್ಲಿ ಎಚ್ಚರಿಕೆಯನ್ನುಂಟುಮಾಡಲಿಕ್ಕೆಂದು ಆಗಿತ್ತು. ಕೊಂಚ ನೋವು ಅನುಭವಿಸಿದರೆ ಆಮೇಲೆ ಎಂದೂ ನೀನು ಒಳದಾರಿಯಿಂದ ಹೋಗಲಿಕ್ಕಿಲ್ಲ.” ನೋವು ಅನುಭವಿಸದೆ ಇದ್ದ ಕಾರಣ ನೀವು ತಪ್ಪು ಮಾಡುತ್ತೀರಿ. ದೇವರ ಮಾತು ಪಾಲಿಸದ ಕಾರಣ ದುಃಖ ಪಡಬೇಕಾಗಿ ಬರುತ್ತದೆ. ಆಗ ನೊಂದುಕೊಂಡು ಅಳುತ್ತೀರಿ. ಹಾಗಿದ್ದರೂ ದೇವರೇ ಈ ಕಷ್ಟ ಕಾರ್ಪಣ್ಯಗಳಿಗೆ ಕಾರಣವೆಂದು ಹೇಳುವುದು ತಪ್ಪಲ್ಲವೇ ? ದೇವರು ಸೃಷ್ಟಿ ಮಾಡಿದ ಎಂದ ಮೇಲೆ, ಏನು ಮಾಡಬೇಕೆಂಬುದನ್ನೂ ಉಪದೇಶಿಸಿರುವನು. ಅದನ್ನು ಕೇಳದಿರುವ ಕಾರಣ ಬಂದ ಹೆಚ್ಚಿನ ಕಷ್ಟಗಳಿಗೆ ದೇವರು ತಪ್ಪಿತಸ್ಥ, ಎಂದು ಹೇಳ ಬಾರದು. ಈಶ್ವರನು ಎಂದೂ ಶಿಕ್ಷಿಸುವುದಿಲ್ಲ; ಅಥವಾ ಇರುವ ಶಿಕ್ಷೆಯೂ ನಿಮ್ಮನ್ನು ಮೇಲೆ ಎತ್ತಲಿಕ್ಕೆಂದೇ ಇರುತ್ತದೆ. ನಾವಿಂದು ಖಜಾನೆಯ ಬೀಗದ ಕೈಯನ್ನು ಕಿಸೆಯಲ್ಲಿಟ್ಟುಕೊಂಡು ಊರೆಲ್ಲ ಸುತ್ತಾಡುತ್ತಿದ್ದೇವೆ. ನಿಜವಾದ ಆನಂದ ಒಳಗಿದೆ. ಅದು ತಿಳಿದುಕೊಳ್ಳದೆ ಲೋಕವೆಲ್ಲ ಹುಡುಕಾಡುತ್ತಿದ್ದೇವೆ.

    ನೀವಿಲ್ಲಿ ಗಳಿಸಲೂ ಆನಂದಿಸಲೂ ಬಂದಿರುವವರು. ಆದರೆ ನೀವೇ ನಾಶಗೊಳ್ಳುತ್ತಲೂ, ನಾಶಪಡಿಸುತ್ತಲೂ ಇದ್ದೀರಿ. ಅದರ ಫಲವಾಗಿ ದುಃಖಪಡುತ್ತಿದ್ದೀರಿ. ಅದಕ್ಕೆ ಈಶ್ವರ*ನು ಹೊಣೆಯಲ್ಲ.”

  • *[ದೇವರನ್ನು ಸೂಚಿಸುವ ಮಲೆಯಾಳ ಪದ “ಈಶ್ವರ” ಎಂದಾಗಿರುತ್ತದೆ.]
  • ಪ್ರಶ್ನೆ: ಅಮ್ಮಾ, ಪ್ರಾರ್ಥನೆ ಹೇಗಿರಬೇಕು ?

    “ಲೋಕದ ಏಳಿಗೆಗಾಗಿ ಮಾಡುವ ಪ್ರಾರ್ಥನೆಯೇ ಅತ್ಯಂತ ಶ್ರೇಷ್ಟವಾದದ್ದು. ಆಸೆವಿಹೀನ ನಿಷ್ಕಾಮ ಪ್ರಾರ್ಥನೆ – ಅದುವೇ ಬೇಕಾಗಿರುವುದು. ’ದೇವರೇ, ಲೋಕದ ಕಷ್ಟಗಳನ್ನು ನಿವಾರಿಸು. ದೇವರೇ, ಎಲ್ಲರಿಗೂ ಒಳ್ಳೆಮನಸ್ಸನ್ನು ದಯಪಾಲಿಸು. ದೇವರೇ, ಎಲ್ಲರನ್ನೂ ಕಾಪಾಡು’ ಹೀಗೆ ಪ್ರಾರ್ಥಿಸಿರಿ ಮಕ್ಕಳೇ. ಪೂಜೆಗಾಗಿ ಹೂಗಳನ್ನು ಕೊಯ್ಯುತ್ತೇವೆ. ಆ ಹೂವಿನ ಸೊಬಗನ್ನೂ, ಸುಗಂಧವನ್ನೂ ನಮಗೆ ಅರಿವಿಲ್ಲದೆಯೂ ಮೊದಲು ಆಸ್ವಾದಿಸುವವರು ನಾವೆಯೇ. ’ಲೋಕಕ್ಕೆ ಒಳಿತು ಮಾಡು’ ಎಂದು ಪ್ರಾರ್ಥಿಸುವಾಗ ಸ್ವತಃ ನಾವೇ ಒಳ್ಳೆಯವರಾಗುತ್ತೇವೆ. ದೇವರಿಗೆ ಮಾಡುವ ಸೇವೆ, ಲೋಕಕ್ಕೆ ಮಾಡುವ ಸೇವೆ. ಅದರಲ್ಲಿ ಮೊದಲು ಆನಂದಿಸುವವರು, ಸವಿಯುವವರು ನಾವೇ. ಲೋಕದೊಳಿತಿಗೆ ಪ್ರಾರ್ಥನೆ ನಮ್ಮನ್ನು ವೈಶಾಲ್ಯತೆಡೆಗೊಯ್ಯುತ್ತದೆ.

    ಮಕ್ಕಳು ಪ್ರಯಾಣಿಸುತ್ತಿರುವ ಬಸ್ಸಿನಲ್ಲಿ ಒಂದು ಪ್ರಾಯಮೀರಿದ ವೃದ್ಧೆ ನಡುಗುತ್ತಾ ನಿಂತಿದ್ದಾಳೆಎಂದಿಟ್ಟುಕೊಳ್ಳೋಣ. ಯಾರೂ ಅವಳಿಗೆ ಕುಳಿತುಕೊಳ್ಳಲು ಸ್ಥಳ ಬಿಟ್ಟು ಕೊಡುತ್ತಿಲ್ಲ. ಕಿರಿಯರು, ಆರೋಗ್ಯ ಚೆನ್ನಾಗಿರುವವರು ಸೀಟುಗಳಲ್ಲಿ ಹಾಯಾಗಿ ಕೂತಿದ್ದಾರೆ. ವೃದ್ಧೆಗೆ ನಿಂತು ಕೊಂಡಿರಲು ತೀರಾ ಸುಸ್ತು. ಅದನ್ನು ಅರ್ಥ ಮಾಡಿಕೊಂಡ ನೀವು ಎದ್ದು ನಿಂತು ಆ ವೃದ್ಧೆಯನ್ನು ನಿಮ್ಮ ಸೀಟಿನಲ್ಲಿ ಕೂತುಕೊಳ್ಳಿಸಿದಿರಿ; ನೀವು ನಿಂತು ಕೊಂಡಿರಿ. ಕೂತುಕೊಳ್ಳಲು ಸ್ಥಳ ಸಿಕ್ಕಿದ್ದಕ್ಕಾಗಿ ವೃದ್ಧೆಗೆ ಸಂತೋಷವಾಯಿತು; ಜೊತೆಗೆ ನಿಮಗೂ. ’ಸ್ವಂತ ಸುಖವನ್ನು ತ್ಯಜಿಸಿಯಲ್ಲವೇ ನಾನವಳಿಗೆ ಸ್ಥಳ ಕೊಟ್ಟದ್ದು’ ಎಂಬ ಏನೋ ಒಂದು ಸಂತೃಪ್ತಿಯ ಅನುಭವ ನಿಮಗಾಗುತ್ತದೆ. ಈ ರೀತಿ ನಿಷ್ಕಾಮ್ಯತೆಯಿಂದ ನಮಗೆ ಸಂತೃಪ್ತಿಯೂ ದೊರಕುತ್ತದೆ, ಪ್ರಯೋಜನವೂ ದೊರಕುತ್ತದೆ. ವೈಶಾಲ್ಯತೆ ನಮ್ಮದಾಗುತ್ತದೆ. ಅಲ್ಲದೆ ಲೋಕ ಹಿತವೂ ಸಾಧಿಸುತ್ತದೆ. ಆದುದರಿಂದ ನಿಷ್ಕಾಮ ಭಾವನೆಯು ಶ್ರೇಷ್ಠ.”

    ಪ್ರಶ್ನೆ: ತಪಸ್ಸಿನಿಂದ ಶಕ್ತಿ ಹೇಗೆ ಉಂಟಾಗುತ್ತದೆ ?

    “ಒಂಬತ್ತು ಕವಲುಗಳಿರುವ ಒಂದು ನದಿಯಿದೆ. ಅದರ ಪ್ರವಾಹಕ್ಕೆ ಬಲವಿಲ್ಲ. ಆದರೆ ಆ ಒಂಬತ್ತು ಕವಲುಗಳನ್ನು ಮುಚ್ಚಿ ನದಿಯಲ್ಲಿ ಮಾತ್ರ ನೀರು ಹರಿಯಲು ಬಿಟ್ಟರೆ, ಪ್ರವಾಹ ಶಕ್ತಿಶಾಲಿಯಾಗುತ್ತದೆ. ಆ ಶಕ್ತಿಯಿಂದಲೇ ಕರೆಂಟ್ ಉತ್ಪಾದಿಸುತ್ತಾರೆ. ಇದೇ ತರ ನಿಮ್ಮ ಆಲೋಚನೆಗಳನ್ನು, ಬಹುಮುಖವಾಗಿ ಹಾರುವ ಮನಸ್ಸನ್ನು, ಏಕತ್ವದಲ್ಲಿ ಕೇಂದ್ರೀಕರಿಸಿದರೆ, ನಿಮ್ಮಲ್ಲಿ ನಿಶ್ಚಯವಾಗಿಯೂ ಈ ಶಕ್ತಿ ಉಂಟಾಗುತ್ತದೆ. ಇತರರಿಗೆ ಶರೀರ ಮೂಲಕವೂ, ಮನಸ್ಸು ಮೂಲಕವೂ, ಬುದ್ಧಿ ಮೂಲಕವೂ, ಪ್ರವೃತ್ತಿ ಮೂಲಕವೂ, ಮಾತು ಮೂಲಕವೂ, ಈ ಶಕ್ತಿಯನ್ನು ಉಪಯೋಗಿಸಿ ಪ್ರಯೋಜನ ನೀಡಲು ಸಾಧ್ಯವಿದೆ. ಲೌಕಿಕರು ಕಾಮ ತೃಪ್ತಿಗಾಗಿ ತಮ್ಮ ಶಕ್ತಿಯನ್ನು ನಶಿಸುತ್ತಾರೆ. ಆಧ್ಯಾತ್ಮಿಕ ಜೀವಿಗಳು ಕಾಮವನ್ನು ನಿಯಂತ್ರಿಸಿ ಯೋಗದೊಂದಿಗೆ ಅದನ್ನು ಊರ್ಧ್ವಮುಖವಾಗುವಂತೆ ಮಾಡಿ ಶಕ್ತಿಯುತವಾಗಿಸುತ್ತಾರೆ. ಸಾಧಾರಣದವನಿಗೆ ಸ್ವಾರ್ಥಪರತೆಯಿಂದ ಐವರನ್ನು ಪ್ರೇಮಿಸಲು ಸಾಧ್ಯವಾದರೆ ಒಬ್ಬ ಯೋಗಿಗೆ ನಿಸ್ವಾರ್ಥತೆಯಿಂದ ಜಗತ್ತನ್ನೆಲ್ಲ ಪ್ರೇಮಿಸುವ ಸಾಮರ್ಥ್ಯ, ಈ ಮೂಲಕ ಸಿಗುತ್ತದೆ. ಆದರೂ ಅವರ ಶಕ್ತಿ ಇದರಿಂದ ಕಮ್ಮಿಯೇನೂ ಆಗುವುದಿಲ್ಲ.”

    ಪ್ರಶ್ನೆ: ಲೋಕದಲ್ಲಿ ಎಷ್ಟೋ ಅನಾಥರಿದ್ದಾರೆ. ನಮ್ಮ ತಪಸ್ಸಿನಿಂದ ಅವರಿಗೇನು ಪ್ರಯೋಜನ ? ಯಾಕಾಗಿ ಅಮ್ಮ ಇಲ್ಲೊಂದು ಅನಾಥಾಲಯ ಕಟ್ಟಿಸಿ ಅನೇಕರನ್ನು ರಕ್ಷಿಸಬಾರದು ?

    “ಮಕ್ಕಳೇ, ಅನಾಥಾಲಯ ಕಟ್ಟಿಸಿದರೂ, ಅನಾಥರು ಮತ್ತೂ ಸೃಷ್ಟಿಯಾಗುತ್ತಲೇ ಇರುತ್ತಾರೆ. ಆದರೆ ಅವರಿಗೆ ಒಳ್ಳೇ ಸಂಸ್ಕಾರ ಕೊಟ್ಟರೆ ಮುಂದಕ್ಕೆ ಅನಾಥರಿರುವುದಿಲ್ಲ.

    ಪ್ರಶ್ನೆ: ಅವರ ಹಸಿವು ನೀಗಿಸಲು ಬರೇ ಸಂಸ್ಕಾರ ಕೊಟ್ಟರೆ ಸಾಕೆ ?

    “ಬರೇ ಊಟ ಮಾಡಿದ ಕಾರಣಕ್ಕೆ ಮಕ್ಕಳಿಗೆ ನಿದ್ದೆ ಬರುತ್ತದೆಯೇ ? ಹೊಟ್ಟೆ ತುಂಬಿಯೂ ’ನನ್ನ ಮನಸ್ಸಿಗೆ ನೆಮ್ಮದಿಯಿಲ್ಲ; ನಿದ್ದೆ ಬರುತ್ತಿಲ್ಲ’ ಎಂದು ಮಕ್ಕಳು ಹೇಳುವುದಿದೆ ಅಲ್ಲವೆ ? ಅಂದರೆ ಹೊಟ್ಟೆ ತುಂಬಿದ್ದರೂ ತೃಪ್ತಿಯಿರುವುದಿಲ್ಲ. ಆದರೆ, ಬಹಳ ದಿನಗಳಿಂದ ಬಯಸಿದ್ದ ಒಂದು ವಸ್ತು ಕೈಗೆ ಸಿಕ್ಕಿದಾಗ ನಾವು ಹಸಿವನ್ನೂ ಮರೆಯುತ್ತೇವೆ. ಮನಸ್ಸಿಗೆ ಸಂತೋಷವೂ ಆನಂದವೂ ಇದ್ದರೆ ಇವೆಲ್ಲದರಿಂದ ಪಾರಾಗಲು ಸಾಧ್ಯವಿದೆ. ಎಲ್ಲಾ ಅವಲಬಿಸಿಕೊಂಡಿರುವುದು ಮನಸ್ಸನ್ನು.”

    ಪ್ರಶ್ನೆ: ನಮ್ಮ ಸುತ್ತಲೂ ಎಷ್ಟೋ ಮಂದಿ ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತಿದ್ದಾರೆ; ಬರಿ ಹೊಟ್ಟೆಯಲ್ಲಿ ಮಲಗುತ್ತಾರೆ. ಇದಕ್ಕೆ ಏನು ಮಾಡಲು ಸಾಧ್ಯ?

    “ಕೆಲವು ಶ್ರೀಮಂತರ ಮಕ್ಕಳು ಹೇಳುವುದಿದೆ, ಅವರು ದಿವಸಕ್ಕೆ ಎರಡು ಸಾವಿರ ರುಪಾಯಿ, ಮೂರು ಸಾವಿರ ರುಪಾಯಿ ಖರ್ಚು ಮಾಡುತ್ತಾರೆಂದು. ಯಾಕಾಗಿ ? ಆನಂದವೂ, ಸಂತೋಷವೂ ಸಿಕ್ಕಲೆಂದು. ಎರಡು ಮೂರು ಕಾರುಗಳಿದ್ದವರಿದ್ದಾರೆ. ಅವರು ಕಾರ್‌ನಲ್ಲಿ ಸುತ್ತಾಡಿ, ಅನೇಕ ಹೆಂಗಸರಿಗೆ ಉಪದ್ರವ ಮಾಡಿಯೂ, ಹೆಂಡ ಕುಡಿದೂ, ದೊಡ್ಡ ಲಾಡ್ಜ್‌ಗಳಲ್ಲಿ ಏರ್ಕಂಡೀಷನ್ ರೂಮ್ ಮಾಡಿ ಮಲಗಿಕೊಂಡು, ದಿನ ಕಳೆಯುತ್ತಾರೆ. ಆದರೆ ಹೆಂಡ ಕುಡಿದೂ ಅವರಿಗೆ ನಿದ್ದೆ ಬರುವುದಿಲ್ಲ. ಏರ್ಕಂಡೀಷನ್ ರೂಮ್ ತೆಗೆದುಕೊಂಡೂ ಅವರಿಗೆ ಸಮಾಧಾನ ದೊರಕುವುದಿಲ್ಲ. ಅನೇಕ ಹೆಂಗಸರನ್ನು ಕೆಡಿಸಿಯೂ ಅವರಿಗೆ ತೃಪ್ತಿಯೂ ನಿದ್ದೆಯೂ ಇಲ್ಲ. ಕೊನೆಗೆ ನಿದ್ದೆ ಗುಳಿಗೆ ನುಂಗಿ ಮಲಗಿಕೊಳ್ಳುತ್ತಾರೆ. ಅದೂ ಅವರ ಶಕ್ತಿಯನ್ನು ಹಾಳು ಮಾಡಿಕೊಂಡು. ಬಾಹ್ಯ ವಸ್ತುಗಳಲ್ಲಿದೆ ಆನಂದ ಎಂದಾಗಿದ್ದರೆ, ಇಷ್ಟೆಲ್ಲ ಭಂಡತನ ನಡೆಸಿ ತೃಪ್ತಿ ಸಿಗಬೇಕಾಗಿತ್ತಲ್ಲ ? ಒಬ್ಬರ ತೃಪ್ತಿಯ ಸಲುವಾಗಿಯೇ ಇಷ್ಟೆಲ್ಲ ಹಣ ಖರ್ಚು ಮಾಡುತ್ತಾರೆ; ಇತರರಿಗೆ ಅನ್ಯಾಯ ಬಗೆಯುತ್ತಾರೆ.

    ಇದೇ ಸಂದರ್ಭ, ಈ ಹಣವಂತನ ಸುತ್ತುಮುತ್ತಲಿರುವವರ ಸ್ಥಿತಿಯೋ ? ಮುಂದಿನ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ತಾಯಿಯೂ ಮಕ್ಕಳೂ ಕುಳಿತು ಅಳುತ್ತಿದ್ದಾರೆ. ಅದರ ಮುಂದಿನ ಮನೆಯಲ್ಲಿ, ವರದಕ್ಷಿಣೆಯಿಲ್ಲದೆ ಮಗಳನ್ನು, ಖಾಲಿಯಾಗಿ ಮನೆಯಲ್ಲೇ ಕೂರಿಸಿದ್ದಾರೆ. ಇನ್ನೂ ಮುಂದಿನ ಮನೆಯಲ್ಲಿ, ಹತ್ತೇ ರುಪಾಯಿಯಲ್ಲಿ ಒಂದು ಕುಟುಂಬದವರು ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ; ಸಂತೋಷವಾಗಿದ್ದು ಮಲಗಿ ನಿದ್ದೆ ಮಾಡುತ್ತಾರೆ. ಈ ಮೂರು ಮನೆಗಳ ನಡುವೆ ವಾಸಿಸುವ ಈ ಹಣವಂತನು ಆನಂದ ಹೊರಗೆ ಅರಸುತ್ತಾ, ಎಷ್ಟೋ ಹಣ ವ್ಯಯ ಮಾಡುತ್ತಾನೆ. ಆದರೂ, ನೆಮ್ಮದಿ ಸಿಗುತ್ತಿಲ್ಲ. ಆದರೆ ಒಂದು ವಿಶ್ವ ಮನೋಭಾವ ದಕ್ಕಿದರೆ, ಯಥಾರ್ಥ ಆನಂದ ಹೊರಗಲ್ಲ ಒಳಗೆಯೇ ಎಂಬುದನ್ನು ಅರ್ಥ ಮಾಡಿಕೊಂಡರೆ, ಆ ವ್ಯಕ್ತಿಗೆ ಸಮಾಧಾನ ಲಭಿಸುವುದು. ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಬಡವರಲ್ಲಿ ಕರುಣೆಯುಂಟಾಗುತ್ತದೆ; ಹಸಿ ಹೊಟ್ಟೆಯಲ್ಲಿ ಮಲಗುವವರಿಗೆ ಸಹಾಯ ನೀಡುತ್ತಾರೆ; ವರದಕ್ಷಿಣೆಯಿಲ್ಲದೆ ಮನೆಯಲ್ಲೆ ಉಳಿದಿರುವ ಹೆಣ್ಣಿಗೆ ಸಹಾಯವಾಗುತ್ತಾರೆ. ಆ ಹಣವಂತನಿಗೆ ವಿಶ್ವ ಮನೋಭಾವ ಉಂಟಾದರೆ ಸಾಕು, ಆಗ ಎಲ್ಲರಿಗೂ ಸಹಾಯ ಮಾಡಲು ಬೇಕಾಗುವ ಮನೋಸ್ಥಿತಿ ಉಂಟಾಗುತ್ತದೆ.

    ಮಕ್ಕಳೇ, ಬಾಹ್ಯ ವಸ್ತುಗಳಲ್ಲಿ ಆನಂದ ಹುಡುಕಿದರೆ ಎಂದಿಗೂ ಪೂರ್ಣ ತೃಪ್ತಿ ಸಿಗದು. ಹಾಲು ಪಾಯಸ ಕುಡಿದು ಸಾಕಾಗಿದೆ ಎಂದಿಟ್ಟುಕೊಳ್ಳೋಣ. ಆದರೆ ಸ್ವಲ್ಪ ಸಮಯ ಕಳೆದ ಮೇಲೆ, ಪುನಃ ಬೇಕಂತ ಆಸೆ ಬರುವುದಿಲ್ಲವೇ ? ಲೌಕಿಕ ಅನುಭವಗಳಿಂದ ತೃಪ್ತಿ ಪಡೆಯಬಹುದೆಂದು ನೀವು ಭಾವಿಸದಿರಿ. ಈಗ ಸಾಕು ಅಂತ ಅನಿಸುತ್ತದೆ. ಐದು ಸೆಕೆಂಡು ಕಳೆದರೆ ಎರಡು ಪಟ್ಟು ಬೇಕೆಂದು ತೋರುತ್ತದೆ. ಇದೇ ಅದರ ಪ್ರಭಾವ. ಆನಂದವು ಹೊರಗಲ್ಲ ಒಳಗೆ ಎಂದು ಮನವರಿಕೆಯಾದಾಗ ನಮಗೆ ನೆಮ್ಮದಿ ಲಭಿಸುತ್ತದೆ; ವಿಶ್ವಮನೋಭಾವವುಂಟಾಗುತ್ತದೆ.

    ಮಕ್ಕಳೇ, ದೇವರೆನ್ನುವ ಛತ್ರದಡಿಯಲ್ಲಿ ನಿಮ್ಮನ್ನು ಮಳೆ ತಾಗದಂತೆ ನಿಲ್ಲಿಸೋಣ ಎನ್ನುವುದು ಮಾತ್ರವೇ ಅಮ್ಮನ ಉದ್ದೇಶ. ಕೊಡೆಗೆ ಮತ್ತೊಂದು ಕೊಡೆ ಬೇಡ. ದೇವರಿಗೆ ಯಾವುದರದ್ದೂ ಅವಶ್ಯಕತೆಯಿಲ್ಲ. ದೇವರನ್ನು ಆಶ್ರಯಿಸಿ ಸಿಗುವ ಆ ಗುಣ ಮತ್ತು ಆ ತ್ಯಾಗ ನಮಗೆ ಜಗತ್ತಿನಲ್ಲಿ ಕಾರ್ಯಪ್ರವೃತ್ತರಾಗಲು, ಭಗವಂತನ ಹೆಸರಿನಲ್ಲಿ ಜನಗಳನ್ನು ಪ್ರೀತಿಸುವ ಸಲುವಾಗಿ, ಸೇವೆ ಮಾಡುವ ಸಲುವಾಗಿ ಮಾತ್ರ. ಅದರ ಹೊರತು ದೇವರಿಗೆ ಬೇರೇನೂ ಬೇಕಾಗಿಲ್ಲ. ಸೂರ್ಯನಿಗೆ ಯಾಕೆ ಮೇಣದ ಬತ್ತಿ?”