ಕೇರಳದ ಕಡಲತೀರದ ಒಂದು ಕುಗ್ರಾಮದಲ್ಲಿ 1953 ರಲ್ಲಿ ಜನಿಸಿದ ಅನನ್ಯವಾದ ಪ್ರೇಮ ಕರುಣೆಗಳ ಸಾಕಾರವಾಗಿರುವ ಅಮ್ಮ, ಇಂದು ತ್ಯಾಗ ಹಾಗೂ ಸೇವೆಗಳಿಗೆ ಇಡೀ ಜಗತ್ತಿನಲ್ಲಿ ಪ್ರಸಿದ್ಧರಾಗಿದ್ದಾರೆ.
ಜಗತ್ತಿನ ಎಲ್ಲ ವಸ್ತುಗಳು ಬದಲಾಗುವುದು, ಎಂದೂ, ಪರಮಸತ್ಯ ಮಾತ್ರವೇ ಅಚಲವಾದುದು, ಎಂದೂ ಅಮ್ಮನಿಗೆ ಹುಟ್ಟನಿಂದಲೂ ಅರಿವಿತ್ತು. ಜಗತ್ತಿನ ಎಲ್ಲ ಜೀವಿಗಳನ್ನೂ ತಮ್ಮ ಸಂತಾನವೆಂದು ಭಾವಿಸುವ ಅಮ್ಮನಿಂದ ಎಲ್ಲರ ಪ್ರತಿ ಪ್ರೇಮದ ತರಂಗಗಳು ಸದಾ ಪ್ರವಹಿಸುತ್ತಿರುತ್ತವೆ.
ಮುಗುಳುನಗುತ್ತಾ ಜನಿಸಿದ ಸುಧಾಮಣಿ ಎಂಬ ಬಾಲೆಯು, ತುಂಬುಕುಟುಂಬದಲ್ಲಿ ಬೆಳೆದಳು. ಯಾರು ಕಲಿಸದಿದ್ದರೂ ಅನನ್ಯವಾದ ದೈವಭಕ್ತಿಯನ್ನು ಪ್ರಕಟಿಸುತ್ತಿದ್ದಳು. ಐದು ವರ್ಷವಿರುವಾಗಲೇ ಕೃಷ್ಣನ ಕುರಿತು ಭಜನೆ ರಚಿಸಿ ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಮನೆ ಮಂದಿಯ ವಿರೋಧವಿದ್ದರೂ ಸುಧಾಮಣಿಯು ಊರಿನ ಬಡಬಗ್ಗರಿಗೆ, ರೋಗಿಗಳಿಗೆ, ನೆರೆಮನೆಯ ವೃದ್ಧರಿಗೆ ಸಹಾಯ ಸೇವೆಗಳನ್ನು ಕಾಳಜಿ ವಹಿಸಿ ಮಾಡುತ್ತಿದ್ದಳು. ಬಾಲಕಿ, ಲೋಕದಲ್ಲಿ ಇಷ್ಟೊಂದು ದುಃಖ ಯಾಕಿದೆ? ಎಂದು ಆಗಾಗ ಯೋಚಿಸುತ್ತಿದ್ದಳು. ಮೀನುಗಾರರ ಕಡುಬಡತನ ಕಂಡು ಶೋಕಿಸುತ್ತಿದ್ದಳು; ಇನ್ನು ಕೆಲವರಿಗೆ ಅಪಾರ ಸಂಪತ್ತು ಇರುವುದನ್ನು ಕಂಡು ಅಚ್ಚರಿಪಡುತ್ತಿದ್ದಳು. ಲೋಕದ ಸ್ವಭಾವವೇ ಹೀಗೆ ಎಂದು ಅರಿತುಕೊಂಡು, ಅದು ಅವರವರ ಕರ್ಮವಾಗಿದ್ದರೆ, ಅವಶ್ಯಕತೆ ಇರುವವರಿಗೆ ಸಹಾಯ ನೀಡುವುದು ತನ್ನ ಧರ್ಮ ಎಂದು ಸುಧಾಮಣಿ ನಿರ್ಧರಿಸಿದಳು.
ಬಾಲ್ಯದಲ್ಲಿ ತಾಯಿಯ ಅನಾರೋಗ್ಯದ ಕಾರಣ ಮನೆಯಲ್ಲಿ ಎಲ್ಲ ಕೆಲಸಗಳ ಜವಾಬ್ದಾರಿಯೂ ಅಮ್ಮನ ಹೆಗಲಿಗೆ ಬಿದ್ದಿತು. ಅಮ್ಮನಿಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ನಡುರಾತ್ರಿಯವರೆಗೂ ದನಕರುಗಳನ್ನು ಪಾಲಿಸುವುದು, ಅಡುಗೆ ಮಾಡುವುದು, ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಎಲ್ಲರ ಬಟ್ಟೆ ಒಗೆಯುವುದು, ತಂಗಿ, ತಮ್ಮಂದಿರನ್ನು ಶಾಲೆಗೆ ಹೊರಡಿಸುವುದು, ನೀರು ಹೊತ್ತು ತರುವುದು – ಹೀಗೆ ಅವಿರತವಾಗಿ ಕೆಲಸ ಮಾಡಬೇಕಾಯಿತು. ಅಮ್ಮ ಮಾತ್ರ ಎಂದೂ ಬೇಸರಿಸಿಕೊಳ್ಳದೆ, ಕೆಲಸಗಳನ್ನು ಭಗವದ್ದರ್ಪಣೆಯ ಭಾವದಿಂದ ಮಾಡುತ್ತಿದ್ದರು. ತಾವು ಕೃಷ್ಣನ ಬಟ್ಟೆಗಳನ್ನೇ ಒಗೆಯುತ್ತಿರುವುದಾಗಿ, ಕೃಷ್ಣನಿಗಾಗಿ ಅಡುಗೆ ಮಾಡುತ್ತಿರುವುದಾಗಿ ಭಾವಿಸಿಕೊಂಡು, ಭಕ್ತಿಯಿಂದ ನಾಮಸ್ಮರಣೆ ಮಾಡುತ್ತಾ ಕೆಲಸ ಮಾಡುತ್ತಿದ್ದರು. ಎಲ್ಲರೂ ತಮ್ಮವರೇ ಎಂಬ ಭಾವದಲ್ಲಿ ಕೆಲವೊಮ್ಮೆ ಮನೆಯಿಂದ ಊಟ ಬಟ್ಟೆಗಳನ್ನು ಎತ್ತಿಕೊಂಡು ಹೋಗಿ ಬಡವರಿಗೆ ಕೊಡುತ್ತಿದ್ದರು. ಇದಕ್ಕಾಗಿ ಮನೆಯಲ್ಲಿ ಏಟು ತಿನ್ನಬೇಕಾಗಿ ಬರುತ್ತಿತ್ತು. ತಮಗಿಂತ ಹಿರಿಯರನ್ನು – ಅವರು ಬಡವರೇ ಆಗಿದ್ದರೂ ಸಹ – ಪ್ರೇಮದಿಂದ, ವಾತ್ಸಲ್ಯದಿಂದ ಅಪ್ಪ , ಅಮ್ಮ ಅಕ್ಕ, ಅಣ್ಣ ಎಂದಾಗಿ ಕರೆದು ಮಾತನಾಡಿಸುತ್ತಿದ್ದರು.
ಅಮ್ಮ ಒಮ್ಮೊಮ್ಮೆ ಒಂಟಿಯಾಗಿ ಸಮುದ್ರತಟದಲ್ಲಿ ಮರದ ಕೆಳಗೆ ಧ್ಯಾನಸ್ಥರಾಗಿ ಕೂತುಬಿಡುತ್ತಿದ್ದರು. ಆಗ ಅಮ್ಮನ ಸಂಗಾತಿ ಎಂದರೆ ಪ್ರಕೃತಿ ಮಾತೆ. ಧ್ಯಾನದಿಂದ ಮೈ ಬಿಸಿ ಏರಿದಾಗ ಅದನ್ನರಿತು ನಾಗರಹಾವುಗಳು ಅಮ್ಮನ ಮೈಯನ್ನು ಸುತ್ತಿ ತಮ್ಮ ತಂಪನ್ನು ಅಮ್ಮನಿಗೆ ನೀಡುತ್ತಿದ್ದವು. ಅಮ್ಮನ ಶರೀರಕ್ಕೆ ಕಿಡಿಗೇಡಿಗಳಿಂದ ತೊಂದರೆ ಆಗದಂತೆ ಎರಡು ನಾಯಿಗಳು ಅವರ ಕಾವಲು ಕಾಯುತ್ತಿದ್ದವು; ಆ ನಾಯಿಗಳು ಎಲ್ಲಿಂದಲೋ ಊಟದ ಪೊಟ್ಟಣ ತಂದು ಅಮ್ಮನ ಮಡಿಲಿಗೆ ಹಾಕುತ್ತಿದ್ದವು. ಅಮ್ಮ ಭಕ್ತಿಯ ಉನ್ಮಾದದಲ್ಲಿ ಒಮ್ಮೊಮ್ಮೆ ಅಳುತ್ತಿದ್ದರು; ಆಗ ಪಾರಿವಾಳಗಳೂ ಗಿಣಿಗಳೂ ಬಂದು ತಾವೂ ದುಃಖ ತೋರುತ್ತಾ ಅವರ ಮಡಿಲಲ್ಲಿ ಕೂತು ಕೊಳ್ಳುತ್ತಿದ್ದವು. ಅಮ್ಮ ಆನಂದಭಾವದಲ್ಲಿದ್ದಾಗ ಅವು ನರ್ತನ ಮಾಡುತ್ತಿದ್ದವು.
ಕಡೆಗೆ ಅಮ್ಮ ಇಡೀ ಸೃಷ್ಟಿಯೊಂದಿಗೆ ತಾದಾತ್ಮ್ಯ ಸಾಧಿಸಿದರು. ಆಗ ಈ ಪ್ರಪಂಚವು ತಮ್ಮೊಳಗೆ ಒಂದು ಸಣ್ಣ ನೀರಿನ ಗುಳ್ಳೆ ಮಾತ್ರವಾಗಿ ಅಮ್ಮನಿಗೆ ಭಾಸವಾಯಿತು. ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಕಿತು. ಅಮ್ಮನಲ್ಲಿ ವಿಶ್ವ ಮಾತೃತ್ವವು ಜಾಗೃತವಾಯಿತು. ಅಮ್ಮ ತಮ್ಮನ್ನು ಪ್ರೇಮ ಕರುಣೆಗಳ ವಾಹಕವಾಗಿಸಿಕೊಂಡು, ಇಡೀ ಸೃಷ್ಟಿಯ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಅಂದು ಚಿಕ್ಕದಾಗಿ ಆರಂಭಗೊಂಡ ಸೇವಾಸಾಧನೆಯು ಕಾಲಕ್ರಮೇಣ ಬೆಳೆಯುತ್ತಾ, ಇಂದು ಮಾತಾ ಅಮೃತಾನಂದಮಯಿ ಮಠ ಎಂಬ ವಿಶ್ವವ್ಯಾಪಿ ಸಂಸ್ಥೆಯಾಗಿದೆ. ಅಮ್ಮನ ಜನ್ಮಸ್ಥಳವೇ ಇಂದು ಅಮೃತಪುರಿಯಾಗಿ, ಅಮ್ಮನ ಕಾರ್ಯಕ್ಷೇತ್ರದ ಕೇಂದ್ರವೆನಿಸಿದೆ.
ಅಮ್ಮನ ದರ್ಶನದ ರೀತಿಯನ್ನು ಚರಿತ್ರೆಯು ಇದುವರೆಗೆ ಕೇಳಿ ಅರಿಯದು. ವಿಶ್ವಮಾತೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಅಮ್ಮ ತಮ್ಮ ಬಳಿಗೆ ಬರುವ ಪ್ರತಿಯೊಬ್ಬರನ್ನೂ, ಜಾತಿ, ಮತ, ದೇಶ, ಭಾಷೆ, ವರ್ಣ, ವರ್ಗ, ಲಿಂಗ – ಈ ಯಾವ ಭೇದವೂ ಇಲ್ಲದೆ, ಆತ್ಮೀಯವಾಗಿ ಆಲಿಂಗಿಸಿಕೊಳ್ಳುತ್ತಾರೆ. ಪ್ರತಿದಿನವೂ ಸಾವಿರಾರು ಜನರ ದುಃಖ ಆಲಿಸಿ, ಕಣ್ಣೀರನ್ನು ತಮ್ಮ ಕೈಗಳಿಂದ ಒರೆಸಿ, ಸಾಂತ್ವನ ನೀಡುತ್ತಾರೆ. ವರ್ಷದ ಬಹುಪಾಲು ದೇಶ ವಿದೇಶಗಳಲ್ಲಿ ಯಾತ್ರೆ ಮಾಡುತ್ತಾ ವಿಶ್ವದ ತಮ್ಮ ಮಕ್ಕಳಿಗೆ ಆನಂದ ಆಶ್ವಾಸನೆ ನೀಡುತ್ತಾರೆ.
ಮನೆಯಿಲ್ಲದವರ ಅಳಲನ್ನು ಕೇಳಿ ಅಮ್ಮ ಸಾವಿರಾರು ಮನೆಗಳನ್ನು ದೇಶಾದ್ಯಂತ ನಿರ್ಮಿಸಿ ನೀಡಿದ್ದಾರೆ. ವಿಧವೆಯರ ಅಳಲನ್ನು ಕೇಳಿ ಪಿಂಚಣಿ ವ್ಯವಸ್ಥೆ ಆರಂಭಿಸಿ, ಇದೀಗ ಅಂಗವಿಕಲರಿಗೂ ಅದನ್ನು ವಿಸ್ತರಿಸಿದ್ದಾರೆ, ರೋಗಿಗಳ ಅಳಲನ್ನು ಕೇಳಿ ಅನೇಕ ಆಸ್ಪತ್ರೆಗಳನ್ನು ಮತ್ತು ಚಿಕಿತ್ಸಾ ಘಟಕಗಳನ್ನು ತೆರೆದಿದ್ದಾರೆ. ಅದೇ ರೀತಿ ಶಾಲೆಗಳನ್ನೂ, ವಿಶ್ವವಿದ್ಯಾಲಯವನ್ನೂ ನಿರ್ಮಿಸಿದ್ದಾರೆ. ಭೂಕಂಪ, ಸುನಾಮಿ, ಪ್ರವಾಹ, ಚಂಡಮಾರುತ, ಮುಂತಾದ ಪ್ರಕೃತಿ ವಿಕೋಪ ದುರಂತಗಳು ಸಂಭವಿಸಿದಾಗ ಜನತೆಗೆ ಅನನ್ಯ ರೀತಿಗಳಲ್ಲಿ ಸೇವೆಯನ್ನು ಒದಗಿಸಿದ್ದಾರೆ. ಪ್ರಕೃತಿ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಜಗತ್ತಿನಾದ್ಯಂತ ಆರಂಭಿಸಿದ್ದಾರೆ. ಅಲ್ಲದೆ, ಆಧ್ಯಾತ್ಮ ಸಾಧನೆ ಬಯಸಿ ಬಂದ ಸುಮಾರು ಸಾವಿರ ಶಿಷ್ಯರಿಗೆ ಆಶ್ರಯ ನೀಡಿ, ಮಾರ್ಗದರ್ಶನ ನೀಡುತ್ತಿದ್ದಾರೆ.
ಅಮ್ಮ ಹೇಳುತ್ತಾರೆ, ಈ ಲೋಕದ ಎಲ್ಲ ದುಃಖಗಳಿಗೆ ಪ್ರೇಮ ಮಾತ್ರವೇ ಮದ್ದು. ಪ್ರೇಮ ಮಾತ್ರವೇ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಬಂಧಿಸಿಡಬಲ್ಲದು. ಈ ಚೇತನವು ನಮ್ಮೆಲ್ಲರಲ್ಲಿ ಜಾಗೃತವಾದಾಗ ಮಾತ್ರವೇ ಕಲಹಗಳು ಅಡಗುವುದು, ಎಲ್ಲೆಡೆ ಶಾಂತಿ ನೆಲೆಸುವುದು.