ದೇವರಪೂಜೆಗಾಗಿ ಉಪಯೋಗಿಸುವ ಎಲ್ಲ ವಸ್ತುಗಳೂ ಅತ್ಯುತ್ತಮವಾಗಿರಬೇಕೆಂದು ನಾವು ಎಚ್ಚರಿಕೆ ವಹಿಸುತ್ತೇವೆ. ಕೊಳೆತ ಹಣ್ಣುಗಳಾಗಲೀ, ಬಾಡಿದ ಹೂವುಗಳಾಗಲೀ, ಅಸ್ವಚ್ಛ ಪಾತ್ರೆಗಳಾಗಲೀ, ಯಾವುದನ್ನೂ ನಾವು ದೇವರಪೂಜೆಗೆ ಎಂದಿಗೂ ಉಪಯೋಗಿಸುವುದಿಲ್ಲ.

ನಾವು ಎಷ್ಟೇ ಜಾಗರೂಕತೆಯಿಂದ ರಸ್ತೆ ದಾಟಲು ಪ್ರಯತ್ನಿಸಿದರೂ, ಇತರ ವಾಹನ ಚಾಲಕರ  ಅಜಾಗರೂಕತೆಯಿಂದ ನಮಗೆ ಅಪಘಾತ ಸಂಭವಿಸಬಹುದು. ‘ಕರ್ಮಫಲವನ್ನು ನಿಯಂತ್ರಿಸುವ ಎಲ್ಲಾ ಅಂಶಗಳೂ ನಮಗೆ ಅನುಕೂಲಕರವಾಗಿರಲು  ಧೈವಕೃಪೆ ಇದ್ದೇ ತೀರಬೇಕು’, ಎಂದು ಹೇಳುವುದು ಈ ಕಾರಣದಿಂದಲೇ. ಅದಕ್ಕೆ ಸುಲಭವಾದ ಮಾರ್ಗವೆಂದರೆ, ಎಲ್ಲಾ ಕರ್ಮಗಳನ್ನೂ ದೇವರಪೂಜೆಯಾಗಿ ಮಾಡುವುದೇ ಆಗಿದೆ.

ಪ್ರತಿಯೊಂದು ಕರ್ಮವನ್ನೂ ಈ ಮನೋಭಾವದಿಂದ ಮಾಡಿದರೆ, ಕಾಲಕ್ರಮೇಣ ನಾವು ಸತ್ಕರ್ಮಗಳನ್ನು ಮಾತ್ರ ಮಾಡುತ್ತೇವೆ.  ದುಷ್ಕರ್ಮಗಳು ನಾಶವಾಗುತ್ತವೆ. ಏಕೆಂದರೆ, ದುಷ್ಕರ್ಮಗಳನ್ನು ದೇವರಿಗೆ ಅರ್ಪಿಸಲು ಹೇಗೆ ಸಾಧ್ಯ? 

ದೇವರಪೂಜೆಯನ್ನು ಮಾಡುವವನಿಗೆ ಇರಬೇಕಾದ ಮುಖ್ಯ ಭಾವವೆಂದರೆ ವಿನಯದ ಭಾವ. ಆದ್ದರಿಂದ ಪೂಜಾಭಾವದಲ್ಲಿ ಕರ್ಮವನ್ನು ಮಾಡುವಾಗ ಅಹಂಕಾರದಿಂದಿರಲು ನಮಗೆ ಸಾಧ್ಯವಾಗುವುದಿಲ್ಲ. ಕರ್ಮದಲ್ಲಿ ಯಶಸ್ಸು ಉಂಟಾದರೆ, ಅದನ್ನು ದೈವಾನುಗ್ರಹ ಎಂದು  ಕಾಣುತ್ತೇವೆಯೇ ಹೊರತು, ಆ ಯಶಸ್ಸು ತನ್ನ ಸಾಮರ್ಥ್ಯದಿಂದ ಆಯಿತೆಂಬ ಅಹಂಕಾರವಿರುವುದಿಲ್ಲ.

ಕಾರಣವೇನೆಂದರೆ, ಪೂಜೆ ಮುಗಿದ ನಂತರ ಸಿಗುವುದು ಪ್ರಸಾದವಾಗಿದೆ. ಆದ್ದರಿಂದ, ಕರ್ಮಫಲವನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ. ಕರ್ಮವನ್ನು ಮಾಡುವಾಗಿನ ವಿನಯಭಾವವು ಕರ್ಮಫಲವನ್ನು ಅನುಭವಿಸುವಾಗಲೂ ಇರಬೇಕು. ಪ್ರಸಾದದ ದೋಷ ಅಥವಾ ಕೊರತೆಯನ್ನು ನಾವು ನೋಡುವುದಿಲ್ಲ.

ಪರಾಜಯವುಂಟಾದರೆ, ಅದನ್ನೂ ದೈವಪ್ರಸಾದ ಎಂದು ಭಾವಿಸಿ, ಸೋಮಾರಿಗಳಂತೆ ಕುಳಿತಿರಬೇಕು ಎಂದು ಇದರ ಅರ್ಥವಲ್ಲ. ಉನ್ನತಿಗೆ ಸಾಧ್ಯತೆಯಿದ್ದರೆ ಮತ್ತೆ ಪ್ರಯತ್ನಿಸಬೇಕು. ಆದರೂ ಪರಾಜಯವೇ ಸಂಭವಿಸುತ್ತಿದ್ದರೆ ಅದನ್ನು ದೈವೇಚ್ಛೆ ಎಂದು ಸ್ವೀಕರಿಸಬೇಕು.

ವಿಜಯವನ್ನು ದೈವಾನುಗ್ರಹವಾಗಿ ಕಾಣುವಾಗ ನಮ್ಮಲ್ಲಿ ಅಹಂಕಾರ ಉಂಟಾಗುವುದಿಲ್ಲ. ಆಗ ವಿಜಯದಲ್ಲಿ ಎಲ್ಲವನ್ನೂ ಮರೆತು ಅತಿಯಾಗಿ ಕುಣಿದಾಡುವುದಾಗಲೀ, ಪರಾಜಯದಲ್ಲಿ ಮನಸ್ಸು ಬಳಲಿ ನೆಲಕ್ಕುರುಳುವುದಾಗಲೀ ಇರುವುದಿಲ್ಲ. ಪರಾಜಯವನ್ನು ದೈವೇಚ್ಛೆ ಎಂದು ಕಾಣುವಾಗ, ‘ನಾನು ಯಾವುದಕ್ಕೂ ಲಾಯಕ್ಕಿಲ್ಲದವನು’ ಎಂಬ ವಿಚಾರ ಉಂಟಾಗುವುದಿಲ್ಲ.

ಪರಾಜಯ ಸಂಭವಿಸಿದರೆ, ‘ಈ ಸಮಯದಲ್ಲಿ, ಇದು ತಕ್ಕ ಫಲ’ ಎಂದು ತಿಳಿದುಕೊಂಡರೆ ಸಾಕು. ‘ಇನ್ನೊಂದು ಪ್ರಾರಬ್ಧವು ಕಳೆಯಿತು’, ಎಂದು ಕಾಣಬೇಕು. ಆ ಅನುಭವವು ನಮ್ಮ ಜೀವನದಲ್ಲಿ ಒಂದು ಪಾಠವಾಗಿದೆ ಮತ್ತು ಅದರಿಂದ ನಾವು ಏನಾದರೂ ಪಾಠ ಕಲಿಯಬಲ್ಲೆವು ಎಂದು ಭಾವಿಸಿದರೆ ಸಾಕು.

ವಿವೇಕವಿದ್ದರೆ, ಯಾವುದೇ ಕರ್ಮವನ್ನೂ ನಮಗೆ ಅನುಕೂಲಕರವಾಗಿರುವಂತೆ ಮಾಡಿಕೊಳ್ಳಬಲ್ಲೆವು. ಸರಿಯಾದ ಮನೋಭಾವದೊಂದಿಗೆ, ಕರ್ಮವನ್ನು ದೇವರಪೂಜೆಯಾಗಿ ನೆರವೇರಿಸುವಾಗ, ಕೆಲಸದಲ್ಲಿನ ಬೇಜಾರು ಕೂಡ ನಿವಾರಣೆಯಾಗುತ್ತದೆ.

ಉತ್ಸಾಹದಿಂದ ಕೂಡಿದ ನಮ್ಮ ಪ್ರಯತ್ನ ಮತ್ತು ದೇವರ ಅನುಗ್ರಹ ಒಟ್ಟುಗೂಡಿದಾಗ, ವಿಜಯವು ಖಂಡಿತವಾಗಿಯೂ ನಮ್ಮ ಪಕ್ಕದಲ್ಲೇ ಇರುತ್ತದೆ. ಏನೇ ಆದರೂ, ನಿರಾಶರಾಗಬಾರದು. ಭಗವಂತ ಯಾವಾಗಲೂ ಪ್ರಯತ್ನಿಸುವವನ ಜೊತೆಗಿರುತ್ತಾನೆ. ವಿಜಯವು ಅವನಿಗೆ ಸಲ್ಲುತ್ತದೆ.

ದೇವರೆಂದರೆ ಪ್ರೇಮ. ದೇವರು ಈ ಸೃಷ್ಟಿಯ ಹಿಂದಿರುವ ಚೈತನ್ಯವಾಗಿದ್ದಾನೆ. ಎಲ್ಲಾ ಜೀವಜಂತುಗಳ ಬಗ್ಗೆ ಪ್ರೇಮ ಮತ್ತು ಕರುಣೆಗೆ ಪ್ರಾಧಾನ್ಯ ನೀಡದ ಧರ್ಮ ಯಾವುದೂ ಇಲ್ಲ.

ಎಲ್ಲಾ ಮತದವರೂ ಪ್ರೇಮಪೂರ್ಣರಾಗಿ ವರ್ತಿಸಿದ್ದರೆ, ಲೋಕದಲ್ಲಿ ಕಾಣುವ ಸಮಸ್ಯೆಗಳೆಲ್ಲವೂ ಬಹಳ ಹಿಂದೆಯೇ ಇಲ್ಲವಾಗುತ್ತಿದ್ದವು. ಎಲ್ಲಾ ಜೀವರಾಶಿಗಳೂ ಭಗವಂತನ ಮಕ್ಕಳು. ಅವರು ಪರಸ್ಪರ ಪ್ರೀತಿಸಬೇಕು ಮತ್ತು ಸೋದರ ಭಾವದಿಂದ ಸಹಕರಿಸಬೇಕೆಂದು ಭಗವಂತ ಬಯಸುತ್ತಾನೆ. ಆದರೆ, ತಾನೇ ಸೃಷ್ಟಿಸಿಕೊಂಡ ಭಿನ್ನತೆಗಳ ಕಾರಣದಿಂದ ಮನುಷ್ಯನು ಆತ್ಮವಿನಾಶದ ಕಡೆಗೆ ಸಾಗುತ್ತಿದ್ದಾನೆ.

ಮಾನವ ಸಮೂಹಕ್ಕೆ ಪ್ರೀತಿ ಮತ್ತು ಸತ್ಯದ ಮಾರ್ಗದೀಪವನ್ನು ತೋರಿಸುವುದಕ್ಕಾಗಿಯೇ ಎಲ್ಲಾ ಧರ್ಮಗಳಿರುವುದು. ಧರ್ಮವು ಎಂದೂ ವಿಭಜನೆಯನ್ನು ಪ್ರೋತ್ಸಾಹಿಸಬಾರದು. ಎಲ್ಲಾ ಧರ್ಮಗಳ ಮೂಲಕವೂ ಪ್ರಕಾಶಿಸುವುದು, ಒಂದೇ ಪರಮಸತ್ಯ. ಈ ದೃಷ್ಟಿಕೋನದಿಂದ ಧರ್ಮವನ್ನು ಪಾಲಿಸಲು ಅರಿತರೆ, ನಾವು ಪರಮಸತ್ಯದ ಹತ್ತಿರ ಸಾಗಲು, ಪರಸ್ಪರ ತಿಳಿದುಕೊಳ್ಳಲು ಮತ್ತು ಮಾನವಕುಲವನ್ನು ಶಾಂತಿಯ ಕಡೆಗೆ ಕರೆದೊಯ್ಯಲು ಸಾಧ್ಯ.

ನಾವೆಲ್ಲರೂ ಎಷ್ಟು ಕಾಲ ಈ ಭೂಮಿಯ ಮೇಲೆ ಜೀವಿಸಲಿದ್ದೇವೆ? ಯಾರೂ ಶಾಶ್ವತವಾಗಿ ಜೀವಿಸುವುದಿಲ್ಲ. ನಮ್ಮದೆಂದು ನಾವು ಭಾವಿಸುವ ಎಲ್ಲವೂ ನಾಶವಾಗುವಂಥದ್ದು. ವಾಸ್ತವತೆ ಹಾಗಿರುವಾಗ, ದೈವದತ್ತವಾದ ಈ ಜೀವನವನ್ನು ಕ್ಷಣಿಕ ಗುರಿಗಳ ಹಿಂದೆ ಅಲೆದು ವ್ಯರ್ಥಮಾಡುವುದರಲ್ಲಿ ಏನರ್ಥವಿದೆ?

ಎಲ್ಲಾ ಧರ್ಮಗಳ ನಿಜವಾದ ಬೋಧಕರು ಹೇಳುವುದು, “ಅಸ್ಥಿರವೂ, ಸದಾ ಬದಲಾಗುತ್ತಿರುವುದೂ ಆದ ಈ ಲೋಕಕ್ಕೆ ಆಧಾರವಾಗಿ, ಬದಲಾಗದ ಮತ್ತು ನಾಶವಾಗದ ಒಂದು ಮೂಲಭೂತ ತತ್ತ್ವವಿದೆ”, ಎಂದು. ಆ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಾಗಲೇ ಅಮೃತತ್ವವು ಪ್ರಾಪ್ತಿಯಾಗುವುದು. ಅದುವೇ ಜೀವನದ ಪರಮೋನ್ನತ ಗುರಿಯಾಗಿದೆ.

ಪ್ರೀತಿ ಮತ್ತು ಶಾಂತಿಯ ಅಸ್ತಿಭಾರದ ಮೇಲೆ ಶಾಶ್ವತವಾದ ಜೀವನವನ್ನು ನಿರ್ಮಿಸಿಕೊಳ್ಳುವ ಧೃಡವಾದ ಅಭಿಲಾಷೆಯನ್ನು ಧರ್ಮಗಳು ಜನರಲ್ಲಿ ಮೂಡಿಸಬೇಕು. ಇದೇ ಮಾನವಕುಲಕ್ಕಾಗಿ ಧರ್ಮವು ಮಾಡಬಲ್ಲ ಅತಿಶ್ರೇಷ್ಠ ಸೇವೆಯಾಗಿದೆ. ವಿಭಿನ್ನ ಧರ್ಮಗಳ ನಡುವೆ ಪರಸ್ಪರ ಪ್ರೀತಿ ಮತ್ತು ಸಹಕಾರವು ಅತ್ಯಂತ ಅವಶ್ಯಕ. ಪ್ರೀತಿ, ಶಾಂತಿ, ಸಹಕಾರ ಮತ್ತು ಅಹಿಂಸೆ, 21ನೇ ಶತಮಾನಕ್ಕೆ ಮಾರ್ಗದೀಪಗಳಾಗಿರಲಿ.

ಮಕ್ಕಳೇ, ಜೀವನದಲ್ಲಿ ಎರಡು ಕಾರ್ಯಗಳು ನಡೆಯುತ್ತವೆ. ಒಂದು, ಕರ್ಮ ಮಾಡುವುದು. ಎರಡು, ಅದರ ಫಲವನ್ನು ಅನುಭವಿಸುವುದು. ಕರ್ಮವನ್ನು ಯಾವ ಮನೋಭಾವದೊಂದಿಗೆ ಮಾಡಬೇಕು ಮತ್ತು ಕರ್ಮಫಲವನ್ನು ಯಾವ ಮನೋಭಾವದೊಂದಿಗೆ ಅನುಭವಿಸಬೇಕು ಎಂಬುದನ್ನು ತಿಳಿದರೆ, ಜೀವನವು ತುಲನಾತ್ಮಕವಾಗಿ ಶಾಂತವಾಗಿಯೂ ಮತ್ತು ಸಮಾಧಾನಪೂರ್ಣವಾಗಿಯೂ ಇರುತ್ತದೆ.

ನಾವು ಬಹಳಷ್ಟು ನಿರೀಕ್ಷಿಸುವ ಕಾರ್ಯಗಳು ಸಂಭವಿಸದೇ ಇರುವುದೂ ಮತ್ತು ನಿರೀಕ್ಷಿಸದ ಕಾರ್ಯಗಳು ಸಂಭವಿಸುವುದೂ, ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯ.

ಒಂದು ಕರ್ಮದ ಫಲವು ದೊರಕಲು ನಮ್ಮ ಕರ್ಮದ ಜೊತೆಗೆ ಅನೇಕ ಅಂಶಗಳೂ ಕಾರಣವಾಗಿರುತ್ತವೆ. ಇವೆಲ್ಲವೂ ಅನುಕೂಲಕರವಾಗಿ ಬಂದಾಗ ಮಾತ್ರ ನಾವು ನಿರೀಕ್ಷಿಸಿದ ಫಲವು ದೊರಕುತ್ತದೆ. ಇಲ್ಲಿ ಕರ್ಮವನ್ನು ಮಾಡುವುದು ಎಂಬ ಒಂದೇ ಕಾರ್ಯವು ನಮ್ಮ ಹತೋಟಿಯಲ್ಲಿದೆ. ಆದ್ದರಿಂದ, ಫಲದ ಬಗ್ಗೆ ಚಿಂತಿಸದೆ, ನಮ್ಮ ಸಂಪೂರ್ಣ ಶಕ್ತ್ಯಾನುಸಾರ ಆ ಕರ್ಮವನ್ನು ಉತ್ತಮವಾಗಿ ಮಾಡುವುದಷ್ಟೇ ನಮಗೆ ಸಾಧ್ಯವಿರುವುದು,.

ಅದಕ್ಕಾಗಿಯೇ ಫಲವನ್ನು ಅಪೇಕ್ಷಿಸದೆ ಕರ್ಮವನ್ನು ಮಾಡಬೇಕೆಂದು ಭಗವದ್ಗೀತೆಯಲ್ಲಿ ಭಗವಾನ್ ಉಪದೇಶಿಸುತ್ತಾನೆ. ಸಂಬಳವನ್ನು ಪಡೆಯದೆ ಕೆಲಸ ಮಾಡಬೇಕು ಎಂದು ಇದರ ಅರ್ಥವಲ್ಲ. ಫಲದ ಬಗ್ಗೆ ನಿರೀಕ್ಷೆಯನ್ನು ತ್ಯಜಿಸಿ ಕರ್ಮವನ್ನು ಮಾಡಿದರೆ, ಚೆನ್ನಾಗಿ ಮಾಡಲು ಸಾಧ್ಯ. ನಮಗೆ ದೊರೆಯಬೇಕಾದುದು ಸಹಜವಾಗಿಯೇ ಲಭಿಸುತ್ತದೆ.

ನಾವು ಪರೀಕ್ಷೆಯನ್ನು ಬಹಳ ಚೆನ್ನಾಗಿ ಬರೆದರೂ, ಉತ್ತರ ಪತ್ರಿಕೆ ಪರಿಶೀಲಿಸುವ ಪ್ರೊಫೆಸರ್ ಮತ್ತು ಮಾರ್ಕ್ಸ್ ನಮೂದಿಸುವ ವ್ಯಕ್ತಿ ಗಮನಿಸದಿದ್ದರೆ, ನಿರೀಕ್ಷಿಸಿದ ಫಲ ಸಿಗುವುದಿಲ್ಲ. ಒಬ್ಬ ವಿದ್ಯಾರ್ಥಿ ಬಹಳ ಚೆನ್ನಾಗಿ ಓದಿ ಪರೀಕ್ಷೆ ಬರೆದ. ರ‍್ಯಾಂಕ್ ಸಿಗುತ್ತದೆ ಎಂದೇ ಅವನು ನಿರೀಕ್ಷಿಸಿದ್ದ. ಆದರೆ, ಪರೀಕ್ಷಾಫಲಿತಾಂಶ ಬಂದಾಗ ಕೇವಲ ತೇರ್ಗಡೆಯಾಗಿದ್ದ ಅಷ್ಟೇ. ನಿರೀಕ್ಷಿಸಿದಷ್ಟು ಮಾರ್ಕ್ಸ್ ಸಿಗಲಿಲ್ಲ ಎಂದುಕೊಂಡು ಅವನು ನಿರಾಶನಾಗಲಿಲ್ಲ. ಉತ್ತರ ಪತ್ರಿಕೆ ಮರುತಪಾಸಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡ. ಎರಡನೇ ಬಾರಿ ನೋಡಿ ಮಾರ್ಕ್ಸ್ ಹಾಕಿದಾಗ ರ‍್ಯಾಂಕ್ ಇತ್ತು.

ಇದು ಹೇಗೆ ಸಂಭವಿಸಿತು ಎಂದು ವಿಚಾರಿಸಿದಾಗ ತಿಳಿದುಬಂದ ವಿಷಯವೆಂದರೆ, ಉತ್ತರ ಪತ್ರಿಕೆ ನೋಡಿದ ಪ್ರೊಫೆಸರ್ ಆ ಸಮಯದಲ್ಲಿ ಸಂಪೂರ್ಣವಾಗಿ ಅಸ್ವಸ್ಥನಾಗಿದ್ದನು ಎಂಬುದು. ಅವನ ಪತ್ನಿ ಯಾರೋ ಒಬ್ಬನ ಜೊತೆ ಓಡಿಹೋಗಿದ್ದಳು. ಅದರ ದುಃಖದಲ್ಲಿದ್ದ ಕಾರಣ, ಅವನಿಗೆ ಗಮನವಿಟ್ಟು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಅದನ್ನೇ ಅಮ್ಮ ಹೇಳಿದ್ದು – ನಾವು ಎಷ್ಟೇ ಓದಿ ಪರೀಕ್ಷೆ ಬರೆದರೂ, ನಮ್ಮ ಪ್ರಯತ್ನ ಮಾತ್ರವಲ್ಲ, ಬೇರೆ ಅನೇಕ ಅಂಶಗಳು ಸಹ ಫಲಿತಾಂಶವನ್ನು ನಿರ್ಧರಿಸುತ್ತವೆ ಎಂದು.

ಮನಸ್ಸಿನ ನಿರಂತರ ಚಲನೆಯು ಆಲೋಚನೆಗಳ ಅನಂತ ಅಲೆಗಳನ್ನು ಸೃಷ್ಟಿಸುತ್ತದೆ. ಈ ಆಲೋಚನಾ ತರಂಗಗಳ ಕಾರಣದಿಂದ, ಎಲ್ಲದರ ಬಗ್ಗೆ ನಮ್ಮ ದೃಷ್ಟಿಕೋನವು ಅಸ್ಪಷ್ಟ ಮತ್ತು ಅಪೂರ್ಣವಾಗುತ್ತದೆ

ಚಂಚಲವಾಗಿರುವುದು ಮಾನವ ಮನಸ್ಸಿನ ಸ್ವಭಾವವಾಗಿದೆ. ಗಡಿಯಾರದ ಲೋಲಕದಂತೆ ಅದು ಒಂದು ವಿಷಯದಿಂದ ಇನ್ನೊಂದಕ್ಕೆ ಸದಾ ಚಲಿಸುತ್ತಲೇ ಇರುತ್ತದೆ.

ಈ ಚಲನೆಯು ಅಂತ್ಯವಿಲ್ಲದೆ ಮುಂದುವರಿಯುತ್ತಲೇ ಇರುತ್ತದೆ. ಒಂದು ಕ್ಷಣ ಮನಸ್ಸು ಏನನ್ನಾದರೂ ಇಷ್ಟಪಡುತ್ತದೆ; ಮರುಕ್ಷಣವೇ ಅದನ್ನು ದ್ವೇಷಿಸುತ್ತದೆ. ಒಂದು ವಸ್ತುವನ್ನು ಮನಸ್ಸು ಈಗ ಬಯಸುತ್ತದೆ, ಮರುಕ್ಷಣವೇ ಅದೇ ವಸ್ತುವಿನಲ್ಲಿ ಬೇಸರ ಮೂಡುತ್ತದೆ. ಮನಸ್ಸೆಂಬ ಪೆಂಡುಲಂ ಕೆಲವೊಮ್ಮೆ ಕ್ರೋಧದತ್ತ ಚಲಿಸುತ್ತದೆ, ಕೆಲವೊಮ್ಮೆ ಆಸೆಯತ್ತ. ಸ್ಥಿರವಾಗಿರುವುದು ಅದಕ್ಕೆ ಸಾಧ್ಯವಿಲ್ಲ. ಸ್ಥಿರತೆ ಎಂಬುದು ಮನಸ್ಸಿಗಿಲ್ಲ.

ಮನಸ್ಸಿನ ಎಂದೂ ನಿಲ್ಲದ ಈ ಚಲನೆಯ ಕಾರಣದಿಂದ, ಬ್ರಹ್ಮಾಂಡದ ಚಲಿಸದ, ಸ್ಥಿರವಾದ ಮೂಲಭೂತ ಸತ್ವವನ್ನು ದರ್ಶಿಸಲು ಸಾಧ್ಯವಾಗದೆ ಹೋಗುತ್ತದೆ. ಆ ಬದಲಾಗದ ಸತ್ವವೇ ಎಲ್ಲದರ ನಿಜವಾದ ಸ್ವರೂಪವಾಗಿದೆ.

ದೇವಾಲಯ ಮತ್ತು ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೇ ಧರ್ಮಾಚರಣೆ ಆಯಿತೆಂದಲ್ಲ, ಅದು ಪರಿಪೂರ್ಣ ಭಕ್ತಿಯೆಂದೂ ಅರ್ಥವಲ್ಲ. ಎಲ್ಲ ಜೀವಜಾಲಗಳಲ್ಲೂ ಆತ್ಮನನ್ನು, ಭಗವಂತನನ್ನು ಕಾಣಲು ಸಾಧ್ಯವಾಗಬೇಕು. ಅದೇ ನಿಜವಾದ ಭಕ್ತಿ.

ಎಲ್ಲಾ ಚರಾಚರಗಳನ್ನು ಸಂರಕ್ಷಿಸುವುದೇ ಪ್ರಕೃತಿಯ ಏಕೈಕ ಉದ್ದೇಶ. ಈ ವಿಷಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ಏನನ್ನೂ ಹಾನಿ ಮಾಡದೆ ಬದುಕಲು, ಶಾಂತಿಯುತ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಸ್ವಂತ ಏಳಿಗೆಗಾಗಿ ಇತರರನ್ನು ನಾಶಪಡಿಸಲು ನಾವು ಮುಂದಾಗಬಾರದು.

ಇದು 21ನೇ ಶತಮಾನ. ಈ ಮಹಾಧಾರ್ಮಿಕ ಸಮ್ಮೇಳನದ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸಿದ ಸನ್ಯಾಸಿ ಶ್ರೇಷ್ಠರು, ಆಧ್ಯಾತ್ಮಿಕ ನೇತಾರರು ಮತ್ತು ಹಿಂದೂ ಸ್ವಾಗತ ಸಮಿತಿಯವರು, ಒಟ್ಟಾಗಿ ಈ ದೃಢ ಪ್ರತಿಜ್ಞೆ ಮಾಡಬಹುದು:

‘ದೇಶ ಮತ್ತು ಕಾಲವನ್ನು ಮೀರಿ, ಇಡೀ ಜಗತ್ತಿಗೆ ಶಾಂತಿ ಮತ್ತು ಸಾಮರಸ್ಯ ತರಲು ಮತ್ತು ಮಾನವಕುಲದ ತೊಂದರೆಗಳಿಗೆ ಸಮಾಧಾನ ನೀಡಲು ನಾವು ಶ್ರಮಿಸುತ್ತೇವೆ. ಸನಾತನ ಧರ್ಮದ ಮಹಾನ್ ಆದರ್ಶ ಅನುಷ್ಠಾನವಾಗಲಿ.’

ಪರಮ ತತ್ವ ಮತ್ತು ಜೀವನದ ಉನ್ನತ ಆದರ್ಶಗಳನ್ನು ಎಲ್ಲಾ ಯುವಕ-ಯುವತಿಯರಿಗೆ ನೀಡಲು ನಾವು ದೃಢ ಸಂಕಲ್ಪ ಮಾಡಬಹುದು. ಅವರು ಭವಿಷ್ಯದ ಅರಳುವ ಹೂವಿನ ಮೊಗ್ಗುಗಳು; ಅರಳಿ ಜಗತ್ತಿನ ಪರಿಮಳವಾಗಬೇಕಾದವರು!