ಮಕ್ಕಳೇ, ಭಗವಂತನು ನಮ್ಮನ್ನು ರಕ್ಷಿಸುತ್ತಾನೆಯೇ ಹೊರತು. ನಾವು ಭಗವಂತನನ್ನು ರಕ್ಷಿಸುವವರಲ್ಲ.

ಮಕ್ಕಳೇ, ನದಿಗೆ ನೀರಿನ ಅಗತ್ಯವಿಲ್ಲ. ಆದರೆ ಮಡಕೆಗೆ ನದಿಯ ನೀರಿನ ಅಗತ್ಯವಿದೆ. ಆಗಲೇ ಮಡಕೆ ಶುದ್ಧವಾಗುತ್ತದೆ. ನಮ್ಮ ಮನಸ್ಸು ಇಂದು ಕಳಂಕಗಳಿಂದ ತುಂಬಿದ ಮಡಕೆಯಾಗಿದೆ. ಭಗವಂತನೆಂಬ ನದಿಯಲ್ಲಿನ ನೀರನ್ನು ತುಂಬಿಸಿಯೇ ನಮ್ಮ ಮನಸ್ಸೆಂಬ ಮಡಕೆಯನ್ನು ಶುದ್ಧಗೊಳಿಸಬೇಕು. ಕಳಂಕಗಳಿಂದ ತುಂಬಿದ ಮನಸ್ಸನ್ನು ಶುದ್ಧೀಕರಿಸಿ ವಿಶಾಲಗೊಳಿಸಲು, ಹಾಗೂ ನಾವು ಎಲ್ಲರನ್ನೂ ಪ್ರೀತಿಸಿ, ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯವಾಗಬೇಕಾದರೆ, ನಮಗೆ ಭಗವಂತನ ಕೃಪೆ ಅತ್ಯಗತ್ಯ.

ಮಕ್ಕಳೇ, ಈ ಲೋಕದಲ್ಲಿ ನಮ್ಮ ಪ್ರಧಾನ ಕರ್ತವ್ಯವೆಂದರೆ, ಅಸಹಾಯಕರಿಗೆ ನೆರವು ನೀಡುವುದು. ಭಗವಂತನಿಗೆ ನಮ್ಮಿಂದ ಏನೂ ಬೇಕಿಲ್ಲ. ಆತ ಸದಾ ಸಂಪೂರ್ಣ. ಭಗವಂತನಿಗೆ ಏನಾದರೂ ಅಗತ್ಯವಿದೆ ಎಂದು ಭಾವಿಸುವುದು, ಸೂರ್ಯನಿಗೆ ಮೇಣದಬತ್ತಿಯ ಬೆಳಕನ್ನು ತೋರಿಸಿ, ‘ಸೂರ್ಯಭಗವಾನನೇ, ನನ್ನ ಬೆಳಕಿನಲ್ಲಿ ಭೂಮಿಯನ್ನು ಪ್ರಕಾಶಗೊಳಿಸು’ ಎಂದು ಹೇಳುವಂತೆ.

ಬಡಜನರ ಮತ್ತು ಕಷ್ಟದಲ್ಲಿರುವವರೊಡನೆ  ಸಹಾನುಭೂತಿಯಿಂದ ವರ್ತಿಸುವುದೇ, ಭಗವಂತನಿಗೆ ನಾವು ಸಲ್ಲಿ‌ಸುವ ಕರ್ತವ್ಯ. ನಿಸ್ವಾರ್ಥ ಲೋಕಸೇವೆಯೇ ಆತ್ಮಾನ್ವೇಷಣೆಯ ಪ್ರಾರಂಭ. ಮೂರನೇ ಕಣ್ಣು ತೆರೆಯಲು, ಎರಡು ಕಣ್ಣುಗಳನ್ನು ಮುಚ್ಚಿ ಅನೇಕರು ಧ್ಯಾನ ಮಾಡುತ್ತಾರೆ. ಅದು ಎಂದಿಗೂ ಆಗುವುದಿಲ್ಲ. ಆಧ್ಯಾತ್ಮಿಕತೆಯ ಹೆಸರಿನಲ್ಲಿ ಈ ಲೋಕದತ್ತ ಕಣ್ಣು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಪ್ರಗತಿಯೂ ಆಗುವುದಿಲ್ಲ. ಎರಡೂ ಕಣ್ಣು ತೆರೆದಿರುವಾಗಲೇ ಎಲ್ಲದರಲ್ಲೂ ಏಕತ್ವವನ್ನು ಕಾಣುವುದೇ ಆತ್ಮಸಾಕ್ಷಾತ್ಕಾರ, ಅಥವಾ ಆಧ್ಯಾತ್ಮಿಕ ಪೂರ್ಣತೆ. ಅದೇ ಮೂರನೇ ಕಣ್ಣು.

ಮೊಗ್ಗಾಗಿರುವಾಗ ಒಂದು ಹೂವಿನ ಸೌಂದರ್ಯವನ್ನು ಮತ್ತು ಸುಗಂಧವನ್ನು ಯಾರೂ ತಿಳಿಯಲು ಅಥವಾ ಆಸ್ವಾದಿಸಲು ಸಾಧ್ಯವಿಲ್ಲ. ಆದರೆ ಹೂವು ಅರಳಿದಾಗ ಅದರ ಕಾಂತಿಯೂ ಸುವಾಸನೆಯೂ ಸುತ್ತಲೂ ಹರಡುತ್ತದೆ. ನಮ್ಮ ಹೃದಯ ಈಗ ಮೊಗ್ಗಿನಂತೆ ಮುಚ್ಚಿಕೊಂಡು ಕುಳಿತಿದೆ. ಭಗವಂತನಲ್ಲಿ ಶ್ರದ್ಧಾಭಕ್ತಿ, ಎಲ್ಲರ ಬಗ್ಗೆ ತೋರುವ ಪ್ರೇಮ ಮತ್ತು ಕರುಣೆ, ಧಾರ್ಮಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಹೃದಯದ ಹೂವು ಅರಳಿ ವಿಕಾಸಗೊಳ್ಳುತ್ತದೆ. ಅದರ ಸುಗಂಧ ಮತ್ತು ಸೌಂದರ್ಯ ಸುತ್ತಲೂ ಹರಡಿ ಇಡೀ ಜಗತ್ತಿಗೆ ಒಂದು ವರವಾಗಿ ಪರಿಣಮಿಸುತ್ತದೆ.

ಇಲ್ಲಿಯವರೆಗೆ ನಾನು ಹೇಳಿದ್ದೆಲ್ಲವೂ ಟಾನಿಕ್ ಶೀಶೆಯ ಲೇಬಲ್ ಮಾತ್ರ. ಲೇಬಲ್ ಓದಿದ ಮಾತ್ರಕ್ಕೇ ‘ಟಾನಿಕ್’ ನ ಫಲ ಸಿಗುವುದಿಲ್ಲ. ಅದನ್ನು ಸೇವಿಸಿದಾಗ ಮಾತ್ರ ಅದರ ಫಲ ಸಿಗುವುದು. ಕಾಗದದ ಮೇಲೆ ಜೇನುತುಪ್ಪ ಎಂದು ಬರೆದು ನೆಕ್ಕಿದರೆ ಸಿಹಿ ಸಿಗುವುದಿಲ್ಲ. ವಿಜ್ಞಾನವನ್ನು ಅಧ್ಯಯನ ಮಾಡಿದ ಮಾತ್ರಕ್ಕೇ ಅನುಭವ ಉಂಟಾಗುವುದಿಲ್ಲ. ಧರ್ಮವನ್ನು ಮಾತಿನಿಂದ ಹೇಳಲಾಗದು. ಅದು ಜೀವನಶೈಲಿ. ಅದರ ಸೌಂದರ್ಯವು ಧಾರ್ಮಿಕವಾಗಿ  ಜೀವಿಸುವವರ ಮೂಲಕ ಪ್ರಕಟವಾಗುತ್ತದೆ. ಧಾರ್ಮಿಕ ತತ್ವಗಳನ್ನು ಧ್ಯಾನಿಸಬೇಕು. ಜೀವನದಲ್ಲಿ ಅಳವಡಸಿಕೊಳ್ಳಬೇಕು. ಅವುಗಳನ್ನು ಅನುಭವದಿಂದ ಅರಿತುಕೊಳ್ಳಬೇಕು. ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿಯಿಂದ  ಆ ಪರಮ ಪದವನ್ನು ಹೊಂದಲು ಎಲ್ಲರಿಗೂ ಸಾಧ್ಯವಾಗಲಿ ಎಂದು ನಾವು ಪ್ರಾರ್ಥಿಸೋಣ.

ಕಾರ್ಖಾನೆಗಳಿಂದ ಹೊಮ್ಮುವ ಹೊಗೆ ನಮ್ಮ ವಾತಾವರಣವನ್ನು ಎಷ್ಟು ಮಾಲಿನ್ಯಗೊಳಿಸಿದೆ? ಅಮ್ಮ ಕಾರ್ಖಾನೆಗಳನ್ನು ಮುಚ್ಚಿಬಿಡಬೇಕು ಎಂದು ಹೇಳುತ್ತಿಲ್ಲ. ಅವುಗಳಿಂದ ಬರುವ ಆದಾಯದ ಒಂದು ಭಾಗವಾದರೂ ಪ್ರಕೃತಿ ಸಂರಕ್ಷಣೆ ಮತ್ತು ಪರಿಸರ ಶುದ್ಧೀಕರಣಕ್ಕೆ ವಿನಿಯೋಗಿಸಲು ನಾವು ಸಿದ್ಧರಾಗಿರಬೇಕು ಎಂದು ಮಾತ್ರ ಹೇಳುತ್ತಾರೆ.

ಹಿಂದೆ, ಬಿಸಿಲು ಮತ್ತು ಮಳೆ, ಕಾಲ ಕಾಲಕ್ಕೆ ಸರಿಯಾಗಿ ಬರುತ್ತಿದ್ದು, ಸಸ್ಯಗಳ ಪೋಷಣೆ ಮತ್ತು ಬೆಳವಣಿಗೆ ಸರಿಯಾಗಿರುತ್ತಿತ್ತು. ಎಲ್ಲವೂ ಪ್ರಕೃತಿಯ ಕೃಪೆಯಿಂದ ನಡೆಯುತ್ತಿದ್ದ ಕಾರಣ, ನೀರಾವರಿ ಯೋಜನೆಗಳ ಅಗತ್ಯವೂ ಆಗ ಇರಲಿಲ್ಲ. ಆದರೆ ಇಂದು, ಮನುಷ್ಯನು ಧರ್ಮ ಮಾರ್ಗದಿಂದ ದೂರ ಸರಿದು ಪ್ರಕೃತಿಯನ್ನು ಶೋಷಿಸುತ್ತಿರುವ ಕಾರಣ, ಪ್ರಕೃತಿಯೂ ಪ್ರತೀಕಾರ ಆರಂಭಿಸಿದೆ. ಒಮ್ಮೆ ಮನುಷ್ಯನನ್ನು ಮೆಲ್ಲಗೆ ಸವರಿ ಸಂತೈಸಿದ ಅದೇ ಸೌಮ್ಯ ಗಾಳಿ, ಇಂದು ಪ್ರಚಂಡ ಬಿರುಗಾಳಿಯ ರೂಪ ತಾಳಿ ನಾಶ ಬಿತ್ತುತ್ತಿದೆ.

ಪ್ರಕೃತಿಯ ಕಳೆದುಹೋದ ತಾಳವನ್ನು ಮರಳಿ ಪಡೆಯಲು ನಮಗೆ ಸಾಧ್ಯವೇ ಎಂದು ನೀವು ಸಂದೇಹಿಸಬಹುದು, ‘ಮನುಷ್ಯನ ಶಕ್ತಿ ಸೀಮಿತವಲ್ಲವೇ?’ ಅಲ್ಲ. ನಮ್ಮೊಳಗೆ ಅನಂತ ಶಕ್ತಿ ನಿದ್ರಿಸುತ್ತಿದೆ. ಆ ಶಕ್ತಿ ವಿಶೇಷದ ಬಗ್ಗೆ ನಾವು ಅರಿವಿಲ್ಲದವರಾಗಿದ್ದೇವೆ ಅಷ್ಟೆ. ಆ ಶಕ್ತಿಯನ್ನು ನಾವು ಎಚ್ಚರಗೊಳಿಸಿಕೊಳ್ಳಬಹುದು. ನಾವು ಆಂತರಿಕವಾಗಿ ಎಚ್ಚರಗೊಂಡಾಗ, ಆ ಮಹಾಶಕ್ತಿ ಉದಯಿಸುತ್ತದೆ. ನಮ್ಮೊಳಗೆ ನಿದ್ರಿಸುತ್ತಿರುವ ಆ ಅನಂತ ಶಕ್ತಿಯನ್ನು ಎಚ್ಚರಗೊಳಿಸುವ ಜೀವನ ರಹಸ್ಯವೇ ಧರ್ಮ.

ಸನಾತನ ಧರ್ಮ ಹೇಳುತ್ತದೆ, “ಓ ಮನುಷ್ಯಾ! ನೀನು ಮಂಜಾಗಿ ಉರಿಯುವ ಮೇಣದಬತ್ತಿಯಲ್ಲ. ಸ್ವಯಂಪ್ರಕಾಶ ಸ್ವರೂಪನಾದ ಸೂರ್ಯನು ನೀನು. ಪ್ರಕಾಶಿಸಲು ಬೇರೊಬ್ಬರನ್ನು ಅವಲಂಬಿಸಬೇಕಾದವನಲ್ಲ ನೀನು.” ಎಲ್ಲಿಯವರೆಗೆ  ‘ನಾನು ಶರೀರ ಮಾತ್ರ’ ಎಂದು ತಿಳಿದಿರುತ್ತೀರೋ, ಅಲ್ಲಿಯವರೆಗೆ ತ್ವರಿತವಾಗಿ ಶಕ್ತಿ ಕ್ಷೀಣಿಸುವ ಸಾಧಾರಣ ಬ್ಯಾಟರಿಯಂತೆ ಇರುತ್ತೀರಿ.

ಇದರ ಬದಲು, ‘ನಾನು ಆತ್ಮ’ ಎಂದು ಅರಿತಾಗ, ವಿಶ್ವದ ಸಂಪೂರ್ಣ ಶಕ್ತಿ ಕೇಂದ್ರಕ್ಕೆ ಸಂಪರ್ಕ ಹೊಂದಿದ, ಯಾವಾಗಲೂ ಚಾರ್ಜ್ ಆಗಿರುವ, ಶಕ್ತಿ ಎಂದಿಗೂ ಕ್ಷೀಣಿಸದ, ಅಗಾಧ ಶಕ್ತಿಯುತ ಬ್ಯಾಟರಿಯಂತೆ ಇರುತ್ತೀರಿ. ಎಲ್ಲ ಶಕ್ತಿಯ ಮೂಲವಾದ ಆತ್ಮನೊಂದಿಗೆ ಮತ್ತು ಸರ್ವಶಕ್ತನಾದ ಈಶ್ವರನೊಂದಿಗೆ ಐಕ್ಯ ಹೊಂದಿದಾಗ, ನಿಮ್ಮೊಳಗಿನ ಶಕ್ತಿ ಎಂದಿಗೂ ಕ್ಷೀಣಿಸುವುದಿಲ್ಲ. ಅದು ನಿಮ್ಮೊಳಗಿನ ಮಹಾಶಕ್ತಿಯನ್ನು ಎಚ್ಚರಗೊಳಿಸಲು ಸಹಾಯ ಮಾಡುತ್ತದೆ.

ಮಕ್ಕಳೇ, ನಿಮ್ಮೊಳಗಿನ ಅನಂತ ಶಕ್ತಿಯ ಬಗ್ಗೆ ಅರಿವುಳ್ಳವರಾಗಿರಿ. ನೀವು ಭಯದಿಂದ ನಡುಗುವ ಆಡಿನ ಮರಿಗಳಲ್ಲ. ತೇಜಸ್ಸು ಮತ್ತು ಗಾಂಭೀರ್ಯವುಳ್ಳ ಸಿಂಹದ ಮರಿಗಳು. ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿಯೇ ಸರ್ವಶಕ್ತನಾದ ಈಶ್ವರನು. 

ಎಲ್ಲದರಲ್ಲೂ ಜೀವಚೈತನ್ಯವನ್ನು ನೋಡು, ಅನುಭವಿಸು, ಅದು ಪ್ರೇಮ. ಹೃದಯದಲ್ಲಿ ನಿಖರವಾಗಿ ಪ್ರೇಮ ತುಂಬಿದಾಗ, ಬ್ರಹ್ಮಾಂಡದ ಎಲ್ಲೆಡೆ ಜೀವಚೈತನ್ಯ ಸ್ಪಂದಿಸುವುದನ್ನು ನೋಡಲು ಸಾಧ್ಯವಾಗುತ್ತದೆ. 

ಧರ್ಮವು ಹೇಳುತ್ತದೆ: ‘ಜೀವಚೈತನ್ಯವೇ ಪ್ರೇಮ.’ ಅದು ಅಲ್ಲಿಯೂ ಇದೆ, ಇಲ್ಲಿಯೂ ಇದೆ, ಪ್ರತಿಯೊಂದು ಕಡೆಯೂ ಇದೆ. ಎಲ್ಲೆಲ್ಲಿ ಜೀವನವಿದೆಯೋ, ಜೀವಿತವಿದೆಯೋ, ಅಲ್ಲೆಲ್ಲಾ ಪ್ರೇಮವಿದೆ. ಅದೇ ರೀತಿ, ಪ್ರೇಮ ಇರುವ ಎಲ್ಲೆಡೆಯೂ ಜೀವನ ಮತ್ತು ಜೀವಿತವಿದೆ. ಜೀವನ ಮತ್ತು ಪ್ರೇಮ ಎರಡಲ್ಲ; ಒಂದೇ. ಆದರೆ, ಪರಮ ಸತ್ಯವನ್ನು ಅರಿತುಕೊಳ್ಳುವವರೆಗೆ, ಆ ಅದ್ವೈತ ಭಾವವನ್ನು ನಾವು ಗ್ರಹಿಸಲು ಸಾಧ್ಯವಿಲ್ಲ.

ಸತ್ಯವನ್ನು ಸಾಕ್ಷಾತ್ಕರಿಸುವವರೆಗೆ, ಹೃದಯವಂತಿಕೆ ಮತ್ತು ಬುದ್ಧಿಶಕ್ತಿಯ ನಡುವಿನ ಈ ವ್ಯತ್ಯಾಸವು ಮುಂದುವರಿಯುತ್ತದೆ. ಕೇವಲ ಬುದ್ಧಿಶಕ್ತಿ ಸಾಲದು. ಪ್ರೇಮ, ಕರುಣೆ ಮತ್ತು ನಂಬಿಕೆಯಿಂದ ತುಂಬಿದ ಹೃದಯವು ನಮ್ಮಲ್ಲಿದ್ದಾಗ ಮಾತ್ರ ನಮ್ಮ ಜೀವನ ಪೂರ್ಣವಾಗುತ್ತದೆ. ಧರ್ಮ ಮತ್ತು ಧರ್ಮಾಚರಣೆಗಳು ಇದನ್ನೇ ಕಲಿಸುವುದು.

ಇದು ಬುದ್ಧಿಶಕ್ತಿ ಮತ್ತು ತರ್ಕದ ಯುಗ. ಇದು ವಿಜ್ಞಾನದ ಯುಗ. ನಾವು ನಮ್ಮ ಹೃದಯವನ್ನು ಮರೆತಿದ್ದೇವೆ. ಹೃದಯದ ಭಾವಗಳನ್ನು ಮರೆತಿದ್ದೇವೆ.

‘ನಾನು ಪ್ರೇಮ-ಸುಳಿಯೊಳಗೆ ಬಿದ್ದಿದ್ದೇನೆ’ ಎಂದು ನಾವು ಸಾಮಾನ್ಯವಾಗಿ ಹೇಳುತ್ತೇವೆ. ಹೌದು, ನಾವೆಲ್ಲರೂ ಸ್ವಾರ್ಥತೆ ಮತ್ತು ಪ್ರಾಪಂಚಿಕತೆಯ ಪ್ರೇಮ-ಸುಳಿಯೊಳಗೆ ಬಿದ್ದುಹೋಗಿದ್ದೇವೆ. ಎಚ್ಚರಗೊಳ್ಳಲು ಮತ್ತು ಏಳಲು ನಮಗೆ ಸಾಧ್ಯವಾಗುತ್ತಿಲ್ಲ. ಬೀಳಲೇ ಬೇಕಾದರೆ,  ಬುದ್ಧಿಶಕ್ತಿಯಿಂದ ಹೃದಯವಂತಿಕೆಗೆ ಬೀಳೋಣ. ಪ್ರೇಮದಲ್ಲಿ ಎಚ್ಚರಗೊಳ್ಳುವುದು ಮತ್ತು ಏಳುವುದೇ ಧರ್ಮ.

ಒಬ್ಬ ವ್ಯಕ್ತಿಯ ಹೆಂಡತಿ ತೀರಿಕೊಂಡಳು. ಅವಳ  ಆತ್ಮಶಾಂತಿಗಾಗಿ ಪ್ರಾರ್ಥನೆ ನಡೆಸಲು, ಗಂಡನು ಒಬ್ಬ ಪುರೋಹಿತನನ್ನು ಕರೆತಂದನು. 

ಅವರು ಕಾರ್ಯಗಳನ್ನು ನಡೆಸುತ್ತಿದ್ದ ಸಮಯದಲ್ಲಿ, ಈ ಮಂತ್ರವನ್ನು ಜಪಿಸಿದರು: ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’. ಅದರ ಅರ್ಥ ಗಂಡನಿಗೆ ತಿಳಿಯಲಿಲ್ಲ. ಅವನು ನೇರವಾಗಿ ಪುರೋಹಿತರನ್ನು ಕೇಳಿದ, “ನೀವು  ಪಠಿಸಿದ  ಮಂತ್ರದ ಅರ್ಥವೇನು?” ಪುರೋಹಿತರು ವಿವರಿಸಿದರು, “‘ಈ ಲೋಕದಲ್ಲಿರುವ ಎಲ್ಲರೂ ಸುಖಿಗಳಾಗಲಿ; ಎಲ್ಲರೂ ಐಶ್ವರ್ಯವಂತರಾಗಿ ಮತ್ತು ಶಾಂತಿಯುತರಾಗಿರಲಿ.'”

ಮಂತ್ರವನ್ನು ಅರ್ಥಮಾಡಿಕೊಂಡಾಗ, ಅವನು ಪುರೋಹಿತರನ್ನು ಕೇಳಿದ, “ನನ್ನ ಹೆಂಡತಿಯ ಆತ್ಮಕ್ಕಾಗಿ ಪ್ರಾರ್ಥಿಸಲು ನಾನು ನಿಮ್ಮನ್ನು ಕರೆತಂದಿದ್ದೇನೆ. ಆದರೆ ನೀವು ಪಠಿಸಿದ ಮಂತ್ರದಲ್ಲಿ, ನನ್ನ ಹೆಂಡತಿಯ ಹೆಸರೋ ಅಥವಾ ಅವಳ ಆತ್ಮದ ಬಗ್ಗೆಯೋ ಏನೂ ಸೂಚಿಸಿಲ್ಲ, ಹೌದೇ?”

“ಈ ರೀತಿ ಪ್ರಾರ್ಥಿಸಲು ನನ್ನ ಗುರು ನನಗೆ ಕಲಿಸಿದ್ದಾರೆ. ವಾಸ್ತವವಾಗಿ, ಇಡೀ ಜಗತ್ತಿಗಾಗಿ ನಾವು ಪ್ರಾರ್ಥಿಸಿದಾಗಲೇ ನಿಮ್ಮ ಹೆಂಡತಿಯ ಆತ್ಮಕ್ಕೆ ನಿಜವಾದ ಶಾಂತಿ ಮತ್ತು ಮೋಕ್ಷ ಸಿಗುತ್ತದೆ. ಬೇರೆ ರೀತಿಯಲ್ಲಿ ಪ್ರಾರ್ಥಿಸಲು ನನಗೆ ತಿಳಿದಿಲ್ಲ,” ಎಂದು ಪುರೋಹಿತರು ಉತ್ತರ ನೀಡಿದರು.

ಇತರ ಮಾರ್ಗವಿಲ್ಲದೆ, ಕೊನೆಯಲ್ಲಿ ಗಂಡನು ಪುರೋಹಿತರಿಗೆ ಹೇಳಿದ, “ಸರಿ, ಆದರೆ ಕನಿಷ್ಠಪಕ್ಷ, ನಮ್ಮ ಉತ್ತರ ದಿಕ್ಕಿನಲ್ಲಿರುವ ನೆರೆ ಮನೆಯವರನ್ನು ಮಾತ್ರ ಅದರಿಂದ ಬಿಟ್ಟುಬಿಡಬಹುದೇ? ಅವರಿಗೆ ನಮ್ಮ ಮೇಲೆ ತುಂಬಾ ಹಗೆತನ ಇದೆ. ಅವರನ್ನು ಬಿಟ್ಟು ಉಳಿದೆಲ್ಲರಿಗಾಗಿ ಬೇಕಾದರೂ ನೀವು ಪ್ರಾರ್ಥಿಸಬಹುದು.”

ಮಕ್ಕಳೇ, ಇಂದು ನಮ್ಮ ಮನೋಭಾವವು ಈ ರೀತಿಯಲ್ಲಿದೆ. ಇದನ್ನಲ್ಲ ನಾವು ಪೋಷಿಸಬೇಕಾದದ್ದು. ಇದು ಬದಲಾಗಬೇಕು, ಸಂಪೂರ್ಣವಾಗಿ ಮಾರ್ಪಾಡಾಗಬೇಕು. ಮಂತ್ರಗಳು ನಾಲಿಗೆಯಿಂದ ಉಚ್ಚರಿಸುವುದಕ್ಕೆ ಮಾತ್ರ ಮೀಸಲಾಗಿಲ್ಲ. ಅವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವಗಳಾಗಿವೆ. ಹಾಗಾದಾಗ ಮಾತ್ರ ನಮ್ಮ ಪೂರ್ವಜರ ಮುನ್ನೋಟ ನನಸಾಗುತ್ತದೆ. ನಮ್ಮ ಪ್ರಾರ್ಥನೆಗೆ ಪೂರ್ಣ ಫಲ ಸಿಗುತ್ತದೆ.

ಧರ್ಮ ಜೀವನದ ಒಂದು ಅವಿಭಾಜ್ಯ ಅಂಗ (ಮಾರ್ಗದರ್ಶಿ). ಒಬ್ಬರನ್ನೊಬ್ಬರು ಪ್ರೀತಿಸುವುದು, ಪರಸ್ಪರ ಸೇವೆ ಮಾಡುವುದು, ಕ್ಷಮಿಸುವುದು, ಸಹನೆಯಿಂದಿರುವುದು, ಮತ್ತು ಕರುಣಾಮಯವಾಗಿ ವರ್ತಿಸುವುದು – ಎಂಬ ಈ ಗುಣಗಳನ್ನು ಕಲಿಸುವುದೇ ಧರ್ಮ. 

ಅದ್ವೈತವು ಒಂದು ಅನುಭವ. ಆದಾಗ್ಯೂ, ಅದನ್ನು ದೈನಂದಿನ ಜೀವನದಲ್ಲಿ ಪ್ರೇಮ ಮತ್ತು ಕರುಣೆಯ ರೂಪದಲ್ಲಿ ಪ್ರಕಟಿಸಬಹುದು. ಸನಾತನ ಧರ್ಮದ ಗುರುಗಳಾದ ಋಷಿಮುನಿಗಳು ಮತ್ತು ಮಹಾತ್ಮರು ನಮಗೆ ಬೋಧಿಸುವುದು ಈ ಮಹಾನ್ ಪಾಠವನ್ನೇ.

ನಾವು ಮರೆತುಹೋಗಿರುವ ಧರ್ಮದ ಭಾಷೆಯೇ ಕರುಣೆಯ ಭಾಷೆ. ಧರ್ಮವು ಬೋಧಿಸುವ ಪ್ರೇಮ ಮತ್ತು ಪರಸ್ಪರ ವಿಶ್ವಾಸದ ಭಾಷೆಯನ್ನು ನಾವು ಮರೆತುಬಿಟ್ಟಿದ್ದೇವೆ. ಇಂದು ಜಗತ್ತಿನಲ್ಲಿ ಕಾಣುವ ಎಲ್ಲ ಸಮಸ್ಯೆಗಳ ಮೂಲಕಾರಣ, ಪ್ರೇಮ ಮತ್ತು ಕರುಣೆಯ ಅಭಾವವೇ.

ವ್ಯಕ್ತಿಗತ ಜೀವನದ ಸಮಸ್ಯೆಗಳು, ರಾಷ್ಟ್ರದ ಸಮಸ್ಯೆಗಳು, ಮುಂತಾದ ಜಗತ್ತಿನ ಸಮಸ್ತ ಸಮಸ್ಯೆಗಳಿಗೂ ಕಾರಣ, ಧರ್ಮವು ಉಪದೇಶಿಸುವ ಪ್ರೇಮ ಮತ್ತು ಕರುಣೆಯನ್ನು ನಾವು ಅಳವಡಿಸಿಕೊಳ್ಳಲು (ಆಂತರೀಕರಿಸಲು) ವಿಫಲರಾಗಿದ್ದರಿಂದ. ಊಟ ಮತ್ತು ನಿದ್ರೆಯಂತೆ, ಧರ್ಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.

ಇಂದು ಧರ್ಮಕ್ಕೆ ಒಂದು ಪುನರುಜ್ಜೀವನದ ಅಗತ್ಯವಿದೆ. ಅದಕ್ಕೆ ಒಂದು ಹೊಸ ಜೀವನ ಮತ್ತು ಶಕ್ತಿಯನ್ನು ನೀಡಬೇಕಾಗಿದೆ. ಆಗ ಮಾತ್ರವೇ ಕರುಣೆ ಮತ್ತು ಪ್ರೇಮವು ನಮ್ಮ ಹೃದಯಗಳಲ್ಲಿ ಉದಯಿಸುತ್ತವೆ.  ಪ್ರೇಮ ಮತ್ತು ಕರುಣೆ ಮಾತ್ರವೇ ಅಂಧಕಾರವನ್ನು ದೂರಿಕರಿಸಿ, ಜಗತ್ತಿನಲ್ಲಿ ಬೆಳಕು ಮತ್ತು ಪಾವಿತ್ರ್ಯವನ್ನು (ಪವಿತ್ರತೆಯನ್ನು) ಹರಡಬಲ್ಲವು.

ಪ್ರೇಮ ಎಲ್ಲೆಡೆ ಇದೆ. ಆದರೆ, ಜಗತ್ತಿನಲ್ಲಿ ನಾವು ನೋಡುವ ಎಲ್ಲ ಪ್ರೇಮವೂ ನಿಜವಾದ ಪ್ರೇಮವಲ್ಲ. ನಾವು ನಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ನೆರೆಹೊರೆಯವರನ್ನು ಅದೇ ರೀತಿ ಪ್ರೀತಿಸುವುದಿಲ್ಲ. ನಾವು ನಮ್ಮ ಮಗನನ್ನು ಅಥವಾ ಮಗಳನ್ನು ಪ್ರೀತಿಸುತ್ತೇವೆ. ಆದರೆ ಇತರ ಮಕ್ಕಳನ್ನು ಅದೇ ರೀತಿ ಪ್ರೀತಿಸಲು ನಾವು ಸಿದ್ಧರಿಲ್ಲ. ನಮ್ಮ ತಾಯಿತಂದೆಯರನ್ನು  ಪ್ರೀತಿಸುವಂತೆ ಬೇರೆಯವರನ್ನು ನಾವು ಪ್ರೀತಿಸುವುದಿಲ್ಲ.

ನಾವು ನಮ್ಮ ಧರ್ಮವನ್ನು ಪ್ರೀತಿಸುತ್ತೇವೆ. ಆದರೆ ಇತರ ಧರ್ಮಗಳನ್ನು ಪ್ರೀತಿಸುವುದಿಲ್ಲ. ನಮ್ಮ ದೇಶವನ್ನು ನಾವು ಪ್ರೀತಿಸುವಂತೆ ಇತರ ದೇಶಗಳನ್ನು ನಾವು ಪ್ರೀತಿಸುವುದಿಲ್ಲ; ವಾಸ್ತವವಾಗಿ, ಇತರ ದೇಶಗಳ ಜನರೊಂದಿಗೆ  ನಮಗೆ ಹಗೆತನವೂ ಇದೆ. ಆದ್ದರಿಂದ, ನಮ್ಮದು ನಿಜವಾದ ಪ್ರೇಮವಲ್ಲ; ಅದು ಒಂದು ಸೀಮಿತವಾದ ಬಾಂಧವ್ಯವಾಗಿದೆ. ಈ ಸೀಮಿತ ಹಾಗೂ ಸಂಕುಚಿತ ಬಾಂಧವ್ಯವನ್ನು ದಿವ್ಯ ಪ್ರೇಮವಾಗಿ ಪರಿವರ್ತಿಸುವುದೇ ಆಧ್ಯಾತ್ಮಿಕತೆಯ ಗುರಿಯಾಗಿದೆ.