ಪ್ರಶ್ನೆ: ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ?
ಮಕ್ಕಳೇ, ಕಲಿತವನಿಗೆ ಮಾತ್ರವೇ ಇನ್ನುಳಿದವರಿಗೆ ಕಲಿಸಲು ಸಾಧ್ಯ. ಇಂದು ನಮ್ಮ ರಾಗಾದಿ ವೈರಿಗಳು ಯಾವುವೂ ಬಿಟ್ಟು ಹೋಗಿಲ್ಲ. ಯಾರಾದರೂ ದ್ವೇಷಿಸಿದರೆ, ನಾವು ಕಲಿತಿರುವುದು ಅವರನ್ನು ಇಮ್ಮಡಿ ದ್ವೇಷಿಸಲಿಕ್ಕೆ. ಇನ್ನಿತರರ ಒಂದು ಮಾತಿನ ಮೇಲಿದೆ ಇಂದು ನಮ್ಮ ಜೀವನ. ನಮ್ಮ ಬಗ್ಗೆ ಏನಾದರೂ ಹೇಳಿದರು ಎಂದು ಕೇಳಿದರೆ ಸಾಕು, ಒಂದೇ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಇಲ್ಲವೇ ಹೇಳಿದವನನ್ನು ತಿವಿದು ಇರಿಯುತ್ತೇವೆ. ಬೇರೆಯವರ ಬಾಯಿಯ ಎರಡಕ್ಷರಗಳನ್ನು ಹಿಡಿದು ಕೊಂಡು ನಾವಿಂದು ನೇತಾಡಿಕೊಂಡಿರುವುದು. ಆ ದುರ್ಬಲತೆಯನ್ನು ಈ ತಪಸ್ಸಿನಿಂದ ಮಾತ್ರ ಬದಲಾಯಿಸಲು ಸಾಧ್ಯ. ನಾನು ಶರೀರವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ ಆತ್ಮನೆಂದು ಕಾಣುವಾಗ, ಯಾರೂ ನನ್ನಿಂದ ಬೇರೆಯಲ್ಲವೆಂದು ಸ್ವಯಂ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಸ್ವಯಂ ಕ್ಷಮೆಯುಳ್ಳವರಾಗುತ್ತೇವೆ. ನಾವು ಶ್ರದ್ಧಾಳುವೂ, ಕ್ಷಮೆಯುಳ್ಳವರೂ ಆದರೆ ಮಾತ್ರವೇ, ದೇವರ ಗುಣಗಳು ನಮ್ಮಲ್ಲಿ ಮಿನುಗಿ ಹೊಳೆಯತೊಡಗುತ್ತವೆ.
ಶತ್ರುವಿನ ಪ್ರತಿಯಾಗಿ ಕರುಣೆ ಸುರಿಸಲು ಮಹಾತ್ಮರ ಸಾಮರ್ಥ್ಯ ಅವರ ವಿಶಾಲ ಹೃದಯದಿಂದ ಬಂದಿರುತ್ತದೆ. ಅದು ನಮಗೆ ಬಂದಿಲ್ಲ. ನಮಗೆ ಸರಿ ಹೋಗದ ಒಂದು ಮಾತು ಕೇಳಿದರೆ ಸಾಕು, ಕೂಡಲೆ ನಾವು ಹೊಡೆಯುವುದಕ್ಕೆ ಏಳುತ್ತೇವೆ. ರಾತ್ರಿಯಲ್ಲಿ ಜೀರುಂಡೆ ಶಬ್ದ ಮಾಡುತ್ತದೆ. ಅದರಿಂದ ನಾವು ಮಲಗದೆ ಇರುತ್ತೇವೆಯೆ ? ಅದರ ಸ್ವಭಾವ ಹಾಗೆಯೆ ಎಂದು ಗೊತ್ತು. ಹೇಳುವವನ ಸಂಸ್ಕಾರಹೀನತೆಯೂ ತಿಳಿಗೇಡಿತನವೂ ಕಾಣುವಾಗ ನಮಗೆ ಕೋಪ ಬರುವುದಿಲ್ಲ. ಸಣ್ಣ ಮಗು ಸಿಟ್ಟಾದರೆ ನಾವು ಹೋಗಿ ಹೊಡೆಯುವುದಿಲ್ಲ. ಇದೇ ರೀತಿ ನಮ್ಮನ್ನು ದ್ವೇಷಿಸುವವರನ್ನು ನೋಡಲು ಸಾಧ್ಯ. ತಪಸ್ಸಿನಿಂದ ’ಇವರದ್ದು ಮಕ್ಕಳ ಮನಸ್ಸು; ವಿವೇಚನೆ ಬಂದಿಲ್ಲ’ ಎಂದು ಅರ್ಥ ಮಾಡಿಕೊಂಡಾಗ ನಮ್ಮಲ್ಲಿ ತಾನಾಗಿಯೇ ತಾಳ್ಮೆ ಹುಟ್ಟಿಕೊಳ್ಳುತ್ತದೆ. ಆದರೆ ನಾವಿಂದು ದುರ್ಬಲರು. ಅದನ್ನು ಮಾರ್ಪಡಿಸಲು ತಪಸ್ಸು ಬೇಕು. ಇಂದು ನಾವೊಂದು ಸೊನ್ನೆ ವ್ಯಾಟ್ಟಿನ ಬಲ್ಬು. ನಮ್ಮ ದಾರಿಯನ್ನೂ ಬೆಳಗುವ ಪ್ರಕಾಶವಿಲ್ಲ ಅದಕ್ಕೆ. ತಪಸ್ಸಿನಿಂದ ಅದನ್ನು ಹತ್ತು ಸಾವಿರ ವ್ಯಾಟ್ಟಿನ ಬಲ್ಬ್ ಆಗಿ ಮಾರ್ಪಡಿಸಬಹುದು. ನಮಗೂ ಸಹ ನಡೆಯಲಿಕ್ಕೆ ಸವಾಲಾಗಿರುವ ಮಂದ ಬೆಳಕನ್ನು, ತಪಸ್ಸಿನಿಂದ ಲಕ್ಷಗಟ್ಟಲೆ ಜನಗಳಿಗೆ ಬೆಳಕು ನೀಡುವ ಮಾರ್ಗದರ್ಶಿಯಾಗಿಸಲು ಸಾಧ್ಯವಿದೆ. ಇದು ತಪಸ್ಸಿನ ಪ್ರಯೋಜನ.”