ಜುಲೈ ೨೧, ೨೦೧೫, ಫ್ರಾನ್ಸ್ ನ ರಾಜಧಾನಿಯಾದ ಪ್ಯಾರಿಸ್ ನಲ್ಲಿ – “ಕ್ಲೈಮ್ಯಾಕ್ಟಿಕ್ ಕಾನ್ ಶನ್ಸ್” ಕುರಿತು ನಡೆದ ಶೃಂಗ ಸಭೆಗೆ ಕಳುಹಿಸಲಾದ ಅಮ್ಮನ ವಿಡಿಯೋ ಸಂದೇಶ.

“ಪ್ರೇಮ ಸ್ವರೂಪಿಗಳು ಆತ್ಮಸ್ವರೂಪಿಗಳಾದ ಎಲ್ಲರಿಗೂ ನಮಸ್ಕಾರ.

ಕೆಲವು ಮಕ್ಕಳು ಹೇಳುತ್ತಾರೆ, ’ತಲೆಸುತ್ತುತ್ತಾ ಇದೆ ಅಮ್ಮ, ಬೀಳುವಂತಾಗುತ್ತಿದೆ, ಬ್ಯಾಲೆಂಸ್ ಹೋಗುತ್ತಿದೆ’ ಎಂದು. ಅದು ಕಿವಿಗಳೊಳಗಿರುವ ಒಂದು ಬಗ್ಗೆಯ ಅಣುಕೋಶಗಳಿಗೆ ಉಂಟಾಗುವ ಅಲುಗಾಟದಿಂದಾಗಿ ಈರೀತಿ ಉಂಟಾಗುವಂಥದ್ದು. ಸರಿಹೋಲುವಂತೆ ಅದೇ ಅವಸ್ಥೆಯಂತೆ ಇಂದು ಪ್ರಕೃತಿಯ ಅವಸ್ಥೆಯೂ ಕೂಡ. ಹಾಗಾಗಿ ಬಂದೂಕಿನ ಮುಂದೆ ನಿಂತಿರುವಾಗ ಉಂಟಾಗುವ ಶ್ರದ್ಧೆಯು ಜಾಗರೂಕತೆಯು ಎಲ್ಲರಿಗೂ ಉಂಟಾಗಬೇಕು.

ನನ್ನ ಚಿಕ್ಕವಯಸ್ಸಿನಲ್ಲಿ ಅಮ್ಮನ* ಗ್ರಾಮದಲ್ಲಿ ಉಂಟಾದ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ಹತ್ತಿರದ ಮನೆಯೊಂದಕ್ಕೆ ಅಮ್ಮ ಹೋದಾಗ ಕಂಡ ದೃಶ್ಯವಿದು. ತಂದೆತಾಯಿಯ ಮಡಿಲಲ್ಲಿ ಅವರ ಹನ್ನೊಂದು ಮಕ್ಕಳು ದಣಿದು ಮಲಗಿದ್ದಾರೆ. ’ನೆನ್ನೆ ಅಡುಗೆಯೇನು ಮಾಡಿಲ್ಲ ಹಾಗಾಗಿ ಮರಗೆಣಿಸಿನ ಸಿಪ್ಪೆಯಿಲ್ಲ ಮಗಳೆ’ ಎಂದು ನನಗೆ ಹೇಳಿದರು**. ಆಗ ನಾನು ಕೇಳಿದೆ ಯಾರಬಳಿಯಾದರು ಸಾಲಮಾಡಿ ಮಕ್ಕಳಿಗೆ ಅಡುಗೆ ಮಾಡಿ ಊಟ ಹಾಕಬಾರದಾಗಿತ್ತೆ ಎಂದು. ಅವರು ಹೇಳಿದರು, ’ತಂದೆ ಕೆಲಸಕ್ಕೆ ಹೋಗಿ ಏನೂ ಸಿಗದೆ ಹಿಂತಿರುಗಿ ಬಂದರು. ನಂತರ ಹತ್ತು ಕಿಲೋಮೀಟರು ದೂರದಲ್ಲಿರುವ ಬಂಧು ಒಬ್ಬರ ಮನೆಗೆ ಹಣವನ್ನು ಸಾಲಕ್ಕಾಗಿ ಪಡೆಯಲು ನಡೆದೇ ಹೋದರು ಆದರೆ ಹಣ ಸಿಗಲಿಲ್ಲ. ಹಿಂತಿರುಗಿ ಬರುವಾಗ ರಾತ್ರಿಯಾಗಿತ್ತು. ಆದರೆ ಬೆಳದಿಂಗಳ ರಾತ್ರಿಯಾದ ಕಾರಣ ಕಡಲ ತೀರದ ಮಾರ್ಗವಾಗಿ ಬರುವಾಗ ಆಮೆಯೊಂದು ಕಡಲದಂಡೆಯೇರಿ ಮೊಟ್ಟೆಯಿಡುತ್ತಿರುವುದನ್ನು ಕಂಡ. ಆಮೆ ಮೊಟ್ಟೆಯಿಟ್ಟು ಮರಳಿಹೋದ ಬಳಿಕ ಅದರಿಂದ ಕೆಲವು ಮೊಟ್ಟೆಗಳನ್ನು ತೆಗೆದುಕೊಂಡು ಬಂದು ಮಕ್ಕಳಿಗೆ ಎರಡು ಮೂರು ಮೊಟ್ಟೆ ಬೇಯಿಸಿ ಕೊಟ್ಟರು’ ಎಂದು ಹೇಳಿದಳು. ಆಗ ಮಗನೊಬ್ಬನು ಎದ್ದು ಕೇಳಿದನು. ’ಅಪ್ಪಾ ಎಲ್ಲ ಮೊಟ್ಟೆಗಳನ್ನು ಏಕೆ ತೆಗೆದುಕೊಂಡುಬರಲಿಲ್ಲ? ಆಗ ಇನ್ನಷ್ಟು ತಿನ್ನಬಹುದಾಗಿತ್ತಲ್ಲಾ.’ಎಂದು. ಆಗ ಆ ತಂದೆ ತನ್ನ ಮಗನಿಗೆ ಹೇಳಿದ, ’ಮಗನೇ! ನೀವೆಲ್ಲರೂ ಮರಣಹೊಂದಿದರೆ ನಾನು ಎಷ್ಟು ದುಃಖಕ್ಕೀಡಾಗಬಹುದೋ ಅಂತೆಯೇ ಎಲ್ಲಾ ಮೊಟ್ಟೆಗಳನ್ನು ತೆಗೆದುಕೊಂಡಲ್ಲಿ ಆ ಆಮೆಯೂ ದುಃಖಕ್ಕೀಡಾಗಬಹುದು. ಅದು ಮಾತ್ರವಲ್ಲ ಅದರ ಪರಂಪರೆ ನೆಲೆನಿಂತರಲ್ಲವೇ ಊಟಕ್ಕಿಲ್ಲದಾಗುವ ಸರಿಸ್ಥಿತಿಯಲ್ಲಿ ಹಸಿವನ್ನು ಹಿಂಗಿಸಿಕೊಳ್ಳಲು ಈರೀತಿಯಂತೆ ಸ್ವಲ್ಪವಾದರೂ ಸಿಕ್ಕಬಹುದು.

ಹಾಗಾದಲ್ಲಿ ನೋಡಿ ಇಲ್ಲಿ ತಾನು ಹಸಿವಿನಿಂದ್ದಿದ್ದರೂ ಬೇರೆಯವರ ವೇದನೆ ಸ್ಮರಿಸಿಕೊಳ್ಳುತ್ತಿದ್ದಾನೆ. ತನ್ನ ದುಃಖದಲ್ಲಿಯೂ ಇನ್ನೊಬ್ಬರ ಪ್ರತಿ ಕಾರುಣ್ಯವನ್ನು ತೋರುತ್ತಿದ್ದಾನೆ. ಆ ಒಂದು ಮನೋಭಾವವಾಗಿತ್ತು ನಮ್ಮ ಪೂರ್ವಜರಿಗೆ ಇದ್ದದ್ದು. ಆದರೆ ಇಂದು ಆಮೆಯನ್ನೂ ಹಾಗು ಎಲ್ಲವನ್ನೂ ಹಣಕ್ಕಾಗಿ ರಫ್ತುಮಾಡುತ್ತಾರೆ. ಒಂದೊಂದು ವೃಕ್ಷವನ್ನು ಕತ್ತರಿಸುವಾಗಲೂ ಅದು ನಮಗೆ ಶವಪೆಟಿಗೆಯನ್ನು ನಿರ್ಮಾಣ ಮಾಡುವ ಸಲುವಾಗಿ ವೃಕ್ಷಗಳನ್ನು ಕತ್ತರಿಸುತ್ತಿರುವಂತೆ ಆಗಿಹೋಗುತ್ತಿದೆ. ಬಹಳಷ್ಟು ವೃಕ್ಷಗಳನ್ನು ಕತ್ತರಿಸಿಯಾಗಿದೆ. ಆಗ ಒಂದು ವೃಕ್ಷವನ್ನು ಕತ್ತರಿಸಿದರೆ ಒಂದು ವೃಕ್ಷವನ್ನು ನೆಟ್ಟರೆ ಸಾಲದು, ಕನಿಷ್ಠ ಸುಮಾರು ನಲವತ್ತು ಐವತ್ತು ವೃಕ್ಷಗಳನ್ನಾದರೂ ಈ ಅವಸ್ಥೆಯಲ್ಲಿ ನೆಡಬೇಕು.

ಈಗ ಸುಮಾರು ಐದು ಲಕ್ಷ ಜನರಿಗೆ ಪರಿಸರ ಮಾಲಿನ್ಯದಿಂದಾಗಿ ಕ್ಯಾನ್ಸರ್ ತಗುಲಿದೆ. ಹಿಂದೆ ನಮಗೆ ಗಾಯವಾದಲ್ಲಿ ಶೆಗಣಿಯನ್ನು ಗಾಯಕ್ಕೆ ಹಚ್ಚಿ ಗುಣಪಡಿಸುತ್ತಿದ್ದರು. ಗಾಯ ಕೊಳೆತುಹೋಗದಿರಲು ಶೆಗಣಿಯನ್ನು ಹಚ್ಚಲಾಗುತ್ತಿತ್ತು. ಆದರೆ ಈಗ ಗಾಯಕ್ಕೆ ಶೆಗಣಿ ತಾಕಿದರೆ ಗಾಯ ಕೊಳೆತುಹೋಗುತ್ತದೆ. ಅಂದು ಔಷಧವಾಗಿದ್ದದ್ದು ಇಂದು ವಿಷವಾಗಿದೆ.

ಪ್ರಪಂಚದಲ್ಲಿ ಯಾವುದೂ ನಿಕೃಷ್ಟವಲ್ಲ. ಒಂದು ವಿಮಾನದ ಎಂಜಿನ್ ಕೆಟ್ಟುಹೋದಲ್ಲಿ ಹಾರಲು ಸಾಧ್ಯವಿಲ್ಲ, ಒಂದು ಸ್ಕ್ರೂ ಇಲ್ಲದ್ದಿದ್ದರೂ ಹಾರಲು ಸಾಧ್ಯವಿಲ್ಲ. ಎಲ್ಲಕ್ಕೂ ಅದರದ್ದೇ ಆದ ಸ್ಥಾನವಿದೆ. ಜೇನುನೊಣ ಪುಷ್ಪಪರಾಗ ಉದುರಿಸಿ ಗರ್ಭೋತ್ಪತ್ತಿ (ಪಾಲಿನೇಶನ್) ಮಾಡುವುದರಿಂದಾಗಿಯೇ ನಮಗೆ ಫಲಗಳು, ತರಕಾರಿಗಳು ದೊರಕ್ಕುತ್ತಿರುವುದು. ಆ ಜೇನುನೊಣವು ಮೂರು ಕಿಲೋಮೀಟರ್ ದೂರದವರೆಗೆ ಹಾರಾಡುತ್ತಿತ್ತು. ಹೂಗಳಿಗೆ ಹೆಚ್ಚು ಹೆಚ್ಚು ಕ್ರಿಮಿನಾಶಕ ಔಷಧಗಳನ್ನು ಸಿಂಪಡಿಸುವ ಕಾರಣ ಇಂದು ಆ ಜೇನುನೊಣಗಳಿಗೆ ನೆನಪಿನ ಶಕ್ತಿ ಹೊರಟುಹೋಗಿದೆ. ಹಾಗಾಗಿ ಹೂಗಳಿರುವ ಗಿಡಗಳು, ಜೇನುಗೂಡುಗಳು ಎಥೇಚ್ಚವಾಗಿ ಬೇಕಾಗಿದೆ. ನಮ್ಮ ಲಕ್ಷಾಂತರ ಭಕ್ತರುಗಳು ಇದನ್ನು ಮಾಡುತ್ತಿದ್ದಾರೆ ಆದರೂ ಇನ್ನೂ ಹೆಚ್ಚು ಭಕ್ತರು ಜಾಗರೂಕತೆಯಿಂದ ಜೇನುಗೂಡುಗಳನ್ನು ನಿರ್ಮಿಸಬೇಕು ಹಾಗು ಹೆಚ್ಚು ಹೆಚ್ಚು ಹೂಗಳನ್ನು ಬಿಡುವ ಗಿಡಗಳನ್ನು ನೆಡಬೇಕು.

ನಮ್ಮನ್ನು ಹೆಡೆದ ತಾಯಿ ಐದು ವಯಸ್ಸಿನವರೆಗೆ ನಮ್ಮನ್ನು ತನ್ನ ಮಡಿಲಲ್ಲಿ ಇರಿಸಿಕೊಳ್ಳಬಹುದು. ಭೂಮಿತಾಯಿ ಹಾಗಲ್ಲ! ನಮ್ಮ ಜೀವಿತಕಾಲ ಪೂರ್ತ ನಮ್ಮಯ ತುಳಿತವನ್ನು, ಅವಳ ಮೇಲೆ ಉಗುಳುವುದನ್ನು, ಅವಳನ್ನು ಬಗೆಯುವುದನ್ನು ಅನುಮತಿಸುವ ತಾಯಿಯವಳು. ಜೀವಿತಕಾಲ ಪೂರ್ತ ನಮ್ಮನ್ನು ಸಲಹಿ ಬೆಳೆಸುವ ಅಮ್ಮ ಅವಳು. ಎಲ್ಲದರ ಪೂಷಕ ಶಕ್ತಿಯಾಗಿರುವ ಅಮ್ಮ ಅವಳು. ಆ ತಾಯಿಯ ಪ್ರತಿ ನಮಗಿರುವ ಕರ್ತವ್ಯವನ್ನು ಮರೆಯಬಾರದು.

ಒಂದು ಕಟ್ಟಡದ ಮೊದಲನೇಯ ಮಹಡಿಯಲ್ಲಿ ಬೆಂಕಿಹೊತ್ತಿಕೊಂಡಾಗ ’ಅಯ್ಯೋ! ಓಡಿ ಬನ್ನಿ! ರಕ್ಷಿಸಿರಿ!’ ಎಂಬುದಾಗಿ ಕೇಳಿಬಂದ ಆರ್ಥಕೂಗಿಗೆ ಹತ್ತನೇ ಮಹಡಿಯಲ್ಲಿರುವ ಒಬ್ಬಾತ ’ಅದು ಅವನ ಸಮಸ್ಯೆ! ನನ್ನ ಸಮಸ್ಯೆಯಲ್ಲ’ ಎಂದು ಚಿಂತಿಸಿದರೆ ಕಡೆಗೆ ಅದು ನಮ್ಮದೇ ಸಮಸ್ಯೆಯಾಗಿ ಬರುತ್ತದೆ. ಇದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಅವನ ಸಮಸ್ಯೆ ನಮ್ಮಯ ಸಮಸ್ಯೆಯೆಂದು ಎಣಿಸಿ ನಾವು ಬದಲಾಗಲೇಬೇಕು.

ಪ್ರಪಂಚಕ್ಕೆ ಒಂದು ತಾಳಲಯವಿದೆ. ಈ ವಿಶ್ವಕ್ಕೂ ಅದರೊಳಗಿರುವ ಜೀವಜಾಲಗಳಿಗೂ ಮಧ್ಯೆ ಅಭೇದ್ಯವಾದ ಬಾಂಧವ್ಯವುಂಟು. ಪರಸ್ಪರ ಬಂಧಿತವಾಗಿರುವ ನೆಟ್ವರ್ಕ್ನಂತೆ (ಅಂರ್ತಜಾಲದಂತೆ) ಈ ಪ್ರಪಂಚ. ನಾಲ್ಕುಜನ ಸೇರಿ ಒಂದು ಬಲೆಯನ್ನು ಹಿಡಿದಿರುವಾಗ ಎಲ್ಲಿಯೇ ಒಂದು ಸಣ್ಣ ಚಲನೆಯುಂಟಾದರೂ ಅದು ಉಳಿದ ಎಲ್ಲ ಕಡೆಯೂ ಪ್ರತಿಫಲಿಸುತ್ತದೆ. ಆದ್ದರಿಂದ ನಾವು ಅರಿತೋ ಅರಿಯೆದೆಯೋ ಒಂಟಿಯಾಗಿಯೋ ಅಥವಾ ಗುಂಪಾಗಿಯೋ ಮಾಡುವ ಎಲ್ಲಾ ಕರ್ಮಗಳು ಪ್ರಪಂಚವೆಂಬ ಬಲೆಯ ಮೂಲೆಯೊಂದರಲ್ಲಿ ಪ್ರತಿಫಲಿಸುತ್ತದೆ. ಅವರು ಬದಲಾದ ಮೇಲೆ ನಾವು ಬದಲಾಗುತ್ತೇವೆ ಎಂದು ಯೋಚಿಸಿದರೆ ಅದು ಸಾಧ್ಯವಿಲ್ಲ. ಅವರು ಬದಲಾಗದ್ದಿದ್ದರೂ ನಾವು ಬದಲಾದಲ್ಲಿ, ಪರಿವರ್ತನೆಯನ್ನು ತರಬಹುದು. ನಮಗೆ ಏನು ಮಾಡಲು ಸಾಧ್ಯವೆಂದು ನಾವು ನೋಡಬೇಕು.

ಮದರ್ಸ್ ಡೇ ಫಾದರ್ಸ್ ಡೇ ಯನ್ನು ಅದ್ದೂರಿಯಾಗಿ ಆಚರಿಸುವಂತೆ ನಾವೆಲ್ಲರೂ ಪ್ರಕೃತಿಯನ್ನು ಗೌರವಿಸುವ ಆರಾಧಿಸುವ ಒಂದು ದಿನ ಉಂಟಾಗಬೇಕು. ಅಂದು ಲೋಕದ ಎಲ್ಲ ಜನರು ಕಡ್ಡಾಯವಾಗಿ ಸಸಿಗಳನ್ನು ನೆಡಬೇಕು.

ಇದಕ್ಕೂ ಹಿಂದೆ ಮೂರುಸಾವಿರ ಚದುರ ಅಡಿ ಮನೆಯನ್ನು ನಿರ್ಮಿಸಿದವರು ಹಾಗು ಇನ್ನು ಮುಂದೆ ಮನೆಯನ್ನು ನಿರ್ಮಿಸಲು ಇಚ್ಚಿಸುವವರು ಸಾವಿರದ ಐನೂರು ಚದುರ ಅಡಿ ಮನೆಯನ್ನು ನಿರ್ಮಿಸಿ. ಎರಡು ಸಾವಿರ ಚದುರ ಅಡಿ ನಿರ್ಮಾಣದ ಉದ್ದೇಶವಿರುವವರು ಒಂದು ಸಾವಿರ ಚದುರ ಅಡಿ ಕಮ್ಮಿಮಾಡಿಕೊಳ್ಳಿ. ಒಂದು ಸಾವಿರ ಚದುರ ಅಡಿ ಕಟ್ಟಲು ಉದ್ದೇಶಿಸಿರುವವರು ಐನೂರು ಚದುರ ಅಡಿ ಕಮ್ಮಿಮಾಡಿಕೊಳ್ಳಿ. ಆಗ ಅಷ್ಟು ವೃಕ್ಷಗಳು ಸಮಾಜದಲ್ಲಿ ಕತ್ತರಿಸಲ್ಪಡುವುದು ಕಮ್ಮಿಯಾಗುವುದು. ವಿದ್ಯುಚ್ಛಕ್ತಿಯ ಬಳಕೆಯೂ ಕೂಡ ಕಮ್ಮಿಯಾಗುವುದು. ಅಷ್ಟೋಂದು ವೃಕ್ಷಗಳನ್ನು ನಾವು ನಾಶಮಾಡುವ ಅಗತ್ಯವಿಲ್ಲ. ಕಾರ್ ಪೂಲಿಂಗ್ ಮೂಲಕ ಇಂಧನದ ಉಳಿತಾಯವನ್ನು ಮಾಡಬಹುದು. ಈರೀತಿಯಲ್ಲಿ ಕ್ರಮ ಕ್ರಮವಾಗಿ ಬದಲಾವಣೆಯುಂಟಾದಲ್ಲಿ ಪ್ರಕೃತಿಯಲ್ಲಿ ಸ್ವಲ್ಪ ವ್ಯತ್ಯಾಸವನ್ನುಂಟುಮಾಡುವಲ್ಲಿ ಸಾಧ್ಯವಾಗುತ್ತದೆ. ಸಾವಿರ ಡಾಲರುಗಳ ಪೆನ್ ಖರೀದಿಸಿ ಬರೆಯಬಹುದು ಹಾಗೆಯೇ ನೂರು ಡಾಲರುಗಳ ಪೆನ್ ಖರೀದಿಸಿಯೂ ಬರೆಯಬಹುದು. ಅಕ್ಷರಗಳು ಮೂಡುತ್ತವೆ. ಆಡಂಬರವನ್ನು ತ್ಯಜಿಸಿದರೆ ತನಗೆ ಅಗತ್ಯವಿರುವುದನ್ನು ತೆಗೆದುಕೊಂಡು ಉಳಿದುದರಲ್ಲಿ ಇತರರಿಗೆ ಸಹಾಯವನ್ನು ನೀಡಬಹುದು.

ಒಂದು ದೊಡ್ಡ ಸರೋವರ ಮಲಿನವಾಗಿದೆಯೆಂದು ಭಾವಿಸಿ. ಹೇಗೆ ಅದನ್ನು ನಾವೊಬ್ಬರೇ ಒಂಟಿಯಾಗಿ ಸ್ವಚ್ಛವಾಗಿಸಲು ಸಾಧ್ಯವೆಂದು ಯೋಚಿಸಿ ಹತಾಶಗೊಂಡು ಹಿಂತಿರುಗಿ ಹೋಗುವುದಲ್ಲ ನಾವು ಮಾಡಬೇಕಿರುವುದು. ನಮಗೆ ಸಾಧ್ಯವಾಗುವಷ್ಟು ಸ್ವಚ್ಛವಾಗಿಸುವ. ಅದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಸ್ವಚ್ಛವಾಗಿಸುತ್ತಾನೆ. ಅದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಬರುತ್ತಾನೆ. ಹಾಗೆ ಸ್ವಚ್ಛವಾಗಿಸುತ್ತಾ, ಸ್ವಚ್ಛವಾಗಿಸುತ್ತಾ ಇಡೀ ಸರೋವರವೇ ಸ್ವಚ್ಛವಾಗುತ್ತದೆ. ಆದ್ದರಿಂದಾಗಿ ಹಿಂದೆಸರಿಯುವುದಲ್ಲ ಮಾಡಬೇಕಾಗಿರುವುದು ಬದಲಿಗೆ ಶ್ರಮಿಸಬೇಕು.

ಕಾರ್ ಪೂಲಿಂಗ್ ಮಾಡುವುದನ್ನು, ಜೇನುನೊಣಗಳನ್ನು ಪಾಲಿಸುವುದನ್ನು, ಸಸಿಗಳನ್ನು ನೆಡುವುದನ್ನು, ಅಂತರೀಕ್ಷವನ್ನು ಶುದ್ಧೀಕರಿಸುವುದನ್ನು, ಪ್ರಕೃತಿಯನ್ನು ಮಾಲಿನ್ಯ ಮುಕ್ತವಾಗಿಸುವುದನ್ನು, ತರಕಾರಿಗಳನ್ನು ಬೆಳೆಯುವುದನ್ನು ಎಷ್ಟೋ ವರ್ಷಗಳ ಹಿಂದೆಯೇ ಅಮ್ಮ ಹೇಳುತ್ತಿದ್ದೂ, ಅಮ್ಮನ ಮಕ್ಕಳು ಅವನ್ನು ಕಾರ್ಯಗತ ಗೊಳಿಸುತ್ತಿದ್ದಾರೆಯೂ ಕೂಡ. ಮತ್ತೊಮ್ಮೆ ಜಾಗೃತರಾಗಿ ಎಲ್ಲರೂ ಒಗ್ಗೂಡಿದರೆ ಈ ಭೂಮಿಯನ್ನು ನಮಗೆ ಸ್ವರ್ಗವಾಗಿಸಲು ಸಾಧ್ಯವಿದೆ. ಇದಾಗಲು ಕೃಪೆಯು ಎಲ್ಲರನ್ನು ಅನುಗ್ರಹಿಸಲೀ ಎಂದು ಪರಮಾತ್ಮನಲ್ಲಿಯೇ ಪ್ರಾರ್ಥಿಸುತ್ತೇನೆ.”

******
ಪ್ಯಾರೀಸ್ ನಲ್ಲಿ ನಡೆದ “ಕ್ಲೈಮ್ಯಾಕ್ಟಿಕ್ ಕಾನ್ ಶನ್ಸ್” ಶೃಂಗ ಸಭೆಗೆ ಅಮ್ಮನನ್ನು ಫ್ರೆಂಚ್ ರಾಷ್ಟ್ರಪತಿಗಳಾದ ಫ್ರಾನಕೊಯಿಸ್ ಹೊಲ್ಲಾಂಡೆ ಅವರ ವಿಶೇಷ ರಾಜಪ್ರತಿನಿಧಿಯ ಮೂಲಕ ಆಹ್ವಾನಿಸಲ್ಪಟ್ಟಿದ್ದರೂ ತಮ್ಮ ಏಳುವಾರಗಳ ಅಮೆರಿಕೆಯ ಸಂದರ್ಶನಾಯಾತ್ರೆಯ ಕಾರಣದಿಂದಾಗಿ ಅಮ್ಮನಿಗೆ ಪ್ರಾಕೃತಿಕವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಮ್ಮನ ಪ್ರತಿನಿಧಿಯಾಗಿ ಮಾತಾ ಅಮೃತಾನಂದಮಯಿ ಮಠದ ಉಪಾಧ್ಯಕ್ಷರಾದ ಸ್ವಾಮಿ ಅಮೃತಸ್ವರೂಪಾನಂದ ಪುರಿಗಳು ಅಮ್ಮನ ಸಂದೇಶವನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು.

ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ “ಸುಸ್ಥಿರ ಅಭಿವೃದ್ಧಿ” ಕುರಿತ ಶೃಂಗ ಸಭೆಯಾದ “ಕಾಪ್ ೨೧” ಗೆ ಶಕ್ತಿಶಾಲಿಯೂ ಫಲಪ್ರದವೂ ಆದ ನೀತಿಗಳನ್ನು ರೂಪಿಸಬೇಕೆಂಬ ಅವಶ್ಯಕತೆಯನ್ನು ಸಾರ್ವತ್ರಿಕವಾಗಿ ವಿಶ್ವದ ಪ್ರಮುಖ ಆಧ್ಯಾತ್ಮಿಕ, ಧಾರ್ಮಿಕ, ಮಾನವೀಯ ಸಂಸ್ಥೆಗಳ ನಾಯಕರುಗಳು ಭಾಗವಹಿಸಿದ ಶೃಂಗ ಸಭೆಯು ಸೂಚಿಸಿತು. ಕಾನ್ಸ್ಟಾಂಟಿನೋಪಲ್ ಆರ್ಚ್ಬಿಷಪ್ ಬಾರ್ಥಲೋಮಿಯೋ ೧, ಸಂಯುಕ್ತ ರಾಷ್ಟ್ರಗಳ ಭೂತಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಎಮ್.ಕೋಫಿ ಹನ್, ನೋಬೆಲ್ ಪೀಸ್ ಪ್ರಶಸ್ತಿವಿಜೇತ ಡಾ| ಮೊಹಮದ್ ಯೂನಸ್, ನಟ ಮತ್ತು ಸಮಾಜ ಸೇವಕನೂ ಆದ ಆರ್ನಾಲ್ಡ್ ಶ್ವಾಜ಼್ನೇಗರ್, ಮುಂತಾದ ವಿಶ್ವದ ಅನೇಕ ರಾಷ್ಟ್ರಗಳ ಧಾರ್ಮಿಕ ಮುಖಂಡರುಗಳು, ಆಡಳಿತ ನಾಯಕರುಗಳು, ರಾಜಕೀಯ ಧುರೀಣರು, ಸಂಯುಕ್ತ ರಾಷ್ಟ್ರಗಳ ವಿವಿಧ ಸಂಸ್ಥೆಗಳ ನಾಯಕರುಗಳು ಮೊದಲಾದವರು ಪ್ಯಾರಿಸ್ ಶೃಂಗ ಸಭೆಯಲ್ಲಿ ಭಾಗವಹಿಸಿದರು.

*****

foot note:
* ಅಮ್ಮ ಕೆಲವೊಮ್ಮೆ ತಮ್ಮನ್ನು ಮೂರನೇಯ ವ್ಯಕ್ತಿಯನ್ನು ಸಂಬೋಧಿಸುವಂತೆ ಸಂಬೋಧಿಸಿಕೊಳ್ಳುತ್ತಾರೆ.
** ಹಿಂದೆ ಅಮ್ಮನ ಬಾಲ್ಯಕಾಲದಲ್ಲಿ ತಮ್ಮ ಮನೆಯಲ್ಲಿದ್ದ ಹಸುಗಳಿಗೆ ಮೇವನ್ನು ಹಾಕುವಸಲುವಾಗಿ ಅಕ್ಕ ಪಕ್ಕದ ಮನೆಗಳಿಲ್ಲಿ ತರಕಾರಿಯ ಸಿಪ್ಪೆಗಳನ್ನು, ಗೆಡ್ಡೆ ಗೆಣಸಿನ ಸಿಪ್ಪೆಗಳನ್ನು, ಅಕ್ಕಿಯನ್ನು ತೊಳೆದ ನೀರನ್ನು ತರಲು ಪುಟ್ಟ ಸುಧಾಮಣಿಯನ್ನು (ಅಮ್ಮನನ್ನು) ಕಳುಹಿಸಲಾಗುತ್ತಿದ್ದ ಸಂದರ್ಭವದು.