ಮಕ್ಕಳ ಚಿತ್ತವೃತ್ತಿಗಳು, ಕನಸುಗಳು ಎಲ್ಲವೂ ಅಮ್ಮನನ್ನು ಹಾದು ಹೋಗುವುದು. ಹಾಗಾಗಿ ಮಕ್ಕಳಿಗೆ ಅಮ್ಮನಿಂದ ಏನನ್ನೂ ಬಚ್ಚಿಡಲಾಗದು.
___
ಭಗವಾನ್ ಶ್ರೀ ಕೃಷ್ಣನು ಶುದ್ಧ ಬೋಧನು. ನೀವು ಬಯಕೆಗಳನ್ನು ಪೂರ್ಣವಾಗಿ ತ್ಯಜಿಸಿದಲ್ಲಿ ನಿಮ್ಮ ಮನದಲ್ಲಿ ಕೃಷ್ಣನ ನಿಜ ರೂಪ ಸ್ಪಷ್ಟವಾಗುವುದು.
___
ಮರಗಳು, ಬಳ್ಳಿಗಳು, ವಾತಾವರಣವೆಲ್ಲವೂ ರಾತ್ರಿ ನಿಶ್ಚಲವಾಗುತ್ತದೆ. ಪ್ರಾಣಿಗಳಲ್ಲದೆ, ಲೌಕಿಕರಾಗಿ ಜೀವಿಸುವವರವರನ್ನೂ, ನಿದ್ದೆ ಜಯಿಸುತ್ತದೆ. ಈ ಕಾರಣದಿಂದ, ವಾತಾವರಣದಲ್ಲಿ ಲೌಕಿಕ ವಿಚಾರಗಳ ತರಂಗಗಳು ಕಮ್ಮಿಯಾಗುತ್ತದೆ. ರಾತ್ರಿಯ ಅಂತಿಮ ಜಾವದಲ್ಲಿ ಹೂವುಗಳು ಅರಳುವುದು. ವಾತಾವರಣದಲ್ಲಿ ಆಗ ಒಂದು ವಿಶೇಷ ಜಾಗೃತಿ ಇರುತ್ತದೆ. ಈ ಸಮಯದಲ್ಲಿ ಧ್ಯಾನ ಮಾಡಿದರೆ ಕೂಡಲೆ ಮನಸ್ಸು ಏಕಾಗ್ರವಾಗುವುದು. ಬೇಕಷ್ಟು ಸಮಯ ತಪಸ್ಸಿನಲ್ಲಿ ಕೂತಿರಲೂ ಸಾಧ್ಯವಾಗುತ್ತದೆ. ಆದಕಾರಣ ತಪಸ್ವಿಗಳು ರಾತ್ರಿಗಾಗಿ ಕಾದಿರುತ್ತಾರೆ.
___
ಅಮ್ಮ ಸ್ವಾಭಾವಿಕವಾಗಿಯೆ ನಿರ್ಮಲೆ. ಮಕ್ಕಳ ವಿಚಾರಗಳಿಗೆ, ಕೃತಿಗಳಿಗೆ ಅನುಗುಣವಾಗಿ ಅಮ್ಮನ ಸ್ವಭಾವ ಬದಲಾಗುತ್ತದೆ. ಘರ್ಜಿಸಿ ಹಿರಣ್ಯಕಶಿಪುವಿನ ಎದುರಿಗೆ ಜಿಗಿದ ಘೋರನರಸಿಂಹನು, ಪ್ರಹ್ಲಾದನ ಬಳಿ ಸಾರಿದಾಗ ಶಾಂತನಾದ. ಹಿರಣ್ಯಕಶಿಪುವಿನ ಹಾಗೂ ಪ್ರಹ್ಲಾದನ ಪ್ರವೃತ್ತಿಗಳಿಗನುಗುಣವಾಗಿ ಗುಣಾತೀತನೂ, ನಿರ್ಮಲನೂ ಆದ ಭಗವಂತನು ಎರಡು ವಿರುದ್ಧ ಭಾವಗಳನ್ನು ತಾಳಿದನು. ಹಾಗೆಯೇ, ಮಕ್ಕಳ ಭಾವಗಳಿಗನುಗುಣವಾಗಿ ಅಮ್ಮನ ಭಾವವು ಬದಲಾಗುತ್ತದೆ. ’ಸ್ನೇಹಮಯಿ’ ಎಂದು ಹೊಗಳಲ್ಪಟ್ಟ ಅಮ್ಮ ಕೆಲವೊಮ್ಮೆ ತಟ್ಟನೆ ’ಕ್ರೂರಿ’ಯಾಗಿ ಬಿಡುತ್ತಾಳೆ. ಅದು ಮಕ್ಕಳ ವರ್ತನೆಯಲ್ಲಿರುವ ತಪ್ಪುಗಳನ್ನು ಸರಿಪಡಿಸಲೆಂದು ಮಾತ್ರ. ಮಕ್ಕಳು ಸರಿಯಾಗಿ ಅನುಷ್ಠಾನ ನಡೆಸದಿದ್ದಾಗ, ಶಿಸ್ತು ಸರಿಯಾಗಿ ಪಾಲಿಸದಿದ್ದಾಗ, ವಿನಯ ಭಾವ ಬಿಟ್ಟು ವರ್ತಿಸುವಾಗ, ಸಮಯ ಸುಮ್ಮನೆ ಪೋಲು ಮಾಡುತ್ತಿರುವಾಗ ಸ್ನೇಹಮಯಿಯಾದ ಅಮ್ಮ ಥಟ್ಟನೆ ಕ್ರೂರಿಯಾಗಿ ಬಿಡುತ್ತಾಳೆ. ಅಮ್ಮನ ಎಲ್ಲ ನಡತೆಯೂ ಮಕ್ಕಳ ಏಳಿಗೆಗಾಗಿಯೇ ಇರುತ್ತದೆ.
___
ದೇವರು ಸರ್ವವ್ಯಾಪಿಯಾಗಿದ್ದರೂ, ಸಾಧನೆಯಿಂದ ಮಾತ್ರವೇ ದೇವರನ್ನು ಅರಿಯಲೂ, ಆನಂದಿಸಲೂ ಸಾಧ್ಯವಾಗುತ್ತದೆ.
___
ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು.
___
ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ.
___