ಅಮ್ಮ – ಜಗದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ – ಈ ಭುವಿಯಲ್ಲಿ ಅವತರಿಸಿದ ಪವಿತ್ರ ನೆಲ ಇಂದು “ಅಮೃತಪುರಿ”ಯಾಗಿದೆ. ಇದೇ ಮಾತಾ ಅಮೃತಾನಂದಮಯಿ ಮಠದ ಮುಖ್ಯ ಕೇಂದ್ರ; ಕೊಲ್ಲಂ ಜಿಲ್ಲೆಯ ಆಲಪ್ಪಾಡು ಪಂಚಾಯತ್‌ನ, ಅರಬ್ಬಿ ಸಮುದ್ರ ಹಾಗೂ ಕಾಯಂಕುಳಂ ಹಿನ್ನೀರಿನ ನಡುವಿನ, ಪ್ರಕೃತಿಯ ಸುಂದರ ರಮಣೀಯ ದ್ವೀಪವಿದು. ಅಮ್ಮನ ಬಾಲ್ಯದ ಕೋಮಲ ಪಾದಗಳ ಗುರುತಿನಿಂದ ಪಾವನವಾದ ಇಲ್ಲಿಯ ಮಣ್ಣಿಗೆ ಅನೇಕ ಅಮೃತಕಥೆಗಳನ್ನು ಹೇಳುವುದಿದೆ. ಜನ್ಮಸ್ಥಾನವನ್ನೇ ಆಶ್ರಮವಾಗಿ ಮಾರ್ಪಡಿಸಿದ, ಚರಿತ್ರೆಯಲ್ಲಿ ಅನುಪಮ ಉದಾಹರಣೆಯಾದ ಮಹಾಗುರುವಿನ ಲೋಕೋತ್ತರ ಆಧ್ಯಾತ್ಮಿಕ ಮಹಾನ್ ಗಾತೆಯ ಕೇಂದ್ರಬಿಂದು ಅಮೃತಪುರಿ.
1978ರಿಂದ ಅಮ್ಮನ ಶಿಷ್ಯರು ಇಲ್ಲಿ ವಾಸ ಮಾಡಲಾರಂಭಿಸಿದರು. ಭಕ್ತಜನರಿಗೆ ಅಮ್ಮ ದರ್ಶನ ನೀಡುತ್ತಿದ್ದುದು ತಾನು ಹುಟ್ಟಿದ ಮನೆಯ ದನದ ಕೊಟ್ಟಿಗೆಯಲ್ಲಾಗಿತ್ತು. ಅದೇ ಮೊಟ್ಟ ಮೊದಲಿನ ಆಶ್ರಮ ಕಟ್ಟಡ. 1981ರಲ್ಲಿ ಆಶ್ರಮ ಅಧಿಕೃತವಾಗಿ ರಿಜಿಸ್ಟರ್ ಆಯಿತು. ಆಧ್ಯಾತ್ಮಿಕ ಅನ್ವೇಷಣೆಗೂ ಲೋಕಸೇವೆಗೂ ಕಟಿಬದ್ಧರಾದ, 3,000ಕ್ಕಿಂತಲೂ ಹೆಚ್ಚು ಆಶ್ರಮವಾಸಿಗಳಿರುವ, ಬೃಹತ್ಸಮುದಾಯವೇ ಈಗ ಇಲ್ಲಿರುವುದು. ಇವರಲ್ಲಿ ಸಂನ್ಯಾಸಿಗಳೂ, ವಾನಪ್ರಸ್ಥರೂ, ಗೃಹಸ್ಥರೂ, ಬ್ರಹ್ಮಚಾರಿಗಳೂ ಸೇರಿದ್ದಾರೆ. ಈ ಸಮುದಾಯದಲ್ಲಿ ನಾನಾ ಧರ್ಮದವರೂ, ವಿಭಿನ್ನ ದೇಶಗಳ ವಿದೇಶಿಯರೂ ಇದ್ದಾರೆ. ವೇದಶಾಸ್ತ್ರ ಪಠಣ, ಶಾಸ್ತ್ರ ಶ್ರವಣ, ಚರ್ಚೆಗಳು, ಸಂಸ್ಕೃತಾಭ್ಯಾಸ, ಧ್ಯಾನ, ಜಪ, ಅರ್ಚನೆ, ಭಜನೆ, ಯೋಗ – ಹೀಗೆ ವಿವಿಧ ಸಾಧನೆಗಳು ಅಮೃತಪುರಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಜೀವನದ ಎಲ್ಲ ರಂಗಗಳ ಸೇವಾಯೋಜನೆಗಳ ಆರಂಭ ಸದಾ ಇಲ್ಲಿಂದ ಆಗುತ್ತಿರುತ್ತದೆ. ಜಗತ್ತಿನಾದ್ಯಂತ ನಡೆಸಿಕೊಂಡು ಬರುತ್ತಿರುವ ಅಮ್ಮನ ಬೃಹದ್ಯೋಜನೆಗಳು ರೂಪ ಪಡೆಯುವುದು ಇಲ್ಲಿ – ಎಲ್ಲವೂ ಅಮ್ಮನ ದಿವ್ಯ ಮಾರ್ಗದರ್ಶನದಲ್ಲಿ. ಜ್ಞಾನ-ಭಕ್ತಿ-ಕರ್ಮಯೋಗಗಳ ಸಮನ್ವಯವೇ ಆದ ಅಮ್ಮ, ಅದ್ವೈತ ದರ್ಶನದ ಮೂರ್ತಿವೆತ್ತ ಪಾವನ ರೂಪ.
ಅಮ್ಮನ ಸಾನ್ನಿಧ್ಯವೇ ಅಮೃತಪುರಿಯ ವಿಶಿಷ್ಟತೆ. ಪರ್ಯಟನೆಯ ವೇಳೆಯನ್ನೊಂದು ಬಿಟ್ಟರೆ, ಅಮ್ಮನ ಸಾನ್ನಿಧ್ಯ ಸದಾ ಇಲ್ಲಿ ಲಭ್ಯ. ದರ್ಶನ ನೀಡಿ ಎಲ್ಲರನ್ನೂ ಧನ್ಯರನ್ನಾಗಿಸುತ್ತಾರೆ. ಅಮ್ಮ ನಡೆಸುವ ಧ್ಯಾನ, ಭಜನೆ, ಶಿಷ್ಯಂದಿರಿಂದ ಕೇಳಲ್ಪಟ್ಟ ಸಂಶಯಗಳಿಗೆ ಉತ್ತರ ನೀಡುವ ಸಂಧರ್ಭ, ಇವೆಲ್ಲಾ ಅಮೃತಪುರಿ ಮಠದ ದಿನಚರಿಯ ಭಾಗ. ಉಪದೇಶಿಸುವುದು ಅದ್ವೈತ ದರ್ಶನವಾದರೂ, ಎಲ್ಲಾ ಮತದವರನ್ನೂ ಒಂದೇ ರೀತಿಯಾಗಿ ಸ್ವೀಕರಿಸುವುದು ಅಮ್ಮನ ವಿಶೇಷಗುಣ. ಅವರವರ ಮತವನ್ನು ಅನುಸರಿಸುವುದನ್ನು ಪ್ರೋತ್ಸಾಹಿಸುವ ಅಮ್ಮ, ಅವರ ಆಚಾರ, ವಿಚಾರ, ಅನುಷ್ಠಾನಗಳಿಗನುಸರವಾಗುವ ರೀತಿಯಲ್ಲಿ ಮಂತ್ರದೀಕ್ಷೆ ಕೊಡುತ್ತಾರೆ.
ನಮ್ಮ ದೇಶದ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ವಿಶೇಷ ದಿನಗಳನ್ನು, ಹಬ್ಬಗಳನ್ನು ಅಮ್ಮನ ದಿವ್ಯ ಸಾನ್ನಿಧ್ಯದಲ್ಲಿ, ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.