ಮೇರೆ ಇಲ್ಲದ, ಭೇದವಿಲ್ಲದ ಅಖಂಡವಾದ ಏಕತ್ವವೇ ಭಗವಂತ. ಆ ಭಗವತ್ದಶಕ್ತಿಯು ಪ್ರಕೃತಿಯಲ್ಲಿ, ಪರಿಸರದಲ್ಲಿ, ಮೃಗಗಳಲ್ಲಿ, ಮನುಷ್ಯರಲ್ಲಿ, ಗಿಡಗಳಲ್ಲಿ, ಮರಗಳಲ್ಲಿ, ಪಕ್ಷಿಗಳಲ್ಲಿ ಪ್ರತಿಯೊಂದು ಕಣಕಣದಲ್ಲಿಯೂ ತುಂಬಿತುಳುಕುತ್ತಿದೆ. ಜಡ ಚೈತನ್ಯಗಳೆಲ್ಲವೂ ಭಗವತ್ದಮಯವಾಗಿದೆ. ಈ ಸತ್ಯವನ್ನು ಅರಿತರೆ ನಮಗೆ ನಮ್ಮನ್ನು, ಇತರರನ್ನು, ಈ ಲೋಕವನ್ನು ಪ್ರೇಮಿಸಲು ಮಾತ್ರವೇ ಸಾಧ್ಯ.
ಪ್ರೇಮದ ಮೊದಲ ತರಂಗವು ನಮ್ಮಿಂದಲೇ ಪ್ರಾರಂಭವಾಗಬೇಕು. ನಿಶ್ಚಲವಾಗಿರುವ ಸರೋವರದಲ್ಲಿ ಕಲ್ಲೊಂದನ್ನು ಎಸೆದರೆ, ಮೊದಲ ಪುಟ್ಟ ತರಂಗವು ಆ ಕಲ್ಲಿನ ಸುತ್ತಲು ಪ್ರಕಟವಾಗುತ್ತದೆ. ಕ್ರಮೇಣ ಆ ತರಂಗದ ವೃತ್ತವು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ಅದು ಹಾಗೇ ತೀರವನ್ನು ಮುಟ್ಟುತ್ತದೆ. ಇದರಂತೆಯೇ, ಪ್ರೇಮವು ನಮ್ಮೊಳಗಿನಿಂದ ಪ್ರಾರಂಭವಾಗಬೇಕು. ಅವನವನ ಒಳಗೆ ಸುಪ್ತವಾಗಿರುವ ಪ್ರೇಮವನ್ನು ಪರಿಶುದ್ಧವಾಗಿಸಲು ಸಾಧ್ಯವಾದರೆ, ಕ್ರಮೇಣ ಆ ಪ್ರೇಮ ಬೆಳದು ದೊಡ್ಡದಾಗಿ ಇಡೀ ಲೋಕವನ್ನೇ ಬಳಸುತ್ತದೆ.
ಒಂದು ಪಾರಿವಾಳದ ಕೊರಳಿಗೆ ಭಾರವಿರುವ ಒಂದು ಕಲ್ಲನ್ನು ಕಟ್ಟಿಬಿಟ್ಟರೆ, ಅದಕ್ಕೆ ಹಾರಲು ಸಾಧ್ಯವಾಗುವುದಿಲ್ಲ. ಅದರಂತೆಯೇ, ಪ್ರೇಮವೆಂಬ ಪಾರಿವಾಳದ ಕೊರಳಿಗೆ ನಾವು ಬಂಧನಗಳ ಹಾಗು ನಿಯಮಗಳ ಕಲ್ಲುಗಳನ್ನು ಕಟ್ಟಿದ್ದೇವೆ. ಅದಕ್ಕೆ ಸ್ವಾತಂತ್ರ್ಯದ ವಿಶಾಲವಾದ ಆಕಾಶದಲ್ಲಿ ಹಾರಾಡಲು ಸಾಧ್ಯವಿಲ್ಲ. ಅಂಧವಾದ ಮಮತೆಯ ಸರಪಳಿಯಿಂದಾಗಿ ಒಳಗಿರುವ ಪ್ರೇಮವನ್ನು ಅಲ್ಲಿಯೇ ಬಂಧಿಸಿಟ್ಟಿದ್ದೇವೆ. ಪ್ರೇಮವಿಲ್ಲದಿದ್ದರೆ ಜೀವನವಿಲ್ಲ. ಯಾವುದೇ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಸಾಧ್ಯವಿಲ್ಲ.
ಎರಡು ವ್ಯಕ್ತಿಗಳು ಒಟ್ಟಿಗೆ ಬಾಳಲು ಪ್ರಾರಂಭಿಸುವಾಗ, ಘರ್ಷಣೆಯುಂಟಾಗುವುದು ಸ್ವಾಭಾವಿಕ. ಪರಸ್ಪರ ಬಿಟ್ಟುಕೊಡುವುದಿಲ್ಲದೇ ಹೋದರೆ, ಸ್ವಲ್ಪವಾದರೂ ಹೊಂದಾಣಿಕೆಯಿಲ್ಲದೇ ಹೋದರೆ, ನಮ್ಮಯ ಕೌಟುಂಬಿಕ ಬಂಧಗಳು ಮುರಿದು ಬೀಳುತ್ತದೆ. ಕ್ಷಮೆ ಮತ್ತು ತಾಳ್ಮೆ ಜೀವನದ ವಸಂತ ಋತುಗಳಂತೆ. ಈ ಗುಣಗಳಿಲ್ಲದ್ದಿದ್ದಲ್ಲಿ, ಜೀವನ ಬೇಸಿಗೆಯ ಬೇಗೆಯಲ್ಲಿ ಸುಟ್ಟು ಬರಡಾದ ಬಂಜರ ಭೂಮಿಯಂತಾಗುತ್ತದೆ. ಅಲ್ಲಿ ಹೂಗಳು, ಮರಗಳು, ನದಿಗಳ ಕಳರವಗಳು, ಪಕ್ಷಿಗಳ ಚಿಲಿಪಿಲಿನಾದಗಳಾವುವೂ ಇರುವುದಿಲ್ಲ. ಪ್ರೇಮವೇ – ಕೋಡುವವನಿಗೆ ತೆಗೆದುಕೊಳ್ಳುವವನಿಗಿಂತಲೂ ಅಧಿಕ ಸಂತೋಷವನ್ನು ನೀಡುವ ಧನ. ಕೈಯಲ್ಲಿದ್ದೂ ಕಾಣದ ಧನವದು. ಪ್ರೇಮದ ಹೆಜ್ಜೆಗುರುತುಗಳು ಮಾತ್ರವೇ ಕಾಲದ ಪಥದಲ್ಲಿ ಎಂದಿಗೂ ಅಳಿಯದೇ ಉಳಿಯುವುದು. ತನಗಿಂತಲೂ ಶಕ್ತಿಶಾಲಿಯಾದ ಶತ್ರುವನ್ನೂ ನಾಶಮಾಡುವ ಆಯುಧ ಪ್ರೇಮವೇ. ನಿತ್ಯಮುಕ್ತನಾದ ಭಗವಂತನನ್ನೂ ಹಿಡಿದು ಕಟ್ಟುವುದೂ – ಪ್ರೇಮವೇ. ಮಾಯೆಯ ಹಿಡಿತದಿಂದ ಪಾರಾಗುವ ಮಂತ್ರವೂ ಪ್ರೇಮವೇ ಆಗಿದೆ. ಎಲ್ಲಾ ದೇಶಗಳಲ್ಲಿ, ಎಲ್ಲಾ ಕಾಲಗಳಲ್ಲಿ ಬೆಲೆಬಾಳುವ ನಾಣ್ಯವುವೊಂದೆ – ಪ್ರೇಮ.
ಪ್ರೇಮ ಜೇಬಿನಲ್ಲಿ ಬಚ್ಚಿಟ್ಟುಕೊಳ್ಳುವಂಥದ್ದಲ್ಲ, ಕರ್ಮದೊಂದಿಗೆ ಪ್ರಕಾಶಮಾನವಾಗಿಸುವಂಥದ್ದು. ನಾವು ಪ್ರೇಮವೇ ಆಗಿಹೋಗುವಾಗ ಪಂಚೇಂದ್ರಿಯಗಳೂ ಪ್ರೇಮದ ಸೇತುವೆಗಳಾಗಿ ಮಾರ್ಪಡುತ್ತದೆ. ಯಾರ ಅಹಂಕಾರಕ್ಕೂ ಎದುರಿಸಿ ಸೋಲಿಸಲು ಸಾಧ್ಯವಾಗದ ಒಂದೇ ಒಂದೆಂದರೆ ಪ್ರೇಮ. ದುಃಖಗಳಿಗೆ ಏಕೈಕ ವಿಕಿರಮ ಪ್ರಮಾಣದ ಔಷಧವೂ ಏಕಾಂಗೀತನದ ಊರುಗೋಲು – ಪ್ರೇಮವೇ. ನಮ್ಮ ಜೀವನದ ಸಫಲತೆಯ ಸರಿಯಾದ ಅಳತೆಗೋಲೆಂಬುದು ಒಂದೇ – ಅದು ಪ್ರೇಮ ಮಾತ್ರ!
– ಅಮ್ಮನ ೬೩ನೇ ಜನ್ಮದಿನದ ಸಂದೇಶದಿಂದ ಆಯ್ದಭಾಗಗಳು