ಪ್ರಶ್ನೆ: ಸಂಪತ್ತು ಗಳಿಸುವುದು ಆಧ್ಯಾತ್ಮಿಕತೆಗೆ ವಿರೋಧವೇ ?
“ಮಕ್ಕಳೇ, ಎಷ್ಟು ಸ್ವತ್ತಿದ್ದರೂ, ಅದರ ಸ್ಥಾನವನ್ನೂ ಪ್ರಯೋಜನವನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳದಿರುವ ತನಕ ದುಃಖ ಮಾತ್ರವೇ ನಮ್ಮ ಪಾಲಿಗೆ ಇರುವುದು. ಅಗಣಿತ ಸಂಪತ್ತಿದ್ದರೂ ಅದರಿಂದ ಸಿಗುವ ಆನಂದ ತಾತ್ಕಾಲಿಕ ಮಕ್ಕಳೇ. ಶಾಶ್ವತವಾದ ಆನಂದ ಕೊಡಲು ಅದಕ್ಕೆ ಸಾಧ್ಯವಿಲ್ಲ. ಕಂಸನೂ ಹಿರಣ್ಯಕಶಿಪುವೂ ಎಲ್ಲಾ ಸಂಪತ್ತಿನ ಅಧಿಪತಿಗಳಾಗಿರಲಿಲ್ಲವೇ ? ಅವರಿಗೆ ಮನಸ್ಸಮಾಧಾನ ಇತ್ತೇ ? ಎಲ್ಲಾ ಇದ್ದ ರಾವಣನಿಗೆ ಏನು ಶಾಂತಿಯಿತ್ತು ? ಅವರೆಲ್ಲ ಸತ್ಯದ ದಾರಿ ತೊರೆದು, ಅಹಂಕಾರಿಗಳಾಗಿ ಬಾಳಿದರು. ಮಾಡಬಾರದ್ದನ್ನು ಬಹಳ ಮಾಡಿದರು. ಫಲವೋ ? ಶಾಂತಿ ಸಮಾಧಾನಗಳನ್ನು ಕಳೆದುಕೊಂಡರು. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮಕ್ಕಳೇ, ಶಾಶ್ವತವಾದ ಆನಂದ ಕೊಡುವುದು ಸಂಪತ್ತಲ್ಲ.
ಲೌಕಿಕ ಜೀವನದಲ್ಲಿ ಅಶಾಶ್ವತ ಆನಂದ ಮಾತ್ರವೇ ಸಂಪತ್ತಿನಿಂದ ಲಭ್ಯ. ಹಾಗಾದರೆ ಸಂಪತ್ತಿಲ್ಲದೆ ಹೇಗೆ ಜೀವಿಸೋಣ ? ಇರುವ ಸಂಪತ್ತನ್ನು ಬಿಟ್ಟುಬಿಡಬೇಕೆ ? ಎಂದೆಲ್ಲ ಮಕ್ಕಳು ಕೇಳಬಹುದು. ಎಲ್ಲವೂ ಭಗವಂತನ ಇಚ್ಛೆ, ಮಕ್ಕಳೇ. ಯಾವುದನ್ನೂ ನಿರಾಕರಿಸಲು ಅಮ್ಮ ಹೇಳುವುದಿಲ್ಲ. ಇರುವುದರ ಸ್ಥಾನವನ್ನೂ ಪ್ರಯೋಗವನ್ನೂ ಕಂಡು ಕೊಂಡು ವರ್ತಿಸಿದರೆ ಆನಂದವೂ ಶಾಂತಿಯೂ ಸಂಪತ್ತಾಗಿ ಬದಲಾಗುತ್ತದೆ. ಭಗವಂತನಿಗಭಿಮುಖವಾದವರಿಗೆ ’ಮರಳು ಬಿದ್ದ ಅನ್ನದ’ ಹಾಗೆ ಮಕ್ಕಳೇ, ಸಂಪತ್ತು”.