ಪ್ರಶ್ನೆ: ದೇವರ ಕೃಪೆಗೂ, ಮಹಾತ್ಮರ ಕೃಪೆಗೂ ಏನು ವ್ಯತ್ಯಾಸ ?
“ಆತ್ಮಕ್ಕೆ ಭೇದವಿಲ್ಲ. ಅದು ಎಲ್ಲರಲ್ಲೂ ಒಂದೇ. ಮಹಾತ್ಮರು ಆತ್ಮದ ಸ್ವರೂಪವನ್ನು ತಮ್ಮ ಅರಿವಿನ ಸ್ತರಕ್ಕೆ ತರುತ್ತಾರೆ, ಅಷ್ಟೆ. ನಾವೆಲ್ಲರೂ ಕನ್ನಡಿಗಳು. ಆದರೆ ನಮ್ಮಲ್ಲ್ಲಿ ಪಾದರಸವಿಲ್ಲ. ಮಹಾತ್ಮರ ತಪಸ್ಸಿನಿಂದ ಪಾದರಸ ಉದ್ಭವವಾಗುತ್ತದೆ. ಪಾದರಸವಿರುವ ಕನ್ನಡಿಯಲ್ಲಿ ತಾನೇ ಸ್ಪಷ್ಟವಾದ ಪ್ರತಿಬಿಂಬ ಕಾಣಿಸುವುದು ? ಒಬ್ಬ ಮಹಾತ್ಮನೆದುರಿಗೆ ಹೋದಾಗ ನಮ್ಮ ನಿಜವಾದ ಸ್ವರೂಪ ಅವರಲ್ಲಿ ಪ್ರತಿಫಲಿಸಿ ಕಾಣಲು ಸಾಧ್ಯವಾಗುತ್ತದೆ. ಅದನ್ನು ನೋಡಿ ನಮ್ಮ ಕುರೂಪವನ್ನೂ ಮಲಿನತೆಗಳನ್ನೂ ತೊರೆಯಲು ಸಾಧ್ಯವಾಗುತ್ತದೆ.
ಕರೆಂಟು ಬಲ್ಬಿನಲ್ಲಿ ಪ್ರಕಾಶಿಸುವ ಹಾಗೆ, ದೇವರು ಮಹಾತ್ಮರಲ್ಲಿ ಪ್ರತಿಫಲಿಸುತ್ತಾನೆ. ಅವನೆಂದಿಗೂ ತನ್ನಲ್ಲೇ ನೆಲೆ ನಿಂತಿರುತ್ತಾನೆ. ಮಹಾತ್ಮರು ತಮ್ಮಲ್ಲಿ ಶಕ್ತಿಯನ್ನು ಜಾಗೃತಗೊಳಿಸಿ, ಜೀವದುಂಬಿಸುತ್ತಾರೆ. ಭಗವದ್ಕೃಪೆ ಜಗತ್ತಿಗೆ ತಲಪುವುದು – ಜನಗಳಿಗೆ ಪ್ರಯೋಜನಕಾರಿಯಾಗುವುದು – ಮಹಾತ್ಮರಿಂದಾಗಿ. ಅದು ಮಹಾತ್ಮರಿಂದಲ್ಲದೆ ನಿಮಗೆ ನೇರವಾಗಿ ದೊರಕಬೇಕಾದರೆ, ಮೊದಲೇ, ನೀವು ಅದಕ್ಕೆ ಅನುಗುಣವಾಗಿ ಜೀವಿಸಿರಬೇಕು.”
ಪ್ರಶ್ನೆ: ಮಹಾತ್ಮರ ಹತ್ತಿರ ಹೋದರೆ ನಮಗೆ ಯಾವ ತರದ ಅನುಭವವಾಗುತ್ತದೆ? ಅದರಿಂದ ಏನು ಪ್ರಯೋಜನ?
“ಸಮುದ್ರ ತೀರದಲ್ಲಿ ಬಹಳ ಹೊತ್ತು ಕೂತಿದ್ದಮೇಲೆ ದೇಹವನ್ನು ನೆಕ್ಕಿ ನೋಡಿದರೆ ಉಪ್ಪೆನಿಸುವುದಿಲ್ಲವೇ ? ಊದುಬತ್ತಿ ಮಾಡುವ ಕಂಪೆನಿಗೆ ಹೋಗಿ ಹಿಂತಿರುಗಿ ಬಂದಾಗ ನಿಮ್ಮ ದೇಹವನ್ನು ಮೂಸಿ ನೋಡಿದರೆ ಆ ಪರಿಮಳ ನಿಮ್ಮಲ್ಲೂ ಇರುವುದು ಕಂಡು ಬರುತ್ತದೆ. ಆದರೆ ಅದು ನಿಮಗೆ ಯಾರೂ ಕೊಟ್ಟು ಸಿಕ್ಕಿದ್ದಲ್ಲ; ಅಲ್ಲಿ ಹೋದುದರಿಂದಾಗಿ ಸಿಕ್ಕಿದ್ದು. ಇದೇ ತರವಾಗಿರುತ್ತದೆ ಮಹಾತ್ಮರ ಬಳಿ ತಲಪಿದರೆ ಸಿಗುವ ಫಲ.
ನಮಗೆ ತಿಳಿಯದೆಯೇ, ನಮ್ಮೊಳಗೆ ಒಳ್ಳೆಯ ಸಂಸ್ಕಾರಗಳು ಹುಟ್ಟಿಕೊಳ್ಳುತ್ತವೆ. ಅವರ ಸಾಮೀಪ್ಯದಿಂದಾಗಿ ನಮ್ಮ ಕೆಟ್ಟ ಸ್ವಭಾವ ಬಿಟ್ಟು ಹೋಗುವುದು. ಉಪ್ಪುನೀರು ನದಿ ಸೇರಿ, ಶುದ್ಧ ಜಲವಾಗುವುದಿಲ್ಲವೇ. ಆ ಸಾಮೀಪ್ಯದಿಂದಲೇ ಉಪ್ಪುನೀರಿನಲ್ಲಿ ಬದಲಾವಣೆ ಆಯಿತು. ಇದೇ ರೀತಿ ಮಹಾತ್ಮರ ಸಾಮೀಪ್ಯವೇ ನಮ್ಮನ್ನು ಒಳ್ಳೆಯವರನ್ನಾಗಿ ಮಾಡುತ್ತದೆ.”
ಪ್ರಶ್ನೆ: ಅಧ್ಯಾತ್ಮ ಒಂದು ತರದ ಸ್ವಾರ್ಥವಲ್ಲವೇ ?
“ಅದು ಹಾಗಲ್ಲ ಮಕ್ಕಳೇ, ಒಂದುಕಡೆ ಇಬ್ಬರು, ಕತ್ತಿ ಮಾರುವ ಅಂಗಡಿಗೆ ಹೋಗುತ್ತಾರೆ. ಇಬ್ಬರೂ ಒಂದೊಂದು ಕತ್ತಿ ಕೊಂಡುಕೊಳ್ಳುತ್ತಾರೆ. ಒಬ್ಬನು ಆ ಕತ್ತಿಯಿಂದ ಸಿಕ್ಕ ಸಿಕ್ಕವರನ್ನೆಲ್ಲಾ ಇರಿದು ಕೊಲ್ಲಲು ತೊಡಗುತ್ತಾನೆ. ಇನ್ನೊಬ್ಬ ಡಾಕ್ಟರನಾಗಿದ್ದ. ತನ್ನ ಕತ್ತಿಯಿಂದ ರೋಗಿಗಳ ಶಸ್ತ್ರಕ್ರಿಯೆ ನಡೆಸಿ, ರೋಗ ಮುಕ್ತರನ್ನಾಗಿ ಮಾಡುತ್ತಾನೆ. ಇಬ್ಬರೂ ಕತ್ತಿ ಕೊಂಡು ಕೊಂಡದ್ದು ಸ್ವಾರ್ಥಕ್ಕಾಗಿ. ಕೊಲೆಗಾರನ ಸ್ವಾರ್ಥ ಸಮಾಜಕ್ಕೆ ಕುತ್ತಾಯಿತು. ಡಾಕ್ಟರನ ಸ್ವಾರ್ಥ ಸಮಾಜಕ್ಕೊಂದು ವರವಾಯಿತು. ಆಧ್ಯಾತ್ಮಿಕ ಜೀವಿಗಳ ಸ್ವಾರ್ಥ ಲೋಕೋಪಕಾರಕ್ಕಾಗಿರುತ್ತದೆ. ಮಕ್ಕಳು ಕೇಳಬಹುದು, ಆಧ್ಯಾತ್ಮಿಕ ಜೀವಿಗಳು ಯಾರೂ ಸುಖಿಗಳಲ್ಲವೇ ಎಂದು. ಅವರು ಯಾರಿಗೂ ತೊಂದರೆ ಬಗೆಯುವುದಿಲ್ಲ. ಎಲ್ಲರನ್ನೂ ಪ್ರೀತಿಸುತ್ತಾರೆ; ಎಲ್ಲರಿಗೂ ಸಹಾಯ ಮಾಡುತ್ತಾರೆ.