ಅಮ್ಮನ ಕರುಣೆಗೂ, ಪ್ರೇಮಕ್ಕೂ ಜಾತಿ ಮತಗಳ ನಿಬಂಧನೆಗಳಿಲ್ಲ. ಸಣ್ಣವರು ದೊಡ್ಡವರು ಎಂದಿಲ್ಲ. ರಾಜ್ಯಗಳನ್ನೂ, ಭಾಷೆಯನ್ನೂ, ಸಂಸ್ಕಾರವನ್ನೂ ಮೀರಿ ಅದು ಹರಿಯುತ್ತದೆ. ತನ್ನನ್ನು ಆಶ್ರಯಿಸುವ ಎಲ್ಲರಿಗೂ ಅಮ್ಮ ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ಅನುಗ್ರಹವನ್ನು ಉದಾರವಾಗಿ ವರ್ಷಿಸುತ್ತಾರೆ. ಸಕಲ ಜೀವರಾಶಿಗಳಿಗೂ ಸಮಾನವಾಗಿ ಹರಿಯುವ ಪ್ರೇಮಗಂಗೆ ಅಮ್ಮ. ತ್ಯಾಗ ಅಮ್ಮನ ಮಂತ್ರ. ಪ್ರೇಮ ಅಮ್ಮನ ಶಕ್ತಿ. ಕರುಣೆಯೇ ಅಮ್ಮನ ಜೀವಾಳ.

Being one with the other

ಅಮ್ಮನ ಬಯಕೆ:
“ಲೋಕದಲ್ಲಿ ಎಲ್ಲರಿಗೂ ಒಂದು ದಿನವಾದರೂ ಭಯವಿಲ್ಲದೆ ಮಲಗುವಂತಾಗಬೇಕು. ಎಲ್ಲರಿಗೂ ಒಂದು ದಿವಸವಾದರೂ ತುಂಬುಹೊಟ್ಟೆ ಊಟ ಸಿಗಬೇಕು. ಯಾರೂಕೂಡ ಆಕ್ರಮಣಕ್ಕೋ, ಹಿಂಸೆಗೋ ಒಳಗಾಗದೆ ಯಾವುದೇ ಆಸ್ಪತ್ರೆಯಲ್ಲೂ ಸೇರದಂಥ ಒಂದು ದಿನವಾದರೂ ಇರಬೇಕು. ಕಿರಿಯರಿಂದ ಹಿಡಿದು ಹಿರಿಯರವರೆಗೆ, ಮನೆಯಲ್ಲೇ ಒಂದು ದಿನವಾದರೂ ಸರಿ, ನಿಃಸ್ವಾರ್ಥ ಸೇವೆಯಿಂದ ಗೊಂಬೆಗಳನ್ನು ತಯಾರು ಮಾಡಿ, ಅದರ ಮಾರಾಟ ಮಾಡಿ, ಬಂದ ಹಣದಿಂದ ಬಡವರಿಗೆ, ಜಗತ್ತಿನಲ್ಲಿರುವ ಅಭಯಾರ್ಥಿಗಳಿಗೆ ಸಹಾಯ ಮಾಡಬೇಕು. ಇದು ಅಮ್ಮನ ಪ್ರಾರ್ಥನೆ.”

every action is worship

ತ್ಯಾಗೋಜ್ವಲವಾದ ಕರ್ಮಪಥದಲ್ಲಿ ಅಮ್ಮ ಪಯಣವನ್ನಾರಂಭಿಸಿ ನಲ್ವತ್ತು ವರ್ಷಗಳೇ ಸಂದಿವೆ.
ಸ್ವಯಂ ತಮ್ಮ ಜೀವನವನ್ನು ಸಮಸ್ತ ವಿಶ್ವದ ಒಳಿತಿಗೆ ಸಮರ್ಪಣೆ ಮಾಡಿದ್ದಾರೆ ಅಮ್ಮ. ಕೊನೆಯ ಉಸಿರಿನವರೆಗೂ, ತನ್ನ ಕೈಗಳಿಂದ ದುಃಖಿತರ ಕಣ್ಣೀರೊರೆಸಲು, ಅವರನ್ನು ಅಪ್ಪಿ ಸಾಂತ್ವನಗೊಳಿಸಲು ಸಾಧ್ಯವಾಗಬೇಕೆಂದೇ ಅಮ್ಮ ಬಯಸುವುದು. ಅಮ್ಮನ ಕರುಣೆಯಂತೆಯೇ, ಅಮ್ಮನ ಕಾರ್ಯ ವೈಶಾಲ್ಯವೂ ಸೀಮಾರಹಿತ. ಈ ವಿಶ್ವದಷ್ಟು ವಿಶಾಲ. ಇಂದು ಮಾತಾ ಅಮೃತಾನಂದಮಯಿ ಮಠವು, ಅಮ್ಮನ ಭಕ್ತರಿಂದ, ಸಾವಿರಗಟ್ಟಲೆಯಲ್ಲಿ, ಶಾಖೋಪಶಾಖೆಗಳಾಗಿ ಜಗತ್ತಿನಲ್ಲೆಲ್ಲಾ ವ್ಯಾಪಿಸಿದೆ. ಆಶ್ರಮದ ಮಾನವ ಸೇವಾ ಚಟುವಟಿಕೆಗಳು ಹರಡದ ಕ್ಷೇತ್ರಗಳೇ ಇಲ್ಲ.

ಆಸ್ಪತ್ರೆಗಳು, ಅನಾಥಾಲಯಗಳು, ಆಶ್ರಯಹೀನರಿಗೂ ,ನಿರಾಲಂಬರಿಗೂ ನೆಲೆಸಲು ಮನೆ, ಅವರಿಗೆ ಉಚಿತ ಮಾಸ ಪಿಂಚಣಿ ಹಾಗೂ ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಗಳು, ವೈಜ್ಞಾನಿಕ ಸಂಶೋಧನಾ ಪ್ರಾಜೆಕ್ಟುಗಳು, ಪ್ರಜ್ಞಾ ಜಾಗೃತಿ ಯೋಜನೆಗಳು, ಪರಿಸರ ಸಂರಕ್ಷಣಾ ವಿಧಾನಗಳು, ಆದಿವಾಸಿ ಕ್ಷೇಮಾಭಿವೃದ್ಧಿ ಸಂಸ್ಥೆಗಳು, ವೃದ್ಧಾಶ್ರಮಗಳು, ದುರಂತ ಪರಿಹಾರ ಕಾರ್ಯಗಳು, ಹೀಗೆ ಮುಗಿಯದ ಸುಧೀರ್ಘವಾದ ಸೇವಾ ಪಟ್ಟಿಯನ್ನು ಆಶ್ರಮವು ಹೊಂದಿದೆ.

“ಏನ್ನನೂ ಬೇಡಿ ಪಡೆಯದಿರಿ. ಭಗವಂತನಲ್ಲಿ ನಿಮಗೆ ಪ್ರಾಮಾಣಿಕ ಸಮರ್ಪಣೆ ಇದ್ದರೆ ಎಲ್ಲವೂ ತನ್ನಷ್ಟಕ್ಕೆ ನಿಮ್ಮಬಳಿ ಬಂದು ಸೇರುತ್ತದೆ” ಹೀಗೆ ನುಡಿಯುವ ಅಮ್ಮನ ಮಾತುಗಳಿಗೆ ಪ್ರತ್ಯಕ್ಷ ಉದಾಹರಣೆಯೇ ಅಮ್ಮನ ಜೀವನವೂ, ಸೇವಾಚಟುವಟಿಕೆಗಳೂ.