2004ರ ಸುನಾಮಿಯ ಪ್ರಕೋಪಕ್ಕೆ ಪ್ರತಿಕ್ರಿಯೆಯಾಗಿ ಮೈತಾಳಿದ ಅಮ್ಮನ ಪ್ರೇಮ, ಕರುಣೆಯ ಸಾಕಾರ ರೂಪವೆ ಅಮೃತ ಶ್ರೀ. (Amrita Self-Reliance, Education & Employment – Amrita SREE) ಸುನಾಮಿ ಸಾವಿರಾರು ಬದುಕು, ಮನೆಗಳನ್ನು ಬಲಿ ತೆಗೆದು ಕೊಂಡದ್ದು ಮಾತ್ರವಲ್ಲದೆ, ಬದುಕಿ ಉಳಿದವರ ಭವಿಷ್ಯಕ್ಕೆ ಬೃಹತ್ತರ ಸವಾಲಾಯಿತು. ಮನೆ ಮಠ, ದೋಣಿ ಬಲೆಗಳಾದಿಯಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು, ಮುಂದಿನ ಜೀವನೋಪಾಯದ ದಾರಿ ತೋಚದೆ ಕೈಚೆಲ್ಲಿ, ನಿರ್ವೀರ್ಯರಾಗಿ, ನಿರ್ಗತಿಕರಾಗಿಹೋದ ಮೀನುಗಾರರ ಕುಟುಂಬಗಳು ಅಮ್ಮನಿಗೆ ತಮ್ಮ ಸಂಕಷ್ಟವನ್ನು ನಿವೇದಿಸಿಕೊಂಡಾಗ, ಅಮ್ಮ ಸ್ಪಂದಿಸಿ ರೂಪಿಸಿದ ಯೋಜನೆಯಿದು. ಬರೇ ಮೀನುಗಾರಿಕೆಯ ಅನಿಶ್ಚಿತ ಗಳಿಕೆಯನ್ನು ಇನ್ನು ಮುಂದೆ ಅವರು ಅವಲಂಬಿಸಬೇಕಾಗಿಲ್ಲ. ಮೀನುಗಾರಿಕೆಯಲ್ಲದೆ, ಕುಟುಂಬದ ಇನ್ನೊಬ್ಬ ಸದಸ್ಯರೂ ಇನ್ನೊಂದು ಪ್ರತ್ಯೇಕ ಆದಾಯ ಗಳಿಸಲು ಅವರಿಗೊಂದು ಪರ್ಯಾಯ ಜೀವನೋಪಾಯ ಕಲ್ಪಿಸುತ್ತದೆ ಅಮೃತ ಶ್ರೀ.

ಇಂದು ಅಮೃತ ಶ್ರೀ ಕೇರಳ, ತಮಿಳು ನಾಡುಗಳಿಂದ ಆಂಧ್ರ, ಕರ್ಣಾಟಕ, ಮಹಾರಾಷ್ಟ್ರಗಳಲ್ಲೂ ಸುಮಾರು 6000 (2010ರಲ್ಲಿ) ಸ್ವಸಹಾಯ ಸಂಸ್ಥೆಗಳಾಗಿ (ಯೂನಿಟ್ಟುಗಳಾಗಿ) ಪಸರಿಸಿ, ಒಟ್ಟು 1,00,000 ಕುಟುಂಬಗಳಿಗೆ ಹೆಚ್ಚಿನ ಆದಾಯ ಒದಗಿಸುವ ಕಲ್ಪವೃಕ್ಷವಾಗಿ ಪರಿಣಮಿಸಿದೆ. ಆದಷ್ಟೂ ಬೇಗನೆ 30,000 ಯೂನಿಟ್ಟುಗಳಿಗೆ ಹೆಚ್ಚಿಸಬೇಕೆಂಬುದು ಅಶ್ರಮದ ಆಶಯ.

ಅಂದು ಬರೇ ಮೀನುಗಾರರಿಗೆಂದು ಶುರುವಾದ ಈ ಸಂಚಲನೆ ಇಂದು ಸಮಾಜದ ಇತರ ರಂಗಗಳಿಗೂ ವ್ಯಾಪಿಸಿದೆ – ರೈತರನ್ನೂ ಒಳಗೊಂಡಿದೆ. 1998ರಿಂದ 2008ರ ಅವಧಿಯಲ್ಲಿ (ಬೆಳೆ ನಷ್ಟದ ಕಾರಣ) ಬೇರೆ ದಾರಿ ಕಾಣದೆ 1,00,000 ರೈತರು ಆತ್ಮಹತ್ಯೆಗೈದ ದಾರುಣ ವರದಿಯಿದೆ. ಇಂತಹ ಸಂಸಾರಗಳಿಗೆ ಅಮೃತ ಶ್ರೀಯು – ಆತ್ಮಹತ್ಯೆಯನ್ನು ತಡೆಗಟ್ಟುವ ಹಾಗೂ ಹೆಚ್ಚಿನ ಆದಾಯದ – ಒಂದು ಹೊಸ ಆಯಾಮವನ್ನು ತೆರೆದಿದೆ.

ಮೂಲಭೂತವಾಗಿ ಅಮೃತ ಶ್ರೀ ಸ್ತ್ರೀಯರಿಗೆ ಟ್ರೈನಿಂಗ್ ಒದಗಿಸುತ್ತದೆ. ತಮ್ಮ ಸ್ವಂತ ಕಾಲ ಮೇಲೆ ನಿಲ್ಲಲು ತಮ್ಮದೆ ಸ್ವಂತ ಉದ್ಯೋಗ ಅಥವ ಸಂಪಾದನೆ ಆರಂಭಿಸಲು ಸಾಧ್ಯವಾಗುವ ಹಾಗೆ ಅವರಿಗೆ ಬೇಕಾದ ತಾಂತ್ರಿಕ ಅಥವ ಕಸಬಿಗೆ ಬೇಕಾದ ತರಬೇತಿ ಒದಗಿಸುತ್ತದೆ.
ಒಬ್ಬರೆ ಅಥವ ಅಮೃತ ಶ್ರೀಯ ಬೇರೆ ಹತ್ತಿಪ್ಪತ್ತು ಸದಸ್ಯರೊಂದಿಗೆ ಸೇರಿ ಉದ್ಯೋಗ/ವ್ಯಾಪಾರ ಆರಂಭಿಸಬಹುದು. ಬ್ಯಾಂಕು ಖಾತೆ ತೆರೆಯುವುದಕ್ಕೂ, ಸಾಲಕ್ಕೂ ಅಮೃತ ಶ್ರೀ ಸಹಾಯ ಮಾಡುವುದು. ಪೂರ್ಣ ಸ್ವಾವಲಂಬಿಯಾಗುವವರೆಗೆ ಆಶ್ರಮದ ಸಹಕಾರ, ಸಹಾಯ ಮುಂದುವರೆಯುವುದು.

ಪ್ರಸ್ತುತ ಅಮೃತ ಶ್ರೀ ಸಹಾಯ ನೀಡುತ್ತಲಿರುವ ಕೆಲವು ಕ್ಷೇತ್ರಗಳು:
ಹೊಲಿಗೆ, ಕರಕುಶಲ ಕೈಗಾರಿಕೆ, ಎಲೆಕ್ಟ್ರಾನಿಕ್ ರಿಪೇರಿ, ಅಕೌಂಟ್ ಸಿಸ್ಟಮ್‌ಗಳು, ಬ್ಯೂಟಿ ಪಾರ್ಲರ್ ನಡೆಸುವುದು, ಸ್ತ್ರೀಯರ ಹೈಜೀನ್‌ಗೆ ಸಂಬಂಧಿಸಿದ ವಸ್ತುಗಳ ತಯಾರಿಕೆ, ಕಾಗದದ ಉತ್ಪನ್ನಗಳು, ಸಿದ್ಧ ಉಡುಪುಗಳು, ಚರ್ಮದ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೈಮಗ್ಗದ ವಸ್ತುಗಳು, ಹಗ್ಗದ ತಯಾರಿ, ಸಾಮೂಹಿಕ ಕೃಷಿ, ಆಹಾರೋತ್ಪನ್ನಗಳ ಸಂಸ್ಕರಣ, ಬಾಳೆ ಬೆಳೆ, ಅಕ್ಕಿ ಹಿಟ್ಟು ಉತ್ಪಾದನೆ ಮುಂತಾದವುಗಳು.

ಫೋಟೊಗಳು ಮತ್ತು ಇಂಗ್ಲೀಷಿನಲ್ಲಿ ವರದಿ