ಶ್ರೀ ಮಾತಾ ಅಮೃತಾನಂದಮಯಿ ದೇವಿ

ಪ್ರೇಮ – ತ್ಯಾಗಗಳ ತಮ್ಮ ಅನನ್ಯ ಕೃತಿಗಳಿಂದಾಗಿ ಮಾತಾ ಅಮೃತಾನಂದಮಯಿ ದೇವಿ ಅಮ್ಮ ನವರು ಜಗತ್ತಿನ ಲಕ್ಷಾಂತರ ಜನರ ಪಾಲಿಗೆ ಮಮತೆಯ ಮಾತೆ ಆಗಿದ್ದಾರೆ. ತಮ್ಮ ಬಳಿಗೆ ಯಾರೇ ಬರಲಿ, ಅವರು ಯಾವ ಮತದವರೇ ಆಗಿರಲಿ, ಯಾವ ಉದ್ದೇಶದಿಂದಲೇ ಬಂದಿರಲಿ – ಬಂದವರನ್ನೆಲ್ಲಾ ಅಮ್ಮ ಪ್ರೇಮದಿಂದ ಆಲಿಂಗಿಸಿಕೊಂಡು, ಹೃದಯಕ್ಕೆ ಅಪ್ಪಿಕೊಂಡು, ಪ್ರೀತಿಯಿಂದ ಮೈದಡವಿ, ಸೀಮಾತೀತ ಪ್ರೇಮವನ್ನು ನೀಡುತ್ತಾರೆ. ಬಳಿಗೆ ಬಂದವರನ್ನು ಒಬ್ಬೊಬ್ಬರನ್ನಾಗಿ ಆಲಿಂಗಿಸಿಕೊಳುತ್ತಾ, ಸರಳವಾದರೂ ಬಹುಶಕ್ತವಾದ ಈ ಕೃತಿಯ ಮೂಲಕ ಅಮ್ಮ ಅಸಂಖ್ಯಾತ ಜನರ ಹೃದಯಗಳನ್ನು ಅರಳಿಸುತ್ತಿದ್ದಾರೆ. ಜೀವನಗಳಲ್ಲಿ ಪರಿವರ್ತನೆಯನ್ನು ತರುತ್ತಿದ್ದಾರೆ. ಕಳೆದ ೩೭ ವರ್ಷಗಳಿಂದ ಇದುವರೆಗೆ ಅಮ್ಮ ಜಗತ್ತಿನ ಎಲ್ಲೆಡೆಗಳಿಂದ ಬಂದ ಮೂರು ಕೋಟಿಗೂ ಅಧಿಕ ಜನರಿಗೆ ದಿವ್ಯಾಲಿಂಗನ ನೀಡಿದ್ದಾರೆ.

ಇತರರಿಗೆ ಸದಾ ಒಳಿತನ್ನು ಮಾಡಬೇಕೆನ್ನುವ ಅಮ್ಮನ ದಿವ್ಯ ಪ್ರಬಲ ಉತ್ಸಾಹವು ಅನೇಕ ಸೇವಾಕಾರ್ಯಗಳ ಆರಂಭಕ್ಕೆ ಸ್ಫೂರ್ತಿಯನ್ನು ನೀಡಿದೆ; ಇವುಗಳ ಮೂಲಕ ನಿಸ್ವಾರ್ಥ ಸೇವೆಯಿಂದ ಲಭಿಸುವ ಶಾಂತಿ ಆನಂದಗಳನ್ನು ಜನರು ತಮ್ಮ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ದಿವ್ಯತೆಯು ಎಲ್ಲ ಚರಾಚರಗಳಲ್ಲೂ ಇದೆ ಎಂದು ಅಮ್ಮ ಕಲಿಸುತ್ತಾರೆ. ಏಕಾತ್ಮತೆಯ ಈ ಭಾವವು ಆಧ್ಯಾತ್ಮಿಕತೆಯ ಸಾರ ಮಾತ್ರವಲ್ಲ, ಲೋಕದ ಎಲ್ಲ ಶೋಕಗಳ ನಿವಾರಣೆಗೆ ಮಾರ್ಗವೂ ಹೌದು.

ಅಮ್ಮನ ಬೋಧನೆ ವಿಶ್ವಾತ್ಮಕವಾದುದು. ನಿಮ್ಮ ಧರ್ಮ ಯಾವುದು? ಎಂದು ಅಮ್ಮನನ್ನು ಯಾವಾಗ ಕೇಳಿದರೂ ಅಮ್ಮ, ಪ್ರೇಮವೇ ನನ್ನ ಧರ್ಮ ಎನ್ನುತ್ತಾರೆ. ಅಮ್ಮ ಯಾರಿಗೂ ನೀವು ಭಗವಂತನಲ್ಲಿ ನಂಬಿಕೆ ಇಡಿರಿ, ಎಂದಾಗಲಿ, ಮತ ಪರಿವರ್ತನೆ ಮಾಡಿಕೊಳ್ಳಿರಿ, ಎಂದಾಗಲಿ ಹೇಳುವುದಿಲ್ಲ; ಬದಲಾಗಿ, ನೀವು ನಿಮ್ಮ ಅಂತರಾಳಗಳನ್ನು ಹೊಕ್ಕು, ನಿಮ್ಮ ನಿಜಗುಣವನ್ನು ಅರಿಯಿರಿ, ನಿಮ್ಮಲ್ಲಿ ವಿಶ್ವಾಸ ಇಡಿರಿ, ಎಂದೇ ಹೇಳುತ್ತಾರೆ.