ನಿಷ್ಕಾಮ ಸೇವೆಯಿಂದಾಗಿ ನಮಗೆಯೇ ಆನಂದ. ಅನೇಕ ದಿನಗಳಿಂದ ಉಪವಾಸವಿರುವ ಮನೆ; ಹಸಿವೆಯಿಂದ ಮಕ್ಕಳಿಗೆ ಕೂಗಲೂ ತ್ರಾಣವಿಲ್ಲದಾಗಿದೆ. ತಂದೆ ತಾಯಿ ಸೇರಿ ತಿರುಪೆ ಎತ್ತಲಿಕ್ಕೆ ತೊಡಗಿದರು. ಸಿಗುವ ಆಹಾರವೋ ಬಹಳ ಕಮ್ಮಿ. ಮಕ್ಕಳಿಗೆ ಏನೂ ಸಾಲದು. ಅದನ್ನು ಅವರು ಮಕ್ಕಳಿಗೆ ಹಂಚುತ್ತಾರೆ. ತಮ್ಮ ಮಕ್ಕಳು ಅದನ್ನು ಉಣ್ಣುವುದನ್ನು ನೋಡುವಾಗ ಆ ತಂದೆಗೂ ತಾಯಿಗೂ ಅರ್ಧ ಹೊಟ್ಟೆ ತುಂಬುವುದು. ಈ ತೆರನ ಒಂದು ಹೊಣೆಗಾರಿಕೆಯನ್ನು ನಾವು ಜಗತ್ತಿನಲ್ಲಿ ಸೃಷ್ಟಿಸಬೇಕು. ನಮಗೆಯೇ ಅದರಿಂದ ಆನಂದವಾಗುವುದು. ಹೂವನ್ನು ದೇವರಿಗೆ ಕೊಯ್ಯುವಾಗ ಅದರ ಸುಗಂಧವನ್ನೂ ಸೌಂದರ್ಯವನ್ನೂ ಅರಿವಿಲ್ಲದೆಯೇ ನಾವು ತಾನೆ ಆಸ್ವಾದಿಸುವುದು. ಇದೇ ರೀತಿಯಾಗಿ, ಈ ಸೇವೆಯು ಮಕ್ಕಳನ್ನು ವಿಕಾಸಗೊಳಿಸುವುದು. ಈ ಭಾವನೆಯೇ ಅದಕ್ಕೆ ಸಾಕು. ಆದುದರಿಂದ ನೀವು ಏಳಿರಿ ! ನಿದ್ದೆ ಮಾಡದೆ ಏಳಿರಿ !

ಐಕ್ಯವೂ ಪ್ರೇಮವೂ ಇರುವ ಕುಟುಂಬದಲ್ಲಿ ಒಂದು ಹಿಡಿ ಅನ್ನವಾದರೂ, ಹಂಚಿ ತಿಂದು ಸಂತೋಷದಿಂದ ಮಲಗಿ ನಿದ್ದೆಮಾಡುತ್ತಾರೆ. ಸ್ವರ್ಗ ಅವರ ಕೈಯಲ್ಲಿದೆ. ಆದರೆ ಕೋಟಿಯ ಸಂಪತ್ತಿದ್ದು, ಐನೂರು ಪವನು ಬಂಗಾರವಿದ್ದು ಐಕ್ಯತೆಯಿಲ್ಲದಿದ್ದರೆ ಅಲ್ಲಿ ನರಕದ, ಕಣ್ಣೀರಿನ, ನಿಂದನೆಯ ನೆಲೆಯನ್ನು ಕಾಣುತ್ತೇವೆ. ನಮ್ಮ ಐಕ್ಯತೆಯು ನಮಗೆ ಆನಂದ ಕೊಡುವುದು. ಆದುದರಿಂದ ನಿಮ್ಮ ಮನಸ್ಸಿನ ಮೂಲವನ್ನು ಅರ್ಥ ಮಾಡಿಕೊಳ್ಳಿರಿ. ನಿಮ್ಮ ಜೀವನ ಯಾಕಾಗಿಯೆಂಬುದನ್ನು ಅರಿತುಕೊಳ್ಳಿರಿ !

ನಿಮಗೆ ಸರಿಯಾದ ಒಂದು ಚೈತನ್ಯ ವಲಯವನ್ನು (aura) ದೇವರು ಕೊಟ್ಟಿದ್ದಾನೆ. ಪರಿಮಿತಿ ನಿರ್ಣಯಿಸಲಾಗದಷ್ಟು ಅನಂತಶಕ್ತಿಯಿರುವಂಥದ್ದು ಅದು. ಆದರೆ ಇಂದದು ಶುಷ್ಕವಾಗಿದೆ. ಆದರೂ ತಪಸ್ಸಿನಿಂದ, ಅದರಲ್ಲಿ ಎಷ್ಟು ಬೇಕಾದರೂ, ಕರೆಂಟು ಚಾರ್ಜ್ ಮಾಡಲು ಸಾಧ್ಯವಿದೆ; ಯಾವ ಲೋಕದಲ್ಲೂ ಪ್ರಯಾಣ ಮಾಡಲು ಸಾಧ್ಯವಿದೆ. ನೀವು ಸಾಯುತ್ತೀರೆಂದು ಹೆದರುವುದೇ ಬೇಡ. ಹುಟ್ಟುತ್ತೀರೆಂದೂ ಎಣಿಸಬೇಡಿ. ನೀವು ಎಂದೂ ಸಾಯುವುದೂ ಇಲ್ಲ, ಹುಟ್ಟುವುದೂ ಇಲ್ಲ. ಫ್ಯಾನೋ, ಫ್ರಿಜ್ಜೋ ಹಾಳಾದರೂ ಅದರೊಳಗಿನ ಕರೆಂಟು ಹಾಳಾಗದ ಹಾಗೆ, ನಿಮ್ಮ ಒಳಗಿನ ಆತ್ಮವು ಎಂದೂ ಅಸ್ತಿತ್ವದಲ್ಲಿರುತ್ತದೆ.

’ಕೆಲಸ ಕೊಡಿ, ಕೆಲಸ ಕೊಡಿ’ ಎಂದು ಎಲ್ಲರೂ ಹೇಳುತ್ತಾರೆ. ಕೆಲಸವಿಲ್ಲವೆಂದು ಯುವಪ್ರಾಯದವರು ದುಃಖಿಸುತ್ತಾರೆ. ಹೆಂಡಕ್ಕೂ, ಗಾಂಜಕ್ಕೂ ಅಡಿಯಾಳಾಗುವುದು ಅದೇ ಕಾರಣದಿಂದಾಗಿ ಎಂದು ಹೇಳುತ್ತಾರೆ. ಕೆಲಸ ಸಿಕ್ಕಿದರೆ ನಿಮಗೆ ಸಮಾಧಾನ ಆಗುತ್ತದೆಯೇ ? ಅವನ, ತನ್ನ ಹೆಸರಿನಲ್ಲಿರುವ, ಎಕರೆ ಗಟ್ಟಲೆ ಭೂಮಿ ಪಾಳು ಬಿದ್ದಿರುತ್ತದೆ. ಅದರಲ್ಲಿ ಬೇಸಾಯ ಮಾಡಿದರೆ, ಇವನಿಗೆ ಸಿಗುವ ಸಂಬಳಕ್ಕಿಂತ ನೂರರಷ್ಟು ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ. ಕೆಲವೊಮ್ಮೆ ನಷ್ಟವುಂಟಾಯಿತೊಂದು ಭಾವಿಸೋಣ; ಆದರೂ ಹಿಂಜರಿಯಬಾರದು. ಅದರೆ ಯಾರೂ ಶ್ರಮ ಪಡುವುದಿಲ್ಲ. ಇಷ್ಟೆಲ್ಲ ಜಮೀನು ಇಟ್ಟುಕೊಂಡೂ ಸುಮ್ಮನೆ ಅಲೆದಾಡುತ್ತಾ ಹಾಳಾಗುತ್ತಾರೆ. ಸಮಯಯಿಲ್ಲವೆಂದು ಯಾರೂ ಹೇಳಬೇಕಾಗಿಲ್ಲ; ಸಮಯ ಬೇಕಷ್ಟಿದೆ. ಹಾಗಾಗಿ ನೀವು ಆಲಸಿಗಳಾಗದೆ ಕೆಲಸ ಮಾಡಿರಿ !

ಸ್ವಂತ ಫ಼್ಯಾಕ್ಟರಿಯಲ್ಲಿ ಇಪ್ಪತ್ತನಾಲ್ಕು ಗಂಟೆ ಕೆಲಸ ಮಾಡುವವರಿದ್ದಾರೆ. ತನ್ನದೇ ಫ್ಯಾಕ್ಟರಿ, ಹಣ ಮಾಡಬೇಕೆಂಬ ಗುರಿ ಇದ್ದಾಗ ಏನು ಮರೆತು ಬಿಡಲಿಕ್ಕೂ ಸಂಕೋಚವಿಲ್ಲ. ಎಷ್ಟು ಕೆಲಸ ಮಾಡಿದರೂ ಆರೋಗ್ಯಕ್ಕೆ ಕಮ್ಮಿಯಿಲ್ಲ; ಉತ್ಸಾಹ ಮಾತ್ರವೇ ಇರುತ್ತದೆ. ಹಾನಿಯಾಗುವುದಿಲ್ಲ. ಮಕ್ಕಳೇ, ಲೋಕವು ನಮ್ಮ ಕುಟುಂಬ. ಆ ಲೋಕದ್ದಾದ ಫ಼್ಯಾಕ್ಟರಿಯಲ್ಲಿ ಕೆಲಸ ಮಾಡಿರಿ. ಎಲ್ಲರೂ ನನ್ನ ಸಂಬಂಧಿಕರು ಎಂದು ಭಾವಿಸಿಕೊಳ್ಳಿ. ಆಗ ಭಗವಂತನೇ ರಕ್ಷಿಸುವನು ಎಂದಿರುವ ಕರ್ತವ್ಯ ಭಾವನೆ ತಾನಾಗಿಯೇ ಮೂಡುವುದು ನಿಮ್ಮಲ್ಲಿ. ನಿಮ್ಮ ದೇಹವನ್ನು ಮರೆಯಲೂ, ಕೆಲಸ ಮಾಡಲು ಆರೋಗ್ಯವನ್ನೂ ಈಶ್ವರನು ಕೊಡುವನು.

ಬೇರೊಂದು ಫ಼್ಯಾಕ್ಟರಿ ಸೇರಿದಾಗ ಎರಡು ಗಂಟೆ ಕೆಲಸ ಮಾಡಿ ತಪ್ಪಿಸಿಕೊಂಡು ಓಡಾಡಲು, ಮೇಲಧಿಕಾರಿಗಳು ಇಲ್ಲದಿದ್ದರೆ ಹರಟೆ ಹೊಡೆದು ಕೊಂಡಿರಲು ಮನಸ್ಸಾಗುತ್ತದೆ. ಸ್ವಂತದ್ದಲ್ಲ ಎಂದಾಗ ಸೋಮಾರಿತನ ಬರುತ್ತದೆ, ಜಡತ್ವ ಉಂಟಾಗುತ್ತದೆ, ಆಯಾಸವಾಗುತ್ತದೆ. ಇದು ಅನ್ಯಥಾ ಭಾವ. ’ಸ್ವಂತದ್ದು’ ಎನ್ನುವ ಭಾವದಲ್ಲಿ ಅದು ಅಷ್ಟು ಬೇಗನೆ ಬರುವುದಿಲ್ಲ. ಈ ಲೋಕ ನಮ್ಮ ಫ಼್ಯಾಕ್ಟರಿಯೆಂದು ಭಾವಿಸಿ ನಡೆಯುವಾಗ, ಬೇರೆಯವರ ಜೊತೆ ಸೇರಿ ರಕ್ಷಿಸಬೇಕು ಎಂದು ಚಿಂತಿಸುವಾಗ ನಿಮಗೆ ಕಷ್ಟ ಪಡಲು ಶಕ್ತಿ ಬರುತ್ತದೆ.

ಹೋದ ಸಮಯ ಎಂದೂ ತಿರುಗಿ ಬರುವುದಿಲ್ಲ. ಆದಕಾರಣ ನೀವು ಸಮಯ ವ್ಯರ್ಥ ಮಾಡದಿರಿ. ನೌಕರಿ ಇಲ್ಲದಿದ್ದರೂ ಮಕ್ಕಳೇ, ನಿಮಗಿರುವ ಜಮೀನಿನಲ್ಲಿ ಏನಾದರೂ ಕೃಷಿ ಮಾಡಲು ಕಲಿಯಿರಿ. ಆಗ ಚಿಂತೆ ಮಾಡಿ, ಮಾಡಿ ಮನಸ್ಸು ಹುಣ್ಣಾಗುವುದಿಲ್ಲ. ಹೆಂಡಕ್ಕೂ ಗಾಂಜಾಗೂ ಗುಲಾಮರಾಗಿ ನಾಶವಾಗ ಬೇಕಾಗಿಲ್ಲ. ಹೇಗೆಯಾದರೂ ನೀವು ಶ್ರಮಿಸಿರಿ ಮಕ್ಕಳೇ. ಹತ್ತು ಸೆಂಟುಗಳಾದರೂ ಸಾಕು. (ಒಂದು ಎಕರೆ ಜಮೀನಿಗೆ ನೂರು ಸೆಂಟುಗಳು) ಮೂರು ಜನರಿಗೆ ಬೇಕಾಗುವಷ್ಟು ತಿಂದುಣ್ಣಲು ಅದರಿಂದ ದೊರಕುವುದು. ತರಕಾರಿಯೋ, ಮತ್ತಿನ್ನೇನಾದರೋ ನಮಗೆ ಅದರಲ್ಲಿ ಕೃಷಿ ಮಾಡಬಹುದಲ್ಲ. ಖಂಡಿತವಾಗಿಯೂ ಏನೇನೂ ಇಲ್ಲದವರಾದರೆ, ಯಾವ ಕೆಲಸ ಮಾಡಲೂ ತಯಾರಾಗಿರಬೇಕು. ಹಲವು ತೆರದ ಕೆಲಸಗಳಿವೆ; ಹಲವರನ್ನು ಸಂಪರ್ಕಿಸಿರಿ. ಹಲವು ಕದಗಳನ್ನು ತಟ್ಟಿರಿ. ಉನ್ನತ ಹುದ್ದೆಯೇ ಬೇಕೆಂದಾದರೆ ನಿರಾಸೆಯಾಗ ಬಹುದು. ಎಲ್ಲರೂ ಆಫೀಸರುಗಳಾಗಬೇಕೆಂದು ಬಯಸಿದರೆ ಸಣ್ಣ ಕೆಲಸಕ್ಕೆ ಯಾರೂ ಸಿಗುವುದಿಲ್ಲ. ನೀವಾಗಿಯೇ ನಶಿಸಬೇಡಿ. ಯಾವುದಾದರೂ ಕೆಲಸಕ್ಕೆ ಹೋಗಲು ಪ್ರಯತ್ನಿಸಿರಿ. ಧೈರ್ಯದೊಂದಿಗೆ ಸಿದ್ಧರಾಗಿರಿ.

 

ಹಳ್ಳಿಯಲ್ಲಿ ಮಹಾತ್ಮ

’ಯಾಕಾಗಿ ಭಗವಂತನು ಎಲ್ಲರನ್ನೂ ಸುಖಿಗಳನ್ನಾಗಿಸುವುದಿಲ್ಲ ? ಯಾಕಾಗಿ ಕೆಲವರನ್ನು ಮಾತ್ರ ಕಷ್ಟಕ್ಕೀಡು ಮಾಡುತ್ತಾನೆ ?’ – ಹಲವರು ಕೇಳುವುದಿದೆ. ಆದರೆ ಭಗವಂತನು ಯಾರನ್ನೂ ಉಪವಾಸ ಹಾಕುವುದಿಲ್ಲ. ಯಾರನ್ನು ಕಷ್ಟಕ್ಕೀಡು ಮಾಡುವುದೂ ಇಲ್ಲ. ಪ್ರತಿಯೊಬ್ಬರಿಗೂ ಏನೆಲ್ಲ ಅವಶ್ಯವಿದೆಯೋ ಅದೆಲ್ಲ ಅವನು ಕೊಟ್ಟಿದ್ದಾನೆ. ಎಲ್ಲ ಅವಶ್ಯಕತೆಗೆ ತಕ್ಕಷ್ಟು ಮಾತ್ರ.

ಒಂದು ಹಳ್ಳಿಗೆ ಒಬ್ಬ ಮಹಾತ್ಮ ಹೋಗುತ್ತಾನೆ. ಅಲ್ಲಿರುವವರು ಆತನ ಹತ್ತಿರ ಎಲ್ಲರನ್ನೂ ಸುಖಿಗಳನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಅವರ ಮನೋಗತ ಅರ್ಥ ಮಾಡಿಕೊಂಡ ಆ ಮಹಾತ್ಮ ಅವರಿಗೆ ಬೇಕಾದ್ದನ್ನೆಲ್ಲ ನೀಡುತ್ತಾನೆ. ಧನ, ಕಟ್ಟಡ ಎಲ್ಲ ಕೊಡುತ್ತಾನೆ. ಎಷ್ಟೋ ದಿನಗಳ ನಂತರ ಪುನಃ ಆತ ಆ ಹಳ್ಳಿಗೆ ಹೋಗುತ್ತಾನೆ. ಆದರೆ ಅಲ್ಲಿಂದ ಹಾದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಹಳ್ಳಿಯಲ್ಲೆಲ್ಲ ಕೊಳೆತು ನಾರುವ ವಾಸನೆ. ಎಲ್ಲೆಲ್ಲೂ ಕಸ ಕಡ್ಡಿ ತುಂಬಿ ಕೊಂಡಿದೆ. ಶುಚಿತ್ವ ಇಲ್ಲದಿರುವ ಕಾರಣ, ರೋಗದಿಂದಾಗಿ ಜನರು ಕಷ್ಟ ಪಡುತ್ತಿದ್ದಾರೆ. ಗುಡಿಸಲುಗಳಿಗೆ ಛಾವಣಿಯಿಲ್ಲ, (ಹಳೇ ಕಾಲದಲ್ಲಿ ಮನೆಗಳಿಗೆ ಹುಲ್ಲಿನ ಛಾವಣಿಯಿರುತ್ತಿತ್ತು.) ಹೊಲ ಉತ್ತಿಲ್ಲ. ಎಲ್ಲರೂ ಉಪವಾಸ. ಕಾರಣ ಹುಡುಕಿದಾಗ, ಕೃಷಿ ಮಾಡಲು ಕೆಲಸದಾಳುಗಳಿಲ್ಲ. ಕೆಲಸ ಮಾಡಲು ಯಾರೂ ತಯಾರಿಲ್ಲ. ಮಹಾತ್ಮನನ್ನು ನೋಡಿದೊಡನೆ ಎಲ್ಲರೂ ಅವನ ಹತ್ತಿರ ಧಾವಿಸುತ್ತಾರೆ. ಎಲ್ಲವನ್ನು ಮೊದಲಿನಂತೆ ಮಾಡಿಕೊಡಬೇಕೆಂದು ಬೇಡಿಕೊಳ್ಳುತ್ತಾರೆ.

ಅದನ್ನೇ ಹೇಳಿರುವುದು, ಅವಶ್ಯಕತೆಗನುಗುಣವಾಗಿ ಬೇಕಾದ್ದನ್ನೆಲ್ಲ ಮನುಷ್ಯನಿಗೆ ಭಗವಂತ ಕೊಟ್ಟಿರುತ್ತಾನೆ. ಅದಕ್ಕಿಂತ ಹೆಚ್ಚೇನಾದರೂ ಕೊಟ್ಟರೆ, ಅವರು ಅದರ ಎರಡರಷ್ಟು ನಶಿಸುತ್ತಾರೆ. ದೇವರು ಲೋಕದಲ್ಲಿ ಅವಶ್ಯಕತೆಗಿಂತ ಹೆಚ್ಚು ಏನೂ ಮಾಡಿಲ್ಲ; ಎಲ್ಲ ಅವಶ್ಯಕತೆಗೆ ತಕ್ಕಷ್ಟು ಮಾತ್ರ.