ಮಕ್ಕಳೇ, ಆಧಾರಸ್ತಂಭಗಳಿಲ್ಲದೆ ಕಟ್ಟಡ ಕಟ್ಟಬಹುದೆಂದು ಒಂದು ವೇಳೆ ವಿಜ್ಞಾನಿಗಳು ಕಂಡುಹಿಡಿದರೆಂದು ಇಟ್ಟುಕೊಳ್ಳೋಣ; ಇಂದು ಬಟನ್ ಅದುಮಿದರೆ ಈ ಪ್ರಪಂಚವೇ ಅಳಿದು ಹೋಗುತ್ತದೆಂದು ಇಟ್ಟುಕೊಳ್ಳೋಣ. ಆದರೆ ಇದರಿಂದ ಯಾವ ಮನಸ್ಸಿಗೂ ಯಾವ ಕುಟುಂಬಕ್ಕೂ ಸಮಾಧಾನವೆಂಬುದು ಸಿಗುವುದಿಲ್ಲ. ಹೊಟ್ಟೆ ತುಂಬ ಊಟ ಮಾಡಿಯೂ ’ಮನಸ್ಸಿಗೆ ಸಮಾಧಾನವಿಲ್ಲ, ನಿದ್ದೆ ಬರುತ್ತಿಲ್ಲ’ ಎನ್ನುವ ಮೊರೆಯನ್ನು ಮಾತ್ರವೇ ಇಂದು ನಾವು ಕೇಳುತ್ತಿರುವುದು. ಒಂದು ಕೋಟಿಗೂ (ಇದು 1987ರ ಮೊದಲಿನ ವರ್ಷಗಳಲ್ಲಿ ಅಮ್ಮ ಹೇಳಿದ ಮಾತು) ಮೀರಿ ಜನಗಳನ್ನು ಅಮ್ಮ ಇಷ್ಟು ಕಾಲದಿಂದ ಕಂಡು ಭೇಟಿಯಾಗಿದ್ದಾರೆ. ಅದರಲ್ಲಿ ಬೆರಳೆಣಿಕೆಯಷ್ಟು ಮಂದಿಯೂ ಮನಸ್ಸಮಾಧಾನದಿಂದ ಬದುಕುತ್ತಿಲ್ಲ. ಬರುವ ಈ ಮಂದಿ ಕಡಿಮೆ ಸಂಪತ್ತಿರುವವರಲ್ಲ; ಎಲ್ಲ ಇರುವವರು. ಒಂದು ವ್ಯಕ್ತಿಗೆ ಕೆಲಸದಾಳುಗಳನ್ನು ಕೊಟ್ಟರೋ, ಚೆಲುವೆ ಹೆಣ್ಣನ್ನು ಕೊಟ್ಟರೋ, ಕಟ್ಟಡ ಕೊಟ್ಟರೋ, ಎಕರೆ ಲೆಕ್ಕದಲ್ಲಿ ಭೂಮಿ ಕೊಟ್ಟರೋ, ಆ ವ್ಯಕ್ತಿಗೆ ಸಮಾಧಾನ ಸಿಗಬೇಕೆಂದೇನಿಲ್ಲ. ಇದೆಲ್ಲ ಇರುವವರೆ ಹೆಚ್ಚು ಅಳುತ್ತಿರುವುದನ್ನು ಕಾಣುತ್ತೇವೆ. ಇದು ಬದಲಾಗಬೇಕಾದರೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು.

ಸಂಪತ್ತು ಬೇಡವೆಂದು ಅಮ್ಮ ಹೇಳುತ್ತಿಲ್ಲ. ಎಲ್ಲತರದ ಆಸ್ತಿಗಳನ್ನು ನೀವು ಸಂಪಾದಿಸಿಕೊಳ್ಳಿ; ಆದರೆ ಅದನ್ನು ಹೇಗೆ ವಿನಿಯೋಗಿಸಬೇಕೆನ್ನುವ ’ಮರ್ಮ’ ತಿಳಿಸಿ ಹೇಳುವುದು ಅಧ್ಯಾತ್ಮ. ಕೋಟಿಗಟ್ಟಲೆ ಬಾಣಬಿಡಲು ಕಲಿತರೂ ಅದರ ಗುರಿ ತಿಳಿದುಕೊಳ್ಳದವನು ಅಷ್ಟೂ ಬಾಣಗಳನ್ನು ಕಳೆದುಕೊಂಡಂತಾಗುತ್ತದೆ. ಆದಕಾರಣ ಗುರಿಯನ್ನು ಕಲಿತು ಬಾಣ ಹೂಡಿರಿ. ಈ ತೆರನಾಗಿ, ಅಧ್ಯಾತ್ಮ ಅರ್ಥಮಾಡಿಕೊಂಡು ಎಷ್ಟೇ ಸಂಪತ್ತು ಗಳಿಸಿದರೂ ಅದು ನಿಮಗೂ ಲೋಕಕ್ಕೂ ಒಳ್ಳೆಯದನ್ನೇ ಮಾಡುತ್ತದೆ. ಆದುದರಿಂದ ಅಧ್ಯಾತ್ಮ ಏನಂತ ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಿ; ಕಲಿತುಕೊಳ್ಳಿ. ಕಲಿತು ನೀವು ಸಮಾಜದಲ್ಲಿ ಬದಲಾವಣೆಗಳನ್ನು ತನ್ನಿರಿ.

ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಸಮಾಜವನ್ನು ಪ್ರೀತಿಸೋಣ, ಸೇವೆ ಮಾಡೋಣ. ರಾಜಕೀಯ ಬೇಡವೆಂದು ಹೇಳುತ್ತಿಲ್ಲ; ಮನೆ ಬೇಡವೆಂದು ಹೇಳುತ್ತಿಲ್ಲ. ಅದೆಲ್ಲ ಇದ್ದರೂ ನಿಮಗೆ ಅಧ್ಯಾತ್ಮ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ; ಸರಿಯಾದ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಿದೆ. ಮಕ್ಕಳೇ, ರಾಜಕೀಯ, ಪಾರ್ಟಿಯ ಕುರಿತಾಗಿಯೆಲ್ಲ ಮಾತಾಡುತ್ತಿದ್ದರೆ ನಮ್ಮ ವಿದ್ಯಾಭ್ಯಾಸ ಹಾಳಾಗುತ್ತದೆ; ಕರ್ತವ್ಯಗಳು ಮರೆತು ಹೋಗುತ್ತವೆ, ಅನೇಕರನ್ನು ಪೀಡಿಸುತ್ತೇವೆ. ಇಷ್ಟೇ ನಮ್ಮಿಂದ ಸಾಧ್ಯ. ಪಾರ್ಟಿ ಯಾವತ್ತೂ ನಮಗೆ ಸನ್ಮಾರ್ಗ ಸ್ಪಷ್ಟ ಪಡಿಸಿ ಕೊಡುವುದಿಲ್ಲ. ಎರಡೇ ಪಾರ್ಟಿ ಇರುವ ಕಡೆಯೂ ಅವರಿಗೆ ಸತ್ಯವನ್ನು ಆಚರಿಸಿಕೊಂಡು ಹೋಗಲು ಬೇಗ ಆಗುತ್ತದೆಂದು ಹೇಳಲು ಬರುವುದಿಲ್ಲ. ಯಾವಾಗಲೂ ಇತರರ ವೋಟ್ನ ಮೇಲಲ್ಲವೇ ಇವರ ಅಸ್ತಿತ್ವ ? ಒಬ್ಬನ ವೋಟ್ ಹೋದರೆ ಸಾಕು, ಮಂತ್ರಿ ಪದ ಹೋಗಲಿಕ್ಕೆ. ಬೇರೆಯವರನ್ನು ಅವಲಂಬಿಸಿ ಇವರು ಬೆಳೆದಿರುವುದು. ಪರಾವಲಂಬಿಗಳಿಗೆ ಇನ್ನೊಬ್ಬರನ್ನು ರಕ್ಷಿಸಲಿಕ್ಕೆ ಸಾಧ್ಯವಿಲ್ಲ. ವೋಟಿಗೆ ಬೇಕಾಗಿ ಮಾತ್ರ ಇವರು ಇರುವುದರಿಂದ ಸತ್ಯಸಂಧರಾಗಿ ಬದುಕಲು ಸಾಧ್ಯವಾಗುವುದಿಲ್ಲ. ಅಥವಾ ಸತ್ಯವಿದ್ದರೂ, ಅವರಲ್ಲಿ ವಿಪರೀತ ಬುದ್ಧಿಯಿರಬಹುದು. ಆದರೆ ಅಧ್ಯಾತ್ಮದಲ್ಲಿ ಅದಿಲ್ಲ.

ಅಧ್ಯಾತ್ಮವನ್ನು ಅರ್ಥ ಮಾಡಿಕೊಂಡಾಗ ನಮ್ಮ ಕರ್ತವ್ಯಗಳ ಸ್ಮರಣೆ ನಮಗೆ ಉಂಟಾಗುತ್ತದೆ. ನಾವು ಯಾರೆಂದು, ಏನೆಂದು ಅರ್ಥ ಮಾಡಿಕೊಳ್ಳುತ್ತೇವೆ; ಅದಕ್ಕನುಗುಣವಾಗಿ ನಾವು ಬದುಕಲು ಪ್ರಯತ್ನಿಸಬಹುದು. ಭೂಮಿಗೂ ಸಹ ತೊಂದರೆಯಾಗದಂಥ ಬದುಕು ನಾವು ಕಟ್ಟಬಹುದು. ಆಧ್ಯಾತ್ಮಿಕ ಜೀವನದಲ್ಲಿ ಮಾತ್ರ ಇದು ಸಾಧ್ಯ. ಯಾರೂ ಸನ್ಯಾಸಿಯೋ ಬ್ರಹ್ಮಚಾರಿಯೋ ಆಗಬೇಕಾಗಿಲ್ಲ. ನಿಮ್ಮ ಜೀವನವನ್ನೂ ಕುಟುಂಬವನ್ನೂ ಸಂಭಾಳಿಸಿಕೊಂಡೇ, ಸಾಧನೆಯನ್ನೂ ಮಾಡಿಕೊಂಡು ಲೋಕದಲ್ಲಿದ್ದುಕೊಂಡು ಬದುಕಬಹುದು.

ಕ್ರಿಕೆಟ್ ಹಾಗೂ ಟಿ.ವಿ. ಯಾವುದೂ ಹಸಿವಾದಾಗ ಸಮಾಧಾನ ಕೊಡುವುದಿಲ್ಲ. ಅವೆಲ್ಲ ನೋಡುವಾಗ ನಮ್ಮಲ್ಲಿ ಭಾವೋದ್ವೇಗಗಳು ಜಾಗೃತವಾಗುತ್ತವೆ. ವೈಭವೋಪೇತ ಜೀವನದ ಬಗ್ಗೆ ಉದ್ರೇಕ ಉಂಟಾಗುತ್ತದೆ. ಅವುಗಳು ಸಿಗದೆ ಹೋದಾಗ ನಿರಾಶೆಯಾಗುಗುತ್ತದೆ. ನಾವೂ ಹಾಳಾಗುತ್ತೇವೆ. ಆದರೆ ಸಮಯ ವ್ಯರ್ಥ ಮಾಡದೆ ಏಕಾಗ್ರತೆಯಿಂದ ಧ್ಯಾನ ಮಾಡಿದಲ್ಲಿ, ನಿಮಗೆ ಬೇರೆ ಎಲ್ಲಕ್ಕಿಂತಲೂ ಹೆಚ್ಚಿನ ಸಂತೃಪ್ತಿ ಸಿಗುವುದು. ಟಿವಿ, ಸಿನೇಮ ನೋಡಬಾರದೆಂದು ಅಮ್ಮ ಹೇಳುತ್ತಿಲ್ಲ. ಆದರೆ ಇವೆಲ್ಲ ಭಾವನೆಗಳನ್ನು, ವಿಚಾರಗಳನ್ನು ಜಾಗೃತಗೊಳಿಸಿದಾಗ ಅವನ್ನು ತೃಪ್ತಿಪಡಿಸಲು ಪರಸ್ತ್ರೀಯರನ್ನು ಇಚ್ಚಿಸುವುದು, ಕಳವು ಮಾಡುವುದು ಮೊದಲಾದ ಪ್ರವೃತ್ತಿಗಳಿಂದ ನಾವು ಜಗತ್ತಿಗೆ ಅನ್ಯಾಯ ಮಾತ್ರವೇ ಬಗೆಯುತ್ತೇವೆ.

ಮಕ್ಕಳೇ, ಆನಂದ ನಿಮ್ಮ ಒಳಗಿದೆ. ಆದರೆ ನೀವದು ಅರಿತುಕೊಳ್ಳುತ್ತಿಲ್ಲ. ನೀವು ಖಜಾನೆಯ ಬೀಗದ ಕೈಯನ್ನು ನಿಮ್ಮದೇ ಕಿಸೆಯೊಳಗೆ ಇಟ್ಟು ಮನೆಯಲ್ಲೂ, ಹೊರಗೂ ತಿರುಗಾಡದಿರಿ. ಆನಂದವು ಹೊರಗಿದೆ ಎಂದು ಭಾವಿಸುವುದರಿಂದ ಉಪದ್ರವ ಮಾತ್ರ ನಿಮ್ಮಿಂದ ಮಾಡಲು ಸಾಧ್ಯವಾಗುತ್ತದೆ. ಆದಕಾರಣ ದಯಮಾಡಿ, ಸಮಾಜದೊಡನೆ ಪ್ರೇಮವಿದ್ದಲ್ಲಿ; ಜನರಲ್ಲಿ, ಬಡಜನರಲ್ಲಿ ಕರುಣೆಯಿದ್ದಲ್ಲಿ ನೀವು ಈ ತರ ಹಾಳಾಗದೆ ಬೇರೆಯವರನ್ನು ಕಾಪಾಡಿರಿ. ಅನೇಕರು ಉಪವಾಸವಿದ್ದು, ಮನೆಯಿಲ್ಲದೆ, ಬಟ್ಟೆಯಿಲ್ಲದೆ, ಶಾಲೆಗೆ ಹೋಗಲು ಕಾಸಿಲ್ಲದೆ ಹೆಣಗಾಡುತ್ತಿದ್ದಾರೆ. ಔಷಧಿ ಕೊಂಡುಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ನಿಮ್ಮಲ್ಲೊಂದು ಪರಿವರ್ತನೆ ಉಂಟಾದರೆ, ಅಶಾಶ್ವತ ವಸ್ತುಗಳಿಗಾಗಿ ಹಾಳು ಮಾಡುವ ಹಣದಿಂದ ಬಡಜನರಿಗೆ ಸಹಾಯ ಮಾಡಲು ಸಾಧ್ಯವಿದೆ. ಜೊತೆಗೆ ಜೀವನವೆಂದರೆ ಏನು ಎಂದು ಅವರಿಗೆ ತಿಳಿ ಹೇಳಿದಾಗ ಅವರಿಗೆ ನೆಮ್ಮದಿಯಿಂದ ತಮ್ಮ ಬದುಕು ನಡೆಸಲು ಸಾಧ್ಯವಾಗುತ್ತದೆ.

ಊಟದ ಜೊತೆಗೆ ನೀರೂ ಕೊಡಬೇಕಾಗುತ್ತದೆ. ಹಸಿದಿರುವ ಮಗುವಿಗೆ ವೇದಾಂತ ಹೇಳಬೇಕೆಂದು ಅಮ್ಮ ಹೇಳುತ್ತಿಲ್ಲ. ಊಟದ ಜೊತೆಗೆ ವೇದಾಂತ ಹೇಳಿಕೊಟ್ಟಾಗ, ಬಹುಷಃ ಅವರಿಗೆ ಇದನ್ನು ಗ್ರಹಿಸಲಿಕ್ಕೆ ಸಾಧ್ಯವಾಗಬಹುದು. ಆದಕಾರಣ ಇಂದು ಸಮಾಜದ ಮೇಲೋ, ನಮ್ಮ ರಾಜ್ಯದ ಮೇಲೋ, ಇಲ್ಲದಿದ್ದರೆ ಈ ಸಹೋದರರ ಮೇಲೋ ನಿಮಗೆ ಪ್ರೀತಿ ಇದ್ದಲ್ಲಿ, ದಯವಿಟ್ಟು ಎದ್ದೇಳಿ ! ನೀವು ಯಾರೆಂದು ಕಲಿಯಿರಿ !