ಪರಮಕರುಣಾಕರನಾದ ಪರಮಾತ್ಮನ ಅನುಗ್ರಹದಿಂದ ನಾವು ನಡೆದುಕೊಂಡು ಬರುತ್ತಿದ್ದೇವೆ. ಕೆಲವರು ಹೇಳುತ್ತಾರೆ ದೇವರಿಲ್ಲ ಎಂದು. ತನ್ನ ನಾಲಿಗೆಯಿಂದಲೇ “ನನಗೆ ನಾಲಿಗೆಯಿಲ್ಲ” ಎಂದು ಹೇಳಿದಂತಾಯಿತು ಇದು. ನಾಲಗೆಯಿಲ್ಲದ ಒಬ್ಬನಿಗೆ “ನನಗೆ ನಾಲಿಗೆಯಿಲ್ಲ” ಎಂದು ಹೇಳಲು ಸಾಧ್ಯವಿದೆಯೇ. ಇದೇ ರೀತಿ ದೇವರಿಲ್ಲ ಎಂದು ಹೇಳುವಾಗಲೇ ನಾವು ದೇವರಿದ್ದಾನೆ ಎಂದು ಒಪ್ಪಿದ ಹಾಗಾಯಿತು. ಯಾಕೆಂದರೆ ಒಂದು ವಸ್ತು ಇಲ್ಲಾಂತ ಹೇಳಬೇಕಾದರೆ, ಮೊದಲೇ ಅದರ ಬಗ್ಗೆ ನಮಗೆ ಸ್ವಲ್ಪ ತಿಳುವಳಿಕೆ ಇರಬೇಕಾಗುತ್ತದೆ.
ಪ್ರೀತಿಯ ಮಕ್ಕಳೇ, ನಾವು ಬಂದಿರುವುದು ದೇವರಿಂದ. ಆ ಮಸುಕಾದ ಪರಿವೆ ನಮ್ಮೊಳಗಿದೆ; ಅದು ಪೂರ್ಣವಾಗಬೇಕು.
ನೆಚ್ಚಿನ ಮಕ್ಕಳೇ, ದೇವರು ಮೇಲಿದ್ದಾನೆ. ಬೀಜದಲ್ಲಿ ಹೂವು, ಕಾಯಿ, ಕಾಂಡ, ಎಲೆ ಎಲ್ಲಾ ಅಡಕವಾಗಿದೆ. ಆದಕಾರಣ, “ಎಲ್ಲಾ ನನ್ನಲ್ಲಿದೆ, ನಾನ್ಯಾರಿಗೂ ತಲೆ ಬಗ್ಗಿಸುವುದಿಲ್ಲ” ಎಂದು ಹೇಳಿದರೆ ಅದರ ನಿಜವಾದ ರೂಪ ಹೊರಗೆ ಬರುವುದೇ ? ಮಣ್ಣಿನಡಿಗೆ ಹೋದಾಗ ಮಾತ್ರವೇ ಅದರಲ್ಲಿ ಹುದುಗಿಕೊಂಡಿರುವ ವೃಕ್ಷ ಹೊರಗೆ ಬರತೊಡಗುವುದು. ಇದೇ ರೀತಿ “ಹೇ ಭಗವಂತ, ನಾನು ನಿನ್ನ ದಾಸ” ಎಂಬ ಭಾವನೆ ಬಂದಾಗ ಮಾತ್ರ ಭಗವಂತನ ರೂಪ – ಅಲ್ಲದಿದ್ದರೆ ನಮ್ಮ ಸ್ವರೂಪ – ವ್ಯಕ್ತವಾಗುವುದು.
ಮೆಚ್ಚಿನ ಮಕ್ಕಳೇ, ದೇವರು ಕೊಟ್ಟ ಸಮಯ ಹಾಳು ಮಾಡದಿರಿ. ಜಗನ್ಮಾತೆಯನ್ನು ಆಶ್ರಯಿಸಿರಿ. ಮಕ್ಕಳೇ, “ಅಮ್ಮ” ಮಾತ್ರವೇ ನಮಗೆ ನಿಷ್ಕಾಮ ಪ್ರೇಮ ನೀಡುವವಳು. ಈ ಲೋಕದಲ್ಲಿ ಬಹಳಷ್ಟು ಮಂದಿ ನಮ್ಮನ್ನು ನಿಷ್ಕಾಮವಾಗಿ ಪ್ರೀತಿಸುತ್ತಾರೆ ಎನ್ನುವುದು ಬರೇ ತೋರಿಕೆ ಮಾತ್ರ. ಅದೆಲ್ಲ ಒಟ್ಟು ಸ್ವಾರ್ಥ-ಪ್ರೀತಿ. ಇದನ್ನು ವಿವರಿಸಲಿಕ್ಕೆ ಅಮ್ಮ ಒಂದು ಕಥೆ ಹೇಳುತ್ತಾರೆ.
ಒಂದು ಸಲ ಒಬ್ಬ ತಂದೆಯೂ ಮಕ್ಕಳೂ ಒಂದು ಪ್ರವಾಸಕ್ಕೆ ಹೊರಡುತ್ತಾರೆ. ಹಗಲಿನಲ್ಲಿ ಅವರು ಪಟ್ಟಣದ ಹಲವು ದೃಶ್ಯಗಳನ್ನು ನೋಡುತ್ತ ತಿರುಗಾಡಿದರು. ಸಂಜೆಯಾದಾಗ ವಿಶ್ರಾಂತಿಗೆಂದು ಒಂದು ಹೊಟೇಲ್ ಬಂದು ತಲಪುತ್ತಾರೆ. ಹೊಟೇಲ್ ಯಜಮಾನ ಅವರನ್ನು ಕಂಡೊಡನೆ ಬಹಳ ಗೌರವಾದರಪೂರ್ವಕವಾಗಿ ಅವರನ್ನು ಎದುರ್ಗೊಳ್ಳುತ್ತಾನೆ. ಎರಡು ಮೂರು ಸೇವಕರೂ ಅಲ್ಲಿ ಬಂದು ಮುಟ್ಟಿದರು. ಅವರು ಅತಿಥಿಗಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾರೆ.
ಆಕರ್ಷಕವಾಗಿ ಸಿಂಗರಿಸಿದ ರೂಮು. ನಿಮಿಷಗಳಲ್ಲೇ ಆ ಸೇವಕರು ಆಹಾರ ಪದಾರ್ಥಗಳನ್ನು ತಂದಿಡುತ್ತಾರೆ. ಅಪ್ಪ ಮಕ್ಕಳ ವಸ್ತ್ರಗಳನ್ನು ಸಂತೋಷದಿಂದ ಒಗೆಯಲಿಕ್ಕೆಂದು ತೆಗೆದುಕೊಂಡು ಒಯ್ಯುತ್ತಾರೆ. ಅದನ್ನು ಚೆನ್ನಾಗಿ ಒಗೆದು, ಇಸ್ತ್ರಿ ಹಾಕಿ ಹಿಂದೆ ಕೊಟ್ಟರು. ಸ್ನಾನಕ್ಕೆ ಬಿಸಿ ನೀರು ಕೊಡುತ್ತಾರೆ. ಹೀಗೆ, ಅವರಿಗೆ ಏನೆಲ್ಲ ಬೇಕೋ, ಎಲ್ಲ ಮಾಡಿಕೊಟ್ಟರು. ರಾತ್ರಿ ಹೊಟೇಲ್‌ನ ಗಾಯಕಿಯೂ ಗಾಯಕನೂ ಇವರಿಗಾಗಿ ಹಾಡುತ್ತಾರೆ ಮತ್ತು ವೀಣೆ ಬಾರಿಸುತ್ತಾರೆ. ಬೆಳಿಗ್ಗೆ ತಂದೆಯೂ ಮಕ್ಕಳೂ ಹೊರಡಲು ತಯಾರಾಗುತ್ತಾರೆ. ಮಕ್ಕಳು ಹೇಳುತ್ತಾರೆ “ಅಪ್ಪ, ಎಷ್ಟು ಪ್ರೀತಿಯಿರುವ ಜನಗಳಿವರು.” ಉತ್ತರ ಹೇಳುವ ಮೊದಲೇ ಒಬ್ಬ ಪರಿಚಾರಕ ಒಳಗೆ ಬಂದು ಹೊಟೇಲ್ ಬಿಲ್ಲು ಕೊಟ್ಟ.
ತಂದೆ ಮಕ್ಕಳಿಗೆ ಹೇಳಿದ “ನಿನ್ನೆ ಅವರು ನಮಗೆ ತೋರಿಸಿದ ಪ್ರೀತಿಗೂ ಸೇವೆಗೂ ಒಟ್ಟಿಗೆ ಸೇರಿಸಿ ಕೊಟ್ಟ ಬಿಲ್ಲು ಇದು. ಅವರು ಮಾಡಿದ ಒಂದೊಂದು ಕೆಲಸಕ್ಕೂ ಬೇರೆ ಬೇರೆ ಮೊಬಲಗು ವಸೂಲು ಮಾಡಿದ್ದಾರೆ.” ಅವರ ಪ್ರೀತಿಯು ಸ್ವಾರ್ಥ ಕಾಮನೆಗಳ ತಳಹದಿಯ ಮೇಲೆ ನಿಂತಿತ್ತು.
ನಲ್ಮೆಯ ಮಕ್ಕಳೇ, ಈ ರೀತಿಯದಾಗಿದೆ ಪ್ರೀತಿ. ಜನಗಳು ಪರಸ್ಪರ ಪ್ರೀತಿ ತೋರಿಸುವುದು ಕೂಡ ತಮ್ಮ ಸ್ವಾರ್ಥಕ್ಕಾಗಿ. ನಿಜವಾದ ಪ್ರೀತಿ ಪರಮಾತ್ಮನಿಂದ ಮಾತ್ರ ನಮಗೆ ಸಿಗುವುದು. ಭಗವಂತನು ಪ್ರೇಮ ಸ್ವರೂಪನು. ಇದು ತಿಳಿದಿರಲಿ ಮಕ್ಕಳೇ. ದೇವರನ್ನು ಆರಿತುಕೊಳ್ಳಿ. ನಮ್ಮೊಳಗೆ ಹುದುಗಿರುವ ನಮ್ಮದೇ ಸಂಪತ್ತಾದ ಈ ಸತ್ವದ ಪೂರ್ತಿ ಪ್ರಯೋಜನ ಪಡೆಯೋಣ. ಇದು ಮರೆಯದಿರಿ ಮಕ್ಕಳೇ.