ಮಕ್ಕಳೇ, ಕಲಿಯುತ್ತಿರುವಕಾಲದಲ್ಲಿ ಹುಡುಗರಿಗೆ ಲಕ್ಷ್ಯಬೋಧವಿದ್ದರೂ ಅವರ ಮನಸ್ಸು ಹೆಚ್ಚಾಗಿ ಆಟಗಳಲ್ಲೂ, ಇನ್ನಿತರ ಆಮೋದ ಪ್ರಮೋದಗಳಲ್ಲೂ ಇರುತ್ತದೆ. ಆ ಕಾಲಘಟ್ಟದಲ್ಲಿ ತಂದೆಯೂ ತಾಯಿಯೂ ಬೈತಾರೆ. ಓದಿಕೊಂಡು ಹೋಗದಿದ್ದರೆ ಸರ್ ಹೊಡೆಯುತ್ತಾರಂತ ಹೆದರಿಕೆಯಿಂದ ಮಾತ್ರವೇ ಅವರು ಕಲಿಯುವುದು. ಆದರೆ ಹತ್ತನೇ ಕ್ಲಾಸ್ ಪಾಸಾದ ಮೇಲೆ, “ನನಗೆ ಎಂ.ಬಿ.ಬಿ.ಎಸ್.ಗೆ ಹೋಗಬೇಕು, ರ‍್ಯಾಂಕ್ ತೆಗೆದು ಪಾಸಾಗಬೇಕು” ಎಂಬ ಪರಿಜ್ಞಾನ ಬರುವುದು. ಆಗ ಅವರು ಚೆನ್ನಾಗಿ ಓದುತ್ತಾರೆ. ಯಾರು ಬಯ್ಯದೆಯೂ ಹೊಡೆಯದೆಯೂ ವಿದ್ಯಾಭ್ಯಾಸಕ್ಕೆ ಗಮನಕೊಡುತ್ತಾರೆ. ಸಿನೆಮ ನೋಡಲು ಹೋಗುವುದಿಲ್ಲ; ಹೆಚ್ಚು ನಿದ್ದೆ ಮಾಡುವುದಿಲ್ಲ. ಆದರೆ ಅಲ್ಲಿಯ ತನಕ ತಂದೆ ತಾಯಂದಿರ, ಅಧ್ಯಾಪಕರ ಭಯದಿಂದ ಅವರು ಓದಿರುವುದು. ಈ ಭಯ ದುರ್ಬಲತೆಯಲ್ಲ. ನಮ್ಮ ಶ್ರದ್ಧೆಯನ್ನು ಎಚ್ಚರಿಸಲು ಒಬ್ಬ ಗುರು ಅವಶ್ಯ. ಯಾರದ್ದಾದರೂ ಕೈಕೆಳಗೆ ಅವರನ್ನು ಅನುಸರಿಸಿ ಬದುಕ ಬೇಕಾಗುತ್ತದೆ. ನಮ್ಮೊಳಗಿನ ಗುರು ಎಚ್ಚರಗೊಂಡಮೇಲೆ ಸ್ವಂತ ವಿವೇಚನೆಯಿಂದ ಕಾರ್ಯವೆಸಗುವ ಸಕ್ಷಮತೆ ನಮ್ಮಲ್ಲಿ ಉಂಟಾಗುತ್ತದೆ. ಅಲ್ಲಿಯವರೆಗೆ ಒಂದು ಗುರುವಿನ ಸಹಾಯ ಅತ್ಯಗತ್ಯ.

ಮಕ್ಕಳೇ, ನನ್ನಲ್ಲಿ ಎಲ್ಲಾ ಇದೆಯೆಂದು ಹೇಳಿಕೊಂಡು ಬೀಜ ಉಗ್ರಾಣದಲ್ಲೇ ಉಳಿದರೆ ಬರೇ ಇಲಿಗೆ ಅಹಾರಮಾತ್ರವಾಗಿ ಪರಿಣಮಿಸುವುದು. ಮಣ್ಣಿನಡಿಗೆ ಹೋದರೆಯೇ ಅದರ ಯಥಾರ್ಥ ಸ್ವರೂಪ ನಿಜವಾಗಿ ಹೊರಗೆ ಬರುವುದು. ಅದೇರೀತಿ ನಮ್ಮ ಅಹಂಕಾರ ನಶಿಸಬೇಕಾದರೆ ದಾಸತ್ವ ಎನ್ನುವುದು ಬೇಕು. ಓರ್ವ ಗುರುವಿನ ಕೈಕೆಳಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸಾಧನೆ ನಡೆಸಬೇಕು.

ಕ್ಷಮೆ (ಸಹಿಷ್ಣುತೆ; ತಾಳ್ಮೆ), ಸಮಾಧಾನ, ದಾಸತ್ವ ಇದ್ದರೆ ಮಾತ್ರ ನಮಗೆ ದೇವರನ್ನು ತಿಳಿದುಕೊಳ್ಳಲು ಸಾಧ್ಯ. ಹಾವಸೆಹಿಡಿದ ಬಂಡೆಕಲ್ಲಮೇಲೆ ನಡೆಯಬೇಕಾದರೆ ಜಾರಿ ಬೀಳದ ಹಾಗೆ ನಾವು ಎಷ್ಟು ಜಾಗ್ರತೆ ವಹಿಸಬೇಕೋ ಅಷ್ಟೇ ಜಾಗ್ರತೆ ನಮಗೆ ಜಗತ್ತಿನ ಪ್ರತಿಯೊಂದು ವಸ್ತುವಿನ ಮೇಲೂ ಇರಬೇಕು. ಇಲ್ಲದಿದ್ದರೆ ಯಾವ ನಿಮಿಷವೂ ನಾವು ಜಾರಿ ಬೀಳಬಹುದು. ದೇವರನ್ನು ಅರ್ಥಮಾಡಿಕೊಂಡರೆ ಮಾತ್ರವೇ ಇತರರಿಗೆ ಶಾಂತಿ ಸಮಾಧಾನ ನೀಡ ಬಹುದು

ಮಕ್ಕಳೇ, ದೇವರನ್ನರಿಯಲು ಗುರು ಅತ್ಯಾವಶ್ಯ. ಗುರುವಚನದಲ್ಲಿ ಧೃಡ ವಿಶ್ವಾಸವಿರಬೇಕು. ಮಕ್ಕಳು ಕೇಳಬಹುದು, ಅದು ಅಂಧವಿಶ್ವಾಸವಲ್ಲವೇ ಎಂದು. ಖಂಡಿತವಾಗಿಯೂ ಅಲ್ಲ. ಮಕ್ಕಳೇ, ಈ ಪ್ರಪಂಚವೇ ನೆಲೆನಿಂತಿರುವುದು ವಿಶ್ವಾಸದ ಮೇಲೆ. ಒಂದು ಯುವಕನಿಗೆ ತನ್ನ ಮಗಳನ್ನು ಕೊಟ್ಟು ಧಾರೆಯೆರೆದು ಕೊಡುವುದು ಅವನು ತನ್ನ ಮಗಳನ್ನು ಸಾಕಿ ಸಲಹುತ್ತಾನೆ ಎಂಬ ವಿಶ್ವಾಸದಿಂದಲ್ಲವೇ ? ಹೊಟೇಲಲ್ಲಿ ನಾವು ಆಹಾರ ಪದಾರ್ಥಗಳನ್ನು ಸೇವಿಸುವುದು ಅದರಲ್ಲಿ ವಿಷದ ಅಂಶವಿಲ್ಲವೆಂಬ ಭರವಸೆಯಿಂದಲ್ಲವೇ ? ಸಮುದ್ರ ಈ ಕಡೆ ಬರುವುದಿಲ್ಲ ಎಂಬ ವಿಶ್ವಾಸದಿಂದಲ್ಲವೆ ನಾವು ತೀರದಲ್ಲಿ ಮನೆ ಕಟ್ಟಿ ವಾಸಮಾಡುವುದು ?

ತನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಇತರರಿಂದ ಶಿಕ್ಷಣ ಸ್ವೀಕರಿಸಲೋ, ಅಥವಾ ಇನ್ನೊಬ್ಬರಿಗೆ ವಿಧೇಯನಾಗಿರಲಿಕ್ಕೋ ಕೆಲವರು ಇಷ್ಟಪಡದಿರಬಹುದು. ಶಿಸ್ತಿನಿಂದೊಡಗೂಡಿದ ಜೀವನಕ್ರಮ, ತಿದ್ದುವಿಕೆ, ಯಾವುದೂ ಆ ಮಕ್ಕಳಿಗೆ ಇಷ್ಟವಿಲ್ಲ. ಅವರು ತಮ್ಮಿಷ್ಟ ಪ್ರಕಾರ ಜೀವಿಸುತ್ತಲೂ, “ನಾನು ಬ್ರಹ್ಮನ್” ಎಂದು ತಾವೇ ಹೇಳುತ್ತಲೂ ಇರುತ್ತಾರೆ. ಅದು ದುರ್ಬಲತೆ ಮಕ್ಕಳೇ. ಅನುಭವದ ಸ್ತರದಲ್ಲಿ ಅವರಿಂದ ಏನು ಸಂಪಾದಿಸಲೂ ಸಾಧ್ಯವಿಲ್ಲ.

ಎರಡು ತರದ ಕೋಳಿಗಳ ಬಗ್ಗೆ ಕೇಳಿಲ್ಲವೇ ? ನಾಟಿ ಕೋಳಿ ಮತ್ತು ಇಂಗ್ಲಿಷ್ ಕೋಳಿ. ತಾಯಿ ಕೋಳಿಯ ಕಾವಿನಿಂದ ಹೊರಬರುವ ಕೋಳಿ ಮರಿಗಳು ಪ್ರಕೃತಿಯನ್ನು ಜಯಿಸುವ ಸಾಮರ್ಥ್ಯದೊಂದಿಗೆ ಬೆಳೆಯುತ್ತಿರುತ್ತವೆ. ಅದಕ್ಕೆ ಪ್ರತ್ಯೇಕ ಗೂಡೂ ಬೇಡ; ಅಹಾರವೂ ಬೇಡ. ಬಿಸಿಲಾಗಲಿ, ಮಳೆಯಾಗಲಿ – ಅದಕ್ಕೇನೂ ಸಮಸ್ಯೆಯಲ್ಲ. ರಾತ್ರಿ ಯಾವುದೋ ಮರದ ಕೊಂಬೆ ಮೇಲೇರಿ ಮಲಗಿಕೊಳ್ಳುತ್ತವೆ. ಆದರೆ ಇಂಗ್ಲಿಷ್ ಕೋಳಿಯ ಕಥೆಯೋ ? ಕೃತಕ ಸನ್ನಿವೇಶಗಳಲ್ಲಿ ಅವುಗಳು ಬೆಳೆದು ಬಂದಿರುವುದು. ಅವುಗಳಿಗೆ ಪ್ರಕೃತಿಯನ್ನು ಜಯಿಸಲು ಸಾಧ್ಯವಾಗುವುದಿಲ್ಲ. ಚಳಿ ಹಿಡಿದರೆ ಸತ್ತು ಬಿಡುವುದು. ಬಿಸಿಲು, ಮಳೆ ಎಲ್ಲ ಅದಕ್ಕೆ ಸಮಸ್ಯೆಯೇ. ಇದೇ ನಿಜವಾದ ಗುರುವಿನಿಂದ ಶಿಕ್ಷಣ ಪಡೆಯದಿರುವವರ ಕಥೆ. ಅಡ್ಡಿ ಆತಂಕಗಳು ಎದುರಾದಾಗ ಬಸವಳಿದು ಬೆಂಡಾಗುತ್ತಾರೆ, ಎಚ್ಚರ ತಪ್ಪಿ ಬೀಳುತ್ತಾರೆ.

ಆದರೆ, ಗುರುಸನ್ನಿಧಿಯಲ್ಲಿ ಬೆಳೆದು ಜ್ಞಾನ ಸಂಪಾದಿಸಿದವರ ಕಥೆ ನೇರ ವಿರುದ್ಧ ಮಕ್ಕಳೇ. ನಾಟಿ ಕೋಳಿಗಳ ಹಾಗೆ ಅವರು. ಯಾವುದೇ ಪ್ರತಿಕೂಲ ಸನ್ನಿವೇಶವನ್ನೂ ಎದುರಿಸಲು ಅವರಿಗೆ ಸಾಧ್ಯ. ಲಕ್ಷ್ಯಬೋಧದಿಂದ, ನಿಷ್ಠೆಯಿಂದ ಎಂದೂ ಅವರು ವಿಚಲಿತರಾಗುವುದಿಲ್ಲ.

ಹಾರಲಾಗದ ಮರಿಗಳನ್ನು ತಾಯಿಕೋಳಿಯು ರೆಕ್ಕೆಯಡಿಯಲ್ಲಿರಿಸಿ ಬೆಳೆಸುವ ಹಾಗೆ ನಿಜವಾದ ಗುರು ತನ್ನ ಶಿಕ್ಷಣದಲ್ಲಿ ಬೆಳೆಯುವವರನ್ನು ಕಾಯುತ್ತಾನೆ. ಕ್ಷುಲ್ಲಕ ತಪ್ಪುಗಳನ್ನೂ ಬೆರಳು ಮಾಡಿ ತೋರಿಸಿ ತಿದ್ದುವನು. ಇನಿತು ಅಹಂಕಾರವೂ ಚಿಗುರಲು ಬಿಡನು. ಅದಕ್ಕೆ ಬೇಕಾಗಿ ಗುರುಗಳವರು ಕೆಲವೊಮ್ಮೆ ಕ್ರೂರವಾಗಿ ವರ್ತಿಸುತ್ತಿರುತ್ತಾರೆ.

ಒಬ್ಬ ಕಮ್ಮಾರನು ಕಾಯಿಸಿದ ಕಬ್ಬಿಣದ ತುಂಡನ್ನು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆಯಿಂದ ಎತ್ತಿ ಎತ್ತಿ ಹೊಡೆಯುವಾಗ ಅದನ್ನು ನೋಡುವವರು ಅಂದುಕೊಳ್ಳಬಹುದು “ಇವನಂಥ ಕ್ರೂರರು ಎಲ್ಲೂ ಇಲ್ಲ” ಎಂದು. ಆದರೆ ಆ ಕಬ್ಬಿಣದ ತುಂಡಿನಮೇಲೆ ಒಂದೊಂದು ಹೊಡೆತ ಬೀಳುವಾಗಲೂ ಅದರಿಂದ ಮೈ ತಾಳುವ ಹೊಸ ರೂಪದ ಕುರಿತಾಗಿರುತ್ತದೆ ಆ ಕಮ್ಮಾರನ ಯೋಚನೆ. ಹೀಗೇ ಇರುತ್ತಾನೆ ಯಥಾರ್ಥ ಗುರು ಕೂಡ. ಯಥಾರ್ಥ ಗುರುಗಳು ಸತ್ಯವನ್ನು ಅರಿತವರಾಗಿರುತ್ತಾರೆ. ಅವರುಗಳ ಮಾತನ್ನನುಸರಿಸಿ ನಡೆದರೆ ದೇವರನ್ನು ಮುಟ್ಟುವೆವು.

“ಗುರುವಿಲ್ಲದೆಯೂ ಭಗವದ್ಸಾಕ್ಷಾತ್ಕಾರ ಸಾಧ್ಯವಿಲ್ಲವೇ” ಎಂದು ಕೇಳಬಹುದು. ಸಾಧ್ಯವಿದೆ ಮಕ್ಕಳೇ. ಆದರೆ ಅದಕ್ಕೆ ಪೂರ್ವ ಜನ್ಮದ ಸಂಸ್ಕಾರ ಬೇಕು.

ಕಾಶ್ಮ್ಮೀರದಲ್ಲಿ ಧಾರಾಳ ಸೇಬು ಬೆಳೆಯುತ್ತಾರೆ. ನಾವು ಒಂದು ಸೇಬಿನ ಗಿಡ ನೆಟ್ಟರೂ ಮೊಳಕೆಯೊಡೆಯುತ್ತದೆ; ಬೆಳೆಯಲೂ ಬಹುದು. ಆದರೆ ಬಹಳ ಅಪರೂಪಕ್ಕೆ ಕಾಯಿ ಬಿಡುವುದು. ಕಾಯಿ ಬಿಟ್ಟರೂ ಕಾಯಿಗಳು ಬಹಳ ಕಮ್ಮಿಯೇ; ಬಹಳ ಜಾಗ್ರತೆ ಕೂಡ ವಹಿಸಬೇಕಾಗುತ್ತದೆ. ಸೇಬಿನ ಗಿಡದ ಬೆಳವಣಿಗೆಗೆ ಕಾಶ್ಮ್ಮೀರದ ಹವಾಮಾನ ಪ್ರಶಸ್ತವಿದ್ದಂತೆ, ಲಕ್ಷ್ಯಬೋಧವಿರುವ ಸಾಧಕನಿಗೆ ಗುರುವಿನ ಸನ್ನಿಧಿ. ನಿಜವಾದ ಸದ್ಗುರು ಇರುವವನಿಗೆ ಪ್ರತ್ಯೇಕವಾಗಿ ಬೇರೊಬ್ಬ ದೇವರಿಲ್ಲ; ಗುರುವೇ ದೇವರು, ದೇವರೇ ಗುರು. ಆದಕಾರಣ ಭಕ್ತಿಯಿಂದ ದೇವರಿಗೆ ಅಥವ ಗುರುವಿಗೆ ಅತ್ತು ಪ್ರಾರ್ಥಿಸಿರಿ. ಎರಡೂ ಕೈಗಳನ್ನು ಚಾಚಿ ಅವನು ನಮ್ಮನ್ನು ಸ್ವೀಕರಿಸುವನು. ಭಕ್ತಿಯಿಲ್ಲದ ಜ್ಞಾನ ಬಂಡೆಕಲ್ಲನ್ನು ತಿನ್ನುವ ಹಾಗೆ. ಅತ್ತು ಪ್ರಾರ್ಥಿಸುವುದಕ್ಕಿಂತಲೂ ಬೇರೆ ದೊಡ್ಡ ಶಾಸ್ತ್ರವಿಲ್ಲ. ಆ ಭಕ್ತಿಯ ಮಾಧುರ್ಯ – ಅದು ಬೇರೆಯೇ ಮಕ್ಕಳೇ.