ಪ್ರಶ್ನೆ: ಕೃಷ್ಣ ಭಕ್ತನು ದೇವಿಯ ಸಹಸ್ರನಾಮ ಜಪಿಸುವುದು ಒಳ್ಳೆಯದೇ ?
“ಯಾರು ಇಷ್ಟದೇವನೋ, ಆ ದೇವನ ಮಂತ್ರ ಜಪಿಸಬೇಕು. ಸಹಸ್ರನಾಮವೂ ಹಾಗೆಯೇ. ಕೋಗಿಲೆಯನ್ನು ನವಿಲೆಂದು ಕರೆದರೆ ಕೋಗಿಲೆ ಬರುವುದೇ ? ಆದರೆ ಒಂದು ಮಾತು. ಪ್ರತಿ ಹಕ್ಕಿಗೂ ನವಿಲೆಂದು, ಕೋಗಿಲೆಯೆಂದು ಅಥವಾ ಬೇರಿನ್ನೇನೋ ಹೆಸರಿಟ್ಟಿರುವುದು ಮನುಷ್ಯನು. ಆದಕಾರಣ ಪ್ರತಿಯೊಂದನ್ನು ನೋಡುವಾಗಲೂ ಅದರ ಹೆಸರು ಹೀಗೆಂದು ನಾವು ಯೋಚಿಸುತ್ತೇವೆ. ಇದೇ ಪ್ರಕಾರ ದೇವರಿಗೆ ರೂಪವನ್ನೂ ನಾಮವನ್ನೂ ನೀಡಿರುವವರು ನಾವು. ಸತ್ಯಕ್ಕೆ ರೂಪವೂ ನಾಮವೂ ಇಲ್ಲ.
ನಮ್ಮ ಹಾಗೆ ಶಬ್ದ ಕೇಳಿ ತಿರುಗಿ ನೋಡುವ ವ್ಯಕ್ತಿಯಲ್ಲ ಈಶ್ವರ. ದೇವರು. ಒಂದು ಮಾತು ನಾವು ಮನಸ್ಸಲ್ಲಿ ಊಹಿಸಿಕೊಳ್ಳುವ ಮೊದಲೇ ಅವನಿಗೆ ಗೊತ್ತಾಗಿ ಬಿಡುತ್ತದೆ. ಆದಕಾರಣ ನಾವು ಯಾವ ಹೆಸರಲ್ಲಿ ಕರೆದರೂ ಅವನಿಗೆ ಗೊತ್ತಾಗುವುದು ತನ್ನನ್ನೇ ಕರೆಯುವುದೆಂದು. ಕೆಲವು ಮನೆಗಳಲ್ಲಿ ತಾಯಿಯನ್ನು ಮಕ್ಕಳು ’ಅಕ್ಕಾ” ಎಂದು ಕರೆಯುವುದನ್ನು ಕೇಳಿಲ್ಲವೇ ? ನನ್ನನ್ನು ಹಾಗೆ ಕರೆಯಬಾರದು; ’ಅಮ್ಮ’ನೆಂದು ಕರೆಯಬೇಕೆಂದು ಹೇಳಿ ತಾಯಿ ಕೋಪ ಮಾಡಿಕೊಳ್ಳುವುದಿಲ್ಲವಲ್ಲ. ತಾಯಿಗೆ ಕರೆ ಕೇಳುತ್ತಿರುತ್ತದೆ. ಇದರಂತೆ ಯಾವ ಹೆಸರು ಕರೆದರೂ ದೇವರು ಸ್ವೀಕರಿಸುವನು. ಅವನು ಸರ್ವಜ್ಞ.
ಒಲವಿನ ಮಕ್ಕಳೇ, ಒಂದೊಂದು ಹೆಜ್ಜೆ ಇಡುವಾಗ ನಾಮ ಜಪಿಸಲಿಕ್ಕೂ, ಸದಾ ಅವನ ರೂಪ ಸ್ಮರಿಸಲಿಕ್ಕೂ ಮರೆಯದಿರಿ. ಅವನು ರಕ್ಷಿಸುತ್ತಾನೆ.”
ಪ್ರಶ್ನೆ: ಗುಣಾತೀತನಾದ ದೇವರು ಗುಣಗಳಿಗೆ ಹೇಗೆ ಬರಲು ಸಾಧ್ಯ ? ಅವತಾರ ಪುರುಷರು ಬೇರೆಯವರನ್ನು ಪ್ರೀತಿಸುವುದೂ, ಅವರಲ್ಲಿ ಕರುಣೆ ತೋರಿಸುವುದೂ ಇತ್ಯಾದಿ ಮಾಡುವಾಗ, ಅವರು ಗುಣದ ಸ್ತರದಲ್ಲಲ್ಲವೇ ಇರುವುದು ?
ಭಗವಂತನು ಗುಣಾತೀತನೇ. ಅವನು ಚಲಿಸುವುದಿಲ್ಲ. ಅವನು ಆ ಸ್ವರೂಪವಾಗಿಯೇ ನೆಲೆನಿಂತಿರುತ್ತಾನೆ. ಸೂರ್ಯನ ಸ್ವಭಾವ ಬೆಳಕು. ಅವನು ಯಾರಿಗೂ ಪ್ರತ್ಯೇಕವಾಗಿ ಬೆಳಕು ನೀಡುವುದಿಲ್ಲ. ಮರೆ ಸರಿಸಿದಾಗ ನಿಮಗೂ ಬೆಳಕು ಸಿಗುವುದು. ದೇವರೆಂದರೆ ಒಂದು ವೃಕ್ಷದ ಹಾಗೆ. ಅದರ ಸ್ವಭಾವ ನೆರಳೂ ತಂಪೂ. ಅಲ್ಲಿ ಮುಟ್ಟಿದರೆ ನಿಮಗೂ ಅದು ದೊರಕುವುದು. ಇದೇ ತರಹ ಅವತಾರ ಪುರುಷರು ನಿಮಗೆ ಬೇಕಾಗಿ ಮಾತ್ರ ಕೃಪೆ ಸುರಿಸುವುದಲ್ಲ. ಹಾಗೆ ಆಗಿರುತ್ತಿದ್ದರೆ ದೇವರು ಗುಣಗಳ ಸ್ಥರಕ್ಕೆ ಬರುತ್ತಾನೆಂದು ಹೇಳಬಹುದಾಗಿತ್ತು. ಎಲ್ಲ ಗುಣಗಳೂ ಅವನದ್ದೇ, ಆವನು ಯಾವಾಗಲೂ ಆ ಗುಣಗಳನ್ನು ಸುರಿಸುತ್ತಿರುತ್ತಾನೆ. ಬೆಳಕು ಸಿಗಲು ನಾವು ಪರದೆಯನ್ನು ಸರಿಸುವಂತೆ, ನೆರಳೂ ತಂಪೂ ಸಿಗಲು ಮರದ ಬುಡ ತಲಪುವಂತೆ, ನಾವು ಭಗವಂತನ ಬಳಿ ಸಾರಿದರೆ ಅವನ ಗುಣಗಳು ನಮಗೆ ಹಬ್ಬುತ್ತದೆ.
ಪ್ರೇಮವು ಭಗವಂತನ ಸ್ವಭಾವ. ಗುಣಾತೀತನಾದ ಭಗವಂತನ ಸಾಮೀಪ್ಯದಲ್ಲಿ ನಿಮಗಿದೆಲ್ಲ ಲಭಿಸುವುದು. ಆದರೆ ಭಗವಂತನು ನಿಮಗೆ ಬೇಕಾಗಿ ಗುಣಗಳಿಗೆ ಇಳಿದು ಬರುತ್ತಾನೆಂದು ಹೇಳಲು ಬರುವುದಿಲ್ಲ. ಗುಣಗಳ ಸ್ತರಕ್ಕೆ ಹೋಗುತ್ತಾನೆಂದೂ ಹೇಳಲು ಸಾಧ್ಯವಿಲ್ಲ. ಭಗವಂತನೆಂದಿಗೂ ತನ್ನ ಲೋಕದಲ್ಲೇ ನೆಲೆಸಿರುತ್ತಾನೆ.
ಮಿಠಾಯಿ ನೋಡುವಾಗ ಮಕ್ಕಳಿಗೆ ಬಾಯಲ್ಲಿ ನೀರೂರುತ್ತದೆ. ಅದು ಅವರು ಮಿಠಾಯಿ ಮುಂಚೆಯೇ ರುಚಿ ನೋಡಿರುವ ಕಾರಣ. ರುಚಿ ನೋಡದ ಒಂದು ವಸ್ತು ಕಂಡಾಗ ನಿಮ್ಮ ಬಾಯಿಯಿಂದ ನೀರು ಬರುವುದಿಲ್ಲ. ಮಾಗಿದ ಮಾವಿನ ಹಣ್ಣನ್ನು ನೋಡಿದಾಗ, ಅದರ ಪರಿಮಳ ಒಳಗೆಳೆದುಕೊಂಡಾಗ, ಗೊತ್ತಿಲ್ಲದೆಯೇ ನಿಮಗದರಲ್ಲಿ ಆಸಕ್ತಿಯುಂಟಾಗುತ್ತದೆ. ಮೊದಲು ಅದನ್ನು ತಿಂದಿರುವುದೇ ಈ ತರಹವಾಗಲು ಕಾರಣ. ಅದರ ಬಗ್ಗೆ ಯೋಚಿಸಿದಾಗಲೇ ನಿಮಗೆ ಬಾಯಿಯಿಂದ ನೀರೂರಿದ್ದು. ಇದರಂತೆ, ಮಹಾತ್ಮರನ್ನು ನೋಡುವಾಗ ಆಂತರ್ಯದ ಸಂಸ್ಕಾರ ನಿಮಗರಿಯದೆ ಎಚ್ಚೆತ್ತುಕೊಳ್ಳುತ್ತದೆ. ನೀವು ಆ ಸಂಸ್ಕಾರದ ಮಾಲಕರು. ನೀವು ಅದರ ರುಚಿ ತಿಳಿದಿದ್ದಿರಿ. ಆದರೆ ಅದು ಎಚ್ಚರವಾದದ್ದು ಮಹಾತ್ಮರ ಸಾಮೀಪ್ಯದಿಂದ ಮಾತ್ರ. ಅದು ಬಿಟ್ಟು, ಅವರು ಗುಣಕ್ಕೆ ಬರುವುದಿಲ್ಲ.”