ಪ್ರಶ್ನೆ: ಅಮ್ಮಾ, ಈಶ್ವರನು* ಒಬ್ಬನೇ ಎಂದಾದರೆ ಯಾಕಾಗಿ ಅವನನ್ನು ಶಿವ, ವಿಷ್ಣು ಎಂದಿತ್ಯಾದಿಯಾಗಿ ಪೂಜಿಸುತ್ತಾರೆ ?

“ಮಕ್ಕಳೇ, ನಟನು ಎಷ್ಟೋ ವೇಷಗಳನ್ನು ಹಾಕುತ್ತಾನೆ. ಆದರೆ ಅವನಲ್ಲಿ ಏನೊಂದು ವ್ಯತ್ಯಾಸವೂ ಇಲ್ಲ. ಈಶ್ವರನೂ ಅದೇ ಪ್ರಕಾರ. ವಿವಿಧ ರೂಪಗಳು, ಅಲಂಕಾರಗಳು, ವೇಷಗಳು, ಹೆಸರುಗಳು – ಆದರೆ ಸತ್ಯ ಒಂದು. ಅದರ ವಿವಿಧ ಭಾಗಗಳು, ಬೇರೆಲ್ಲ. ಮನುಷ್ಯರು ಹಲವು ತರದವರು. ಸ್ವಭಾವಗಳೂ ಹಲವು. ಅವರವರ ಮನಸ್ಸಿಗೆ ಸರಿ ಹೊಂದುವ ರೂಪವನ್ನು ಹಾಗೂ ನಾಮವನ್ನು ಸ್ವೀಕರಿಸಿ ಈಶ್ವರನನ್ನು ಪ್ರಾಪ್ತಿಸುವ ಸಲುವಾಗಿ ಋಷಿಶ್ರೇಷ್ಠರು ಹಲವು ಈಶ್ವರ ಪ್ರತೀಕಗಳಿಗೆ ರೂಪ ನೀಡಿದರು. ಹಾಗಲ್ಲದೆ ಈಶ್ವರ ಅನೇಕ ಅಲ್ಲ, ಒಂದು.”

ಪ್ರಶ್ನೆ: ಅಮ್ಮಾ, ಮಾಡನನ್ನೂ (ಭಯಂಕರ ರೂಪದ, ಕೇರಳದಲ್ಲಿ ಆರಾಧಿಸಲ್ಪಡುವ, ಒಂದು ಸ್ಥಾನೀಯ ದೇವತೆ), ಯಕ್ಷಿಯನ್ನೂ ಕ್ಷೇತ್ರ**ಗಳಲ್ಲಿ ಇಟ್ಟಿರುವುದು ಯಾಕಾಗಿ ?

“ಮಾಡನ್, ಯಕ್ಷಿಯರೆಲ್ಲ ನಮ್ಮ ಸ್ವಭಾವದ ಪ್ರತೀಕಗಳು. ನಮಗೆ ಇಷ್ಟವಿಲ್ಲದ ಒಬ್ಬರನ್ನು ಕಂಡಾಗ ಕೋಪ ಬರುತ್ತದೆ. ಅವರನ್ನು ಕೊಲ್ಲಲು ಕೂಡ ಮನಸ್ಸಾಗ ಬಹುದು. ಕೋಪದಿಂದ ನಾವು ಅವರೆದುರಿಗೆ ಗಂಟಲು ಹರಿದುಹೋಗುವಂತೆ ಚೀರಾಡಬಹುದು. ಇದು ನಮಲ್ಲೇ ಇರುವ ಮಾಡನ್‌ನ ಸ್ವಭಾವ. ಹೀಗೆ, ನಮ್ಮ ಬೈಯ್ಯುವ ಅಥವಾ ಒಳ್ಳೆಯ ಸ್ವಭಾವಗಳ ಪ್ರತೀಕಗಳು ಈ ದೇವತೆಗಳು.”

ಪ್ರಶ್ನೆ: ಪರಮಾತ್ಮನು ಒಬ್ಬನೇ ಎಂದು ಅಮ್ಮ ಹೇಳಿದಿರಲ್ಲವೇ? ಹಾಗಿದ್ದಮೇಲೆ, ಕ್ರಿಶ್ಚನ್ನವರಿಗೂ ಮುಸಲ್ಮಾನರಿಗೂ ಹಾಗೂ ಅಂತಹ ಬೇರೆ ಮತ(ಧರ್ಮ)ಸ್ಥರಿಗೂ , ಭಿನ್ನವಾದ ಆರಾಧನೆಯ ಕೇಂದ್ರಗಳು ಮತ್ತು ಸಂಪ್ರದಾಯಗಳು ಯಾಕೆ ಇವೆ ?

“ಮಕ್ಕಳೇ, ಒಂದು ವಸ್ತುವಿಗೆ ಹಲವು ಹೆಸರು ಬಂದಾಕ್ಷಣ ವಸ್ತು ಬದಲಾಗುತ್ತದೆಯೇ ? ಉದಾಹರಣೆಗೆ, ನಾವು ಹಾಲು ಎಂದು ಹೇಳುವ ವಸ್ತುವು ಆಂಗ್ಲರಿಗೆ ’ಮಿಲ್ಕ್’ ಆಗುತ್ತದೆ. ಹಿಂದಿಯಲ್ಲಿ ’ದೂಧ್’ ಎಂದು ಕರೆಯುತ್ತಾರೆ. ಇನ್ನಿತರ ಭಾಷೆಯವರು ಅವರವರ ಭಾಷೆಯಲ್ಲಿ ಹೇಳುತ್ತಾರೆ. ಹೆಸರುಗಳು ಹಲವಾದ ಕಾರಣ ಹಾಲಿನ ಹೊಳಪು, ಗುಣಧರ್ಮಗಳಲ್ಲಿ ವ್ಯತ್ಯಾಸವಾಗುವುದೇ ? ಇಲ್ಲ. ಇದೇ ರೀತಿ ನಾವು ’ಸಕ್ಕರೆ’ ಎಂದು, ತಮಿಳಿನಲ್ಲಿ ’ಚೀನಿ’ ಎಂದು ಕರೆದಾಗ ಸಕ್ಕರೆಯ ಹೊಳಪೂ, ಗುಣಧರ್ಮವೂ ಬದಲಾಗುವುದಿಲ್ಲ. ಕ್ರಿಶ್ಚಿಯನ್ನವರು ದೇವರನ್ನು ’ತಂದೆಯೇ’ ಎಂದು ಕರೆಯುತ್ತಾರೆ. ಮುಸಲ್ಮಾನರು ’ಅಲ್ಲಾ’ ಎಂದು ಹೇಳುತ್ತಾರೆ. ಕೃಷ್ಣನ ಚಿತ್ರವನ್ನೇ ತೆಗೆದುಕೊಳ್ಳೋಣ. ಕೇರಳದಲ್ಲಿ ಚಿತ್ರ ಬರೆಯುವ ಹಾಗಲ್ಲ ಉತ್ತರ ಭಾರತದಲ್ಲಿ. ಅವರ ಕೃಷ್ಣನಿಗೆ ತಲೆ ಪಟ್ಟಿ ಇತ್ಯಾದಿ ಇದೆ. ಆದರೆ ಕೃಷ್ಣನಲ್ಲಿ ವ್ಯತ್ಯಾಸವಿದೆಯೇ? ಬಲ್ಬ್ನಲ್ಲಿ ಹರಿಯುವ ಕರೆಂಟಿಗೆ ಮತ್ತು ಫ್ರಿಜ್ನಲ್ಲಿ ಹರಿಯುವ ಕರೆಂಟಿಗೆ ವ್ಯತ್ಯಾಸವಿದೆಯೇ? ಇಲ್ಲ, ಅಲ್ಲವೇ? ಉಪಾಧಿಯಲ್ಲಿ ಮಾತ್ರ ವ್ಯತ್ಯಾಸ.

ಪ್ರತಿಯೊಬ್ಬರೂ ತಮ್ಮ ತಮ್ಮ ಸಂಸ್ಕಾರಕ್ಕನುಗುಣವಾಗಿ ದೇವರನ್ನು ಗ್ರಹಿಸುತ್ತಾರೆ. ಅದಕ್ಕನುಗುಣವಾಗಿ ಸಾಧನಾ ಸಂಪ್ರದಾಯಗಳನ್ನು ಅಂಗೀಕರಿಸುತ್ತಾರೆ. ಮಹಾತ್ಮರು ಕಾಲಾವಸ್ಥೆಗನುಗುಣವಾಗಿ ಏಕವಾದ ಪರಮಾತ್ಮ ತತ್ತ್ವವನ್ನು ಜನಗಳ ಅಭಿರುಚಿಗನುಗುಣವಾಗಿ ವ್ಯಕ್ತಗೊಳಿಸುಸುತ್ತಾರೆ.”

* ಮಲೆಯಾಳದಲ್ಲಿ ದೇವರನ್ನು ಸೂಚಿಸಲು “ಈಶ್ವರ” ಎಂಬ ಶಬ್ದವನ್ನು ಸಾಮಾನ್ಯವಾಗಿ ಬಳಸುತ್ತಾರೆ
**ದೇವಸ್ಥಾನ