ಮಕ್ಕಳೇ, ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಸಾಗುವುದಿಲ್ಲ. ಲೌಕಿಕ ಗುರಿಯು ಎಲ್ಲರಿಗೂ ಇರುತ್ತದೆ. ಆದರೆ ಅವೊಂದೂ ನಮಗೆ ಪೂರ್ಣತೆ ನೀಡುವುದಿಲ್ಲ. ಆದಕಾಆರಣ ದೇವರನ್ನೇ ಗುರಿಯಾಗಿಟ್ಟು ಮುಂದಕ್ಕೆ ಸಾಗಿರಿ.

ಮಕ್ಕಳೇ, ದೇವರೆಲ್ಲಿ ಎಂದು ಕೇಳಬಹುದು. ಹುಡುಕಿರಿ, ನಿಶ್ಚಯವಾಗಿಯೂ ಕಾಣಿಸುತ್ತಾನೆ. ನಾವು ಅನ್ನುತ್ತೇವೆ, “ಕಾಣದಿರುವುದನ್ನು ನಂಬುವುದಿಲ್ಲ” ಎಂದು. ಅಜ್ಜನನ್ನು ಕೆಲವು ಚಿಕ್ಕಮಕ್ಕಳು ನೋಡಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಅವರು ಅಪ್ಪನನ್ನು “ತಂದೆಯಿಲ್ಲದವನು” ಎಂದೇನು ಕರೆಯುವುದು? ಭಗವಂತನು ಸರ್ವವ್ಯಾಪಿ. ಅವನು ಎಲ್ಲದರಲ್ಲೂ ನೆಲೆನಿಂತಿರುವನು. ಸೆಗಣಿಯನ್ನು ಉಪಯೋಗಿಸಬೇಕಾದ ರೀತಿಯಲ್ಲಿ ಉಪಯೋಗಿಸಿದಾಗ ಅದರಲ್ಲಿ ಅಡಕವಾಗಿರುವ ಶಕ್ತಿಯಿಂದ ಬೆಂಕಿ ಹತ್ತಿಕೊಳ್ಳುತ್ತದೆ. ಇದೇ ರೀತಿ ದೇವರ ಶಕ್ತಿ ನಮ್ಮಲ್ಲಿ ವಾಸ ಮಾಡಿಕೊಂಡಿದೆ. ಪ್ರಯೋಗಿಸಬೇಕಾದ ರೀತಿಯಲ್ಲಿ ಪ್ರಯೋಗಿಸಿದಲ್ಲಿ ಕಾಣಬಹುದು. ಗುಡಿಸಲಿನ ಸಣ್ಣ ರಂಧ್ರದಿಂದ ಬಿಸಿಲು ಬೀಳುವಾಗ ಬೇಕಷ್ಟು ಧೂಳಿನ ಕಣಗಳನ್ನು ಕಾಣಬಹುದು. ಕೋಣೆ ತುಂಬ ಧೂಳಿನ ಕಣಗಳಿವೆ; ಬೆಳಕಿಲ್ಲದಿರುವುದರಿಂದ ಕಾಣಿಸುವುದಿಲ್ಲ. ಮಬ್ಬು ಮನಸ್ಸು ನಮ್ಮದು. ಅದಕ್ಕೆ ಸೂಕ್ಷ್ಮತೆಯಿಲ್ಲ. ಬ್ಯಾಟ್ರಿ ಚಾರ್ಜ್ ಮಾಡುವ ಹಾಗೆ ಸೂಕ್ಷ್ಮತೆಯಿಂದ ನಮ್ಮ ಮನಸ್ಸಿನೊಳಗೆ ಬೆಳಕುಂಟಾಗುವಂತೆ ಮಾಡಿ. ಆಗ ದೇವರನ್ನು ಕಾಣಬಹುದು. ಹೊರತು, ಬಾಹ್ಯಕಣ್ಣುಗಳಿಂದ ನೋಡಲೆತ್ನಿಸಿ, “ಈಶ್ವರ ಕಾಣಿಸುವುದಿಲ್ಲ. ಆದಕಾರಣ ನಂಬುವುದಿಲ್ಲ. ಕಂಡದ್ದನ್ನು ಮಾತ್ರವೇ ನಂಬುವುದು” ಎಂದು ಮಕ್ಕಳು ಗೊಂದಲ ಎಬ್ಬಿಸಬೇಡಿ. ಒಂದೇ ಆದ ಆತ್ಮನಲ್ಲಿ ನಂಬಿಕೆ ಇಡಿ. ಎಲ್ಲಾ ಸಿಗುವುದು.

ಒಂದು ದಿನ ಇಬ್ಬರು ಮೀನು ಹಿಡಿಯಲು ಹಿನ್ನೀರಲ್ಲಿಳಿದರು.* ಒಂದು ಪೊದೆಯ ಹತ್ತಿರ ಬಂದು ನಿಂತುಕೊಂಡು ಒಂದನೆಯವನು ಹೇಳಿದ: “ನಾನಿಲ್ಲಿ ಈ ಪೊದೆ ಸುತ್ತುಗಟ್ಟಿ ಮೀನು ಹಿಡಿಯುತ್ತೇನೆ. ನೀನು ಬರುತ್ತೀಯ?” ಎರಡನೆಯವನು ಹೇಳಿದ: “ನಾನು ಬರುವುದಿಲ್ಲ. ನಿಂತರೆ ಇದು ಸಂಜೆತನಕದ ಕೆಲಸ. ಏನೂ ಸಿಗದಿದ್ದರೆ ನನ್ನ ಮಕ್ಕಳು ಉಪವಾಸವಿರಬೇಕಾಗುತ್ತದೆ. ಅಲ್ಲದೆ ನನಗೆ ಬೇರೆ ಸಾಕಾಗಿದೆ. ಬೇರೆ ಕಡೆ ನೋಡುತ್ತೇನೆ”. ಇಷ್ಟು ಹೇಳಿ ಅವನು ಹೋದ.

ಒಂದನೆಯವನು ಅಲ್ಲಿ ಕೂತು ಪೊದೆಗಳ ಸುತ್ತಲು ಒಡ್ಡು ಕಟ್ಟಲು  ಶುರು ಮಾಡಿದ. ಮಣ್ಣು ಬಾಚಿ ತೆಗೆದು ಒಡ್ಡು ನಿಲ್ಲಿಸಿ ನೀರು ಬರಿದು ಮಾಡಲು ಹೆಣಗಿದ. ಕೈಯಲ್ಲಿ ಪಾತ್ರೆಯೂ ಇಲ್ಲ. ಕೈ ಬೊಗಸೆಯಿಂದಲೇ ನೀರು ಖಾಲಿ ಮಾಡತೊಡಗಿದ. ಕಟ್ಟೆಗಳು ಕುಸಿದವು. ಅವನು ಹಿಂಜರಿಯಲಿಲ್ಲ. ಬೇರೆ ಯಾವುದರದ್ದೂ ಅರಿವಿಲ್ಲದೆ, ತಾಳ್ಮೆಯಿಂದ, ಯಾವ ಭಾವೋದ್ವೇಗವೂ ಇಲ್ಲದೆ ತನ್ನ ಕೆಲಸ ಮುಂದುವರಿಸಿದ. ಸಾಯಂಕಾಲವಾಗುತ್ತ ನೀರು ಖಾಲಿಯಾಗಿ ಯಥೇಚ್ಛ ಮೀನು ಸಿಕ್ಕಿತು. ಆ ಸಮಯಕ್ಕೆ ಎರಡನೆಯವನು ಬರಿಗೈಯಲ್ಲಿ ಅಲ್ಲಿ ಬಂದು ಮುಟ್ಟಿದ. ಒಂದನೆಯವನು ಅವನಿಗೆ ಬೇಕಾದಷ್ಟು ಮೀನು ಕೊಟ್ಟ. ನಂಬಿಕೆಯೂ ತಾಳ್ಮೆಯೂ ಇದ್ದವನಿಗೆ ಬೇರೆಯವರನ್ನೂ ರಕ್ಷಿಸಲು ಸಾಧ್ಯವಾಯಿತು. ನಂಬಿಕೆಯಿಲ್ಲದವನಿಗೆ ಏನೂ ಇಲ್ಲ. ನಮ್ಮೊಳಗೆ ಎಲ್ಲ ಇದೆ. ಮಾಡಬೇಕಾದ ರೀತಿಯಲ್ಲಿ ಕಾರ್ಯಪ್ರವೃತ್ತರಾದರೆ ಸಾಕು. ನಂಬಿಕೆ ಇದ್ದರೆ ಎಲ್ಲಿದ್ದರೂ ಸಾಕು; ಬೇಕಾದದ್ದೆಲ್ಲವನ್ನೂ ಭಗವಂತನು ಅಲ್ಲೇ ತಲಪಿಸುವನು. ಇದೇ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು.

——-

  • *ಅಮ್ಮನ ಅಮೃತಪುರಿಯ ಆಶ್ರಮ ಇರುವುದು ನಿಸರ್ಗ ರಮಣೀಯವಾದ ದ್ವೀಪದಲ್ಲಿ. ಪಶ್ಚಿಮಕ್ಕೆ ಸಮುದ್ರ. ಅಲ್ಲಿಂದ ಸುಮಾರು ನೂರಿನ್ನೂರು ಮೀಟರ್ ಪೂರ್ವದಲ್ಲಿ ನೀಲಿ-ಹಸಿರಿನ ಹಿನ್ನೀರು ಕಾಲುವೆ. ಅಲ್ಲಲ್ಲಿ ಈ ಕಾಲುವೆ ಹಳ್ಳಿಯೊಳಗೆ ಹರಿದು ಕೆಲವು ಸಲ ಅಲ್ಲೇ ಸ್ಥಾಯಿಯಾಗಿ,ಆಳವಿಲ್ಲದ, ಚಿಕ್ಕ ಪುಟ್ಟ ಕೊಳಗಳಾಗಿ ನಿಲ್ಲುತ್ತದೆ. ಇಲ್ಲಿಯ ಉದಾಹರಣೆ ಇಂತಹ ಹಿನ್ನೀರಿನ ಹಳ್ಳಗಳಿಗೆ ಸಂಬಂಧಿಸಿದ್ದು. ಇವುಗಳ ಸುತ್ತ ಉಪ್ಪು ನೀರಿನಲ್ಲಿ ಬೆಳೆಯುವ ಒಂದು ವಿಶಿಷ್ಟ ವೃಕ್ಷ – ಮ್ಯಾನ್‌ಗ್ರೋವ್ ಮರ – ಗಳ ಪೊದೆಗಳು ದಡದ ಹತ್ತಿರ, ಆದರೆ ನೀರಲ್ಲಿ ಬೆಳೆಯುತ್ತವೆ.

    ದಡದ ಹತ್ತಿರ ಇರುವ ಎರಡು ಪೊದೆಗಳ  ನೀರನ್ನು ಆವರಿಸುವ ಹಾಗೆ ಮಣ್ಣಿನ ಒಡ್ಡನ್ನು ನಿರ್ಮಿಸುತ್ತಾರೆ. ಒಂದು ಪೊದೆಯಿಂದ ಇನ್ನೊಂದಕ್ಕೆ ಹೋಗಿ, ಈ ಒಡ್ಡು ಎರಡೂ ಪೊದೆಗಳನ್ನು ಬಳಸಿ ದಡ ಮುಟ್ಟಿದಾಗ ಒಂದು ನೀರಿನ ಆವರಣ ಉಂಟಾಗುತ್ತದೆ – ಇದರೊಳಗಿನ ನೀರು ಖಾಲಿಯಾದಾಗ ಮೀನುಗಳು ಕೆಳಗೆ ಕೆಸರಲ್ಲಿ ಉಳಿದುಕೊಳ್ಳುತ್ತವೆ. ಆಗಿನ ಕಾಲದಲ್ಲಿ, ಇಲ್ಲಿನ ಬಡಜನರಿಗೆ ಇದೊಂದು ಮೀನು ಹಿಡಿಯುವ ವಿಧಾನ.