ಆಕಾಶ ಮೀರಿದ ಯಾವುದೇ ಮರ ಇಲ್ಲ, ಪಾತಾಳ ಮೀರಿದ ಯಾವುದೇ ಬೇರೂ ಇಲ್ಲ. ರೂಪಗಳಿಗೆಲ್ಲ ಒಂದು ಮೇರೆಯಿದೆ. ಅದಕ್ಕೂ ಆಚೆ ನಾವು ತಲಪಬೇಕಾದದ್ದು. ಅದಕ್ಕೊಂದು ಉಪಾಧಿ ಬೇಕು. ನಾವು ತೆಂಗಿನಮರ ಹತ್ತಬೇಕಾದರೆ ಏಣಿ ಬೇಕು. ಅದೇ ಕಸಬಿನವರಿಗೆ ಏಣಿ ಬೇಡ. ಅವತಾರಗಳು ಪೂರ್ಣರಾಗಿಯೇ ಬರುತ್ತಾರೆ. ಅವರಿಗೆ ಯಮ ನಿಯಮಗಳು ಬೇಕೆಂದಿಲ್ಲ. ಅವರು ಆ ಸಂಸ್ಕಾರದಿಂದ ಬಂದಿರುತ್ತಾರೆ. ನಾವು ಹಾಗೆ ಮಾಡಬೇಕು ಮಕ್ಕಳೇ. ನಾವು ಯಾಕಾಗಿ ಧ್ಯಾನ ಮಾಡುತ್ತೇವೋ ಅದು ಸಿದ್ಧಿಸಿಯೇ ತೀರುತ್ತದೆ. ಕುಂಕುಮ ಕಲೆಸಿದ ಒಂದು ಪಾತ್ರೆಯಲ್ಲಿ “ವೆಟ್ಟಪಚ್ಚ” ಸಸಿಯನ್ನು ಸ್ವಲ್ಪ ಹೊತ್ತು ಬಿಟ್ಟರೆ ಅದು ಕೆಂಪಾಗುತ್ತದೆ; ಹಸುರು ಬದಲಾಗುತ್ತದೆ. ಅದರಂತೆಯೇ ನಾವು ಏನುಬೇಕೆಂದು ಧ್ಯಾನ ಮಾಡುತ್ತೇವೋ ಅದಾಗಿ ಬಿಡುತ್ತೇವೆ.
ನೆಚ್ಚಿನ ಮಕ್ಕಳೇ, ಇದಕ್ಕೆ ದಾಸತ್ವ ಬೇಕು. ಮಾಡಿನಮೇಲೆ ಎಷ್ಟು ನೀರು ಬಿದ್ದರೂ ಅದಲ್ಲಿ ನಿಲ್ಲುವುದಿಲ್ಲ. ತಗ್ಗಿನಲ್ಲಾದರೆ ಎಲ್ಲಿಂದ ಹೋಗುವ ನೀರೂ ಅದರಲ್ಲಿ ತಾನಾಗಿಯೇ ಬಂದು ಬೀಳುತ್ತದೆ. ನಾನು ಎಂಬ ಭಾವನೆಯನ್ನು ಬಿಡಿ. “ನಾನು ಯಾರೂ ಅಲ್ಲ. ನಾನು ನಿನ್ನಯ ದಾಸ. ನೀನೇ ನನ್ನನ್ನು ರಕ್ಷಿಸು.” ಎಂದು ಪ್ರಾರ್ಥಿಸಿರಿ. ಭಗವಂತನು ರಕ್ಷಿಸುವನು.
ನಮ್ಮ ಜೀವನದ ಗುರಿ ಆತ್ಮ ಸಾಕ್ಷಾತ್ಕಾರವಾಗಿದೆಯೆ ಹೊರತು ಶರೀರ ಸಾಕ್ಷಾತ್ಕಾರವಲ್ಲ. ನಾವು ಶರೀರವೆಂದು ಕಲ್ಪಿಸುವಾಗ ದುಃಖ ಮಾತ್ರವೇ ಇರುವುದು. ನಾನು ಆತ್ಮನೆಂದು ಭಾವಿಸಿ. ಎಲ್ಲದರಲ್ಲೂ ನಾನೆ; ಎಲ್ಲವೂ ನನ್ನಲ್ಲೇ ಇದೆ. ಮತ್ತೆ ಯಾಕೆ ದುಃಖಿಸಬೇಕು? ಬೇರೆಯಾಗಿ ಏನೂ ಇಲ್ಲ. ನಾವು ಒಂದು, ಎರಡಲ್ಲ. ಆಗ ದುಃಖವಿಲ್ಲ. ನಿದ್ದೆಯಲ್ಲಿ ಹೆಂಡತಿಯೆಂದೋ, ಮಕ್ಕಳೆಂದೋ, ನಿನ್ನೆಯೆಂದೋ, ಇವತ್ತೆಂದೋ ಏನೂ ಇಲ್ಲ; ಇದೆಲ್ಲ ಒಂದು ಕಾಣ್ಕೆ ಮಾತ್ರ.
ಸಿನೆಮ ಥೇಟರ್ ಮುಟ್ಟಿ ಅಲ್ಲಿ ಎಷ್ಟು ನೂಕು ನುಗ್ಗಲಿದ್ದರೂ ಕೋಪವಿಲ್ಲದೆ ಟಿಕೇಟು ಕೊಂಡುಕೊಳ್ಳುತ್ತೇವೆ. ಸಿನೇಮ ನೋಡಲಿಕ್ಕಿರುವ ಆಸೆ ಅಷ್ಟಿರುತ್ತದೆ. ಲಕ್ಷ್ಯಬೋಧವಿದ್ದರೆ ಇದುಯಾವುದೂ ಕಷ್ಟವಲ್ಲ; ಅಸ್ವಸ್ಥತೆಯಲ್ಲ; ತ್ಯಾಗವಲ್ಲ. ಹಾಗೆಯೆ, ದೇವರ ಕುರಿತು ಚಿಂತನೆ ಮಾಡಬೇಕಾದರೆ ಲೋಕದ ದುಃಖಗಳು ನಮಗೆ ಭಾರವಲ್ಲ. ಭಗವಂತನನ್ನು ಲಕ್ಷ್ಯವಾಗಿಟ್ಟುಕೊಂಡರೆ ದುಃಖವಿಲ್ಲ. ಆ ಆನಂದದ ಬಗ್ಗೆ ಕಲ್ಪಿಸಿಕೊಳ್ಳುವಾಗ ಯಾವುದೂ ಯಾತನೆಯಲ್ಲ. ಆದಕಾರಣ ನಾವು ಭಗವಂತನನ್ನು ಸ್ಮರಿಸೋಣ.
ಮುಪ್ಪಡರುವಾಗ ತಾಯಂದಿರು ಹೇಳುತ್ತಾರೆ, “ಅವನು ನನ್ನನ್ನು ನೋಡಿಕೊಳ್ಳುತ್ತಾನೆಂದು ಭಾವಿಸಿದೆ; ಇವಳು ನೋಡಿಕೊಳ್ಳುತ್ತಾಳೆಂದು ಯೋಚಿಸಿದೆ; ಈಗ ಯಾರೂ ನೋಡಿಕೊಳ್ಳುತ್ತಿಲ್ಲ. ನನ್ನನ್ನು ಕೊಂದರು, ನನ್ನ ಹಣ ದೋಚಲಿಕ್ಕೆ ನೋಡುತ್ತಿದ್ದಾರೆ.” ಇದು ತಿಳಿದುಕೊಳ್ಳಿ ಮಕ್ಕಳೇ. ಬಸ್‌ಸ್ಟಾಪ್‌ನಲ್ಲಿ ನಿಂತಿರುವಾಗ ಎಲ್ಲರೂ ನಮ್ಮ ಸಂಬಂಧಿಕರೆಂದು ತೋರುತ್ತದೆ. ಬಸ್ಸಿಗೆ ಹತ್ತಿದ ನಂತರ ಅವರೆಲ್ಲ ಅವರವರ ಸ್ಟಾಪ್‌ನಲ್ಲಿಳಿದು ಹೋಗುತ್ತಾರೆ. ನಾವು ಮಾತ್ರ ಬಾಕಿಯಾಗುತ್ತೇವೆ. ಇದುವೇ ಜೀವನ.
ಪ್ರೀತಿಯ ಮಕ್ಕಳೇ, ಸಮಯ ಪೋಲು ಮಾಡಬೇಡಿ. ಪ್ರತಿಯೊಂದು ಕೆಲಸದಲ್ಲೂ ಮಂತ್ರ ಜಪಿಸಿರಿ. ಎತ್ತಿನಂತೆ ಜನಿಸಿ ಆಯಿತು, ಗಾಡಿ ಎಳೆದರೆ ಮಾತ್ರ ಸಾಲದು ಹೊಡೆತವೂ ತಿನ್ನಬೇಕು. ಇದನ್ನು ಅರ್ಥ ಮಾಡಿಕೊಂಡು ಮಕ್ಕಳು ಜೀವಿಸಿರಿ. ಈಶ್ವರನನ್ನು ನಿರಂತರ ಜಪಿಸಿರಿ. ದೇವರು ನಮ್ಮನ್ನು ಕಾಪಾಡುವನು.