ಆಕಾಶದಲ್ಲಿರುವ ಒಂದು ದೇವರನ್ನು ಕುರಿತೋ, ಪಾತಾಳದಲ್ಲ್ಲಿರುವ ಒಂದು ದೇವಿಯ ಬಗ್ಗೆಯೋ ಅಲ್ಲ ಅಮ್ಮ ಹೇಳುತ್ತಿರುವುದು. ಎಲ್ಲರಲ್ಲೂ ದೇವರಿದ್ದಾನೆ. ಆದರೆ ನೀವು ಆ ಚೈತನ್ಯವನ್ನು ದುರ್ವಿನಿಯೋಗ ಮಾಡುತ್ತಿದ್ದೀರಿ. ನೀವಿಂದು ಸೊನ್ನೆ ವ್ಯಾಟ್ಟಿನ ಬಲ್ಬಾಗಿದ್ದರೆ, ತಪಸ್ಸಿನಿಂದ ಅದನ್ನು ಸಾವಿರದ್ದನ್ನಾಗಿ ಮಾರ್ಪಡಿಸಲು ಸಾಧ್ಯವಿದೆ. ಒಬ್ಬ ಸಾಮನ್ಯ ವ್ಯಕ್ತಿ ಇಬ್ಬರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಾದರೆ ನಿಮಗೆ ಕೋಟಿ ಜನರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಿದೆ. ನಿಮ್ಮ ಶಕ್ತಿಯಲ್ಲಿ ಯಾವೊಂದು ಕೊರತೆಯೂ ಉಂಟಾಗುವುದಿಲ್ಲ. ಆದಕಾರಣ ನಿಮ್ಮಲ್ಲಿರುವ ಶಕ್ತಿಯನ್ನು ವೃದ್ಧಿಸಿ, ನೀವು ನಿಮ್ಮೊಳಗೆ ಹೋಗಿರಿ.
ಇಂದು ಸಮಾಜ ನಶಿಸುತ್ತಿದೆ. ವಿಶೇಷವಾಗಿ ಯುವಕರು. ನೀವು ಬೇಕು; ಲೋಕಸೇವೆಗಾಗಿ ಇಳಿಯ ಬೇಕು ನಿಮ್ಮಂತಹ ಎಳೆವಯಸ್ಸಿನ ಯುವಕರು. ನೀವು ಚಿಂತನೆ ಮಾಡಿದರೆ ಸಮಾಜವನ್ನು ಸ್ವಲ್ಪವಾದರೂ ಉದ್ಧಾರ ಮಾಡಬಹುದು. ಆದಕಾರಣ ಸೇವೆ ಮಾಡಬೇಕೆಂಬ ಅಭಿಲಾಷೆ ಇದ್ದಲ್ಲಿ, ಜನತೆಯ ಪ್ರತಿ ಕರುಣೆ ಇದ್ದರೆ, ಜಗತ್ತಿಗಾಗಿ ಪ್ರೇಮ ಇರುವುದಾದರೆ ನೀವು ಧೈರ್ಯದಿಂದ ಮುಂದೆ ಬರಬೇಕು. ಭಗವಂತನಿಗೆ ಏನೂ ಕೊಡಬೇಡಿ. ಜನರನ್ನು ಭಗವಂತನ ಛಾಯಾಛತ್ರದಡಿಯಲ್ಲಿ ಬಿಸಿಲು ಬೀಳದ ಹಾಗೆ ನಿಲ್ಲಿಸಿರಿ. ಅದೇ ಬೇಕಾಗಿರುವುದು; ಅದು ನಮ್ಮ ಕರ್ತವ್ಯ.