ಒಂದು ಊರಿನಲ್ಲಿ ಒಳ್ಳೆಯವರಾದ ಇಬ್ಬರು ವ್ಯಕ್ತಿಗಳಿದ್ದರೆ ಸಾಕು, ಎಷ್ಟೊ ಜನರನ್ನು ಪರಿವರ್ತಿಸಲು ಸಾಧ್ಯವಿದೆ. ಇವತ್ತಿನ ಎರಡೂ ತಲೆಮಾರುಗಳು ನಶಿಸಿ ಹೋಗುತ್ತಿವೆ. ಯುವಕರು ಹೆಂಡಕ್ಕೂ, ಗಾಂಜಕ್ಕೂ, ಹೆಣ್ಣಿಗೂ ಅಡಿಯಾಳಾಗಿ ಸ್ವತಃ ಅಧೋಗತಿಗಿಳಿದಿದ್ದಾರೆ. ಅವರಿಗೆ ಅದರಲ್ಲಿ ಆನಂದ ದೊರಕುವುದಾದರೆ ಅವುಗಳನ್ನು ಉಪೇಕ್ಷಿಸಬೇಕೆಂದು ಅಮ್ಮ ಹೇಳುತ್ತಿಲ್ಲ.

ಒಂದು ವರ್ಷವೆಲ್ಲ ಸೇದಿದ ನಂತರ ಮುಂದಿನ ವರ್ಷ ಅದರ ಎರಡು ಪಟ್ಟು ಸೇದಬೇಕಾಗುತ್ತದೆ; ಅಂದರೆ ಮಾತ್ರ ಮೊದಲು ಸಿಕ್ಕಿದಷ್ಟು ಆನಂದ ಸಿಗುವುದು. ನಾಲ್ಕೈದು ವರ್ಷಗಳು ಕಳೆದ ಮೇಲೆ ಎಷ್ಟೇ ಸೇದಿದರೂ ಏನೂ ಅನಿಸುವುದಿಲ್ಲ. ಕಡೆಗೆ ಕುರೂಪಿಗಳಾಗುತ್ತಾರೆ, ನಡುಗುತ್ತಾರೆ ಸುಸ್ತಾಗಿ ಬೀಳುತ್ತಾರೆ. ಅವರ ಆರೈಕೆ ಮಾಡಲು ಬೇರೆಯವರು ಬೇಕಾಗುತ್ತದೆ. ಚುಚ್ಚುಮದ್ದು ಚುಚ್ಚಿ ಸಂತೃಪ್ತಿ ಪಡೆಯುವವರಿದ್ದಾರೆ. ಮೊದಲು ಸಿಕ್ಕಷ್ಟು ಸಂತೃಪ್ತಿ ಪಡೆಯಲು ಪ್ರತಿ ವರ್ಷವೂ ಚುಚ್ಚುಮದ್ದಿನ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಕೊನೆಗೆ ಎಷ್ಟು ತೆಗೆದುಕೊಂಡರೂ ಪ್ರಯೋಜನ ಸಿಗದು. ಎಷ್ಟು ಚುಚ್ಚಿಕೊಂಡರೂ ಪರಿಣಾಮವಾಗುವುದಿಲ್ಲ, ಅದೂ ಅಲ್ಲದೆ ತಲೆಯ ಸ್ಥಿಮಿತ ತಪ್ಪುವಂತೆಯೂ ಮಾಡುವುದು.

ಈ ವಸ್ತುಗಳಿಂದೆಲ್ಲ ಆನಂದ ಸಿಗುವುದಾದರೆ, ಗಾಂಜಾದಿಂದಲೋ ಚುಚ್ಚುಮದ್ದಿನಿಂದಲೋ ಯಾವಾಗಲೂ ಆನಂದ ಸಿಗಬೇಕಾಗಿತ್ತಲ್ಲ ? ಹಾಗಿಲ್ಲ. ಹಾಗಿದ್ದರೆ ಈ ಮದ್ದುಗಳು ಶರೀರದೊಳಹೊಕ್ಕು ಏನು ಮಾಡುತ್ತವೆ?
ತಲೆಯ ನರಗಳನ್ನು ಮರಗಟ್ಟಿಸುತ್ತದೆ; ಯಾವುದೋ ಜಗತ್ತು ಪ್ರವೇಶಿಸಿದಂತೆ ತೋರುತ್ತದೆ. ಆಗ ಅನಿಸುತ್ತದೆ, “ಇದೇ ಆನಂದ; ಎಲ್ಲ ಮರೆಯಲಿಕ್ಕೆ ಸಾಧ್ಯವಾಗುತ್ತದೆ” ಎಂದು. ಕೊನೆಗೆ, ನೂರು ವರ್ಷಗಳ ತನಕ ಬದುಕಿರಬೇಕಾದವನು ಇಪ್ಪತ್ತೈದು ವರ್ಷದಲ್ಲೇ ಸಾಯುತ್ತಾನೆ; ಇಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗೆ ಬದುಕಿರುವುದರಲ್ಲಿ ಲೋಕಕ್ಕೇನಾದರೂ ಪ್ರಯೋಜನ ಇದೆಯೇ? ಇರುವುದು ಬರೇ ತೊಂದರೆ ಮಾತ್ರ. ಅವರನ್ನು ನೆನೆದುಕೊಂಡು ತಂದೆ ತಾಯಂದಿರು ದುಃಖಿಸುತ್ತಾರೆ; ಕುಟುಂಬ ಕಣ್ಣೀರಲ್ಲಿ ಮುಳುಗುತ್ತದೆ.

ಅಮಲಿನ ಅಡಿಯಾಳಾಗಿ ಊರಲ್ಲಿ ಗಲಭೆ ಶುರು ಮಾಡುವವರಿಗೆ ಅದೆಲ್ಲದರಿಂದ ಆನಂದವೋ ಸುಖವೋ ಸಿಗುತ್ತದೆ ಎಂದಿದ್ದರೆ ಪರವಾಗಿರಲಿಲ್ಲ. ಆದರೆ ಅವರೆ ನಾಶವಾಗುತ್ತಿರುತ್ತಾರೆ. ಅವರ ಚಟಗಳು ಅವರನ್ನು ಬಾಧಿಸುತ್ತವೆ. ತಂದೆ ತಾಯಂದಿರಿಗೆ ದುಃಖ; ಸಮಾಜಕ್ಕೆ ದುಃಖ. ಇದೇ ಹೆಚ್ಚಿನ ಯುವಕರು ಸಮಾಜಕ್ಕಾಗಿ ಮಾಡುತ್ತಿರುವುದು.

ಲೋಕದ ಒಳಿತಿಗಾಗಿ ಕಾರ್ಯ ಪ್ರವೃತ್ತರಾಗಬೇಕಾದವರು ಎಳೆಯ ವಯಸ್ಸಿನಲ್ಲಿಯೇ ಮರಣಕ್ಕೆ ತುತ್ತಾಗುತ್ತಾರೆ. ಇಪ್ಪತ್ತೈದು ವರ್ಷ ತಂದೆ ತಾಯಿ ಕಷ್ಟಪಟ್ಟು ಸಾಕಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸಿಗುವುದು ಬದುಕಿನಾದ್ಯಂತ ಕಣ್ಣೀರು; ಸಮಾಜಕ್ಕೆ ಮರೆಯಾಲಾಗದ, ಗುಣವಾಗದ ಗಾಯ. ಹಾಗೆ ಅವರು ಮಣ್ಣಾಗುತ್ತಾರೆ. ಇದು ಮುಂದುವರೆದರೆ ನಮ್ಮ ತಲೆಮಾರು ಅಳಿದು ಹೋಗುವುದು. ಆದಕಾರಣ ನಿಮ್ಮಂತಿರುವ ಯುವಕರು ಸೇವೆಗಿಳಿದು ಇದಕ್ಕೊಂದು ಪರಿವರ್ತನೆ ತರಬೇಕು. ಒಳ್ಳೆ ಧೃಡ ಮನೋಬಲವಿರುವವರಿಂದ ಮಾತ್ರ ಇವತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯ. ಇಂದಿನ ವಿಷಮ ಸ್ಥಿತಿಗೆ ಉಳಿದಿರುವ ಒಂದೇ ಸಂಪೂರ್ಣ ಪರಿಹಾರ ಇರುವುದು ನಮ್ಮ ಭಾರತೀಯ ಶಾಸ್ತ್ರಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ. ಇಂದು ವಿಜ್ಞಾನವು ನಮ್ಮ ತತ್ವಗಳನ್ನು ಅಂಗೀಕರಿಸಿ, ಅಲ್ಲಿಂದ ಜ್ಞಾನವನ್ನು ಮುಂದಕ್ಕೊಯ್ಯುತ್ತಿದೆ. ಹಾಗಿರುವಾಗ ನಾವದನ್ನು ತುಳಿದು ಹೊಸಕದೇ, ಅದನ್ನು ಮೈಗೂಡಿಸಿಕೊಳ್ಳಲು ಶ್ರಮಿಸಬೇಕಾಗಿದೆ. ಸರ್ವ ಕಾಲಕ್ಕೂ ಬೇಕಾದ ಜ್ಞಾನ ಅದರೊಳಗಿದೆ. ಭೌತಿಕ ವಿಜ್ಞಾನವು ಏನೆಲ್ಲ ಕಂಡುಹಿಡಿದರೂ ಅವೆಲ್ಲವುಗಳಿಗಿಂತಲೂ ಅತೀತವಾದ, ಎಂದಿಗೂ ಅಳಿಯದೆ ಉಳಿದುಕೊಂಡಿರುವುದು ಭಾರತೀಯ ತತ್ವಶಾಸ್ತ್ರ ಒಂದೇ. ಅದನ್ನು ನೀವು ಸ್ವಲ್ಪ ಸರಿಯಾಗಿ ತಿಳಿದು, ಕಲಿತು, ಅದರೊಳಗಿನ ಸಾರವನ್ನು ಗ್ರಹಿಸಿ ಉಳಿದುದನ್ನು ಬಿಟ್ಟುಬಿಡಿ. ಹಾಗೆ ಆದರೆ ಅಮ್ಮನ ವಿರೋಧವಿಲ್ಲ. ಅದರಲ್ಲಿಯ ಯುಕ್ತವಾದುದನ್ನು ನೀವು ತೆಗೆದುಕೊಳ್ಳಿ; ನಿಮ್ಮ ಬುದ್ಧಿಗೆ ಸರಿ ಎಂದು ಕಂಡದ್ದನ್ನು ಸ್ವೀಕರಿಸಿ.