ಪ್ರಶ್ನೆ: ಅಮ್ಮಾ, ಕ್ಷೇತ್ರಗಳಲ್ಲಿ ಪೂಜೆ ನಿಲ್ಲಿಸಿದರೆ ಪ್ರತಿಕೂಲ ಪರಿಣಾಮವಾಗುತ್ತದೆಂದು ಹೇಳುತ್ತಾರೆ; ನಿಜವೇ ?

“ಮಕ್ಕಳೇ, ಮನುಷ್ಯನ ಸಂಕಲ್ಪದಿಂದಾಗಿ ದೆವತೆಗಳ ಶಕ್ತಿ ವೃದ್ಧಿಯಾಗುತ್ತಿರುತ್ತದೆ. ಪೂಜೆ ನಿಲ್ಲಿಸಿದರೆ, ಅದು ಕ್ಷೀಣಿಸುವುದು. ದೇವರು ಸರ್ವಶಕ್ತನು. ಅವನ ಶಕ್ತಿ ಹೆಚ್ಚಾಗುವುದಿಲ್ಲ; ಕಡಿಮೆಯಾಗುವುದಿಲ್ಲ. ಅದು ನಿತ್ಯವೂ ಶಾಶ್ವತ.ಆದರೆ ದೇವತೆಗಳ ಶಕ್ತಿ ಪ್ರತಿಷ್ಠಾಪನೆ ಮಾಡುವವರ ಭಾವನೆಯನ್ನವಲಂಬಿಸಿದೆ. ಕ್ಷೇತ್ರಗಳಲ್ಲೂ, ಕುಟುಂಬ ದೇವತೆಗಳ ಕ್ಷೇತ್ರಗಳಲ್ಲೂ ಪೂಜೆ ನಿಲ್ಲಿಸಬಾರದು. ನಿಲ್ಲಿಸಿದ್ದಾದರೆ ದೊಡ್ಡ ದೋಷಗಳು ಘಟಿಸಬಹುದು. ”

“ಮಕ್ಕಳೇ, ಒಂದು ಕಾಗೆಗೆ ನಾವು ಹತ್ತು ದಿವಸ ಆಹಾರ ಕೊಟ್ಟು ಅಭ್ಯಾಸಮಾಡಿದೆವೆಂದು ಇಟ್ಟುಕೊಳ್ಳೋಣ. ಹನ್ನೊಂದನೇ ದಿವಸ ಕೊಡದಿದ್ದರೆ ಅದು ನಮ್ಮ ಹಿಂದೆಯೇ ಕೂಗುತ್ತ ಬರುತ್ತದೆ. ಏಕಾಗ್ರತೆಯಿಂದ ಯಾವ ಕೆಲಸವನ್ನೂ ಮಾಡಲಿಕ್ಕೆ ನಮಗೆ ಆಗುವುದಿಲ್ಲ. ಇದೇ ರೀತಿಯಲ್ಲಿ, ನಿತ್ಯ ಪೂಜೆ ನಿಲ್ಲಿಸಿದರೆ ಸೂಕ್ಷ್ಮ ರೂಪದಲ್ಲಿ ಆ ದೇವತೆಗಳು ನಮ್ಮನ್ನು ಉಪದ್ರವಿಸುತ್ತಿರುತ್ತವೆ. ಸಾಧಕರನ್ನು ಇದು ಅಷ್ಟೊಂದಾಗಿ ಬಾಧಿಸುವುದಿಲ್ಲ.”

ಮಕ್ಕಳೇ, ದೋಣಿ ಕೊಂಡು ಕೊಂಡರೆ ಮಾತ್ರ ಸಾಲದು; ಹುಟ್ಟು ಹಾಕಲು ಕೂಡ ಕಲಿಯಬೇಕು. ಹುಟ್ಟುಹಾಕಲು ಗೊತ್ತಿಲ್ಲದೆ ದೊಣಿ ಏರಿದರೆ, ಅದು ಗುರಿಯಿಲ್ಲದೆ ಆ ಕಡೆಗೂ ಈ ಕಡೆಗೂ ಹೋಗುತ್ತಿರುತ್ತದೆ. ಹುಟ್ಟು ಹಾಕಲು ಗೊತ್ತಿರಲಾರದೆ, ದೋಣಿಯ ದೋಷ ಹೇಳುವುದು ಸರಿಯೇ ?

ಇದೇ ರೀತಿ ಕ್ಷೇತ್ರ ಕಟ್ಟಿಸಿದರೆ ಮಾತ್ರ ಸಾಲದು, ಅದನ್ನು ಕ್ರಮಬದ್ಧವಾಗಿ ನಡೆಸಲೂ ಬೇಕು. ನಿತ್ಯ ಪೂಜೆ ಮಾಡಬೇಕು. ಮಾಡದಿದ್ದರೆ ಕೋಲಾಹಲವಾಗಬಹುದು. ಅಂತಹ ವೇಳೆಯಲ್ಲಿ ಕ್ಷೇತ್ರದ ದೋಷ ಎಣಿಸಿ ಪ್ರಯೋಜನವಿಲ್ಲ.”

ಪ್ರಶ್ನೆ: ಹಾಗಾದರೆ ದೇವತೆಗಳೂ ದೇವರೂ ಬೇರೆ ಬೇರೆಯೇನು ?

“ದೇವತೆಗಳು ಮನುಷ್ಯನ ಸಂಕಲ್ಪದ ಸೃಷ್ಟಿ. ಮನುಷ್ಯನು ದೇವತೆಗಳನ್ನು ಪ್ರತಿಷ್ಠಾಪಿಸಿದವನು ಸಹ. ಮನುಷ್ಯನ ಸೃಷ್ಟಿಗೂ ಸಂಕಲ್ಪಕ್ಕೂ ಒಂದು ಪರಿಮಿತಿಗಳಿದೆ. ಆದಕಾರಣ ಮನುಷ್ಯನ ಸ್ವಭಾವವು ಅವನ ಸೃಷ್ಟಿಯಲ್ಲೂ ಪ್ರತಿಫಲಿಸುತ್ತದೆ. ಮಕ್ಕಳೇ, ಮನುಷ್ಯನ ಹಾಗೂ ಪ್ರಾಣಿಗಳ ನಡುವಿರುವ ವ್ಯತ್ಯಾಸದಂತೆಯೆ ದೇವರು ಹಾಗೂ ದೇವತೆಗಳ ನಡುವಿನ ವ್ಯತ್ಯಾಸ. ಆತ್ಮ ಎಲ್ಲಾ ಒಂದೇ ಆದರೂ, ಮನುಷ್ಯನ ಹಾಗೆ ನಾಯಿಗೆ ವಿವೇಚನೆಯಿಲ್ಲವಲ್ಲ. ತನ್ನನ್ನು ಪ್ರೀತಿಸುವವರನ್ನು ಮಾತ್ರ ನಾಯಿ ಪ್ರೀತಿಸುವುದು; ಉಳಿದವರನ್ನು ಕಚ್ಚುತ್ತದೆ.”

ಪ್ರಶ್ನೆ: ಆ ತರಹ ಆದರೆ, ಕ್ಷೇತ್ರಗಳು ಮನುಷ್ಯರಿಗೆ ದೋಷಕರವಾಗುತ್ತದಲ್ಲವೇ ?

“ಎಂದಿಗೂ ಇಲ್ಲ. ದೇವತಾ ಪೂಜೆ ನಡೆಸುವ ಕ್ಷೇತ್ರಗಳ ಕುರಿತಾಗಿ ಅಮ್ಮ ಹೇಳಿದ್ದು. ಸ್ವಲ್ಪ ಜಾಗ್ರತೆ ವಹಿಸುವ ಸಲುವಾಗಿ ಮಾತ್ರ. ಸ್ವಂತ ಪ್ರಾಣವನ್ನು ಕೂಡಾ ಚೆನ್ನಾಗಿ ನಿಲ್ಲಿಸಲು ಕೂಡದ ತಂತ್ರಿಗಳಲ್ಲವೇ ಪ್ರತಿಷ್ಠೆ ಮಾಡುವುದು ? ಅಂಥ ಕಡೆ ಪೂಜೆ ಎಂದೂ ನಿಲ್ಲಿಸಬಾರದು. ಗಾಜಿನ ಗೂಡಿನಲ್ಲಿ ನೀರಿಟ್ಟು ಮೀನು ಸಾಕುವುದನ್ನು ನೋಡಿಲ್ಲವೇ ? ಅವುಗಳು ಬದುಕಿರಲು ದಿನಾಲೂ ನೀರು ಬದಲಾಯಿಸಿಕೊಂಡಿರಬೇಕು. ಇಲ್ಲದಿದ್ದರೆ ತಪ್ಪಾಗುತ್ತದೆ. ಎಚ್ಚರಿಕೆಯಿಂದ ಪೂಜೆ ನಡೆಸಿದರೆ ಐಶ್ವರ್ಯ ಮತ್ತು ಸಮೃದ್ಧಿಯುಂಟಾಗುವುದು.

ಆದರೆ ಮಹಾತ್ಮರು ಇಲ್ಲವೆ ಜೀವನ್ಮುಕ್ತರು ಪ್ರತಿಷ್ಠಾಪನೆ ನಡೆಸಿದ ಕ್ಷೇತ್ತ್ರಗಳ ಮಹತ್ವವೇ ಬೇರೆ. ಅವರು ಸಂಕಲ್ಪದಿಂದ ತಾವು ಪ್ರತಿಷ್ಠಾಪಿಸಿದ ವಿಗ್ರಹಗಳಲ್ಲಿ ಪ್ರಾಣಶಕ್ತಿ (ದಿವ್ಯ ಚೈತನ್ಯ) ತುಂಬಿರುತ್ತಾರೆ. ಅಖಂಡ ಸಚ್ಚಿದಾನಂದದಲ್ಲಿ ಅವರು ಸಂಕಲ್ಪ ಮಾಡಿರುತ್ತಾರೆ. ಅಲ್ಲಿಯ ಪ್ರತಿಷ್ಠಾಪನೆಗಳು, ಮತ್ತು ಮೂರ್ತಿಗಳು ಚೈತನ್ಯದಿಂದ ತುಂಬಿ ತುಳುಕಾಡುತ್ತಿರುತ್ತವೆ; ಗಾಜಿನ ಗೂಡಿನಲ್ಲಿ ಬೆಳೆದ ಮೀನುಗಳಂತಲ್ಲ. ಅವುಗಳ ಸ್ಥಿತಿ, ನದಿಯಲ್ಲಿ ಬೆಳೆದ ಮೀನುಗಳಂತಿರುತ್ತದೆ. ಅಲ್ಲಿ ಎಂದೂ ಪೂಜೆ ನಿಲ್ಲುವುದಿಲ್ಲ; ಅಥವಾ ನಿಂತರೂ ಶಕ್ತಿ ಕ್ಷಯಿಸುವುದಿಲ್ಲ. ಇಂಥ ಕ್ಷೇತ್ರಗಳು ದೊಡ್ಡ ಆಕರ್ಷಣ ಕೇಂದ್ರಗಳಾಗಿಯೂ, ನಿತ್ಯ ಕಲ್ಯಾಣ ಗುಣಗಳ ಸಂಗಮವಾಗಿಯೂ ಇರುತ್ತವೆ. ತಿರುಪತಿ, ಗುರುವಾಯೂರ್,(ತೃಶ್ಶೂರ್, ಕೇರಳ) ಚೋಟ್ಟಾನಿಕರ (ಎರಣಾಕುಳಂ, ಕೇರಳ) ಮುಂತಾದ ಕ್ಷೇತ್ರಗಳು ಇದಕ್ಕೆ ಉದಾಹರಣೆ.”