ಪ್ರಶ್ನೆ: ಅಮ್ಮಾ, ನಾನು ಬ್ರಹ್ಮನ್ ಅಲ್ಲವೇ, ಹಾಗಿದ್ದ ಮೇಲೆ ಸಾಧನೆ ಯಾಕೆ ಮಾಡಬೇಕು ?

“ಮಗನೇ, ಮಗನ ಹೆಸರು ಕರೆಯದೆ ಮಗನು ಹಿಂತಿರುಗಿ ನೋಡಲು ಸಾಧ್ಯವೇ ? ಆದಕಾರಣ, ನಾವು ನಿಂತಿರುವುದು ನಾಮದ ಮೇಲೆ. ಮಗನೇ, ನಿನಗೆ ನಿನ್ನೆಯಿಲ್ಲವೆ, ಇವತ್ತಿಲ್ಲವೆ, ನಾಳೆಯಿಲ್ಲವೆ, ನನ್ನ ಹೆಂಡತಿಯೆಂದೂ ಮಕ್ಕಳೆಂದೂ ಇಲ್ಲವೆ ? ರುಚಿಯೂ ಅರುಚಿಯೂ ಇಲ್ಲವೆ ? ನೀನು ಬ್ರಹ್ಮನ್ನಲ್ಲಿ ಇರುವವನು ಆದರೂ ಬ್ರಹ್ಮನ್ ಆಗಿಲ್ಲ. ಈಗಿನ ನಿನ್ನ ಬ್ರಹ್ಮನ್ ವಿವೇಚನೆಯಿಲ್ಲದ ಪ್ರಾಣಿಗಳ ಹಾಗೆ. ಅವೆಲ್ಲ ಬ್ರಹ್ಮವೆ ತಾನೆ. ಅದೇ ಪ್ರಕಾರವಿರುವುದು ನೀನೀಗ. ಋಷಿವರರು ಅನುಭೂತಿಯಿಂದ ಬರೆದಿಟ್ಟ ಮಾತುಗಳನ್ನು ಓದಿ, ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯಬೇಡಿ. ಮಗನೇ, ವಾಚ್ಮ್ಯಾನ್ ಕೂತುಕೊಂಡು ’ನನ್ನ ಆಸ್ತಿ’ ಎಂದು ಹೆಮ್ಮೆಪಟ್ಟಂತೆ, ನಾವು ಪುಸ್ತಕ ಓದಿ ಬ್ರಹ್ಮವೆಂದುಕೊಂಡು ನಡೆಯುವುದು. ಹಲಸೂ ಹೇಳುತ್ತದೆ; ಹಲಸಿನ ಬೀಜವೂ ಹೇಳುತ್ತದೆ, ನಾನು ಬ್ರಹ್ಮನ್ ಎಂದು. ನೀನು ಬರೇ ಹಲಸಿನ ಬೀಜ ಮಾತ್ರವಾಗಿರುವುದು. ಯಮ ನಿಯಮಗಳ ಜೊತೆಗೂಡಿ ನಿನಗೆ ಆ ಬ್ರಹ್ಮನ್ ಆಗಲು ಸಾಧ್ಯ.

ಮಕ್ಕಳೇ, ಬ್ರಹ್ಮವೆನ್ನುವುದು ಮಾತಿನಲ್ಲಿ ಹೇಳುವಂಥದ್ದಲ್ಲ; ಅನುಭವಿಸಿ ತಿಳಿದುಕೊಳ್ಳಬೇಕಾದದ್ದು. ಒಬ್ಬರು ಮಹರ್ಷಿ ತನ್ನ ಮಗನನ್ನು ಗುರುಕುಲದಲ್ಲಿ ಕಲಿಯಲು ಬಿಡುತ್ತಾರೆ. ಹನ್ನೆರಡು ವರ್ಷಗಳ ಶಾಸ್ತ್ರಪಠನ ಮುಗಿಸಿ ಮಗನು ಮರಳಿ ಬರುತ್ತಾನೆ. ತಂದೆಯೊಡನೆ “ನಾನು ಯಾರೆಂದು ಗೊತ್ತೇ ? ಬ್ರಹ್ಮಸ್ವರೂಪನು.”ಎಂದು ಅಹಂಕಾರದಿಂದನೆ ಹೇಳಲಿಕ್ಕೂ, ಹೆಮ್ಮೆಯೊಂದಿಗೆ ವರ್ತಿಸಲಿಕ್ಕೂ ತೊಡಗಿದ. ಮಗನ ಈ ವರ್ತನೆಯನ್ನು ಕಂಡ ಮಹರ್ಷಿಗೆ ತನ್ನ ಮಗನಲ್ಲಿ ಸಹಾನುಭೂತಿ ಉಂಟಾಗುತ್ತದೆ. ಅವರು ತನ್ನ ಮಗನಲ್ಲಿ ಒಂದು ಪಾತ್ರೆಯಲ್ಲಿ ಹಾಲನ್ನೂ, ಸ್ವಲ್ಪ ಕಲ್ಲುಸಕ್ಕರೆಯನ್ನೂ ತರಲಿಕ್ಕೆ ಹೇಳುತ್ತಾರೆ. ಮಗನು ಹಾಲು ಮತ್ತು ಕಲ್ಲುಸಕ್ಕರೆ ತೆಗೆದುಕೊಂಡು ಬರುತ್ತಾನೆ. ಕಲ್ಲುಸಕ್ಕರೆಯನ್ನು ಹಾಲಲ್ಲಿ ಹಾಕಿ ಕಲೆಸಲು ಮಹರ್ಷಿ ಹೇಳುತ್ತಾರೆ. ಮಗನು ಹಾಗೆಯೇ ಮಾಡಿ ಮುಗಿಸಿದಾಗ, ಮಹರ್ಷಿಯು ಪಾತ್ರೆಯ ಮಧ್ಯದಿಂದ ಸ್ವಲ್ಪ ಹಾಲು ತೆಗೆದು ಮಗನ ಬಾಯಿಯಲ್ಲಿ ಹೊಯ್ದು ’ಸಿಹಿಯಾಗಿದೆಯೆ’ ಎಂದು ಪ್ರ ಶ್ನಿಸುತ್ತಾರೆ. ಸಿಹಿಯಿದೆ ಎಂದು ಮಗನು ಹೇಳಿದ. ಪಾತ್ರೆಯ ನಾಲ್ಕೂ ಭಾಗಗಳಿಂದ ಹಾಲು ಮಗನ ಬಾಯಿಯಲ್ಲಿ ಪುನಃ ಹೊಯ್ದು, ’ಸಿಹಿಯಾಗಿದೆಯೆ’ ಎಂದು ಪುನ: ಕೇಳುತ್ತಾರೆ. ’ಸಿಹಿಯಾಗಿದೆ’ ಎದು ಪುನಃ ಮಗನು ಉತ್ತರಿಸಿದ. ’ಎಷ್ಟು ಸಿಹಿಯಿದೆ’ ಮಹರ್ಷಿ ಪ್ರಶ್ನೆ ಮಾಡುತ್ತಾರೆ. ಮಗನಿಗೆ ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಆಗ ಮಹರ್ಷಿಯು ಮಗನಿಗೆ ಉಪದೇಶಿಸುತ್ತ ಹೇಳುತ್ತಾರೆ, ’ ಮಗುವೆ, ಬ್ರಹ್ಮನ್ ಎಂದು ಮಾತಲ್ಲಿ ಹೇಳಿ ಹೆಮ್ಮೆ ಪಡುವಂಥದ್ದಲ್ಲ. ಅದು ಅನುಭವ; ಅನುಭವಿಸಿ ತಿಳಿಯುವಂಥದ್ದು. ಕಲ್ಲುಸಕ್ಕರೆಯು ಹಾಲಿನಲ್ಲಿ ಎಲ್ಲ ಕಡೆ ವ್ಯಾಪಿಸಿರುವ ಹಾಗೆ, ಅದು ಎಲ್ಲ ಕಡೆ ತುಂಬಿಕೊಂಡಿದೆ.’

ಮಕ್ಕಳೇ, ಸಗುಣನೂ, ನಿರ್ಗುಣನೂ ಆದ ದೇವರು ಎಲ್ಲ ಕಡೆಯೂ ತುಂಬಿ ಕೊಂಡಿದ್ದಾನೆ. ಅದು ಶಬ್ದಗಳಲ್ಲಿ ಹೇಳುವಂಥದ್ದಲ್ಲ. ಅನುಭೂತಿಯ ಸ್ತರದಲ್ಲಿ ಅರಿಯಬೇಕಾದದ್ದು. ಸಾಧನೆಯಿಲ್ಲದೆ ನಾನು ಬ್ರಹ್ಮವೆಂದು ಹೇಳಿಕೊಂಡು ನಡೆಯದಿರಿ.

ಒಬ್ಬ ಪಂಡಿತನು ಎಲ್ಲವು ಬ್ರಹ್ಮಮಯ ಎಂದು ಹಾಡಿಕೊಂಡು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಇದು ನೋಡಿದ ಮತ್ತೊಬ್ಬನು, ಹಿಂದಿನಿಂದ, ಒಂದು ಮುಳ್ಳು ತೆಗೆದುಕೊಂಡು ಆ ಪಂಡಿತನನ್ನು ತಿವಿಯುತ್ತಾನೆ. ಅವನು ಅಲ್ಲಿ ನಿಂತು ಅಳತೊಡಗಿದ. ನೋವೂ ಕೋಪವೂ ಸಹಿಸಲಾಗದೆ, ’ಯಾರೋ, ನನ್ನನ್ನು ತಿವಿದದ್ದು’ ಎಂದು ನೋವನ್ನನುಭವಿಸುತ್ತ, ಅವನು ತಿವಿದವನನ್ನು ಹೊಡೆಯಲಿಕ್ಕೆಂದು ಹೋಗುತ್ತಾನೆ. ಮಕ್ಕಳೇ, ನಮ್ಮ ಬ್ರಹ್ಮನ್ ಈ ರೀತಿ…ಅಳುವ ಬ್ರಹ್ಮನ್ !

ಹಾಗಾದರೆ, ಅನುಭವಿಸಿ ಅರಿತವರ ಕಥೆ ಕೇಳಬೇಕೇ ? ಒಬ್ಬ ಮಹಾತ್ಮನು ಸರ್ವವೂ ಬ್ರಹ್ಮಮಯವೆಂದು ಹಾಡಿಕೊಂಡು ನಡೆಯುತ್ತಿದ್ದ. ಬೇರೊಬ್ಬನು ಹಿಂದಿನಿಂದ ಬಂದು ಆ ಮಹಾತ್ಮನ ಕೈ ಕತ್ತರಿಸುತ್ತಾನೆ. ಆದರೆ ಆ ಮಹಾತ್ಮನಿಗೆ ಇದರ ಅರಿವೇ ಇಲ್ಲ. ಎಲ್ಲವನ್ನೂ ಮರೆತಿದ್ದ ಆತ ಹಾಡುತ್ತ ಇನ್ನೂ ಮುಂದೆ ಸಾಗುತ್ತಿರುತ್ತಾನೆ. ತಾನೊಬ್ಬ ಮಹಾತ್ಮನನ್ನು ಪೀಡಿಸಿದ್ದು ಎಂದು ಕೈ ಕತ್ತರಿಸಿದ ವ್ಯಕ್ತಿಗೆ ಅರ್ಥವಾಯಿತು. ಪಶ್ಚಾತ್ತಪಪಟ್ಟು ಅವನು ಮಹಾತ್ಮನನ್ನು ಸಮೀಪಿಸಿದ. ತನ್ನನ್ನು ಕ್ಷಮಿಸಬೇಕೆಂದು ಕೇಳಿ ಕೊಳ್ಳುತ್ತಾನೆ. ಯಾಕೆಂದು ಅವನು ಕೇಳುತ್ತಾನೆ. ’ತಮ್ಮ ಕೈ ಕತ್ತರಿಸಿ ತುಂಡು ಮಾಡಿದ ಮಹಾ ಪಾಪಿ ನಾನು’ ಎಂದು ಅವನು ಮಾರುತ್ತರ ಕೊಟ್ಟ. ಆಗಲೇ ತನ್ನ ಕೈ ತುಂಡಾಗಿ ಹೋಗಿದೆ ಎಂದು ಅವನಿಗೆ ಗೊತ್ತಾಗಿದ್ದು. ಕತ್ತರಿಸಿದ ಕೈಯ ಸ್ಥಾನವನ್ನು ಅವನು ಸವರಿದ. ಆಗ ಅವನ ಕೈ ಪುನಃ ಹಿಂದಿನಂತಾಯಿತು. ಆಗ ಅವನು ಹೇಳುತ್ತಾನೆ, ’ಮಗುವೇ, ಸರ್ವಂ ಬ್ರಹ್ಮಮಯಂ ಎಂದು ಹಾಡಿದರೂ, ಈ ಕೈ ಹಿಂದಿನಂತೆ ಮಾಡಲು ಸವರುವ ಎನಿಸಿ ಕರ್ಮ ಮಾಡಬೇಕಾಗಿಬಂತು. ಮಗೂ, ನಾನು ಈಗಲೂ ಕರ್ಮದ ಮಟ್ಟದಲ್ಲೇ ನೆಲೆಸಿದ್ದೇನೆ.’

ಮಕ್ಕಳೇ, ಅನುಭೂತಿಯಿಂದಲ್ಲದೆ ನಾನು ಬ್ರಹ್ಮನ್ ಎಂದು ಹೇಳಲು ನಮಗೆ ಅವಕಾಶವಿಲ್ಲ. ನೀವು ಮೊದಲು ಹೇಳಿದ ಪಂಡಿತನಂತೆ ಮಾಡದೆ, ಅನುಭವಿಸಿ ಅರಿತ ಆ ಮಹಾತ್ಮನಂತೆ ಮಾಡಲು ಯತ್ನಿಸಿರಿ.

ಇವತ್ತು ಇಪ್ಪತ್ತೈದೋ, ಐವತ್ತೋ ರುಪಾಯಿ ಕೊಟ್ಟರೆ ಬ್ರಹ್ಮಸೂತ್ರ ಗ್ರಂಥವನ್ನು ಅಂಗಡಿಯಲ್ಲಿ ಕೊಂಡುಕೊಳ್ಳಬಹುದು. ಎರಡು ವಾರಗಳಲ್ಲಿ ಅದು ಬಾಯಿಪಾಠ ಕಲಿಯಲೂ ಸಾಧ್ಯವಿದೆ. ಅದು ಕಲಿತು, ನಾನು ಬ್ರಹ್ಮನ್ ಎಂದು ಹೇಳಿಕೊಂಡು ನಡೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ಮಕ್ಕಳೇ, ಅದನ್ನು ಜೀವನದಲ್ಲಿ ಅಳವಡಿಸಿ ಇನ್ನುಳಿದವರಿಗೆ ತೋರಿಸಿ ಕೊಡುವುದು ಬೇಕಾಗಿದೆ. ಒಂದು ಗಂಟೆಯ ಶಾಸ್ತ್ರಾಭ್ಯಾಸ ಮಾಡಿದರೆ, ಹತ್ತು ಗಂಟೆಯಾದರೂ ಮನನ ಮಾಡಬೇಕು.

ಮಕ್ಕಳೇ, ನಮ್ಮ ಕೈ ಸುಟ್ಟರೆ ಆ ಕೈ ತಣ್ಣೀರಲ್ಲಿ ಮುಳುಗಿಸಲು ಎಷ್ಟೆಲ್ಲ ಗಡಿಬಿಡಿ ಇರುತ್ತದೋ, ಅಷ್ಟೆಲ್ಲ ವ್ಯಥೆ ದೇವರನ್ನರಿಯಲು ನಮಗೆ ಇರಬೇಕು.”