ಪ್ರಶ್ನೆ: ಅಮ್ಮಾ, ಪಿತೃಕರ್ಮಕ್ಕೆ ಫಲಪ್ರಾಪ್ತಿಯಿದೆಯೇ ?

ಮಕ್ಕಳೇ, ಶುದ್ಧ ಸಂಕಲ್ಪಕ್ಕೆ ದೊಡ್ಡ ಶಕ್ತಿಯಿದೆ. ಕರ್ಮ ಫಲಿಸಲೇ ಬೇಕೆಂದಿದ್ದರೆ ಶುದ್ಧ ಸಂಕಲ್ಪ ಬೇಕು. ಪಿತೃಕರ್ಮ ನಡೆಸುವಾಗ ಸತ್ತ ವ್ಯಕ್ತಿಯ ದಿನ, ನಾಮ ರೂಪ, ಭಾವಗಳನ್ನೆಲ್ಲ ಚಿಂತಿಸಿ ಮನಸ್ಸಲ್ಲಿ ಮಾತ್ರ ಜಪ ಮಾಡುತ್ತಾರೆ.

ಮಕ್ಕಳೇ, ಪ್ರತಿಯೊಂದು ಕರ್ಮಕ್ಕೂ ಒಂದೊಂದು ದೇವತೆಯಿದೆ. ಪರ್ಶಿಯದಲ್ಲಿರುವ ಮಗನ ಕಾಗದ ಊರಲ್ಲಿರುವ ತಂದೆಗೂ ತಾಯಿಗೂ ಪೋಸ್ಟ್ ಮ್ಯಾನ್ ವಿಳಾಸ ತಪ್ಪದೆ ತಲಪಿಸುವುದಿಲ್ಲವೆ ? ಆದರೆ ಇದು ಖಂಡಿತ: ಸಂಕಲ್ಪ ಶುದ್ಧವಾಗಿದ್ದರೆ ಮಾತ್ರ ದೇವತೆಗಳು ಆಯಾಯ ಕರ್ಮದ ಫಲವನ್ನು ಆಯಾಯ ಜೀವನಿಗೆ ತಲಪಿಸುವರು. ಅದರಿಂದ ಆತ್ಮನಿಗೆ ಒಳಿತಾಗುವಂತೆ ಸಹ ಮಾಡುವುದು.

ಪ್ರಶ್ನೆ: ಋಷಿವರ್ಯರ ಉಕ್ತಿಗಳು ಸತ್ಯವೆಂದು ಏನು ಪುರಾವೆ ?

ಮಕ್ಕಳೇ, ಅವರು ಹೇಳಿದ್ದೆಲ್ಲಾ ಸರಿಯಾಗಿದೆ. ಕಲಿಯುಗದ ಕುರಿತು ಭಾಗವತದಲ್ಲಿ ಹೇಳಿರುವುದೆಲ್ಲವೂ ಅದರಂತೆಯೇ ನಡೆಯುತ್ತಿಲ್ಲವೇ ? “ಮಗನನ್ನು ತಂದೆಯು ತಿನ್ನುವನು; ತಂದೆಯನ್ನು ಮಗನು ತಿನ್ನುವನು, ಕಾಡುಗಳೆಲ್ಲ ಮನೆಗಳಾಗುವವು; ಮನೆಗಳೆಲ್ಲ ಅಂಗಡಿಗಳಾಗುವವು.” ಇದೇ ರೀತಿ ಅಲ್ಲವೆ ಇವತ್ತು ಪ್ರತಿಯೊಂದೂ ನಡೆಯುತ್ತಿರುವುದು ? ಋಷಿವರರು ಕಂದ ಮೂಲಗಳನ್ನು ಸೇವಿಸಿ, ತಪಸ್ಸನ್ನು ಅನುಷ್ಠಾನ ಮಾಡಿ, ಸತ್ಯವನ್ನು ಸಾಕ್ಷಾತ್ಕರಿಸಿದರು. ನಾವಾದರೋ, ಆಹಾರ ಸೇವಿಸಲು ಮಾತ್ರ ಜೀವಿಸುತ್ತೇವೆ .

ಹಲವು ಯುಗಗಳ ಮೊದಲೇ, ನಮ್ಮ ಋಷೀಶ್ವರರು ಬಹಳ ವಿಷಯಗಳನ್ನು ಕಂಡು ಹಿಡಿದಿದ್ದರು. ನಾವಿಂದು ಬಹಳ ದೊಡ್ಡದೆಂದು ಭಾವಿಸುವ ಹಲವು ಸಂಶೋಧನೆಗಳನ್ನು ನಿರರ್ಥಕವೆಂದು ಪರಿಗಣಿಸಿದ್ದರು. ಉದಾಹರಣೆಗೆ, ವಿಜ್ಞಾನಿಗಳು ಪ್ರಣಾಲಿಕಾ ಶಿಶು(test tube baby)ವನ್ನು ಮಾಡಿದರು. ಪ್ರತಿಯಾಗಿ, ಕೌರವರ ನೂರೊಂದು ಮಕ್ಕಳನ್ನೂ, ಕೊಡದೊಳಗಿಟ್ಟಲ್ಲವೇ ವ್ಯಾಸರು ಸೃಷ್ಟಿಸಿದ್ದು ? ಬರೇ ಮಾಂಸಪಿಂಡಕ್ಕೆ ಅವರು ಪ್ರಾಣ ಪ್ರದಾನ ಮಾಡಿದರೆಂಬುದನ್ನು ನೆನಪಿಟ್ಟುಕೊಳ್ಳಬೇಕು ! ಇದಕ್ಕೆ ಹೋಲಿಸಿದರೆ ಇವತ್ತಿನ ಟೆಸ್ಟ್ ಟ್ಯೂಬ್ ಬೇಬಿ ಏನೂ ಅಲ್ಲ. ಇದರಂತೆ ರಾಮಾಯಣದಲ್ಲಿ ಪುಷ್ಪಕವಿಮಾನದ ಕುರಿತು ಹೇಳಿಲ್ಲವೆ ? ಇವತ್ತಿನ ವಿಜ್ಞಾನಿಗಳು ಯಾವಾಗಂತೆ ವಿಮಾನ ಕಂಡುಹಿಡಿದದ್ದು ? ಹೀಗೆಯೇ ಏನೆಲ್ಲವೂ !

ಇವತ್ತಿನ ವಿಜ್ಞಾನಿಗಳನ್ನಾಗಲಿ, ಅವರ ಸಂಶೋಧನೆಗಳನ್ನಾಗಲಿ ಅಮ್ಮ ಅರ್ಥಹೀನವೆಂದು ತಳ್ಳಿ ಹಾಕುತ್ತಿಲ್ಲ. ತಪಸ್ಸಿನಿದ ಗಳಿಸಲು ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಎಂದು ಒತ್ತಿ ಹೇಳಲು ಎಂದು ಅಮ್ಮ ಹೀಗೆ ಸೂಚಿಸುತ್ತಿರುವುದು. ಅವರಿಗಿದೆಲ್ಲ ನಿರರ್ಥಕವಾಗಿತ್ತು. ಏನನ್ನೂ ಸಂಕಲ್ಪಮಾತ್ರದಿಂದ ಸೃಷ್ಟಿಸಲು ಅವರಿಗೆ ಆಗುತ್ತಿತ್ತು.

ಹಿಂದೆ ಮನೆಗಳ ನಡುವೆ ತುಂಬ ಸ್ಥಳವಿರುತ್ತಿತ್ತು. ಸುತ್ತಲೂ ಔಷಧೀಯ ಗಿಡಗಳನ್ನು ನಟ್ಟಿರುತ್ತಿದ್ದರು; ಬೇವು, ಅತ್ತಿ, ಇತ್ಯಾದಿ ಹಲವು. ಅದನ್ನು ತೀಡಿ ಬಂದ ಗಾಳಿಗೆ ಒಂದು ವಿಶೇಷ ಔಷಧಿ ಗುಣವಿದೆ. ಆ ವಾಯು ವಾತಾವರಣವನ್ನು ಶುದ್ಧ ಮಾಡುತ್ತದೆ. ಅವತ್ತಿನ ಜನರು ಸತ್ಯ, ಧರ್ಮಗಳ ಕೈಬಿಟ್ಟಿರಲಿಲ್ಲ. ಅದಕ್ಕೆ ಪ್ರತಿಯಾಗಿ, ಇಂದೆಲ್ಲ ಬದಲಾಗಿದೆ. ವೃಕ್ಷಗಳನ್ನೆಲ್ಲ ಕಡಿದು ತುಂಡು ಮಾಡಿ ಅಲ್ಲೆಲ್ಲ ಮನೆಗಳನ್ನೂ ಅಂಗಡಿಗಳನ್ನೂ ಕಟ್ಟುತ್ತಿದ್ದಾರೆ. ಸತ್ಯಕ್ಕೂ ಧರ್ಮಕ್ಕೂ ನೆಲೆಯಿಲ್ಲದಾಯಿತು. ಪರಸ್ಪರ ವಿಶ್ವಾಸ, ಪ್ರೀತಿ, ಸತ್ಯಸಂಧತೆ, ಕ್ಷಮೆ, ತ್ಯಾಗ ಇವೆಲ್ಲ ಇದೆಯೆ ? ಮಳೆ ಬಿದ್ದರೆ ಮಳೆ, ಬಿಸಿಲಾದರೆ ಬಿಸಿಲು. ಕೃಷಿ ಮಾಡುವಾಗ ಸಾಕಷ್ಟು ಮಳೆಯಿಲ್ಲದೆ ಬೆಳೆಗಳು ನಾಶವಾಗುತ್ತಿವೆ.

ಹೀಗೆಲ್ಲ ಸಂಭವಿಸುವುದೆಂದು ನಮ್ಮ ಪೂರ್ವಿಕರಾದ ಋಷಿಶ್ರೇಷ್ಠರು ಮೊದಲೇ ಹೇಳಿರುವರು. ಅದೆಲ್ಲ ಅದರಂತೆಯೇ ನಡೆಯುತ್ತದೆ.”