ಪ್ರಶ್ನೆ: ಅಮ್ಮಾ, ಧ್ಯಾನ ಹೇಗೆ ಮಾಡಬೇಕು ?

“ಮಕ್ಕಳೇ, ಧ್ಯಾನ ಅಂತ ನಾವು ಹೇಳುವಂತಿಲ್ಲ. ಧ್ಯಾನವೆನ್ನುವುದು ಅಡೆತಡೆಯಿಲ್ಲದೆ ಒಂದೇ ಕಡೆ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗುವ ಸ್ಥಿತಿ. ಆ ಸ್ತರ ಮುಟ್ಟಲು ನಾವು ಸಾಧನೆ ಮಾಡುತ್ತಿರುವುದು. ಪಾಯಸ ಮಾಡಲು ನಾವು ನೀರನ್ನು ಒಲೆಯಲ್ಲಿಡುತ್ತೇವೆ. ಏನು ಮಾಡುತ್ತೀಯೆಂದು ಯಾರಾದರೂ ಕೇಳಿದರೆ ಹೇಳುತ್ತೇವೆ ಪಾಯಸ ಮಾಡುತ್ತೇನೆಂದು. ಇದೇ ಪ್ರಕಾರ, ಧ್ಯಾನಾವಸ್ಥೆ ತಲಪಲು ಬೇಕಾದ ಅಭ್ಯಾಸ ಬರೇ ಆರಂಭ ಮಾಡಿರುವುದು ಮಾತ್ರ. ಆದರೂ ನಾವು ಹೇಳುತ್ತೇವೆ ಧ್ಯಾನ ಮಾಡುತ್ತೇವೆಂದು. ಈ ಅಭ್ಯಾಸವನ್ನೇ ಸಾಮಾನ್ಯವಾಗಿ ಸಾಧನೆಯೆಂದು ಹೇಳುವುದು.”

ಪ್ರಶ್ನೆ: ಸಾಧನೆಯಲ್ಲಿ ಏಕಾಗ್ರತೆ ಬರುತ್ತಿಲ್ಲ. ಅದು ಏಕೆ, ಅಮ್ಮಾ ?

“ಮಕ್ಕಳೇ, ಹಿಂದೆ ನಾವು ಶರೀರವು ನಿತ್ಯವೆಂದು ಭಾವಿಸಿ ಜೀವಿಸಿದೆವು. ಅದಕ್ಕಾಗಿ ಮಾತ್ರ ಪ್ರಯತ್ನಿಸಿದೆವು. ಆ ಸ್ವಭಾವಗಳು ನಮ್ಮೊಳಗೆ ಇನ್ನೂ ಇದ್ದಾವೆ. ಈಗ ಆತ್ಮವು ನಿತ್ಯವೆಂದು ತಿಳಿದುಕೊಂಡು ಸಾಧನೆ ನಡೆಸುವಾಗ ಆ ಸ್ವಭಾವಗಳು ನಮ್ಮನ್ನು ಕಾಡುತ್ತವೆ. ಅದು ಯಾಕೆಂದರೆ, ಹತ್ತು ದಿವಸ ಶಾಯಿ ಬಾಟಲನ್ನು ನಾವು ಬಲಗಡೆಗೆ ಇಟ್ಟು ಬರೆಯುತ್ತೇವೆ. ಹನ್ನೊಂದನೆಯ ದಿವಸ ಅದನ್ನು ತೆಗೆದು ಎಡಗಡೆಗೆ ಇಟ್ಟೆವು. ಮನಸ್ಸಿಗೆ ಗೊತ್ತಿದೆ ಶಾಯಿ ಬಾಟಲು ಎಡಗಡೆಗೆ ಸರಿಸಿಟ್ಟಿದ್ದೇವೆಂದು. ಆದರೆ ಕೈ ಮೊದಲು ಶಾಯಿ ಬಾಟಲಿದ್ದ ಕಡೆ ಹೋಗುವುದು. ಅದೇರೀತಿ, ಹಿಂದಿನ ಸ್ವಭಾವಗಳು ನಮ್ಮನ್ನು ಜಗಿದು ತಿನ್ನುತ್ತವೆ. ಮಕ್ಕಳು ಕಳವಳಗೊಳ್ಳದೆ ಪ್ರಯತ್ನ ಮುಂದುವರಿಸಿರಿ.

ಸೈಕಲ್ಲು ತುಳಿಯಲು ಕಲಿಯುವ ಹುಡುಗ ಎಷ್ಟು ಸಾರಿ ಬಿದ್ದರೂ ಪುನಃ ಪ್ರಯತ್ನ ಮಾಡುತ್ತಾನೆ. ಅವನ ದೇಹಕ್ಕೆ ಗಾಯಗಳಾದರೂ ಅವನದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ಸೈಕಲ್ ಕಲಿಯಬೇಕೆಂಬ ಲಕ್ಷ್ಯಬೋಧ (ಗುರಿಯ ಬಗ್ಗೆ ಎಚ್ಚರ) ಅವನಿಗಿದೆ. ಹಾಗೆಯೇ, ಸಾಧನೆ ತೊಡಗಿದಾಗ ಮೊದಲು ಸ್ವಲ್ಪ ತೊಂದರೆ ಅನುಭವಕ್ಕೆ ಬರುತ್ತದೆ. ನಿರಂತರವಾದ ಅಭ್ಯಾಸದಿಂದ ನಂತರ ಅದು ಬಹಳ ಸುಲಭವಾಗುತ್ತದೆ. ಅದು ಹೇಗೆಂದರೆ, ನಿಪುಣ ಕಮ್ಮಾರನೊಬ್ಬ ದಿವಸಕ್ಕೆ ಹತ್ತು ಕತ್ತಿಗಳನ್ನು ಮಾಡುತ್ತಾನೆ. ಆದರೆ ಆರಂಭದಲ್ಲಿ ಒಬ್ಬನಿಗೆ ಒಂದು ಕತ್ತಿ ಸಹ ಪೂರ್ತಿ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಅವನು ಆ ಕೆಲಸ ಬಿಟ್ಟು ಹೋಗುವುದಿಲ್ಲ. ಅದು ಅವನ ಜೀವನದ ದಾರಿಯೆಂದು ಭಾವಿಸಿ, ಮತ್ತೆ ಮತ್ತೆ ಪ್ರಯತ್ನಿಸಿ, ಅದರಲ್ಲಿ ಗೆಲುವು ಸಾಧಿಸುತ್ತಾನೆ. ಇದೇರೀತಿ ಪೂರ್ತಿ ಸಮಯ ಏಕಾಗ್ರತೆಯಿರುವ ಕಾಲ ಬರುವುದು. ಮಕ್ಕಳು ಇನ್ನೂ ಪ್ರಯತ್ನಿಸಿರಿ.”

ಪ್ರಶ್ನೆ: ಯಾವ ರೂಪದ ಮೇಲೆ ಧ್ಯಾನ ಮಾಡಬೇಕು ? ಯಾವ ರೂಪವೂ ಆಗುತ್ತದೆಯೇ ?

“ಮಕ್ಕಳ ರಕ್ತದ ಜೊತೆ ಸೇರಿಕೊಂಡಿರುವ, ಪೂರ್ವಜನ್ಮದ ಸಂಬಂಧವಿರುವ ದೇವತೆ ಇರುವುದು.
ಆ ದೇವತೆಯ ರೂಪಧ್ಯಾನ ಮಾಡಿದರೆ ಸಾಕು.”

ಪ್ರಶ್ನೆ: ಅದು ಹೇಗೆ ತಿಳಿದುಕೊಳ್ಳಲು ಸಾಧ್ಯ ?

“ಎಲ್ಲಾದರೂ ಬೀಳುವಾಗ “ಹೇ ಕೃಷ್ಣಾ” ಎಂದು ಕೂಗುವವರನ್ನು ನೋಡಿರ ಬಹುದು. ಕೃಷ್ಣನಲ್ಲಿ ಹೆಚ್ಚಿನ ಆಕರ್ಷಣೆ ಇರುವವರ ಹಿಂದಿನ ಜನ್ಮದ ಇಷ್ಟದೇವತೆ ಕೃಷ್ಣನಾಗಿರುತ್ತಾನೆ. ಆಗ ಅವರು ದೇವಿಯ ಮೆಲೆ ಧ್ಯಾನ ಮಾಡಬೇಕಾಗಿಲ್ಲ. ಕೃಷ್ಣನ ಮೇಲೆ ಧ್ಯಾನ ಮಾಡಿದರೆ ಸಾಕು. ಗಣಿತದಲ್ಲಿ ಬಹಳ ಗಟ್ಟಿ; ನೂರಕ್ಕೆ ನೂರು ಮಾರ್ಕು ಸಿಗುತ್ತದೆ ಆದರೆ ಜೀವಶಾಸ್ತ್ರದಲ್ಲಿ ತುಂಬ ಹಿಂದೆ. ಅವನು ಹತ್ತನೇ ಕ್ಲಾಸಿನ ನಂತರ ಅವನು ಫರ್ಸ್ಟ್ ಗ್ರೂಪು ಆಯ್ಕೆ ಮಾಡಬೇಕು ಓದಲಿಕ್ಕೆ. ಸೆಕಂಡ್ ಗ್ರೂಪು ತೆಗೆದುಕೊಂಡರೆ ಅವನೊಂದು ಹೊಸ ಸಂಸ್ಕಾರ ಬೆಳೆಸಿಕೊಳ್ಳಬೇಕಾಗಿ ಬರುತ್ತದೆ. ರೂಪ ಧ್ಯಾನ ಮಾಡುವುದೂ ಈ ಪ್ರಕಾರವಾಗಿರುತ್ತದೆ. ಕೃಷ್ಣನರೂಪ ಇಷ್ಟರವರೆಗೆ ಧ್ಯಾನ ಮಾಡುತ್ತಿದ್ದರೆ, ಅದೇ ಮುಂದುವರೆಸಿದರೆ ಸಾಕು. ಅದರಲ್ಲೇ ಎಲ್ಲಾ ಇದೆ ಎಂದು ಸಂಕಲ್ಪಿಸಿಕೊಳ್ಳಬೇಕು. ದೇವಿ ರೂಪವನ್ನು ಧ್ಯಾನ ಮಾಡುತ್ತಿದ್ದರೆ ಮುಂದೆಯೂ ದೇವಿಯನ್ನೇ ಧ್ಯಾನ ಮಾಡಿರಿ. ಯಾವ ದೇವಸ್ಥಾನ ಹೋದರೂ ಅಲ್ಲಿ ಇಷ್ಟದೇವತೆಯನ್ನು ಕಾಣಿರಿ. ನಿಮ್ಮ ತಾಯಿಯನ್ನು ತಾಯಿಯ ತಮ್ಮ “ಅಕ್ಕಾ” ಎಂದು ಕರೆದರೆ ನಿಮಗೆ ತಾಯಿಯಲ್ಲ ಎಂದಾಗುವುದಿಲ್ಲವಲ್ಲ ? ಒಬ್ಬೊಬ್ಬರಿಗೂ ಒಂದೊಂದು ಭಾವನೆ. ಅವರವರ ಭಾವನೆಯನ್ನನುಸರಿಸಿ ದೇವರನ್ನು ಕರೆಯಬಹುದು.

ಕಥಕಳಿಯಲ್ಲಿ ಒಬ್ಬನೇ ವ್ಯಕ್ತಿ ಹಲವಾರು ವೇಷ ಹಾಕಿ ಅಭಿನಯಿಸುವುದಿಲ್ಲವೇ. ವೇಷ ಬೇರೆ ಬೇರೆಯಾದರೂ ವ್ಯಕ್ತಿ ಬೇರೆಯಾಗುತ್ತಾನೆಯೇ. ಇಲ್ಲ. ಸಿನೆಮದಲ್ಲಿ ಒಬ್ಬನೇ ನಟ ಎಷ್ಟೆಲ್ಲ ಪಾತ್ರಗಳಲ್ಲಿ ನಟಿಸುತ್ತಾನೆ ? ಆದರೆ ಆ ನಟನು ಬದಲಾಗುವುದಿಲ್ಲ. ಯಾವ ರೂಪವನ್ನೂ ಸ್ವೀಕರಿಸಲು ಸಾಧ್ಯ; ಆದರೆ ದೇವರು ಬದಲಾಲಾಗುವುದಿಲ್ಲ. ದೇವಿಯ ಭಕ್ತರು ಕೃಷ್ಣನ ದೇವಾಲಯಕ್ಕೆ ಹೋದಾಗಲೂ “ನನ್ನ ದೇವೀ” ಎಂದು ಕರೆದರೆ ಸಾಕು. ಆತ್ಮ ಒಂದೇ ಅಲ್ಲವೇ ? ದೇವಿ ರೂಪದಲ್ಲಾಗಲೀ, ಕೃಷ್ಣನ ರೂಪದಲ್ಲಾಗಲೀ, ಚೈತನ್ಯವಾಗಿ ನೆಲೆಸಿರುವುದು ಒಂದೇ. ನಮ್ಮ ನಮ್ಮ ಭಾವನೆಯನ್ನನುಸರಿಸಿ ದೇವರು ದರ್ಶನ ಕೊಡುತ್ತಾನೆ. ಹುಲ್ಲಾಗಿ ದೇವರನ್ನು ಭಾವಿಸಿದರೆ, ದೇವರು ನಮಗೆ ಅದೇ ರೂಪದಲ್ಲಿ ದರ್ಶನ ಕೊಡುವನು. ಕಲ್ಲಾದರೆ ಕಲ್ಲಾಗಿ, ಇನ್ನೇನಾದರೆ ಅದಾಗಿ. ಯಾವ ರೂಪದಲ್ಲೂ ಭಾವಿಸಬಹುದು. ಆದರೆ ಮಾತ್ರ ನಮಗೆ ವಿಶ್ವಾಸವಿರಬೇಕು.

ಯಾವ ಅಚ್ಚಿನಲ್ಲಿ ಮಣ್ಣು ತುಂಬಿಸುತ್ತೇವೋ, ಆ ರೂಪದ ಮೂರ್ತಿ ದೊರಕುವುದು. ಅದರರ್ಥ, ಮಣ್ಣಿಗೆ ತನ್ನದೇ ಆದ ರೂಪವಿಲ್ಲ. ಯಾವ ಬಣ್ಣದ ಗಾಜಿನ ಹೂಜೆಯಲ್ಲಿ ನೀರಿಡುತ್ತೇವೋ, ಆ ಬಣ್ಣ ನೀರಿಗಿದೆಯೆಂದು ಕಂಡರೂ, ನೀರಿಗೆ ಬಣ್ಣವಿಲ್ಲ, ಅಲ್ಲವೇ ?”