ಪ್ರಶ್ನೆ: ಅಮ್ಮಾ, ಇಷ್ಟರೂಪವನ್ನು ಎಲ್ಲಿಟ್ಟುಕೊಂಡು ಧ್ಯಾನ ಮಾಡಬೇಕು ?

“ಮಕ್ಕಳೇ, ಇಷ್ಟದೇವತೆಯನ್ನು ಹೃದಯಕಮಲದಲ್ಲೋ ಭ್ರೂಮಧ್ಯದಲ್ಲೋ ಇಟ್ಟುಕೊಂಡು ಧ್ಯಾನ ಮಾಡಬಹುದು. ಗೃಹಸ್ಥರು ಹೃದಯಕಮಲದಲ್ಲಿ ಧ್ಯಾನ ಮಾಡುವುದು ಉತ್ತಮ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವುದೂ ಉತ್ತಮವೇ. ಆದರೆ ಅದು ಗುರುವಿನ ಮಾರ್ಗದರ್ಶನ ಇದ್ದರೆ ಮಾತ್ರ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವಾಗ ಕೆಲವರಿಗೆ ತಲೆ ಬಿಸಿಯಾಗುವುದೋ, ನಿದ್ದೆ ತೀರ ಇಲ್ಲದಾಗುವುದೋ ಆಗಬಹುದು. ಇದು ರೋಗವೆಂದು ತಪ್ಪು ಅಭಿಪ್ರಾಯ ಉಂಟಾಗಬಹುದು. ಆದಕಾರಣ ಗುರುವಿಲ್ಲದೆ ಧ್ಯಾನ ಮಾಡುವವರು ವಿಶೇಷ ಜಾಗ್ರತೆ ವಹಿಸಬೇಕು.”

ಪ್ರಶ್ನೆ: ಅಮ್ಮಾ, ಎಷ್ಟು ಸಮಯ ಧ್ಯಾನ ಮಾಡಬೇಕು ?

“ಮಕ್ಕಳೇ, ಆರಂಭದಲ್ಲಿ ಹತ್ತು ನಿಮಿಷಗಳಿಂದ ಅರ್ಧ ಗಂಟೆಯವರೆಗೆ ಧ್ಯಾನ ಮಾಡಿದರೆ ಸಾಕು. ಪೂರ್ಣವಾಗಿ ಆಧ್ಯಾತ್ಮಿಕ ಜೀವನ ನಡೆಸುವ ಸಾಧಕನನ್ನುದ್ದೇಶಿಸಿ ಅಲ್ಲ ಅಮ್ಮ ಹೇಳುತ್ತಿರುವುದು. ಲೌಕಿಕ ಜೀವನ ನಡೆಸುವವರು ಮತ್ತು ಉದ್ಯೋಗಕ್ಕೆ ಹೋಗುವ ಗೃಹಸ್ಥ ಮಕ್ಕಳ ವಿಷಯ ಅಮ್ಮ ಹೇಳುತ್ತಿರುವುದು. ಗುರುವಿನ ಮಾರ್ಗದರ್ಶನವಿದ್ದರೆ ಹೆಚ್ಚು ಧ್ಯಾನ ಮಾಡಬಹುದು. ಆರಂಭದಲ್ಲಿ ಲೆಕ್ಕಕ್ಕಿಂತ ಹೆಚ್ಚು ಧ್ಯಾನ ಮಾಡಬಾರದು. ಹೊಸದಾಗಿ ಕೊಂಡುಕೊಂಡ ಬಸ್ಸನ್ನು ಫುಲ್ ಸ್ಪೀಡ್ನಲ್ಲಿ ಓಡಿಸುವುದಿಲ್ಲ ಅಲ್ಲವೇ ? ಯಂತ್ರದ ಭಾಗಗಳು ಸ್ವಲ್ಪ ಸಡಿಲಾದ ಮೇಲೆ ಹೆಚ್ಚು ಸ್ಪೀಡಲ್ಲಿ ಓಡಿಸಬಹುದು.

ಔಷಧಿಯು ರೋಗ ಗುಣಪಡಿಸಲಿಕ್ಕೆ ಇದ್ದರೂ, ಅದನ್ನು ಸೇವಿಸುವ ಒಂದು ಕ್ರಮ ಇದೆ. ಅದು ಮಿತಿ ಮೀರಿ ಸೇವಿಸಿದರೆ ಬೇರೆ ರೋಗಗಳು ಬಂದೀತು.”

ಪ್ರಶ್ನೆ: ಅಮ್ಮಾ, ಧ್ಯಾನ ಹೇಗೆ ಆರಂಭಿಸಬೇಕು ?

“ಹೃದಯದಲ್ಲಿ ಇಷ್ಟದೇವತೆಯನ್ನು, ಪಾದದಿಂದ ಹಿಡಿದು ಶಿರಸ್ಸಿನವರೆಗೆ, ಶಿರಸ್ಸಿನಿಂದ ಪಾದದವರೆಗಿರುವ ಒಂದೊಂದು ಅಂಗವನ್ನು ಧ್ಯಾನಿಸಿ ಸ್ಥಿರೀಕರಿಸಬೇಕು. ಕೃಷ್ಣನ ರೂಪವನ್ನು ಧ್ಯಾನಿಸುವವರು ಭಗವಂತನ ಪಾದ, ಕಾಲಂದಿಗೆ, ಮೊಣಕಾಲು, ಪೀತಾಂಬರ, ಕೈ ಬಳೆಗಳು, ಕೈಯಲ್ಲಿ ಬಿದಿರಿನ ಕೊಳಲು, ವನಮಾಲೆ, ಕಿವಿಯಲ್ಲಿ ಕುಂಡಲಗಳು, ತುಟಿಗಳು, ಕಣ್ಣುಗಳು, ಕಿರೀಟ, ನವಿಲುಗರಿಯ ಮೇಲೆ ಧ್ಯಾನ ಮಾಡಬೇಕು. ಪುನಃ ನವಿಲುಗರಿಯಿಂದ ಹಿಡಿದು ಕೆಳಗೆ ಪಾದದವರೆಗೆ ಧ್ಯಾನ ಮಾಡಿ.

ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಮಾಡುವ ಹಾಗೆ ಇಷ್ಟದೇವತೆಗೆ ಮೊದಲು ನೀರಿನಿಂದ ಅಭಿಷೇಕ ಮಾಡುವುದಾಗಿ ಸಂಕಲ್ಪಿಸಿ. ಇದೇ ರೀತಿಯಾಗಿ ಹಾಲು, ಗಂಧ, ಭಸ್ಮ, ಪುಷ್ಪ ಇವು ಒಂದೊಂದರಿಂದಲೂ ಅಭಿಷೇಕ ಮಾಡುವುದಾಗಿಯೂ ವಸ್ತ್ರಾಭರಣಗಳಿಂದ ಅಲಂಕರಿಸುವುದಾಗಿಯೂ ಭಾವಿಸಿ. ಆನಂತರ ಮನಃಪೂರ್ವಕವಾಗಿ ಕರ್ಪೂರದಾರತಿ ಮಾಡಿದಂತೆಯೂ, ಭಗವಾನ್ ಓಡಿ ಹೋಗುತ್ತಿದ್ದಂತೆಯೂ, ತಾನು ಯಶೋಧೆಯಾಗಿ ಹಿಡಿಯಲು ಓಡುತ್ತಿರುವಂತೆಯೂ ಕಲ್ಪನೆ ಮಾಡಿಕೊಳ್ಳಬಹುದು. ಇಷ್ಟದೇವತೆಯನ್ನು ಸ್ತುತಿಸುವ ಮಂತ್ರಗಳನ್ನೋ, ಶ್ಲೋಕಗಳನ್ನೋ ಆಂತರ್ಯದಲ್ಲಿ ಜಪಿಸಿಕೊಂಡಿರುವುದೂ ಒಳ್ಳೆಯದು. ಹೃದಯವನ್ನು ಇಷ್ಟದೇವತೆಯೊಂದಿಗೆ ಹಂಚಿ ಕೊಳ್ಳಿ; “ಭಗವಂತ ! ನೀನೆಲ್ಲಿ” ಎಂದು ಕೇಳುತ್ತಿರಿ.