ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು.
____
ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ.
____
ಆಧ್ಯಾತ್ಮಿಕವೂ ಲೌಕಿಕವೂ ಜೊತೆಜೊತೆಯಾಗಿ ಹೋಗಲು ಸಾಧ್ಯವಿದೆ. ಆದರೆ, ಸಂಬಂಧಗಳ ಬಂಧನವಿಲ್ಲದೆ, ನಿಷ್ಕಾಮವಾಗಿ ಕೆಲಸ ಮಾಡಲು ಸಾಧ್ಯವಾಗಬೇಕು. ನಾನು ಮಾಡುವುದು; ನನಗದರ ಫಲ ಬೇಕು, ಎಂದು ಭಾವಿಸುವಾಗ ದುಃಖಗಳು ಉಂಟಾಗುತ್ತವೆ. ನನ್ನ ಹೆಂಡತಿ, ನನ್ನ ಮಗುವೆಂದು ಯಾವತ್ತೂ ಭಾವಿಸದಿರಿ. ಎಲ್ಲವೂ ಈಶ್ವರನದ್ದು ಎಂದು ಭಾವಿಸುವಾಗ ಮತ್ತೆ ಬಂಧನವಿಲ್ಲ. ಸಾಯುವಾಗ ಹೆಂಡತಿ, ಮಕ್ಕಳು ಯಾರೂ ಒಟ್ಟಿಗೆ ಬರುವುದಿಲ್ಲ. ವಾಸ್ತವಿಕ ಸತ್ಯ ದೇವರು ಮಾತ್ರವೆ.
____
ಬೀಜವನ್ನು ನಾವು ಬಯಲಲ್ಲಿ ನೇರವಾಗಿ ಬಿತ್ತುವುದಿಲ್ಲ. ವಿಶೇಷವಾಗಿ ಸಿದ್ಧ ಪಡಿಸಿದ ಸ್ಥಳದಲ್ಲಿ ಬೀಜ ಬಿತ್ತಿ, ಸಸಿ ಮಾಡಿ, ನಂತರ ಕಿತ್ತು ಬಯಲಲ್ಲಿ (ನೇಜಿ) ನೆಡುತ್ತಾರೆ. ಅದೇ ರೀತಿ, ಭಕ್ತಿಯಲ್ಲಿ ನೆಟ್ಟು ಮೊಳಕೆಯೊಡೆದ ಸಾಧನೆಯ ಬೀಜಗಳನ್ನು, ಕಿತ್ತು ನಂತರ ಜ್ಞಾನದ ಬಯಲಲ್ಲಿ ನೆಡಿರಿ. ಆಗ ಸಮೃದ್ಧಿಯಾದ ಫಸಲು ಸಿಗುತ್ತದೆ.
____
ಮಕ್ಕಳೇ, ತೆಂಗಿನ ಸಿಪ್ಪೆಯ, ಗೆರಟೆಯ, ಹಾಗೂ ಹಿಂಡಿಯ ಹಿಂದೆ ಹೋಗದೆ, ನೀವು ತೆಂಗಿನಕಾಯಿಯನ್ನು ಅವಲಂಬಿಸಿರಿ. ಅದರಿಂದ ಎಲ್ಲವೂ ಸಿಗುವುದು. ಇದೇ ತರ ವಿವಿಧತ್ವದ ಹಿಂದೆ ಹೋಗದೆ ಏಕತ್ವವನ್ನು ಆಶ್ರಯಿಸಿದರೆ ಬೇಕಾದದ್ದೆಲ್ಲಾ ಸಿಗುವುದು – ನಶಿಸುವುದೂ, ನಾಶವಾಗದೆ ಇರುವುದೂ.
____
ಮಕ್ಕಳೇ, ಸತ್ಯ ಒಂದೇ, ಅದೇ ದೇವರು.
____
ನಮ್ಮ ಹುಟ್ಟು ದೇವರ ಸಾಕ್ಷಾತ್ಕಾರದ ಸಲುವಾಗಿದೆ; ಅದು ಬಿಟ್ಟು ಪ್ರಾಣಿಯಂತೆ ಜೀವಿಸಲಿಕ್ಕಲ್ಲ.
____
ಮಕ್ಕಳೇ, ಎಲ್ಲವೂ ಬ್ರಹ್ಮನೆಂದು ಹೇಳಿದರೆ, ಅದೇ ಗುಂಪಿನಲ್ಲಿ ಬರುವುದು ನಾಯಿ, ಬೆಕ್ಕು ಇತ್ಯಾದಿ. ಅವುಗಳಿಗೆ ಏನಿದೆ ವಿವೇಚನೆ ? ಆ ರೀತಿಯಾಗಿ ರೀತಿ ನಾವು ಬದುಕಬೇಕೆ ? ಸರಿಯಾದ ವಿವೇಚನೆ ಇಲ್ಲದಿದ್ದರೆ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಏನು ವ್ಯತ್ಯಾಸ ? ಆದಕಾರಣ ವಿವೇಕ ಬೆಳೆಸಿಕೊಳ್ಳಿರಿ. ಸಾಧನೆ ಮಾಡಿದಾಗ ನಾವು ಯಾರೆಂಬುದು ಅರಿವಾಗುತ್ತದೆ.
____
ನಾವೆಲ್ಲ “ನಾನು, ನಾನು” ಎಂಬ ಭಾವದಲ್ಲಿ ಬದುಕುತ್ತಿದ್ದೇವೆ. ಬಾವಿ ಹೇಳುತ್ತದೆ “ನನ್ನ ನೀರು ಸೇದಿ ಎಲ್ಲರೂ ಕುಡಿಯುತ್ತಾರೆ, ದೇವರಿಗೆ ಅರ್ಪಿಸುತ್ತಾರೆ. ನಾನು ಇಲ್ಲದಿದ್ದರೆ ಇವರಿಗೆ ಜೀವಿಸಲಿಕ್ಕೆ ಸಾಧ್ಯವಿದೆಯೇ” ಎಂದು. ಏನಿದು ಈ ’ನಾನು’. ದೇವರಿಂದ ಒಸರಾಗಿ ಹರಿದು ಬರದಿರುತ್ತಿದ್ದರೆ, ಬಾವಿಗೆ ಜಂಬ ಕೊಚ್ಚಿಕೊಳ್ಳಲಿಕ್ಕೆ
ಸಾಧ್ಯವಿತ್ತೇ ?
____
ಶಬರಿಮಲೆ ಮುಟ್ಟಿದ ಒಬ್ಬ ವ್ಯಕ್ತಿ, ಅಲ್ಲಿ ಒಂದು ಕಡೆ ಬಟ್ಟೆ ಹಾಸುತ್ತಾನೆ. ಅವನು ಹೋದ ನಂತರ ಮುಂದಿನ ವ್ಯಕ್ತಿ ಅದೇ ಸ್ಥಳದಲ್ಲಿ ಪುನಃ ಬಟ್ಟೆ ಹಾಸುತ್ತಾನೆ. ಅವನು ಹೋದಾಗ, ಅವನ ನಂತರದ ವ್ಯಕ್ತಿಯೂ ಹಾಗೇ ಮಾಡುತ್ತಾನೆ. ಈ ರೀತಿಯಾಗಿದೆ ನಮ್ಮ ಜೀವನ. ಆದರೆ, ನಾವಿದು ತಿಳಿದುಕೊಳ್ಳುತಿಲ್ಲ.
____
ಭಗವಂತನ ಶಕ್ತಿಯಿಲ್ಲದೆ ಹೋದರೆ ನಮ್ಮಿಂದ ಏನು ಪ್ರಯೋಜನ ? ’ನನ್ನ ಕಣ್ಣಿನಿಂದ ನೋಡಿದೆ’ ಎಂದು ನಾವು ಹೇಳುತ್ತೇವೆ. ನಮ್ಮ ಎದುರಿಗೆ ಒಂದು ಗ್ಲಾಸು ಹಾಲು ಇಡುತ್ತಾರೆ. ನಾವು ಯಾರೊಂದಿಗಾದರೂ ಕೆಲಸದ ಬಗ್ಗೆ ಮಾತಾಡುವಾಗ, ಅದನ್ನು ಇಟ್ಟರೆ, ನಮಗೆ ಅದು ಕಾಣಿಸುವುದಿಲ್ಲ. ಕಣ್ಣು ತೆರೆದಿದ್ದರೂ, ಕಾಣಿಸುವುದಿಲ್ಲ. ಕಣ್ಣಿನ ಹಿಂದೆ ಮನಸ್ಸು ಕೆಲಸ ಮಾಡಬೇಕು. ಹಾಗಿದ್ದರೆ ಮಾತ್ರ ಕಾಣಿಸಲು ಸಾಧ್ಯ. ಮನಸ್ಸು ಕೆಲಸ ಮಾಡಬೇಕಾದರೆ, ಭಗವಂತನ ಶಕ್ತಿಯು ಅವಶ್ಯ.
____
ಹಳೆಯಕಾಲದಲ್ಲಿ ಎಲ್ಲರೂ ನಿತ್ಯಾನಿತ್ಯ ಏನೆಂದು ಅರಿತು ನಡೆದರು. ಅದರ ನಂತರವೇ, ಗೃಹಸ್ಥ ಜೀವನ ಸಾಗಿಸುತ್ತಿದ್ದರು. ಹಾಗಾಗಿ ಅವರು ಆನಂದದಿಂದ ಜೀವಿಸಿದರು. ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ಅವರ ಮನಸ್ಸಿನಲ್ಲಿ ಯಾವುದೇ ತರದ ಅಲುಗಾಟ ಇರುತ್ತಿರಲಿಲ್ಲ.
____
ಇಂದು ನಾವು ಬಾಹ್ಯದಲ್ಲಿ ಏರ್‌ಕಂಡೀಷನ್ ಕೋಣೆಗಳನ್ನು ಕಟ್ಟುತ್ತಿದ್ದೇವೆ. ಕಟ್ಟಿ ಮುಗಿಯುವ ಮೊದಲೇ ನಾವು ಸತ್ತು ಹೋಗಬಹುದು. ಉಳಿದವರಿಗೆ ಆಸ್ತಿಗಾಗಿ ಕಲಹ ಮಾಡಲಿಕ್ಕೆ ಅನುಕೂಲವಾಯಿತು. ಆದಕಾರಣ ನಮ್ಮ ಮನಸ್ಸನ್ನು ಏರ್‌ಕಂಡೀಷನ್ ಮಾಡ ಬೇಕಾಗಿದೆ. ಆಗ ಯಾವ ಸೆಖೆಯಲ್ಲೂ, ಚಳಿಯಲ್ಲೂ ಒಂದೆ ರೀತಿಯಾಗಿ ಬದುಕಲು ಸಾಧ್ಯವಾಗುತ್ತದೆ.
____
ನಾಯಿ ಎಲುವನ್ನು ಜಗಿಯುತ್ತದೆ. ಅದು ಯೋಚಿಸುತ್ತದೆ, ಎಲುವಿನಿಂದ ಮಾಂಸ ಮತ್ತು ರಕ್ತ ಸಿಗುತ್ತಿದೆಯೆಂದು. ತಾನು ಚಪ್ಪರಿಸುತ್ತಿರುವುದು, ತನ್ನ ವಸಡು ಗೀರಿ ಬಂದ ರಕ್ತ ರಕ್ತವೆಂದು ಅದಕ್ಕೆ ತಿಳಿದಿಲ್ಲ. ಈ ರೀತಿಯಾಗಿ ನೀವು ಶಕ್ತಿ ಗುಂದಬೇಡಿ. ಏರ್‌ಕಂಡೀಷನ್ ಮನೆ ಕಟ್ಟಿ ಆಯಿತು, ಅದರಲ್ಲಿ ಮಲಗಿಕೊಂಡೂ ಗೊಣಗಾಟ: ಮನಸ್ಸಿಗೆ ನೆಮ್ಮದಿಯಿಲ್ಲ, ನಿದ್ದೆ ಬರಲೊಲ್ಲದು, ಎಂದು. ಕೊನೆಗೆ, ಅದರಲ್ಲಿದ್ದುಕೊಂಡು ವಿಷ ಕುಡಿದು ಸಾಯುತ್ತಾರೆ. ಬಾಹ್ಯವಸ್ತುಗಳು ಆನಂದ ಕೊಡುವುದಾಗಿದ್ದರೆ, ಹೀಗೆ ಮಾಡಬೇಕಾದ ಅವಶ್ಯಕತೆಯಿತ್ತೆ ? ಎಲ್ಲಾ ಮನಸ್ಸನ್ನು ಅವಲಂಬಿಸಿ ಕೊಂಡಿದೆ.
____
ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಎಲ್ಲೂ ಹೊರಡುವುದಿಲ್ಲ. ಪ್ರಾಪಂಚಿಕ ಗುರಿ ಎಲ್ಲರಿಗೂ ಇರುತ್ತದೆ. ಆದರೆ ಅವು ಯಾವುವೂ ಪೂರ್ಣವಲ್ಲ. ಆದಕಾರಣ ಮುದ್ದಿನ ಮಕ್ಕಳೇ, ದೇವರನ್ನೆ ಗುರಿಯಾಗಿಸಿಕೊಂಡು ಮುಂದಕ್ಕೆ ಸಾಗಿರಿ.
____