ಜೀವನದಲ್ಲಿ ಎರಡೇ ಸಂಗತಿಗಳಿವೆ – ಕರ್ಮ ಮಾಡುವುದು ಮತ್ತು ಫಲವನ್ನು ಅನುಭವಿಸುವುದು.

ಅನೇಕರು ಹೇಳುವುದುಂಟು, ‘ಇದುವರೆಗೂ ನಾನು ತಿಳಿದೂ ತಿಳಿದೂ ಯಾವ ತಪ್ಪನ್ನೂ ಮಾಡಿಲ್ಲ, ಆದರೂ ಈ ಕಷ್ಟಗಳನ್ನೆಲ್ಲಾ ಅನುಭವಿಸಬೇಕಾಗಿದೆ’ ಎಂದು. ಒಂದು ವಿಷಯ ಖಂಡಿತ. ನಾವು ಮಾಡಿದ ಕರ್ಮದ ಫಲವನ್ನು ನಾವೇ ಅನುಭವಿಸಬೇಕು. ಅದರ ಫಲವನ್ನು  ತಪ್ಪಿಸಲು ಸಾಧ್ಯವೇ ಇಲ್ಲ.

ಸಾವಿರಾರು ಹಸುಗಳ ನಡುವೆ ಒಂದು ಕರುವನ್ನು ಬಿಟ್ಟರೆ, ಅದು ಅದರ ತಾಯಿಯ ಬಳಿಗೇ ಹೋಗಿ ಸೇರುತ್ತದೆ. ಅದೇ ರೀತಿ ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅವರೇ ಅನುಭವಿಸುತ್ತಾರೆ. ಈಶ್ವರನು, ಶಿಕ್ಷಿಸಲೆಂದೇ ಯಾರನ್ನೂ ಸೃಷ್ಟಿಸಿಲ್ಲ.

ಒಳ್ಳೆಯ ಕರ್ಮಕ್ಕೆ ಒಳ್ಳೆಯ ಫಲವಿದ್ದರೆ, ಕೆಟ್ಟ ಕರ್ಮಕ್ಕೆ ಕೆಟ್ಟ ಫಲವಿದೆ. ಕೈಕಾಲುಗಳಿಂದ ಮಾಡುವುದು ಮಾತ್ರವೇ ಕರ್ಮವಲ್ಲ, ಆಲೋಚನೆಯೂ ಕರ್ಮವೇ. ಇತರರನ್ನು ದೂಷಿಸುವುದು ದುಷ್ಕರ್ಮ, ಅದರ ಫಲವೂ ದುಃಖಕರವಾಗಿಯೇ ಇರುತ್ತದೆ.

ಆದುದರಿಂದ ನಾವು ಅನುಭವಿಸುತ್ತಿರುವ ಕಷ್ಟಗಳನ್ನು ನೆನೆದು, ನಾನು ಪಾಪಿ ಎಂದು ಚಿಂತಿಸಿ ದುಃಖಿಸುವ ಅಗತ್ಯವಿಲ್ಲ. ಕೆಟ್ಟ ಕರ್ಮಗಳ ಫಲವನ್ನು ಇಂದು ಅನುಭವಿಸುತ್ತಿದ್ದೇವೆ, ಮುಂದೆ ಇದು ಪುನರಾವರ್ತಿಸಬಾರದು ಎಂದು ಯೋಚಿಸಿ, ಜೀವಿತದ ಮುಂದಿನ ಕ್ಷಣಗಳನ್ನು ಒಳ್ಳೆಯ ಕರ್ಮಗಳಿಂದ ತುಂಬಿಸುವ ನಿರ್ಧಾರ ಕೈಗೊಳ್ಳುವುದು ಸೂಕ್ತ.

‘ಏನೂ ಸರಿಯಾಗದವನು, ನಾನೊಬ್ಬ ಪಾಪಿ’ ಎಂದು ಯೋಚಿಸದೇ, ತನ್ನನ್ನು ತಾನೇ ಶಪಿಸಿಕೊಳ್ಳದೆ, ಎಲ್ಲವನ್ನೂ ಈಶ್ವರನ ಇಚ್ಛೆಗೆ ಬಿಟ್ಟುಕೊಡುತ್ತಾ, ಕಾರುಣ್ಯ ಮತ್ತು ಸೇವೆ ತುಂಬಿದ ಜೀವನವನ್ನು ನಡೆಸುವುದೇ, ಶಾಂತಿ ಕಂಡುಕೊಳ್ಳಲು ಸುಲಭದ ಮಾರ್ಗವಾಗಿದೆ.


ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ನಮ್ಮ ಹೃದಯದಲ್ಲಿ ಶಾಂತಿ ಇರಬೇಕು.

ಇದು ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಮಾತ್ರ ಸಾಧ್ಯ. ಈ ವಿಧಾನದಲ್ಲಿಶಾಂತವಾದ ಮನಸ್ಸು ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಧ್ಯಾನದಿಂದ ಮಾತ್ರ ನಿಜವಾದ ಶಾಂತಿ ಸಿಗುತ್ತದೆ. ಜೀವನದಲ್ಲಿ ಯಾವುದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.  

ನಮ್ಮ ಜೀವನ ಕಣ್ಣಿನಂತೆ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ, ಕಣ್ಣು ನೋಟದ ಶಕ್ತಿಯನ್ನು ನಿಯಂತ್ರಿಸಬಲ್ಲದು. ಒಂದು ವಸ್ತು ದೂರದಲ್ಲಿದ್ದದರೂ ಅಥವಾ ಹತ್ತಿರದಲ್ಲಿದ್ದರೂ, ಕಣ್ಣು ಅದಕ್ಕೆ ಅನುಗುಣವಾಗಿ ನೋಟವನ್ನು ಹೊಂದಿಸುತ್ತದೆ. ಇದರ ಫಲವಾಗಿಯೇ ನಾವು ಅವುಗಳನ್ನು ನೋಡಲು ಸಾಧ್ಯವಾಗುತ್ತದೆ.  

ಸಾಮಾನ್ಯ ಜೀವನ ರಸ್ತೆಯಲ್ಲಿ ವಾಹನ ಓಡಿಸುವಂತಿದ್ದರೆ, ಆಧ್ಯಾತ್ಮಿಕ ಜೀವನ ವಿಮಾನವನ್ನು ಹಾರಿಸುವಂತಿದೆ. ಏಕೆಂದರೆ, ರಸ್ತೆಯಲ್ಲಿ ಓಡುವ ವಾಹನಗಳು ನೆಲದ ಮೇಲೆ ಮಾತ್ರ ಸಾಗಬಲ್ಲವು, ಸ್ವಲ್ಪವೂ ಮೇಲಕ್ಕೆ ಹೋಗಲು ಸಾಧ್ಯವಿಲ್ಲ.  

ಆದರೆ, ವಿಮಾನ ಅದಕ್ಕೆ ವ್ಯತಿರಿಕ್ತವಾಗಿದೆ. ರಸ್ತೆಯಲ್ಲಿ ಓಡಿ ಮೇಲಕ್ಕೆ ಏರುವುದು. ಉನ್ನತ ಸ್ಥಾನಗಳಿಗೆ ಹೋದಾಗ, ಎಲ್ಲವನ್ನೂ ಸಾಕ್ಷಿಯಾಗಿ ವೀಕ್ಷಿಸುವ ಶಕ್ತಿ ನಮಗೆ ಸಿಗುತ್ತದೆ. ನಾವೆಲ್ಲರೂ ಈಗ ಆದೇಶವನ್ನು ಅನುಸರಿಸುವ ಯಂತ್ರದಂತೆ ಆಗಿದ್ದೇವೆ. ಅದು ಬೇಕಾಗಿಲ್ಲ. ವಿವೇಕ ಮತ್ತು ಜಾಗೃತಿಯುಳ್ಳ ಮನುಷ್ಯನಾಗಿ ಮಾರ್ಪಡಾಗಬೇಕು.  

ಕಳೆದ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ 40+ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಮಾತಾ ಅಮೃತಾನಂದಮಯಿ ಮಠ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ.
ದೇಶ ಹೆಮ್ಮೆಯ ಯೋಧರನ್ನು ಕಳೆದುಕೊಂಡಿದೆ. ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ, ನಮ್ಮನ್ನು ಸುರಕ್ಷಿತವಾಗಿಡಲು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಸ್ಥರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಶ್ರೀ ಮಾತಾ ಅಮೃತಾನಂದಯಿ ಹೇಳಿದ್ದಾರೆ.
2019ರ ಭಾರತ ಯಾತ್ರೆ ಪ್ರಯುಕ್ತ ಮಾತಾ ಅಮೃತಾನಂದಮಯಿ ಮೈಸೂರಿಗೆ ತೆರಳುತ್ತಿದ್ದು, ಇದೇ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

ಇಂದು ಭಾರತ ಹಲವು ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಂಡು ಭರವಸೆ ಮೂಡುತ್ತಿದೆ. ಆರ್ಥಿಕ ಬೆಳವಣಿಗೆಯಲ್ಲಿಯೂ ಹಾಗು ವಿಜ್ಞಾನದಲ್ಲಿಯ ಪ್ರಗತಿಯಲ್ಲಿಯೂ ನಾವು ಬಹಳ ಮುಂದುವರಿಯುತ್ತಿದ್ದೇವೆ. ಮಂಗಳಯಾನ ಉಪಗ್ರಹದ ವಿಜಯವು ಇಡೀ ಲೋಕದ ಮನ್ನಣೆಯನ್ನು ನಮಗೆ ಗಳಿಸಿಕೊಟ್ಟಿದೆ. ಹಾಗಿದ್ದರೂ ಸಹ, ಭಾರತದಲ್ಲಿನ ಪ್ರತಿಯೊಂದು ಬಡವರ ಜೀವನದಲ್ಲಿಯೂಕೂಡ ಮಂಗಳವು ಸಂಭವಿಸುವಾಗ ಮಾತ್ರವೇ  ನಮ್ಮಯ ಅಭಿವೃದ್ಧಿಗಳೆಲ್ಲವೂ ನಿಜವಾದ ಅರ್ಥವನ್ನು ಮತ್ತು ಪೂರ್ಣತೆಯನ್ನು ಹೊಂದುವುದು.ಕಳೆದ ಎರಡು ವರ್ಷಗಳಿಂದ ಆಶ್ರಮವು ಭಾರತದಾದ್ಯಂತ ನೂರಾರು ಗ್ರಾಮಗಳನ್ನು ದತ್ತುಪಡೆದು ಅಲ್ಲಿ ಸೇವಾಕಾರ್ಯಗಳನ್ನು ನಡೆಸುತ್ತಿದೆ. ಹಲವು ಗ್ರಾಮಗಳ ಸ್ಥಿತಿಯನ್ನು ಕಾಣುವಾಗ ದುಃಖವುಂಟಾಗುತ್ತದೆ. ನೂರು ವರ್ಷಗಳ ಹಿಂದಿನ ಅದೇ ಸ್ಥಿತಿ ಇಗಲೂ ಈ ಹಳ್ಳಿಗಳಲ್ಲಿ ಮುಂದುವರೆಯುತ್ತಿದೆ. ಗ್ರಾಮಗಳನ್ನು ಅವಗಣಿಸಿ ಸಾಧಿಸುವ ಅಭಿವೃದ್ಧಿಗಳು, ಶರೀರದ ಕೈಕಾಲುಗಳು ಬೆಳೆದು ಇತರ ದೇಹದಭಾಗಗಳು ಬೆಳೆಯದೇ ಹೋದಹಾಗೆ ಆಗುವುದು.

ಭಾರತದ ಆತ್ಮ ಗ್ರಾಮಗಳು

ಭಾರತದ ಆತ್ಮ ಗ್ರಾಮಗಳು ಎಂಬುದನ್ನು ನಾವು ಮರೆಯಬಾರದು. ನಾವು ಗ್ರಾಮಗಳ ಸಾಂಸ್ಕಾರಿಕ ಮೌಲ್ಯಗಳನ್ನು ಕಾಪಾಡಬೇಕು, ಜೊತೆಗೆ, ಕಾಲೋಚಿತವಾದ ಭೌತ್ತಿಕ ಸಂಪತ್ತುಗಳನ್ನೂ ಗಳಿಸಬೇಕು. ಒಂದು ಹೊತ್ತಿನ ಆಹಾರವನ್ನೂ ಹೊಂದಿಸಲಾಗದೆ ನೊಂದಿರುವಾಗಲೂ, ಸ್ವಂತ ದುಃಖವನ್ನೂ, ನೋವುಗಳೆಲ್ಲವನ್ನೂ “ಇತರರು ಅರಿಯದಿರಲಿ, ಅವರಿಗೆ ಕಷ್ಟವಾಗದಿರಲಿ” ಎಂದು ಯೋಚಿಸುವ ಕುಂಟುಬಗಳಾಗಿದ್ದವು – ಅಮ್ಮನ ಗ್ರಾಮದಲ್ಲಿ. ಈ ರೀತಿಯ ಕುಟುಂಬಗಳು ಇಂದಿಗೂ ಭಾರತದಲ್ಲಿ ಹಲವಾರು ಇವೆಯೆಂಬುದು ಗ್ರಾಮಗಳಲ್ಲಿ ಸೇವೆಯನ್ನು ಮಾಡಲು ಹೋದ ಅಮ್ಮನ ಮಕ್ಕಳು ಹೇಳಿದಾಗ ಅರಿಯಲು ಸಾಧ್ಯವಾಯಿತು. ನಾವು ಆಲೋಚಿಸಿದರೆ ಇತರರ ದುಃಖಗಳನ್ನು, ದುರಿತಗಳನ್ನು ಬಹಳಷ್ಟು ಬದಲಾಯಿಸಲು ಸಾಧ್ಯವಿದೆ. ಒಳಗೆ ಕರುಣೆಯು ಉದಯಿಸುವಾಗ ಮಾತ್ರವೇ ಮನುಷ್ಯ ಮನುಷ್ಯನಾಗುವುದು

UNESCO chair is being announced for Amrita University

ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ

’ಜಿಮ್ ಗೆ’ ಹೋಗಿ ಕೈಗಳ ’ಮಜ಼ಲ್’ ಮಾತ್ರ ಬೆಳೆಸುವ ವ್ಯಾಯಾಮವನ್ನು ಮಾಡುವಹಾಗೆಯಿದೆ ಸಮಾಜದಲ್ಲಿ ಇಂದಿನ ವಿದ್ಯಾಭ್ಯಾಸ. ಹಾಗೆ ಮಾಡಿದರೆ, ಆ ಭಾಗದ ಮಜ಼ಲ್ ಗಳು ಮಾತ್ರ ಬಳೆದು ಶರೀರದ ಉಳಿದ ಭಾಗಗಳೆಲ್ಲವೂ ಅನುಪಾತವಿಲ್ಲದೆ ವಿಕೃತವಾಗಿ ಹೋಗುತ್ತದೆ. ಇದರಂತೆಯೇ, ಇಂದು ದೊರಕ್ಕುತ್ತಿರುವ ವಿದ್ಯಾಭ್ಯಾಸವು, ಬುದ್ಧಿ ನೆನಪಿನಶಕ್ತಿ ಬೆಳದ ಮನುಷ್ಯನನ್ನು ಅತ್ಯಂತ ಹೆಚ್ಚು ಉತ್ಪಾದಕಶಕ್ತಿಯನ್ನು ಹೊಂದಿದ ಯಂತ್ರಗಳಾಗಿಸುವಂತಹದ್ದಾಗಿದೆ.

ಮಾತಿನಲ್ಲೂ ಆಲೋಚನೆಯಲ್ಲಿಯೂ ನಡತೆಯಲ್ಲಿಯೂ ದೃಷ್ಟಿಕೋನದಲ್ಲಿಯೂ ಸಂಸ್ಕಾರದ ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ. ಅದು ಸಕಲ ಜೀವರಾಶಿಗಳ ಅಖಂಡತೆಯನ್ನುದ್ದೇಶಿಸಿ ಅರಿವನ್ನು ಮನುಷ್ಯನಲ್ಲಿ ಸೃಷ್ಟಿಸುವಂಥದ್ದಾಗಿರಬೇಕು.

’ನಾನು ಎಂದಿಗೂ ಜಯಿಸಬೇಕು’ ಎಂದೇ ಎಲ್ಲರೂ ಯೋಚಿಸುವುದು. ’ನಾನು ನಾನು ನಾನು’ ಎಂದಾಗಿ ಎಲ್ಲರ ಮುಖ್ಯ ಅಭಿಮತ ಹಾಗು ಧ್ಯೇಯವಾಕ್ಯವಾಗಿದೆ. ಈ ವಿಧದಲ್ಲಿ ಫಲವನ್ನು ಮಾತ್ರ ನಿರೀಕ್ಷಿಸಿ ಕರ್ಮವನ್ನು ಮಾಡುವಾಗ ಎಂಥದ್ದೇ ಹೀನಕೃತ್ಯವನ್ನು ಕೂಡ ಮಾಡಲು ಮನುಷ್ಯ ಹಿಂಜರಿಯುವುದಿಲ್ಲ. ಕಾರಣ ’ನನ್ನನ್ನು’ ಬಿಟ್ಟು ಉಳಿದವರೆಲ್ಲರೂ ಶತ್ರುಗಳಾಗಿಬಿಡುತ್ತಾರೆ. ಎಲ್ಲ ಸ್ವಂತ ತನ್ನ ಅಧೀನದಲ್ಲಿರಬೇಕು ಎಂಬ ಮನುಷ್ಯನ ನೀಚವಾದ ಈ ಸ್ಪರ್ಧಾತ್ಮಕ ಬುದ್ಧಿಯು ಅವನ ಕರ್ಮಗಳನ್ನು ಅಪ್ರಾಮಾಣಿಕ ಹಾಗು ಅಪೂರ್ಣವೂ ಆಗಿಸುವುದು. ಕರ್ಮದಲ್ಲಿ ಅನ್ವಯಿಸುವ ಸಂತೋಷವು ಹಾಗು ಜವಾಬ್ದಾರಿಯು ಫಲವನ್ನು ಪೂರ್ಣತೆಗೆ ಮುಟ್ಟಿಸುವುದು.

ಪ್ರಾಮಾಣಿಕ ಸಹಕಾರ ಹಾಗು ಗೆಳೆತನ, ಉತ್ಪಾದಕಶಕ್ತಿಯನ್ನು, ಗುಣಮಟ್ಟತೆಯನ್ನು ವರ್ಧಿಸುತ್ತದೆ. ಬದಲಿಗೆ ಅಧಮವಾದ ಪೈಪೋಟೀತನವಲ್ಲ. ಅದೇ ವ್ಯಕ್ತಿಗಳನ್ನು, ಸಮಾಜವನ್ನು, ಉನ್ನತ ಸ್ಥಾನಗಳನ್ನು ಮೀರಿಸಲು ಸಹಾಯಕವಾಗುತ್ತದೆ. ಮಕ್ಕಳೆ, ಜೇನುದುಂಬಿಗಳನ್ನು ಗಮನಿಸಿಲ್ಲವೆ? ಅವುಗಳ ಉತ್ಪಾದಕಶಕ್ತಿಯ, ಜೇನುತುಪ್ಪದ ಗುಣಮಟ್ಟತ್ತೆಯ, ಪರಿಶುದ್ಧತೆಯ ರಹಸ್ಯವೇನು? ಅವುಗಳ ಪರಸ್ಪರ ಸಹಾಯಕ ಗುಣ, ಗೆಳೆತನ, ಐಕ್ಯತೆ. ಎಲ್ಲಕ್ಕಿಂತಲೂ ಮಿಗಿಲಾಗಿ ಸ್ವಂತ ಕರ್ಮದಲ್ಲಿ ಆ ಜೀವಿಗಳು ತೋರುವ ಅಚ್ಚರಿಸುವ ಶ್ರದ್ಧೆ.

-ಅಮ್ಮನ ೬೩ನೇ ಜನ್ಮದಿನದ ಸಂದೇಶದಿಂದ ಆಯ್ದಭಾಗಗಳು

ಮೇರೆ ಇಲ್ಲದ, ಭೇದವಿಲ್ಲದ ಅಖಂಡವಾದ ಏಕತ್ವವೇ ಭಗವಂತ. ಆ ಭಗವತ್ದಶಕ್ತಿಯು ಪ್ರಕೃತಿಯಲ್ಲಿ, ಪರಿಸರದಲ್ಲಿ, ಮೃಗಗಳಲ್ಲಿ, ಮನುಷ್ಯರಲ್ಲಿ, ಗಿಡಗಳಲ್ಲಿ, ಮರಗಳಲ್ಲಿ, ಪಕ್ಷಿಗಳಲ್ಲಿ ಪ್ರತಿಯೊಂದು ಕಣಕಣದಲ್ಲಿಯೂ ತುಂಬಿತುಳುಕುತ್ತಿದೆ. ಜಡ ಚೈತನ್ಯಗಳೆಲ್ಲವೂ ಭಗವತ್ದಮಯವಾಗಿದೆ. ಈ ಸತ್ಯವನ್ನು ಅರಿತರೆ ನಮಗೆ ನಮ್ಮನ್ನು, ಇತರರನ್ನು, ಈ ಲೋಕವನ್ನು ಪ್ರೇಮಿಸಲು ಮಾತ್ರವೇ ಸಾಧ್ಯ.

ಪ್ರೇಮದ ಮೊದಲ ತರಂಗವು ನಮ್ಮಿಂದಲೇ ಪ್ರಾರಂಭವಾಗಬೇಕು. ನಿಶ್ಚಲವಾಗಿರುವ ಸರೋವರದಲ್ಲಿ ಕಲ್ಲೊಂದನ್ನು ಎಸೆದರೆ, ಮೊದಲ ಪುಟ್ಟ ತರಂಗವು ಆ ಕಲ್ಲಿನ ಸುತ್ತಲು ಪ್ರಕಟವಾಗುತ್ತದೆ. ಕ್ರಮೇಣ ಆ ತರಂಗದ ವೃತ್ತವು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ಅದು ಹಾಗೇ ತೀರವನ್ನು ಮುಟ್ಟುತ್ತದೆ. ಇದರಂತೆಯೇ, ಪ್ರೇಮವು ನಮ್ಮೊಳಗಿನಿಂದ ಪ್ರಾರಂಭವಾಗಬೇಕು. ಅವನವನ ಒಳಗೆ ಸುಪ್ತವಾಗಿರುವ ಪ್ರೇಮವನ್ನು ಪರಿಶುದ್ಧವಾಗಿಸಲು ಸಾಧ್ಯವಾದರೆ, ಕ್ರಮೇಣ ಆ ಪ್ರೇಮ ಬೆಳದು ದೊಡ್ಡದಾಗಿ ಇಡೀ ಲೋಕವನ್ನೇ ಬಳಸುತ್ತದೆ.

ಒಂದು ಪಾರಿವಾಳದ ಕೊರಳಿಗೆ ಭಾರವಿರುವ ಒಂದು ಕಲ್ಲನ್ನು ಕಟ್ಟಿಬಿಟ್ಟರೆ, ಅದಕ್ಕೆ ಹಾರಲು ಸಾಧ್ಯವಾಗುವುದಿಲ್ಲ. ಅದರಂತೆಯೇ, ಪ್ರೇಮವೆಂಬ ಪಾರಿವಾಳದ ಕೊರಳಿಗೆ ನಾವು ಬಂಧನಗಳ ಹಾಗು ನಿಯಮಗಳ ಕಲ್ಲುಗಳನ್ನು ಕಟ್ಟಿದ್ದೇವೆ. ಅದಕ್ಕೆ ಸ್ವಾತಂತ್ರ್ಯದ ವಿಶಾಲವಾದ ಆಕಾಶದಲ್ಲಿ ಹಾರಾಡಲು ಸಾಧ್ಯವಿಲ್ಲ. ಅಂಧವಾದ ಮಮತೆಯ ಸರಪಳಿಯಿಂದಾಗಿ ಒಳಗಿರುವ ಪ್ರೇಮವನ್ನು ಅಲ್ಲಿಯೇ ಬಂಧಿಸಿಟ್ಟಿದ್ದೇವೆ. ಪ್ರೇಮವಿಲ್ಲದಿದ್ದರೆ ಜೀವನವಿಲ್ಲ. ಯಾವುದೇ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಸಾಧ್ಯವಿಲ್ಲ.

ಎರಡು ವ್ಯಕ್ತಿಗಳು ಒಟ್ಟಿಗೆ ಬಾಳಲು ಪ್ರಾರಂಭಿಸುವಾಗ, ಘರ್ಷಣೆಯುಂಟಾಗುವುದು ಸ್ವಾಭಾವಿಕ. ಪರಸ್ಪರ ಬಿಟ್ಟುಕೊಡುವುದಿಲ್ಲದೇ ಹೋದರೆ, ಸ್ವಲ್ಪವಾದರೂ ಹೊಂದಾಣಿಕೆಯಿಲ್ಲದೇ ಹೋದರೆ, ನಮ್ಮಯ ಕೌಟುಂಬಿಕ ಬಂಧಗಳು ಮುರಿದು ಬೀಳುತ್ತದೆ. ಕ್ಷಮೆ ಮತ್ತು ತಾಳ್ಮೆ ಜೀವನದ ವಸಂತ ಋತುಗಳಂತೆ. ಈ ಗುಣಗಳಿಲ್ಲದ್ದಿದ್ದಲ್ಲಿ, ಜೀವನ ಬೇಸಿಗೆಯ ಬೇಗೆಯಲ್ಲಿ ಸುಟ್ಟು ಬರಡಾದ ಬಂಜರ ಭೂಮಿಯಂತಾಗುತ್ತದೆ. ಅಲ್ಲಿ ಹೂಗಳು, ಮರಗಳು, ನದಿಗಳ ಕಳರವಗಳು, ಪಕ್ಷಿಗಳ ಚಿಲಿಪಿಲಿನಾದಗಳಾವುವೂ ಇರುವುದಿಲ್ಲ. ಪ್ರೇಮವೇ – ಕೋಡುವವನಿಗೆ ತೆಗೆದುಕೊಳ್ಳುವವನಿಗಿಂತಲೂ ಅಧಿಕ ಸಂತೋಷವನ್ನು ನೀಡುವ ಧನ. ಕೈಯಲ್ಲಿದ್ದೂ ಕಾಣದ ಧನವದು. ಪ್ರೇಮದ ಹೆಜ್ಜೆಗುರುತುಗಳು ಮಾತ್ರವೇ ಕಾಲದ ಪಥದಲ್ಲಿ ಎಂದಿಗೂ ಅಳಿಯದೇ ಉಳಿಯುವುದು. ತನಗಿಂತಲೂ ಶಕ್ತಿಶಾಲಿಯಾದ ಶತ್ರುವನ್ನೂ ನಾಶಮಾಡುವ ಆಯುಧ ಪ್ರೇಮವೇ. ನಿತ್ಯಮುಕ್ತನಾದ ಭಗವಂತನನ್ನೂ ಹಿಡಿದು ಕಟ್ಟುವುದೂ – ಪ್ರೇಮವೇ. ಮಾಯೆಯ ಹಿಡಿತದಿಂದ ಪಾರಾಗುವ ಮಂತ್ರವೂ ಪ್ರೇಮವೇ ಆಗಿದೆ. ಎಲ್ಲಾ ದೇಶಗಳಲ್ಲಿ, ಎಲ್ಲಾ ಕಾಲಗಳಲ್ಲಿ ಬೆಲೆಬಾಳುವ ನಾಣ್ಯವುವೊಂದೆ – ಪ್ರೇಮ.

ಪ್ರೇಮ ಜೇಬಿನಲ್ಲಿ ಬಚ್ಚಿಟ್ಟುಕೊಳ್ಳುವಂಥದ್ದಲ್ಲ, ಕರ್ಮದೊಂದಿಗೆ ಪ್ರಕಾಶಮಾನವಾಗಿಸುವಂಥದ್ದು. ನಾವು ಪ್ರೇಮವೇ ಆಗಿಹೋಗುವಾಗ ಪಂಚೇಂದ್ರಿಯಗಳೂ ಪ್ರೇಮದ ಸೇತುವೆಗಳಾಗಿ ಮಾರ್ಪಡುತ್ತದೆ. ಯಾರ ಅಹಂಕಾರಕ್ಕೂ ಎದುರಿಸಿ ಸೋಲಿಸಲು ಸಾಧ್ಯವಾಗದ ಒಂದೇ ಒಂದೆಂದರೆ ಪ್ರೇಮ. ದುಃಖಗಳಿಗೆ ಏಕೈಕ ವಿಕಿರಮ ಪ್ರಮಾಣದ ಔಷಧವೂ ಏಕಾಂಗೀತನದ ಊರುಗೋಲು – ಪ್ರೇಮವೇ. ನಮ್ಮ ಜೀವನದ ಸಫಲತೆಯ ಸರಿಯಾದ ಅಳತೆಗೋಲೆಂಬುದು ಒಂದೇ – ಅದು ಪ್ರೇಮ ಮಾತ್ರ!

– ಅಮ್ಮನ ೬೩ನೇ ಜನ್ಮದಿನದ ಸಂದೇಶದಿಂದ ಆಯ್ದಭಾಗಗಳು