ಒಬ್ಬ ವ್ಯಕ್ತಿಯ ಹೆಂಡತಿ ತೀರಿಕೊಂಡಳು. ಅವಳ  ಆತ್ಮಶಾಂತಿಗಾಗಿ ಪ್ರಾರ್ಥನೆ ನಡೆಸಲು, ಗಂಡನು ಒಬ್ಬ ಪುರೋಹಿತನನ್ನು ಕರೆತಂದನು. 

ಅವರು ಕಾರ್ಯಗಳನ್ನು ನಡೆಸುತ್ತಿದ್ದ ಸಮಯದಲ್ಲಿ, ಈ ಮಂತ್ರವನ್ನು ಜಪಿಸಿದರು: ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’. ಅದರ ಅರ್ಥ ಗಂಡನಿಗೆ ತಿಳಿಯಲಿಲ್ಲ. ಅವನು ನೇರವಾಗಿ ಪುರೋಹಿತರನ್ನು ಕೇಳಿದ, “ನೀವು  ಪಠಿಸಿದ  ಮಂತ್ರದ ಅರ್ಥವೇನು?” ಪುರೋಹಿತರು ವಿವರಿಸಿದರು, “‘ಈ ಲೋಕದಲ್ಲಿರುವ ಎಲ್ಲರೂ ಸುಖಿಗಳಾಗಲಿ; ಎಲ್ಲರೂ ಐಶ್ವರ್ಯವಂತರಾಗಿ ಮತ್ತು ಶಾಂತಿಯುತರಾಗಿರಲಿ.'”

ಮಂತ್ರವನ್ನು ಅರ್ಥಮಾಡಿಕೊಂಡಾಗ, ಅವನು ಪುರೋಹಿತರನ್ನು ಕೇಳಿದ, “ನನ್ನ ಹೆಂಡತಿಯ ಆತ್ಮಕ್ಕಾಗಿ ಪ್ರಾರ್ಥಿಸಲು ನಾನು ನಿಮ್ಮನ್ನು ಕರೆತಂದಿದ್ದೇನೆ. ಆದರೆ ನೀವು ಪಠಿಸಿದ ಮಂತ್ರದಲ್ಲಿ, ನನ್ನ ಹೆಂಡತಿಯ ಹೆಸರೋ ಅಥವಾ ಅವಳ ಆತ್ಮದ ಬಗ್ಗೆಯೋ ಏನೂ ಸೂಚಿಸಿಲ್ಲ, ಹೌದೇ?”

“ಈ ರೀತಿ ಪ್ರಾರ್ಥಿಸಲು ನನ್ನ ಗುರು ನನಗೆ ಕಲಿಸಿದ್ದಾರೆ. ವಾಸ್ತವವಾಗಿ, ಇಡೀ ಜಗತ್ತಿಗಾಗಿ ನಾವು ಪ್ರಾರ್ಥಿಸಿದಾಗಲೇ ನಿಮ್ಮ ಹೆಂಡತಿಯ ಆತ್ಮಕ್ಕೆ ನಿಜವಾದ ಶಾಂತಿ ಮತ್ತು ಮೋಕ್ಷ ಸಿಗುತ್ತದೆ. ಬೇರೆ ರೀತಿಯಲ್ಲಿ ಪ್ರಾರ್ಥಿಸಲು ನನಗೆ ತಿಳಿದಿಲ್ಲ,” ಎಂದು ಪುರೋಹಿತರು ಉತ್ತರ ನೀಡಿದರು.

ಇತರ ಮಾರ್ಗವಿಲ್ಲದೆ, ಕೊನೆಯಲ್ಲಿ ಗಂಡನು ಪುರೋಹಿತರಿಗೆ ಹೇಳಿದ, “ಸರಿ, ಆದರೆ ಕನಿಷ್ಠಪಕ್ಷ, ನಮ್ಮ ಉತ್ತರ ದಿಕ್ಕಿನಲ್ಲಿರುವ ನೆರೆ ಮನೆಯವರನ್ನು ಮಾತ್ರ ಅದರಿಂದ ಬಿಟ್ಟುಬಿಡಬಹುದೇ? ಅವರಿಗೆ ನಮ್ಮ ಮೇಲೆ ತುಂಬಾ ಹಗೆತನ ಇದೆ. ಅವರನ್ನು ಬಿಟ್ಟು ಉಳಿದೆಲ್ಲರಿಗಾಗಿ ಬೇಕಾದರೂ ನೀವು ಪ್ರಾರ್ಥಿಸಬಹುದು.”

ಮಕ್ಕಳೇ, ಇಂದು ನಮ್ಮ ಮನೋಭಾವವು ಈ ರೀತಿಯಲ್ಲಿದೆ. ಇದನ್ನಲ್ಲ ನಾವು ಪೋಷಿಸಬೇಕಾದದ್ದು. ಇದು ಬದಲಾಗಬೇಕು, ಸಂಪೂರ್ಣವಾಗಿ ಮಾರ್ಪಾಡಾಗಬೇಕು. ಮಂತ್ರಗಳು ನಾಲಿಗೆಯಿಂದ ಉಚ್ಚರಿಸುವುದಕ್ಕೆ ಮಾತ್ರ ಮೀಸಲಾಗಿಲ್ಲ. ಅವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವಗಳಾಗಿವೆ. ಹಾಗಾದಾಗ ಮಾತ್ರ ನಮ್ಮ ಪೂರ್ವಜರ ಮುನ್ನೋಟ ನನಸಾಗುತ್ತದೆ. ನಮ್ಮ ಪ್ರಾರ್ಥನೆಗೆ ಪೂರ್ಣ ಫಲ ಸಿಗುತ್ತದೆ.

ಧರ್ಮ ಜೀವನದ ಒಂದು ಅವಿಭಾಜ್ಯ ಅಂಗ (ಮಾರ್ಗದರ್ಶಿ). ಒಬ್ಬರನ್ನೊಬ್ಬರು ಪ್ರೀತಿಸುವುದು, ಪರಸ್ಪರ ಸೇವೆ ಮಾಡುವುದು, ಕ್ಷಮಿಸುವುದು, ಸಹನೆಯಿಂದಿರುವುದು, ಮತ್ತು ಕರುಣಾಮಯವಾಗಿ ವರ್ತಿಸುವುದು – ಎಂಬ ಈ ಗುಣಗಳನ್ನು ಕಲಿಸುವುದೇ ಧರ್ಮ. 

ಅದ್ವೈತವು ಒಂದು ಅನುಭವ. ಆದಾಗ್ಯೂ, ಅದನ್ನು ದೈನಂದಿನ ಜೀವನದಲ್ಲಿ ಪ್ರೇಮ ಮತ್ತು ಕರುಣೆಯ ರೂಪದಲ್ಲಿ ಪ್ರಕಟಿಸಬಹುದು. ಸನಾತನ ಧರ್ಮದ ಗುರುಗಳಾದ ಋಷಿಮುನಿಗಳು ಮತ್ತು ಮಹಾತ್ಮರು ನಮಗೆ ಬೋಧಿಸುವುದು ಈ ಮಹಾನ್ ಪಾಠವನ್ನೇ.

ನಾವು ಮರೆತುಹೋಗಿರುವ ಧರ್ಮದ ಭಾಷೆಯೇ ಕರುಣೆಯ ಭಾಷೆ. ಧರ್ಮವು ಬೋಧಿಸುವ ಪ್ರೇಮ ಮತ್ತು ಪರಸ್ಪರ ವಿಶ್ವಾಸದ ಭಾಷೆಯನ್ನು ನಾವು ಮರೆತುಬಿಟ್ಟಿದ್ದೇವೆ. ಇಂದು ಜಗತ್ತಿನಲ್ಲಿ ಕಾಣುವ ಎಲ್ಲ ಸಮಸ್ಯೆಗಳ ಮೂಲಕಾರಣ, ಪ್ರೇಮ ಮತ್ತು ಕರುಣೆಯ ಅಭಾವವೇ.

ವ್ಯಕ್ತಿಗತ ಜೀವನದ ಸಮಸ್ಯೆಗಳು, ರಾಷ್ಟ್ರದ ಸಮಸ್ಯೆಗಳು, ಮುಂತಾದ ಜಗತ್ತಿನ ಸಮಸ್ತ ಸಮಸ್ಯೆಗಳಿಗೂ ಕಾರಣ, ಧರ್ಮವು ಉಪದೇಶಿಸುವ ಪ್ರೇಮ ಮತ್ತು ಕರುಣೆಯನ್ನು ನಾವು ಅಳವಡಿಸಿಕೊಳ್ಳಲು (ಆಂತರೀಕರಿಸಲು) ವಿಫಲರಾಗಿದ್ದರಿಂದ. ಊಟ ಮತ್ತು ನಿದ್ರೆಯಂತೆ, ಧರ್ಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.

ಇಂದು ಧರ್ಮಕ್ಕೆ ಒಂದು ಪುನರುಜ್ಜೀವನದ ಅಗತ್ಯವಿದೆ. ಅದಕ್ಕೆ ಒಂದು ಹೊಸ ಜೀವನ ಮತ್ತು ಶಕ್ತಿಯನ್ನು ನೀಡಬೇಕಾಗಿದೆ. ಆಗ ಮಾತ್ರವೇ ಕರುಣೆ ಮತ್ತು ಪ್ರೇಮವು ನಮ್ಮ ಹೃದಯಗಳಲ್ಲಿ ಉದಯಿಸುತ್ತವೆ.  ಪ್ರೇಮ ಮತ್ತು ಕರುಣೆ ಮಾತ್ರವೇ ಅಂಧಕಾರವನ್ನು ದೂರಿಕರಿಸಿ, ಜಗತ್ತಿನಲ್ಲಿ ಬೆಳಕು ಮತ್ತು ಪಾವಿತ್ರ್ಯವನ್ನು (ಪವಿತ್ರತೆಯನ್ನು) ಹರಡಬಲ್ಲವು.

ಪ್ರೇಮ ಎಲ್ಲೆಡೆ ಇದೆ. ಆದರೆ, ಜಗತ್ತಿನಲ್ಲಿ ನಾವು ನೋಡುವ ಎಲ್ಲ ಪ್ರೇಮವೂ ನಿಜವಾದ ಪ್ರೇಮವಲ್ಲ. ನಾವು ನಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ನೆರೆಹೊರೆಯವರನ್ನು ಅದೇ ರೀತಿ ಪ್ರೀತಿಸುವುದಿಲ್ಲ. ನಾವು ನಮ್ಮ ಮಗನನ್ನು ಅಥವಾ ಮಗಳನ್ನು ಪ್ರೀತಿಸುತ್ತೇವೆ. ಆದರೆ ಇತರ ಮಕ್ಕಳನ್ನು ಅದೇ ರೀತಿ ಪ್ರೀತಿಸಲು ನಾವು ಸಿದ್ಧರಿಲ್ಲ. ನಮ್ಮ ತಾಯಿತಂದೆಯರನ್ನು  ಪ್ರೀತಿಸುವಂತೆ ಬೇರೆಯವರನ್ನು ನಾವು ಪ್ರೀತಿಸುವುದಿಲ್ಲ.

ನಾವು ನಮ್ಮ ಧರ್ಮವನ್ನು ಪ್ರೀತಿಸುತ್ತೇವೆ. ಆದರೆ ಇತರ ಧರ್ಮಗಳನ್ನು ಪ್ರೀತಿಸುವುದಿಲ್ಲ. ನಮ್ಮ ದೇಶವನ್ನು ನಾವು ಪ್ರೀತಿಸುವಂತೆ ಇತರ ದೇಶಗಳನ್ನು ನಾವು ಪ್ರೀತಿಸುವುದಿಲ್ಲ; ವಾಸ್ತವವಾಗಿ, ಇತರ ದೇಶಗಳ ಜನರೊಂದಿಗೆ  ನಮಗೆ ಹಗೆತನವೂ ಇದೆ. ಆದ್ದರಿಂದ, ನಮ್ಮದು ನಿಜವಾದ ಪ್ರೇಮವಲ್ಲ; ಅದು ಒಂದು ಸೀಮಿತವಾದ ಬಾಂಧವ್ಯವಾಗಿದೆ. ಈ ಸೀಮಿತ ಹಾಗೂ ಸಂಕುಚಿತ ಬಾಂಧವ್ಯವನ್ನು ದಿವ್ಯ ಪ್ರೇಮವಾಗಿ ಪರಿವರ್ತಿಸುವುದೇ ಆಧ್ಯಾತ್ಮಿಕತೆಯ ಗುರಿಯಾಗಿದೆ.


“ಒಬ್ಬರ ಕೋಪ ಮತ್ತು ಅವಿವೇಕದಿಂದ ಉಂಟಾಗುವ ತೊಂದರೆಯನ್ನು, ಮತ್ತೊಬ್ಬರ ಸಹನೆ, ನಮ್ರತೆ ಮತ್ತು ಶಾಂತತೆಗಳು ಸರಿದೂಗಿಸುತ್ತವೆ.”

ಒಂದು ಕುಟುಂಬದಲ್ಲಿನ ಎಲ್ಲ ಸದಸ್ಯರು ಒಂದೇ ಸ್ವಭಾವದವರಾಗಿರಬೇಕು ಎಂಬುದಿಲ್ಲ. ಅಲ್ಲಲ್ಲಿ ಹಠಮಾರಿ, ಅವಿವೇಕಿ ಮತ್ತು ಕೋಪಿಷ್ಠನಾದ ವ್ಯಕ್ತಿಯೂ ಇರಬಹುದು. ಆದರೆ, ಅದೇ ಕುಟುಂಬದಲ್ಲಿ ಸಾತ್ವಿಕ, ಶಾಂತ ಮತ್ತು ವಿವೇಕದಿಂದ ಆಲೋಚಿಸಿ ಎಚ್ಚರಿಕೆಯಿಂದ ಕಾರ್ಯಗಳನ್ನು ಮಾಡುವ ವ್ಯಕ್ತಿಯೂ ಇರಬಹುದು.

ಈ ಇಬ್ಬರಲ್ಲಿ ಯಾರು ಆ ಕುಟುಂಬದಲ್ಲಿ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡುತ್ತಾರೆ? ಖಂಡಿತವಾಗಿ ಎರಡನೆಯ ವ್ಯಕ್ತಿಯೇ. ಅವರ ವಿವೇಕ, ನಮ್ರತೆ ಮತ್ತು ಸಹನೆಯೇ ಆ ಕುಟುಂಬವನ್ನು ವಿನಾಶದಿಂದ ರಕ್ಷಿಸುತ್ತದೆ. ಕೇವಲ ಕೋಪಿಷ್ಠ ಮತ್ತು ಅವಿವೇಕಿ ವ್ಯಕ್ತಿ ಮಾತ್ರ ಇದ್ದಿದ್ದರೆ, ಆ ಕುಟುಂಬವೇ ನಾಶವಾಗುತ್ತಿತ್ತು.

ಅದೇ ರೀತಿ, ಮಹಾತ್ಮರು ಮತ್ತು ಗುರುಗಳು ಈ ಜಗತ್ತಿನ ಕುಟುಂಬದ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡುತ್ತಾರೆ. ಅವರ ಸಹನೆ, ವಿವೇಕ, ಪ್ರೀತಿ ಮತ್ತು ಕರುಣೆಯೇ ಈ ಲೋಕವನ್ನು ಸುಸ್ಥಿರಗೊಳಿಸುತ್ತದೆ. ಇಲ್ಲದಿದ್ದರೆ, ಇವೆಲ್ಲವೂ ನಾಶವಾಗಿ ನಾವು ಅವಶೇಷಗಳಾಗುತ್ತಿದ್ದೆವು!

“ಧರ್ಮದ ಅಂತರಾರ್ಥವನ್ನು ಅರ್ಥಮಾಡಿಕೊಂಡು ವಿವೇಕಬುದ್ಧಿಯಿಂದ ಮತ್ತು ಶಾಂತಿಯಿಂದ ನಡೆದುಕೊಳ್ಳುವ ಒಬ್ಬ ಸದಸ್ಯನಾದರೂ ಒಂದು ಕುಟುಂಬದಲ್ಲಿದ್ದರೆ, ಈ ಲೋಕದ ಮುಖಚಿತ್ರವನ್ನೇ ಬದಲಾಯಿಸಲು ಸಾಧ್ಯವಾಗುತ್ತದೆ. ಧಾರ್ಮಿಕ ತತ್ತ್ವಗಳಿಂದ ಮಾತ್ರ ಈ ಪರಿವರ್ತನೆ ಸಾಧ್ಯ.

ಧರ್ಮದ ನಿಜವಾದ ಆದರ್ಶವನ್ನು ಅಳವಡಿಸಿಕೊಂಡರೆ, ಇತರರ ದುಃಖ ನಮ್ಮ ದುಃಖವಾಗುತ್ತದೆ; ಇತರರ ಸಂತೋಷ ನಮ್ಮ ಸಂತೋಷವಾಗುತ್ತದೆ; ಹೃದಯದಲ್ಲಿ ಕರುಣೆ ಜಾಗೃತವಾಗುತ್ತದೆ; ಇತರರ ಕಷ್ಟ ಮತ್ತು ನೋವನ್ನು ಅರಿತು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆತ್ಮದ ಏಕತ್ವವನ್ನು ಅರಿತಾಗ ಮಾತ್ರ ಇತರರಬಗ್ಗೆ ಪೂರ್ಣ ಕರುಣೆ ಮತ್ತು ಪ್ರೀತಿ ಉಂಟಾಗುತ್ತದೆ. ಅದೇ ಧರ್ಮದ ಧ್ಯೇಯೋದ್ದೇಶ.”


ಭಾರತದ ಸಂಪತ್ತೆಂದರೆ ಪ್ರೇಮ. ಜೀವನದ ಅಡಿಪಾಯ ಪ್ರೇಮವಾಗಿದೆ.

ಇಂದು ನಾವು ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಲ್ಲಿ ಶೇಕಡಾ ತೊಂಬತ್ತು ಭಾಗ ಆಗಿಹೋದ ದುಃಖ ಮತ್ತು ನೋವುಗಳಿಂದ ಉಂಟಾಗಿವೆ. ಇಂತಹ ಗುಣವಾಗದ ಅನೇಕ ಗಾಯಗಳೊಂದಿಗೆ ಪ್ರತಿಯೊಬ್ಬರೂ ಇಂದು  ಜೀವಿಸುತ್ತಿದ್ದಾರೆ.

ಇಂತಹ ಗಾಯಗಳನ್ನು ಗುಣಪಡಿಸಲು ವೈದ್ಯಶಾಸ್ತ್ರದಲ್ಲಿ ಯಾವುದೇ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಇದಕ್ಕೊಂದು ಪರಿಹಾರವಿದೆ. ಪರಸ್ಪರ ಹೃದಯವನ್ನು ತೆರೆಯಿರಿ. ಭಾವನೆಗಳನ್ನು ಹಂಚಿಕೊಳ್ಳಿರಿ. ಒಬ್ಬರ ಕೊರತೆಯನ್ನು ತುಂಬಲು ಇನ್ನೊಬ್ಬರು ಪ್ರಯತ್ನಿಸಬೇಕು.

ಮಕ್ಕಳೇ, ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆದಾಗ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ. ಪ್ರೀತಿಯೇ ಜೀವನದ ಅಡಿಪಾಯ. ತಿಳಿದೋ ತಿಳಿಯದೆಯೋ ನಾವು ಇದನ್ನು ಅಲಕ್ಷಿಸಿರುವುದು ಇಂದಿನ ಎಲ್ಲ ಸಮಸ್ಯೆಗಳ ಮೂಲಕಾರಣ.

ದೇಹಕ್ಕೆ ಬೆಳೆಯಲು ಆಹಾರ ಬೇಕಾದರೆ, ಆತ್ಮಕ್ಕೆ ಬೆಳೆಯಲು ಪ್ರೀತಿ ಬೇಕು. ತಾಯಿಯ ಹಾಲು ನೀಡಲಾಗದ ಶಕ್ತಿ ಮತ್ತು ಹುರುಪನ್ನು ಪ್ರೇಮವು ನೀಡಬಲ್ಲದು. ಆದ್ದರಿಂದ ಮಕ್ಕಳೇ, ಪರಸ್ಪರ ಪ್ರೀತಿಸಿ ಒಂದಾಗಿರಿ. ಇದು ಅಮ್ಮನ ಆಶಯ. ಈ ಆದರ್ಶವನ್ನು ಮಕ್ಕಳು ಬೆಳೆಸಿಕೊಳ್ಳಬೇಕು.

ಅಮ್ಮನ ಬಳಿ ವಿವಿಧ ಸ್ವಭಾವದ ಅನೇಕ ಜನರು ಬರುತ್ತಾರೆ. ಅನೇಕ ಕುಟುಂಬ ಸಮಸ್ಯೆಗಳು ಸಣ್ಣ ವಿಷಯಗಳಿಂದ ಶುರುವಾಗುತ್ತವೆ. ಜೀವನವು ಸಮಸ್ಯೆಗಳಿಂದ ತುಂಬಿದೆ. ಸ್ವಲ್ಪ ತಾಳ್ಮೆ ಇದ್ದರೆ, ನಾವು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.

ಒಮ್ಮೆ ಪತಿ ಪತ್ನಿಯರು ಅಮ್ಮನ  ಬಳಿಗೆ ಬಂದರು. ಹೆಂಡತಿಗೆ ಕೆಲವೊಮ್ಮೆ ಮಾನಸಿಕ ಸಮತೋಲನ ಸ್ವಲ್ಪ ತಪ್ಪುತ್ತಿತ್ತು. ಯಾವುದಾದರೂ ಒತ್ತಡ ಉಂಟಾದಾಗ ಇದು ಸಂಭವಿಸುತ್ತಿತ್ತು. ಆಗ ಅವರು ಏನು ಹೇಳುತ್ತಿದ್ದಾರೆಂದು ಅವರಿಗೇ ತಿಳಿಯುತ್ತಿರಲಿಲ್ಲ. ಆದರೆ ಅವರಿಗೆ ಗಂಡನ ಮೇಲೆ ಬಹಳ ಪ್ರೀತಿಯಿತ್ತು.

ಇದನ್ನು ತಿಳಿದುಕೊಂಡು, ಅಮ್ಮ ಆ ಗಂಡನಿಗೆ ಹೇಳಿದರು, “ಮಗು, ಸ್ವಲ್ಪ ಗಮನವಿಟ್ಟರೆ ಸಾಕು. ಆ ಹುಡುಗಿ ಯಾವುದಾದರೂ ಅವಿವೇಕದ ಮಾತು ಹೇಳಿದರೂ, ಅದು ಅವಳ ಅನಾರೋಗ್ಯದ ಕಾರಣ ಎಂದು ತಿಳಿದು ನೀನು ಸಹಿಸಿಕೊಳ್ಳಬೇಕು. ಕ್ರಮೇಣ ಈ ಕಾಯಿಲೆ ಸರಿಯಾಗುತ್ತದೆ.”

ಆದರೆ, ಆ ಗಂಡನು ಅದನ್ನು ಲೆಕ್ಕಿಸಲಿಲ್ಲ. “ನಾನೇಕೆ ಸುಮ್ಮನಿರಬೇಕು? ಅವಳು ನನ್ನ ಹೆಂಡತಿ ಅಲ್ಲವೇ?” ಇದು ಆತನ ಮನೋಭಾವವಾಗಿತ್ತು. ಇದರ ಪರಿಣಾಮ ಏನಾಯಿತು? ಮನೆಯಲ್ಲಿ ಜಗಳ ಹೆಚ್ಚಾಯಿತು. ಹೆಂಡತಿಯ ಅನಾರೋಗ್ಯ ಹೆಚ್ಚಾಯಿತು. ಅವಳ ಕುಟುಂಬದವರು ಅವಳನ್ನು ಕರೆದುಕೊಂಡು ಹೋದರು. ಆ ಗಂಡನ ಜೀವನವೇ ಚೂರುಚೂರಾಯಿತು. ಅವನು ಮದ್ಯಪಾನಿಯಾದ. ಸಂಪತ್ತೆಲ್ಲವನ್ನೂ ಕುಡಿದು ಕಳೆದನು. ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಂಡನು.

ಹೆಂಡತಿಯ ಕಾಯಿಲೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ಸಹನೆಯಿಂದ, ಪ್ರೀತಿಯಿಂದ ನಡೆದುಕೊಂಡಿದ್ದರೆ, ಇದು ಸಂಭವಿಸುತ್ತಿರಲಿಲ್ಲ. ಆದ್ದರಿಂದ ಮಕ್ಕಳೇ, ಪ್ರತಿಯೊಂದು ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು.