27 ಸೆಪ್ಟಂಬರ್, 2010 ದುರಸ್ತಿಯ
“ಶುಚಿತ್ವವೇ ದಿವ್ಯತ್ವವು. ಪ್ರಕೃತಿದತ್ತವಾದ ಯಾವೊಂದನ್ನೂ ಅಂದಗೊಳಿಸುವುದರಲ್ಲಿ ಅರ್ಥವಿಲ್ಲ. ಅದಕ್ಕೆ ನಿರ್ವಹಣೆಯ ಅಗತ್ಯವಿಲ್ಲ. ಕಾಡಿಗೂ ಕಡಲಿಗೂ ಮಲೆಗಳಿಗೂ ನದಿಗಳಿಗೂ ನಿಸರ್ಗದತ್ತವಾದ ಸೌಂದರ್ಯವಿದೆ. ಅದೊಂದನ್ನೂ ಗುಡಿಸಿ ಸಾರಿಸಿ ಸ್ವಚ್ಚವಾಗಿಡುವ ಅವಶ್ಯಕತೆಯಿಲ್ಲ. ಮನುಷ್ಯನೇ ಅವೆಲ್ಲವುಗಳನ್ನು ಮಲಿನಗೊಳಿಸುವುದು. ಆದರೂ ಮನುಷ್ಯ ಸೃಷ್ಟಿಸಿದ್ದೆಲ್ಲವನ್ನೂ ದಿನಾಲೂ ಶುಚಿಯಾಗಿಡಬೇಕು. ದುರಸ್ತಿ ಮಾಡಬೇಕು. ಆದರೆ ನಮ್ಮ ಸಾರ್ವಜನಿಕ ಸ್ಥಳಗಳನ್ನೂ ಅಲ್ಲಿರುವ ಮೂತ್ರಾಲಯಗಳನ್ನೂ ಕಕ್ಕಸುಗಳನ್ನೂ ನಮ್ಮ ರಸ್ತೆಗಳನ್ನೂ ನಾವು ಸರಿ ಸುಮಾರು ಪೂರ್ಣವಾಗಿಯೆ ಅವಗಣಿಸಿದಂತಿದೆ.
ಶುಚಿಹೀನತೆಯ ಹೆಸರಲ್ಲಿ, ನಾವು ನಮ್ಮ ದೇಶಕ್ಕೆ ಮಾಡಿರುವ ಅಪಮಾನ ಕಮ್ಮಿಯೇನಲ್ಲ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ಪೋರ್ಟ್ಸ್ಮನ್ಗಳಿಗೆ ವಾಸಕ್ಕೆಂದು ಮಾಡಿದ ಕಟ್ಟಡಗಳಲ್ಲಿ ಕೂಡ ತಂಬಾಕು ಉಗಿದೋ, ಎಲ್ಲಾ ರೀತಿಯ ಕಸ ಬಿಸಾಕಿಯೋ ನಾವು ಕೊಳೆ ಮಾಡುತ್ತೇವೆ. ಇದು ವಿದೇಶಿ ಚಾನಲ್ಗಳಲ್ಲಿ ತೋರಿಸಿ ನಮ್ಮ ತಮಾಷೆ ಮಾಡುತ್ತಾರೆ. ವಿದೇಶಿ ಮಾಧ್ಯಮಗಳಲ್ಲಿ ನಮ್ಮ ರೋಡುಗಳೂ ಸಾರ್ವಜನಿಕ ಸ್ಥಳಗಳೂ ಕೊಳಕೆಂಬ ಟೀಕೆಯನ್ನೊಳಗೊಂಡ ಲೇಖನಗಳು ಬಂದವು. ಇದೆಲ್ಲ ನೋಡುವಾಗ ಎಷ್ಟೊಂದು ನೋವಾಗುತ್ತದೆ.
ಭಾರತ ಅಣುಶಕ್ತಿ ರಾಷ್ಟ್ರವಾಗಿದೆ. ಆರ್ಥಿಕ ವೈಜ್ಞಾನಿಕ ತಾಂತ್ರಿಕ ರಂಗಗಳಲ್ಲಿ ಭಾರತ ಮುಂದುವರೆಯುತ್ತಿದೆ. 2025ರಲ್ಲಿ ಭಾರತವು ಲೋಕದಲ್ಲೆ ಮೂರನೆಯ ಶಕ್ತಿಯಾಗುವುದು ಎಂದೆಲ್ಲ ಹೇಳುತ್ತಿದ್ದಾರೆ. ಆದರೂ, ಪರಿಸರ ಶುಚೀಕರಣ ಕಾರ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿಲ್ಲ ಎನ್ನುವ ಸ್ಥಿತಿಯಲ್ಲಿದ್ದೇವೆ. ಹುಟ್ಟಿದೂರಿನ ಆತ್ಮಾಭಿಮಾನಕ್ಕೆ ತಿವಿದು ಗಾಯ ಮಾಡುವಾಗ ಹೃದಯದಲ್ಲಿ ನೋವಾಗಬೇಕು, “ಈ ಗತಿ ಇಲ್ಲದಂತಾಗಲು ನಾನೇನು ಮಾಡಲು ಸಾಧ್ಯ” ಎಂದು ಪ್ರಾಮಾಣಿಕ ಚಿಂತನೆ ಮಾಡಬೇಕು. ನಮ್ಮಿಂದ ಸಾಧ್ಯವಿರುವ ಕಾರ್ಯಗಳನ್ನು ಮಾಡಲು ಶ್ರಮಿಸಬೇಕು. ಪತ್ರಿಕೆಗಳ, ಟಿ.ವಿ.ಮಾಧ್ಯಮಗಳ ಕೊಡುಗೆ ಈ ದಿಕ್ಕಿನಲ್ಲಿ ಒಂದು ದೊಡ್ಡ ಪರಿವರ್ತನೆ ಮಾಡುವುದು ಎಂಬ ನಂಬಿಕೆ ನನ್ನದು”
ಕೇರಳದಲ್ಲೆಲ್ಲ ಶುಚೀಕರಣದ ಒಂದು ಹೊಸ ಅಧ್ಯಾಯ ತೆರೆಯುವುದೆಂದೂ ಇದಕ್ಕಾಗಿ ಸ್ವಯಂಸೇವಕರಿಗೆ ಸೈಕಲ್ಗಳನ್ನೂ, ವಿದ್ಯಾರ್ಥಿಗಳಿಗೆ ಹತ್ತು ಲಕ್ಷ ಕರವಸ್ತ್ರಗಳನ್ನೂ ಹಂಚಲಾಗುವುದೆಂದು ತನ್ನ 57ನೇ ಜನ್ಮದಿನದಂದು ಮಾತನಾಡುತ್ತಾ ಅಮ್ಮ ನುಡಿದರು.