ಅಮೃತಪುರಿ, ಸೆಪ್ಟೆಂಬರ್ 22.
ಅಮ್ಮ ತಮಗೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರ ದೊರೆತಲ್ಲಿ ದೇಶದ ಶಾಲೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ನಿರ್ಮಲವನ್ನಾಗಿ ಮಾಡಲು ಮಠದ ವತಿಯಿಂದ ಸಿದ್ಧರಾಗಿದ್ದೇವೆ, ಎಂದು ಹೇಳಿದ್ದಾರೆ. “ಭಾರತ ಪ್ರಗತಿಶೀಲ ದೇಶವೆಂದು ನಾವು ಹೇಳಿಕೊಳ್ಳುತ್ತೇವೆ. ಆದರೆ ಇಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಇನ್ನೂ ಯಶಸ್ವಿಯಾಗಿಲ್ಲ. ನಾವು ಇನ್ನೂ ಹಲವು ಶತಮಾನಗಳಷ್ಟು ಹಿಂದುಳಿದಿದ್ದೇವೆ, ಇದಕ್ಕೆ ನಮ್ಮ ರಸ್ತೆಗಳು ಮತ್ತು ಸಾರ್ವಜನಿಕ ಶೌಚಾಲಯಗಳೇ ಸಾಕ್ಷಿ.” ಎಂದು ಅಮ್ಮ ಅತಿ ವ್ಯಸನದಿಂದ ಹೇಳುತ್ತಾರೆ.
“ವಿದೇಶಗಳಲ್ಲಿ ಶೌಚಾಲಯ, ರಸ್ತೆಗಳ ಸ್ವಚ್ಚತೆ ಕಾಪಾಡಿಕೊಂದು ಬರುವುದರಲ್ಲಿ ಸಾಕಷ್ಟು ಗಮನ ನೀಡುತ್ತಿದ್ದಾರೆ. ನಾವು ಇದನ್ನು ಅನುಸರಿಸಬೇಕಾಗಿದೆ. ಅವರಿಗೆ ಹೋಲಿಸಿದರೆ ನಾವಿನ್ನೂ ತುಂಬಾ ಹಿಂದುಳಿದಿದ್ದೇವೆ ಎಂದು ಬಹಳ ದುಃಖವಿದೆ. ಭಾರತದಲ್ಲಿ ಇನ್ನೂ ರಸ್ತೆ ಬದಿಯಲ್ಲೇ ಮೂತ್ರ ಮಾಡುವುದು, ಎಲ್ಲೆಂದರಲ್ಲಿ ಉಗಿಯುವುದು ಸಾಮಾನ್ಯ ದೃಶ್ಯವಾಗಿದೆ. ಕಸದ ತೊಟ್ಟಿಗಳಿದ್ದರೂ ಜನರು ಅದನ್ನು ಸರಿಯಾಗಿ ಬಳಸುತ್ತಿಲ್ಲ, ರಸ್ತೆಯಲ್ಲಿ ಕಸ ಸುರಿಯುತ್ತಾರೆ. ಪರಿಸರ ಸ್ವಚ್ಚತೆ ನಮ್ಮ ಅಭಿವೃದ್ಧಿ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇದನ್ನು ಸರಿಪಡಿಸಲು ನಾವು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಬೇಕು. ನಾವು ಇದನ್ನು ತಿಳಿಸುವ ನಾಮ ಫಲಕಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ, ದೊಡ್ದದಾಗಿ ಕಾಣುವಂತೆ ಅಲ್ಲಲ್ಲಿ ಪ್ರದರ್ಶಿಸಬೇಕು.”
ಅಮ್ಮ ಇಂತಹ ಕಾರ್ಯಕ್ಕೆ ತಮ್ಮ ಮಠದಿಂದ ಸಂಪೂರ್ಣ ಸಹಕಾರ ಸಿಗಲಿದೆ ಎಂದು ಒತ್ತಿ, ಒತ್ತಿ ಹೇಳಿದ್ದಾರೆ. ಈ ಪ್ರಯತ್ನದಲ್ಲಿ ವೃತ್ತ ಪತ್ರಿಕೆ ಮತ್ತು ಟಿ. ವಿ. ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ. ಮಠವು ಸರ್ಕಾರ ಮತ್ತು ಆಡಳಿತ ಸಂಸ್ಥೆಗಳ ಸಹಕಾರ ದೊರೆತಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಸಿದ್ಧವಾಗಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ. “ಇದಕ್ಕೆ ಅಗತ್ಯವಾದ ಯೋಜನೆ ಸಿದ್ಧವಾಗುತ್ತಿದೆ. ಮೊದಲು ಕೇರಳದಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ. ಆ ಬಳಿಕ ಇತರ ರಾಜ್ಯಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು” ಎಂದು ಅಮ್ಮ ಯೋಜನೆಯನ್ನು ಕೃತಿಗಿಳಿಸುವ ಬಗ್ಗೆ ಹೇಳಿದ್ದಾರೆ.