ಇವತ್ತಿನ ಮಕ್ಕಳೂ ಯುವಕರೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೇ ಕಾಣುತ್ತಿರುವುದು. ನಮ್ಮಲ್ಲಿಲ್ಲದ ಹಲವು ಒಳ್ಳೆಗುಣಗಳು ಅವರಲ್ಲಿ ಕಂಡು ಬರುತ್ತದೆ. ಆದರೆ, ನಮ್ಮ ಮೌಲ್ಯಗಳನ್ನು, ಸಂಸ್ಕೃತಿಯನ್ನು ಪೂರ್ಣವಾಗಿ ಮರೆತು ಪಾಶ್ಚಾತ್ಯ ರೀತಿಗಳ ಅಂಧಾನುಕರಣೆಯೇ ಇವತ್ತು ಕಂಡುಬರುವುದು. ಅದು ಪ್ಲಾಸ್ಟಿಕ್ ಸೇಬು ಕಚ್ಚಿದ ಹಾಗೆ; ಶಿವನು ಬ್ರಹ್ಮನ ವೇಷ ಹಾಕಿದಂತೆ. ಇದರಿಂದ ನಮ್ಮ ನಿಜ ವ್ಯಕ್ತಿತ್ವ ನಾಶವಾಗುತ್ತದೆ. ಆದಕಾರಣ ನಾವು ಬೆಳೆದ ಸಂಸ್ಕೃತಿಗೆ ಮರಳಲು ಪ್ರಯತ್ನಿಸಬೇಕು. ಅದಕ್ಕಾಗಿ ಚಿಕ್ಕ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಈ ಸಂಸ್ಕೃತಿಯ ಭದ್ರ ಬುನಾದಿ ಹಾಕಲು ತಾಯಂದಿರು ಪ್ರಯತ್ನಿಸಬೇಕು. ಸಮಯ ಇನ್ನೂ ಮೀರಿಲ್ಲ. ವಯಸ್ಕರು ನಮ್ಮಸಂಸ್ಕೃತಿ ಏನಂತ ಅರಿತು ಮುಂದಿನ ತಲೆಮಾರಿಗೆ ಹಸ್ತಾಂತರಿಸ ಬೇಕು. ಆದರೆ ಇವತ್ತಿನ ಹಲವು ತಂದೆತಾಯಂದಿರು ಏನಂತ ಹೇಳುತ್ತಾರೆ? ಮಕ್ಕಳಿಗೆ, ನೀನು ಚೆನ್ನಾಗಿ ಓದಿ ಡಾಕ್ಟರಾಗ ಬೇಕು, ಇಂಜಿನಿಯರ್ ಆಗಬೇಕು, ಕಲೆಕ್ಟರ್ ಆಗಬೇಕು ಎಂದು ಮಾತ್ರವೇ ಉಪದೇಶಿಸುತ್ತಾರೆ. ಇದು ಬೇಡವೆಂದೋ, ತಪ್ಪೆಂದೋ ಅಮ್ಮ ಹೇಳುತ್ತಿಲ್ಲ. ಅದರೊಂದಿಗೆ ನಮ್ಮ ಮಾನವೀಯ ಮೌಲ್ಯಗಳನ್ನು ಕೂಡಿಸಿ, ಉದ್ಧಾರ ಮಾಡುವ ಮಾರ್ಗವನ್ನು, ಜೀವಿಸಿ ತೋರಿಸಿ ಕೊಡಬೇಕು. ಅದು ಮಾತ್ರವೇ ಅಮ್ಮ ಹೇಳಲಿಕ್ಕಿರುವುದು.
ಚಿಕ್ಕ ಮಕ್ಕಳ ಮನಸ್ಸೆಂಬುದು ಹೊಸದಾಗಿ ಸಿಮೆಂಟ್ ಹಾಕಿದ ನೆಲದ ಹಾಗೆ. ಅದರಲ್ಲಿ ಅಚ್ಚುಮೂಡಿದ ಹೆಜ್ಜೆ ಗುರುತುಗಳು ಮಾಸಿಹೋಗುವುದಿಲ್ಲ. ಅದು ಸ್ಪಷ್ಟವಾಗಿ ಉಳಿಯುತ್ತದೆ. ಆದ ಕಾರಣವೇ, ಚಿಕ್ಕ ಪ್ರಾಯದಿಂದಲೇ ಅವರಲ್ಲಿ ಒಳ್ಳೆ ಸಂಸ್ಕೃತಿ ಬೆಳೆಸಲು ನಾವು ಶ್ರಮಿಸಬೇಕು. ಮೊದಲಿನಿಂದಲೇ ಮೈಗೂಡಿಸಿಕೊಂಡು ಬಂದ ಈ ಸಂಸ್ಕೃತಿಯೇ ಅವರ ಬದುಕಿನ ಮೂಲೆಗಲ್ಲು. ನಮಗೆಲ್ಲಾ ನಮ್ಮ ಮಕ್ಕಳು ಓದಿ ಶಕ್ತಿಶಾಲಿಗಳಾಗಿ, ಧಾರಾಳ ಹಣ ಸಂಪಾದಿಸಿ ಸುಖವಾಗಿ ಜೀವಿಸುವುದನ್ನು ಕಾಣಲು ಆಸೆ. ಹಾಗಂತ, ಆಧ್ಯಾತ್ಮಿಕ ಸಂಸ್ಕಾರವಿಲ್ಲದಿದ್ದರೆ, ಎಷ್ಟು ವಿದ್ಯೆ ಸಂಪಾದಿಸಿದರೂ, ಯಾವ ಪದವಿ ಗಳಿಸಿದರೂ, ಎಷ್ಟು ಧನ ಸಂಪಾದಿಸಿದರೂ ಅದರಿಂದಾಗಿ ಮಾತಾಪಿತೃಗಳಿಗೆ, ಸಮುದಾಯಕ್ಕೆ ಶಾಂತಿಯೂ, ಸಮಾಧಾನವೂ ಸಿಗಬೇಕೆಂದೇನಿಲ್ಲ. ಇದೆಲ್ಲ ಗಳಿಸುವ ಅವಕಾಶ ಕೊಟ್ಟೂ ಮಕ್ಕಳ ನೈತಿಕ ಅಧಃಪತನದ ಜೀವನ ಕಂಡು ಕಣ್ಣೀರು ಕರೆಯುವ ಸಾಕಷ್ಟುಕುಟುಂಬಗಳು ಅಮ್ಮನಿಗೆ ಗೊತ್ತು. ಅವೆಲ್ಲವುಗಳಿಗೆ ಅಡಿಪಾಯವು ಒಳ್ಳೆ ಸಂಸ್ಕಾರ. ಅದುವೇ ಯಾವ ತಂದೆಯೂ, ತಾಯಿಯೂ ಮಕ್ಕಳಿಗೆ ಕೊಡಬೇಕಾದ ಅತಿ ಬೆಲೆಬಾಳುವ ಹಾಗೂ ನಶಿಸಲಾಗದ ಆಸ್ತಿ. ಸಂಸ್ಕಾರವೆಂಬುದು ಬರೇ ಪುಸ್ತಕಗಳೋ, ಶಾಲೆಯೋ ಕೊಡಲು ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಪ್ರಪ್ರಥಮವಾಗಿ ಬೇಕಾಗಿರುವುದು ನಮ್ಮ ಜೀವನವನ್ನು ಸಂಸ್ಕಾರಸಂಪನ್ನ ಮಾಡುವುದು. ನಮ್ಮಲ್ಲಿ ಪರಿವರ್ತನೆ ಸಾಧಿಸದೆ ಮುಂದಿನ ತಲೆಮಾರಿನಲ್ಲಿ ಪರಿವರ್ತನೆ ತರುವುದು ಸಾಧ್ಯವಿಲ್ಲ. ಇಂದು ನಾವು ಚಿನ್ನ ಕೊಟ್ಟು ಕಾಗೆಬಂಗಾರ ಸಂಪಾದಿಸುತ್ತಿದ್ದೇವೆ. ಈ ಮಣ್ಣಿನ ಅಧ್ಯಾತ್ಮಿಕ ಸಂಸ್ಕಾರ ಕಳೆದುಕೊಳ್ಳದೆಯೇ ನಮಗೆ ಸಂಪತ್ತು ಗಳಿಸಲು ಸಾಧ್ಯ. ಆಧ್ಯಾತ್ಮಿಕತೆಯೂ, ಲೌಕಿಕತೆಯೂ ಪರಸ್ಪರ ವಿರುದ್ಧವಲ್ಲ. ಒಂದಕ್ಕೆ ಬೇಕಾಗಿ ಮತ್ತೊಂದನ್ನು ನಿರಾಕರಿಸಬೇಕಾಗಿಲ್ಲ.
(ಅಮ್ಮನ 2001ರ ಜನ್ಮದಿನದ ಸಂದೇಶದಿಂದ)