ಗ್ರಾಮದಲ್ಲಿ ಮಠದ ವತಿಯಿಂದ ನಡೆದಿರುವ ಮನೆ ನಿರ್ಮಾಣ ಕೆಲಸದಲ್ಲಿ ಅಮ್ಮನ ಭಕ್ತಮಕ್ಕಳು ರಾಜ್ಯದ ಎಲ್ಲೆಡೆಯಿಂದ ಬಂದು ವಿವಿಧ ರೀತಿಯಲ್ಲಿ ಭಾಗವಹಿಸುತ್ತಲಿದ್ದಾರೆ.

ಬೆಂಗಳೂರಿನ ಅಯುಧ್ ಸಂಘಟನೆಯ 20 ಯುವಕರು ಸ್ವಾಮಿ ಅಮೃತಗೀತಾನಂದ ಪುರಿ ಅವರ ನೇತೃತ್ವದಲ್ಲಿ ಐದು ದಿನ ಶ್ರಮದಾನ ಮಾಡಿದರು. “ನಾವು ಮಾಡಿದ್ದು ಅಳಿಲು ಸೇವೆಯೇ ಸರಿ. ಆಧ್ಯಾತ್ಮದಲ್ಲಿ ತಪಸ್ಸಿಗೆ ಬಹಳ ಮಹತ್ವವಿದೆ. ಅಮ್ಮನ ಮಕ್ಕಳಾದ ನಮಗೆ ರಾಯಚೂರಿನಲ್ಲಿ ಸೇವೆ ಮಾಡುವುದು ನಿಜವಾದ ತಪಸ್ಸಾಯಿತು. ಹೃದಯದಲ್ಲಿ ನಾವು ಅಮ್ಮನಿಗಾಗಿ ತಪಿಸುತ್ತಿದ್ದೆವು.” ೪೮ ಡಿಗ್ರಿ ಸೆ. ತಾಪಮಾನದಲ್ಲಿ ಅಲ್ಲಿನ ಜನರಿಗಾಗಿ ನಿಸ್ವಾರ್ಥವಾಗಿ ಮನೆ ಕಟ್ಟುವ ಕೆಲಸ ಮಾಡುವುದು ನಿಜಕ್ಕೂ ತಪಸ್ಸೇ ಆಗಿತ್ತೆನ್ನಿ. ಮಾತ್ರವಲ್ಲ, ತಿಂಗಳುಗಳಿಂದ ಅಮೃತಪುರಿಯಿಂದ, ಅಮ್ಮನಿಂದ ಮತ್ತು ಆಶ್ರಮದಿಂದ ದೂರದಲ್ಲಿ ಆ ಅಜ್ಞಾತ ಊರಿನಲ್ಲಿಯೇ ಇದ್ದು ಸೇವೆ ಮಾಡುತ್ತಿರುವ ನಾಲ್ಕಾರು ಊರ ಹಿರಿಯರು, “ಏಪ್ರಿಲ್ ಮೂರನೇ ವಾರ ನಾನು ನೋಡ್ದೆ; ಒಂದು ದಿನಕ್ಕೆ ಮೂರು ಮೂರು ಮನೆಗಳಿಗೆ ಒಟ್ಟೊಟ್ಟಿಗೆ ತಾರಸಿ ಹಾಕ್ತಿದ್ರು!” ಇನ್ನೊಬ್ಬ ನೋಡುಗರು ಅಮ್ಮನ ಮಕ್ಕಳ ಕಾರ್ಯಕ್ಷಮತೆ ಮತ್ತು ವೇಗದ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ಮತ್ತೊಬ್ಬರು, “ಈ ಜನ ಒಂದೊಂದು ಸಲಕ್ಕೆ ಒಂದೊಂದು ಸಾಲನ್ನು ಕಟ್ಟುತ್ತಾ ಹೋಗುತ್ತಾರೆ; ಮೊದಲ ಒಂದು ಸಾಲಿನ ಎಲ್ಲ ಮನೆಗಳಿಗೆ ಪಾಯ ಹಾಕುತ್ತಾ ಹೋಗುವರು; ನಂತರ ಎಲ್ಲಾ ಗೋಡೆಗಳನ್ನು ಒಂದೇ ಹಂತದಲ್ಲಿ ಏರಿಸುತ್ತಾ ಹೋಗುವರು… ಇದು ಮಕ್ಕಳು ಆಟವಾಡುವ ಹಾಗೆ ಕಾಣಿಸುತ್ತದೆ; ಹೀಗೆ ಸುಲಭಮಾರ್ಗದಲ್ಲಿ ಅನೇಕ ಮನೆಗಳನ್ನು ಒಟ್ಟೊಟ್ಟಿಗೆ ನಿರ್ಮಿಸುವ ತಂತ್ರವನ್ನು ಅಮ್ಮನೇ ಕಲಿಸಿದ್ದಂತೆ!” ಎಂದು ತುಂಬಾ ಅಚ್ಚರಿ ವ್ಯಕ್ತಪಡಿಸಿದರು.

ಸರ್ಕಾರದ ಹಾಗೂ ಸ್ಥಳೀಯ ಅಧಿಕಾರಿಗಳ ಮತ್ತು ಗ್ರಾಮಸ್ಥರ ಪೂರ್ಣಸಹಕಾರವೂ, ಕಾರ್ಯಸಫಲತೆಯೂ ಗ್ರಾಮಸ್ಥರಿಗೆ ಬಹು ವಿಶ್ವಾಸ ನೀಡಿರುವ ಸಂಗತಿ.

ದಾವಣಗೆರೆಯ ಬ್ರಹ್ಮಚಾರಿಣಿ ಅಂಜಲಿ ಅವರ ನೇತೃತ್ವದಲ್ಲಿ ಇದುವರೆಗೂ ಎರಡು ಬ್ಯಾಚಿನಲ್ಲಿ ಉತ್ತರ ಕರ್ನಾಟಕದ ಅಮ್ಮನ ಮಕ್ಕಳು ರಾಯಚೂರಿನಲ್ಲಿ ಶ್ರಮದಾನ ಮಾಡಿದ್ದಾರೆ.
ಇದೇ ಫೆಬ್ರವರಿಯಲ್ಲಿ 25 ಮಂದಿ ತಂಡವು ಒಂದು ದಿನದ ಮಟ್ಟಿಗೆ ಡೊಂಗರಾಂಪುರಕ್ಕೆ ಭೇಟಿಯಿತ್ತು, ಅಲ್ಲಿನ ಕೆಲಸಗಾರರಿಗೆ ವಿಶೇಷವಾಗಿ ಬಗೆ ಬಗೆಯ ಭಕ್ಷ್ಯಗಳ ಅಡುಗೆ ಮಾಡಿ ಕೈಯ್ಯಾರೆ ಬಡಿಸಿ ಸೋದರತ್ವ ಸಂತೋಷಗಳನ್ನು ನೀಡಿಬಂದರು. ಇವರಲ್ಲಿ ಅಮೃತ ವಿದ್ಯಾಲಯದ ಅಧ್ಯಾಪಕವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರೂ ಸೇರಿದ್ದರು. ಶ್ರಮಪೂರಿತ ಕೆಲಸದಲ್ಲಿ ನಿರತರಾಗಿದ್ದ ಸ್ಥಳೀಯ ಕೆಲಸಗಾರರ ಸೇವೆಯನ್ನು ಮೆಚ್ಚಿದ ತಾಯಂದಿರು ಈ ಯಾತ್ರೆಯನ್ನು ಕೈಗೊಂಡಿದ್ದರು.

ಮತ್ತೆ ಏಪ್ರಿಲ್ ಮೂರನೇ ವಾರದಲ್ಲಿ ಹೋಗಿದ್ದು 27 ಭಕ್ತರು (7 ಮಹಿಳೆಯರು ಸೇರಿ) – ಇವರಲ್ಲಿ ಅಮೃತವಿದ್ಯಾಲಯದ ಅಧ್ಯಾಪಕೇತರ ಸಿಬ್ಬಂದಿ ಮತ್ತು ಇತರ ಜಿಲ್ಲೆಗಳ ಭಕ್ತರೂ ಸೇರಿದ್ದರು; 15 ವರ್ಷದ ಬಾಲಕನಿಂದ 60 ವರ್ಷದ ವಯಸ್ಸಿನವರೂ ಈ ತಂಡದಲ್ಲಿದ್ದರು. ಮಾತ್ರವಲ್ಲ, ಮಧುಮೇಹ ರಕ್ತದೊತ್ತಡದಂಥ ರೋಗವಿದ್ದವರೂ ಇದ್ದರು. ಈ ಸಲ ಈ ತಂಡವು ಆರು ದಿನಗಳ ಕಾಲ ಅಲ್ಲಿದ್ದು ಮನೆ ಕಟ್ಟುವ ಶ್ರಮಪೂರಿತ ಕೆಲಸದಲ್ಲಿ ಭಾಗವಹಿಸಿತು. ವೈಶಾಖದ ಶಾಖ ಜೋರಾಗಿದ್ದರೂ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರೂ ಯಾರಿಗೂ ಯಾವ ರೀತಿಯ ಅನಾರೋಗ್ಯವೂ ಬಾಧಿಸದೆಅಮ್ಮನ ಕೃಪೆಯ ತಂಗಾಳಿ ಮಾತ್ರವೇ ತಮಗೆ ಅನುಭವವಾಯಿತೆಂದು ಅವರು ಹೇಳುವರು. ಪ್ರತಿನಿತ್ಯ ಭಜನೆ ಅರ್ಚನೆಗಳೊಂದಿಗೂ ನಗು ನಗುತ್ತಲೂ ಕೆಲಸಮಾಡುತ್ತಿದ್ದ ತಮ್ಮೆಲ್ಲರಿಗೆ ನಿಸ್ವಾರ್ಥಸೇವೆಯ ಆನಂದ ಹೇಗಿರುತ್ತದೆಂದು ಮನವರಿಕೆಯಾಯಿತು ಎಂದು ಹೃದಯಪೂರ್ವಕವಾಗಿ ಹೇಳುತ್ತಾರೆ.