ನಿಮ್ಮ ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಗಳಿದೆ. ಒಂದು ಗಂಟೆ ದೈವೀ ವಿಚಾರಗಳಿಗೆ ಮೀಸಲಿಡಿರಿ. ಜೋರಾಗಿ ಅಳುತ್ತ ಅರ್ಧ ಗಂಟೆ ಪ್ರಾರ್ಥನೆ ಮಾಡಿದರೆ ಸಾಕು, ದೇವರ ಕೃಪೆ ನಿಮ್ಮನ್ನು ಬಂದು ತಲಪುವುದು. ಏಕಾಗ್ರತೆ ಬೇಕು; ಭಕ್ತಿ ಬೇಕು. ಈ ಕಲಿಯುಗದಲ್ಲಿ ನಾಮ ಜಪ ಸುಲಭ. ಮನಕರಗುವ ಭಜನೆಯು ಎಷ್ಟೋ ಒಳ್ಳೆಯ ಸಾಧನಾಮಾರ್ಗ.
______________
ತಳಪಾಯ ಚೆನ್ನಾಗಿ ಗಟ್ಟಿಯಾಗಿದ್ದರೆ ಮಾತ್ರವೇ ಕಟ್ಟಡ ಮೇಲೆಬ್ಬಿಸಲು ಸಾಧ್ಯ; ಬಹಳ ಕೆಳಗಿದ್ದರೆ ಮಾತ್ರವೇ ಏರಲು ಸಾಧ್ಯ.
______________
ಕಾಮವನ್ನು ಹೋಗಲಾಡಿಸುವುದು ಬಹಳ, ಬಹಳ ಕಷ್ಟ. ರಾಮನು ಮರೆಯಲ್ಲಿ ಬಾಣ ಬಿಟ್ಟು ವಾಲಿಯನ್ನು ಕೊಂದದ್ದು; ನೇರವಾಗಿ ಎದುರಿಸುವುದು ಕಷ್ಟವೆಂದು. ಕಾಮವು, ಅದರತ್ತ ಪ್ರಯೋಗಿಸುವ ಬಲದ ಇಮ್ಮಡಿ ಬಲದೊಂದಿಗೆ ತಿರುಗಿ ಬರುವುದು. ವಾಲಿಯು ಭೋಗ ಸುಖಗಳ ಪ್ರತೀಕ. ವಾಲಿಯನ್ನು ಕೊಂದ ನಂತರವೇ ರಾಮನು ಸೀತಾನ್ವೇಷಣೆ ನಡೆಸಲು ಸಾಧ್ಯವಾದದ್ದು.
______________
ಮಕ್ಕಳ ಸಂತೋಷವೇ ಅಮ್ಮನ ಆರೋಗ್ಯ.
______________
ಮಾಳಿಗೆ ಕಟ್ಟಿದರೂ ಮನಸ್ಸಮಾಧಾನವಿಲ್ಲದಿದ್ದರೆ ಏನು ಪ್ರಯೊಜನ ? ಏರ್‌ಕಂಡೀಷನ್ ರೂಮ್‌ನಲ್ಲಿದ್ದರೂ ಬಹಳ ಜನರಿಗೆ ಯಾವುದೇ ತರದ ನೆಮ್ಮದಿಯಿರುವುದಿಲ್ಲ. ನೆಮ್ಮದಿ ಬೇಕಾಗಿದ್ದರೆ ಏಕಾಗ್ರತೆಯಿಂದ ದೈವವನ್ನು ಕರೆಯಬೇಕು. ಬಯಕೆಗಳನ್ನು ಅಂಕೆಯಲ್ಲಿಡ ಬೇಕು. ಮನಸ್ಸನ್ನು ನಿಯಂತ್ರಿಸಬೇಕು.
______________
ದೈವ ಸಾಕ್ಷಾತ್ಕಾರ ಸಿಕ್ಕಿದ ವ್ಯಕ್ತಿಯು ಸದ್ಗುರು. ಆತನು ಶಿಷ್ಯನನ್ನು ಸತ್ಯದ ದಾರಿಯಲ್ಲಿ ನಡೆಸಿ ಗುರಿ ಮುಟ್ಟಿಸುತ್ತಾನೆ. ಪ್ರಾಮಾಣಿಕತೆಯಿರುವವರು ಗುರುವನ್ನು ಸಿಕ್ಕಲಿ. ಅಲೆದು ಪ್ರಯೋಜನವಿಲ್ಲ.
______________
ಧ್ಯಾನ ಮಾಡುವಾಗ ಇಷ್ಟರೂಪವನ್ನು ಹೃದಯದಲ್ಲಿ ಸ್ಮರಿಸಿಕೊಳ್ಳಿ. “ನನ್ನ ಅಮ್ಮಾ, ನೀನು ನನ್ನನ್ನು ಬಿಟ್ಟು ಹೋಗದಿರು” ಎಂದು ಮೊರೆಯಿಟ್ಟು ಇಷ್ಟದೇವತೆಯನ್ನು ತಬ್ಬಿಕೊಂಡು ಕೂಗಿರಿ. ರೂಪದ ಜೊತೆ ಮಾತನಾಡುವುದಾಗಿ ಭಾವಿಸಿರಿ. ಇಷ್ಟಮೂರ್ತಿಯ ಚಿಕ್ಕದೊಂದು ಚಿತ್ರವನ್ನು ಮುಂದಿಟ್ಟುಕೊಳ್ಳಿರಿ. ಆ ಚಿತ್ರವನ್ನು ಸ್ವಲ್ಪ ನೋಡಿ ಕಣ್ಣು ಮುಚ್ಚಿ, ರೂಪವನ್ನು ಆಂತರ್ಯದಲ್ಲಿ ಸ್ಥಿರೀಕರಿಸಲು ಪ್ರಯತ್ನಿಸಿರಿ. ಒಳಗಿನ ರೂಪ ಅಗಲಿ ಹೋದರೆ ಪುನಃ ಕಣ್ಣು ತೆರೆದು, ಹೊರಗಿರುವ ಚಿತ್ರವನ್ನು ದೃಷ್ಟಿಸಿರಿ. ಪುನಃ ಕಣ್ಣು ಮುಚ್ಚಿರಿ. ಶ್ರದ್ಧೆಯಿಂದ ಹೀಗೆ ನಿರಂತರ ಮುಂದುವರಿಸಿದರೆ ನಾವು ಧ್ಯಾನ ಮಾಡುವ ರೂಪ ನಮಗೆ ಪ್ರತ್ಯಕ್ಷವಾಗುವುದು. ರೂಪ ಸ್ಥಿರವಾಗುವವರೆಗೆ ಮಾತ್ರ ಮಂತ್ರ ಜಪಿಸಿದರೆ ಸಾಕು. ಮನಸ್ಸು ಏಕಾಗ್ರವೂ, ಅಂತರ್ಮುಖವೂ ಆಗಲಿಕ್ಕಾಗಿ ಮಾತ್ರ ಮಂತ್ರ.
______________
ನಿರಂತರವಾದ ಅಭ್ಯಾಸದಿಂದ ಮಾತ್ರ ಮನಸ್ಸನ್ನು ಅಂಕೆಯಲ್ಲಿಡಲು ಸಾಧ್ಯ. ಒಂದೇ “ಎಲ್ಲಾ ನನ್ನಲ್ಲಿದೆ, ಈ ಕಾಣುವ ಸರ್ವವೂ / ಎಲ್ಲವೂ ನಾನೇ.” ಎಂದು ಭಾವನೆ ಮಾಡಿರಿ. ಇಲ್ಲವೇ “ನಾನು ಏನೂ ಅಲ್ಲ, ಇದೆಲ್ಲಾ ಭಗವಂತನದು” ಎಂದು ಭಾವಿಸಿ ಎಲ್ಲವನ್ನು ದೇವರಿಗೆ ಸಮರ್ಪಿಸಿರಿ. ನಿನ್ನೆಯವರೆಗೆ “ನಾನು ಶರೀರ”ವೆಂದು ಭಾವಿಸಿಯಲ್ಲವೇ ಜೀವಿಸಿದ್ದು? ಹಾಗಾಗಿ, ಮೊದಲು ಬಹಳಷ್ಟು ಅಲೆಗಳು ಮನಸ್ಸಲ್ಲಿ ಏಳುವುದು. ಆದರೆ ಅಭ್ಯಾಸದಿಂದ ಅದು ಹೋಗುವುದು. ಅಲೆಗಳನ್ನು ನಿಯಂತ್ರಿಸಲು ಒಂದು ಸ್ಥಳದಲ್ಲಿ ಸ್ಥಿರವಾಗಿ ಕುಳಿತುಕೊಂಡು ಸಾಧನೆ ನಡೆಸಬೇಕು. ಸುಮ್ಮನೆ ತುಂಬ ಪುಸ್ತಕಗಳನ್ನು ಓದಿದರೆ, ಅಲೆಗಳು ಹೆಚ್ಚೇ ಆಗುತ್ತವೆ.
______________
ನಮ್ಮ ಮನಸ್ಸು ವಾಸ್ತವವಾಗಿ ಏಕಾಗ್ರವೂ ನಿರ್ಮಲವೂ ಆಗಿರುತ್ತದೆ. ಆದರೆ ನಾವು ಅಲ್ಲಿ ನಿನ್ನೆಯವರೆಗೆ ಅಸಂಖ್ಯಾತ ಲೌಕಿಕ ವಿಚಾರಗಳಿಗೆ ಸ್ಥಳ ಕೊಟ್ಟಿದ್ದೆವು. ಹಾಗಾಗಿ ಧ್ಯಾನ ಮಾಡಲು ಕುಳಿತುಕೊಳ್ಳುವಾಗ ಮನಸ್ಸನ್ನು ಏಕಾಗ್ರ ಮಾಡಲು ಸಾಧ್ಯವಾಗದೆ ಹೋಗುತ್ತದೆ. ಗೇಣಿದಾರರಂತೆ ಅವುಗಳು. ನಮ್ಮ ಜಾಗದಲ್ಲಿ ಒಂದು ಕಡೆ ಗುಡಿಸಲು ಹಾಕಲು ಬಿಟ್ಟೆವು. ಹಿಂದಿರುಗಿ ಹೋಗಲು ಹೇಳಿದಾಗ ಗಣನೆ ಮಾಡುವುದಿಲ್ಲ. ಅದು ಮಾತ್ರ ಅಲ್ಲ, ತಿರುಗಿ ನಮ್ಮಲ್ಲಿ ಜಗಳಕ್ಕೂ ಬರುತ್ತಾರೆ. ಅವರನ್ನು ಹೊರಗೆ ಹಾಕಲು ಬಹಳ ಕಷ್ಟ ಪಡಬೇಕಾಗಿ ಬರುತ್ತದೆ. ಕೋರ್ಟಲ್ಲಿ ಕೇಸೂ ಹಾಕ ಬೇಕಾಗುತ್ತದೆ. ಅದರಂತೆಯೇ ಮನಸ್ಸಿನ ಗೇಣಿದಾರರನ್ನು ಹೊರಹಾಕಲು ದೇವರ ಕೋರ್ಟ್‌ನಲ್ಲಿ ಕೇಸು ಹಾಕಬೇಕಾಗುತ್ತದೆ. ಅದೊಂದು ಮುಗಿಯದ ಯುದ್ಧ. ಜಯ ದೊರಕುವವರೆಗೆ ಯುದ್ಧ ಮಾಡಬೇಕು.
______________
ಸಾಧನೆ ಮಾಡುತ್ತ ಹೋದಂತೆಲ್ಲ ಹೆಚ್ಚು ಹೆಚ್ಚು ವಾಸನೆಗಳು ಮೇಲೆದ್ದು ಬರುವ ಅನುಭವವಾಗುವುದು. ಒಂದು ಕೋಣೆ ಗುಡಿಸುವಾಗ, ಹೊರ ಪದರದಲ್ಲಿ ಅಂಟಿಕೊಂಡಿರುವ ಕೊಳೆ ಮಾತ್ರವೇ ಸಾರಿಸಲು ಸಾಧ್ಯವಾಗುತ್ತದೆ. ಆದರೆ ಒಂದು ಒದ್ದೆ ವಸ್ತ್ರದಿಂದ ಒರಸಿದರೆ, ಹೆಚ್ಚಿನ ಕೊಳೆ ಮೇಲೆದ್ದು ಬರುತ್ತದೆ. ಮುಗಿಯುವ ಸಲುವಾಗಿ ಅವು ಹಾಗೆ ಮೇಲೆದ್ದು ಬರುವುದು.
______________