ತೊಂಬತ್ತು ಪ್ರತಿಶತ ಮಕ್ಕಳು ಶಾರೀರಿಕ ಮತ್ತು ಮಾನಸಿಕ ಒತ್ತಡಗಳಿಂದ ಪ್ರತಿಯೊಂದು ನಿಮಿಷವು ದುಃಖದಿಂದ ಕಳೆಯುತ್ತಿದ್ದಾರೆ. ಚಿಂತಿಸುವುದರಿಂದ ಮಾತ್ರ ಕೆಲಸವಾಗವುದಿಲ್ಲ ಎಂದು ನಮಗೆ ಗೊತ್ತು. ಐವತ್ತು ಪ್ರತಿಶತ ರೋಗಗಳು ಬರುವುದು ಮಾನಸಿಕ ಒತ್ತಡಗಳಿಂದ ಎಂದು ಹೇಳುತ್ತಾರೆ. ಆರೋಗ್ಯಹೀನತೆ ಮತ್ತು ಅಲ್ಪಾಯುಷಿಯಾಗುವುದಲ್ಲ ಜೀವನದ ಉದ್ದೇಶ. ಅನಾವಶ್ಯಕ ಮಾನಸಿಕ ಒತ್ತಡ ನಮಗೆ ಏತಕ್ಕೆ ಬೇಕು? ಅದರ ಬದಲಿಗೆ ಶರಣಾಗತರಾಗುವುದೇ ನಮಗಿರುವ ಪ್ರಾಯೋಗಿಕ ಪರಿಹಾರ.
ಒಂದು ಗಿಡದ ಬುಡಕ್ಕೆ ನೀರು ಹಾಕಿದರೆ, ಗಿಡವು ಚೆನ್ನಾಗಿ ಬೇಗ ಬೆಳೆಯುತ್ತದೆ. ಆದರೆ ಅದರ ಕೊಂಬೆಗಳಿಗೆ ನೀರು ಹಾಕಿದರೆ ಅದು ಬೆಳೆಯುವದೂ ಇಲ್ಲ; ಯಾವ ಫಲವೂ ನೀಡುವುದಿಲ್ಲ. ನಾವು ಕಷ್ಟ ಪಟ್ಟ ಸಮಯವೂ ವ್ಯರ್ಥ. ಮಕ್ಕಳೇ! ಅಮ್ಮನ ಬಳಿ ಸ್ವಲ್ಪ ಸಮಯ, ಬೇರೆಲ್ಲವನ್ನು ಮರೆತು ಈ ನಿಮಿಷದಲ್ಲಿರುವುದಕ್ಕೆ ಪ್ರಯತ್ನಿಸಿ. ಇಲ್ಲಿ ಕುಳಿತು ಮನೆಯಲ್ಲಿರುವವರ ಬಗ್ಗೆ ಚಿಂತಿಸಿದರೆ ಅವರಿಗೂ ಲಾಭವಿಲ್ಲ ನಿಮಗೂ ಲಾಭವಿಲ್ಲ. ಈ ನಿಮಿಷಮಾತ್ರವೇ ನಮಗಿರುವುದು. ಈ ನಿಮಿಷದಲ್ಲಿ ವಿವೇಕದಿಂದ ಮುನ್ನಡೆದರೆ ನಿಶ್ಚಿತವಾಗಿ ಭವಿಷ್ಯವು ಸುರಕ್ಷಿತವಾಗಿರುವುದು.
ಹಲವು ಮಕ್ಕಳು ನಾಳೆಯ ಬಗ್ಗೆ ಚಿಂತಿಸಿ ಚಿಂತೆಗೀಡಾಗುತ್ತಾರೆ. ನಾಳೆಯ ಬಗ್ಗೆ ಚಿಂತಿಸಬಾರದು ಎನ್ನುತ್ತಿಲ್ಲ, ಆದರೆ, ಅದು ಒಂದು ವಿಷಸರ್ಪವಿರುವ ಮರದ ಕೆಳಗೆ ಮಲಗಿದ ಹಾಗೆ. ’ಸರ್ಪವು ಎಲ್ಲಿ ಕಡಿಯುವದೋ’ ಎನ್ನುವ ಚಿಂತೆಯಿಂದ ಹೇಗೆ ತಾನೇ ನಿದ್ರೆ ಬರುತ್ತದೆ? ಇದೇ ತರಹ ನಮ್ಮ ಜೀವನವು ನಾಳೆಯ ಬಗ್ಗೆ ಚಿಂತಿಸಿ, ಚಿಂತಿಸಿ ಮುಗಿದು ಹೋಗುತ್ತದೆ. ಒಬ್ಬ ಇಂಜಿನಿಯರ್ ಮನೆಯ ನಕ್ಷೆ ರಚಿಸುವಾಗ ಅದರಲ್ಲಿಯೇ ಪೂರ್ಣ ಶ್ರದ್ಧೆಯನ್ನಿಡುವನು. ಮನೆ ಕಟ್ಟುವಾಗ, ಕಟ್ಟುವುದರಲ್ಲಿಯೇ ಶ್ರದ್ಧೆ ವಹಿಸುವನು. ಅದೇ ತರಹ ನಾವು ನಾಳೆಯ ಬಗ್ಗೆ ಯೋಚಿಸಿ ನಿರ್ಧರಿಸೋಣ. ಈ ನಿಮಿಷದಲ್ಲಿ ವಿವೇಕದಿಂದ ಮುಂದೆಸಾಗೋಣ. ತೊಂದರೆಗಳನ್ನೆಲ್ಲಾ ನೀವು ಭಗವಂತನಲ್ಲಿ ಸಮರ್ಪಿಸರಿ.
ನಮ್ಮ ಕೈಯಲ್ಲಿ ಒಂದು ಲೋಟ ಕಾಫಿ ಇದೆ ಎಂದು ಭಾವಿಸೋಣ; ಸ್ವಲ್ಪ
ಸಮಯ ಅದನ್ನು ಎತ್ತಿಹಿಡಿಯಲು ಪ್ರಯಾಸವೇನೂ ಆಗುವುದಿಲ್ಲ. ಅದೇ ಒಂದು ಗಂಟೆಯವರೆಗೆ ಹಿಡಿದುಕೊಂಡರೆ, ಕೈ ನೋಯುತ್ತದೆ. ಅಥವಾ ಒಂದು ದಿನ ಪೂರ್ತಿ ಎತ್ತಿ ಹಿಡಿದುಕೊಂಡಿದ್ದರೆ… ಆ ಕೈಯನ್ನು ಕೆಳಗಿಳಿಸುವುದಕ್ಕಾಗಿ ಆಸ್ಪತ್ರೆಗೆ ಹೋಗಬೇಕಾಗುವುದು. ಇದೇ ರೀತಿ ನಮ್ಮ ಕೆಟ್ಟ ಚಿಂತೆಗಳು. ಅವುಗಳ ಭಾರವನ್ನು ಕೆಳಗೆ ಇಳಿಸದೆ ಹೋದರೆ, ನಡೆಯಬೇಕಾಗಿರುವುದಕ್ಕಾಗಿ ಚಿಂತಿಸುವುದಕ್ಕೋ ಕಾರ್ಯಶೀಲರಾಗುವುದಕ್ಕೋ ಸಾಧ್ಯವಾಗುವದಿಲ್ಲ. ಮನಸ್ಸಿನ ಸಮತೋಲನ ತಪ್ಪಿಹೋಗಬಹುದು. ಈ ರೀತಿ ಕೆಳಗಿಳಿಸುವ ಪ್ರಕ್ರಿಯೆಗಳಿಗೇ – ಪ್ರಾರ್ಥನೆ, ಜಪ ಮತ್ತು ಧ್ಯಾನ ಎಂದು ಕರೆಯುವುದು.
(ಅಮ್ಮನ ೨೦೦೧ ಜನ್ಮದಿನದ ಸಂದೇಶದಿಂದ)