ನಾವೊಂದು ಒಂಟಿ ದ್ವೀಪವಲ್ಲ. ಒಂದೇ ಸರಪಳಿಯ ಕೊಂಡಿಗಳು ನಾವು. ನಾವು ಮಾಡುವ ಒಂದೊಂದು ಕೃತಿಯೂ, ತಿಳಿದೋ ತಿಳಿಯದೆಯೋ ಇತರರ ಮೇಲೆ ಪರಿಣಾಮ ಬೀರುತ್ತದೆ. ಈ ಜಗತ್ತಿನಲ್ಲಿ ನಡೆದಿರುವ ಎಲ್ಲ ಯುದ್ಧಗಳೂ, ಯಾವನೋ ಒಬ್ಬ ಮನುಷ್ಯನೊಳಗೆ ಮೂಡಿದ ವಿದ್ವೇಷದ ಫಲ. ಒಬ್ಬ ವ್ಯಕ್ತಿಯ ಆಲೋಚನೆ, ನಡತೆ ಎಷ್ಟೋ ಜನಗಳನ್ನು ನಾಶ ಮಾಡಿತು. ಹಿಟ್ಲರ್ ಒಬ್ಬ ವ್ಯಕ್ತಿ. ಆದರೆ ಅವನ ಕೃತಿ ಬಾಧಿಸಿದ್ದು ಎಷ್ಟೆಲ್ಲ ಜನರನ್ನು! ನಮ್ಮ ಆಲೋಚನೆ ಇತರರನ್ನೂ, ಇತರರ ಆಲೋಚನೆ ನಮ್ಮನ್ನೂ ಬಾಧಿಸುತ್ತವೆ ಎಂದರಿತು, ಎಂದಿಗೂ ಒಳ್ಳೆಯ ವಿಚಾರಗಳು ಮಾತ್ರ ಮೂಡುವಂತೆ ಜಾಗ್ರತೆ ವಹಿಸಬೇಕು. ಅವರು ಬದಲಾಗದೆ ನಾನು ಬದಲಾಗುವುದಿಲ್ಲ ಎಂದು ಯೋಚಿಸದೇ, ಅವರು ಬದಲಾಗದಿದ್ದರೂ ನಾವು ಬದಲಾಗಲಿಕ್ಕೆ ಪ್ರಯತ್ನಿಸಬೇಕು. ಆಧ್ಯಾತ್ಮಿಕತೆಯು ಕಲಿಸುವುದು ಅದನ್ನೇ.

ಇವತ್ತು ದಿನ ತ್ಯಾಗದ ದಿನವೆಂದು ಅಮ್ಮ ಹೇಳಿದರು. ತ್ಯಾಗದೊಂದಿಗೆ ಸೇರಿದರೆ ಮಾತ್ರ ನಮ್ಮ ಸಂಸ್ಕೃತಿಯ ಉದ್ಧಾರ ಸಾಧ್ಯ. ಋಷಿಗಳು ಕೊಟ್ಟ ಸಂಸ್ಕೃತಿಯನ್ನು ನಮ್ಮಲ್ಲಿ ಜಾಗೃತಗೊಳಿಸಲು ನೆನೆಪು ಮಾಡಿಸಲಿಕ್ಕೆಂದೇ ಇರುವುದು ಈ ದಿನ – ಬಾಹ್ಯಾಡಂಬರಕ್ಕೋ, ಉತ್ಸವಕ್ಕೋ ಅಲ್ಲ. ವೈಯಕ್ತಿಕತೆಯನ್ನು ಮರೆತು ಒಳ್ಳೆ ಕಾರ್ಯಗಳಲ್ಲಿ ಮಗ್ನರಾಗಿ, ಅವುಗಳಲ್ಲಿ ಆನಂದಿಸುವಾಗ ಮಾತ್ರವೇ ಜೀವನ ಉತ್ಸವವಾಗಿ ಬದಲಾಗುತ್ತದೆ. ಉಲ್ಲಾಸವೂ ಸಂಸ್ಕೃತಿಯೂ ಸೇರಿ ಒಂದುಗೂಡಬೇಕು. ಅದುವೇ ಬದುಕನ್ನು ಉತ್ಸವವಾಗಿ ಮಾರ್ಪಡಿಸುವುದು. ಸಂಸ್ಕೃತಿಯೊಟ್ಟಿಗೆ ಒಂದಾಗಿರುವ ಉಲ್ಲಾಸವು ಪುಟ್ಟ ಮಗುವಿನ ಮುಗುಳು ನಗೆಯಂತೆ – ನಿಷ್ಕಳಂಕ ಮುಗುಳುನಗೆ. ಅದು ನಮ್ಮನ್ನು ದಿವ್ಯತ್ವಕ್ಕೆ ಏರಿಸುವುದು. ಅಂದರೆ, ಸಂಸ್ಕಾರ ರಹಿತವಾದ ಉಲ್ಲಾಸವು ನಮ್ಮನ್ನು ಮೃಗೀಯತೆಗೆ ಕಡೆಗೆ ತಳ್ಳುವುದು.

ನಮಗೆ ತಿಳಿದಿದೆ, ಇವತ್ತು ಜಗತ್ತಿನಲ್ಲಿ ಸಂಸ್ಕೃತಿಯು, ಅಧೋಗತಿಯಲ್ಲಿದೆ. ರಾಜಕೀಯದಲ್ಲಾಗಲೀ, ಶೈಕ್ಷಣಿಕ ಕ್ಷೇತ್ರದಲ್ಲಾಗಲೀ, ಕುಟುಂಬಜೀವನದಲ್ಲಾಗಲೀ ಸಂಸ್ಕೃತಿ ಅವನತಿ ಹೊಂದುತ್ತಲಿದೆ. ಆಧ್ಯಾತ್ಮಿಕತೆಯಲ್ಲಿದ್ದುಕೊಂಡು ಶಕ್ತಿ ಸಂವರ್ಧನೆ ಮಾಡಿಕೊಂಡಾಗ ಮಾತ್ರವೇ ಈ ಸಂಸ್ಕೃತಿಯನ್ನು ಉದ್ಧಾರ ಮಾಡಲು ಸಾಧ್ಯ. ನಮ್ಮ ಜೀವನದಲ್ಲಿ ಶಕ್ತಿಯ ಉತ್ಪ್ರೇಕ್ಷೆ ಮಾಡುವ ಸಯನ್ಸೇ ಆಧ್ಯಾತ್ಮಿಕತೆ. ನಮ್ಮ ಬದುಕಿಗೆ ಸೌಂದರ್ಯ ಲೇಪಿಸುವ ಕಲೆಯೇ ಆಧ್ಯಾತ್ಮಿಕತೆ.

(ಅಮ್ಮನ 2001ರ ಜನ್ಮದಿನದ ಸಂದೇಶದಿಂದ)