ಮಕ್ಕಳೇ, ಸುತ್ತಲೂ ಒಂದು ಸಲ ದೃಷ್ಟಿ ಹರಿಸಿ ನೋಡಿ. ಅದನ್ನೊಮ್ಮೆ ವಿಷ್ಲೇಶಣೆ ಮಾಡಿ. ಲೋಕದ ಇವತ್ತಿನ ಪರಿಸ್ಥಿತಿ ಏನಂತ ಸ್ವಲ್ಪ ಅರಿತುಕೊಳ್ಳೋಣ. ಅದಕ್ಕೆಂದೇ ಇರುವ ದಿವಸವಿದು. ಜಗತ್ತಿನ ಜನಗಳು ಎಷ್ಟೆಲ್ಲಾ ತರದಲ್ಲಿ ಕಷ್ಟ ಪಡುತ್ತಿದ್ದಾರೆ. ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಒಂದು ವರ್ಷದ ಹಿಂದೆ ನಡೆದ ಘಟನೆಯೊಂದು ಅಮ್ಮನಿಗೆ ನೆನಪಾಗುತ್ತಿದೆ; ಮುಂಬೈಯಲ್ಲಿನ ಮಕ್ಕಳು ಹೇಳಿ ಗೊತ್ತಾಗಿದ್ದು. ಮುಂಬೈಯಲ್ಲಿ ಒಂದು ಕಡೆ ಒಬ್ಬಾತನಿಗೆ ಷುಗರಿನ ಖಾಯಿಲೆಯಿತ್ತು. ಆ ವ್ಯಕ್ತಿಯ ಕಾಲಲ್ಲಿ ಒಂದು ಗಾಯವಾಗಿ, ಬಲಿತು ದೊಡ್ಡ ಹುಣ್ಣಾಯಿತು. ಡಾಕ್ಟರಿಗೆ ತೋರಿಸಿದಾಗ “ಆ ಕಾಲು ಕತ್ತರಿಸಿ ತೆಗೆಯಬೇಕು. ಇಲ್ಲದಿದ್ದರೆ ಕೀವಾಗಿ ಮುಂದಕ್ಕೆ ತೊಂದರೆ ಕೊಡುತ್ತದೆ, ದೊಡ್ಡ ಸಮಸ್ಯೆಯಾಗುತ್ತದೆ” ಎಂದು ಹೇಳಿದರು. ವ್ಯಕ್ತಿಗೆ ತುಂಬ ಚಿಂತೆಯಾಯಿತು . ಕಾಲು ಕಳೆದುಕೊಳ್ಳಬೇಕೆಂಬ ದುಃಖ ಮಾತ್ರವಲ್ಲ; ಆ ಒಪರೇಷನ್‌ಗೂ ಹತ್ತು ಹದಿನೈದು ಸಾವಿರ ರುಪಾಯಿ ಬೇಕಾಗಿ ಬರಬಹುದು. ಅಲ್ಲದೆ, ಒಂದು ಖಾಯಂ ವರಮಾನವಿರುವ ವ್ಯಕ್ತಿಯೇನಲ್ಲ ಅವನು. ಸಿಗುವದ್ದು, ಸಂಸಾರ ನಿರ್ವಹಣೆಗೆಯೇ ಸಾಲುವುದಿಲ್ಲ. ಕಾಲಿನ ಖಾಯಿಲೆ ಬಂದ ಮೇಲಿಂದ ಮೊದಲಿನ ಹಾಗೆ ಕೆಲಸಕ್ಕೂ ಹೋಗಲು ಸಾಧ್ಯವಿಲ್ಲ. ಡಾಕ್ಟರು ಬರೆದುಕೊಟ್ಟ ಔಷಧಿ ಖರೀದಿಸಲಿಕ್ಕೂ ಹಣವಿಲ್ಲದೆ ತುಂಬ ಕಳವಳಪಡುತ್ತಾನೆ. ಹಾಗಿರುವ ಒಬ್ಬ ವ್ಯಕ್ತಿ ಒಪರೇಷನಿಗೆ ಎಲ್ಲಿಂದ ತಾನೆ ಹಣ ಒಟ್ಟುಗೂಡಿಸುತ್ತಾನೆ. ಈತ ಪೂರ್ತಿ ಚಿಂತೆಯಲ್ಲಿ ಮುಳುಗಿಹೋದ. ಒಂದು ದಿವಸ ಈ ಪಾಪದವ ರೈಲ್ವೇಹಳಿ ಹತ್ತಿರ ಹೋಗಿ ಟ್ರೈನ್ ಬರುವಾಗ ಅದರಡಿ ಹಳಿಮೇಲೆ ಆ ಕಾಲಿಟ್ಟ. ಟ್ರೈನ್ ಹರಿದು ಕಾಲನ್ನು ಕತ್ತರಿಸಿತು. ಆದರೆ, ರಕ್ತಸ್ರಾವ ಬಹಳವಾಗಿ, ಇನ್ನೇನು ಅಂತಿಮ ಗಳಿಗೆ ಮುಟ್ಟಬೇಕು ಅನ್ನುವಾಗ, ಜನರು ಇವನನ್ನು ತೆಗೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾರೆ. ನಡೆದ ಘಟನೆ ಬಗ್ಗೆ ಕೇಳಿದಾಗ, “ನನಲ್ಲಿ ಕಾಲು ಕತ್ತರಿಸಿ ತೆಗೆಸುವ ಒಪರೇಷನ್‌ಗೆ ಕಾಸಿಲ್ಲ. ಕಾಲು ಕತ್ತರಿಸಿ ತೆಗೆಯದೆ, ಈ ಕಾಯಿಲೆಯಿಂದಾಗಿ ಜೀವಿಸುವುದೂ ಕಷ್ಟವೇ. ಒಪರೇಷನ್‌ಗೆ ಹಣವಿಲ್ಲದೆ ನನ್ನೆದುರಿಗೆ ಬೇರೆ ಯಾವುದೇ ದಾರಿಯಿರಲಿಲ್ಲ. ಅದರಿಂದಾಗಿ ಹೀಗೆ ಮಾಡಬೇಕಾಗಿ ಬಂತು.” ಎಂದು ಹೇಳಿದ.
ಮಕ್ಕಳೇ ಆ ಜೀವನವನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ. ಇವತ್ತು ನಮ್ಮಲ್ಲಿ ಆಸ್ಪತ್ರೆಯಿದೆ*. ಎಲ್ಲರಿಗೂ ಧರ್ಮಾರ್ಥವಾಗಿ ಮಾಡಿಸಲು ಸಾಧ್ಯವಿಲ್ಲದಿದ್ದರೂ ಹಲವು ಬಡವರಿಗೆ ಅಲ್ಲಿ ಉಚಿತ ಒಪರೇಷನ್ ಮಾಡಿಸಲಾಗುತ್ತಿದೆ. ಆದರೆ, ಅವರು ಆಸ್ಪತ್ರೆಯನ್ನು ಬಿಟ್ಟ ನಂತರ ಸೇವಿಸಬೇಕಾದ ಔಷಧಿಗಳಿವೆ. ಅದು ಕೊಂಡುಕೊಳ್ಳಲು ಹಲವರಲ್ಲಿ ಕಾಸಿಲ್ಲ. ಒಪರೇಷನ್ ನಂತರ ಕೆಲವು ದಿನಗಳಾದರೂ ವಿಶ್ರಾಂತಿಯ ಅವಶ್ಯವಿದೆಯೆಂದು ಹೇಳಿದರೆ ಅವರಿಗೆ ಕೆಲಸಕ್ಕೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಕುಟುಂಬಗಳು ಹಸಿವಿನಿಂದ ಕಂಗಾಲಾಗಿ ಚಪಡಿಸುತ್ತಿರುವ ಪರಿಸ್ಥಿತಿ ನಮಗೆ ಕಾಣಲು ಸಿಗುತ್ತದೆ. ಸುತ್ತಲೂ ಒಮ್ಮೆ ದೃಷ್ಟಿ ಹರಿಸಿದರೆ, ಹೀಗೆ ಕಷ್ಟ ಪಡುತ್ತಿರುವ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ದುರಂತವನ್ನನುಭವಿಸುವ ಎಷ್ಟು ಕುಟುಂಬಗಳನ್ನು ಬೇಕಾದರೂ ಕಾಣಬಹುದು. ಈ ಸಂದರ್ಭದಲ್ಲಿ ನಾವು ಆಡಂಬರಕ್ಕೂ ಇನ್ನಿತರ ಅನಾವಶ್ಯಕ ವಿಷಯಗಳಿಗೂ ಖರ್ಚು ಮಾಡುವ ಹಣದ ಬಗ್ಗೆ ಯೋಚಿಸೋಣ. ಅದಿದ್ದರೆ ಒಬ್ಬ ಬಡವನಿಗೆ ಮದ್ದು ಕೊಂಡುಕೊಳ್ಳಲು ಸಾಧ್ಯವಾಗುವುದು; ಒಂದು ಕುಟುಂಬದ ಒಪ್ಪತ್ತಿನ ಊಟಕ್ಕೆ ಸಾಲುವುದು; ಒಂದು ಬಡಮಗುವಿಗೆ ವಿದ್ಯಾಭ್ಯಾಸ ನೀಡಿ ಅದರ ಭವಿಷ್ಯ ಬೆಳಗುವಂತೆ ಮಾಡಬಹುದು. ಈ ಒಂದು ಮನೋಭಾವ – ಎಲ್ಲರನ್ನು ಪ್ರೇಮಿಸಲೂ, ಸೇವೆ ಮಾಡಲೂ ಇರುವ ಭಾವ – ವನ್ನೇ ನಾವು ಆಧ್ಯಾತ್ಮಿಕತೆಯಲ್ಲಿ ಜಾಗೃತಗೊಳಿಸಿಕೊಳ್ಳಬೇಕಾಗಿರುವುದು.
— 2000 ರಲ್ಲಿನ ಅಮ್ಮನ ಜನ್ಮದಿನದ ಸಂದೇಶದಿಂದ
—–
* (ಕೇರಳದ ಕೊಚ್ಚಿಯಲ್ಲಿರುವ ಅಮ್ಮನ ಸುಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ – AIMS Hospital. ಸಂದರ್ಶಿರಿ ವೆಬ್ ಸೈಟ್ )