ಪ್ರಶ್ನೆ: ಅಮ್ಮಾ, ದೇವಸ್ಥಾನಗಳಲ್ಲಿ ಹರಕೆ ಮತ್ತು ಹಲವು ಹೆಸರುಗಳಿಂದ ಎಷ್ಟೋ ಹಣ ಖರ್ಚು ಮಾಡುತ್ತಾರೆ. ದೇವರಿಗ್ಯಾಕೆ ಹಣ ಅಮ್ಮಾ ?

“ಮಕ್ಕಳೇ, ದೇವರಿಗೆ ನಮ್ಮಿಂದ ಏನೂ ಬೇಡ. ಲೈಟ್‌ಗೆ ಸೀಮೆ ಎಣ್ಣೆ ದೀಪದ ಅವಶ್ಯಕತೆಯಿಲ್ಲ. ದೇವರು ಸೂರ್ಯನಂತೆ. ಅವನು ಸರ್ವ ಚರಾಚರಗಳಿಗೆ ಸಮನಾಗಿ ಪ್ರಕಾಶ ಬೀರುತ್ತಿದ್ದಾನೆ. ಎಲ್ಲವನ್ನೂ ಬೆಳಗಿಸುವ ಅವನಿಗೆ ಹರಿಕೆಯಾಗಿ ಎಣ್ಣೆ ಸಲ್ಲಿಸುತ್ತೇವಂದೂ, ದೀಪ ಹಚ್ಚುತ್ತೇವೆಂದೆಲ್ಲ ಹೇಳುತ್ತೇವೆ ! ಇದು ನಮ್ಮ ಅಜ್ಞಾನದ ಫಲ. ಹಗಲು ಸಮಯದಲ್ಲಿ ಕೈಯ್ಯಲ್ಲೊಂದು ಮೇಣದ ಬತ್ತಿ ಉರಿಸಿ ಹಿಡಿದುಕೊಂಡು, “ಸೂರ್ಯದೇವನೇ, ಇಗೋ ಬೆಳಕು. ನೀನು ಕಣ್ಣು ಕಂಡು, ಸರಿಯಾಗಿ ನಡೆದುಕೊ” ಎಂದು ಹೇಳಿದಂತೆ ಇದು.

ಮಕ್ಕಳೇ, ದೇವರು ಸದಾ ಕೃಪೆ ಸುರಿಸುತ್ತಿರುತ್ತಾನೆ. ಆದರೆ ಅದನ್ನು ಸ್ವೀಕರಿಸಲು ನಾವು ಸಿದ್ಧರಾಗಿಲ್ಲ. ಹರಿಯುತ್ತಿರುವ ನದಿಗೆ ಒಡ್ಡು ಕಟ್ಟಿ ನಾವು ದೂರುತ್ತೇವೆ, “ನೋಡಲಿಲ್ಲವೇ, ಈ ನದಿ ನನಗೆ ನೀರು ಕೊಡುತ್ತಿಲ್ಲ” ಎಂದು. ಒಡ್ಡು ಕಟ್ಟಿದ ವಿಷಯ ನಾವು ಮರೆತು ಬಿಡುತ್ತೇವೆ. ಆದರೆ ನದಿಯ ಮೇಲೆ ಅಪವಾದ ಹೊರಿಸುತ್ತೇವೆ. ಇದೇ ರೀತಿಯಾಗಿದೆ, ದೇವರನ್ನು ಮೇಲೆ ಹಲವು ವಿಷಯಗಳಲ್ಲಿ ದೂರುವುದು. ಯಥಾರ್ಥದಲ್ಲಿ, ಅಜ್ಞಾನವೆಂಬ ಒಡ್ಡು ಕಟ್ಟಿ, ದೇವರ ಕೃಪೆಯೆನ್ನುವ ಜಲ ಪ್ರವಾಹವನ್ನು ಅಡ್ಡಗಟ್ಟಿ ನಿಲ್ಲಿಸಿದ್ದೇವೆ. ಇದರಿಯದೆ ನಾವು ದೇವರನ್ನು ದೂರುತ್ತೇವೆ.

ಮಕ್ಕಳೇ, ಹರಕೆ ಮುಂತಾದವುಗಳನ್ನು ನಮ್ಮ ಸಂಕಲ್ಪಕ್ಕಾಗಿ ಮಾಡುತ್ತೇವೆ. ದೇವರಿಗೆ ಅದರದ್ದೇನೂ ಅವಶ್ಯಕತೆಯಿಲ್ಲ. ನಮ್ಮ ಕೈಯ್ಯಿಂದ ದೇವರಿಗೆ ಏನೂ ಬೇಡ.”

ಪ್ರಶ್ನೆ: ಹಾಗಾದರೆ ಮತ್ತೆ ಕ್ಷೇತ್ರಗಳು ಯಾತಕ್ಕೆ ? ಮನೋಹರವಾದ ಮೂರ್ತಿಯನ್ನು ಕಡೆದ ಶಿಲ್ಪಿಯನ್ನಲ್ಲವೇ ಆರಾಧಿಸ ಬೇಕಾಗಿರುವುದು ?

“ಪ್ರೀತಿಯ ಮಕ್ಕಳೇ, ತೀರಿ ಹೋದ ನಮ್ಮ ತಂದೆಯ ಚಿತ್ರ ಕಾಣುವಾಗ ನೆನೆಯುವುವುದು, ಅದನ್ನು ಬರೆದವನೋ, ಬಣ್ಣವೋ ?
ನಮ್ಮ ತಂದೆಯದ್ದು. ಇದೇ ರೀತಿ ಆ ಮೂರ್ತಿ ಕಾಣುವಾಗ ನಮ್ಮ ನಿಜವಾದ ಸೃಷ್ಟಿಕರ್ತನನ್ನು ನೆನೆಯುತ್ತೇವೆ. ಕೃಷ್ಣನ ಮೂರ್ತಿಯನ್ನು ನೋಡುವಾಗ ಸ್ಮರಿಸುವುದು ಶ್ರೀ ಕೃಷ್ಣನನ್ನು. ಅಲ್ಲದೆ ಬರೇ ಕಾರ್ಗಲ್ಲಿನ ಶಿಲ್ಪವನ್ನಲ್ಲ ಕಾಣುವುದು. ಕೃತಕ ಸೇಬನ್ನು ಕಾಣುವಾಗ ನಿಜವಾದ ಸೇಬು ನೆನಪಾದ ಹಾಗೆ. ಅಜ್ಞಾನದಲ್ಲಿ ಬದುಕುತ್ತಿರುವ ಕಾರಣ ನಮಗೆ ಇದೆಲ್ಲ ಅಗತ್ಯ. ”

ಪ್ರಶ್ನೆ: ಅದಕ್ಕೆ ದೇವಸ್ಥಾನದ ಅವಶ್ಯಕತೆಯಿದೆಯೇ ?

“ಚಿಕ್ಕ ಮಕ್ಕಳು ಒಂಟೆ, ಓತಿ, ಇತ್ಯಾದಿಗಳ ಚಿತ್ರ ನೋಡಿ ಕಲಿಯುತ್ತಾರೆ. ಆ ಚಿತ್ರಗಳು ಅವನು ಕಲಿಯುವುದಕ್ಕೆ ಸಹಾಯವಾಗುತ್ತವೆ. ಅದರ ಕುರಿತು ಅವನಿಗೊಂದು ರೂಪವನ್ನೂ ಒದಗಿಸುತ್ತದೆ. ಆದರೆ ವಯಸ್ಸಾದಾಗ ಅದು ಬರೇ ಚಿತ್ರವೆಂದು ಅವನಿಗೆ ಅರ್ಥವಾಗುತ್ತದೆ. ಇಂದು ಅವನ ಎಳೆಯ ಬುದ್ಧಿಗೆ ಈ ಚಿತ್ರಗಳ ಅವಶ್ಯಕತೆಯಿದೆ.”

ಪ್ರಶ್ನೆ: ದೇವಸ್ಥಾನಗಳಲ್ಲಿ ನರಬಲಿ ಕೊಡುತ್ತಿದ್ದದ್ದು ಏತಕ್ಕಾಗಿ ?

“ಮಕ್ಕಳೇ, ಅಂದಿನ ಜನಗಳ ಅಜ್ಞಾನವು ಅವರನ್ನು ಅವರನ್ನು ಆ ರೀತಿ ಮಾಡಲು ಪ್ರೇರೇಪಿಸಿದ್ದು. ನರಬಲಿ ಕೊಟ್ಟರೆ ದೇವರು ಸುಪ್ರೀತನಾಗುತ್ತಾನೆ ಎಂದವರು ನಂಬಿದರು. ಶಾಸ್ತ್ರಗಳಲ್ಲಿ ಹೇಳಿದ ವಿಷಯಗಳನ್ನು ಅವರು ತಪ್ಪು ತಿಳಿದುಕೊಂಡಕಾರಣ ಹಾಗೆಲ್ಲ ಮಾಡಿದ್ದು. ಇವತ್ತಿನ ಜಗತ್ತನ್ನೆ ನೋಡಿರಿ. ರಾಜಕೀಯದ ಹೆಸರಿನಲ್ಲಿ ಎಷ್ಟೊಂದು ರಕ್ತ ಹರಿಯುತ್ತಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಿದರೆ ಕೊಲ್ಲುವುದು, ಪಕ್ಷದವರು ತಮ್ಮೊಳಗೆ ಪರಸ್ಪರ ಹೊಡೆಯುವುದು, ಬಡಿಯುವುದು, ಇರಿಯುವುದು – ಹೀಗೆ ಏನೆಲ್ಲ ಕೋಲಾಹಲ !

ಸತ್ಯದಲ್ಲಿ, ಯಾವುದಾದರೂ ರಾಜಕೀಯ ಪಕ್ಷದ ನಿಯಮಾವಳಿಯಲ್ಲಿ ಅನಗತ್ಯ ಕೊಲ್ಲುವುದು, ಕೊಲೆ ಮಾಡಿಸುವುದು ಹೇಳಿದೆಯೇ ? ಬರೆದಿಟ್ಟಿರುವುದೂ, ಭಾಷಣದಲ್ಲಿ ಹೇಳುವುದೂ ಒಳ್ಳೆ ವಿಷಯಗಳು, ಆದರೆ ಮಾಡುವುದು ಮತ್ತೊಂದು. ಈ ರೀತಿ ಕೆಲವು ಹೆಡ್ಡರು ಅವತ್ತೂ ಇದ್ದರು. ಅಂಧ ಭಕ್ತಿಯೂ, ನಂಬಿಕೆಯೂ ಅವರನ್ನು ಹಾಗೆಲ್ಲ ಮಾಡಲು ಪ್ರೇರೇಪಿಸಿತು.”

ಪ್ರಶ್ನೆ: ಇವರಿಗೆಲ್ಲ ಪಾಪ ತಗಲುದಿಲ್ಲವೇ, ಅಮ್ಮಾ ?

“ಮಕ್ಕಳೇ, ವಿಶ್ವ ಸಂಕಲ್ಪದಿಂದಾಗಿದ್ದರೆ ಪಾಪವಿಲ್ಲ. ಸ್ವಾರ್ಥದಿಂದಾಗಿದ್ದರೆ ಪಾಪ ಉಂಟು. ಒಂದು ಕಡೆ ಇಬ್ಬರು ಬ್ರಾಹ್ಮಣರಿದ್ದರು. ಅವರಿಬ್ಬರನ್ನೂ ಒಂದೇ ರೋಗ ಬಾಧಿಸುತ್ತದೆ.ಮೀನು ತಿಂದರೆಯೇ ರೋಗ ಗುಣವಾಗುವುದು ಎಂದು ಡಾಕ್ಟರು ಹೇಳಿದರು. ಇಬ್ಬರೂ ಶುದ್ಧ ಸಸ್ಯಾಹಾರ ಉಂಡು ಅಭ್ಯಾಸವಾದವರು. ಅವರಿಗೆ ಗೊಂದಲಕ್ಕಿಟ್ಟುಕೊಂಡಿತು. ಆದರೆ ತಾನು ಸತ್ತು ಹೋದರೆ ಪತ್ನಿಯ ಹಾಗೂ ಮಕ್ಕಳ ಸ್ಥಿತಿಯೇನು ಎಂದು ಆಲೋಚಿಸಿ, ಮತ್ತು ಬಂಧು ಮಿತ್ರಾದಿಗಳ ನಿರ್ಬಂಧಕ್ಕೆ ಮಣಿದು, ಮೊದಲಿನವನು ಮೀನು ತಿನ್ನುತ್ತಾನೆ; ಅವನ ರೋಗ ಗುಣವಾಗುತ್ತದೆ. ಆದರೆ ಪಾಪಭಯದಿಂದ ಎರಡನೆಯವನು ಮೀನು ತಿನ್ನಲಿಲ್ಲ; ಅವನು ಸತ್ತು ಹೋದ. ಅವನ ಕುಟುಂಬ ಅನಾಥವಾಯಿತು, ಅವರು ಪೂರ್ತಿ ಕಷ್ಟಕ್ಕೀಡಾದರು.

ಮಕ್ಕಳೇ, ಇಲ್ಲಿ ಮೊದಲನೆಯವನು ಮೀನು ಸಾಯಿಸಿ ತಿಂದ ಕಾರಣ ಒಂದು ಕುಟುಂಬವು ಸಂಪೂರ್ಣವಾಗಿ ಬಚಾವಾಯಿತು. ಇದು ಹಿಂಸೆಯಲ್ಲ; ನಿಶ್ಚಿತವಾಗಿಯೂ ಅಲ್ಲ. ಹಾಗೆ ಮಾಡಿದ ಕಾರಣ ಅವನ ಹೆಂಡತಿ ಮಕ್ಕಳನ್ನು ರಕ್ಷಿಸಲು ಅವನಿಗೆ ಸಾಧ್ಯವಾಯಿತು. ತದ್ವಿರುದ್ಧವಾಗಿ, ಎರಡನೆಯವನು ಮೀನು ತಿನ್ನದಿದ್ದ ಕಾರಣ, ಅವನ ಹೆಂಡತಿಗೂ ಮಕ್ಕಳಿಗೂ ಯಾರೂ ಇಲ್ಲದಂತಾಯಿತು. ಒಂದು ಕುಟುಂಬವೆಂದರೆ ಒಂದೋ ಎರಡೋ ಮೀನಿಗಿಂತ ಎಷ್ಟೋ ದೊಡ್ಡದು. ಸೈನಿಕರು ದೇಶದ ಸಲುವಾಗಿ ಶತ್ರು ಪಕ್ಷದ ಎಷ್ಟೋ ಜನರನ್ನು ಕೊಲ್ಲುತ್ತಾರೆ. ಅದು ಅವರ ಕರ್ತವ್ಯ. ಮನೆ ಕಟ್ಟಿಸಲು ನಾವು ಮರಗಳನ್ನು ಕಡಿದು ತೆಗೆಯುವುದಿಲ್ಲವೇ ? ಇವು ಯಾವುವೂ ಸ್ವಾರ್ಥದಲ್ಲಿ ಸೇರ್ಪಡೆಯಾಗುವುದಿಲ್ಲ. ಪ್ರತೀಕಾರ ಬುದ್ಧಿಯೂ ರಾಗದ್ವೇಷಗಳೂ ಒಳಗಿಟ್ಟುಕೊಂಡು ನಡೆದುಕೊಳ್ಳುವಾಗ ಪಾಪ ಉಂಟಾಗುತ್ತದೆ.”

ಪ್ರಶ್ನೆ: ನಮ್ಮ ದೇವಸ್ಥಾನಗಳಲ್ಲಿ ನೆಲೆಯಾಗಿದ್ದ ಪವಿತ್ರತೆ ನಷ್ಟವಾಗಲು ಕಾರಣವೇನು ?

“ಮಕ್ಕಳೇ, ದೇವಸ್ಥಾನಗಳಲ್ಲಿ ಉತ್ಸವದ ಹೆಸರು ಹೇಳಿ ಹಣ ವಸೂಲು ಮಾಡಿ, ಮಟ್ಟತಗ್ಗಿದ ಕಾರ್ಯಕ್ರಮವಲ್ಲವೇ ನಡೆಸುವುದು ? ಇದು ಕ್ಷೇತ್ರದ ವಾತಾವರಣವನ್ನು ಮಲಿನಗೊಳಿಸುವುದು. ಜನರಲ್ಲಿ ಭಕ್ತಿ, ಒಳ್ಳೆಯ ವಿಚಾರಗಳನ್ನು ಬೆಳೆಸುವ ಬದಲು, ಈ ತರವಾದ ಕಾರ್ಯಕ್ರಮಗಳು, ಕೊಳಕು ವಿಚಾರಗಳನ್ನು, ಭಾವೋದ್ರೇಕಗಳನ್ನು ಉಂಟು ಮಾಡುತ್ತವೆ. ಈಶ್ವರನ ಹೆಸರಿನಲ್ಲಿ ಏನೆಲ್ಲ ತೋರಿಸುತ್ತಾರೆ. ಉತ್ಸವಕ್ಕೆಂದು ಹಣ ವಸೂಲು ಮಾಡಿ, ಹೆಂಡ ಕುಡಿದು ಹೊಡೆದಾಟ ಬಡಿದಾಟ ಮಾಡುತ್ತಾರೆ. ದೇವಳದ ಪರಿಸರದಲ್ಲಿ ಲೌಕಿಕ ವಾಸನೆಗಳನ್ನು ಹೊಡೆದೆಬ್ಬಿಸುವ ನಾಟಕ, ಹರಿಕಥೆ, ಡ್ಯಾನ್ಸು ಮುಂತಾದುವೆಲ್ಲ ಪ್ರದರ್ಶಿಸುತ್ತಾರೆ. ಅದೆಲ್ಲವನ್ನು ನೋಡುವವರ ಮನಸ್ಸಿನಲ್ಲಿ ಕೊಳಕು ಭಾವನೆಗಳು ಹುಟ್ಟುತ್ತವೆ. ಸದ್ಚಿಂತನೆಗಳನ್ನು ಜಾಗೃತಗೊಳಿಸಬೇಕಾದ ಎಳೆವಯಸ್ಸಿನಲ್ಲಿ, ಹೀಗಿರುವ ಕಾರ್ಯಕ್ರಮಗಳು ಅವರನ್ನು ದಾರಿ ತಪ್ಪಲು ಪ್ರೇರೇಪಿಸುತ್ತದೆ. ಈ ವಿಚಾರ ತರಂಗಗಳು ದೇವಸ್ಥಾನದ ವಾತಾವರಣವನ್ನು ಕಲುಷಿತಗೊಳಿಸುತ್ತವೆ.

ಮಕ್ಕಳೇ, ನಾವೇ ನಮ್ಮನ್ನು ನಾಶ ಮಾಡುತ್ತಿದ್ದೇವೆ. ಮೊದಲು ನಾವು ಒಳ್ಳೆಯವರಾಗಬೇಕು. ದೇವಸ್ಥಾನದ ಶುದ್ಧತೆಯನ್ನು ಕಾಯ್ದುಕೊಳ್ಳಲು ನಾವು ಜಾಗ್ರತೆ ವಹಿಸಬೇಕು. ದೇವಸ್ಥಾನಕ್ಕೆ ಬಂದಿರುವವರಲ್ಲಿ ಭಕ್ತಿ ಮತ್ತು ವಿಶ್ವಾಸ ಬೆಳೆಸಲು ಅನುಕೂಲವಾಗುವ – ದೈವಿಕವಾದ – ಕಲೆಗಳನ್ನು ಮಾತ್ರವೇ ಅಲ್ಲಿ ಪ್ರದರ್ಶಿಸಬೇಕು. ಪೂಜಾದಿಗಳನ್ನು ತಪ್ಪದೆ ನಡೆಸಬೇಕು. ಕ್ಷೇತ್ರ ಪರಿಸರವನ್ನು ಅಶುದ್ಧ ಮಾಡಿಟ್ಟು, ದೇವತೆಗಳನ್ನು ದೂರಿ ಪ್ರಯೋಜನವಿಲ್ಲ. ಹಿಂದೆಲ್ಲ ಕ್ಷೇತ್ರಗಳಲ್ಲಿ ಪುರಾಣ ಪಾರಾಯಣ, ಧ್ಯಾನ, ಯೋಗಾಭ್ಯಾಸ, ಮುಂತಾದವುಗಳ ಪರಿಪಾಠವಿತ್ತು. ಅಂದಿನ ಜನರಲ್ಲಿ ಭಕ್ತಿ, ವಿಶ್ವಾಸಗಳಿದ್ದವು. ಅಂದು ಉತ್ಸವದ ಕಾರ್ಯಕ್ರಮವಾಗಿ ಪ್ರಸ್ತುತ ಪಡಿಸುತ್ತಿದ್ದದ್ದು ದೇವರ ಕಥೆಗಳಾಗಿತ್ತು.

ಮಕ್ಕಳೇ, ಉತ್ಸವಕ್ಕೆಂದು ಹೇಳಿ ಜನಗಳಿದ ವಸೂಲು ಮಾಡಿದ ಈ ಹಣದಿಂದ ನಮಗೆ ಎಷ್ಟೆಲ್ಲಾ ಒಳ್ಳೆ ಕೆಲಸಗಳನ್ನು ಮಾಡಬಹುದು. ನಮ್ಮ ಹಳ್ಳಿಯಲ್ಲಿ ಮನೆಯಿಲ್ಲದೆ ಕಷ್ಟಪಡುತ್ತಿರುವ ಎಷ್ಟೋ ಜನರಿದ್ದಾರೆ. ಅವರಿಗೆ ಮನೆ ಕಟ್ಟಿಸಿ ಕೊಡಬಹುದು. ಅನ್ನ, ವಸ್ತ್ರ ಖರೀದಿಸಿ, ದೀನರಿಗೆ ದಾನವಾಗಿ ಕೊಡಬಹುದು. ಮದುವೆ ಮಾಡಿಸಲು ಸಾಧ್ಯವಾಗದಿರುವ ಮನೆಯವರಿಗೆ ಸಹಾಯ ನೀಡಬಹುದು. ಧರ್ಮಗ್ರಂಥಗಳನ್ನು ಅಚ್ಚು ಹಾಕಿಸಿ ಧರ್ಮಾರ್ಥ ವಿತರಣೆ ಮಾಡಬಹುದು. ಎಳೆ ಮಕ್ಕಳಿಗೆ ಅದನ್ನು ಕಲಿಸಬಹುದು. ಅನಾಥಾಲಯಗಳನ್ನು ಕಟ್ಟಿಸಬಹುದು. ಯಾರೂ ಗತಿಯಿಲ್ಲದ ಕೂಸುಗಳನ್ನು ಒಳ್ಳೆಯ ಸಂಸ್ಕಾರ ಕೊಟ್ಟು ಅಲ್ಲಿ ಬೆಳೆಸಬಹುದು. ಭವಿಷ್ಯದಲ್ಲಿ ಅನಾಥರು ಇರುವುದಿಲ್ಲ. ನೇರವಾಗಿಯಲ್ಲ: ಇದು ಜನರ ಐಕ್ಯತೆಗೂ ನೆರವಾಗುವುದು.

ಮಕ್ಕಳೇ, ಕ್ರಿಶ್ಚಿಯನ್ನರನ್ನೂ, ಮುಸಲ್ಮಾನರನ್ನೂ, ಇನ್ನುಳಿದವರನ್ನೂ ನೋಡಿ ಕಲಿಯಿರಿ. ಅವರು ಎಷ್ಟೆಲ್ಲ ಒಳ್ಳೇ ಕೆಲಸಗಳನ್ನು ಮಾಡುತ್ತಿದ್ದಾರೆ ! ಅನಾಥಾಲಯಗಳನ್ನೂ ಶಾಲೆಗಳನ್ನೂ ಕಟ್ಟಿಸಿ, ಅನಾಥಾಲಯದ ಮಕ್ಕಳಿಗೆ ಓದಿಸುತ್ತಾರೆ. ಅವರಿಗೆ ಬೇಕಾದ್ದನ್ನು ಮಾಡಿ ಕೊಡುತ್ತಾರೆ. ಅವರು ಕೂಸುಗಳಿಗೆ ಧರ್ಮಗ್ರಂಥಗಳನ್ನು ಕಲಿಸುತ್ತಾರೆ. ಮಕ್ಕಳೇ, ಎಲ್ಲಾದರೂ ಚರ್ಚು ಅಥವಾ ಮಸೀದಿ ಒಡೆದು ಕುಸಿದು ಬಿದ್ದಿರುವುದನ್ನು ನೀವು ಕಂಡಿದ್ದೀರಾ ? ಇಲ್ಲ. ಆದರೆ ಹಿಂದುಗಳ ಕ್ಷೇತ್ರಗಳನ್ನು ನೋಡಿ. ನೋಡಿಕೊಳ್ಳಲೂ, ಕಾಣಲೂ ಯಾರೂ ಇಲ್ಲದ ಅನೇಕ ಕ್ಷೇತ್ರಗಳು ಬಿದ್ದುಕೊಂಡಿವೆ. ದೊಡ್ಡ ದೇವಸ್ಥಾನಗಳನ್ನು ದೇವಸ್ವಂ ಬೋರ್ಡ್* ಆಧೀನಕ್ಕೆ ತೆಗೆದುಕೊಳ್ಳುತ್ತದೆ. foot note: (ಕೇರಳದಲ್ಲಿ ಹೆಚ್ಚಿನ ದೇವಸ್ಥಾನಗಳು ಹಾಗೂ ಹೆಚ್ಚು ದೊಡ್ಡ ದೇವಸ್ಥಾನಗಳು ಕೇರಳ ಸರಕಾರದ ವಶದಲ್ಲಿದೆ ಹಾಗೂ ಅವನ್ನು ಮಾತ್ರ ಸರಕಾರದ ’ದೇವಸ್ವಂ ಬೋರ್ಡ್’ ನಡೆಸುತ್ತದೆ.) ಅವುಗಳಿಂದ ವರಮಾನ ಬರುತ್ತದಲ್ಲವೇ ? ಸಣ್ಣ ದೇವಸ್ಥಾನಗಳತ್ತ ಅವರು ತಿರುಗಿ ಸಹ ನೋಡುವುದಿಲ್ಲ.

ಮಕ್ಕಳೇ, ದೇವಸ್ಥಾನಗಳ ಪುನರುದ್ಧಾರಕ್ಕೆ ಹಾಗೂ ಅಲ್ಲಿಯ ಉತ್ಸವದಲ್ಲಿ ದೈವಿಕ ಕಲೆಗಳನ್ನು ಪ್ರಸ್ತುತ ಪಡಿಸುವುದರ ಕುರಿತು ವಿಶೇಷ ಗಮನ ಕೊಡಬೇಕು. ಐಕ್ಯತೆಯಿಂದ ನಾವಾಗಿಯೇ ಕ್ಷೇತ್ರಗಳನ್ನು ಸಮರ್ಪಕವಾಗಿ ಸಂರಕ್ಷಿಸಬೇಕು. ಅದರ ಪವಿತ್ರತೆಯನ್ನು ಕಾಪಾಡಬೇಕು. ಇಲ್ಲದಿದ್ದರೆ ನಮ್ಮ ಸಂಸ್ಕಾರದ ಅಧಃಪತನವಾದೀತು.