ಪ್ರಶ್ನೆ: ಅಮ್ಮಾ, ನಿರಾಕಾರನಾದ ದೇವರನ್ನು ಸಾಕಾರನಾಗಿ ಆರಾಧಿಸಬೇಕಾದ ಅವಶ್ಯಕತೆಯಿದೆಯೇ ?

“ಮಕ್ಕಳೇ, ನಮ್ಮ ಸಂಸ್ಕಾರ, ಪ್ರತಿಯೊಬ್ಬ ಗೆಳೆಯನಲ್ಲಿ ನಮ್ಮ ದುಃಖಗಳನ್ನು ಹಂಚಿಕೊಂಡು, ಸುಖವನ್ನು ಅರಸೋಣ, ಎನ್ನುವಂತದ್ದು. ಅದನ್ನು ಒಂದು ವಿಶ್ವ ಸಂಕಲ್ಪವಾಗಿ ಪರಿವರ್ತಿಸುವುದು ಸಾಕಾರ ಉಪಾಸನೆಯ ಉದ್ದೇಶ.

ಒಂದು ಮಗು ಆಟವಾಡಿಕೊಂಡಿರುವಾಗ ಸ್ನೇಹಿತನು ಸ್ವಲ್ಪ ಚಿವುಟಿದರೆ, ಅಳುತ್ತಾ ಹೋಗಿ ತಾಯಿಯಲ್ಲಿ ಹೇಳುತ್ತಾನೆ. ಸ್ವಲ್ಪ ಪ್ರಾಯ ಹೆಚ್ಚಾದಾಗ, ಮನೆಯಲ್ಲಿ ಅಮ್ಮ ಹೊಡೆದದ್ದು, ಅಣ್ಣ ಬೈದದ್ದು ಎಲ್ಲಾ ಸ್ನೇಹಿತನಲ್ಲಿ ಹೇಳುತ್ತಾನೆ. ಮುಂದೆ ಪ್ರೀತಿಸುವ ಹುಡುಗಿಯಲ್ಲಿ ತನ್ನ ದುಃಖವೆಲ್ಲ ಹೇಳಿ ಸಾಂತ್ವನ ಪಡೆಯಲು ಪ್ರಯತ್ನಿಸುತ್ತಾನೆ. (ಅವಳ ದುಃಖಗಳನ್ನು ಅವನಲ್ಲಿ ಹೇಳಿಕೊಳ್ಳುತ್ತಾಳೆ.) ಆದರೆ ಆ ಕಡೆ ಈ ಕಡೆ ದುಃಖ ಹಂಚಿಕೊಂಡು ಇಮ್ಮಡಿ ದುಃಖಿತರಾಗುವುದಲ್ಲದೆ, ದುಃಖ ನಿವೃತ್ತಿ ಪಡೆಯಲು ಆಗುವುದಿಲ್ಲ. ಸಣ್ಣ ಹಾವು ದೊಡ್ಡ ಕಪ್ಪೆಯನ್ನು ನುಂಗಿ ಸಂಕಟ ಪಟ್ಟ ಹಾಗೆ, ಇಬ್ಬರೂ ಸಂಗಾತಿಗಳು ವ್ಯಥೆ ಪಡುತ್ತಾರೆ. ನಮಗೆ ಪೂರ್ತಿ ಶಾಂತಿ ನೀಡಲು ಯಾರಿಗೂ ಸಾಧ್ಯವಿಲ್ಲ. ಈ ದುಃಖದ ವಿನಿಮಯ, ವಿಶ್ವ ಸಂಕಲ್ಪವಾದ ಈಶ್ವರನೆಡೆಗೆ ಹೊರಳಿಸಿದರೆ, ಶಾಶ್ವತವಾದ ಶಾಂತಿಯು ನಮಗೆ ಲಭಿಸುವುದು. ಅವನು ನಮಗೆ ಆನಂದ ಮಾತ್ರವೇ ತರುವನು.

ನಿರಾಕಾರನಾದ ಪರಮಾತ್ಮನಲ್ಲಿ /ಈಶ್ವರನಲ್ಲಿ ಬೇಗನೇ ಪ್ರೇಮ ಮೂಡುವುದಿಲ್ಲ. ಸಾಮಾನ್ಯರಿಗೆ ನಿರಾಕಾರ ಸಾಧನೆಯಿಂದ ಬೇಗನೆ ಸಂತೃಪ್ತಿಯೆನಿಸುವುದೆಂದು ಹೇಳಲಿಕ್ಕಾಗುವುದಿಲ್ಲ. ಭಕ್ತಿಯಿಲ್ಲದ ಅದ್ವೈತ ಸಾಧನೆಯೆಂದರೆ ಬಂಡೆಕಲ್ಲನ್ನು ತಿನ್ನುವ ಹಾಗೆ. ಮಕ್ಕಳೇ, ನಿರಾಕಾರನಾದ ದೇವರು ಸಾಕಾರವಾಗಲು ಸಾಧ್ಯ; ಸರ್ವ ಶಕ್ತನಾದ ಭಗವಂತನಿಗೆ, ತನ್ನ ಭಕ್ತನಿಗಾಗಿ ರೂಪವ ತಳೆಯಲು ಇನಿತು ಕಷ್ಟವೂ ಇಲ್ಲ. ನೀರು ಮಂಜು ಗಡ್ಡೆಯಾಗಿಯೂ, ಕಡಲನೀರು ಉಪ್ಪಾಗಿಯೂ ಮಾರ್ಪಡುವುದಿಲ್ಲವೇ ? ಇದೇ ರೀತಿಯಾಗಿ, ಭಕ್ತನ ಇಚ್ಛೆಯನ್ನನುಸರಿಸಿ ಭಗವಂತನು ರೂಪ ಧರಿಸುತ್ತಾನೆ. ತನ್ನ ಇಷ್ಟ ರೂಪದಲ್ಲಿ ದೃಢ ನಂಬಿಕೆಯಿದ್ದರೆ, ಗುರಿ ಮುಟ್ಟಲು ಸಾಧ್ಯವಿದೆ. ನಮ್ಮ ಆತ್ಮಸ್ವರೂಪವೇ ದೇವರು ಎಂದು ಮಕ್ಕಳು ಭಾವಿಸಬೇಕು.ಎಲ್ಲಾ ರೂಪಗಳೂ,ಒಂದರ ಬೇರೆ ಬೇರೆ ಭಾಗಗಳೆಂದುಕೊಂಡು ಪ್ರಾರ್ಥಿಸಬೇಕು. ಹಲವು ಹೊಂಡಗಳನ್ನು ತೋಡುವ ಸಮಯದಲ್ಲಿ ಒಂದು ಹೊಂಡ ತೋಡಿರಿ. ಆಗ ನೀರಡಿಕೆ ತಣಿಸಲು ನೀರು ಬೇಗನೆ ಸಿಗುವುದು. ಫ್ಯಾನ್ನಲ್ಲಿ, ಫ್ರಿಜ್ನಲ್ಲಿ ಮತ್ತು ಬಲ್ಬ್ನಲ್ಲಿ ಬರುವ ಕರೆಂಟ್ ಒಂದಲ್ಲವೇ ? ಅದೇ ರೀತಿ, ದೇವರೊಂದೇ; ಉಪಾಧಿಯನ್ನನುಸರಿಸಿ ಪ್ರವರ್ತಿಸುತ್ತಾನೆ ಎಂದಷ್ಟೇ ವಿಷಯ. ದೋಣಿ ಹತ್ತಿದ ಮೇಲೆ ಕಡವಿನಲ್ಲಿ ಇಳಿದ ಹಾಗೆ, ಬಸ್ಸು ಹತ್ತಿ ಮನೆಯ ಹತ್ತಿರದ ಸ್ಟಾಪ್ನಲ್ಲಿಳಿದ ಹಾಗೆ, ದೇವರ ಸಂಕಲ್ಪವು ಸಚ್ಚಿದಾನಂದ ಸಾಗರದ ತೀರದವರೆಗೆ ತಲಪಿಸುವುದು.

ಯಾವ ದುಃಖವನ್ನೂ ಮಕ್ಕಳು ಇನ್ನೊಬ್ಬರಲ್ಲಿ ಹೇಳಿ ಇಮ್ಮಡಿ ದುಃಖ ಪಡೆಯದೆ, ಈಶ್ವರನಿಗೆ ಸಮರ್ಪಿಸಿ ಪರಿಹಾರ (ನಿವೃತ್ತಿ; ಬಿಡುಗಡೆ; ಮೋಕ್ಷ ಮಾರ್ಗ) ಪಡೆಯಿರಿ.

ಒಂದು ಸಲ ಶಿವ ಪಾರ್ವತಿಯರು ಒಟ್ಟಿಗೆ ಕುಳಿತುಕೊಂಡಿದ್ದರು. ಥಟ್ಟನೆ ಪರಮಶಿವನು ಎದ್ದು ಹೋಗುವುದು ಕಂಡಿತು. ಹೋದೊಡನೆ ಹಿಂತಿರುಗಿ ಬಂದದ್ದೂ ಆಯಿತು. “ಅದೇನು ಇಷ್ಟು ಬೇಗ ಹಿಂತಿರುಗಿ ಬಂದದ್ದು” ಎಂದು ಪಾರ್ವತಿ ಪರಮಶಿವನಲ್ಲಿ ವಿಚಾರಿಸಿದಳು. “ನನ್ನ ಒಬ್ಬ ಭಕ್ತ ತನ್ನ ಏನು ದುಃಖವಿದ್ದರೂ ನನ್ನಲ್ಲಿ ಮಾತ್ರ ಹೇಳುತ್ತಿದ್ದ. ಅವನ ಪತ್ನಿಯಲ್ಲಿ, ಮಕ್ಕಳಲ್ಲಿ, ಅಥವಾ ತಾಯಿಯಲ್ಲಿ ಯಾರಲ್ಲೂ ಹೇಳುತ್ತಿರಲಿಲ್ಲ. ಇವತ್ತು ಎಲ್ಲೋ ಹೋಗುವ ಸಮಯ ದಾರಿಯಲ್ಲಿ, ಯಾರೋ ಕದ್ದಿದ್ದಕ್ಕೆ, ತಪ್ಪು ತಿಳುವಳಿಕೆಯಿಂದ ಜನರು ಅವನನ್ನು ಹಿಡಿದು ಹೊಡೆಯ ತೊಡಗಿದರು. ನಾನು ಮುಟ್ಟಿದಾಗ, ಜೊತೆಯಲ್ಲಿರುವ ಗೆಳೆಯನಲ್ಲಿ ಹೇಳುತ್ತಿದ್ದ, ’ನಾನು ಮಾಡದ ತಪ್ಪಿಗೆ ಇವರು ನನ್ನನ್ನು ಹೊಡೆಯುತ್ತಿದ್ದಾರೆ. ಇವರನ್ನು ಎದುರಿಸಲು, ನೀನು ಕೂಡಾ ಸಹಾಯ ಮಾಡು.’ ಎಂದು. ಆಗ ನನ್ನ ಅವಶ್ಯಕತೆ ಇಲ್ಲವಲ್ಲ; ಹಾಗಾಗಿ ನಾನು ಮರಳಿ ಬಂದೆ”

ನಾವು ಬೇರೆಯವರ ಸಹಾಯವನ್ನು ಅವಲಂಬಿಸುವುದಾದರೆ ದೇವರು ನಮ್ಮ ಬಳಿ ಬರಲೊಲ್ಲನು. ದೇವರಿಗೆ ಮಾತ್ರ ಶರಣಾಗಿರಿ. ಅವನು ನಮ್ಮನ್ನು ಕಾಪಾಡುವನು. ಸಂಶಯವಿಲ್ಲ. ಭಕ್ತನಿಗಾಗಿ ಅವನು ಜನ್ಮ ತಾಳುವುದು. ’ದೇವರು ಕರುಣೆಯಿಲ್ಲದವನು; ದೇವರನ್ನು ಕಾಣಲು ಸಾಧ್ಯವಿಲ್ಲ’ ವೆಂದು ಯಾವತ್ತೂ ಮಕ್ಕಳು ಹೇಳಬಾರದು. ಅವನು ಯಾವಾಗಲೂ ಎರಡೂ ಕೈಗಳನ್ನು ಚಾಚಿ ’ಮಕ್ಕಳೇ, ಮಕ್ಕಳೇ’ ಎಂದು ಕರೆಯುತ್ತಾನೆ. ಆದರೆ ನಾವು ಆ ಕಡೆ ನೋಡದೆ, ಕನಸು ಕಾಣುತ್ತಾ, ಮೂರ್ಛೆ ಹೋಗಿದ್ದೇವೆ. ಆದರೂ, ದೇವರನ್ನು ದೂರುತ್ತೇವೆ. ಚೆನ್ನಾಗಿ ಓದುವ ಮಕ್ಕಳಿಗೆ ಗವರ್ನ್ಮೆಂಟು ವಿದ್ಯಾರ್ಥಿವೇತನ ಕೊಡುತ್ತದೆ. ಓದದ ಮಕ್ಕಳು ಗವರ್ನ್ಮೆಂಟು ತಪ್ಪು ಎಂದು ಹೇಳಲು ಸಾಧ್ಯವೇ ? ಭಗವಂತನು ಎಲ್ಲ ಕೊಡಲು ಸಿದ್ಧ. ನಾವು ಅರ್ಹರಾಗದೆ, ಭಗವಂತನ ಮೇಲೆ ಅಪವಾದ ಹೊರಿಸಿ ಫಲವಿದೆಯೇ ?

ಬೆಣ್ಣೆ ಮತ್ತು ತುಪ್ಪದ ನಡುವೆ ವ್ಯತ್ಯಾಸವಿಲ್ಲ. ಮಂಜುಗಡ್ಡೆ ಮತ್ತು ನೀರಿನ ನಡುವೆಯೂ ವ್ಯತ್ಯಾಸವಿಲ್ಲ. ನಿರಾಕಾರನಾದ ಈಶ್ವರನೂ, ಸಾಕಾರನಾದ ಈಶ್ವರನೂ ಒಂದೇ ಸತ್ಯದ ಎರಡು ರೂಪಗಳು ಮಾತ್ರ.”