ಪ್ರಶ್ನೆ: ಮಾತುಗಳಿಂದ ಮನುಷ್ಯನ ಸ್ವಭಾವ ಬದಲಿಸಲು ಸಾಧ್ಯವೇ ?
“ಖಂಡಿತವಾಗಿಯೂ ಸಾಧ್ಯ. ಮಕ್ಕಳೇ, ಒಮ್ಮೆ ಒಂದು ದೇವಾಲಯದಲ್ಲಿ ಒಬ್ಬ ಬ್ರಾಹ್ಮಣನು ಕೆಲವು ಹುಡುಗರಿಗೆ ಆಧ್ಯಾತ್ಮಿಕ ಕಲಿಸುತಿದ್ದನು. ಆಗ ಆ ರಾಜ್ಯದ ರಾಜನು ಅಲ್ಲಿ ಬಂದು ಮುಟ್ಟಿದ. ಮಕ್ಕಳಿಗೆ ಕಲಿಸುವುದರಲ್ಲೇ ಮಗ್ನನಾಗಿದ್ದ ಬ್ರಾಹ್ಮಣನಿಗೆ ರಾಜನು ಬಂದದ್ದು / ಬಂದಿರುವುದು ಗೊತ್ತಾಗಲಿಲ್ಲ. ರಾಜನಿಗೆ ಕೋಪ ಬಂದು ಬ್ರಾಹ್ಮಣನಲ್ಲಿ ಕೇಳಿದ, “ಯಾಕಾಗಿ ನಾನು ಬಂದಾಗ ನೀವು ಗಮನಿಸದಿರುವುದು ?” “ನಾನು ಮಕ್ಕಳಿಗೆ ಓದಿಸುತ್ತಾ ಇದ್ದೆ. ಹಾಗಾಗಿ ತಾವು ಬಂದಿದ್ದು ನೋಡಲಿಲ್ಲ,” ಎಂದು ಬ್ರಾಹ್ಮಣನು ಉತ್ತರಿಸಿದನು. ರಾಜನು ಕೇಳಿದ “ನಾನು ಬಂದರೂ ನೋಡಲಾಗದಿರುವಂಥ ಅದು ಏನು ಕಲಿಸುತ್ತಾ ಇದ್ದಿರಿ ?” ಬ್ರಾಹ್ಮಣನು ಹೇಳಿದ, “ನಾನು ಎಳೆಯರಿಗೆ ಒಳ್ಳೆಯ ವಿಷಯಗಳನ್ನು ಕುರಿತು ಕಲಿಸುತ್ತಾ ಇದ್ದೆ.”
ರಾಜ: “ಅದು ಯಾವ ಒಳ್ಳೆಯ ವಿಷಯಗಳು ?”
ಬ್ರಾಹ್ಮಣನು: “ಒಳ್ಳೆಯ ಸ್ವಭಾವ ಬೆಳೆಸುವ ಬಗೆಯನ್ನು.”
ರಾಜ: “ಮಾತುಗಳಿಂದ ಸ್ವಭಾವ ಬದಲಾಗುವುದೇ ?”
ಬ್ರಾಹ್ಮಣನು: “ನಿಶ್ಚಯವಾಗಿಯೂ ಬದಲಾಗುತ್ತದೆ.”
ರಾಜ: “ಹಾಗೇನೂ ಬದಲಾಗುವುದಿಲ್ಲ.”
ಆಗ ಆ ಬ್ರಾಹ್ಮಣನ ಶಿಷ್ಯರ ಗುಂಪಿನಲ್ಲಿದ್ದ ಒಬ್ಬ ಚಿಕ್ಕ ಹುಡುಗ ಎದ್ದು, ರಾಜನಿಗೆ ಅಲ್ಲಿಂದ ಹೊರಟು ಹೋಗಲು ಹೇಳಿದ. ಅದು ಕೇಳಿದ ತಕ್ಷಣ ರಾಜ ಕೋಪಾವಿಷ್ಟನಾಗಿ ಹೇಳುತ್ತಾನೆ, “ನೀನು ಅಷ್ಟಕ್ಕಾದಿಯೋ ? ನಿನ್ನನ್ನು ನಾನಿವತ್ತು ಸಾಯಿಸುತ್ತೇನೆ. ನಿನ್ನ ಗುರುವನ್ನೂ ಸಾಯಿಸುತ್ತೇನೆ. ಈ ಆಶ್ರಮವನ್ನೂ ನಾಶ ಮಾಡುತ್ತೇನೆ.” ಹೀಗೆ ಹೇಳುತ್ತಾ ಅವನು ಬ್ರಾಹ್ಮಣನ ಕತ್ತು ಹಿಡಿಯಲು ಹೊರಟನು. ಆಗ ಬ್ರಾಹ್ಮಣನು ಹೇಳುತ್ತಾನೆ, “ತಾವು ನನ್ನನ್ನು ಕ್ಷಮಿಸಬೇಕು; ತಾವಲ್ಲವೇ ಹೇಳಿದ್ದು ಮಾತುಗಳಿಂದ ಸ್ವಭಾವ ಬದಲಾಯಿಸಲು ಸಾಧ್ಯವಿಲ್ಲವೆಂದು. ಒಂದು ಹುಡುಗ ತಮಗೆ ಐದಕ್ಷರ ಹೇಳಿದಾಗ ತಮ್ಮ ಸ್ವಭಾವ ಸಾಮಾನ್ಯ ಮಟ್ಟದಿಂದ ಎಷ್ಟು ಮಟ್ಟಿಗೆ ಬದಲಾಯಿತು ! ಎಲ್ಲ ನಾಶ ಮಾಡಲೂ ನನ್ನನ್ನು ಕೊಲ್ಲಲೂ ತಾವು ತಯಾರಾಗಲಿಲ್ಲವೇ ?”
ಮಕ್ಕಳೇ, ಈ ಪ್ರಕಾರ ಮಾತುಗಳಿಂದ ಸ್ವಭಾವ ಬದಲಾಯಿಸಲು ಸಾಧ್ಯವಿದೆ. ಮಂತ್ರ ಜಪದಿಂದ ಮನುಷ್ಯನ ಸ್ವಭಾವ ಒಳ್ಳೆಯದಾಗುತ್ತದೆ.
ಪ್ರಶ್ನೆ: ಮಂತ್ರ ಜಪಿಸಿದರೆ ಫಲ ಸಿದ್ಧಿಸುವುದೋ ?
“ನಿಶ್ಚಯವಾಗಿಯೂ ಮಕ್ಕಳೇ. ಆದರೆ ಒಂದು ಮಾತು. ಏಕಾಗ್ರತೆಯಿಂದ, ಭಕ್ತಿಯೊಡಗೂಡಿ ಜಪಿಸಬೇಕು. ಆ ಭಾವಕ್ಕನುಗುಣವಾಗಿ ನಮಗೆ ಶಕ್ತಿ ದೊರಕುವುದು. ಮುಖ್ಯವಾದದ್ದು ಮನೋಭಾವ.
ಒಬ್ಬ ಡಾಕ್ಟರು ನಮಗೆ ಮದ್ದು ಕೊಟ್ಟು, “ಈ ಮದ್ದು ಸೇವಿಸುವಾಗ ದೇಹಕ್ಕೆ ವಿಶ್ರಾಂತಿ ಅಗತ್ಯ. ಅಲ್ಲದೆ ಕೆಲವು ಆಹಾರವಸ್ತುಗಳನ್ನು ತಿನ್ನಬಾರದು.” ಎಂದೆಲ್ಲ ಹೇಳುತ್ತಾನೆ. ಅದನ್ನನುಸರಿಸುತ್ತೇವೆ; ನಮ್ಮ ರೋಗ ವಾಸಿಯಾಗುತ್ತದೆ. ಹೀಗೆಯೇ, ಋಷಿಶ್ರೇಷ್ಟರು ಯುಗ ಯುಗ ಪರ್ಯಂತ ತಪಸ್ಸು ಮಾಡಿ, ಪ್ರಪಂಚವನ್ನು, ಒಂದು ಸಾಸಿವೆಕಾಳನ್ನು ತಮ್ಮ ಉಗುರಿನಡಿಯಲ್ಲಿಟ್ಟುಕೊಂಡಂತೆ ಮಾಡಿದವರು. ಒಂದು ನಿರ್ಜೀವ ಹಲಗೆಗೆ ಸಹ ಅವರು ’ಹಾರು’ ಎಂದು ಹೇಳಿದರೆ ಅದು ಹಾರುವುದು. ಅವರೇ ಮಂತ್ರ ದೃಷ್ಟಾರರು. ಅವರು ಹೇಳಿರುತ್ತಾರೆ ಇಂಥದ್ದೇ ಮಂತ್ರ ಜಪಿಸಿದರೆ ಇಂಥದ್ದೇ ಫಲ ಕೊಡುವುದೆಂದು. ಹಾಗೆಯೇ ಮಾಡಿದರೆ ನಿಶ್ಚಯವಾಗಿಯೂ ಫಲ ಸಿದ್ಧಿಸುತ್ತದೆ.