27 ಸೆಪ್ಟಂಬರ್, 2010

ಕೇಂದ್ರ ಐ.ಟಿ. ಮಂತ್ರಿ ಗುರುದಾಸ್ ಕಾಮತ್‌ರವರು ಅಮೃತ ಶ್ರೀ ಸುರಕ್ಷಾ ಯೋಜನೆಯ ಉದ್ಘಾಟನೆ ಮಾಡಿದರು. 10,000 ಅಮೃತ ಶ್ರೀಯ ಮಹಿಳಾ ಸದಸ್ಯರಿಗೆ ಈ ಮೂಲಕ ವಿಮಾ ಪಾಲಿಸಿ ಈ ಸಮಾರಂಭದಲ್ಲಿ ಸಿಕ್ಕಿದಂತಾಯಿತು. ಒಟ್ಟು ಒಂದು ಲಕ್ಷ ಅಮೃತ ಶ್ರೀ ಮಹಿಳೆಯರು ಇಂಶೂರೆನ್ಸ್ ಸೌಲಭ್ಯಕ್ಕೆ ಅರ್ಹರು.

ಒಂದು ನಿಶ್ಚಿತ ಆದಾಯ ತರುವ ಮನೆಯ ಸದಸ್ಯಳಿಗೆ ಮರಣವೋ ಅಂಗಹೀನತೆಯೋ ಸಂಭವಿಸಿದರೆ ಸಂಸಾರದ ಆರ್ಥಿಕ ಆಧಾರ ಸ್ಥಂಭವೆ ಉರುಳಿ, ಬದುಕು ದುರ್ಬರ ಬವಣೆಯಾಗುವುದನ್ನು ಮನಗಂಡ ಅಮ್ಮ ಅವರಿಗೆ ಸುರಕ್ಷಿತತೆಯ ಹೊಸ ಜಾಲವನ್ನೆ ನೇಯ್ದರು ಈ ಅಮೃತ ಶ್ರೀ ಸುರಕ್ಷಾ ಯೋಜನೆಯನ್ನು ಸೃಷ್ಟಿಸಿ.

ಅಮೃತ ಶ್ರೀ ಮತ್ತು ಎಲ್.ಐ.ಸಿ.ಯ ಸಹಯೋಗದಿಂದ ಪ್ರಾಥಮಿಕವಾಗಿ ಕುಟುಂಬದ ಆರ್ಥಿಕ ಸುರಕ್ಷಿತತೆಗಾಗಿ ವಿನ್ಯಾಸಗೊಂಡ ಅಮೃತ ಶ್ರೀ ಸುರಕ್ಷಾ ಯೋಜನೆ ಫಲ ಕೊಡುವುದು ವಿಮೆಯ ಮೂಲಕ. ಸ್ವಾಭಾವಿಕ ಮರಣಕ್ಕೆ 40,000 ರುಪಾಯಿಗಳೂ, ದುರ್ಮರಣಕ್ಕೆ 85,000 ರುಪಾಯಿಗಳೂ, ತಾತ್ಕಾಲಿಕ ಅಂಗಹೀನತೆಗೆ 35,000 ರುಪಾಯಿಗಳೂ, ಶಾಶ್ವತ ಅಂಗಹೀನತೆಗೆ 75,000 ರುಪಾಯಿಗಳೂ ಇನ್ಶೂರೆನ್ಸ್ ಮೂಲಕ ಪರಿಹಾರವಾಗಿ ಲಭಿಸುತ್ತದೆ. ಆಶ್ರಮವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಮೆ ರಕ್ಷಣೆಯಿರುವ 15 % ಅಮೃತ ಶ್ರೀ ಸುರಕ್ಷಾ ಯೋಜನೆಯ ಮಹಿಳೆಯರ ಪ್ರತಿ ಮಗುವಿಗೆ 1,200 ರುಪಾಯಿಗಳ ವಾರ್ಷಿಕ ವಿದ್ಯಾರ್ಥಿ ವೇತನ ಕೂಡ ನೀಡುವುದು.

27ನೇ ಸೆಪ್ಟಂಬರ್,2010

ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆಮಾತಾ ಅಮೃತಾನಂದಮಯಿ ಮಠವು ಅಮೃತಕೀರ್ತಿ ಪುರಸ್ಕಾರ ನೀಡಿ ಗೌರವಿಸಿತು. ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ದರ್ಶನ ಶಾಸ್ತ್ರಗಳ ಸಾಹಿತ್ಯಕ್ಕೆ ಡಾ. ಉಣ್ಣಿಯವರ ಕೊಡುಗೆ ವಿಶಾಲವಾದುದು, ಮಹತ್ವದ್ದು ಹಾಗೂ ಪ್ರೌಢವಾದುದು.

ಭಾರತವರ್ಷದ ಸಂಸ್ಕೃತಿಯ ಜೋಪಾಸನೆಗೆ – ಸರಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಹಾಗೂ ಕೇರಳ ಯೂನಿವರ್ಸಿಟಿಯ ಹಿಂದಿನ ವೈಸ್-ಚಾನ್ಸಲರ್‌ ಆಗಿ – ಉಣ್ಣಿಯವರ ಕೊಡುಗೆ ಅಪಾರ.

ಸಂಸ್ಕೃತ ನಾಟಕ, ಕ್ಷೇತ್ರ ತಂತ್ರ ವಿದ್ಯ, ಶಾಸ್ತ್ರ, ಶಾಸ್ತ್ರೀಯ ಸಂಸ್ಕೃತ ಸಾಹಿತ್ಯ, ಅನುವಾದ ಮುಂತಾದ ಕ್ಷೇತ್ರಗಳಲ್ಲಿ, ಇಂಗ್ಲಿಷಿನಲ್ಲಿ 38 ಗ್ರಂಥಗಳನ್ನು ರಚಿಸಿರುವುದಲ್ಲದೆ ಅನೇಕ ಉಪನಿಷತ್ತುಗಳನ್ನೂ ಪುರಾಣಗಳನ್ನೂ ಮಲೆಯಾಳಕ್ಕೆ ಭಾಷಾಂತರಿಸಿದ್ದಾರೆ. ಇಷ್ಟಲ್ಲದೆ, 150ಕ್ಕಿಂತಲೂ ಅಧಿಕ ಪ್ರಬಂಧಗಳನ್ನು ಇಂಡೋಲಾಜಿಕಲ್ ಜರ್ನಲ್‌ಗಳಲ್ಲಿ ಪ್ರಕಟಿಸಿರುವುದಲ್ಲದೆ, ಡಜನ್‌ಗಟ್ಟಲೆ ದೇಶ ವಿದೇಶಗಳ ಶಾಸ್ತ್ರಜ್ಞರಿಗೆ, ಅವರ ಪಿಎಚ್.‌ಡಿ.ಗೆ ಮಾರ್ಗದರ್ಶಕರಾಗಿದ್ದರು.

ಈ ವಾರ್ಷಿಕ ಅಮೃತ ಕೀರ್ತಿ ಪುರಸ್ಕಾರವು ಮಾತಾ ಅಮೃತಾನಂದಮಯಿ ಮಠದಿಂದ 1,23,456 ರುಪಾಯಿಗಳ ನಗದು ಬಹುಮಾನ, ಪ್ರಸಿದ್ಧ ಶಿಲ್ಪಿಯಿಂದ ಕೆತ್ತಲ್ಪಟ್ಟ ಶ್ರೀ ಸರಸ್ವತಿ ದೇವಿಯ ವಿಗ್ರಹ ಹಾಗೂ ಶಿಫಾರಸು ಪತ್ರವನ್ನೊಳಗೊಂಡಿರುತ್ತದೆ.

2001ರಲ್ಲಿ ಮಾತಾ ಅಮೃತಾನಂದಮಯಿ ಮಠವು (ಮಾ.ಅ.ಮ.) ಅಮೃತಕೀರ್ತಿ ಪುರಸ್ಕಾರವನ್ನು ನೀಡುವ ಪದ್ಧತಿ ಪ್ರಥಮವಾಗಿ ಜಾರಿಯಲ್ಲಿ ತಂದಿತು.

ಪುರಸ್ಕಾರವನ್ನು ಸ್ವೀಕರಿಸಿ “ಆಧ್ಯಾತ್ಮಿಕ ಪ್ರಗತಿಗೆ ನನ್ನ ಜೀವನವನ್ನು ಮುಡಿಪಾಗಿರಿಸುವೆನು ಹಾಗೂ ಅದಕ್ಕೆ ಅಮ್ಮನ ಮಾರ್ಗದರ್ಶನ ಕೋರುತ್ತೇನೆ” ಎಂದು ತಮ್ಮ ಸ್ವೀಕಾರ ಭಾಷಣದಲ್ಲಿ, ತುಂಬಿದ ಸಭೆಗೆ ವಿನಯಪೂರ್ವಕವಾಗಿ ಹೇಳಿ ಅಮ್ಮನತ್ತ ತಿರುಗಿ ತಲೆ ಬಾಗಿಸಿ ವಂದಿಸಿದರು.

29ನೇ ಸೆಪ್ಟಂಬರ್, 2010, ಅಮೃತಪುರಿ

27ನೇ ಬೆಳಿಗ್ಗೆ ಐದು ಗಂಟೆಗೆ ಶುರುವಾದ ಜನ್ಮ ದಿನದ ಉತ್ಸವ ತೆರೆ ಕಂಡದ್ದು ಮಾರನೆಯ ಬೆಳಿಗ್ಗೆ 8.45ಕ್ಕೆ, ಈ ಕೆಳಗಿನ ಎಲ್ಲಾ ಕಾರ್ಯಕ್ರಮಗಳ ನಂತರ:

  • ಮಹಾ ಗಣಪತಿ ಹೋಮ.
  • ವಿಶ್ವ ಶಾಂತಿಗಾಗಿ ಸಾವಿರಗಟ್ಟಲೆ ಭಕ್ತರಿಂದ ಲಲಿತಾ ಸಹಸ್ರ ನಾಮಾರ್ಚನೆ.
  • “ಅಮ್ಮನ ಬದುಕು, ಉಪದೇಶ” – ಸ್ವಾಮಿ ಅಮೃತಸ್ವರೂಪಾನಂದರಿಂದ ಮಾತು.
  • ಬೆಳಿಗ್ಗೆ 9.00, ಅಮ್ಮನ ವೇದಿಕೆಯ ಮೇಲೆ ಆಗಮನ, ಮೋಹಿನಿ ಆಟ್ಟಂನ ಸ್ವಾಗತ ಪ್ರದರ್ಶನದ ಮಧ್ಯದಲ್ಲಿ.
  • ಅಮ್ಮನ ಪಾದ ಪೂಜೆ – ಗುರು ಗೀತೆ ಹಾಗೂ ಅಮ್ಮನ ಅಷ್ಟೋತ್ತ ಪಠಣರದೊಂದಿಗೆ, ಸ್ವಾಮಿ ಅಮೃತಸ್ವರೂಪಾನಂದರಿಂದ.
  • ಹಿರಿಯ ಶಿಷ್ಯರಿಂದ ಅಮ್ಮನಿಗೆ ಹಾರಾರ್ಪಣೆ.
  • ಅಮ್ಮನಿಂದ ಜನ್ಮ ದಿನದ ಸಂದೇಶ. ಇಂಗ್ಲೀಷಿನಲ್ಲಿ ಅನುವಾದ ಸ್ವಾಮೀಜಿಯವರಿಂದ.
  • ಅತಿಥಿಗಳನ್ನು ಸ್ವಾಗತಿಸುತ್ತಾ ಸ್ವಾಮೀಜಿಯವರು ಹೇಳಿದ್ದು ಹೀಗೆ:
  • “ಇಂದು ಜಗತ್ತಿನ ಕಣ್ಣುಗಳು ಅಮ್ಮನ ಮೇಲಿದೆ, ಆದರೆ ಅಮ್ಮ ಏನು ಮಾಡುತ್ತಾರೆ? ನಮ್ಮ ದೃಷ್ಟಿಯನ್ನು ಬಡವರೆಡೆಗೆ, ನರಳುತ್ತಿರುವವರೆಡೆಗೆ, ಬಿದ್ದವರೆಡೆಗೆ, ರೋಗಿಗಳೆಡೆಗೆ, ಆಶಾರಹಿತರೆಡೆಗೆ ತಿರುಗಿಸುತ್ತಾರೆ. ನಮ್ಮ ದೃಷ್ಟಿಯನ್ನು ವಿಧವೆಯರತ್ತ, ಅಂಗಹೀನರತ್ತ, ದುರ್ಬಲರತ್ತ ತಿರುಗಿಸುತ್ತಾರೆ. ಅಂದರೆ ಇದು ಅಮ್ಮನ ಜನ್ಮ ದಿನದ ಸಂದೇಶದೊಂದು ಭಾಗ. ಇದೊಂದು ಉಪದೇಶ: ನಮ್ಮ ಜನ್ಮ- ನಮ್ಮ ನಿಜವಾದ ಜನ್ಮ – ಬೇರೆಯವರನ್ನು ನಮಗಿಂತಲೂ ಮುಂದಿಟ್ಟಾಗ ಆಗುತ್ತದೆ. ಇದು ಅಮ್ಮನ ಸಂದೇಶ: ಇಡೀ ಜಗತ್ತನ್ನೇ ನಿಮ್ಮ ಹೃದಯದಲ್ಲಿ ಸೇರ್ಪಡಿಸಿ; ಮುಕ್ತರಾಗಿ.”
  • ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆ (ಹಿಂದಿನ ವೈಸ್-ಚಾನ್ಸಲರ್, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಕಾಲಡಿ, ಕೇರಳ) ಅಮೃತಕೀರ್ತಿ ಪುರಸ್ಕಾರ ಸಮರ್ಪಣೆ.
  • ಅಮೃತ ಶ್ರೀ ಸುರಕ್ಷಾ ಯೋಜನೆಯ ಉದ್ಘಾಟನೆ – ಕೇಂದ್ರ ಮಂತ್ರಿ ಶ್ರೀ ಗುರುದಾಸ್ ಕಾಮತ್‌ರಿಂದ.
  • ಅಮೃತ ನಿಧಿ ಪೆನ್ಷನ್ ಚೆಕ್ಕುಗಳ ವಿತರಣೆ, ಕೇಂದ್ರ ಮಂತ್ರಿಗಳಾದ ಶ್ರೀ. ಕೆ.ವಿ. ತೋಮಸ್ ಹಾಗೂ ಕೇರಳ ವಿರೋಧ ಪಕ್ಷದ ನಾಯಕ ಶ್ರೀ. ಊಮ್ಮೆನ್ ಚಾಂಡಿಯವರಿಂದ.
  • ವಿದ್ಯಾಮೃತಮ್ ವಿದ್ಯಾರ್ಥಿವೇತನ ಯೋಜನೆಗೆ 500 ಹೊಸ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಚೆಕ್ ವಿತರಣೆ.
  • ಆಶ್ರಮದ ನೂತನ ಪ್ರಕಾಶನ ಸಂಸ್ಥೆಯಾದ “ಅಮೃತ ಬುಕ್ಸ್”‌ನ ಉದ್ಘಾಟನೆ ಹಾಗೂ ಅದರ ಹೊಸ ಪ್ರಕಟಣೆಗಳ ಬಿಡುಗಡೆ – ಅಮ್ಮನ ಜೀವನಚರಿತ್ರೆ ಮತ್ತು “ಫ್ರಮ್ ಅಮ್ಮಾಸ್ ಹಾರ್ಟ್” (ಎರಡೂ ಸ್ವಾಮಿ ಅಮೃತಸ್ವರೂಪಾನಂದರಿಂದ, ಇಂಗ್ಲೀಷ್‌ನಲ್ಲಿ,)
  • ಮಾತೃವಾಣಿ ಜನ್ಮ ದಿನೋತ್ಸವ ಪುರವಣಿಗೆಯ ಬಿಡುಗಡೆ.
  • www.amrita.in (ಅಮೃತ.ಇನ್) – ಎಂಬ ಒಂಬತ್ತು ಭಾಷೆಗಳ (ಕನ್ನಡ, ಸಂಸ್ಕೃತ, ಮಲೆಯಾಳ, ತಮಿಳು, ತೆಲುಗು, ಹಿಂದಿ, ಮರಾಠಿ, ಪಂಜಾಬಿ, ಬಂಗಾಲಿ) ವೆಬ್‌ಸೈಟ್‌ನ ಬಿಡುಗಡೆ – ಅಮ್ಮನ ವೆಬ್ ಸೈಟ್‌ನ ಚರಿತ್ರೆಯಲ್ಲಿ ಹೊಸ ದಾಖಲೆ.
  • ಭಾರತ ಸ್ವಚ್ಛವಾಗಿಡಲು ಹಾಗೂ ಪರಿಸರ ಸಂರಕ್ಷಿಸಲು, ಅಮೃತ ವಿದ್ಯಾಲಯಮ್ ಮತ್ತು ಅಮೃತ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಹಾಗೂ ಆಯುಧ್ ಸದಸ್ಯರು ಪ್ರತಿಜ್ಞೆ ಗೈದರು. ಸ್ಥಾನೀಯ ಯುವ ಜನತೆ ಮತ್ತು-ಬರಿಸುವ ವಸ್ತುಗಳು, ಮದ್ಯಪಾನ ಹಾಗೂ ತಂಬಾಕು ಸೇವನೆಯಿಂದ ವರ್ಜಿತರಾಗಿರುವ ಪ್ರತಿಜ್ಞೆ ಮಾಡಿದರು. ಎರಡೂ ಪ್ರತಿಜ್ಞೆಗಳನ್ನು ಓದಿಸಿದವರು ಸ್ವಾಮಿ ಅಮೃತಸ್ವರೂಪಾನಂದರವರು.
  • ಅತಿಥಿಗಳಿಂದ ಮಾತು.
  • ಬಟ್ಟೆ, ಬಂಗಾರ ಹಾಗೂ ಭೋಜನದ ಎಲ್ಲ ವೆಚ್ಚ ಆಶ್ರಮ ಭರಿಸಿದ, ಆಶ್ರಮದ ವತಿಯಿಂದ 54 ಜೋಡಿಗಳ ಸಾಮೂಹಿಕ ಮದುವೆ.
  • ದರ್ಶನದ ವೇಳೆಯಲ್ಲಿ ಮಾತೃವಾಣಿ ಪ್ರಚಾರಕರಿಗೆ ಬಹುಮಾನ ವಿತರಣೆ.

ಆಗಮಿಸಿದ ಲಕ್ಷಗಟ್ಟಲೆ ಅಮ್ಮನ ಭಕ್ತರಿಗೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಯ ಮೂರು ದಿನಗಳ ಅವ್ಯಾಹತ ಅನ್ನದಾನ.
ಮಾರನೇ ಬೆಳಿಗ್ಗಿನ 8.45ರ ತನಕ, ಅಮ್ಮನ ಅವಿರತ ದರ್ಶನ.

ನಾವೊಂದು ಒಂಟಿ ದ್ವೀಪವಲ್ಲ. ಒಂದೇ ಸರಪಳಿಯ ಕೊಂಡಿಗಳು ನಾವು. ನಾವು ಮಾಡುವ ಒಂದೊಂದು ಕೃತಿಯೂ, ತಿಳಿದೋ ತಿಳಿಯದೆಯೋ ಇತರರ ಮೇಲೆ ಪರಿಣಾಮ ಬೀರುತ್ತದೆ. ಈ ಜಗತ್ತಿನಲ್ಲಿ ನಡೆದಿರುವ ಎಲ್ಲ ಯುದ್ಧಗಳೂ, ಯಾವನೋ ಒಬ್ಬ ಮನುಷ್ಯನೊಳಗೆ ಮೂಡಿದ ವಿದ್ವೇಷದ ಫಲ. ಒಬ್ಬ ವ್ಯಕ್ತಿಯ ಆಲೋಚನೆ, ನಡತೆ ಎಷ್ಟೋ ಜನಗಳನ್ನು ನಾಶ ಮಾಡಿತು. ಹಿಟ್ಲರ್ ಒಬ್ಬ ವ್ಯಕ್ತಿ. ಆದರೆ ಅವನ ಕೃತಿ ಬಾಧಿಸಿದ್ದು ಎಷ್ಟೆಲ್ಲ ಜನರನ್ನು! ನಮ್ಮ ಆಲೋಚನೆ ಇತರರನ್ನೂ, ಇತರರ ಆಲೋಚನೆ ನಮ್ಮನ್ನೂ ಬಾಧಿಸುತ್ತವೆ ಎಂದರಿತು, ಎಂದಿಗೂ ಒಳ್ಳೆಯ ವಿಚಾರಗಳು ಮಾತ್ರ ಮೂಡುವಂತೆ ಜಾಗ್ರತೆ ವಹಿಸಬೇಕು. ಅವರು ಬದಲಾಗದೆ ನಾನು ಬದಲಾಗುವುದಿಲ್ಲ ಎಂದು ಯೋಚಿಸದೇ, ಅವರು ಬದಲಾಗದಿದ್ದರೂ ನಾವು ಬದಲಾಗಲಿಕ್ಕೆ ಪ್ರಯತ್ನಿಸಬೇಕು. ಆಧ್ಯಾತ್ಮಿಕತೆಯು ಕಲಿಸುವುದು ಅದನ್ನೇ.

ಇವತ್ತು ದಿನ ತ್ಯಾಗದ ದಿನವೆಂದು ಅಮ್ಮ ಹೇಳಿದರು. ತ್ಯಾಗದೊಂದಿಗೆ ಸೇರಿದರೆ ಮಾತ್ರ ನಮ್ಮ ಸಂಸ್ಕೃತಿಯ ಉದ್ಧಾರ ಸಾಧ್ಯ. ಋಷಿಗಳು ಕೊಟ್ಟ ಸಂಸ್ಕೃತಿಯನ್ನು ನಮ್ಮಲ್ಲಿ ಜಾಗೃತಗೊಳಿಸಲು ನೆನೆಪು ಮಾಡಿಸಲಿಕ್ಕೆಂದೇ ಇರುವುದು ಈ ದಿನ – ಬಾಹ್ಯಾಡಂಬರಕ್ಕೋ, ಉತ್ಸವಕ್ಕೋ ಅಲ್ಲ. ವೈಯಕ್ತಿಕತೆಯನ್ನು ಮರೆತು ಒಳ್ಳೆ ಕಾರ್ಯಗಳಲ್ಲಿ ಮಗ್ನರಾಗಿ, ಅವುಗಳಲ್ಲಿ ಆನಂದಿಸುವಾಗ ಮಾತ್ರವೇ ಜೀವನ ಉತ್ಸವವಾಗಿ ಬದಲಾಗುತ್ತದೆ. ಉಲ್ಲಾಸವೂ ಸಂಸ್ಕೃತಿಯೂ ಸೇರಿ ಒಂದುಗೂಡಬೇಕು. ಅದುವೇ ಬದುಕನ್ನು ಉತ್ಸವವಾಗಿ ಮಾರ್ಪಡಿಸುವುದು. ಸಂಸ್ಕೃತಿಯೊಟ್ಟಿಗೆ ಒಂದಾಗಿರುವ ಉಲ್ಲಾಸವು ಪುಟ್ಟ ಮಗುವಿನ ಮುಗುಳು ನಗೆಯಂತೆ – ನಿಷ್ಕಳಂಕ ಮುಗುಳುನಗೆ. ಅದು ನಮ್ಮನ್ನು ದಿವ್ಯತ್ವಕ್ಕೆ ಏರಿಸುವುದು. ಅಂದರೆ, ಸಂಸ್ಕಾರ ರಹಿತವಾದ ಉಲ್ಲಾಸವು ನಮ್ಮನ್ನು ಮೃಗೀಯತೆಗೆ ಕಡೆಗೆ ತಳ್ಳುವುದು.

ನಮಗೆ ತಿಳಿದಿದೆ, ಇವತ್ತು ಜಗತ್ತಿನಲ್ಲಿ ಸಂಸ್ಕೃತಿಯು, ಅಧೋಗತಿಯಲ್ಲಿದೆ. ರಾಜಕೀಯದಲ್ಲಾಗಲೀ, ಶೈಕ್ಷಣಿಕ ಕ್ಷೇತ್ರದಲ್ಲಾಗಲೀ, ಕುಟುಂಬಜೀವನದಲ್ಲಾಗಲೀ ಸಂಸ್ಕೃತಿ ಅವನತಿ ಹೊಂದುತ್ತಲಿದೆ. ಆಧ್ಯಾತ್ಮಿಕತೆಯಲ್ಲಿದ್ದುಕೊಂಡು ಶಕ್ತಿ ಸಂವರ್ಧನೆ ಮಾಡಿಕೊಂಡಾಗ ಮಾತ್ರವೇ ಈ ಸಂಸ್ಕೃತಿಯನ್ನು ಉದ್ಧಾರ ಮಾಡಲು ಸಾಧ್ಯ. ನಮ್ಮ ಜೀವನದಲ್ಲಿ ಶಕ್ತಿಯ ಉತ್ಪ್ರೇಕ್ಷೆ ಮಾಡುವ ಸಯನ್ಸೇ ಆಧ್ಯಾತ್ಮಿಕತೆ. ನಮ್ಮ ಬದುಕಿಗೆ ಸೌಂದರ್ಯ ಲೇಪಿಸುವ ಕಲೆಯೇ ಆಧ್ಯಾತ್ಮಿಕತೆ.

(ಅಮ್ಮನ 2001ರ ಜನ್ಮದಿನದ ಸಂದೇಶದಿಂದ)

ಇವತ್ತಿನ ಮಕ್ಕಳೂ ಯುವಕರೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೇ ಕಾಣುತ್ತಿರುವುದು. ನಮ್ಮಲ್ಲಿಲ್ಲದ ಹಲವು ಒಳ್ಳೆಗುಣಗಳು ಅವರಲ್ಲಿ ಕಂಡು ಬರುತ್ತದೆ. ಆದರೆ, ನಮ್ಮ ಮೌಲ್ಯಗಳನ್ನು, ಸಂಸ್ಕೃತಿಯನ್ನು ಪೂರ್ಣವಾಗಿ ಮರೆತು ಪಾಶ್ಚಾತ್ಯ ರೀತಿಗಳ ಅಂಧಾನುಕರಣೆಯೇ ಇವತ್ತು ಕಂಡುಬರುವುದು. ಅದು ಪ್ಲಾಸ್ಟಿಕ್ ಸೇಬು ಕಚ್ಚಿದ ಹಾಗೆ; ಶಿವನು ಬ್ರಹ್ಮನ ವೇಷ ಹಾಕಿದಂತೆ. ಇದರಿಂದ ನಮ್ಮ ನಿಜ ವ್ಯಕ್ತಿತ್ವ ನಾಶವಾಗುತ್ತದೆ. ಆದಕಾರಣ ನಾವು ಬೆಳೆದ ಸಂಸ್ಕೃತಿಗೆ ಮರಳಲು ಪ್ರಯತ್ನಿಸಬೇಕು. ಅದಕ್ಕಾಗಿ ಚಿಕ್ಕ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಈ ಸಂಸ್ಕೃತಿಯ ಭದ್ರ ಬುನಾದಿ ಹಾಕಲು ತಾಯಂದಿರು ಪ್ರಯತ್ನಿಸಬೇಕು. ಸಮಯ ಇನ್ನೂ ಮೀರಿಲ್ಲ. ವಯಸ್ಕರು ನಮ್ಮಸಂಸ್ಕೃತಿ ಏನಂತ ಅರಿತು ಮುಂದಿನ ತಲೆಮಾರಿಗೆ ಹಸ್ತಾಂತರಿಸ ಬೇಕು. ಆದರೆ ಇವತ್ತಿನ ಹಲವು ತಂದೆತಾಯಂದಿರು ಏನಂತ ಹೇಳುತ್ತಾರೆ? ಮಕ್ಕಳಿಗೆ, ನೀನು ಚೆನ್ನಾಗಿ ಓದಿ ಡಾಕ್ಟರಾಗ ಬೇಕು, ಇಂಜಿನಿಯರ್ ಆಗಬೇಕು, ಕಲೆಕ್ಟರ್ ಆಗಬೇಕು ಎಂದು ಮಾತ್ರವೇ ಉಪದೇಶಿಸುತ್ತಾರೆ. ಇದು ಬೇಡವೆಂದೋ, ತಪ್ಪೆಂದೋ ಅಮ್ಮ ಹೇಳುತ್ತಿಲ್ಲ. ಅದರೊಂದಿಗೆ ನಮ್ಮ ಮಾನವೀಯ ಮೌಲ್ಯಗಳನ್ನು ಕೂಡಿಸಿ, ಉದ್ಧಾರ ಮಾಡುವ ಮಾರ್ಗವನ್ನು, ಜೀವಿಸಿ ತೋರಿಸಿ ಕೊಡಬೇಕು. ಅದು ಮಾತ್ರವೇ ಅಮ್ಮ ಹೇಳಲಿಕ್ಕಿರುವುದು.

ಚಿಕ್ಕ ಮಕ್ಕಳ ಮನಸ್ಸೆಂಬುದು ಹೊಸದಾಗಿ ಸಿಮೆಂಟ್ ಹಾಕಿದ ನೆಲದ ಹಾಗೆ. ಅದರಲ್ಲಿ ಅಚ್ಚುಮೂಡಿದ ಹೆಜ್ಜೆ ಗುರುತುಗಳು ಮಾಸಿಹೋಗುವುದಿಲ್ಲ. ಅದು ಸ್ಪಷ್ಟವಾಗಿ ಉಳಿಯುತ್ತದೆ. ಆದ ಕಾರಣವೇ, ಚಿಕ್ಕ ಪ್ರಾಯದಿಂದಲೇ ಅವರಲ್ಲಿ ಒಳ್ಳೆ ಸಂಸ್ಕೃತಿ ಬೆಳೆಸಲು ನಾವು ಶ್ರಮಿಸಬೇಕು. ಮೊದಲಿನಿಂದಲೇ ಮೈಗೂಡಿಸಿಕೊಂಡು ಬಂದ ಈ ಸಂಸ್ಕೃತಿಯೇ ಅವರ ಬದುಕಿನ ಮೂಲೆಗಲ್ಲು. ನಮಗೆಲ್ಲಾ ನಮ್ಮ ಮಕ್ಕಳು ಓದಿ ಶಕ್ತಿಶಾಲಿಗಳಾಗಿ, ಧಾರಾಳ ಹಣ ಸಂಪಾದಿಸಿ ಸುಖವಾಗಿ ಜೀವಿಸುವುದನ್ನು ಕಾಣಲು ಆಸೆ. ಹಾಗಂತ, ಆಧ್ಯಾತ್ಮಿಕ ಸಂಸ್ಕಾರವಿಲ್ಲದಿದ್ದರೆ, ಎಷ್ಟು ವಿದ್ಯೆ ಸಂಪಾದಿಸಿದರೂ, ಯಾವ ಪದವಿ ಗಳಿಸಿದರೂ, ಎಷ್ಟು ಧನ ಸಂಪಾದಿಸಿದರೂ ಅದರಿಂದಾಗಿ ಮಾತಾಪಿತೃಗಳಿಗೆ, ಸಮುದಾಯಕ್ಕೆ ಶಾಂತಿಯೂ, ಸಮಾಧಾನವೂ ಸಿಗಬೇಕೆಂದೇನಿಲ್ಲ. ಇದೆಲ್ಲ ಗಳಿಸುವ ಅವಕಾಶ ಕೊಟ್ಟೂ ಮಕ್ಕಳ ನೈತಿಕ ಅಧಃಪತನದ ಜೀವನ ಕಂಡು ಕಣ್ಣೀರು ಕರೆಯುವ ಸಾಕಷ್ಟುಕುಟುಂಬಗಳು ಅಮ್ಮನಿಗೆ ಗೊತ್ತು. ಅವೆಲ್ಲವುಗಳಿಗೆ ಅಡಿಪಾಯವು ಒಳ್ಳೆ ಸಂಸ್ಕಾರ. ಅದುವೇ ಯಾವ ತಂದೆಯೂ, ತಾಯಿಯೂ ಮಕ್ಕಳಿಗೆ ಕೊಡಬೇಕಾದ ಅತಿ ಬೆಲೆಬಾಳುವ ಹಾಗೂ ನಶಿಸಲಾಗದ ಆಸ್ತಿ. ಸಂಸ್ಕಾರವೆಂಬುದು ಬರೇ ಪುಸ್ತಕಗಳೋ, ಶಾಲೆಯೋ ಕೊಡಲು ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಪ್ರಪ್ರಥಮವಾಗಿ ಬೇಕಾಗಿರುವುದು ನಮ್ಮ ಜೀವನವನ್ನು ಸಂಸ್ಕಾರಸಂಪನ್ನ ಮಾಡುವುದು. ನಮ್ಮಲ್ಲಿ ಪರಿವರ್ತನೆ ಸಾಧಿಸದೆ ಮುಂದಿನ ತಲೆಮಾರಿನಲ್ಲಿ ಪರಿವರ್ತನೆ ತರುವುದು ಸಾಧ್ಯವಿಲ್ಲ. ಇಂದು ನಾವು ಚಿನ್ನ ಕೊಟ್ಟು ಕಾಗೆಬಂಗಾರ ಸಂಪಾದಿಸುತ್ತಿದ್ದೇವೆ. ಈ ಮಣ್ಣಿನ ಅಧ್ಯಾತ್ಮಿಕ ಸಂಸ್ಕಾರ ಕಳೆದುಕೊಳ್ಳದೆಯೇ ನಮಗೆ ಸಂಪತ್ತು ಗಳಿಸಲು ಸಾಧ್ಯ. ಆಧ್ಯಾತ್ಮಿಕತೆಯೂ, ಲೌಕಿಕತೆಯೂ ಪರಸ್ಪರ ವಿರುದ್ಧವಲ್ಲ. ಒಂದಕ್ಕೆ ಬೇಕಾಗಿ ಮತ್ತೊಂದನ್ನು ನಿರಾಕರಿಸಬೇಕಾಗಿಲ್ಲ.

(ಅಮ್ಮನ 2001ರ ಜನ್ಮದಿನದ ಸಂದೇಶದಿಂದ)