ಪ್ರಶ್ನೆ: ಕೃಷ್ಣ ಭಕ್ತನು ದೇವಿಯ ಸಹಸ್ರನಾಮ ಜಪಿಸುವುದು ಒಳ್ಳೆಯದೇ ?

“ಯಾರು ಇಷ್ಟದೇವನೋ, ಆ ದೇವನ ಮಂತ್ರ ಜಪಿಸಬೇಕು. ಸಹಸ್ರನಾಮವೂ ಹಾಗೆಯೇ. ಕೋಗಿಲೆಯನ್ನು ನವಿಲೆಂದು ಕರೆದರೆ ಕೋಗಿಲೆ ಬರುವುದೇ ? ಆದರೆ ಒಂದು ಮಾತು. ಪ್ರತಿ ಹಕ್ಕಿಗೂ ನವಿಲೆಂದು, ಕೋಗಿಲೆಯೆಂದು ಅಥವಾ ಬೇರಿನ್ನೇನೋ ಹೆಸರಿಟ್ಟಿರುವುದು ಮನುಷ್ಯನು. ಆದಕಾರಣ ಪ್ರತಿಯೊಂದನ್ನು ನೋಡುವಾಗಲೂ ಅದರ ಹೆಸರು ಹೀಗೆಂದು ನಾವು ಯೋಚಿಸುತ್ತೇವೆ. ಇದೇ ಪ್ರಕಾರ ದೇವರಿಗೆ ರೂಪವನ್ನೂ ನಾಮವನ್ನೂ ನೀಡಿರುವವರು ನಾವು. ಸತ್ಯಕ್ಕೆ ರೂಪವೂ ನಾಮವೂ ಇಲ್ಲ.

ನಮ್ಮ ಹಾಗೆ ಶಬ್ದ ಕೇಳಿ ತಿರುಗಿ ನೋಡುವ ವ್ಯಕ್ತಿಯಲ್ಲ ಈಶ್ವರ. ದೇವರು. ಒಂದು ಮಾತು ನಾವು ಮನಸ್ಸಲ್ಲಿ ಊಹಿಸಿಕೊಳ್ಳುವ ಮೊದಲೇ ಅವನಿಗೆ ಗೊತ್ತಾಗಿ ಬಿಡುತ್ತದೆ. ಆದಕಾರಣ ನಾವು ಯಾವ ಹೆಸರಲ್ಲಿ ಕರೆದರೂ ಅವನಿಗೆ ಗೊತ್ತಾಗುವುದು ತನ್ನನ್ನೇ ಕರೆಯುವುದೆಂದು. ಕೆಲವು ಮನೆಗಳಲ್ಲಿ ತಾಯಿಯನ್ನು ಮಕ್ಕಳು ’ಅಕ್ಕಾ” ಎಂದು ಕರೆಯುವುದನ್ನು ಕೇಳಿಲ್ಲವೇ ? ನನ್ನನ್ನು ಹಾಗೆ ಕರೆಯಬಾರದು; ’ಅಮ್ಮ’ನೆಂದು ಕರೆಯಬೇಕೆಂದು ಹೇಳಿ ತಾಯಿ ಕೋಪ ಮಾಡಿಕೊಳ್ಳುವುದಿಲ್ಲವಲ್ಲ. ತಾಯಿಗೆ ಕರೆ ಕೇಳುತ್ತಿರುತ್ತದೆ. ಇದರಂತೆ ಯಾವ ಹೆಸರು ಕರೆದರೂ ದೇವರು ಸ್ವೀಕರಿಸುವನು. ಅವನು ಸರ್ವಜ್ಞ.

ಒಲವಿನ ಮಕ್ಕಳೇ, ಒಂದೊಂದು ಹೆಜ್ಜೆ ಇಡುವಾಗ ನಾಮ ಜಪಿಸಲಿಕ್ಕೂ, ಸದಾ ಅವನ ರೂಪ ಸ್ಮರಿಸಲಿಕ್ಕೂ ಮರೆಯದಿರಿ. ಅವನು ರಕ್ಷಿಸುತ್ತಾನೆ.”

ಪ್ರಶ್ನೆ: ಗುಣಾತೀತನಾದ ದೇವರು ಗುಣಗಳಿಗೆ ಹೇಗೆ ಬರಲು ಸಾಧ್ಯ ? ಅವತಾರ ಪುರುಷರು ಬೇರೆಯವರನ್ನು ಪ್ರೀತಿಸುವುದೂ, ಅವರಲ್ಲಿ ಕರುಣೆ ತೋರಿಸುವುದೂ ಇತ್ಯಾದಿ ಮಾಡುವಾಗ, ಅವರು ಗುಣದ ಸ್ತರದಲ್ಲಲ್ಲವೇ ಇರುವುದು ?
ಭಗವಂತನು ಗುಣಾತೀತನೇ. ಅವನು ಚಲಿಸುವುದಿಲ್ಲ. ಅವನು ಆ ಸ್ವರೂಪವಾಗಿಯೇ ನೆಲೆನಿಂತಿರುತ್ತಾನೆ. ಸೂರ್ಯನ ಸ್ವಭಾವ ಬೆಳಕು. ಅವನು ಯಾರಿಗೂ ಪ್ರತ್ಯೇಕವಾಗಿ ಬೆಳಕು ನೀಡುವುದಿಲ್ಲ. ಮರೆ ಸರಿಸಿದಾಗ ನಿಮಗೂ ಬೆಳಕು ಸಿಗುವುದು. ದೇವರೆಂದರೆ ಒಂದು ವೃಕ್ಷದ ಹಾಗೆ. ಅದರ ಸ್ವಭಾವ ನೆರಳೂ ತಂಪೂ. ಅಲ್ಲಿ ಮುಟ್ಟಿದರೆ ನಿಮಗೂ ಅದು ದೊರಕುವುದು. ಇದೇ ತರಹ ಅವತಾರ ಪುರುಷರು ನಿಮಗೆ ಬೇಕಾಗಿ ಮಾತ್ರ ಕೃಪೆ ಸುರಿಸುವುದಲ್ಲ. ಹಾಗೆ ಆಗಿರುತ್ತಿದ್ದರೆ ದೇವರು ಗುಣಗಳ ಸ್ಥರಕ್ಕೆ ಬರುತ್ತಾನೆಂದು ಹೇಳಬಹುದಾಗಿತ್ತು. ಎಲ್ಲ ಗುಣಗಳೂ ಅವನದ್ದೇ, ಆವನು ಯಾವಾಗಲೂ ಆ ಗುಣಗಳನ್ನು ಸುರಿಸುತ್ತಿರುತ್ತಾನೆ. ಬೆಳಕು ಸಿಗಲು ನಾವು ಪರದೆಯನ್ನು ಸರಿಸುವಂತೆ, ನೆರಳೂ ತಂಪೂ ಸಿಗಲು ಮರದ ಬುಡ ತಲಪುವಂತೆ, ನಾವು ಭಗವಂತನ ಬಳಿ ಸಾರಿದರೆ ಅವನ ಗುಣಗಳು ನಮಗೆ ಹಬ್ಬುತ್ತದೆ.

ಪ್ರೇಮವು ಭಗವಂತನ ಸ್ವಭಾವ. ಗುಣಾತೀತನಾದ ಭಗವಂತನ ಸಾಮೀಪ್ಯದಲ್ಲಿ ನಿಮಗಿದೆಲ್ಲ ಲಭಿಸುವುದು. ಆದರೆ ಭಗವಂತನು ನಿಮಗೆ ಬೇಕಾಗಿ ಗುಣಗಳಿಗೆ ಇಳಿದು ಬರುತ್ತಾನೆಂದು ಹೇಳಲು ಬರುವುದಿಲ್ಲ. ಗುಣಗಳ ಸ್ತರಕ್ಕೆ ಹೋಗುತ್ತಾನೆಂದೂ ಹೇಳಲು ಸಾಧ್ಯವಿಲ್ಲ. ಭಗವಂತನೆಂದಿಗೂ ತನ್ನ ಲೋಕದಲ್ಲೇ ನೆಲೆಸಿರುತ್ತಾನೆ.

ಮಿಠಾಯಿ ನೋಡುವಾಗ ಮಕ್ಕಳಿಗೆ ಬಾಯಲ್ಲಿ ನೀರೂರುತ್ತದೆ. ಅದು ಅವರು ಮಿಠಾಯಿ ಮುಂಚೆಯೇ ರುಚಿ ನೋಡಿರುವ ಕಾರಣ. ರುಚಿ ನೋಡದ ಒಂದು ವಸ್ತು ಕಂಡಾಗ ನಿಮ್ಮ ಬಾಯಿಯಿಂದ ನೀರು ಬರುವುದಿಲ್ಲ. ಮಾಗಿದ ಮಾವಿನ ಹಣ್ಣನ್ನು ನೋಡಿದಾಗ, ಅದರ ಪರಿಮಳ ಒಳಗೆಳೆದುಕೊಂಡಾಗ, ಗೊತ್ತಿಲ್ಲದೆಯೇ ನಿಮಗದರಲ್ಲಿ ಆಸಕ್ತಿಯುಂಟಾಗುತ್ತದೆ. ಮೊದಲು ಅದನ್ನು ತಿಂದಿರುವುದೇ ಈ ತರಹವಾಗಲು ಕಾರಣ. ಅದರ ಬಗ್ಗೆ ಯೋಚಿಸಿದಾಗಲೇ ನಿಮಗೆ ಬಾಯಿಯಿಂದ ನೀರೂರಿದ್ದು. ಇದರಂತೆ, ಮಹಾತ್ಮರನ್ನು ನೋಡುವಾಗ ಆಂತರ್ಯದ ಸಂಸ್ಕಾರ ನಿಮಗರಿಯದೆ ಎಚ್ಚೆತ್ತುಕೊಳ್ಳುತ್ತದೆ. ನೀವು ಆ ಸಂಸ್ಕಾರದ ಮಾಲಕರು. ನೀವು ಅದರ ರುಚಿ ತಿಳಿದಿದ್ದಿರಿ. ಆದರೆ ಅದು ಎಚ್ಚರವಾದದ್ದು ಮಹಾತ್ಮರ ಸಾಮೀಪ್ಯದಿಂದ ಮಾತ್ರ. ಅದು ಬಿಟ್ಟು, ಅವರು ಗುಣಕ್ಕೆ ಬರುವುದಿಲ್ಲ.”

ಪ್ರಶ್ನೆ: ಸಾಧಕನು ಸಿಟ್ಟಾಗಬಾರದೆಂದು ಹೇಳುವುದು ಏತಕ್ಕಾಗಿ?
“ನಲ್ಮೆಯ ಮಕ್ಕಳೇ, ಒಬ್ಬ ಆಧ್ಯಾತ್ಮಿಕ ಜೀವಿಯು ಎಂದೂ ಕೋಪ ಮಾಡಬಾರದು. ಕೋಪವು ನಾವು ಸಾಧನೆಯ ಮೂಲಕ ಗಳಿಸಿದ ಶಕ್ತಿಯನ್ನು ನಷ್ಟಪಡಿಸುವುದು. ಗಾಡಿ ಓಡುತ್ತಿರಬೇಕಾದರೆ ಪೆಟ್ರೋಲ್ ಅಷ್ಟಾಗಿ ಖರ್ಚಾಗುವುದಿಲ್ಲ; ಆದರೆ ಬ್ರೇಕ್ ಅದುಮಿದಾಗ ಹೆಚ್ಚು ಖರ್ಚಾಗುತ್ತದೆ. ಇದೇ ರೀತಿ ಮಕ್ಕಳೇ, ಕೋಪ ಬಂದಾಗ. ಕೋಪ ಬಂದಾಗ ಬರೇ ಬಾಯಿಯಿಂದ ಮಾತ್ರವಲ್ಲ, ಪ್ರತಿಯೊಂದು ರೋಮ ಕೂಪದಿಂದಲೂ ಶಕ್ತಿಯ ವ್ಯಯವಾಗುತ್ತದೆ. ಒಂದು ಸಿಗರೇಟು ಲೈಟರನ್ನೂ ಹತ್ತಿಪ್ಪತ್ತು ಬಾರಿ ಅದುಮಿದರೆ ಅದರ ಪೆಟ್ರೋಲ್ ನಷ್ಟವಾಗುತ್ತದೆ. ಆದರೆ ಇದು ನಮಗೆ ಕಾಣಲು ಸಾಧ್ಯವಾಗುವುದಿಲ್ಲ; ಆದರೆ ಗೊತ್ತಾಗುತ್ತದೆ. ಇದೇ ಪ್ರಕಾರವಾಗಿ ಮಕ್ಕಳೇ, ಸದ್ಚಿಂತನೆಗಳಿಂದ ಗಳಿಸಿದ ಶಕ್ತಿಯು ಹಲವಾರು ಕಾರಣಗಳಿಂದಾಗಿ ನಷ್ಟವಾಗುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು.

ಮಕ್ಕಳೇ, ತುಂಬ ಹೆಚ್ಚಿನ ಎಚ್ಚರದಿಂದ ಮಾತ್ರ ಆಧ್ಯಾತ್ಮಿಕ ಜೀವಿಗೆ ಮುಂದುವರಿಯಲು ಸಾಧ್ಯವಾಗುವುದು. ಒಬ್ಬ ಸೂಜಿ ತೆಗೆದರೆ, ತೆಗೆಯುವಾಗಲೂ, ನೂಲು ಪೋಣಿಸುವಾಗಲೂ, ಹೊಲಿಯುವಾಗಲೂ, ಮರಳಿಡುವಾಗಲೂ ಎಷ್ಟೆಲ್ಲ ಎಚ್ಚರದಿಂದ ಮಾಡುತ್ತಾನೋ, ಅಷ್ಟು ಎಚ್ಚರ ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರಬೇಕು. ಮಕ್ಕಳೇ, ನಿರಂತರವಾದ ಎಚ್ಚರ ಮಕ್ಕಳನ್ನು ಜಯಶಾಲಿಗಳನ್ನಾಗಿ ಮಾಡುವುದು. ಏನು ಕಂಡರೂ, ಏನು ಕೇಳಿದರೂ, ಏಕಾಂತದಲ್ಲಿ ವಿಚಾರ ಮಾಡಿ. ಅದರ ನಂತರವೇ ತೀರ್ಮಾನ ಮಾಡಬೇಕು. ಎಂದಿಗೂ, ಪರಿಸ್ಥಿತಿಯ ದಾಸರಾಗಬೇಡಿ. ಅವುಗಳಿಂದ ಪಾರಾಗಲೆತ್ನಿಸಿರಿ.

ಪ್ರಶ್ನೆ: ಬಹಳ ದಿನಗಳಿಂದ ಜಪವನ್ನೂ ಧ್ಯಾನವನ್ನೂ ತಪ್ಪದೆ ಮಾಡುತ್ತಿದ್ದೇನೆ. ಆದರೆ ಸರಿಯಾದ ಏಕಾಗ್ರತೆ ಇಷ್ಟು ದಿನಗಳಾದರೂ ನಾನು ಸಂಪಾದಿಸಿಲ್ಲ !
“ಮಕ್ಕಳೇ, ಇಷ್ಟು ದಿನವೂ ಮನಸ್ಸು ನಿತ್ಯ, ಶರೀರ ನಿತ್ಯ ಎಂದು ಕೊಂಡೆವು; ಆಸೆಗಳಿಗೆ ತಕ್ಕಂತೆ ಆಹಾರ ಕೊಟ್ಟು ಅವುಗಳನ್ನು ಪೋಷಿಸಿ ಬೆಳೆಸಿದೆವು. ಈಗ ಆತ್ಮವೇ ನಿತ್ಯವೆನ್ನುವಾಗ ಅವುಗಳು ಥಟ್ಟನೆ ತಲೆ ಬಾಗಿಸುವುದೇ ? ಇಲ್ಲ. ನಿರಂತರ ಅಭ್ಯಾಸದಿಂದಲೇ ಸಾಧ್ಯ. ದೋಣಿ ಮಾಡಲು ಉಪಯೋಗಿಸುವ ಹಲಗೆ ಬಗ್ಗುವಂತಾಗಲು ಅದಕ್ಕೆ ಸ್ವಲ್ಪ ಬಿಸಿ ಮುಟ್ಟಿಸುತ್ತಾರೆ. ಈ ಪ್ರಕಾರ ಜಪ ಧ್ಯಾನಗಳು ಉಂಟು ಮಾಡುವ ಬಿಸಿ. ಸರಳತೆ, ವಿನಯ ಮೊದಲಾದ ಭಾವಗಳು, ಇವೆಲ್ಲ ಇದ್ದರೆ ಮಾತ್ರವೇ ಮನದ ಅಹಂಕಾರವು ಪರಿವರ್ತನೆಯಾಗಿ ಆತ್ಮ ಸ್ವರೂಪವಾಗಲು ಸಾಧ್ಯ.

ಒಂದು ಪಾತ್ರೆಗೆ ಸೀಸ ಹಚ್ಚಬೇಕಾದರೆ, ಮೊದಲು ಸೀಸದಿಂದ ಕಷ್ಮಲವನ್ನು ಬೇರ್ಪಡಿಸಬೇಕು. ಇದೇ ಪ್ರಕಾರ ಮೊದಲು ನಮ್ಮೊಳಗಿನ ಕಲೆಗಳನ್ನು ನಿವಾರಿಸಿಕೊಳ್ಳಬೇಕು. ಅಲ್ಲದೆ ಹೋದರೆ ಎಷ್ಟು ಸಾಧನೆ ನಡೆಸಿದರೂ ಪ್ರಯೋಜನವಿಲ್ಲ. ಕಷ್ಮಲಗಳ ನಿವಾರಣೆಗೆ, ಈಶ್ವರನನ್ನು ಅತ್ತು ಪ್ರಾರ್ಥಿಸಬೇಕು.

ಏಕಾಗ್ರತೆ ಸಿಗುವುದಿಲ್ಲವೆಂದು ಹೇಳಿಕೊಂಡು ಮಗನು ಸಾಧನೆಗೆ ಭಂಗ ತರಬಾರದು. ಒಬ್ಬನಿಗೆ ತೆಂಗಿನ ಮರ ಹತ್ತಲು ಕಲಿಯಬೇಕು. ಒಂದೇ ದಿವಸದಲ್ಲಿ ಸಾಧ್ಯವೇ ? ಒಂದೊಂದು ಕಾಲು ಎತ್ತಿ ಮೇಲೆ ಇಟ್ಟು, ಕೈಗಳಿಂದ ಬಿಗಿಯಾಗಿ ಹಿಡಿದು, ಹತ್ತಲು ಪ್ರಯತ್ನಿಸಬೇಕು. ಕೆಲವೊಮ್ಮೆ ಚರ್ಮ ಸುಲಿದು ಹೋಗಲೂ ಬಹುದು. ಆದರೂ ಬಿಡದ ಪ್ರಯತ್ನದ ಫಲವಾಗಿ, ಅವನಿಗೆ ಯಾವ ತೆಂಗಿನ ಮರ ಹತ್ತಲೂ ಸಾಧ್ಯವಾಗುತ್ತದೆ. ಸರಿಯಾದ ಏಕಾಗ್ರತೆ ಆರಂಭದಲ್ಲಿ ಸಿಗುವುದಿಲ್ಲ. ಮಕ್ಕಳೇ, ಅದಕ್ಕೆ ನಿರಂತರ ಅಭ್ಯಾಸ ಬೇಕು.”

ಪ್ರಶ್ನೆ: ಅಮ್ಮಾ, ಬಹಳ ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ; ಆದರೂ ಯಾವೊಂದು ತರದ ಅನುಭವವೂ ಆಗಿಲ್ಲ.

“ಅಮ್ಮನನ್ನು ಕಾಣಲು ಬರುವ ಮಕ್ಕಳಲ್ಲಿ ಹಲವರು ಹೇಳುವ ಮಾತಿದು. ಗೃಹಸ್ಥಾಶ್ರಮಿ ಮಕ್ಕಳೂ ಹೇಳುತ್ತಾರೆ, ’ನಾವು ಎಷ್ಟೆಲ್ಲ ಧ್ಯಾನ ಮಾಡಿಯೂ, ಜಪ ಮಾಡಿಯೂ ದೊಡ್ಡ ಪ್ರಯೋಜನವೇನೂ ಆದ ಹಾಗೆ ಅನಿಸುವುದಿಲ್ಲ.’ ಎಂದು. ಮಕ್ಕಳೇ, ದೇವರನ್ನು ಪ್ರಾರ್ಥಿಸಲು, ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುವೆವು. ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತೇವೆ. ಮೂರ್ತಿಯೆದುರಿಗೆ ಕೈಜೋಡಿಸಿ ನಿಂತಿರುವಾಗ ನಮ್ಮೆದುರಿಗೆ ಯಾವನಾದರೂ ಬಂದು ನಿಂತುಕೊಂಡರೆ, ನಮ್ಮ ಚರ್ಯೆ ಬದಲಾಗುತ್ತದೆ. ಅವನ ಮೇಲೆ ಸಿಟ್ಟು ಬರುತ್ತದೆ. ಆಗ ಅಲ್ಲಿಯ ತನಕ ಏಕಾಗ್ರತೆಯಿಂದ ಗಳಿಸಿದ ಶಕ್ತಿಯ ಎರಡರಷ್ಟು ಪಾಲು ನಷ್ಟವಾಗುತ್ತದೆ. ಕ್ಷೇತ್ರದಿಂದ ಹೊರಗೆ ಬರುವಾಗ ಬಾಗಿಲಲ್ಲಿರುವ ಭಿಕ್ಷುಕನು ಏನಾದರೂ ಮಾತನಾಡಿದರೆ ಅವನನ್ನು ಒದೆಯಲೂ ನಾವು ಹೇಸುವುದಿಲ್ಲ. ಇದಲ್ಲ ಮಕ್ಕಳೇ, ಭಕ್ತಿ. ಆ ಭಿಕ್ಷೆ ಬೇಡುವವನಿಗೆ ತೋರಿಸುವ ಕರುಣೆಯೇ, ದೇವಾಲಯದಲ್ಲಿರುವ ಈಶ್ವರನ ಪ್ರೇಮಕ್ಕೆ ನಮ್ಮನ್ನು ಪಾತ್ರರನ್ನಾಗಿಸುವುದು. ಇದು ನಮ್ಮಿಂದ ಆಗುವುದಿಲ್ಲ. ಮತ್ತೆ ಹೇಗೆ ನಮಗೆ ಅನುಭೂತಿ ಸಿಗುವದು ? ದೇವರೇ ವೇಷ ಬದಲಿಸಿ ಬೇರೆ ರೂಪದಲ್ಲಿ ಬಂದರೂ ನಾವು ಸಿಟ್ಟು ಮಾಡುತ್ತೇವೆ. ಇದು ನಮ್ಮ ಸ್ವಭಾವ. ಮತ್ತೆ ಹೇಗೆ ಮಕ್ಕಳೇ ಪ್ರಯೋಜನ ಸಿಕ್ಕುವುದು ?

ಪ್ರೀತಿಯ ಮಕ್ಕಳೇ, ಸಮತ್ವ ಭಾವನೆಯೇ ದೈವತ್ವಕ್ಕೊಯ್ಯುವ ದಾರಿ. ದೇವರಿಗೆ ಹತ್ತಿರವಾಗಬೇಕಾದರೆ ಎಲ್ಲರನ್ನೂ ಸಮನಾಗಿ ಕಾಣಲು ಪ್ರಯತ್ನಿಸಬೇಕು. ಎಲ್ಲರಲ್ಲೂ ಸಮನಾದ ಪ್ರೇಮವಿದ್ದರೆ ಮಾತ್ರ ಭಗವಂತನು ನಮ್ಮನ್ನು ಸ್ವೀಕರಿಸುವನು. ದೇವರಿಗೆ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ. ಎಲ್ಲರೂ ಸಮಾನರು.

ಈ ಲೋಕದಲ್ಲಿ ನಮಗೇನಾದರೊಂದು ಕಾರ್ಯದಲ್ಲಿ ಮುಂದುವರಿಯಲು ಯಾರ ಒಪ್ಪಿಗೆಯೋ, ಸರ್ಟಿಫಿಕೇಟೋ ಬೇಕಾಗಿಲ್ಲ. ಆದರೆ ಈಶ್ವರನ ಲೋಕ ಮುಟ್ಟಬೇಕಾದರೆ ಮಾತ್ರ ಒಂದು ಇರುವೆಯೆದುರಿಗೂ ಸಹ ತಲೆ ಬಾಗಿಸುವ ಮನೋಭಾವ ನಮಗಿರಬೇಕು. ಭಗವಾನನ ಹತ್ತಿರ ಸೇರಲು ಎನ್.ಓ.ಸಿ. ಬೇಕಾಗಿದ್ದರೆ, ಒಂದು ಇರುವೆಯ ಸಹಿ ಕೂಡಾ ಅವಶ್ಯ. ಅಂದರೆ ಮಾತ್ರ, ಭಗವಂತನು ನಮ್ಮ ಮನಸ್ಸನ್ನು ಆತ್ಮಲೋಕಕ್ಕೊಯ್ಯುವನು. ಅದಕ್ಕಾಗಿ, ಎಲ್ಲಾ ಜೀವಜಂತುಗಳ ಪ್ರತಿ ಪ್ರೇಮವನ್ನೂ, ಕರುಣೆಯನ್ನೂ, ವಿಶಾಲತೆಯನ್ನೂ ಮಕ್ಕಳು ಬೆಳೆಸಿಕೊಳ್ಳಬೇಕು.

ಮಕ್ಕಳೇ, ಅವರವರ ಜಗತ್ತಿನಲ್ಲಿ ಅವರವರು ದೊಡ್ಡವರು. ಒಂದು ಸೊಳ್ಳೆಗೂ ಸಹ ತನ್ನ ಜಗತ್ತೇ ಬೇರೆಲ್ಲದ್ದಕ್ಕಿಂತಲೂ ಮಿಗಿಲು.

ಸ್ನೇಹಿತರಾದ ಇಬ್ಬರು ಜ್ಯೋತಿಷಿಗಳಿದ್ದರು. ತಮ್ಮ ಭಾವೀ ಜನ್ಮದ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಶ್ನೆ ಹಾಕಿ ನೋಡಿದರು. ಮುಂಬರುವ ಜನ್ಮದಲ್ಲಿ ಒಬ್ಬನು ಸೊಳ್ಳೆಯಾಗಿಯೂ ಇನ್ನೊಬ್ಬನು ದನವಾಗಿಯೂ ಹುಟ್ಟುವರೆಂದೂ ಅಲ್ಲದೆ ಪರಸ್ಪರರನ್ನು ಕಂಡು ಹುಡುಕುತ್ತಾರೆಂದೂ ಅವರಿಗೆ ತಿಳಿದು ಬಂತು. ಸೊಳ್ಳೆಯಾಗಿ ಜನಿಸಲಿರುವವನು ತನ್ನ ಗೆಳೆಯನಿಗೆ ಹೇಳುತ್ತಾನೆ, ’ಬರುವ ಜನ್ಮದಲ್ಲಿ ನಾವು ಹೇಗೂ ಭೇಟಿಯಾತ್ತೇವಲ್ಲವೇ. ಆಗ ನೀನು ನನ್ನನ್ನು ಹೊಸಕಿ ಕೊಲ್ಲಬೇಕು. ಹೀಗೆ ಈ ನಿಕೃಷ್ಟ ಜೀವನದಿಂದ ಮೋಕ್ಷ ಗಳಿಸಿ, ಬೇಗನೆ ನನಗೆ ಭಗವಂತನೆಡೆ ಮುಟ್ಟಬಹುದು.’

ಗೆಳೆಯನೂ ಸಮ್ಮತಿಸಿದ. ಇಬ್ಬರೂ ಮರಣಾನಂತರ ಹಿಂದಿನ ಜನ್ಮದಲ್ಲಿ ಅವರು ಕಂಡಿದ್ದಂತೆ, ಸೊಳ್ಳೆಯಾಗಿಯೂ ದನವಾಗಿಯೂ ಜೀವಿಸುತ್ತಾರೆ. ದನಕ್ಕೆ ಪೂರ್ವ ಜನ್ಮದ ಸ್ಮರಣೆ ಸ್ಫುರಿಸಿತು. ಸಂಗಡಿಗ ಸೊಳ್ಳೆಯಾಗಿ ವಾಸಿಸುತ್ತಿರುವ ಕೊಳಕು ಚರಂಡಿಯನ್ನು ಹೇಗಾದರೂ ಬಹಳ ಕಷ್ಟದಿಂದ ದನ ತಲುಪಿತು. ಗೆಳೆಯನ ಪರಿಸ್ಥಿತಿ ನೋಡಿ ದನಕ್ಕೆ ತುಂಬಾ ಪರಿತಾಪವೆನಿಸಿತು. ಕಳೆದ ಜನ್ಮದಲ್ಲಿ ಮಾತುಕೊಟ್ಟಿದ್ದ ಹಾಗೆ ಸೊಳ್ಳೆಯನ್ನು ತನ್ನ ಗೊರಸಿನಡಿಯಲ್ಲಿ ಹೊಸಕಿ ಕೊಲ್ಲಲೆಂದು ಅದು ಮುಂದೆ ಹಾಯಿತು. ಥಟ್ಟನೆ ಸೊಳ್ಳೆ ಚೀತ್ಕರಿಸುತ್ತ ಹೇಳುತ್ತದೆ, ’ನೀನು ಎಂಥ ಕ್ರೂರ ಕೃತ್ಯವೆಸಗಲು ಹೊರಟಿರುವುದು ?’ ’ಅವತ್ತು ನೀನು ಹೇಳಿಲ್ಲವೇ, ಸೊಳ್ಳೆಯಾಗಿದ್ದು ಕಷ್ಟವನುಭವಿಸುವುದನ್ನೊಲ್ಲೆ. ಆ ನಿಕೃಷ್ಟ ಜೀವನದಿಂದ ವಿಮೋಚನೆ ಹೊಂದಿ ಭಗವಂತನೆಡೆ ಮುಟ್ಟಬಹುದು’ ಎಂದು. ದನದ ಮಾತು ಕೇಳಿ ನಕ್ಕೊಂಡು ಸೊಳ್ಳೆ ಹೇಳುತ್ತದೆ, ’ಸರಿಯಾಗಿ ಇರಿದೆ ನೀನು. ಇದು ನಿಕೃಷ್ಟ ಜೀವನವೇ ? ಈ ಬಾಳು ಎಷ್ಟು ಸುಂದರ, ಎಷ್ಟು ಸುಖಕರ ಎಂಬುದರ ಬಗ್ಗೆ ನಿಮಗರಿವಿದೆಯೇ ? ನನಗೂ ಚೆಲುವೆಯಾದ ಹೆಂಡತಿ, ಚಂದದ ಪುಟ್ಟ ಮಕ್ಕಳು, ಇದ್ದಾರೆ. ನನಗೇನೂ ಭಗವಂತನ ಲೋಕದಲ್ಲಿ ಸುತ್ತ ಬೇಕಾಗಿಲ್ಲ. ಈ ಜಗತ್ತೊಂದು ಬಿಟ್ಟರೆ ನನಗೆ ಬೇರೆ ಯಾವ ಲೋಕವೂ ಕಾಣಿಸುತ್ತಿಲ್ಲ. ನನಗೆ ಇಲ್ಲಿಯೇ ಬದುಕಿದರೆ ಸಾಕು.’ ಮಕ್ಕಳೇ, ಇದುವೇ ಪ್ರತಿಯೊಬ್ಬರದ್ದೂ ಕಥೆ.

ಒಂದು ಸೊಳ್ಳೆಗೂ ಸಹ ತನ್ನ ಬದುಕೇ ಶ್ರೇಷ್ಠ. ಹಾಗೆಯೇ, ಲೌಕಿಕದಲ್ಲಿ ಜೀವಿಸುತ್ತಿರುವ ನಾವು ಅದುವೇ ಅತ್ಯಂತ ಉತ್ತಮವೆಂದು ಭಾವಿಸುತ್ತೇವೆ. ಬರೇ ಮನುಷ್ಯನಾಗಿ ಹುಟ್ಟಿ, ಪ್ರಾಣಿಯಾಗಿ ಜೀವನ ನಡೆಸುವವರು ಮಾತ್ರವೇ ಲೌಕಿಕ ಜೀವನದಲ್ಲಿ ಆನಂದವಿದೆಯೆಂದು ಹೇಳುವರು. ಆ ಸೊಳ್ಳೆಯು ಅನುಭವಿಸಿಕೊಂಡಿದ್ದ ಸುಖಕ್ಕಿಂತ ಒಂದಿನಿತೂ ಭಿನ್ನವಲ್ಲ ಪ್ರಾಪಂಚಿಕ ಸುಖವೆಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಈಶ್ವರನನ್ನು ಆಶ್ರಯಿಸುವುದರಿಂದ ಮಾತ್ರವೇ ಸಂಸಾರ ದುಃಖದಿಂದ ವಿಮೋಚನೆ ಹೊಂದಲೂ, ಯಥಾರ್ಥ ಆನಂದ ಸವಿಯಲೂ ಸಾಧ್ಯ.”

ಪ್ರಶ್ನೆ: ಅಮ್ಮಾ, ಧ್ಯಾನದಿಂದ ಏಳಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು ?
“ಮಕ್ಕಳೇ, ಧ್ಯಾನ ಮುಗಿದ ಕೂಡಲೇ ತಟ್ಟನೆ ಎದ್ದೇಳುವುದೋ, ಮಾತನಾಡುವುದೋ ಮಾಡಬಾರದು. ಸ್ವಲ್ಪ ಸಮಯ ಶವಾಸನದಲ್ಲಿರುವುದು ಒಳ್ಳೆಯದು. ಆಗ ನಿದ್ದೆ ಬರದಂತೆ ವಿಶೇಷ ಜಾಗ್ರತೆ ವಹಿಸಬೇಕು. ಇಂಜೆಕ್ಷನ್ ಚುಚ್ಚಿದ ಮೇಲೆ ಡಾಕ್ಟರು ಸ್ವಲ್ಪ ಸಮಯ ರೆಸ್ಟ್ ತೆಗೆದುಕೊಳ್ಳಲಿಕ್ಕೆ ಹೇಳುವುದಿಲ್ಲವೇ ? ಅದೇ ತರ ಧ್ಯಾನಾನಂತರ ಏಕಾಂತ ಅವಶ್ಯ. ಸಾಧನೆ ಮಾಡುವಾಗಲ್ಲ; ಅದರ ನಂತರವೇ ಅದರ ಪರಿಣಾಮ ದೊರಕುವುದು.”

ಪ್ರಶ್ನೆ: ಅಮ್ಮಾ, ಎಷ್ಟು ಧ್ಯಾನ ಮಾಡಿಯೂ, ಬಾಹ್ಯ ವಸ್ತುಗಳ ಆಕರ್ಷಣೆ ಇಲ್ಲದಾಗುವುದಿಲ್ಲವಲ್ಲ ?
“ಮಕ್ಕಳೇ, ನಿಮ್ಮಲ್ಲಿ ಭಗವಂತನ ಪ್ರತಿಯಾಗಿ ಸಂಪೂರ್ಣವಾದ ಪ್ರೇಮ ಇದ್ದಲ್ಲಿ, ಪೂರ್ತಿಯಾಗಿ ಮಕ್ಕಳಿಗೆ ವಿಷಯ ವಸ್ತುಗಳು ಅಸಹ್ಯವಾಗಿ ತೋರುವುದು. ಜ್ವರ ಹಿಡಿದು ರೋಗಿಯಾಗಿ ಮಲಗಿರುವ ವ್ಯಕ್ತಿಗೆ, ಸಿಹಿ ಫಲಾಹಾರ ಕೊಟ್ಟರೂ ಅದು ಅವನಿಗೆ ಕಹಿಯೆನಿಸುವುದು. ಹಾಗೆಯೇ, ನಮಗೆ ಭಗವಂತನ ಪ್ರೇಮದ ಜ್ವರ ಬರಬೇಕು. ಆಗ ಬಾಹ್ಯವಸ್ತುಗಳಲ್ಲಿ ಆಕರ್ಷಣೆ ಅನಿಸುವುದಿಲ್ಲ. ನಾಲಿಗೆಯ ರುಚಿ ತ್ಯಜಿಸದೆ ಹೃದಯದ ರುಚಿ ಅರಿಯಲು ಸಾಧ್ಯವಾಗುವುದಿಲ್ಲ.”

ಪ್ರಶ್ನೆ: ಅಮ್ಮಾ, ಬಹಳ ಕಾಲದ ಸಾಧನೆ ಮಾಡಿಯೂ ಅದರ ಪರಿಣಾಮ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
“ಮಕ್ಕಳೇ, ನಾವು ಧ್ಯಾನ ಮಾಡುತ್ತೇವೆ. ತಟ್ಟನೆ ಎದ್ದು ಲೌಕಿಕ ವಿಚಾರ ಮಾತನಾಡಲಿಕ್ಕೆ ತೊಡಗುತ್ತೇವೆ. ಅದು ದಿನವೆಲ್ಲ ಕೆಲಸ ಮಾಡಿ ಸಿಕ್ಕಿದ ಹಣವನ್ನು, ಪೂರ್ತಿ ಹೆಂಡ ಕುಡಿದು ಕಳೆದುಕೊಂಡಹಾಗೆ. ಎಣ್ಣೆ ಹಚ್ಚಿ ತಕ್ಷಣ ಸ್ನಾನ ಮಾಡಿದರೆ ಅದು ಮೈಗೆ ಹಿಡಿಯುವುದಿಲ್ಲವಲ್ಲ ? ಧ್ಯಾನಾನಂತರ ಹತ್ತು ಮಿನಿಟಾದರೂ ಏಕಾಂತತೆ ಸಿಗಬೇಕು. ಅಂದರೆ ಮಾತ್ರವೇ ನಮಗೆ ಅದರ ಪ್ರಯೋಜನ ಲಭಿಸುವುದು. ಹಾಗೆ ಮಾಡದಿರುವ ಕಾರಣ ನಮಗೆ ಅದರ ರುಚಿ ನಮಗೆ ಗೊತ್ತಾಗದೆ ಹೋಗುತ್ತದೆ. ಪಾಯಸದ ಜೊತೆ ಅನ್ನ ಹಾಗೂ ಪಲ್ಯ ಕಲೆಸಿ ತಿಂದರೆ ಪಾಯಸದ ರುಚಿ ಗೊತ್ತಾಗುವುದಿಲ್ಲ. ಆದರೆ ಪಾಯಸ ಅದರ ಒಟ್ಟಿಗೆಯೇ ಇತ್ತಲ್ಲವೇ ? ಮಕ್ಕಳು ಲೌಕಿಕ ಕೆಲಸ ಮಾಡುವವರಲ್ಲವೇ ? ಮನಸ್ಸಿನಲ್ಲಿ ಹೆಚ್ಚಾಗಿ ಪ್ರಾಪಂಚಿಕ ವಿಷಯಗಳೇ ತುಂಬಿ ಕೊಂಡಿರುವ ಕಾರಣ ಸಾಧನೆಯ ಮಹತ್ವ ನಮಗೆ ತಿಳಿಯಲು ಸಾಧ್ಯವಾಗದೆ ಹೋಗುತ್ತದೆ. ಆದರೆ ಅದರ ಪರಿಣಾಮ ಮಕ್ಕಳಲ್ಲಿ ಇದ್ದೇ ಇರುತ್ತದೆ. ಶ್ರದ್ಧೆಯಿಂದ ಸಾಧನೆ ಮಾಡಿದರೆ ಸಾಕು.”

ಪ್ರಶ್ನೆ: ದೇವರು ಎಲ್ಲಾ ಕಡೆ ಇರುವುದಾದರೆ ಯಾಕಾಗಿ ಮಹಾತ್ಮರನ್ನು ಸಂದರ್ಶಿಸಬೇಕು ?
ಮಕ್ಕಳೇ, ಎಲ್ಲಾ ಕಡೆ ಗಾಳಿ ಇದೆ. ಆದರೆ ಬಿಸಿಲಲ್ಲಿದ್ದು ಮರದ ಕೆಳಗೆ ಬಂದು ಮುಟ್ಟಿದ ವ್ಯಕ್ತಿಗೆ, ಎಲೆಗಳಿಂದ ಹಾದು ಬಂದ ಗಾಳಿ ವಿಶೇಷ ತಂಪನ್ನೀಯುದಿಲ್ಲವೇ ? ಇದೇಥರ ಒಬ್ಬ ಮಹಾತ್ಮನ ಬಳಿ ಹೋದಾಗ ವಿಶೇಷ ಶಾಂತಿಯ ಅನುಭವವಾಗುತ್ತದೆ. ಮಕ್ಕಳು ಹೇಳಬಹುದು ಅದಕ್ಕೆ ಬಿಡುವಿಲ್ಲವೆಂದು. ಒಂದು ಹೆಜ್ಜೆ ಭೂಮಿಗಾಗಿ ನಾವು ಎಷ್ಟು ವರ್ಷ ಬೇಕಾದರೂ ಕೋರ್ಟಿನ ಜಗಲಿಯಲ್ಲಿ ಕುಕ್ಕುರುಗಾಲಲ್ಲಿ ಕೂತಿರುವುತ್ತೇವೆ. ಮಳೆಯಾಗಲಿ, ಬಿಸಿಲಾಗಲಿ, ಇತರ ಅಡಚಣೆಗಳಾಗಲಿ ಯಾವುದನ್ನೂ ಗಣಿಸುವುದಿಲ್ಲ. ಭೂಮಿ ಗಳಿಸುವ ಆಸೆ ಅಷ್ಟಿರುವ ಕಾರಣ ಕೇಸು ಹಾಕಲು ಸಮಯ ಹೊಂದಿಸುತ್ತೇವೆ; ಅನಾನುಕೂಲತೆಗಳನ್ನು ಸ್ವೀಕರಿಸುತ್ತೇವೆ. ಅದಕ್ಕೆ ಯಾರೂ ಆಕ್ಷೇಪ ಎತ್ತುವುದಿಲ್ಲ.

ನೆಚ್ಚಿನ ಮಕ್ಕಳೇ, ನಮಗೇನಾದರೂ ರೋಗ ಬಂದಾಗ ಡಾಕ್ಟರರ ಹತ್ತಿರ ಹೋಗುತ್ತೇವೆ. ಆದರೆ ರೋಗವೇ ಬರದಹಾಗೆ ಈ ಪರಿಸರದಲ್ಲಿ ಹೇಗೆ ಜೀವಿಬೇಕೆನ್ನುವುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಕೋಟಿಯಲ್ಲಿ ಒಬ್ಬರು ಮಾತ್ರ ಆ ತರಹ ಚಿಂತಿಸಬಹುದು. ಮಕ್ಕಳೇ ಎಚ್ಚರದಿಂದ ಜೀವನ ಸಾಗಿಸಿದರೆ, ದುಃಖವಿಲ್ಲದೆ ಬಾಳಬಹುದು.

ಪ್ರಶ್ನೆ: ಅಮ್ಮಾ, ಧ್ಯಾನ ಹೇಗೆ ಮಾಡಬೇಕು ?

“ಮಕ್ಕಳೇ, ಧ್ಯಾನ ಅಂತ ನಾವು ಹೇಳುವಂತಿಲ್ಲ. ಧ್ಯಾನವೆನ್ನುವುದು ಅಡೆತಡೆಯಿಲ್ಲದೆ ಒಂದೇ ಕಡೆ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗುವ ಸ್ಥಿತಿ. ಆ ಸ್ತರ ಮುಟ್ಟಲು ನಾವು ಸಾಧನೆ ಮಾಡುತ್ತಿರುವುದು. ಪಾಯಸ ಮಾಡಲು ನಾವು ನೀರನ್ನು ಒಲೆಯಲ್ಲಿಡುತ್ತೇವೆ. ಏನು ಮಾಡುತ್ತೀಯೆಂದು ಯಾರಾದರೂ ಕೇಳಿದರೆ ಹೇಳುತ್ತೇವೆ ಪಾಯಸ ಮಾಡುತ್ತೇನೆಂದು. ಇದೇ ಪ್ರಕಾರ, ಧ್ಯಾನಾವಸ್ಥೆ ತಲಪಲು ಬೇಕಾದ ಅಭ್ಯಾಸ ಬರೇ ಆರಂಭ ಮಾಡಿರುವುದು ಮಾತ್ರ. ಆದರೂ ನಾವು ಹೇಳುತ್ತೇವೆ ಧ್ಯಾನ ಮಾಡುತ್ತೇವೆಂದು. ಈ ಅಭ್ಯಾಸವನ್ನೇ ಸಾಮಾನ್ಯವಾಗಿ ಸಾಧನೆಯೆಂದು ಹೇಳುವುದು.”

ಪ್ರಶ್ನೆ: ಸಾಧನೆಯಲ್ಲಿ ಏಕಾಗ್ರತೆ ಬರುತ್ತಿಲ್ಲ. ಅದು ಏಕೆ, ಅಮ್ಮಾ ?

“ಮಕ್ಕಳೇ, ಹಿಂದೆ ನಾವು ಶರೀರವು ನಿತ್ಯವೆಂದು ಭಾವಿಸಿ ಜೀವಿಸಿದೆವು. ಅದಕ್ಕಾಗಿ ಮಾತ್ರ ಪ್ರಯತ್ನಿಸಿದೆವು. ಆ ಸ್ವಭಾವಗಳು ನಮ್ಮೊಳಗೆ ಇನ್ನೂ ಇದ್ದಾವೆ. ಈಗ ಆತ್ಮವು ನಿತ್ಯವೆಂದು ತಿಳಿದುಕೊಂಡು ಸಾಧನೆ ನಡೆಸುವಾಗ ಆ ಸ್ವಭಾವಗಳು ನಮ್ಮನ್ನು ಕಾಡುತ್ತವೆ. ಅದು ಯಾಕೆಂದರೆ, ಹತ್ತು ದಿವಸ ಶಾಯಿ ಬಾಟಲನ್ನು ನಾವು ಬಲಗಡೆಗೆ ಇಟ್ಟು ಬರೆಯುತ್ತೇವೆ. ಹನ್ನೊಂದನೆಯ ದಿವಸ ಅದನ್ನು ತೆಗೆದು ಎಡಗಡೆಗೆ ಇಟ್ಟೆವು. ಮನಸ್ಸಿಗೆ ಗೊತ್ತಿದೆ ಶಾಯಿ ಬಾಟಲು ಎಡಗಡೆಗೆ ಸರಿಸಿಟ್ಟಿದ್ದೇವೆಂದು. ಆದರೆ ಕೈ ಮೊದಲು ಶಾಯಿ ಬಾಟಲಿದ್ದ ಕಡೆ ಹೋಗುವುದು. ಅದೇರೀತಿ, ಹಿಂದಿನ ಸ್ವಭಾವಗಳು ನಮ್ಮನ್ನು ಜಗಿದು ತಿನ್ನುತ್ತವೆ. ಮಕ್ಕಳು ಕಳವಳಗೊಳ್ಳದೆ ಪ್ರಯತ್ನ ಮುಂದುವರಿಸಿರಿ.

ಸೈಕಲ್ಲು ತುಳಿಯಲು ಕಲಿಯುವ ಹುಡುಗ ಎಷ್ಟು ಸಾರಿ ಬಿದ್ದರೂ ಪುನಃ ಪ್ರಯತ್ನ ಮಾಡುತ್ತಾನೆ. ಅವನ ದೇಹಕ್ಕೆ ಗಾಯಗಳಾದರೂ ಅವನದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ಸೈಕಲ್ ಕಲಿಯಬೇಕೆಂಬ ಲಕ್ಷ್ಯಬೋಧ (ಗುರಿಯ ಬಗ್ಗೆ ಎಚ್ಚರ) ಅವನಿಗಿದೆ. ಹಾಗೆಯೇ, ಸಾಧನೆ ತೊಡಗಿದಾಗ ಮೊದಲು ಸ್ವಲ್ಪ ತೊಂದರೆ ಅನುಭವಕ್ಕೆ ಬರುತ್ತದೆ. ನಿರಂತರವಾದ ಅಭ್ಯಾಸದಿಂದ ನಂತರ ಅದು ಬಹಳ ಸುಲಭವಾಗುತ್ತದೆ. ಅದು ಹೇಗೆಂದರೆ, ನಿಪುಣ ಕಮ್ಮಾರನೊಬ್ಬ ದಿವಸಕ್ಕೆ ಹತ್ತು ಕತ್ತಿಗಳನ್ನು ಮಾಡುತ್ತಾನೆ. ಆದರೆ ಆರಂಭದಲ್ಲಿ ಒಬ್ಬನಿಗೆ ಒಂದು ಕತ್ತಿ ಸಹ ಪೂರ್ತಿ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಅವನು ಆ ಕೆಲಸ ಬಿಟ್ಟು ಹೋಗುವುದಿಲ್ಲ. ಅದು ಅವನ ಜೀವನದ ದಾರಿಯೆಂದು ಭಾವಿಸಿ, ಮತ್ತೆ ಮತ್ತೆ ಪ್ರಯತ್ನಿಸಿ, ಅದರಲ್ಲಿ ಗೆಲುವು ಸಾಧಿಸುತ್ತಾನೆ. ಇದೇರೀತಿ ಪೂರ್ತಿ ಸಮಯ ಏಕಾಗ್ರತೆಯಿರುವ ಕಾಲ ಬರುವುದು. ಮಕ್ಕಳು ಇನ್ನೂ ಪ್ರಯತ್ನಿಸಿರಿ.”

ಪ್ರಶ್ನೆ: ಯಾವ ರೂಪದ ಮೇಲೆ ಧ್ಯಾನ ಮಾಡಬೇಕು ? ಯಾವ ರೂಪವೂ ಆಗುತ್ತದೆಯೇ ?

“ಮಕ್ಕಳ ರಕ್ತದ ಜೊತೆ ಸೇರಿಕೊಂಡಿರುವ, ಪೂರ್ವಜನ್ಮದ ಸಂಬಂಧವಿರುವ ದೇವತೆ ಇರುವುದು.
ಆ ದೇವತೆಯ ರೂಪಧ್ಯಾನ ಮಾಡಿದರೆ ಸಾಕು.”

ಪ್ರಶ್ನೆ: ಅದು ಹೇಗೆ ತಿಳಿದುಕೊಳ್ಳಲು ಸಾಧ್ಯ ?

“ಎಲ್ಲಾದರೂ ಬೀಳುವಾಗ “ಹೇ ಕೃಷ್ಣಾ” ಎಂದು ಕೂಗುವವರನ್ನು ನೋಡಿರ ಬಹುದು. ಕೃಷ್ಣನಲ್ಲಿ ಹೆಚ್ಚಿನ ಆಕರ್ಷಣೆ ಇರುವವರ ಹಿಂದಿನ ಜನ್ಮದ ಇಷ್ಟದೇವತೆ ಕೃಷ್ಣನಾಗಿರುತ್ತಾನೆ. ಆಗ ಅವರು ದೇವಿಯ ಮೆಲೆ ಧ್ಯಾನ ಮಾಡಬೇಕಾಗಿಲ್ಲ. ಕೃಷ್ಣನ ಮೇಲೆ ಧ್ಯಾನ ಮಾಡಿದರೆ ಸಾಕು. ಗಣಿತದಲ್ಲಿ ಬಹಳ ಗಟ್ಟಿ; ನೂರಕ್ಕೆ ನೂರು ಮಾರ್ಕು ಸಿಗುತ್ತದೆ ಆದರೆ ಜೀವಶಾಸ್ತ್ರದಲ್ಲಿ ತುಂಬ ಹಿಂದೆ. ಅವನು ಹತ್ತನೇ ಕ್ಲಾಸಿನ ನಂತರ ಅವನು ಫರ್ಸ್ಟ್ ಗ್ರೂಪು ಆಯ್ಕೆ ಮಾಡಬೇಕು ಓದಲಿಕ್ಕೆ. ಸೆಕಂಡ್ ಗ್ರೂಪು ತೆಗೆದುಕೊಂಡರೆ ಅವನೊಂದು ಹೊಸ ಸಂಸ್ಕಾರ ಬೆಳೆಸಿಕೊಳ್ಳಬೇಕಾಗಿ ಬರುತ್ತದೆ. ರೂಪ ಧ್ಯಾನ ಮಾಡುವುದೂ ಈ ಪ್ರಕಾರವಾಗಿರುತ್ತದೆ. ಕೃಷ್ಣನರೂಪ ಇಷ್ಟರವರೆಗೆ ಧ್ಯಾನ ಮಾಡುತ್ತಿದ್ದರೆ, ಅದೇ ಮುಂದುವರೆಸಿದರೆ ಸಾಕು. ಅದರಲ್ಲೇ ಎಲ್ಲಾ ಇದೆ ಎಂದು ಸಂಕಲ್ಪಿಸಿಕೊಳ್ಳಬೇಕು. ದೇವಿ ರೂಪವನ್ನು ಧ್ಯಾನ ಮಾಡುತ್ತಿದ್ದರೆ ಮುಂದೆಯೂ ದೇವಿಯನ್ನೇ ಧ್ಯಾನ ಮಾಡಿರಿ. ಯಾವ ದೇವಸ್ಥಾನ ಹೋದರೂ ಅಲ್ಲಿ ಇಷ್ಟದೇವತೆಯನ್ನು ಕಾಣಿರಿ. ನಿಮ್ಮ ತಾಯಿಯನ್ನು ತಾಯಿಯ ತಮ್ಮ “ಅಕ್ಕಾ” ಎಂದು ಕರೆದರೆ ನಿಮಗೆ ತಾಯಿಯಲ್ಲ ಎಂದಾಗುವುದಿಲ್ಲವಲ್ಲ ? ಒಬ್ಬೊಬ್ಬರಿಗೂ ಒಂದೊಂದು ಭಾವನೆ. ಅವರವರ ಭಾವನೆಯನ್ನನುಸರಿಸಿ ದೇವರನ್ನು ಕರೆಯಬಹುದು.

ಕಥಕಳಿಯಲ್ಲಿ ಒಬ್ಬನೇ ವ್ಯಕ್ತಿ ಹಲವಾರು ವೇಷ ಹಾಕಿ ಅಭಿನಯಿಸುವುದಿಲ್ಲವೇ. ವೇಷ ಬೇರೆ ಬೇರೆಯಾದರೂ ವ್ಯಕ್ತಿ ಬೇರೆಯಾಗುತ್ತಾನೆಯೇ. ಇಲ್ಲ. ಸಿನೆಮದಲ್ಲಿ ಒಬ್ಬನೇ ನಟ ಎಷ್ಟೆಲ್ಲ ಪಾತ್ರಗಳಲ್ಲಿ ನಟಿಸುತ್ತಾನೆ ? ಆದರೆ ಆ ನಟನು ಬದಲಾಗುವುದಿಲ್ಲ. ಯಾವ ರೂಪವನ್ನೂ ಸ್ವೀಕರಿಸಲು ಸಾಧ್ಯ; ಆದರೆ ದೇವರು ಬದಲಾಲಾಗುವುದಿಲ್ಲ. ದೇವಿಯ ಭಕ್ತರು ಕೃಷ್ಣನ ದೇವಾಲಯಕ್ಕೆ ಹೋದಾಗಲೂ “ನನ್ನ ದೇವೀ” ಎಂದು ಕರೆದರೆ ಸಾಕು. ಆತ್ಮ ಒಂದೇ ಅಲ್ಲವೇ ? ದೇವಿ ರೂಪದಲ್ಲಾಗಲೀ, ಕೃಷ್ಣನ ರೂಪದಲ್ಲಾಗಲೀ, ಚೈತನ್ಯವಾಗಿ ನೆಲೆಸಿರುವುದು ಒಂದೇ. ನಮ್ಮ ನಮ್ಮ ಭಾವನೆಯನ್ನನುಸರಿಸಿ ದೇವರು ದರ್ಶನ ಕೊಡುತ್ತಾನೆ. ಹುಲ್ಲಾಗಿ ದೇವರನ್ನು ಭಾವಿಸಿದರೆ, ದೇವರು ನಮಗೆ ಅದೇ ರೂಪದಲ್ಲಿ ದರ್ಶನ ಕೊಡುವನು. ಕಲ್ಲಾದರೆ ಕಲ್ಲಾಗಿ, ಇನ್ನೇನಾದರೆ ಅದಾಗಿ. ಯಾವ ರೂಪದಲ್ಲೂ ಭಾವಿಸಬಹುದು. ಆದರೆ ಮಾತ್ರ ನಮಗೆ ವಿಶ್ವಾಸವಿರಬೇಕು.

ಯಾವ ಅಚ್ಚಿನಲ್ಲಿ ಮಣ್ಣು ತುಂಬಿಸುತ್ತೇವೋ, ಆ ರೂಪದ ಮೂರ್ತಿ ದೊರಕುವುದು. ಅದರರ್ಥ, ಮಣ್ಣಿಗೆ ತನ್ನದೇ ಆದ ರೂಪವಿಲ್ಲ. ಯಾವ ಬಣ್ಣದ ಗಾಜಿನ ಹೂಜೆಯಲ್ಲಿ ನೀರಿಡುತ್ತೇವೋ, ಆ ಬಣ್ಣ ನೀರಿಗಿದೆಯೆಂದು ಕಂಡರೂ, ನೀರಿಗೆ ಬಣ್ಣವಿಲ್ಲ, ಅಲ್ಲವೇ ?”