ಅಮೃತಪುರಿ, ಸೆಪ್ಟೆಂಬರ್ 22.

ಅಮ್ಮ ತಮಗೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರ ದೊರೆತಲ್ಲಿ ದೇಶದ ಶಾಲೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ನಿರ್ಮಲವನ್ನಾಗಿ ಮಾಡಲು ಮಠದ ವತಿಯಿಂದ ಸಿದ್ಧರಾಗಿದ್ದೇವೆ, ಎಂದು ಹೇಳಿದ್ದಾರೆ. “ಭಾರತ ಪ್ರಗತಿಶೀಲ ದೇಶವೆಂದು ನಾವು ಹೇಳಿಕೊಳ್ಳುತ್ತೇವೆ. ಆದರೆ ಇಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಇನ್ನೂ ಯಶಸ್ವಿಯಾಗಿಲ್ಲ. ನಾವು ಇನ್ನೂ ಹಲವು ಶತಮಾನಗಳಷ್ಟು ಹಿಂದುಳಿದಿದ್ದೇವೆ, ಇದಕ್ಕೆ ನಮ್ಮ ರಸ್ತೆಗಳು ಮತ್ತು ಸಾರ್ವಜನಿಕ ಶೌಚಾಲಯಗಳೇ ಸಾಕ್ಷಿ.” ಎಂದು ಅಮ್ಮ ಅತಿ ವ್ಯಸನದಿಂದ ಹೇಳುತ್ತಾರೆ.

“ವಿದೇಶಗಳಲ್ಲಿ ಶೌಚಾಲಯ, ರಸ್ತೆಗಳ ಸ್ವಚ್ಚತೆ ಕಾಪಾಡಿಕೊಂದು ಬರುವುದರಲ್ಲಿ ಸಾಕಷ್ಟು ಗಮನ ನೀಡುತ್ತಿದ್ದಾರೆ. ನಾವು ಇದನ್ನು ಅನುಸರಿಸಬೇಕಾಗಿದೆ. ಅವರಿಗೆ ಹೋಲಿಸಿದರೆ ನಾವಿನ್ನೂ ತುಂಬಾ ಹಿಂದುಳಿದಿದ್ದೇವೆ ಎಂದು ಬಹಳ ದುಃಖವಿದೆ. ಭಾರತದಲ್ಲಿ ಇನ್ನೂ ರಸ್ತೆ ಬದಿಯಲ್ಲೇ ಮೂತ್ರ ಮಾಡುವುದು, ಎಲ್ಲೆಂದರಲ್ಲಿ ಉಗಿಯುವುದು ಸಾಮಾನ್ಯ ದೃಶ್ಯವಾಗಿದೆ. ಕಸದ ತೊಟ್ಟಿಗಳಿದ್ದರೂ ಜನರು ಅದನ್ನು ಸರಿಯಾಗಿ ಬಳಸುತ್ತಿಲ್ಲ, ರಸ್ತೆಯಲ್ಲಿ ಕಸ ಸುರಿಯುತ್ತಾರೆ. ಪರಿಸರ ಸ್ವಚ್ಚತೆ ನಮ್ಮ ಅಭಿವೃದ್ಧಿ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇದನ್ನು ಸರಿಪಡಿಸಲು ನಾವು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಬೇಕು. ನಾವು ಇದನ್ನು ತಿಳಿಸುವ ನಾಮ ಫಲಕಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ, ದೊಡ್ದದಾಗಿ ಕಾಣುವಂತೆ ಅಲ್ಲಲ್ಲಿ ಪ್ರದರ್ಶಿಸಬೇಕು.”

ಅಮ್ಮ ಇಂತಹ ಕಾರ್ಯಕ್ಕೆ ತಮ್ಮ ಮಠದಿಂದ ಸಂಪೂರ್ಣ ಸಹಕಾರ ಸಿಗಲಿದೆ ಎಂದು ಒತ್ತಿ, ಒತ್ತಿ ಹೇಳಿದ್ದಾರೆ. ಈ ಪ್ರಯತ್ನದಲ್ಲಿ ವೃತ್ತ ಪತ್ರಿಕೆ ಮತ್ತು ಟಿ. ವಿ. ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ. ಮಠವು ಸರ್ಕಾರ ಮತ್ತು ಆಡಳಿತ ಸಂಸ್ಥೆಗಳ ಸಹಕಾರ ದೊರೆತಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಸಿದ್ಧವಾಗಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ. “ಇದಕ್ಕೆ ಅಗತ್ಯವಾದ ಯೋಜನೆ ಸಿದ್ಧವಾಗುತ್ತಿದೆ. ಮೊದಲು ಕೇರಳದಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ. ಆ ಬಳಿಕ ಇತರ ರಾಜ್ಯಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು” ಎಂದು ಅಮ್ಮ ಯೋಜನೆಯನ್ನು ಕೃತಿಗಿಳಿಸುವ ಬಗ್ಗೆ ಹೇಳಿದ್ದಾರೆ.

ಗ್ರಾಮದಲ್ಲಿ ಮಠದ ವತಿಯಿಂದ ನಡೆದಿರುವ ಮನೆ ನಿರ್ಮಾಣ ಕೆಲಸದಲ್ಲಿ ಅಮ್ಮನ ಭಕ್ತಮಕ್ಕಳು ರಾಜ್ಯದ ಎಲ್ಲೆಡೆಯಿಂದ ಬಂದು ವಿವಿಧ ರೀತಿಯಲ್ಲಿ ಭಾಗವಹಿಸುತ್ತಲಿದ್ದಾರೆ.

ಬೆಂಗಳೂರಿನ ಅಯುಧ್ ಸಂಘಟನೆಯ 20 ಯುವಕರು ಸ್ವಾಮಿ ಅಮೃತಗೀತಾನಂದ ಪುರಿ ಅವರ ನೇತೃತ್ವದಲ್ಲಿ ಐದು ದಿನ ಶ್ರಮದಾನ ಮಾಡಿದರು. “ನಾವು ಮಾಡಿದ್ದು ಅಳಿಲು ಸೇವೆಯೇ ಸರಿ. ಆಧ್ಯಾತ್ಮದಲ್ಲಿ ತಪಸ್ಸಿಗೆ ಬಹಳ ಮಹತ್ವವಿದೆ. ಅಮ್ಮನ ಮಕ್ಕಳಾದ ನಮಗೆ ರಾಯಚೂರಿನಲ್ಲಿ ಸೇವೆ ಮಾಡುವುದು ನಿಜವಾದ ತಪಸ್ಸಾಯಿತು. ಹೃದಯದಲ್ಲಿ ನಾವು ಅಮ್ಮನಿಗಾಗಿ ತಪಿಸುತ್ತಿದ್ದೆವು.” ೪೮ ಡಿಗ್ರಿ ಸೆ. ತಾಪಮಾನದಲ್ಲಿ ಅಲ್ಲಿನ ಜನರಿಗಾಗಿ ನಿಸ್ವಾರ್ಥವಾಗಿ ಮನೆ ಕಟ್ಟುವ ಕೆಲಸ ಮಾಡುವುದು ನಿಜಕ್ಕೂ ತಪಸ್ಸೇ ಆಗಿತ್ತೆನ್ನಿ. ಮಾತ್ರವಲ್ಲ, ತಿಂಗಳುಗಳಿಂದ ಅಮೃತಪುರಿಯಿಂದ, ಅಮ್ಮನಿಂದ ಮತ್ತು ಆಶ್ರಮದಿಂದ ದೂರದಲ್ಲಿ ಆ ಅಜ್ಞಾತ ಊರಿನಲ್ಲಿಯೇ ಇದ್ದು ಸೇವೆ ಮಾಡುತ್ತಿರುವ ನಾಲ್ಕಾರು ಊರ ಹಿರಿಯರು, “ಏಪ್ರಿಲ್ ಮೂರನೇ ವಾರ ನಾನು ನೋಡ್ದೆ; ಒಂದು ದಿನಕ್ಕೆ ಮೂರು ಮೂರು ಮನೆಗಳಿಗೆ ಒಟ್ಟೊಟ್ಟಿಗೆ ತಾರಸಿ ಹಾಕ್ತಿದ್ರು!” ಇನ್ನೊಬ್ಬ ನೋಡುಗರು ಅಮ್ಮನ ಮಕ್ಕಳ ಕಾರ್ಯಕ್ಷಮತೆ ಮತ್ತು ವೇಗದ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ಮತ್ತೊಬ್ಬರು, “ಈ ಜನ ಒಂದೊಂದು ಸಲಕ್ಕೆ ಒಂದೊಂದು ಸಾಲನ್ನು ಕಟ್ಟುತ್ತಾ ಹೋಗುತ್ತಾರೆ; ಮೊದಲ ಒಂದು ಸಾಲಿನ ಎಲ್ಲ ಮನೆಗಳಿಗೆ ಪಾಯ ಹಾಕುತ್ತಾ ಹೋಗುವರು; ನಂತರ ಎಲ್ಲಾ ಗೋಡೆಗಳನ್ನು ಒಂದೇ ಹಂತದಲ್ಲಿ ಏರಿಸುತ್ತಾ ಹೋಗುವರು… ಇದು ಮಕ್ಕಳು ಆಟವಾಡುವ ಹಾಗೆ ಕಾಣಿಸುತ್ತದೆ; ಹೀಗೆ ಸುಲಭಮಾರ್ಗದಲ್ಲಿ ಅನೇಕ ಮನೆಗಳನ್ನು ಒಟ್ಟೊಟ್ಟಿಗೆ ನಿರ್ಮಿಸುವ ತಂತ್ರವನ್ನು ಅಮ್ಮನೇ ಕಲಿಸಿದ್ದಂತೆ!” ಎಂದು ತುಂಬಾ ಅಚ್ಚರಿ ವ್ಯಕ್ತಪಡಿಸಿದರು.

ಸರ್ಕಾರದ ಹಾಗೂ ಸ್ಥಳೀಯ ಅಧಿಕಾರಿಗಳ ಮತ್ತು ಗ್ರಾಮಸ್ಥರ ಪೂರ್ಣಸಹಕಾರವೂ, ಕಾರ್ಯಸಫಲತೆಯೂ ಗ್ರಾಮಸ್ಥರಿಗೆ ಬಹು ವಿಶ್ವಾಸ ನೀಡಿರುವ ಸಂಗತಿ.

ದಾವಣಗೆರೆಯ ಬ್ರಹ್ಮಚಾರಿಣಿ ಅಂಜಲಿ ಅವರ ನೇತೃತ್ವದಲ್ಲಿ ಇದುವರೆಗೂ ಎರಡು ಬ್ಯಾಚಿನಲ್ಲಿ ಉತ್ತರ ಕರ್ನಾಟಕದ ಅಮ್ಮನ ಮಕ್ಕಳು ರಾಯಚೂರಿನಲ್ಲಿ ಶ್ರಮದಾನ ಮಾಡಿದ್ದಾರೆ.
ಇದೇ ಫೆಬ್ರವರಿಯಲ್ಲಿ 25 ಮಂದಿ ತಂಡವು ಒಂದು ದಿನದ ಮಟ್ಟಿಗೆ ಡೊಂಗರಾಂಪುರಕ್ಕೆ ಭೇಟಿಯಿತ್ತು, ಅಲ್ಲಿನ ಕೆಲಸಗಾರರಿಗೆ ವಿಶೇಷವಾಗಿ ಬಗೆ ಬಗೆಯ ಭಕ್ಷ್ಯಗಳ ಅಡುಗೆ ಮಾಡಿ ಕೈಯ್ಯಾರೆ ಬಡಿಸಿ ಸೋದರತ್ವ ಸಂತೋಷಗಳನ್ನು ನೀಡಿಬಂದರು. ಇವರಲ್ಲಿ ಅಮೃತ ವಿದ್ಯಾಲಯದ ಅಧ್ಯಾಪಕವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರೂ ಸೇರಿದ್ದರು. ಶ್ರಮಪೂರಿತ ಕೆಲಸದಲ್ಲಿ ನಿರತರಾಗಿದ್ದ ಸ್ಥಳೀಯ ಕೆಲಸಗಾರರ ಸೇವೆಯನ್ನು ಮೆಚ್ಚಿದ ತಾಯಂದಿರು ಈ ಯಾತ್ರೆಯನ್ನು ಕೈಗೊಂಡಿದ್ದರು.

ಮತ್ತೆ ಏಪ್ರಿಲ್ ಮೂರನೇ ವಾರದಲ್ಲಿ ಹೋಗಿದ್ದು 27 ಭಕ್ತರು (7 ಮಹಿಳೆಯರು ಸೇರಿ) – ಇವರಲ್ಲಿ ಅಮೃತವಿದ್ಯಾಲಯದ ಅಧ್ಯಾಪಕೇತರ ಸಿಬ್ಬಂದಿ ಮತ್ತು ಇತರ ಜಿಲ್ಲೆಗಳ ಭಕ್ತರೂ ಸೇರಿದ್ದರು; 15 ವರ್ಷದ ಬಾಲಕನಿಂದ 60 ವರ್ಷದ ವಯಸ್ಸಿನವರೂ ಈ ತಂಡದಲ್ಲಿದ್ದರು. ಮಾತ್ರವಲ್ಲ, ಮಧುಮೇಹ ರಕ್ತದೊತ್ತಡದಂಥ ರೋಗವಿದ್ದವರೂ ಇದ್ದರು. ಈ ಸಲ ಈ ತಂಡವು ಆರು ದಿನಗಳ ಕಾಲ ಅಲ್ಲಿದ್ದು ಮನೆ ಕಟ್ಟುವ ಶ್ರಮಪೂರಿತ ಕೆಲಸದಲ್ಲಿ ಭಾಗವಹಿಸಿತು. ವೈಶಾಖದ ಶಾಖ ಜೋರಾಗಿದ್ದರೂ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರೂ ಯಾರಿಗೂ ಯಾವ ರೀತಿಯ ಅನಾರೋಗ್ಯವೂ ಬಾಧಿಸದೆಅಮ್ಮನ ಕೃಪೆಯ ತಂಗಾಳಿ ಮಾತ್ರವೇ ತಮಗೆ ಅನುಭವವಾಯಿತೆಂದು ಅವರು ಹೇಳುವರು. ಪ್ರತಿನಿತ್ಯ ಭಜನೆ ಅರ್ಚನೆಗಳೊಂದಿಗೂ ನಗು ನಗುತ್ತಲೂ ಕೆಲಸಮಾಡುತ್ತಿದ್ದ ತಮ್ಮೆಲ್ಲರಿಗೆ ನಿಸ್ವಾರ್ಥಸೇವೆಯ ಆನಂದ ಹೇಗಿರುತ್ತದೆಂದು ಮನವರಿಕೆಯಾಯಿತು ಎಂದು ಹೃದಯಪೂರ್ವಕವಾಗಿ ಹೇಳುತ್ತಾರೆ.

ಆಗೋಸ್ಟ್ 30, 2010

ಉತ್ತರ ಕರ್ನಾಟಕ ಹಾಗೂ ಆಂಧ್ರಗಳ ಚರಿತ್ರೆಯಲ್ಲಿ ಅಪಾರ ನೋವು, ನಷ್ಟ ತಂದ ದಿನಗಳು ಸೆಪ್ಟಂಬರ್ 27ರಿಂದ ಅಕ್ಟೋಬರ್ 4ರ ವರೆಗಿನ ಎಂಟು ದಿನಗಳು. ಹಳ್ಳಿಗಳಿಗೆ ಹಳ್ಳಿಗಳೇ ಜಲಾವೃತವಾಗಿ ಪ್ರಪಂಚದ ಗಮನ ಸೆಳೆಯಿತು. ಈ ಪ್ರವಾಹಪೀಡಿತ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಮ್ಮ ಮಕ್ಕಳ ನೆರವಿಗೆ ತಲಪಲು ಅಮ್ಮ ತಡ ಮಾಡಲಿಲ್ಲ.

ಪ್ರವಾಹದ ನೀರು ಇನ್ನೂ ಇಳಿಯುವ ಮೊದಲೇ ಕರ್ಣಾಟಕದ ಬೆಳಗಾಂವಿ, ರಾಯಚೂರು, ಬಳ್ಳಾರಿ, ಬಿಜಾಪುರಗಳಿಗೆ, ಬ್ರಹ್ಮಚಾರಿಗಳು, ಭಕ್ತರು ಮತ್ತು ಡಾಕ್ಟರುಗಳನ್ನೊಳಗೊಂಡ ತಂಡ ಧಾವಿಸಿತು. ಈ ಕರ್ತವ್ಯ ನಿರತ ತಂಡ ವಿಳಂಬವಿಲ್ಲದೆ ವೈದ್ಯಕೀಯ ಸೇವೆ, ಸೌಲಭ್ಯ, ತುರ್ತು ಪರಿಸ್ಥಿತಿಯಿರುವಲ್ಲೆಲ್ಲಾ ಪ್ರವಾಹ ಪೀಡಿತರಿಗೆ ಲಭಿಸುವಂತೆ ಮಾಡಿತು. ಅಲ್ಲದೆ ಆಹಾರ ಸಾಮಗ್ರಿಗಳು, ಹಾಸುವ, ಹೊದೆಯುವ ಬಟ್ಟೆಗಳನ್ನು ಉಚಿತವಾಗಿ ಹಂಚಲಾಯಿತು.

ವಿವಿಧೆಡೆಗಳಲ್ಲಿ 2000 ಮನೆಗಳ ನಿರ್ಮಾಣಕ್ಕೆಂದು ಅಮ್ಮ 50 ಕೋಟಿ ರುಪಾಯಿಗಳ ಯೋಜನೆಯನ್ನು ಹಮ್ಮಿಕೊಂಡರು. ರಾಯಚೂರಿನಲ್ಲಿ ಮೊದಲನೇ ಘಟ್ಟದ ಕೆಲಸ 2ನೇ ಫೆಬ್ರವರಿಗೆ ಆರಂಭವೂ ಆಯಿತು

ಬ್ರಹ್ಮಚಾರಿ ಪ್ರೇಮಾಮೃತ ಚೈತನ್ಯ, ಬ್ರಹ್ಮಚಾರಿ ಬಾಬು ರಾವ್, ಬ್ರಹ್ಮಚಾರಿ ರಾಮಕೃಷ್ಣ ಮೊದಲಾಗಿ ನಾಲ್ಕಾರು ಬ್ರಹ್ಮಚಾರಿಗಳು ಅಲ್ಲೇ ನೆಲೆಸಿ ಮೇಲ್ವಿಚಾರಣೆ ಮತ್ತು ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ನೆಲದಿಂದ ಒಂದೂವರೆ ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ಈ ಮನೆಗಳಿಗೆ ಮುಂದೆ, ಹಿಂದೆ ಹಾಗೂ ಅಕ್ಕಪಕ್ಕಗಳಲ್ಲಿ ಸಾಕಷ್ಟು ಖಾಲಿಜಾಗಗಳನ್ನು ಬಿಡಲಾಗಿದೆ. ಕೃಷಿಕರಾದ ಜನರು ದನಕರುಗಳನ್ನು ಸಾಕಿಕೊಳ್ಳಲು, ತರಕಾರಿ ಹೂವು ಹಣ್ಣುಗಳನ್ನು ಬೆಳೆದುಕೊಳ್ಳಲು ಸಾಕಷ್ಟು ಅನುವು ಮಾಡಿಕೊಡಲಾಗಿದೆ. ಬಚ್ಚಲುಮನೆಯನ್ನು ಮನೆಯ ಒಳಗೇ ಒದಗಿಸಿ, ಕಕ್ಕಸು ಮನೆಯನ್ನು ಹಿತ್ತಲಲ್ಲಿ ಕಟ್ಟಲಾಗಿದೆ. ಅಡುಗೆ ಮನೆಯಲ್ಲಿ ಸ್ಲಾಬ್‌ಗಳನ್ನು ಅಳವಡಿಸಲಾಗಿದೆ. ಮನೆ ಮನೆಗೂ ನೀರಿನ ಟ್ಯಾಂಕ್ ಇರುವ ಕಾರಣ ಮನೆಯವರು ನಲ್ಲಿ ಮೂಲಕ ನೀರನ್ನು ಬಳಸಿಕೊಳ್ಳಬಹುದು.

ಮಾರ್ಚ್ 22ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರು ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ನಡೆದಿರುವ ಮನೆನಿರ್ಮಾಣ ಸ್ಥಳಗಳಿಗೆ ಭೇಟಿಯಿತ್ತಾಗ ಡೋಂಗರಾಂಪುರದಲ್ಲಿ ಮಾತಾ ಅಮೃತಾನಂದಮಯಿ ಮಠವು ನಿರ್ಮಿಸಿರುವ ಮನೆಗಳನ್ನು ವೀಕ್ಷಿಸಿದರು. ಆ ಸಂದರ್ಭದಲ್ಲಿ ಮಠದ ಬ್ರಹ್ಮಚಾರಿ ಅಭಯಾಮೃತ ಚೈತನ್ಯ ಅವರು ಸ್ಯಾಂಪಲ್ ಮನೆಯೊಂದನ್ನು ಮುಖ್ಯಮಂತ್ರಿಗಳಿಗೂ ಇತರ ಮಂತ್ರಿ ಮತ್ತು ಅಧಿಕಾರಿಗಳಿಗೂ ತೋರಿಸಿದರು. ಸ್ವಾತಂತ್ರ್ಯಾನಂತರದಿಂದ ಇಷ್ಟರವರೆಗಿನ, ಹಿಂದಿನ ಸರ್ಕಾರಗಳ ಯಾವುದೇ ದುರಂತ ಪರಿಹಾರ  ಕಾರ್ಯಕ್ಕಿಂತ, ತನ್ನ ಸರ್ಕಾರವೇ ಅತ್ಯಂತ ಶೀಘ್ರವಾಗಿ ಪ್ರವಾಹಪೀಡಿತರಿಗಾಗಿ ಮನೆ ನಿರ್ಮಿಸಿ ದಾಖಲೆ ಸಾಧಿಸಿದೆ ಎಂದ ಮುಖ್ಯಮಂತ್ರಿಯವರು, ಈ ದಾಖಲೆಯಲ್ಲಿ ಮಾತಾ ಅಮೃತಾನಂದಮಯಿ ಮಠವು ವಾಗ್ದಾನದ ಗಡುವಿನ ಅವಧಿಗೂ ಮುನ್ನವೇ ಮನೆಗಳನ್ನು ನಿರ್ಮಿಸಿ ಪೂರೈಸಿದ ಮೊದಲ ಸಂಸ್ಥೆಯಾಗಿ ಮುಖ್ಯಪಾತ್ರ ವಹಿಸಿದೆ, ಎಂದೂ ಗುರುತಿಸಿದರು.

ಸರಕಾರವು ಆಶ್ರಮಕ್ಕೆ ನಿವೇಶನ ಮಂಜೂರು ಮಾಡಿದ ಕೇವಲ ಇಪ್ಪತ್ತೇ ದಿನಗಳಲ್ಲಿ (ಡೋಂಗರಾಂಪುರದಲ್ಲಿ) ಸಂಪೂರ್ಣ ಕಟ್ಟಿ ಮುಗಿಸಿದ 100 ಮನೆಗಳನ್ನು ಸರಕಾರಕ್ಕೆ ಹಸ್ತಾಂತರ ಮಾಡುವ ದಾಖಲೆಯನ್ನು ಅಮ್ಮನ ಆಶ್ರಮವು ನಿರ್ಮಿಸಿದೆ; ಎಲ್ಲ ಕ್ಷೇತ್ರಗಳ ವಕ್ತಾರರಿಂದ ಮುಕ್ತ ಪ್ರಶಂಸೆಗೆ ಭಾಜನವಾಗಿದೆ.

ಇನ್ನೂ 242 ಮನೆಗಳನ್ನು ಅಗೋಸ್ಟ್ 4ರಂದು ಕರ್ಣಾಟಕ ಸರಕಾರಕ್ಕೆ ಹಸ್ತಾಂತರಿಸಿತು. ಮೊದಲು ಮಠ ಕಟ್ಟಿದ ಮನೆಗಳನ್ನು ಅಮೂಲಗ್ರವಾಗಿ ಪರಿಶೀಲಿಸಿದ ನಂತರವೇ, ಅಂದಿನ ಸಮಾರಂಭದಲ್ಲಿ ನೂತನ ಮನೆಗಳ ಕೀಲಿ ಕೈಗಳನ್ನು ಸ್ವೀಕರಿಸಿದ ಮುಖ್ಯ ಮಂತ್ರಿ ಯಡಿಯೂರಪ್ಪನವರು “ಮಾತಾ ಅಮೃತಾನಂದಮಯಿ ದೇವರಿದ್ದಂತೆ, ಅವರು ನಿರ್ಮಿಸಿಕೊಟ್ಟಿರುವ ಈ ಮನೆಗಳು ದೇವಾಲಯಗಳಿದ್ದಂತೆ, ಪ್ರತಿ ದಿನ ಅವರನ್ನು ಸ್ಮರಿಸಿಕೊಳ್ಳಿ; ನಿಮಗೆಲ್ಲರಿಗೂ ಒಳ್ಳೆಯದಾಗುತ್ತದೆ” ಎಂದು ಸಂತ್ರಸ್ತರನ್ನುದ್ದೇಶಿಸಿ ನುಡಿದರು. ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಎಂದ ಅವರು ಈ ಕಾರ್ಯದಲ್ಲಿ ನೆರವಾದ ಸಂಘ ಸಂಸ್ಥೆಗಳು ಹಾಗೂ ಮಠ ಮಾನ್ಯಗಳ ಸಹಕ್ಕಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು”

ಇನ್ನುಳಿದ ಮನೆಗಳ ಕೆಲಸವೂ ಭರಾಟೆಯಿಂದ ಮುಂದುವರೆದಿದೆ.

ಕಳೆದ 10 ವರ್ಷಗಳಿಂದ ಅಮ್ಮನ ಜಾಗತಿಕ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ತಮ್ಮ ಸಂಪ್ರದಾಯವನ್ನು ಈ ವರ್ಷವೂ ಪಾಲಿಸಿಕೊಂಡು ಬಂದ ಜಪಾನಿನ ಅಂತರ್ರಾಷ್ಟ್ರೀಯ ಛಾತ್ರ ಸ್ವಯಂಸೇವಕ ಸಂಘದ (International Volunteer University Student Association – IVUSA ), 60 ಯುವಕ ಯುವತಿಯರು ಈ ವರ್ಷ ಬಂದದ್ದು, ರಾಯಚೂರಿಗೆ.

42 ಡಿಗ್ರಿಯ ತಾಪಮಾನವೂ ಅವರ ಸೇವಾ ಮನೋಭಾವಕ್ಕೂ ಉತ್ಸಾಹಕ್ಕೂ ಯಾವುದೇ ತಡೆಯಾಗುವಲ್ಲಿ ಸಫಲವಾಗಲಿಲ್ಲ. ಗೃಹನಿರ್ಮಾಣ ಕಾರ್ಯದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿವುದಲ್ಲದೆ, ಹಳ್ಳಿಗರೊಂದಿಗೆ ಸ್ನೇಹದಿಂದ ಬೆರೆತು ಹೋಳಿ ಆಚರಿಸಿದರು, ಹತ್ತಿರದ ಬೆಟ್ಟದ ಮೇಲಿದ್ದ ಶಿವ ಮಂದಿರಕ್ಕೂ ಭೇಟಿಕೊಟ್ಟರು. ಅಮ್ಮ ಭಾರತ ಯಾತ್ರೆಯಲ್ಲಿದ್ದರೂ, ತನ್ನ ಮಕ್ಕಳಿಗೆಂದು, ಸೆಖೆಯಿಂದ ರಕ್ಷಿಸಿಕೊಳ್ಳಲು ಕೊಡೆ-ಟೊಪ್ಪಿಗೆಗಳನ್ನು ಕಳುಹಿಸಿದರು.

ಮುಂದೆ ಇವರು ಮುಂಬೈಗೆ ಬಂದು ಅಮ್ಮನನ್ನು ಭೇಟಿಯಾದದ್ದು ಮಾತ್ರವಲ್ಲದೆ ತಮ್ಮ ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಪುನಃ ದೆಹಲಿಯಲ್ಲೂ ಅಮ್ಮನನ್ನು ಸಂದರ್ಶಿಸಿದರು.

ಮಕ್ಕಳೇ, ಸುತ್ತಲೂ ಒಂದು ಸಲ ದೃಷ್ಟಿ ಹರಿಸಿ ನೋಡಿ. ಅದನ್ನೊಮ್ಮೆ ವಿಷ್ಲೇಶಣೆ ಮಾಡಿ. ಲೋಕದ ಇವತ್ತಿನ ಪರಿಸ್ಥಿತಿ ಏನಂತ ಸ್ವಲ್ಪ ಅರಿತುಕೊಳ್ಳೋಣ. ಅದಕ್ಕೆಂದೇ ಇರುವ ದಿವಸವಿದು. ಜಗತ್ತಿನ ಜನಗಳು ಎಷ್ಟೆಲ್ಲಾ ತರದಲ್ಲಿ ಕಷ್ಟ ಪಡುತ್ತಿದ್ದಾರೆ. ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಒಂದು ವರ್ಷದ ಹಿಂದೆ ನಡೆದ ಘಟನೆಯೊಂದು ಅಮ್ಮನಿಗೆ ನೆನಪಾಗುತ್ತಿದೆ; ಮುಂಬೈಯಲ್ಲಿನ ಮಕ್ಕಳು ಹೇಳಿ ಗೊತ್ತಾಗಿದ್ದು. ಮುಂಬೈಯಲ್ಲಿ ಒಂದು ಕಡೆ ಒಬ್ಬಾತನಿಗೆ ಷುಗರಿನ ಖಾಯಿಲೆಯಿತ್ತು. ಆ ವ್ಯಕ್ತಿಯ ಕಾಲಲ್ಲಿ ಒಂದು ಗಾಯವಾಗಿ, ಬಲಿತು ದೊಡ್ಡ ಹುಣ್ಣಾಯಿತು. ಡಾಕ್ಟರಿಗೆ ತೋರಿಸಿದಾಗ “ಆ ಕಾಲು ಕತ್ತರಿಸಿ ತೆಗೆಯಬೇಕು. ಇಲ್ಲದಿದ್ದರೆ ಕೀವಾಗಿ ಮುಂದಕ್ಕೆ ತೊಂದರೆ ಕೊಡುತ್ತದೆ, ದೊಡ್ಡ ಸಮಸ್ಯೆಯಾಗುತ್ತದೆ” ಎಂದು ಹೇಳಿದರು. ವ್ಯಕ್ತಿಗೆ ತುಂಬ ಚಿಂತೆಯಾಯಿತು . ಕಾಲು ಕಳೆದುಕೊಳ್ಳಬೇಕೆಂಬ ದುಃಖ ಮಾತ್ರವಲ್ಲ; ಆ ಒಪರೇಷನ್‌ಗೂ ಹತ್ತು ಹದಿನೈದು ಸಾವಿರ ರುಪಾಯಿ ಬೇಕಾಗಿ ಬರಬಹುದು. ಅಲ್ಲದೆ, ಒಂದು ಖಾಯಂ ವರಮಾನವಿರುವ ವ್ಯಕ್ತಿಯೇನಲ್ಲ ಅವನು. ಸಿಗುವದ್ದು, ಸಂಸಾರ ನಿರ್ವಹಣೆಗೆಯೇ ಸಾಲುವುದಿಲ್ಲ. ಕಾಲಿನ ಖಾಯಿಲೆ ಬಂದ ಮೇಲಿಂದ ಮೊದಲಿನ ಹಾಗೆ ಕೆಲಸಕ್ಕೂ ಹೋಗಲು ಸಾಧ್ಯವಿಲ್ಲ. ಡಾಕ್ಟರು ಬರೆದುಕೊಟ್ಟ ಔಷಧಿ ಖರೀದಿಸಲಿಕ್ಕೂ ಹಣವಿಲ್ಲದೆ ತುಂಬ ಕಳವಳಪಡುತ್ತಾನೆ. ಹಾಗಿರುವ ಒಬ್ಬ ವ್ಯಕ್ತಿ ಒಪರೇಷನಿಗೆ ಎಲ್ಲಿಂದ ತಾನೆ ಹಣ ಒಟ್ಟುಗೂಡಿಸುತ್ತಾನೆ. ಈತ ಪೂರ್ತಿ ಚಿಂತೆಯಲ್ಲಿ ಮುಳುಗಿಹೋದ. ಒಂದು ದಿವಸ ಈ ಪಾಪದವ ರೈಲ್ವೇಹಳಿ ಹತ್ತಿರ ಹೋಗಿ ಟ್ರೈನ್ ಬರುವಾಗ ಅದರಡಿ ಹಳಿಮೇಲೆ ಆ ಕಾಲಿಟ್ಟ. ಟ್ರೈನ್ ಹರಿದು ಕಾಲನ್ನು ಕತ್ತರಿಸಿತು. ಆದರೆ, ರಕ್ತಸ್ರಾವ ಬಹಳವಾಗಿ, ಇನ್ನೇನು ಅಂತಿಮ ಗಳಿಗೆ ಮುಟ್ಟಬೇಕು ಅನ್ನುವಾಗ, ಜನರು ಇವನನ್ನು ತೆಗೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾರೆ. ನಡೆದ ಘಟನೆ ಬಗ್ಗೆ ಕೇಳಿದಾಗ, “ನನಲ್ಲಿ ಕಾಲು ಕತ್ತರಿಸಿ ತೆಗೆಸುವ ಒಪರೇಷನ್‌ಗೆ ಕಾಸಿಲ್ಲ. ಕಾಲು ಕತ್ತರಿಸಿ ತೆಗೆಯದೆ, ಈ ಕಾಯಿಲೆಯಿಂದಾಗಿ ಜೀವಿಸುವುದೂ ಕಷ್ಟವೇ. ಒಪರೇಷನ್‌ಗೆ ಹಣವಿಲ್ಲದೆ ನನ್ನೆದುರಿಗೆ ಬೇರೆ ಯಾವುದೇ ದಾರಿಯಿರಲಿಲ್ಲ. ಅದರಿಂದಾಗಿ ಹೀಗೆ ಮಾಡಬೇಕಾಗಿ ಬಂತು.” ಎಂದು ಹೇಳಿದ.

ಮಕ್ಕಳೇ ಆ ಜೀವನವನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ. ಇವತ್ತು ನಮ್ಮಲ್ಲಿ ಆಸ್ಪತ್ರೆಯಿದೆ*. ಎಲ್ಲರಿಗೂ ಧರ್ಮಾರ್ಥವಾಗಿ ಮಾಡಿಸಲು ಸಾಧ್ಯವಿಲ್ಲದಿದ್ದರೂ ಹಲವು ಬಡವರಿಗೆ ಅಲ್ಲಿ ಉಚಿತ ಒಪರೇಷನ್ ಮಾಡಿಸಲಾಗುತ್ತಿದೆ. ಆದರೆ, ಅವರು ಆಸ್ಪತ್ರೆಯನ್ನು ಬಿಟ್ಟ ನಂತರ ಸೇವಿಸಬೇಕಾದ ಔಷಧಿಗಳಿವೆ. ಅದು ಕೊಂಡುಕೊಳ್ಳಲು ಹಲವರಲ್ಲಿ ಕಾಸಿಲ್ಲ. ಒಪರೇಷನ್ ನಂತರ ಕೆಲವು ದಿನಗಳಾದರೂ ವಿಶ್ರಾಂತಿಯ ಅವಶ್ಯವಿದೆಯೆಂದು ಹೇಳಿದರೆ ಅವರಿಗೆ ಕೆಲಸಕ್ಕೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಕುಟುಂಬಗಳು ಹಸಿವಿನಿಂದ ಕಂಗಾಲಾಗಿ ಚಪಡಿಸುತ್ತಿರುವ ಪರಿಸ್ಥಿತಿ ನಮಗೆ ಕಾಣಲು ಸಿಗುತ್ತದೆ. ಸುತ್ತಲೂ ಒಮ್ಮೆ ದೃಷ್ಟಿ ಹರಿಸಿದರೆ, ಹೀಗೆ ಕಷ್ಟ ಪಡುತ್ತಿರುವ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ದುರಂತವನ್ನನುಭವಿಸುವ ಎಷ್ಟು ಕುಟುಂಬಗಳನ್ನು ಬೇಕಾದರೂ ಕಾಣಬಹುದು. ಈ ಸಂದರ್ಭದಲ್ಲಿ ನಾವು ಆಡಂಬರಕ್ಕೂ ಇನ್ನಿತರ ಅನಾವಶ್ಯಕ ವಿಷಯಗಳಿಗೂ ಖರ್ಚು ಮಾಡುವ ಹಣದ ಬಗ್ಗೆ ಯೋಚಿಸೋಣ. ಅದಿದ್ದರೆ ಒಬ್ಬ ಬಡವನಿಗೆ ಮದ್ದು ಕೊಂಡುಕೊಳ್ಳಲು ಸಾಧ್ಯವಾಗುವುದು; ಒಂದು ಕುಟುಂಬದ ಒಪ್ಪತ್ತಿನ ಊಟಕ್ಕೆ ಸಾಲುವುದು; ಒಂದು ಬಡಮಗುವಿಗೆ ವಿದ್ಯಾಭ್ಯಾಸ ನೀಡಿ ಅದರ ಭವಿಷ್ಯ ಬೆಳಗುವಂತೆ ಮಾಡಬಹುದು. ಈ ಒಂದು ಮನೋಭಾವ – ಎಲ್ಲರನ್ನು ಪ್ರೇಮಿಸಲೂ, ಸೇವೆ ಮಾಡಲೂ ಇರುವ ಭಾವ – ವನ್ನೇ ನಾವು ಆಧ್ಯಾತ್ಮಿಕತೆಯಲ್ಲಿ ಜಾಗೃತಗೊಳಿಸಿಕೊಳ್ಳಬೇಕಾಗಿರುವುದು.

— 2000 ರಲ್ಲಿನ ಅಮ್ಮನ ಜನ್ಮದಿನದ ಸಂದೇಶದಿಂದ

—–

* (ಕೇರಳದ ಕೊಚ್ಚಿಯಲ್ಲಿರುವ ಅಮ್ಮನ ಸುಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ – AIMS Hospital. ಸಂದರ್ಶಿರಿ ವೆಬ್ ಸೈಟ್ )