ಆಕಾಶ ಮೀರಿದ ಯಾವುದೇ ಮರ ಇಲ್ಲ, ಪಾತಾಳ ಮೀರಿದ ಯಾವುದೇ ಬೇರೂ ಇಲ್ಲ. ರೂಪಗಳಿಗೆಲ್ಲ ಒಂದು ಮೇರೆಯಿದೆ. ಅದಕ್ಕೂ ಆಚೆ ನಾವು ತಲಪಬೇಕಾದದ್ದು. ಅದಕ್ಕೊಂದು ಉಪಾಧಿ ಬೇಕು. ನಾವು ತೆಂಗಿನಮರ ಹತ್ತಬೇಕಾದರೆ ಏಣಿ ಬೇಕು. ಅದೇ ಕಸಬಿನವರಿಗೆ ಏಣಿ ಬೇಡ. ಅವತಾರಗಳು ಪೂರ್ಣರಾಗಿಯೇ ಬರುತ್ತಾರೆ. ಅವರಿಗೆ ಯಮ ನಿಯಮಗಳು ಬೇಕೆಂದಿಲ್ಲ. ಅವರು ಆ ಸಂಸ್ಕಾರದಿಂದ ಬಂದಿರುತ್ತಾರೆ. ನಾವು ಹಾಗೆ ಮಾಡಬೇಕು ಮಕ್ಕಳೇ. ನಾವು ಯಾಕಾಗಿ ಧ್ಯಾನ ಮಾಡುತ್ತೇವೋ ಅದು ಸಿದ್ಧಿಸಿಯೇ ತೀರುತ್ತದೆ. ಕುಂಕುಮ ಕಲೆಸಿದ ಒಂದು ಪಾತ್ರೆಯಲ್ಲಿ “ವೆಟ್ಟಪಚ್ಚ” ಸಸಿಯನ್ನು ಸ್ವಲ್ಪ ಹೊತ್ತು ಬಿಟ್ಟರೆ ಅದು ಕೆಂಪಾಗುತ್ತದೆ; ಹಸುರು ಬದಲಾಗುತ್ತದೆ. ಅದರಂತೆಯೇ ನಾವು ಏನುಬೇಕೆಂದು ಧ್ಯಾನ ಮಾಡುತ್ತೇವೋ ಅದಾಗಿ ಬಿಡುತ್ತೇವೆ.

ನೆಚ್ಚಿನ ಮಕ್ಕಳೇ, ಇದಕ್ಕೆ ದಾಸತ್ವ ಬೇಕು. ಮಾಡಿನಮೇಲೆ ಎಷ್ಟು ನೀರು ಬಿದ್ದರೂ ಅದಲ್ಲಿ ನಿಲ್ಲುವುದಿಲ್ಲ. ತಗ್ಗಿನಲ್ಲಾದರೆ ಎಲ್ಲಿಂದ ಹೋಗುವ ನೀರೂ ಅದರಲ್ಲಿ ತಾನಾಗಿಯೇ ಬಂದು ಬೀಳುತ್ತದೆ. ನಾನು ಎಂಬ ಭಾವನೆಯನ್ನು ಬಿಡಿ. “ನಾನು ಯಾರೂ ಅಲ್ಲ. ನಾನು ನಿನ್ನಯ ದಾಸ. ನೀನೇ ನನ್ನನ್ನು ರಕ್ಷಿಸು.” ಎಂದು ಪ್ರಾರ್ಥಿಸಿರಿ. ಭಗವಂತನು ರಕ್ಷಿಸುವನು.

ನಮ್ಮ ಜೀವನದ ಗುರಿ ಆತ್ಮ ಸಾಕ್ಷಾತ್ಕಾರವಾಗಿದೆಯೆ ಹೊರತು ಶರೀರ ಸಾಕ್ಷಾತ್ಕಾರವಲ್ಲ. ನಾವು ಶರೀರವೆಂದು ಕಲ್ಪಿಸುವಾಗ ದುಃಖ ಮಾತ್ರವೇ ಇರುವುದು. ನಾನು ಆತ್ಮನೆಂದು ಭಾವಿಸಿ. ಎಲ್ಲದರಲ್ಲೂ ನಾನೆ; ಎಲ್ಲವೂ ನನ್ನಲ್ಲೇ ಇದೆ. ಮತ್ತೆ ಯಾಕೆ ದುಃಖಿಸಬೇಕು? ಬೇರೆಯಾಗಿ ಏನೂ ಇಲ್ಲ. ನಾವು ಒಂದು, ಎರಡಲ್ಲ. ಆಗ ದುಃಖವಿಲ್ಲ. ನಿದ್ದೆಯಲ್ಲಿ ಹೆಂಡತಿಯೆಂದೋ, ಮಕ್ಕಳೆಂದೋ, ನಿನ್ನೆಯೆಂದೋ, ಇವತ್ತೆಂದೋ ಏನೂ ಇಲ್ಲ; ಇದೆಲ್ಲ ಒಂದು ಕಾಣ್ಕೆ ಮಾತ್ರ.

ಸಿನೆಮ ಥೇಟರ್ ಮುಟ್ಟಿ ಅಲ್ಲಿ ಎಷ್ಟು ನೂಕು ನುಗ್ಗಲಿದ್ದರೂ ಕೋಪವಿಲ್ಲದೆ ಟಿಕೇಟು ಕೊಂಡುಕೊಳ್ಳುತ್ತೇವೆ. ಸಿನೇಮ ನೋಡಲಿಕ್ಕಿರುವ ಆಸೆ ಅಷ್ಟಿರುತ್ತದೆ. ಲಕ್ಷ್ಯಬೋಧವಿದ್ದರೆ ಇದುಯಾವುದೂ ಕಷ್ಟವಲ್ಲ; ಅಸ್ವಸ್ಥತೆಯಲ್ಲ; ತ್ಯಾಗವಲ್ಲ. ಹಾಗೆಯೆ, ದೇವರ ಕುರಿತು ಚಿಂತನೆ ಮಾಡಬೇಕಾದರೆ ಲೋಕದ ದುಃಖಗಳು ನಮಗೆ ಭಾರವಲ್ಲ. ಭಗವಂತನನ್ನು ಲಕ್ಷ್ಯವಾಗಿಟ್ಟುಕೊಂಡರೆ ದುಃಖವಿಲ್ಲ. ಆ ಆನಂದದ ಬಗ್ಗೆ ಕಲ್ಪಿಸಿಕೊಳ್ಳುವಾಗ ಯಾವುದೂ ಯಾತನೆಯಲ್ಲ. ಆದಕಾರಣ ನಾವು ಭಗವಂತನನ್ನು ಸ್ಮರಿಸೋಣ.

ಮುಪ್ಪಡರುವಾಗ ತಾಯಂದಿರು ಹೇಳುತ್ತಾರೆ, “ಅವನು ನನ್ನನ್ನು ನೋಡಿಕೊಳ್ಳುತ್ತಾನೆಂದು ಭಾವಿಸಿದೆ; ಇವಳು ನೋಡಿಕೊಳ್ಳುತ್ತಾಳೆಂದು ಯೋಚಿಸಿದೆ; ಈಗ ಯಾರೂ ನೋಡಿಕೊಳ್ಳುತ್ತಿಲ್ಲ. ನನ್ನನ್ನು ಕೊಂದರು, ನನ್ನ ಹಣ ದೋಚಲಿಕ್ಕೆ ನೋಡುತ್ತಿದ್ದಾರೆ.” ಇದು ತಿಳಿದುಕೊಳ್ಳಿ ಮಕ್ಕಳೇ. ಬಸ್‌ಸ್ಟಾಪ್‌ನಲ್ಲಿ ನಿಂತಿರುವಾಗ ಎಲ್ಲರೂ ನಮ್ಮ ಸಂಬಂಧಿಕರೆಂದು ತೋರುತ್ತದೆ. ಬಸ್ಸಿಗೆ ಹತ್ತಿದ ನಂತರ ಅವರೆಲ್ಲ ಅವರವರ ಸ್ಟಾಪ್‌ನಲ್ಲಿಳಿದು ಹೋಗುತ್ತಾರೆ. ನಾವು ಮಾತ್ರ ಬಾಕಿಯಾಗುತ್ತೇವೆ. ಇದುವೇ ಜೀವನ.
ಪ್ರೀತಿಯ ಮಕ್ಕಳೇ, ಸಮಯ ಪೋಲು ಮಾಡಬೇಡಿ. ಪ್ರತಿಯೊಂದು ಕೆಲಸದಲ್ಲೂ ಮಂತ್ರ ಜಪಿಸಿರಿ. ಎತ್ತಿನಂತೆ ಜನಿಸಿ ಆಯಿತು, ಗಾಡಿ ಎಳೆದರೆ ಮಾತ್ರ ಸಾಲದು ಹೊಡೆತವೂ ತಿನ್ನಬೇಕು. ಇದನ್ನು ಅರ್ಥ ಮಾಡಿಕೊಂಡು ಮಕ್ಕಳು ಜೀವಿಸಿರಿ. ಈಶ್ವರನನ್ನು ನಿರಂತರ ಜಪಿಸಿರಿ. ದೇವರು ನಮ್ಮನ್ನು ಕಾಪಾಡುವನು.

ಮಕ್ಕಳೇ, ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಸಾಗುವುದಿಲ್ಲ. ಲೌಕಿಕ ಗುರಿಯು ಎಲ್ಲರಿಗೂ ಇರುತ್ತದೆ. ಆದರೆ ಅವೊಂದೂ ನಮಗೆ ಪೂರ್ಣತೆ ನೀಡುವುದಿಲ್ಲ. ಆದಕಾಆರಣ ದೇವರನ್ನೇ ಗುರಿಯಾಗಿಟ್ಟು ಮುಂದಕ್ಕೆ ಸಾಗಿರಿ.

ಮಕ್ಕಳೇ, ದೇವರೆಲ್ಲಿ ಎಂದು ಕೇಳಬಹುದು. ಹುಡುಕಿರಿ, ನಿಶ್ಚಯವಾಗಿಯೂ ಕಾಣಿಸುತ್ತಾನೆ. ನಾವು ಅನ್ನುತ್ತೇವೆ, “ಕಾಣದಿರುವುದನ್ನು ನಂಬುವುದಿಲ್ಲ” ಎಂದು. ಅಜ್ಜನನ್ನು ಕೆಲವು ಚಿಕ್ಕಮಕ್ಕಳು ನೋಡಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಅವರು ಅಪ್ಪನನ್ನು “ತಂದೆಯಿಲ್ಲದವನು” ಎಂದೇನು ಕರೆಯುವುದು? ಭಗವಂತನು ಸರ್ವವ್ಯಾಪಿ. ಅವನು ಎಲ್ಲದರಲ್ಲೂ ನೆಲೆನಿಂತಿರುವನು. ಸೆಗಣಿಯನ್ನು ಉಪಯೋಗಿಸಬೇಕಾದ ರೀತಿಯಲ್ಲಿ ಉಪಯೋಗಿಸಿದಾಗ ಅದರಲ್ಲಿ ಅಡಕವಾಗಿರುವ ಶಕ್ತಿಯಿಂದ ಬೆಂಕಿ ಹತ್ತಿಕೊಳ್ಳುತ್ತದೆ. ಇದೇ ರೀತಿ ದೇವರ ಶಕ್ತಿ ನಮ್ಮಲ್ಲಿ ವಾಸ ಮಾಡಿಕೊಂಡಿದೆ. ಪ್ರಯೋಗಿಸಬೇಕಾದ ರೀತಿಯಲ್ಲಿ ಪ್ರಯೋಗಿಸಿದಲ್ಲಿ ಕಾಣಬಹುದು. ಗುಡಿಸಲಿನ ಸಣ್ಣ ರಂಧ್ರದಿಂದ ಬಿಸಿಲು ಬೀಳುವಾಗ ಬೇಕಷ್ಟು ಧೂಳಿನ ಕಣಗಳನ್ನು ಕಾಣಬಹುದು. ಕೋಣೆ ತುಂಬ ಧೂಳಿನ ಕಣಗಳಿವೆ; ಬೆಳಕಿಲ್ಲದಿರುವುದರಿಂದ ಕಾಣಿಸುವುದಿಲ್ಲ. ಮಬ್ಬು ಮನಸ್ಸು ನಮ್ಮದು. ಅದಕ್ಕೆ ಸೂಕ್ಷ್ಮತೆಯಿಲ್ಲ. ಬ್ಯಾಟ್ರಿ ಚಾರ್ಜ್ ಮಾಡುವ ಹಾಗೆ ಸೂಕ್ಷ್ಮತೆಯಿಂದ ನಮ್ಮ ಮನಸ್ಸಿನೊಳಗೆ ಬೆಳಕುಂಟಾಗುವಂತೆ ಮಾಡಿ. ಆಗ ದೇವರನ್ನು ಕಾಣಬಹುದು. ಹೊರತು, ಬಾಹ್ಯಕಣ್ಣುಗಳಿಂದ ನೋಡಲೆತ್ನಿಸಿ, “ಈಶ್ವರ ಕಾಣಿಸುವುದಿಲ್ಲ. ಆದಕಾರಣ ನಂಬುವುದಿಲ್ಲ. ಕಂಡದ್ದನ್ನು ಮಾತ್ರವೇ ನಂಬುವುದು” ಎಂದು ಮಕ್ಕಳು ಗೊಂದಲ ಎಬ್ಬಿಸಬೇಡಿ. ಒಂದೇ ಆದ ಆತ್ಮನಲ್ಲಿ ನಂಬಿಕೆ ಇಡಿ. ಎಲ್ಲಾ ಸಿಗುವುದು.

ಒಂದು ದಿನ ಇಬ್ಬರು ಮೀನು ಹಿಡಿಯಲು ಹಿನ್ನೀರಲ್ಲಿಳಿದರು.* ಒಂದು ಪೊದೆಯ ಹತ್ತಿರ ಬಂದು ನಿಂತುಕೊಂಡು ಒಂದನೆಯವನು ಹೇಳಿದ: “ನಾನಿಲ್ಲಿ ಈ ಪೊದೆ ಸುತ್ತುಗಟ್ಟಿ ಮೀನು ಹಿಡಿಯುತ್ತೇನೆ. ನೀನು ಬರುತ್ತೀಯ?” ಎರಡನೆಯವನು ಹೇಳಿದ: “ನಾನು ಬರುವುದಿಲ್ಲ. ನಿಂತರೆ ಇದು ಸಂಜೆತನಕದ ಕೆಲಸ. ಏನೂ ಸಿಗದಿದ್ದರೆ ನನ್ನ ಮಕ್ಕಳು ಉಪವಾಸವಿರಬೇಕಾಗುತ್ತದೆ. ಅಲ್ಲದೆ ನನಗೆ ಬೇರೆ ಸಾಕಾಗಿದೆ. ಬೇರೆ ಕಡೆ ನೋಡುತ್ತೇನೆ”. ಇಷ್ಟು ಹೇಳಿ ಅವನು ಹೋದ.

ಒಂದನೆಯವನು ಅಲ್ಲಿ ಕೂತು ಪೊದೆಗಳ ಸುತ್ತಲು ಒಡ್ಡು ಕಟ್ಟಲು  ಶುರು ಮಾಡಿದ. ಮಣ್ಣು ಬಾಚಿ ತೆಗೆದು ಒಡ್ಡು ನಿಲ್ಲಿಸಿ ನೀರು ಬರಿದು ಮಾಡಲು ಹೆಣಗಿದ. ಕೈಯಲ್ಲಿ ಪಾತ್ರೆಯೂ ಇಲ್ಲ. ಕೈ ಬೊಗಸೆಯಿಂದಲೇ ನೀರು ಖಾಲಿ ಮಾಡತೊಡಗಿದ. ಕಟ್ಟೆಗಳು ಕುಸಿದವು. ಅವನು ಹಿಂಜರಿಯಲಿಲ್ಲ. ಬೇರೆ ಯಾವುದರದ್ದೂ ಅರಿವಿಲ್ಲದೆ, ತಾಳ್ಮೆಯಿಂದ, ಯಾವ ಭಾವೋದ್ವೇಗವೂ ಇಲ್ಲದೆ ತನ್ನ ಕೆಲಸ ಮುಂದುವರಿಸಿದ. ಸಾಯಂಕಾಲವಾಗುತ್ತ ನೀರು ಖಾಲಿಯಾಗಿ ಯಥೇಚ್ಛ ಮೀನು ಸಿಕ್ಕಿತು. ಆ ಸಮಯಕ್ಕೆ ಎರಡನೆಯವನು ಬರಿಗೈಯಲ್ಲಿ ಅಲ್ಲಿ ಬಂದು ಮುಟ್ಟಿದ. ಒಂದನೆಯವನು ಅವನಿಗೆ ಬೇಕಾದಷ್ಟು ಮೀನು ಕೊಟ್ಟ. ನಂಬಿಕೆಯೂ ತಾಳ್ಮೆಯೂ ಇದ್ದವನಿಗೆ ಬೇರೆಯವರನ್ನೂ ರಕ್ಷಿಸಲು ಸಾಧ್ಯವಾಯಿತು. ನಂಬಿಕೆಯಿಲ್ಲದವನಿಗೆ ಏನೂ ಇಲ್ಲ. ನಮ್ಮೊಳಗೆ ಎಲ್ಲ ಇದೆ. ಮಾಡಬೇಕಾದ ರೀತಿಯಲ್ಲಿ ಕಾರ್ಯಪ್ರವೃತ್ತರಾದರೆ ಸಾಕು. ನಂಬಿಕೆ ಇದ್ದರೆ ಎಲ್ಲಿದ್ದರೂ ಸಾಕು; ಬೇಕಾದದ್ದೆಲ್ಲವನ್ನೂ ಭಗವಂತನು ಅಲ್ಲೇ ತಲಪಿಸುವನು. ಇದೇ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು.

——-

  • *ಅಮ್ಮನ ಅಮೃತಪುರಿಯ ಆಶ್ರಮ ಇರುವುದು ನಿಸರ್ಗ ರಮಣೀಯವಾದ ದ್ವೀಪದಲ್ಲಿ. ಪಶ್ಚಿಮಕ್ಕೆ ಸಮುದ್ರ. ಅಲ್ಲಿಂದ ಸುಮಾರು ನೂರಿನ್ನೂರು ಮೀಟರ್ ಪೂರ್ವದಲ್ಲಿ ನೀಲಿ-ಹಸಿರಿನ ಹಿನ್ನೀರು ಕಾಲುವೆ. ಅಲ್ಲಲ್ಲಿ ಈ ಕಾಲುವೆ ಹಳ್ಳಿಯೊಳಗೆ ಹರಿದು ಕೆಲವು ಸಲ ಅಲ್ಲೇ ಸ್ಥಾಯಿಯಾಗಿ,ಆಳವಿಲ್ಲದ, ಚಿಕ್ಕ ಪುಟ್ಟ ಕೊಳಗಳಾಗಿ ನಿಲ್ಲುತ್ತದೆ. ಇಲ್ಲಿಯ ಉದಾಹರಣೆ ಇಂತಹ ಹಿನ್ನೀರಿನ ಹಳ್ಳಗಳಿಗೆ ಸಂಬಂಧಿಸಿದ್ದು. ಇವುಗಳ ಸುತ್ತ ಉಪ್ಪು ನೀರಿನಲ್ಲಿ ಬೆಳೆಯುವ ಒಂದು ವಿಶಿಷ್ಟ ವೃಕ್ಷ – ಮ್ಯಾನ್‌ಗ್ರೋವ್ ಮರ – ಗಳ ಪೊದೆಗಳು ದಡದ ಹತ್ತಿರ, ಆದರೆ ನೀರಲ್ಲಿ ಬೆಳೆಯುತ್ತವೆ.

    ದಡದ ಹತ್ತಿರ ಇರುವ ಎರಡು ಪೊದೆಗಳ  ನೀರನ್ನು ಆವರಿಸುವ ಹಾಗೆ ಮಣ್ಣಿನ ಒಡ್ಡನ್ನು ನಿರ್ಮಿಸುತ್ತಾರೆ. ಒಂದು ಪೊದೆಯಿಂದ ಇನ್ನೊಂದಕ್ಕೆ ಹೋಗಿ, ಈ ಒಡ್ಡು ಎರಡೂ ಪೊದೆಗಳನ್ನು ಬಳಸಿ ದಡ ಮುಟ್ಟಿದಾಗ ಒಂದು ನೀರಿನ ಆವರಣ ಉಂಟಾಗುತ್ತದೆ – ಇದರೊಳಗಿನ ನೀರು ಖಾಲಿಯಾದಾಗ ಮೀನುಗಳು ಕೆಳಗೆ ಕೆಸರಲ್ಲಿ ಉಳಿದುಕೊಳ್ಳುತ್ತವೆ. ಆಗಿನ ಕಾಲದಲ್ಲಿ, ಇಲ್ಲಿನ ಬಡಜನರಿಗೆ ಇದೊಂದು ಮೀನು ಹಿಡಿಯುವ ವಿಧಾನ.

27/09/2010, ಅಮೃತಪುರಿ

ಒಂಬತ್ತು ಭಾರತೀಯ ಭಾಷೆಗಳಲ್ಲಿ ಆರಂಭಿಸಿದ ಮಾತಾ ಅಮೃತಾನಂದಮಯಿ ಮಠದ ಅಧಿಕೃತ ಅಂತರ್ಜಾಲಗಳನ್ನು ಬಿಷಪ್ ಮಾರ್ ಕ್ರಿಸೋಸ್ಟೆಮ್ ತಿರುಮೇನಿ (Bishop Mar Crisostem Metropolitan of Mar Thoma Church) ಉದ್ಘಾಟನೆ ಮಾಡಿದರು. ಕನ್ನಡ, ಮಲೆಯಾಳಂ, ತಮಿಳ್, ತೆಲುಗು, ಮರಾಠಿ, ಹಿಂದಿ, ಪಂಜಾಬಿ, ಬಂಗಾಳಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಈಗ ಆಶ್ರಮದ ಅಂತರ್ಜಾಲ ಸೇವೆ ಲಭ್ಯವಿದೆ.

“ಐವತ್ತೇಳು ವರ್ಷಗಳಲ್ಲಿ ನೂರು ವರ್ಷಗಳ ಕೆಲಸ ಕಾರ್ಯಗಳನ್ನು ನಡೆಸಿದ ಅಮ್ಮ ಸಾಧಾರಣವಾದುದನ್ನು ಅಸಾಧಾರಣವಾದುದ್ದಾಗಿ ಮಾಡುತ್ತಾರೆಂದು ಮಾತ್ರ ಅಮ್ಮನನ್ನು ವಿವರಿಸಬಹುದು. ಸಾಧಾರಣದವರನ್ನು ಅಸಾಧಾರಣರನ್ನಾಗಿ ಮಾಡುವ ಎಲ್ಲಾ ವಿದ್ಯೆಗಳೂ ಅಮ್ಮನಲ್ಲಿವೆ.” ಎಂದು ಉದ್ಘಾಟನೆ ಮಾಡುತ್ತಾ ಕ್ರಿಸೋಸ್ಟೆಮ್ ನುಡಿದರು.

ಜಾಣ್ನುಡಿಗಳಿಂದ ತುಂಬಿದ ಭಾಷಣದಲ್ಲಿ ತನ್ನ ಹಾಗಲ್ಲ ಅಮ್ಮ ಎಂದು ಕ್ರಿಸೋಸ್ಟೆಮ್ ತಿರುಮೇನಿ ನುಡಿದರು. “ನಾವೆಲ್ಲ ಮಾತು ಮಾತ್ರ ಆಡುತ್ತೇವೆ. ಅಮ್ಮನದ್ದು ಮಾತು ಕಮ್ಮಿ; ಕೆಲಸ ಹೆಚ್ಚು.” ತನಗೆ ಅಮ್ಮನಲ್ಲಿ ಒಂದು ಕೋರಿಕೆ ಮಾತ್ರವೇ ಇರುವುದು. ಆರಾರು ತಿಂಗಳಿಗೊಮ್ಮೆ ಅಮ್ಮ ಮಠ ಸ್ಥಳಾಂತರಿಸಬೇಕು. ಅಂದರೆ ಮಾತ್ರ ಇಡೀ ಕೇರಳದ ಪ್ರಗತಿಯಾಗುವುದೆಂದು ಕ್ರಿಸೋಸ್ಟೆಮ್ ಅಂದರು. ಸಮುದಾಯದ ಅಧಃಪತನವಾಗುತ್ತಿದೆಯೆನ್ನುವವರಲ್ಲಿ ತನಗೆ ನೆನಪುಮಾಡಲಿಕ್ಕಿರುವುದು “ಅಮ್ಮ ಇಲ್ಲದಿರುತ್ತಿದ್ದರೆ ಸಮಾಜವೇ ಕಾಣಿಸುತ್ತಿರಲಿಲ್ಲವೆಂದು.”

ದೇಶದಲ್ಲಿ ಸಮಾಜಕ್ಕೆ ವಿಪತ್ತಾಗಿ ಪರಿಣಮಿಸಿರುವ ಮಾಲಿನ್ಯಕ್ಕೆ ವಿರುದ್ಧವಾಗಿ ಯುವಕರ ಹೊಸ ಯೋಜನೆ ಅಮ್ಮನ 57ನೇ ಜನ್ಮದಿನೋತ್ಸವದ ವೇದಿಕೆಯಿಂದ ಆರಂಭವಾಯಿತು. ಪರಿಸರ ಶುಚೀಕರಣ ತಮ್ಮ ಕರ್ತವ್ಯ ಎಂಬ ದೃಢ ಪ್ರತಿಜ್ಞೆಯನ್ನು ಅಮ್ಮನ ಮಕ್ಕಳು ಮಾಡಿದರು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಅಮ್ಮನ ಘೋಷಣೆ ತಮ್ಮ ಜೀವನದ ವ್ರತ ಎಂದಾಗಿದೆ ಆ ಪ್ರತಿಜ್ಞೆ.

ಪ್ರತಿಜ್ಞೆ
ಭೂಮಿಯು ನನ್ನ ತಾಯಿ. ಶುಚಿತ್ವ ಪ್ರಜ್ಞೆಯು ದೈವತ್ವದ ಪ್ರಜ್ಞೆಯೇ ಆಗಿದೆಯೆಂಬ ಅರಿವಿನೊಂದಿಗೆ – ನನ್ನ ಜೀವನದ ಮುಂಬರುವ ದಿನಗಳಲ್ಲಿ ಪರಿಸರ ನೈರ್ಮಲ್ಯದ್ದೂ, ಶುಚಿತ್ವದ್ದೂ, ಸಾಮಾಜಿಕ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುವುದು – ಅದನ್ನು ವಿಚಾರದಲ್ಲೂ ಕಾರ್ಯದಲ್ಲೂ ಅನ್ವಯಗೊಳಿಸುವುದೂ, ಎಂದೆಂದೂ ಪಾಲಿಸುವುದೂ ಆಗಿರುವುದು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಶ್ರೀ ಮಾತಾ ಅಮೃತಾನಂದಮಯಿ ದೇವಿಯ ಬೋಧನೆಯನ್ನು ನಾನು ನನ್ನ ಜೀವನದ ದಾರಿದೀಪವಾಗಿ ಪರಿಗಣಿಸುತ್ತೇನೆ.

ಮಠದ ಈ ಹೊಸ ಯೋಜನೆಗೆ ರೋಟರಿ ಕ್ಲಬ್ಬುಗಳ ಬೆಂಬಲವನ್ನು ರೋಟರಿ ಡಿಸ್ಟ್ರಿಕ್ಟ್‌ನ ಹಿಂದಿನ ಗವರ್ನರ್ ವೇಣುಗೋಪಾಲ್ ಸಿ. ಗೋವಿಂದ್‌ರವರು ಘೋಷಿಸಿದರು.

ಅಧ್ಯಾತ್ಮವೇನಂದರೆ ಜೀವನದಲ್ಲಿ ನಾವು ಬಾಳುವ ಮೌಲ್ಯಗಳು. ಅವುಗಳೂ ತಂತ್ರ ಜ್ಞಾನವೂ ಕೈಮೇಳವಿಸಿದಾಗ ಮಾತ್ರವೇ ಮನುಕುಲಕ್ಕೆ ಸರಿಯಾದ ಬೆಳವಣಿಗೆಯೂ ವಿಕಾಸವೂ ಕರಗತವಾಗುವುದು. ಇದು ಹೇಗೆ ಸಾಧ್ಯವಾಗಿಸೋಣ ಎಂಬುವುದೇ ಈ ಶತಮಾನದ ಅತಿ ದೊಡ್ಡ ಸವಾಲು. – ಅಮ್ಮ