ಆಕಾಶದಲ್ಲಿರುವ ಒಂದು ದೇವರನ್ನು ಕುರಿತೋ, ಪಾತಾಳದಲ್ಲ್ಲಿರುವ ಒಂದು ದೇವಿಯ ಬಗ್ಗೆಯೋ ಅಲ್ಲ ಅಮ್ಮ ಹೇಳುತ್ತಿರುವುದು. ಎಲ್ಲರಲ್ಲೂ ದೇವರಿದ್ದಾನೆ. ಆದರೆ ನೀವು ಆ ಚೈತನ್ಯವನ್ನು ದುರ್ವಿನಿಯೋಗ ಮಾಡುತ್ತಿದ್ದೀರಿ. ನೀವಿಂದು ಸೊನ್ನೆ ವ್ಯಾಟ್ಟಿನ ಬಲ್ಬಾಗಿದ್ದರೆ, ತಪಸ್ಸಿನಿಂದ ಅದನ್ನು ಸಾವಿರದ್ದನ್ನಾಗಿ ಮಾರ್ಪಡಿಸಲು ಸಾಧ್ಯವಿದೆ. ಒಬ್ಬ ಸಾಮನ್ಯ ವ್ಯಕ್ತಿ ಇಬ್ಬರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಾದರೆ ನಿಮಗೆ ಕೋಟಿ ಜನರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಿದೆ. ನಿಮ್ಮ ಶಕ್ತಿಯಲ್ಲಿ ಯಾವೊಂದು ಕೊರತೆಯೂ ಉಂಟಾಗುವುದಿಲ್ಲ. ಆದಕಾರಣ ನಿಮ್ಮಲ್ಲಿರುವ ಶಕ್ತಿಯನ್ನು ವೃದ್ಧಿಸಿ, ನೀವು ನಿಮ್ಮೊಳಗೆ ಹೋಗಿರಿ.

ಇಂದು ಸಮಾಜ ನಶಿಸುತ್ತಿದೆ. ವಿಶೇಷವಾಗಿ ಯುವಕರು. ನೀವು ಬೇಕು; ಲೋಕಸೇವೆಗಾಗಿ ಇಳಿಯ ಬೇಕು ನಿಮ್ಮಂತಹ ಎಳೆವಯಸ್ಸಿನ ಯುವಕರು. ನೀವು ಚಿಂತನೆ ಮಾಡಿದರೆ ಸಮಾಜವನ್ನು ಸ್ವಲ್ಪವಾದರೂ ಉದ್ಧಾರ ಮಾಡಬಹುದು. ಆದಕಾರಣ ಸೇವೆ ಮಾಡಬೇಕೆಂಬ ಅಭಿಲಾಷೆ ಇದ್ದಲ್ಲಿ, ಜನತೆಯ ಪ್ರತಿ ಕರುಣೆ ಇದ್ದರೆ, ಜಗತ್ತಿಗಾಗಿ ಪ್ರೇಮ ಇರುವುದಾದರೆ ನೀವು ಧೈರ್ಯದಿಂದ ಮುಂದೆ ಬರಬೇಕು. ಭಗವಂತನಿಗೆ ಏನೂ ಕೊಡಬೇಡಿ. ಜನರನ್ನು ಭಗವಂತನ ಛಾಯಾಛತ್ರದಡಿಯಲ್ಲಿ ಬಿಸಿಲು ಬೀಳದ ಹಾಗೆ ನಿಲ್ಲಿಸಿರಿ. ಅದೇ ಬೇಕಾಗಿರುವುದು; ಅದು ನಮ್ಮ ಕರ್ತವ್ಯ.

ಅಮೃತಪುರಿ, ನವೆಂಬರ್ 10, 2010

ನಮ್ಮ ದೇಶದ ಸಾರ್ವಜನಿಕ ಸ್ಥಳಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಶುಚಿಗೊಳಿಸುವ ಗುರಿ ಹೊಂದಿರುವ ಈ ಯೋಜನೆ, ಸ್ವಚ್ಛತೆಯ ಮೂಲಕ ನಮ್ಮ ಸುಂದರ ನಿಸರ್ಗ ಹಾಗೂ ಭೂಮಿಯ ಕುರಿತಾದ ಮಾನವತೆಯ ಋಣದ ಬಗ್ಗೆ ಸಾಮಾಜಿಕ ಅರಿವನ್ನು ಮೂಡಿಸುವ ಅಭಿಲಾಷೆಯನ್ನು ಹೊಂದಿದೆ. ಸೆಪ್ಟಂಬರ್ 27, 2010ರಂದಿನ ತನ್ನ 57ನೆಯ ಜನ್ಮ ದಿನೋತ್ಸವದಂದು, ಅಮ್ಮ ಈ ಯೋಜನೆಯನ್ನುಜಾರಿಗೆ ತಂದರು. ಇದು ಅಮ್ಮನ ಜನ್ಮ ದಿನೋತ್ಸವದ ಆಶಯವೂ ಆಗಿದೆ. ಮಾತಾ ಅಮೃತಾನಂದಮಯಿ ಮಠ (ಮಾ.ಅ.ಮ.)ವು ರಾಜ್ಯ ಸರಕಾರಗಳ ಹಾಗೂ ಇನ್ನಿತರ ಸಂಸ್ಥೆಗಳ ಬೆಂಬಲ ಹಾಗೂ ಸಹಕಾರ ಸಿಕ್ಕಿದಲ್ಲಿ ಸರಕಾರಿ ಶಾಲೆಗಳಲ್ಲಿ ಹಾಗೂ ಭಾರತದಾದ್ಯಂತ ರಸ್ತೆಗಳ ಬದಿಯಲ್ಲಿ ಶೌಚಾಲಯ ಕಟ್ಟಿಸುವ ಹಾಗೂ ಕಸದ ಪೆಟ್ಟಿಗೆ ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸುವುದೆಂದು ಅಮ್ಮ ಹೇಳಿದ್ದಾರೆ.

ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿಡುತ್ತೇವೆಂಬ ಪಣತೊಡಬೇಕೆಂದು ಅಮ್ಮ ಬಯಸುತ್ತಾರೆ. ಜನತೆ, ಸರಕಾರ ಹಾಗೂ ಇನ್ನಿತರ ಸಂಸ್ಥೆಗಳು ಒಟ್ಟುಗೂಡಿದರೆ ನಿಶ್ಚಯವಾಗಿಯೂ ಈ ಪವಿತ್ರ ಪರಿಶ್ರಮವು ಫಲವೀಯುವುದೆಂದು ಅಮ್ಮ ಭಾವಿಸುತ್ತಾರೆ.

ಈ ಯೋಜನೆಯು ಮೊದಲು ಕೇರಳದಲ್ಲಿ ಆರಂಭವಾಗಿ ತದನಂತರ ಭಾರತದ ಇನ್ನಿತರ ರಾಜ್ಯಗಳಿಗೂ ಹರಡುತ್ತದೆ. ವಿಭಿನ್ನ ಸ್ಥಳಗಳ ಶುಚೀಕರಣದ ವರದಿ ಮತ್ತು ಫೋಟೊಗಳಿಗೆ ಸಂದರ್ಶಿಸಿರಿ: http://e.amritapuri.org/abc/ka-about
http://e.amritapuri.org/abc/ka-about/ka-says

27 ಅಕ್ಟೋಬರ್, 2010
ಅಮೃತಪುರಿ

ಅಮಲ ಭಾರತಂ ಕ್ಯಾಂಪೇನ್ (ಏ.ಬಿ.ಸಿ.) ಅನ್ನುವ ಈ ಬೃಹದ್‌ಯೋಜನೆಯ ಸ್ವಯಂಸೇವಕರು ಬರುವ ಒಕ್ಟೋಬರ್ 31ರಂದು ಕೇರಳದಾದ್ಯಂತ, 14 ಜಿಲ್ಲೆಗಳ 54ಕ್ಕೂ ಮೀರಿದ ಸಾರ್ವಜನಿಕ ಸ್ಥಳಗಳಲ್ಲಿ ಶುಚೀಕರಣ ಯಜ್ಞ ನಡೆಸುವರು. ಶುಚೀಕರಣ ಯಜ್ಞದಲ್ಲಿ ಅಮಲ ಭಾರತಂ ಜೊತೆ ಸಾರ್ವಜನಿಕರ ಬೆಂಬಲವು ಸೇರಿಕೊಂಡಿದೆ. ಇದು ನವೆಂಬರ್ ಒಂದರಂದು ಆಚರಿಸಲ್ಪಡುವ ಕೇರಳದ 54ನೇ ರಾಜ್ಯೋತ್ಸವದ ಜೊತೆ ಜೋಡಿಕೊಂಡಿದೆ.

ಮುಂಬರುವ ದಿನಗಳಲ್ಲಿ, ಅಮಲ ಭಾರತಂ ಕ್ಯಾಂಪೇನ್‌ (Amala Bharatam Campaign – ABC) ನ ಈ ಆರಂಭದ ಹಂತವು, ನಿರ್ಮಲ ಭಾರತದ ಆದರ್ಶಗಳಿಗೆ ಹೊಸ ಪ್ರೇರೇಪಣೆಯನ್ನು ಮತ್ತು ಪ್ರೋತ್ಸಾಹವನ್ನು ನೀಡುವುದೆಂದು ಆಶಿಸಲಾಗಿದೆ.

ಎರಡು ದಿನಗಳ ಹಿಂದೆ ತಮಿಳ್ನಾಡಿನ ಕೊಯಂಬತ್ತೂರಿನಲ್ಲೂ ಈ ಕಾರ್ಯಕ್ರಮ ಶುರುವಾಯಿತು.

ಆಕಾಶ ಮೀರಿದ ಯಾವುದೇ ಮರ ಇಲ್ಲ, ಪಾತಾಳ ಮೀರಿದ ಯಾವುದೇ ಬೇರೂ ಇಲ್ಲ. ರೂಪಗಳಿಗೆಲ್ಲ ಒಂದು ಮೇರೆಯಿದೆ. ಅದಕ್ಕೂ ಆಚೆ ನಾವು ತಲಪಬೇಕಾದದ್ದು. ಅದಕ್ಕೊಂದು ಉಪಾಧಿ ಬೇಕು. ನಾವು ತೆಂಗಿನಮರ ಹತ್ತಬೇಕಾದರೆ ಏಣಿ ಬೇಕು. ಅದೇ ಕಸಬಿನವರಿಗೆ ಏಣಿ ಬೇಡ. ಅವತಾರಗಳು ಪೂರ್ಣರಾಗಿಯೇ ಬರುತ್ತಾರೆ. ಅವರಿಗೆ ಯಮ ನಿಯಮಗಳು ಬೇಕೆಂದಿಲ್ಲ. ಅವರು ಆ ಸಂಸ್ಕಾರದಿಂದ ಬಂದಿರುತ್ತಾರೆ. ನಾವು ಹಾಗೆ ಮಾಡಬೇಕು ಮಕ್ಕಳೇ. ನಾವು ಯಾಕಾಗಿ ಧ್ಯಾನ ಮಾಡುತ್ತೇವೋ ಅದು ಸಿದ್ಧಿಸಿಯೇ ತೀರುತ್ತದೆ. ಕುಂಕುಮ ಕಲೆಸಿದ ಒಂದು ಪಾತ್ರೆಯಲ್ಲಿ “ವೆಟ್ಟಪಚ್ಚ” ಸಸಿಯನ್ನು ಸ್ವಲ್ಪ ಹೊತ್ತು ಬಿಟ್ಟರೆ ಅದು ಕೆಂಪಾಗುತ್ತದೆ; ಹಸುರು ಬದಲಾಗುತ್ತದೆ. ಅದರಂತೆಯೇ ನಾವು ಏನುಬೇಕೆಂದು ಧ್ಯಾನ ಮಾಡುತ್ತೇವೋ ಅದಾಗಿ ಬಿಡುತ್ತೇವೆ.

ನೆಚ್ಚಿನ ಮಕ್ಕಳೇ, ಇದಕ್ಕೆ ದಾಸತ್ವ ಬೇಕು. ಮಾಡಿನಮೇಲೆ ಎಷ್ಟು ನೀರು ಬಿದ್ದರೂ ಅದಲ್ಲಿ ನಿಲ್ಲುವುದಿಲ್ಲ. ತಗ್ಗಿನಲ್ಲಾದರೆ ಎಲ್ಲಿಂದ ಹೋಗುವ ನೀರೂ ಅದರಲ್ಲಿ ತಾನಾಗಿಯೇ ಬಂದು ಬೀಳುತ್ತದೆ. ನಾನು ಎಂಬ ಭಾವನೆಯನ್ನು ಬಿಡಿ. “ನಾನು ಯಾರೂ ಅಲ್ಲ. ನಾನು ನಿನ್ನಯ ದಾಸ. ನೀನೇ ನನ್ನನ್ನು ರಕ್ಷಿಸು.” ಎಂದು ಪ್ರಾರ್ಥಿಸಿರಿ. ಭಗವಂತನು ರಕ್ಷಿಸುವನು.

ನಮ್ಮ ಜೀವನದ ಗುರಿ ಆತ್ಮ ಸಾಕ್ಷಾತ್ಕಾರವಾಗಿದೆಯೆ ಹೊರತು ಶರೀರ ಸಾಕ್ಷಾತ್ಕಾರವಲ್ಲ. ನಾವು ಶರೀರವೆಂದು ಕಲ್ಪಿಸುವಾಗ ದುಃಖ ಮಾತ್ರವೇ ಇರುವುದು. ನಾನು ಆತ್ಮನೆಂದು ಭಾವಿಸಿ. ಎಲ್ಲದರಲ್ಲೂ ನಾನೆ; ಎಲ್ಲವೂ ನನ್ನಲ್ಲೇ ಇದೆ. ಮತ್ತೆ ಯಾಕೆ ದುಃಖಿಸಬೇಕು? ಬೇರೆಯಾಗಿ ಏನೂ ಇಲ್ಲ. ನಾವು ಒಂದು, ಎರಡಲ್ಲ. ಆಗ ದುಃಖವಿಲ್ಲ. ನಿದ್ದೆಯಲ್ಲಿ ಹೆಂಡತಿಯೆಂದೋ, ಮಕ್ಕಳೆಂದೋ, ನಿನ್ನೆಯೆಂದೋ, ಇವತ್ತೆಂದೋ ಏನೂ ಇಲ್ಲ; ಇದೆಲ್ಲ ಒಂದು ಕಾಣ್ಕೆ ಮಾತ್ರ.

ಸಿನೆಮ ಥೇಟರ್ ಮುಟ್ಟಿ ಅಲ್ಲಿ ಎಷ್ಟು ನೂಕು ನುಗ್ಗಲಿದ್ದರೂ ಕೋಪವಿಲ್ಲದೆ ಟಿಕೇಟು ಕೊಂಡುಕೊಳ್ಳುತ್ತೇವೆ. ಸಿನೇಮ ನೋಡಲಿಕ್ಕಿರುವ ಆಸೆ ಅಷ್ಟಿರುತ್ತದೆ. ಲಕ್ಷ್ಯಬೋಧವಿದ್ದರೆ ಇದುಯಾವುದೂ ಕಷ್ಟವಲ್ಲ; ಅಸ್ವಸ್ಥತೆಯಲ್ಲ; ತ್ಯಾಗವಲ್ಲ. ಹಾಗೆಯೆ, ದೇವರ ಕುರಿತು ಚಿಂತನೆ ಮಾಡಬೇಕಾದರೆ ಲೋಕದ ದುಃಖಗಳು ನಮಗೆ ಭಾರವಲ್ಲ. ಭಗವಂತನನ್ನು ಲಕ್ಷ್ಯವಾಗಿಟ್ಟುಕೊಂಡರೆ ದುಃಖವಿಲ್ಲ. ಆ ಆನಂದದ ಬಗ್ಗೆ ಕಲ್ಪಿಸಿಕೊಳ್ಳುವಾಗ ಯಾವುದೂ ಯಾತನೆಯಲ್ಲ. ಆದಕಾರಣ ನಾವು ಭಗವಂತನನ್ನು ಸ್ಮರಿಸೋಣ.

ಮುಪ್ಪಡರುವಾಗ ತಾಯಂದಿರು ಹೇಳುತ್ತಾರೆ, “ಅವನು ನನ್ನನ್ನು ನೋಡಿಕೊಳ್ಳುತ್ತಾನೆಂದು ಭಾವಿಸಿದೆ; ಇವಳು ನೋಡಿಕೊಳ್ಳುತ್ತಾಳೆಂದು ಯೋಚಿಸಿದೆ; ಈಗ ಯಾರೂ ನೋಡಿಕೊಳ್ಳುತ್ತಿಲ್ಲ. ನನ್ನನ್ನು ಕೊಂದರು, ನನ್ನ ಹಣ ದೋಚಲಿಕ್ಕೆ ನೋಡುತ್ತಿದ್ದಾರೆ.” ಇದು ತಿಳಿದುಕೊಳ್ಳಿ ಮಕ್ಕಳೇ. ಬಸ್‌ಸ್ಟಾಪ್‌ನಲ್ಲಿ ನಿಂತಿರುವಾಗ ಎಲ್ಲರೂ ನಮ್ಮ ಸಂಬಂಧಿಕರೆಂದು ತೋರುತ್ತದೆ. ಬಸ್ಸಿಗೆ ಹತ್ತಿದ ನಂತರ ಅವರೆಲ್ಲ ಅವರವರ ಸ್ಟಾಪ್‌ನಲ್ಲಿಳಿದು ಹೋಗುತ್ತಾರೆ. ನಾವು ಮಾತ್ರ ಬಾಕಿಯಾಗುತ್ತೇವೆ. ಇದುವೇ ಜೀವನ.
ಪ್ರೀತಿಯ ಮಕ್ಕಳೇ, ಸಮಯ ಪೋಲು ಮಾಡಬೇಡಿ. ಪ್ರತಿಯೊಂದು ಕೆಲಸದಲ್ಲೂ ಮಂತ್ರ ಜಪಿಸಿರಿ. ಎತ್ತಿನಂತೆ ಜನಿಸಿ ಆಯಿತು, ಗಾಡಿ ಎಳೆದರೆ ಮಾತ್ರ ಸಾಲದು ಹೊಡೆತವೂ ತಿನ್ನಬೇಕು. ಇದನ್ನು ಅರ್ಥ ಮಾಡಿಕೊಂಡು ಮಕ್ಕಳು ಜೀವಿಸಿರಿ. ಈಶ್ವರನನ್ನು ನಿರಂತರ ಜಪಿಸಿರಿ. ದೇವರು ನಮ್ಮನ್ನು ಕಾಪಾಡುವನು.

ಮಕ್ಕಳೇ, ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಸಾಗುವುದಿಲ್ಲ. ಲೌಕಿಕ ಗುರಿಯು ಎಲ್ಲರಿಗೂ ಇರುತ್ತದೆ. ಆದರೆ ಅವೊಂದೂ ನಮಗೆ ಪೂರ್ಣತೆ ನೀಡುವುದಿಲ್ಲ. ಆದಕಾಆರಣ ದೇವರನ್ನೇ ಗುರಿಯಾಗಿಟ್ಟು ಮುಂದಕ್ಕೆ ಸಾಗಿರಿ.

ಮಕ್ಕಳೇ, ದೇವರೆಲ್ಲಿ ಎಂದು ಕೇಳಬಹುದು. ಹುಡುಕಿರಿ, ನಿಶ್ಚಯವಾಗಿಯೂ ಕಾಣಿಸುತ್ತಾನೆ. ನಾವು ಅನ್ನುತ್ತೇವೆ, “ಕಾಣದಿರುವುದನ್ನು ನಂಬುವುದಿಲ್ಲ” ಎಂದು. ಅಜ್ಜನನ್ನು ಕೆಲವು ಚಿಕ್ಕಮಕ್ಕಳು ನೋಡಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಅವರು ಅಪ್ಪನನ್ನು “ತಂದೆಯಿಲ್ಲದವನು” ಎಂದೇನು ಕರೆಯುವುದು? ಭಗವಂತನು ಸರ್ವವ್ಯಾಪಿ. ಅವನು ಎಲ್ಲದರಲ್ಲೂ ನೆಲೆನಿಂತಿರುವನು. ಸೆಗಣಿಯನ್ನು ಉಪಯೋಗಿಸಬೇಕಾದ ರೀತಿಯಲ್ಲಿ ಉಪಯೋಗಿಸಿದಾಗ ಅದರಲ್ಲಿ ಅಡಕವಾಗಿರುವ ಶಕ್ತಿಯಿಂದ ಬೆಂಕಿ ಹತ್ತಿಕೊಳ್ಳುತ್ತದೆ. ಇದೇ ರೀತಿ ದೇವರ ಶಕ್ತಿ ನಮ್ಮಲ್ಲಿ ವಾಸ ಮಾಡಿಕೊಂಡಿದೆ. ಪ್ರಯೋಗಿಸಬೇಕಾದ ರೀತಿಯಲ್ಲಿ ಪ್ರಯೋಗಿಸಿದಲ್ಲಿ ಕಾಣಬಹುದು. ಗುಡಿಸಲಿನ ಸಣ್ಣ ರಂಧ್ರದಿಂದ ಬಿಸಿಲು ಬೀಳುವಾಗ ಬೇಕಷ್ಟು ಧೂಳಿನ ಕಣಗಳನ್ನು ಕಾಣಬಹುದು. ಕೋಣೆ ತುಂಬ ಧೂಳಿನ ಕಣಗಳಿವೆ; ಬೆಳಕಿಲ್ಲದಿರುವುದರಿಂದ ಕಾಣಿಸುವುದಿಲ್ಲ. ಮಬ್ಬು ಮನಸ್ಸು ನಮ್ಮದು. ಅದಕ್ಕೆ ಸೂಕ್ಷ್ಮತೆಯಿಲ್ಲ. ಬ್ಯಾಟ್ರಿ ಚಾರ್ಜ್ ಮಾಡುವ ಹಾಗೆ ಸೂಕ್ಷ್ಮತೆಯಿಂದ ನಮ್ಮ ಮನಸ್ಸಿನೊಳಗೆ ಬೆಳಕುಂಟಾಗುವಂತೆ ಮಾಡಿ. ಆಗ ದೇವರನ್ನು ಕಾಣಬಹುದು. ಹೊರತು, ಬಾಹ್ಯಕಣ್ಣುಗಳಿಂದ ನೋಡಲೆತ್ನಿಸಿ, “ಈಶ್ವರ ಕಾಣಿಸುವುದಿಲ್ಲ. ಆದಕಾರಣ ನಂಬುವುದಿಲ್ಲ. ಕಂಡದ್ದನ್ನು ಮಾತ್ರವೇ ನಂಬುವುದು” ಎಂದು ಮಕ್ಕಳು ಗೊಂದಲ ಎಬ್ಬಿಸಬೇಡಿ. ಒಂದೇ ಆದ ಆತ್ಮನಲ್ಲಿ ನಂಬಿಕೆ ಇಡಿ. ಎಲ್ಲಾ ಸಿಗುವುದು.

ಒಂದು ದಿನ ಇಬ್ಬರು ಮೀನು ಹಿಡಿಯಲು ಹಿನ್ನೀರಲ್ಲಿಳಿದರು.* ಒಂದು ಪೊದೆಯ ಹತ್ತಿರ ಬಂದು ನಿಂತುಕೊಂಡು ಒಂದನೆಯವನು ಹೇಳಿದ: “ನಾನಿಲ್ಲಿ ಈ ಪೊದೆ ಸುತ್ತುಗಟ್ಟಿ ಮೀನು ಹಿಡಿಯುತ್ತೇನೆ. ನೀನು ಬರುತ್ತೀಯ?” ಎರಡನೆಯವನು ಹೇಳಿದ: “ನಾನು ಬರುವುದಿಲ್ಲ. ನಿಂತರೆ ಇದು ಸಂಜೆತನಕದ ಕೆಲಸ. ಏನೂ ಸಿಗದಿದ್ದರೆ ನನ್ನ ಮಕ್ಕಳು ಉಪವಾಸವಿರಬೇಕಾಗುತ್ತದೆ. ಅಲ್ಲದೆ ನನಗೆ ಬೇರೆ ಸಾಕಾಗಿದೆ. ಬೇರೆ ಕಡೆ ನೋಡುತ್ತೇನೆ”. ಇಷ್ಟು ಹೇಳಿ ಅವನು ಹೋದ.

ಒಂದನೆಯವನು ಅಲ್ಲಿ ಕೂತು ಪೊದೆಗಳ ಸುತ್ತಲು ಒಡ್ಡು ಕಟ್ಟಲು  ಶುರು ಮಾಡಿದ. ಮಣ್ಣು ಬಾಚಿ ತೆಗೆದು ಒಡ್ಡು ನಿಲ್ಲಿಸಿ ನೀರು ಬರಿದು ಮಾಡಲು ಹೆಣಗಿದ. ಕೈಯಲ್ಲಿ ಪಾತ್ರೆಯೂ ಇಲ್ಲ. ಕೈ ಬೊಗಸೆಯಿಂದಲೇ ನೀರು ಖಾಲಿ ಮಾಡತೊಡಗಿದ. ಕಟ್ಟೆಗಳು ಕುಸಿದವು. ಅವನು ಹಿಂಜರಿಯಲಿಲ್ಲ. ಬೇರೆ ಯಾವುದರದ್ದೂ ಅರಿವಿಲ್ಲದೆ, ತಾಳ್ಮೆಯಿಂದ, ಯಾವ ಭಾವೋದ್ವೇಗವೂ ಇಲ್ಲದೆ ತನ್ನ ಕೆಲಸ ಮುಂದುವರಿಸಿದ. ಸಾಯಂಕಾಲವಾಗುತ್ತ ನೀರು ಖಾಲಿಯಾಗಿ ಯಥೇಚ್ಛ ಮೀನು ಸಿಕ್ಕಿತು. ಆ ಸಮಯಕ್ಕೆ ಎರಡನೆಯವನು ಬರಿಗೈಯಲ್ಲಿ ಅಲ್ಲಿ ಬಂದು ಮುಟ್ಟಿದ. ಒಂದನೆಯವನು ಅವನಿಗೆ ಬೇಕಾದಷ್ಟು ಮೀನು ಕೊಟ್ಟ. ನಂಬಿಕೆಯೂ ತಾಳ್ಮೆಯೂ ಇದ್ದವನಿಗೆ ಬೇರೆಯವರನ್ನೂ ರಕ್ಷಿಸಲು ಸಾಧ್ಯವಾಯಿತು. ನಂಬಿಕೆಯಿಲ್ಲದವನಿಗೆ ಏನೂ ಇಲ್ಲ. ನಮ್ಮೊಳಗೆ ಎಲ್ಲ ಇದೆ. ಮಾಡಬೇಕಾದ ರೀತಿಯಲ್ಲಿ ಕಾರ್ಯಪ್ರವೃತ್ತರಾದರೆ ಸಾಕು. ನಂಬಿಕೆ ಇದ್ದರೆ ಎಲ್ಲಿದ್ದರೂ ಸಾಕು; ಬೇಕಾದದ್ದೆಲ್ಲವನ್ನೂ ಭಗವಂತನು ಅಲ್ಲೇ ತಲಪಿಸುವನು. ಇದೇ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು.

——-

  • *ಅಮ್ಮನ ಅಮೃತಪುರಿಯ ಆಶ್ರಮ ಇರುವುದು ನಿಸರ್ಗ ರಮಣೀಯವಾದ ದ್ವೀಪದಲ್ಲಿ. ಪಶ್ಚಿಮಕ್ಕೆ ಸಮುದ್ರ. ಅಲ್ಲಿಂದ ಸುಮಾರು ನೂರಿನ್ನೂರು ಮೀಟರ್ ಪೂರ್ವದಲ್ಲಿ ನೀಲಿ-ಹಸಿರಿನ ಹಿನ್ನೀರು ಕಾಲುವೆ. ಅಲ್ಲಲ್ಲಿ ಈ ಕಾಲುವೆ ಹಳ್ಳಿಯೊಳಗೆ ಹರಿದು ಕೆಲವು ಸಲ ಅಲ್ಲೇ ಸ್ಥಾಯಿಯಾಗಿ,ಆಳವಿಲ್ಲದ, ಚಿಕ್ಕ ಪುಟ್ಟ ಕೊಳಗಳಾಗಿ ನಿಲ್ಲುತ್ತದೆ. ಇಲ್ಲಿಯ ಉದಾಹರಣೆ ಇಂತಹ ಹಿನ್ನೀರಿನ ಹಳ್ಳಗಳಿಗೆ ಸಂಬಂಧಿಸಿದ್ದು. ಇವುಗಳ ಸುತ್ತ ಉಪ್ಪು ನೀರಿನಲ್ಲಿ ಬೆಳೆಯುವ ಒಂದು ವಿಶಿಷ್ಟ ವೃಕ್ಷ – ಮ್ಯಾನ್‌ಗ್ರೋವ್ ಮರ – ಗಳ ಪೊದೆಗಳು ದಡದ ಹತ್ತಿರ, ಆದರೆ ನೀರಲ್ಲಿ ಬೆಳೆಯುತ್ತವೆ.

    ದಡದ ಹತ್ತಿರ ಇರುವ ಎರಡು ಪೊದೆಗಳ  ನೀರನ್ನು ಆವರಿಸುವ ಹಾಗೆ ಮಣ್ಣಿನ ಒಡ್ಡನ್ನು ನಿರ್ಮಿಸುತ್ತಾರೆ. ಒಂದು ಪೊದೆಯಿಂದ ಇನ್ನೊಂದಕ್ಕೆ ಹೋಗಿ, ಈ ಒಡ್ಡು ಎರಡೂ ಪೊದೆಗಳನ್ನು ಬಳಸಿ ದಡ ಮುಟ್ಟಿದಾಗ ಒಂದು ನೀರಿನ ಆವರಣ ಉಂಟಾಗುತ್ತದೆ – ಇದರೊಳಗಿನ ನೀರು ಖಾಲಿಯಾದಾಗ ಮೀನುಗಳು ಕೆಳಗೆ ಕೆಸರಲ್ಲಿ ಉಳಿದುಕೊಳ್ಳುತ್ತವೆ. ಆಗಿನ ಕಾಲದಲ್ಲಿ, ಇಲ್ಲಿನ ಬಡಜನರಿಗೆ ಇದೊಂದು ಮೀನು ಹಿಡಿಯುವ ವಿಧಾನ.