ಪ್ರಶ್ನೆ: ಅಮ್ಮಾ, ಧ್ಯಾನದಿಂದ ಏಳಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು ?
“ಮಕ್ಕಳೇ, ಧ್ಯಾನ ಮುಗಿದ ಕೂಡಲೇ ತಟ್ಟನೆ ಎದ್ದೇಳುವುದೋ, ಮಾತನಾಡುವುದೋ ಮಾಡಬಾರದು. ಸ್ವಲ್ಪ ಸಮಯ ಶವಾಸನದಲ್ಲಿರುವುದು ಒಳ್ಳೆಯದು. ಆಗ ನಿದ್ದೆ ಬರದಂತೆ ವಿಶೇಷ ಜಾಗ್ರತೆ ವಹಿಸಬೇಕು. ಇಂಜೆಕ್ಷನ್ ಚುಚ್ಚಿದ ಮೇಲೆ ಡಾಕ್ಟರು ಸ್ವಲ್ಪ ಸಮಯ ರೆಸ್ಟ್ ತೆಗೆದುಕೊಳ್ಳಲಿಕ್ಕೆ ಹೇಳುವುದಿಲ್ಲವೇ ? ಅದೇ ತರ ಧ್ಯಾನಾನಂತರ ಏಕಾಂತ ಅವಶ್ಯ. ಸಾಧನೆ ಮಾಡುವಾಗಲ್ಲ; ಅದರ ನಂತರವೇ ಅದರ ಪರಿಣಾಮ ದೊರಕುವುದು.”

ಪ್ರಶ್ನೆ: ಅಮ್ಮಾ, ಎಷ್ಟು ಧ್ಯಾನ ಮಾಡಿಯೂ, ಬಾಹ್ಯ ವಸ್ತುಗಳ ಆಕರ್ಷಣೆ ಇಲ್ಲದಾಗುವುದಿಲ್ಲವಲ್ಲ ?
“ಮಕ್ಕಳೇ, ನಿಮ್ಮಲ್ಲಿ ಭಗವಂತನ ಪ್ರತಿಯಾಗಿ ಸಂಪೂರ್ಣವಾದ ಪ್ರೇಮ ಇದ್ದಲ್ಲಿ, ಪೂರ್ತಿಯಾಗಿ ಮಕ್ಕಳಿಗೆ ವಿಷಯ ವಸ್ತುಗಳು ಅಸಹ್ಯವಾಗಿ ತೋರುವುದು. ಜ್ವರ ಹಿಡಿದು ರೋಗಿಯಾಗಿ ಮಲಗಿರುವ ವ್ಯಕ್ತಿಗೆ, ಸಿಹಿ ಫಲಾಹಾರ ಕೊಟ್ಟರೂ ಅದು ಅವನಿಗೆ ಕಹಿಯೆನಿಸುವುದು. ಹಾಗೆಯೇ, ನಮಗೆ ಭಗವಂತನ ಪ್ರೇಮದ ಜ್ವರ ಬರಬೇಕು. ಆಗ ಬಾಹ್ಯವಸ್ತುಗಳಲ್ಲಿ ಆಕರ್ಷಣೆ ಅನಿಸುವುದಿಲ್ಲ. ನಾಲಿಗೆಯ ರುಚಿ ತ್ಯಜಿಸದೆ ಹೃದಯದ ರುಚಿ ಅರಿಯಲು ಸಾಧ್ಯವಾಗುವುದಿಲ್ಲ.”

ಪ್ರಶ್ನೆ: ಅಮ್ಮಾ, ಬಹಳ ಕಾಲದ ಸಾಧನೆ ಮಾಡಿಯೂ ಅದರ ಪರಿಣಾಮ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
“ಮಕ್ಕಳೇ, ನಾವು ಧ್ಯಾನ ಮಾಡುತ್ತೇವೆ. ತಟ್ಟನೆ ಎದ್ದು ಲೌಕಿಕ ವಿಚಾರ ಮಾತನಾಡಲಿಕ್ಕೆ ತೊಡಗುತ್ತೇವೆ. ಅದು ದಿನವೆಲ್ಲ ಕೆಲಸ ಮಾಡಿ ಸಿಕ್ಕಿದ ಹಣವನ್ನು, ಪೂರ್ತಿ ಹೆಂಡ ಕುಡಿದು ಕಳೆದುಕೊಂಡಹಾಗೆ. ಎಣ್ಣೆ ಹಚ್ಚಿ ತಕ್ಷಣ ಸ್ನಾನ ಮಾಡಿದರೆ ಅದು ಮೈಗೆ ಹಿಡಿಯುವುದಿಲ್ಲವಲ್ಲ ? ಧ್ಯಾನಾನಂತರ ಹತ್ತು ಮಿನಿಟಾದರೂ ಏಕಾಂತತೆ ಸಿಗಬೇಕು. ಅಂದರೆ ಮಾತ್ರವೇ ನಮಗೆ ಅದರ ಪ್ರಯೋಜನ ಲಭಿಸುವುದು. ಹಾಗೆ ಮಾಡದಿರುವ ಕಾರಣ ನಮಗೆ ಅದರ ರುಚಿ ನಮಗೆ ಗೊತ್ತಾಗದೆ ಹೋಗುತ್ತದೆ. ಪಾಯಸದ ಜೊತೆ ಅನ್ನ ಹಾಗೂ ಪಲ್ಯ ಕಲೆಸಿ ತಿಂದರೆ ಪಾಯಸದ ರುಚಿ ಗೊತ್ತಾಗುವುದಿಲ್ಲ. ಆದರೆ ಪಾಯಸ ಅದರ ಒಟ್ಟಿಗೆಯೇ ಇತ್ತಲ್ಲವೇ ? ಮಕ್ಕಳು ಲೌಕಿಕ ಕೆಲಸ ಮಾಡುವವರಲ್ಲವೇ ? ಮನಸ್ಸಿನಲ್ಲಿ ಹೆಚ್ಚಾಗಿ ಪ್ರಾಪಂಚಿಕ ವಿಷಯಗಳೇ ತುಂಬಿ ಕೊಂಡಿರುವ ಕಾರಣ ಸಾಧನೆಯ ಮಹತ್ವ ನಮಗೆ ತಿಳಿಯಲು ಸಾಧ್ಯವಾಗದೆ ಹೋಗುತ್ತದೆ. ಆದರೆ ಅದರ ಪರಿಣಾಮ ಮಕ್ಕಳಲ್ಲಿ ಇದ್ದೇ ಇರುತ್ತದೆ. ಶ್ರದ್ಧೆಯಿಂದ ಸಾಧನೆ ಮಾಡಿದರೆ ಸಾಕು.”

ಪ್ರಶ್ನೆ: ದೇವರು ಎಲ್ಲಾ ಕಡೆ ಇರುವುದಾದರೆ ಯಾಕಾಗಿ ಮಹಾತ್ಮರನ್ನು ಸಂದರ್ಶಿಸಬೇಕು ?
ಮಕ್ಕಳೇ, ಎಲ್ಲಾ ಕಡೆ ಗಾಳಿ ಇದೆ. ಆದರೆ ಬಿಸಿಲಲ್ಲಿದ್ದು ಮರದ ಕೆಳಗೆ ಬಂದು ಮುಟ್ಟಿದ ವ್ಯಕ್ತಿಗೆ, ಎಲೆಗಳಿಂದ ಹಾದು ಬಂದ ಗಾಳಿ ವಿಶೇಷ ತಂಪನ್ನೀಯುದಿಲ್ಲವೇ ? ಇದೇಥರ ಒಬ್ಬ ಮಹಾತ್ಮನ ಬಳಿ ಹೋದಾಗ ವಿಶೇಷ ಶಾಂತಿಯ ಅನುಭವವಾಗುತ್ತದೆ. ಮಕ್ಕಳು ಹೇಳಬಹುದು ಅದಕ್ಕೆ ಬಿಡುವಿಲ್ಲವೆಂದು. ಒಂದು ಹೆಜ್ಜೆ ಭೂಮಿಗಾಗಿ ನಾವು ಎಷ್ಟು ವರ್ಷ ಬೇಕಾದರೂ ಕೋರ್ಟಿನ ಜಗಲಿಯಲ್ಲಿ ಕುಕ್ಕುರುಗಾಲಲ್ಲಿ ಕೂತಿರುವುತ್ತೇವೆ. ಮಳೆಯಾಗಲಿ, ಬಿಸಿಲಾಗಲಿ, ಇತರ ಅಡಚಣೆಗಳಾಗಲಿ ಯಾವುದನ್ನೂ ಗಣಿಸುವುದಿಲ್ಲ. ಭೂಮಿ ಗಳಿಸುವ ಆಸೆ ಅಷ್ಟಿರುವ ಕಾರಣ ಕೇಸು ಹಾಕಲು ಸಮಯ ಹೊಂದಿಸುತ್ತೇವೆ; ಅನಾನುಕೂಲತೆಗಳನ್ನು ಸ್ವೀಕರಿಸುತ್ತೇವೆ. ಅದಕ್ಕೆ ಯಾರೂ ಆಕ್ಷೇಪ ಎತ್ತುವುದಿಲ್ಲ.

ನೆಚ್ಚಿನ ಮಕ್ಕಳೇ, ನಮಗೇನಾದರೂ ರೋಗ ಬಂದಾಗ ಡಾಕ್ಟರರ ಹತ್ತಿರ ಹೋಗುತ್ತೇವೆ. ಆದರೆ ರೋಗವೇ ಬರದಹಾಗೆ ಈ ಪರಿಸರದಲ್ಲಿ ಹೇಗೆ ಜೀವಿಬೇಕೆನ್ನುವುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಕೋಟಿಯಲ್ಲಿ ಒಬ್ಬರು ಮಾತ್ರ ಆ ತರಹ ಚಿಂತಿಸಬಹುದು. ಮಕ್ಕಳೇ ಎಚ್ಚರದಿಂದ ಜೀವನ ಸಾಗಿಸಿದರೆ, ದುಃಖವಿಲ್ಲದೆ ಬಾಳಬಹುದು.

ಪ್ರಶ್ನೆ: ಅಮ್ಮಾ, ಧ್ಯಾನ ಹೇಗೆ ಮಾಡಬೇಕು ?

“ಮಕ್ಕಳೇ, ಧ್ಯಾನ ಅಂತ ನಾವು ಹೇಳುವಂತಿಲ್ಲ. ಧ್ಯಾನವೆನ್ನುವುದು ಅಡೆತಡೆಯಿಲ್ಲದೆ ಒಂದೇ ಕಡೆ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗುವ ಸ್ಥಿತಿ. ಆ ಸ್ತರ ಮುಟ್ಟಲು ನಾವು ಸಾಧನೆ ಮಾಡುತ್ತಿರುವುದು. ಪಾಯಸ ಮಾಡಲು ನಾವು ನೀರನ್ನು ಒಲೆಯಲ್ಲಿಡುತ್ತೇವೆ. ಏನು ಮಾಡುತ್ತೀಯೆಂದು ಯಾರಾದರೂ ಕೇಳಿದರೆ ಹೇಳುತ್ತೇವೆ ಪಾಯಸ ಮಾಡುತ್ತೇನೆಂದು. ಇದೇ ಪ್ರಕಾರ, ಧ್ಯಾನಾವಸ್ಥೆ ತಲಪಲು ಬೇಕಾದ ಅಭ್ಯಾಸ ಬರೇ ಆರಂಭ ಮಾಡಿರುವುದು ಮಾತ್ರ. ಆದರೂ ನಾವು ಹೇಳುತ್ತೇವೆ ಧ್ಯಾನ ಮಾಡುತ್ತೇವೆಂದು. ಈ ಅಭ್ಯಾಸವನ್ನೇ ಸಾಮಾನ್ಯವಾಗಿ ಸಾಧನೆಯೆಂದು ಹೇಳುವುದು.”

ಪ್ರಶ್ನೆ: ಸಾಧನೆಯಲ್ಲಿ ಏಕಾಗ್ರತೆ ಬರುತ್ತಿಲ್ಲ. ಅದು ಏಕೆ, ಅಮ್ಮಾ ?

“ಮಕ್ಕಳೇ, ಹಿಂದೆ ನಾವು ಶರೀರವು ನಿತ್ಯವೆಂದು ಭಾವಿಸಿ ಜೀವಿಸಿದೆವು. ಅದಕ್ಕಾಗಿ ಮಾತ್ರ ಪ್ರಯತ್ನಿಸಿದೆವು. ಆ ಸ್ವಭಾವಗಳು ನಮ್ಮೊಳಗೆ ಇನ್ನೂ ಇದ್ದಾವೆ. ಈಗ ಆತ್ಮವು ನಿತ್ಯವೆಂದು ತಿಳಿದುಕೊಂಡು ಸಾಧನೆ ನಡೆಸುವಾಗ ಆ ಸ್ವಭಾವಗಳು ನಮ್ಮನ್ನು ಕಾಡುತ್ತವೆ. ಅದು ಯಾಕೆಂದರೆ, ಹತ್ತು ದಿವಸ ಶಾಯಿ ಬಾಟಲನ್ನು ನಾವು ಬಲಗಡೆಗೆ ಇಟ್ಟು ಬರೆಯುತ್ತೇವೆ. ಹನ್ನೊಂದನೆಯ ದಿವಸ ಅದನ್ನು ತೆಗೆದು ಎಡಗಡೆಗೆ ಇಟ್ಟೆವು. ಮನಸ್ಸಿಗೆ ಗೊತ್ತಿದೆ ಶಾಯಿ ಬಾಟಲು ಎಡಗಡೆಗೆ ಸರಿಸಿಟ್ಟಿದ್ದೇವೆಂದು. ಆದರೆ ಕೈ ಮೊದಲು ಶಾಯಿ ಬಾಟಲಿದ್ದ ಕಡೆ ಹೋಗುವುದು. ಅದೇರೀತಿ, ಹಿಂದಿನ ಸ್ವಭಾವಗಳು ನಮ್ಮನ್ನು ಜಗಿದು ತಿನ್ನುತ್ತವೆ. ಮಕ್ಕಳು ಕಳವಳಗೊಳ್ಳದೆ ಪ್ರಯತ್ನ ಮುಂದುವರಿಸಿರಿ.

ಸೈಕಲ್ಲು ತುಳಿಯಲು ಕಲಿಯುವ ಹುಡುಗ ಎಷ್ಟು ಸಾರಿ ಬಿದ್ದರೂ ಪುನಃ ಪ್ರಯತ್ನ ಮಾಡುತ್ತಾನೆ. ಅವನ ದೇಹಕ್ಕೆ ಗಾಯಗಳಾದರೂ ಅವನದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ. ಸೈಕಲ್ ಕಲಿಯಬೇಕೆಂಬ ಲಕ್ಷ್ಯಬೋಧ (ಗುರಿಯ ಬಗ್ಗೆ ಎಚ್ಚರ) ಅವನಿಗಿದೆ. ಹಾಗೆಯೇ, ಸಾಧನೆ ತೊಡಗಿದಾಗ ಮೊದಲು ಸ್ವಲ್ಪ ತೊಂದರೆ ಅನುಭವಕ್ಕೆ ಬರುತ್ತದೆ. ನಿರಂತರವಾದ ಅಭ್ಯಾಸದಿಂದ ನಂತರ ಅದು ಬಹಳ ಸುಲಭವಾಗುತ್ತದೆ. ಅದು ಹೇಗೆಂದರೆ, ನಿಪುಣ ಕಮ್ಮಾರನೊಬ್ಬ ದಿವಸಕ್ಕೆ ಹತ್ತು ಕತ್ತಿಗಳನ್ನು ಮಾಡುತ್ತಾನೆ. ಆದರೆ ಆರಂಭದಲ್ಲಿ ಒಬ್ಬನಿಗೆ ಒಂದು ಕತ್ತಿ ಸಹ ಪೂರ್ತಿ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಅವನು ಆ ಕೆಲಸ ಬಿಟ್ಟು ಹೋಗುವುದಿಲ್ಲ. ಅದು ಅವನ ಜೀವನದ ದಾರಿಯೆಂದು ಭಾವಿಸಿ, ಮತ್ತೆ ಮತ್ತೆ ಪ್ರಯತ್ನಿಸಿ, ಅದರಲ್ಲಿ ಗೆಲುವು ಸಾಧಿಸುತ್ತಾನೆ. ಇದೇರೀತಿ ಪೂರ್ತಿ ಸಮಯ ಏಕಾಗ್ರತೆಯಿರುವ ಕಾಲ ಬರುವುದು. ಮಕ್ಕಳು ಇನ್ನೂ ಪ್ರಯತ್ನಿಸಿರಿ.”

ಪ್ರಶ್ನೆ: ಯಾವ ರೂಪದ ಮೇಲೆ ಧ್ಯಾನ ಮಾಡಬೇಕು ? ಯಾವ ರೂಪವೂ ಆಗುತ್ತದೆಯೇ ?

“ಮಕ್ಕಳ ರಕ್ತದ ಜೊತೆ ಸೇರಿಕೊಂಡಿರುವ, ಪೂರ್ವಜನ್ಮದ ಸಂಬಂಧವಿರುವ ದೇವತೆ ಇರುವುದು.
ಆ ದೇವತೆಯ ರೂಪಧ್ಯಾನ ಮಾಡಿದರೆ ಸಾಕು.”

ಪ್ರಶ್ನೆ: ಅದು ಹೇಗೆ ತಿಳಿದುಕೊಳ್ಳಲು ಸಾಧ್ಯ ?

“ಎಲ್ಲಾದರೂ ಬೀಳುವಾಗ “ಹೇ ಕೃಷ್ಣಾ” ಎಂದು ಕೂಗುವವರನ್ನು ನೋಡಿರ ಬಹುದು. ಕೃಷ್ಣನಲ್ಲಿ ಹೆಚ್ಚಿನ ಆಕರ್ಷಣೆ ಇರುವವರ ಹಿಂದಿನ ಜನ್ಮದ ಇಷ್ಟದೇವತೆ ಕೃಷ್ಣನಾಗಿರುತ್ತಾನೆ. ಆಗ ಅವರು ದೇವಿಯ ಮೆಲೆ ಧ್ಯಾನ ಮಾಡಬೇಕಾಗಿಲ್ಲ. ಕೃಷ್ಣನ ಮೇಲೆ ಧ್ಯಾನ ಮಾಡಿದರೆ ಸಾಕು. ಗಣಿತದಲ್ಲಿ ಬಹಳ ಗಟ್ಟಿ; ನೂರಕ್ಕೆ ನೂರು ಮಾರ್ಕು ಸಿಗುತ್ತದೆ ಆದರೆ ಜೀವಶಾಸ್ತ್ರದಲ್ಲಿ ತುಂಬ ಹಿಂದೆ. ಅವನು ಹತ್ತನೇ ಕ್ಲಾಸಿನ ನಂತರ ಅವನು ಫರ್ಸ್ಟ್ ಗ್ರೂಪು ಆಯ್ಕೆ ಮಾಡಬೇಕು ಓದಲಿಕ್ಕೆ. ಸೆಕಂಡ್ ಗ್ರೂಪು ತೆಗೆದುಕೊಂಡರೆ ಅವನೊಂದು ಹೊಸ ಸಂಸ್ಕಾರ ಬೆಳೆಸಿಕೊಳ್ಳಬೇಕಾಗಿ ಬರುತ್ತದೆ. ರೂಪ ಧ್ಯಾನ ಮಾಡುವುದೂ ಈ ಪ್ರಕಾರವಾಗಿರುತ್ತದೆ. ಕೃಷ್ಣನರೂಪ ಇಷ್ಟರವರೆಗೆ ಧ್ಯಾನ ಮಾಡುತ್ತಿದ್ದರೆ, ಅದೇ ಮುಂದುವರೆಸಿದರೆ ಸಾಕು. ಅದರಲ್ಲೇ ಎಲ್ಲಾ ಇದೆ ಎಂದು ಸಂಕಲ್ಪಿಸಿಕೊಳ್ಳಬೇಕು. ದೇವಿ ರೂಪವನ್ನು ಧ್ಯಾನ ಮಾಡುತ್ತಿದ್ದರೆ ಮುಂದೆಯೂ ದೇವಿಯನ್ನೇ ಧ್ಯಾನ ಮಾಡಿರಿ. ಯಾವ ದೇವಸ್ಥಾನ ಹೋದರೂ ಅಲ್ಲಿ ಇಷ್ಟದೇವತೆಯನ್ನು ಕಾಣಿರಿ. ನಿಮ್ಮ ತಾಯಿಯನ್ನು ತಾಯಿಯ ತಮ್ಮ “ಅಕ್ಕಾ” ಎಂದು ಕರೆದರೆ ನಿಮಗೆ ತಾಯಿಯಲ್ಲ ಎಂದಾಗುವುದಿಲ್ಲವಲ್ಲ ? ಒಬ್ಬೊಬ್ಬರಿಗೂ ಒಂದೊಂದು ಭಾವನೆ. ಅವರವರ ಭಾವನೆಯನ್ನನುಸರಿಸಿ ದೇವರನ್ನು ಕರೆಯಬಹುದು.

ಕಥಕಳಿಯಲ್ಲಿ ಒಬ್ಬನೇ ವ್ಯಕ್ತಿ ಹಲವಾರು ವೇಷ ಹಾಕಿ ಅಭಿನಯಿಸುವುದಿಲ್ಲವೇ. ವೇಷ ಬೇರೆ ಬೇರೆಯಾದರೂ ವ್ಯಕ್ತಿ ಬೇರೆಯಾಗುತ್ತಾನೆಯೇ. ಇಲ್ಲ. ಸಿನೆಮದಲ್ಲಿ ಒಬ್ಬನೇ ನಟ ಎಷ್ಟೆಲ್ಲ ಪಾತ್ರಗಳಲ್ಲಿ ನಟಿಸುತ್ತಾನೆ ? ಆದರೆ ಆ ನಟನು ಬದಲಾಗುವುದಿಲ್ಲ. ಯಾವ ರೂಪವನ್ನೂ ಸ್ವೀಕರಿಸಲು ಸಾಧ್ಯ; ಆದರೆ ದೇವರು ಬದಲಾಲಾಗುವುದಿಲ್ಲ. ದೇವಿಯ ಭಕ್ತರು ಕೃಷ್ಣನ ದೇವಾಲಯಕ್ಕೆ ಹೋದಾಗಲೂ “ನನ್ನ ದೇವೀ” ಎಂದು ಕರೆದರೆ ಸಾಕು. ಆತ್ಮ ಒಂದೇ ಅಲ್ಲವೇ ? ದೇವಿ ರೂಪದಲ್ಲಾಗಲೀ, ಕೃಷ್ಣನ ರೂಪದಲ್ಲಾಗಲೀ, ಚೈತನ್ಯವಾಗಿ ನೆಲೆಸಿರುವುದು ಒಂದೇ. ನಮ್ಮ ನಮ್ಮ ಭಾವನೆಯನ್ನನುಸರಿಸಿ ದೇವರು ದರ್ಶನ ಕೊಡುತ್ತಾನೆ. ಹುಲ್ಲಾಗಿ ದೇವರನ್ನು ಭಾವಿಸಿದರೆ, ದೇವರು ನಮಗೆ ಅದೇ ರೂಪದಲ್ಲಿ ದರ್ಶನ ಕೊಡುವನು. ಕಲ್ಲಾದರೆ ಕಲ್ಲಾಗಿ, ಇನ್ನೇನಾದರೆ ಅದಾಗಿ. ಯಾವ ರೂಪದಲ್ಲೂ ಭಾವಿಸಬಹುದು. ಆದರೆ ಮಾತ್ರ ನಮಗೆ ವಿಶ್ವಾಸವಿರಬೇಕು.

ಯಾವ ಅಚ್ಚಿನಲ್ಲಿ ಮಣ್ಣು ತುಂಬಿಸುತ್ತೇವೋ, ಆ ರೂಪದ ಮೂರ್ತಿ ದೊರಕುವುದು. ಅದರರ್ಥ, ಮಣ್ಣಿಗೆ ತನ್ನದೇ ಆದ ರೂಪವಿಲ್ಲ. ಯಾವ ಬಣ್ಣದ ಗಾಜಿನ ಹೂಜೆಯಲ್ಲಿ ನೀರಿಡುತ್ತೇವೋ, ಆ ಬಣ್ಣ ನೀರಿಗಿದೆಯೆಂದು ಕಂಡರೂ, ನೀರಿಗೆ ಬಣ್ಣವಿಲ್ಲ, ಅಲ್ಲವೇ ?”

ಪ್ರಶ್ನೆ: ಅಮ್ಮಾ, ಇಷ್ಟರೂಪವನ್ನು ಎಲ್ಲಿಟ್ಟುಕೊಂಡು ಧ್ಯಾನ ಮಾಡಬೇಕು ?

“ಮಕ್ಕಳೇ, ಇಷ್ಟದೇವತೆಯನ್ನು ಹೃದಯಕಮಲದಲ್ಲೋ ಭ್ರೂಮಧ್ಯದಲ್ಲೋ ಇಟ್ಟುಕೊಂಡು ಧ್ಯಾನ ಮಾಡಬಹುದು. ಗೃಹಸ್ಥರು ಹೃದಯಕಮಲದಲ್ಲಿ ಧ್ಯಾನ ಮಾಡುವುದು ಉತ್ತಮ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವುದೂ ಉತ್ತಮವೇ. ಆದರೆ ಅದು ಗುರುವಿನ ಮಾರ್ಗದರ್ಶನ ಇದ್ದರೆ ಮಾತ್ರ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವಾಗ ಕೆಲವರಿಗೆ ತಲೆ ಬಿಸಿಯಾಗುವುದೋ, ನಿದ್ದೆ ತೀರ ಇಲ್ಲದಾಗುವುದೋ ಆಗಬಹುದು. ಇದು ರೋಗವೆಂದು ತಪ್ಪು ಅಭಿಪ್ರಾಯ ಉಂಟಾಗಬಹುದು. ಆದಕಾರಣ ಗುರುವಿಲ್ಲದೆ ಧ್ಯಾನ ಮಾಡುವವರು ವಿಶೇಷ ಜಾಗ್ರತೆ ವಹಿಸಬೇಕು.”

ಪ್ರಶ್ನೆ: ಅಮ್ಮಾ, ಎಷ್ಟು ಸಮಯ ಧ್ಯಾನ ಮಾಡಬೇಕು ?

“ಮಕ್ಕಳೇ, ಆರಂಭದಲ್ಲಿ ಹತ್ತು ನಿಮಿಷಗಳಿಂದ ಅರ್ಧ ಗಂಟೆಯವರೆಗೆ ಧ್ಯಾನ ಮಾಡಿದರೆ ಸಾಕು. ಪೂರ್ಣವಾಗಿ ಆಧ್ಯಾತ್ಮಿಕ ಜೀವನ ನಡೆಸುವ ಸಾಧಕನನ್ನುದ್ದೇಶಿಸಿ ಅಲ್ಲ ಅಮ್ಮ ಹೇಳುತ್ತಿರುವುದು. ಲೌಕಿಕ ಜೀವನ ನಡೆಸುವವರು ಮತ್ತು ಉದ್ಯೋಗಕ್ಕೆ ಹೋಗುವ ಗೃಹಸ್ಥ ಮಕ್ಕಳ ವಿಷಯ ಅಮ್ಮ ಹೇಳುತ್ತಿರುವುದು. ಗುರುವಿನ ಮಾರ್ಗದರ್ಶನವಿದ್ದರೆ ಹೆಚ್ಚು ಧ್ಯಾನ ಮಾಡಬಹುದು. ಆರಂಭದಲ್ಲಿ ಲೆಕ್ಕಕ್ಕಿಂತ ಹೆಚ್ಚು ಧ್ಯಾನ ಮಾಡಬಾರದು. ಹೊಸದಾಗಿ ಕೊಂಡುಕೊಂಡ ಬಸ್ಸನ್ನು ಫುಲ್ ಸ್ಪೀಡ್ನಲ್ಲಿ ಓಡಿಸುವುದಿಲ್ಲ ಅಲ್ಲವೇ ? ಯಂತ್ರದ ಭಾಗಗಳು ಸ್ವಲ್ಪ ಸಡಿಲಾದ ಮೇಲೆ ಹೆಚ್ಚು ಸ್ಪೀಡಲ್ಲಿ ಓಡಿಸಬಹುದು.

ಔಷಧಿಯು ರೋಗ ಗುಣಪಡಿಸಲಿಕ್ಕೆ ಇದ್ದರೂ, ಅದನ್ನು ಸೇವಿಸುವ ಒಂದು ಕ್ರಮ ಇದೆ. ಅದು ಮಿತಿ ಮೀರಿ ಸೇವಿಸಿದರೆ ಬೇರೆ ರೋಗಗಳು ಬಂದೀತು.”

ಪ್ರಶ್ನೆ: ಅಮ್ಮಾ, ಧ್ಯಾನ ಹೇಗೆ ಆರಂಭಿಸಬೇಕು ?

“ಹೃದಯದಲ್ಲಿ ಇಷ್ಟದೇವತೆಯನ್ನು, ಪಾದದಿಂದ ಹಿಡಿದು ಶಿರಸ್ಸಿನವರೆಗೆ, ಶಿರಸ್ಸಿನಿಂದ ಪಾದದವರೆಗಿರುವ ಒಂದೊಂದು ಅಂಗವನ್ನು ಧ್ಯಾನಿಸಿ ಸ್ಥಿರೀಕರಿಸಬೇಕು. ಕೃಷ್ಣನ ರೂಪವನ್ನು ಧ್ಯಾನಿಸುವವರು ಭಗವಂತನ ಪಾದ, ಕಾಲಂದಿಗೆ, ಮೊಣಕಾಲು, ಪೀತಾಂಬರ, ಕೈ ಬಳೆಗಳು, ಕೈಯಲ್ಲಿ ಬಿದಿರಿನ ಕೊಳಲು, ವನಮಾಲೆ, ಕಿವಿಯಲ್ಲಿ ಕುಂಡಲಗಳು, ತುಟಿಗಳು, ಕಣ್ಣುಗಳು, ಕಿರೀಟ, ನವಿಲುಗರಿಯ ಮೇಲೆ ಧ್ಯಾನ ಮಾಡಬೇಕು. ಪುನಃ ನವಿಲುಗರಿಯಿಂದ ಹಿಡಿದು ಕೆಳಗೆ ಪಾದದವರೆಗೆ ಧ್ಯಾನ ಮಾಡಿ.

ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಮಾಡುವ ಹಾಗೆ ಇಷ್ಟದೇವತೆಗೆ ಮೊದಲು ನೀರಿನಿಂದ ಅಭಿಷೇಕ ಮಾಡುವುದಾಗಿ ಸಂಕಲ್ಪಿಸಿ. ಇದೇ ರೀತಿಯಾಗಿ ಹಾಲು, ಗಂಧ, ಭಸ್ಮ, ಪುಷ್ಪ ಇವು ಒಂದೊಂದರಿಂದಲೂ ಅಭಿಷೇಕ ಮಾಡುವುದಾಗಿಯೂ ವಸ್ತ್ರಾಭರಣಗಳಿಂದ ಅಲಂಕರಿಸುವುದಾಗಿಯೂ ಭಾವಿಸಿ. ಆನಂತರ ಮನಃಪೂರ್ವಕವಾಗಿ ಕರ್ಪೂರದಾರತಿ ಮಾಡಿದಂತೆಯೂ, ಭಗವಾನ್ ಓಡಿ ಹೋಗುತ್ತಿದ್ದಂತೆಯೂ, ತಾನು ಯಶೋಧೆಯಾಗಿ ಹಿಡಿಯಲು ಓಡುತ್ತಿರುವಂತೆಯೂ ಕಲ್ಪನೆ ಮಾಡಿಕೊಳ್ಳಬಹುದು. ಇಷ್ಟದೇವತೆಯನ್ನು ಸ್ತುತಿಸುವ ಮಂತ್ರಗಳನ್ನೋ, ಶ್ಲೋಕಗಳನ್ನೋ ಆಂತರ್ಯದಲ್ಲಿ ಜಪಿಸಿಕೊಂಡಿರುವುದೂ ಒಳ್ಳೆಯದು. ಹೃದಯವನ್ನು ಇಷ್ಟದೇವತೆಯೊಂದಿಗೆ ಹಂಚಿ ಕೊಳ್ಳಿ; “ಭಗವಂತ ! ನೀನೆಲ್ಲಿ” ಎಂದು ಕೇಳುತ್ತಿರಿ.

ಪ್ರಶ್ನೆ: ಮಾತುಗಳಿಂದ ಮನುಷ್ಯನ ಸ್ವಭಾವ ಬದಲಿಸಲು ಸಾಧ್ಯವೇ ?

“ಖಂಡಿತವಾಗಿಯೂ ಸಾಧ್ಯ. ಮಕ್ಕಳೇ, ಒಮ್ಮೆ ಒಂದು ದೇವಾಲಯದಲ್ಲಿ ಒಬ್ಬ ಬ್ರಾಹ್ಮಣನು ಕೆಲವು ಹುಡುಗರಿಗೆ ಆಧ್ಯಾತ್ಮಿಕ ಕಲಿಸುತಿದ್ದನು. ಆಗ ಆ ರಾಜ್ಯದ ರಾಜನು ಅಲ್ಲಿ ಬಂದು ಮುಟ್ಟಿದ. ಮಕ್ಕಳಿಗೆ ಕಲಿಸುವುದರಲ್ಲೇ ಮಗ್ನನಾಗಿದ್ದ ಬ್ರಾಹ್ಮಣನಿಗೆ ರಾಜನು ಬಂದದ್ದು / ಬಂದಿರುವುದು ಗೊತ್ತಾಗಲಿಲ್ಲ. ರಾಜನಿಗೆ ಕೋಪ ಬಂದು ಬ್ರಾಹ್ಮಣನಲ್ಲಿ ಕೇಳಿದ, “ಯಾಕಾಗಿ ನಾನು ಬಂದಾಗ ನೀವು ಗಮನಿಸದಿರುವುದು ?” “ನಾನು ಮಕ್ಕಳಿಗೆ ಓದಿಸುತ್ತಾ ಇದ್ದೆ. ಹಾಗಾಗಿ ತಾವು ಬಂದಿದ್ದು ನೋಡಲಿಲ್ಲ,” ಎಂದು ಬ್ರಾಹ್ಮಣನು ಉತ್ತರಿಸಿದನು. ರಾಜನು ಕೇಳಿದ “ನಾನು ಬಂದರೂ ನೋಡಲಾಗದಿರುವಂಥ ಅದು ಏನು ಕಲಿಸುತ್ತಾ ಇದ್ದಿರಿ ?” ಬ್ರಾಹ್ಮಣನು ಹೇಳಿದ, “ನಾನು ಎಳೆಯರಿಗೆ ಒಳ್ಳೆಯ ವಿಷಯಗಳನ್ನು ಕುರಿತು ಕಲಿಸುತ್ತಾ ಇದ್ದೆ.”
ರಾಜ: “ಅದು ಯಾವ ಒಳ್ಳೆಯ ವಿಷಯಗಳು ?”
ಬ್ರಾಹ್ಮಣನು: “ಒಳ್ಳೆಯ ಸ್ವಭಾವ ಬೆಳೆಸುವ ಬಗೆಯನ್ನು.”
ರಾಜ: “ಮಾತುಗಳಿಂದ ಸ್ವಭಾವ ಬದಲಾಗುವುದೇ ?”
ಬ್ರಾಹ್ಮಣನು: “ನಿಶ್ಚಯವಾಗಿಯೂ ಬದಲಾಗುತ್ತದೆ.”
ರಾಜ: “ಹಾಗೇನೂ ಬದಲಾಗುವುದಿಲ್ಲ.”
ಆಗ ಆ ಬ್ರಾಹ್ಮಣನ ಶಿಷ್ಯರ ಗುಂಪಿನಲ್ಲಿದ್ದ ಒಬ್ಬ ಚಿಕ್ಕ ಹುಡುಗ ಎದ್ದು, ರಾಜನಿಗೆ ಅಲ್ಲಿಂದ ಹೊರಟು ಹೋಗಲು ಹೇಳಿದ. ಅದು ಕೇಳಿದ ತಕ್ಷಣ ರಾಜ ಕೋಪಾವಿಷ್ಟನಾಗಿ ಹೇಳುತ್ತಾನೆ, “ನೀನು ಅಷ್ಟಕ್ಕಾದಿಯೋ ? ನಿನ್ನನ್ನು ನಾನಿವತ್ತು ಸಾಯಿಸುತ್ತೇನೆ. ನಿನ್ನ ಗುರುವನ್ನೂ ಸಾಯಿಸುತ್ತೇನೆ. ಈ ಆಶ್ರಮವನ್ನೂ ನಾಶ ಮಾಡುತ್ತೇನೆ.” ಹೀಗೆ ಹೇಳುತ್ತಾ ಅವನು ಬ್ರಾಹ್ಮಣನ ಕತ್ತು ಹಿಡಿಯಲು ಹೊರಟನು. ಆಗ ಬ್ರಾಹ್ಮಣನು ಹೇಳುತ್ತಾನೆ, “ತಾವು ನನ್ನನ್ನು ಕ್ಷಮಿಸಬೇಕು; ತಾವಲ್ಲವೇ ಹೇಳಿದ್ದು ಮಾತುಗಳಿಂದ ಸ್ವಭಾವ ಬದಲಾಯಿಸಲು ಸಾಧ್ಯವಿಲ್ಲವೆಂದು. ಒಂದು ಹುಡುಗ ತಮಗೆ ಐದಕ್ಷರ ಹೇಳಿದಾಗ ತಮ್ಮ ಸ್ವಭಾವ ಸಾಮಾನ್ಯ ಮಟ್ಟದಿಂದ ಎಷ್ಟು ಮಟ್ಟಿಗೆ ಬದಲಾಯಿತು ! ಎಲ್ಲ ನಾಶ ಮಾಡಲೂ ನನ್ನನ್ನು ಕೊಲ್ಲಲೂ ತಾವು ತಯಾರಾಗಲಿಲ್ಲವೇ ?”

ಮಕ್ಕಳೇ, ಈ ಪ್ರಕಾರ ಮಾತುಗಳಿಂದ ಸ್ವಭಾವ ಬದಲಾಯಿಸಲು ಸಾಧ್ಯವಿದೆ. ಮಂತ್ರ ಜಪದಿಂದ ಮನುಷ್ಯನ ಸ್ವಭಾವ ಒಳ್ಳೆಯದಾಗುತ್ತದೆ.

ಪ್ರಶ್ನೆ: ಮಂತ್ರ ಜಪಿಸಿದರೆ ಫಲ ಸಿದ್ಧಿಸುವುದೋ ?

“ನಿಶ್ಚಯವಾಗಿಯೂ ಮಕ್ಕಳೇ. ಆದರೆ ಒಂದು ಮಾತು. ಏಕಾಗ್ರತೆಯಿಂದ, ಭಕ್ತಿಯೊಡಗೂಡಿ ಜಪಿಸಬೇಕು. ಆ ಭಾವಕ್ಕನುಗುಣವಾಗಿ ನಮಗೆ ಶಕ್ತಿ ದೊರಕುವುದು. ಮುಖ್ಯವಾದದ್ದು ಮನೋಭಾವ.

ಒಬ್ಬ ಡಾಕ್ಟರು ನಮಗೆ ಮದ್ದು ಕೊಟ್ಟು, “ಈ ಮದ್ದು ಸೇವಿಸುವಾಗ ದೇಹಕ್ಕೆ ವಿಶ್ರಾಂತಿ ಅಗತ್ಯ. ಅಲ್ಲದೆ ಕೆಲವು ಆಹಾರವಸ್ತುಗಳನ್ನು ತಿನ್ನಬಾರದು.” ಎಂದೆಲ್ಲ ಹೇಳುತ್ತಾನೆ. ಅದನ್ನನುಸರಿಸುತ್ತೇವೆ; ನಮ್ಮ ರೋಗ ವಾಸಿಯಾಗುತ್ತದೆ. ಹೀಗೆಯೇ, ಋಷಿಶ್ರೇಷ್ಟರು ಯುಗ ಯುಗ ಪರ್ಯಂತ ತಪಸ್ಸು ಮಾಡಿ, ಪ್ರಪಂಚವನ್ನು, ಒಂದು ಸಾಸಿವೆಕಾಳನ್ನು ತಮ್ಮ ಉಗುರಿನಡಿಯಲ್ಲಿಟ್ಟುಕೊಂಡಂತೆ ಮಾಡಿದವರು. ಒಂದು ನಿರ್ಜೀವ ಹಲಗೆಗೆ ಸಹ ಅವರು ’ಹಾರು’ ಎಂದು ಹೇಳಿದರೆ ಅದು ಹಾರುವುದು. ಅವರೇ ಮಂತ್ರ ದೃಷ್ಟಾರರು. ಅವರು ಹೇಳಿರುತ್ತಾರೆ ಇಂಥದ್ದೇ ಮಂತ್ರ ಜಪಿಸಿದರೆ ಇಂಥದ್ದೇ ಫಲ ಕೊಡುವುದೆಂದು. ಹಾಗೆಯೇ ಮಾಡಿದರೆ ನಿಶ್ಚಯವಾಗಿಯೂ ಫಲ ಸಿದ್ಧಿಸುತ್ತದೆ.

ನಮಗೆ ಸದಾ ದುಃಖ ಮಾತ್ರವೇ ಇರುವುದು. ನಿತ್ಯಾನಿತ್ಯ ಏನೆಂಬುದರ ಅರಿವಿಲ್ಲದಿರುವುದರಿಂದ, ನಮ್ಮ ಆಸೆಗಳು ಶಾಶ್ವತವಾದವುಗಳಿಗೆ ಅಲ್ಲವಾದ್ದರಿಂದ ನಾವು ಹೀಗೆ ದುಃಖಿಗಳಾಗಿದ್ದೇವೆ. ಈ ದುಃಖದಿಂದಾಗಿ ಉರಿದುರಿದು ನಾವು ರೋಗಿಗಳಾಗುತ್ತೇವೆ; ನಮ್ಮ ಆಯುಷ್ಯವೂ ಕ್ಷೀಣಿಸುತ್ತದೆ.

ಪ್ರೀತಿಯ ಮಕ್ಕಳೇ, ನಮ್ಮ ಕೆಲಸಗಳನ್ನು ನಾವು ಚೆನ್ನಾಗಿ ಮಾಡುತ್ತಿರುತ್ತೇವೆ. ಎಲ್ಲಿ ಹೋದರೂ ಅಲ್ಲಿಯ
ದೋಷಗಳನ್ನು, ಕುಂದು ಕೊರತೆಗಳನ್ನು ನಾವು ಕಂಡು ಹಿಡಿಯುತ್ತೇವೆ; ನಮ್ಮ ಮನಸ್ಸು ಅಸ್ವಸ್ಥವಾಗುತ್ತದೆ.
ಈ ದೃಷ್ಟಿಕೋನವಲ್ಲ ನಮಗೆ ಬೇಕಾಗಿರುವುದು. ಒಂದು ಕಡೆ ಏನು ಕಾಣಲಿಲ್ಲ ಎಂಬುದನ್ನು ಮರೆತು, ನಮಗೆ
ಬೇಕಾದದ್ದು ಅಲ್ಲಿ ಏನಿದೆ ಎನ್ನುವುದನ್ನು ನೋಡಿ ಅದನ್ನು ಮಾತ್ರ ಸ್ವೀಕರಿಸಬೇಕು. ನಮ್ಮಲ್ಲಿರುವುದಕ್ಕಿಂತಲೂ
ಯಾವ ಗುಣ ಹೆಚ್ಚು ಅಲ್ಲಿದೆ ಎಂದು ಮಾತ್ರವೇ ಮಕ್ಕಳು ನೋಡಿದರೆ ಸಾಕು. ಈ ರೀತಿಯಾಗಿ ನಾವು ಸದಾ ಒಳಿತನ್ನು ಕಾಣಬೇಕು. ಮಕ್ಕಳೇ, ಆಗ ನಾವು ಒಳ್ಳೆಯವರಾಗುತ್ತೇವೆ.

ಹಳೇ ಕಾಲದಲ್ಲಿ ಎಲ್ಲರೂ ಗುರುಕುಲದಲ್ಲಿದ್ದು ಗುರುಕುಲ ವಿದ್ಯಾಭ್ಯಾಸ ಮಾಡುತ್ತಿದ್ದರು. ಅದರ ಫಲವಾಗಿ ಜೀವನವೆಂದರೇನಂತಲೂ, ಹೇಗೆ ಜೀವಿಸಬೇಕೆಂದೂ, ಲೋಕದಲ್ಲಿ ಹೇಗೆ ವ್ಯವಹರಿಸಬೇಕೆಂದೂ ಅವರರಿತುಕೊಂಡಿದ್ದರು. ತನ್ಮೂಲಕ ಅವರು ಆನಂದಮಯರಾದರು. ಧೃಡಚಿತ್ತರಾಗಿ, ಮರಣಭಯ ತೊರೆದು, ಸತ್ಯಕ್ಕಾಗಿ ಜೀವನವನ್ನು ಧಾರೆಯೆರೆಯಲು ಕಂಕಣಬದ್ಧರಾದರು. ಆರೋಗ್ಯವಂತರೂ, ದೀರ್ಘಾಯುಷಿಗಳೂ, ಆಜಾನುಬಾಹಿಗಳೂ, ಒಳ್ಳೆ ಸಿಂಹಮರಿಗಳೂ ಆಗಿದ್ದರು ಅವರು. “ಹೇಗೆ ಇತರರೆಲ್ಲರನ್ನೂ ಕೊಳ್ಳೆ ಹೊಡೆಯುವುದು” ಎನ್ನುವ ಚಿಂತೆ ಅವರಿಗೆ ಇಲ್ಲವಾಗಿತ್ತು. ಕೋರ್ಟೋ, ಸಿನೆಮ ಥೇಟರೋ, ವಿಡಿಯೊ ಸಿಸ್ಟಮೋ ಅಂತ ಏನೂ ಅವತ್ತು ಇರಲಿಲ್ಲ. ಅವತ್ತು ಜನರು ಸಾಯಂಕಾಲ ದೀಪ ಹಚ್ಚಿ, ನಾಮ ಜಪಿಸುತ್ತಿದ್ದರು. ನಾಮಜಪದ ನಂತರ ತಾವು ಅವತ್ತು ಮಾಡಿದ ತಪ್ಪುಗಳನ್ನು ನೆನೆದು ಪಶ್ಚಾತ್ತಾಪ ಪಡುತ್ತಿದ್ದರು. ಅದು ಅವರಿಗೆ ಸಾಂತ್ವನವನ್ನೂ, ಶಾಂತಿಯನ್ನೂ ನೀಡುತ್ತಿತ್ತು.

ಇವತ್ತೋ ? ಕಾಲ ಬದಲಾಗಿದೆ. ಸಾಯಂಕಾಲವಾದರೆ ಟೀ.ವೀ.ಯ ಎದುರಿಗೆ ಕೂತು, ವಿಡಿಯೋ ಕ್ಯಾಸೆಟ್ಟ್ ಹಾಕಿ ಸಿನೆಮ ನೋಡುತ್ತಾರೆ. ಬೇರೆಯವರನ್ನು ಕೊಂದು ಹೇಗೆ ಅವರ ಹಣ ಲಪಟಾಯಿಸುವುದು ಎಂದು ಚಿಂತಿಸುತ್ತಾರೆ. ಸ್ವಂತ ತಾಯಿಯನ್ನು ಕೂಡಾ ಹಣಕ್ಕಾಗಿ ಕೊಲ್ಲಲು ಹೇಸುವುದಿಲ್ಲ. ಇದು ಇವತ್ತಿನ ಪ್ರಪಂಚ. ಆದರೆ ಶಾಂತಿಯಿದೆಯೇ ? ಎಲ್ಲೂ ಶಾಂತಿಯಿಲ್ಲ. ಗಾಂಜ, ಸರಾಯಿ, ನಿದ್ದೆಗುಳಿಗೆ ಇದೆಲ್ಲ ಇವತ್ತಿನವರ ದೇವರು. ಇದಿಲ್ಲದಿದ್ದರೆ ಇವರಿಗೆ ಜೀವಿಸಲು ಅಸಾಧ್ಯ. ಅದೆಲ್ಲದ್ದಕ್ಕೆ ಗುಲಾಮರಾಗಿ ಇವರ ಬಾಳು ನಾಶವಾಗುತ್ತದೆ. ಮಾತ್ರವಲ್ಲ, ಇನ್ನಿತರರಿಗೂ ಇವರು ಉಪದ್ರವವಾಗುತ್ತಾರೆ. ಇವತ್ತು ಮೂರು ವಯಸ್ಸು ದಾಟದ ಮಕ್ಕಳು “ಇನ್‌ಕ್ವಿಲಾಬ್ ಜಿಂದಾಬಾದ್” ಎಂದು ಕೂಗುತ್ತಾರೆ. ತನ್ನ ಪಾರ್ಟಿಯವನಲ್ಲದಿದ್ದರೆ ಅವನನ್ನು ಕೊಲ್ಲುತ್ತೇನೆ ಎಂದೆನ್ನುತ್ತಾರೆ. ಶಾಲೆಗೆ ಹೋಗಿ ಸ್ಟ್ರೈಕ್ ಮಾಡುತ್ತಾರೆ. ಮಕ್ಕಳೇ, ನೀವು ಹೀಗೆ ನಾಶವಾಗದಿರಿ.

ನೆಚ್ಚಿನ ಮಕ್ಕಳೇ, ಈಶ್ವರನಲ್ಲಿ ನಂಬಿಕೆ ಮೊಳಕೆಯೊಡೆದಾಗ ನಾವು ಒಂದಾಗುತ್ತೇವೆ. ಇತರರನ್ನು ನಾವು ಪ್ರೀತಿಸುತ್ತೇವೆ; ಒಳ್ಳೆದನ್ನು ಮಾಡುತ್ತೇವೆ. ತಂದೆ ತಾಯಂದಿರನ್ನು ಅನುಸರಿಸುತ್ತೇವೆ. ಗುರುವನ್ನು ಆಚಾರಪೂರ್ವಕವಾಗಿ ವಂದಿಸುತ್ತೇವೆ. ಹೀಗೆ ನಾವು ಒಳ್ಳೆಯವರಾಗುತ್ತೇವೆ.

ಒಲವಿನ ಮಕ್ಕಳೇ, ನಾವೆಲ್ಲ ಒಂದೇ ತಾಯಿಯ ಮಕ್ಕಳು. ನಮ್ಮ ಕೈ ಸುಡುವಾಗ ನೀರಲ್ಲಿ ಅದ್ದಲು ನಮಗೆಷ್ಟು ಹುಮ್ಮಸ್ಸಿರುವುದೋ ಅಷ್ಟೇ ಹುಮ್ಮಸ್ಸಿನಿಂದ ನಾವು ಇತರರಿಗೆ ಕರುಣೆ ತೋರಿಸಬೇಕು. ನಮ್ಮ ಒಂದು ಕೈ ಸುಟ್ಟಾಗ “ನನಗಲ್ಲವಲ್ಲ ಸುಟ್ಟದ್ದು” ಎಂದು ಹೇಳಿ ಇನ್ನೊಂದು ಕೈ ಅದಕ್ಕೆ ಮದ್ದು ಹಚ್ಚಲು ಒಪ್ಪದಿರುತ್ತದೆಯೇ ? “ನಾನು” ಶರೀರವನ್ನಿಡೀ ವ್ಯಾಪಿಸಿದೆ. ಶರೀರದ ಒಂದು ಭಾಗದ ನೋವನ್ನು ಎಲ್ಲಾ ಭಾಗಗಳೂ ಅನುಭವಿಸುತ್ತದೆ. ಅದೇ ಪ್ರಕಾರ ಎಲ್ಲೆಲ್ಲೂ ಒಂದೇ ಚೈತನ್ಯ ತುಂಬಿಕೊಂಡಿರುವುದರಿಂದ ಪ್ರಪಂಚದ ಒಂದೊಂದೂ ಚಿಕ್ಕ ಜೀವಿಯ ದುಃಖವನ್ನು ಕೂಡ ಅರಿವಿಲ್ಲದೆಯೇ ಅನುಭವಿಸುತ್ತೇವೆ. ಇದನ್ನರ್ಥ ಮಾಡಿಕೊಂಡು ಮಕ್ಕಳೂ ಯಾವಾಗಲೂ ಕರುಣೆಯೊಡಗೂಡಿ ನಡೆದುಕೊಳ್ಳಬೇಕು. ಕೆಲಸದ ಫಲವನ್ನು ನಾವು ಇಚ್ಛಿಸಬಾರದು. ಭಗವಂತನಿಗೆ ಅರ್ಪಿಸಿದರೆ ಸಾಕು, ಅವನು ನಮಗೆ ಬೇಕಾದದ್ದನ್ನು ಕೊಡುವನು.

ಮುದ್ದಿನ ಮಕ್ಕಳೇ, ನೀವು ಹೊಂಡದಲ್ಲಿ ಬಿದ್ದರೆ ಸರಿಯಾಗಿ ದಾರಿ ತೋರಿಸಲಿಲ್ಲವೆಂದು ಸ್ವಂತ ಕಣ್ಣುಗಳನ್ನೇ ಚುಚ್ಚಿ ಕಿತ್ತುಬಿಡುತ್ತೀರ ? ನಮ್ಮ ಕಣ್ಣಿನ ತಪ್ಪನ್ನು ನಾವು ಕ್ಷಮಿಸುವ ಹಾಗೆ, ಇತರರ ಕುಂದುಗಳನ್ನು ಮನ್ನಿಸಿ ಅವರಲ್ಲಿ ಕರುಣೆಯಿಂದ ವರ್ತಿಸಬೇಕು. ಯಾರು ಏನೇ ಮಾಡಿದರೂ ನಾವು ಗಮನಿಸಬೇಕಾಗಿಲ್ಲ. ಆದರೆ ಇವತ್ತು ಮನುಷ್ಯನು ಪ್ರಾರ್ಥಿಸಿದರೂ ಅದು ಇನ್ನೊಬ್ಬರನ್ನು ನಾಶ ಮಾಡಲಿಕ್ಕೆಂದು. “ದೇವರೇ ನನಗೆ ಅವನನ್ನು ಕೊಲ್ಲಲು ಶಕ್ತಿ ದಯಪಾಲಿಸು, ಆ ಭೂಮಿ ನನಗೆ ಕೊಡಿಸು; ಅವನನ್ನು ಪೋಲೀಸಿನವರು ಹಿಡಿದುಕೊಂಡು ಹೋಗುವಂತಾಗಲಿ; ಅವರು ಗುಡುಗು ಮಿಂಚಿನಿಂದ ಸತ್ತೇ ಹೋಗಲಿ; ಅವನಿಗೆ ದೇವರು ಶಿಕ್ಷೆಕೊಡಲಿ,” – ಇದು ಇಂದಿನ ಪ್ರಾರ್ಥನೆ. ಹೀಗಲ್ಲ ಮಕ್ಕಳೇ ನಾವು ಪ್ರಾರ್ಥಿಸಬೇಕಾಗಿರುವುದು. “ಭಗವಂತ, ನೀನು ಎಲ್ಲರಿಗೂ ಒಳಿತು ಮಾಡು, ನನ್ನಿಂದ ಏನೂ ತಪ್ಪು ಆಗದಿರಲಿ, ಇತರರ ತಪ್ಪುಗಳನ್ನು ಕ್ಷಮಿಸಲು ನನಗೆ ಶಕ್ತಿ ಬರಲಿ, ನನ್ನ ತಪ್ಪುಗಳನ್ನು ದಯವಿಟ್ಟು ಮನ್ನಿಸು” ಎಂದಾಗಿರಬೇಕು ನಮ್ಮ ಪ್ರಾರ್ಥನೆ. ಈ ಪ್ರಾರ್ಥನೆಯ ತರಂಗಗಳು ವಾತಾವರಣವನ್ನೇ ಪರಿಶುದ್ಧಿಗೊಳಿಸುತ್ತದೆ. ಪರಿಸರ ಶುದ್ಧವಾದರೆ ಆರೋಗ್ಯಕರ ಜೀವನ ನಡೆಸಬಹುದು. ಇಲ್ಲವೆಂದರೆ ನಮ್ಮ ಮನಸ್ಸಿಗೆ ಏಕಾಗ್ರತೆ ಸಿಗದು. ಆದಕಾರಣ ಮೆಚ್ಚಿನ ಮಕ್ಕಳು ಭಗವಂತನಲ್ಲಿ ನಂಬಿಕೆಯುಳ್ಳವರಾಗಿ ಬಾಳಿರಿ.

ನೆಚ್ಚಿನ ಮಕ್ಕಳೇ, ಜೀವಿಸಲಿಕ್ಕಾಗಿ ಉಣ್ಣಿರಿ ! ಏಳಲಿಕ್ಕಾಗಿ ಮಲಗಿ. ಅದು ಬಿಟ್ಟು ಇನ್ನೇನೋ ಮಾಡಬೇಡಿ. ಮಕ್ಕಳೇ, ಧ್ಯಾನವೆನ್ನುವುದು ಎಳೆ ಮಕ್ಕಳಿಗೆ ಸಹ ಒಳ್ಳೆಯದು. ಬುದ್ಧಿಯನ್ನು ಉದ್ದೀಪನಗೊಳಿಸುತ್ತದೆ; ನೆನಪಿನಶಕ್ತಿ ವರ್ಧಿಸುತ್ತದೆ; ಅವರಿಗೆ ಸರಿಯಾಗಿ ಕಲಿಯಲು ಸಾಧ್ಯವಾಗುತ್ತದೆ. ಅದು ಬಿಟ್ಟು, ಮಕ್ಕಳೆಲ್ಲ ಸಂನ್ಯಾಸಿಗಳಾಗಬೇಕೆಂದು ಅಮ್ಮ ಹೇಳುತ್ತಿಲ್ಲ. ಆನಂದಮಯವಾದ ಜೀವನ ಮಕ್ಕಳದ್ದಾಗಲಿ ! ನಿಮ್ಮ ಆತ್ಮದ ಸ್ವರೂಪದ ಬಗ್ಗೆ ಚಿಂತನೆ ನಡೆಸುವಾಗ ನಿಮಗೆ ಆನಂದದ ರಹಸ್ಯ ಅರ್ಥವಾಗುವುದು; ಮಕ್ಕಳ ಮನಸ್ಸಿನ ಅಲೆಗಳು ಇಲ್ಲದಂತಾಗುವುದು.

ಮುದ್ದಿನ ಮಕ್ಕಳೇ, ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಒಳ್ಳೆ ವಿಚಾರ ಮಾಡಿದರೆ ಸಾಕು. ಕೆಟ್ಟದ್ದು ನಮ್ಮನ್ನು ಬಿಟ್ಟು ಹೋಗುವುದು; ಉಪ್ಪುನೀರಿಗೆ ಅವ್ಯಾಹತವಾಗಿ ಒಳ್ಳೆ ನೀರು ಸುರಿದಾಗ ಉಪ್ಪುಬಿಟ್ಟು ಹೋಗುವ ಹಾಗೆ. ನೀರು ಬರುವ ನಲ್ಲಿಯಲ್ಲಿ ಅಳವಡಿಸಿದ ಫಿಲ್ಟರ್ ಹೇಗೆ ನೀರಿನ ಕಷ್ಮಲಗಳನ್ನು ಸೋಸಿ ತೆಗೆಯುತ್ತದೆಯೋ, ಹಾಗೇ ಧ್ಯಾನವೆನ್ನುವ ಫಿಲ್ಟರ್ ನಮ್ಮಲ್ಲಿಯ ಕಷ್ಮಲಗಳನ್ನು ತೆಗೆದುಬಿಡುತ್ತದೆ.

ಮಕ್ಕಳೇ, ಎಲ್ಲಾ ನಿಮ್ಮಲ್ಲೇ ಇದೆ. ಪ್ರಯತ್ನಿಸಿದಲ್ಲಿ ನೀವು ಅದನ್ನು ಕಂಡುಹಿಡಿಯಬಹುದು. ಪ್ರಾಪಂಚಿಕ ವಸ್ತುಗಳಿಂದ ಸಿಗುವ ಆನಂದವು, ಒಳಗಿನ ಆನಂದದ ಬರೇ ಒಂದು ಭಾಗ ಮಾತ್ರ. ಆ ಆನಂದ ಪ್ರಪಂಚದ ವಸ್ತುಗಳಿಂದ ಸಿಗುತ್ತದೆ ಎಂದು ಮಕ್ಕಳು ಅಂದುಕೊಳ್ಳದಿರಿ. ನಾಯಿಯಂತೆ, ತಾನು ಜಗಿಯುತ್ತಿರುವ ಮೂಳೆಯಲ್ಲಿ ಮಾಂಸವಿದೆ ಎಂದೆಣಿಸಿ ಸ್ವಂತ ಒಸಡನ್ನೇ ಗಾಯಕ್ಕೀಡಾಗಿಸಬೇಡಿ ಮಕ್ಕಳೇ.

ಮುದ್ದು ಮಕ್ಕಳೇ, ಭಗವಂತನು ಸದಾ ಸುರಿಸುತ್ತಿರುವ ಕೃಪೆಗೆ ನಾವು ಪಾತ್ರರಾಗೋಣ. ನದಿ ಯಾವಾಗಲೂ ಹರಿಯುತ್ತಿರುತ್ತದೆ. ನಡುವೆ ಒಡ್ಡು ಕಟ್ಟಿ, ನೀರು ಸಿಗುತ್ತಿಲ್ಲವೆಂದು ನಾವು ದೋಷಾರೋಪಣೆ ಮಾಡುತ್ತೇವೆ. ಒಡ್ದು ಕಟ್ಟಿದವರೂ ನಾವೇ. ನಾವು ಕಟ್ಟಿದ ಅಹಂಕಾರದ, ಅಜ್ಞಾನದ ಒಡ್ಡುಗಳನ್ನು ಕೆಡವಿದಾಗ, ಸದಾ ಸುರಿಯುತ್ತಲಿರುವ ಈಶ್ವರನ ಕೃಪೆ ನಮ್ಮದಾಗುವುದು.

ಮಕ್ಕಳೇ, ಎಲ್ಲವನ್ನೂ ಜಯಿಸಿದವರು ಏನನ್ನೂ ನೋಡುವುದಿಲ್ಲ. ಅವರಿಗೆ ನಾವು ಏನನ್ನೂ ಮಾಡಬೇಕಾಗಿಲ್ಲ. ಆದರೆ ನಾವು ಅನಿತ್ಯದಲ್ಲಿ ಜೀವಿಸುವವರು. ಹಾಗಾಗಿ ನಾವು ಇವತ್ತು ಬೆಟ್ಟ, ಹೊಂಡ, ಮಳೆ, ಗಿಡ, ಸಮುದ್ರ, ಕಾಡು ಹೀಗೆ ಬಹಳಷ್ಟು ಕಾಣುತ್ತಾ, ಕೇಳುತ್ತಾ ಇದ್ದೇವೆ. ಮೇಲೇರಿ ಹೋದಂತೆ ಭೂಮಿಯ ದೃಶ್ಯಗಳು ಬರೇ ಚುಕ್ಕೆಯಾಗಿ ಕಾಣಿಸುತ್ತವೆ. ಕೊನೆಗೆ ಎಲ್ಲ ಒಂದಾಗಿ, ಏನೂ ಕಾಣಿಸುವುದಿಲ್ಲ. ಅದೇ ರೀತಿ, ತಮ್ಮ ಸ್ವರೂಪದೆತ್ತರಕ್ಕೆ ಏರಿದವರು ಏನನ್ನೂ ಕಾಣುವುದಿಲ್ಲ. ಆ ಘಟ್ಟಕ್ಕೆ ಮುಟ್ಟದಿರುವವರೆಗೆ ಎಲ್ಲಾ ಮಿಥ್ಯೆಯೆಂದು ಹೇಳಿಕೊಂಡು ಸುಮ್ಮನಿರ ಬೇಡಿ. ಲೋಕದ ಬಗ್ಗೆ ಉತ್ತರದಾಯಿತ್ವ ಬೇಕು. ಹಾಗೆ ಆದರೆ ಸಮಯ ಹಾಳಾದಂತಾಗುವುದಿಲ್ಲ. ಕಳೆದ ಸಮಯ ಮರಳಿ ಬರುವುದಿಲ್ಲ. ಆದಕಾರಣ ಮಕ್ಕಳು ಸಮಯ ಪೋಲು ಮಾಡದೆ ನಡೆದುಕೊಳ್ಳಿ. ಮಕ್ಕಳೇ, ಗಾಳಿಯಂತಾಗಬೇಕು. ಗಾಳಿ ಹೂವಿನ ಮೇಲೂ ಮಲದ ಮೇಲೂ ಸಮಾನವಾಗಿ ಬೀಸುತ್ತದೆ. ಮಲವೆಂದು ಬದಿಯಿಂದ ಸರಿದು ಹೋಗುವುದಿಲ್ಲ; ಹೂವೆಂದು ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಹೀಗೆಯೇ ಸುಖದುಃಖಗಳಲ್ಲಿ, ಒಳಿತು ಕೆಡುಕುಗಳಲ್ಲಿ ಸಮನಾಗಿ ಪ್ರತಿಕ್ರಿಯಿಸಿ ನಡೆದುಕೊಳ್ಳಿ ಮಕ್ಕಳೇ.