ಪ್ರಶ್ನೆ: ಅಮ್ಮಾ, ಬಹಳ ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ; ಆದರೂ ಯಾವೊಂದು ತರದ ಅನುಭವವೂ ಆಗಿಲ್ಲ.

“ಅಮ್ಮನನ್ನು ಕಾಣಲು ಬರುವ ಮಕ್ಕಳಲ್ಲಿ ಹಲವರು ಹೇಳುವ ಮಾತಿದು. ಗೃಹಸ್ಥಾಶ್ರಮಿ ಮಕ್ಕಳೂ ಹೇಳುತ್ತಾರೆ, ’ನಾವು ಎಷ್ಟೆಲ್ಲ ಧ್ಯಾನ ಮಾಡಿಯೂ, ಜಪ ಮಾಡಿಯೂ ದೊಡ್ಡ ಪ್ರಯೋಜನವೇನೂ ಆದ ಹಾಗೆ ಅನಿಸುವುದಿಲ್ಲ.’ ಎಂದು. ಮಕ್ಕಳೇ, ದೇವರನ್ನು ಪ್ರಾರ್ಥಿಸಲು, ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುವೆವು. ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತೇವೆ. ಮೂರ್ತಿಯೆದುರಿಗೆ ಕೈಜೋಡಿಸಿ ನಿಂತಿರುವಾಗ ನಮ್ಮೆದುರಿಗೆ ಯಾವನಾದರೂ ಬಂದು ನಿಂತುಕೊಂಡರೆ, ನಮ್ಮ ಚರ್ಯೆ ಬದಲಾಗುತ್ತದೆ. ಅವನ ಮೇಲೆ ಸಿಟ್ಟು ಬರುತ್ತದೆ. ಆಗ ಅಲ್ಲಿಯ ತನಕ ಏಕಾಗ್ರತೆಯಿಂದ ಗಳಿಸಿದ ಶಕ್ತಿಯ ಎರಡರಷ್ಟು ಪಾಲು ನಷ್ಟವಾಗುತ್ತದೆ. ಕ್ಷೇತ್ರದಿಂದ ಹೊರಗೆ ಬರುವಾಗ ಬಾಗಿಲಲ್ಲಿರುವ ಭಿಕ್ಷುಕನು ಏನಾದರೂ ಮಾತನಾಡಿದರೆ ಅವನನ್ನು ಒದೆಯಲೂ ನಾವು ಹೇಸುವುದಿಲ್ಲ. ಇದಲ್ಲ ಮಕ್ಕಳೇ, ಭಕ್ತಿ. ಆ ಭಿಕ್ಷೆ ಬೇಡುವವನಿಗೆ ತೋರಿಸುವ ಕರುಣೆಯೇ, ದೇವಾಲಯದಲ್ಲಿರುವ ಈಶ್ವರನ ಪ್ರೇಮಕ್ಕೆ ನಮ್ಮನ್ನು ಪಾತ್ರರನ್ನಾಗಿಸುವುದು. ಇದು ನಮ್ಮಿಂದ ಆಗುವುದಿಲ್ಲ. ಮತ್ತೆ ಹೇಗೆ ನಮಗೆ ಅನುಭೂತಿ ಸಿಗುವದು ? ದೇವರೇ ವೇಷ ಬದಲಿಸಿ ಬೇರೆ ರೂಪದಲ್ಲಿ ಬಂದರೂ ನಾವು ಸಿಟ್ಟು ಮಾಡುತ್ತೇವೆ. ಇದು ನಮ್ಮ ಸ್ವಭಾವ. ಮತ್ತೆ ಹೇಗೆ ಮಕ್ಕಳೇ ಪ್ರಯೋಜನ ಸಿಕ್ಕುವುದು ?

ಪ್ರೀತಿಯ ಮಕ್ಕಳೇ, ಸಮತ್ವ ಭಾವನೆಯೇ ದೈವತ್ವಕ್ಕೊಯ್ಯುವ ದಾರಿ. ದೇವರಿಗೆ ಹತ್ತಿರವಾಗಬೇಕಾದರೆ ಎಲ್ಲರನ್ನೂ ಸಮನಾಗಿ ಕಾಣಲು ಪ್ರಯತ್ನಿಸಬೇಕು. ಎಲ್ಲರಲ್ಲೂ ಸಮನಾದ ಪ್ರೇಮವಿದ್ದರೆ ಮಾತ್ರ ಭಗವಂತನು ನಮ್ಮನ್ನು ಸ್ವೀಕರಿಸುವನು. ದೇವರಿಗೆ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ. ಎಲ್ಲರೂ ಸಮಾನರು.

ಈ ಲೋಕದಲ್ಲಿ ನಮಗೇನಾದರೊಂದು ಕಾರ್ಯದಲ್ಲಿ ಮುಂದುವರಿಯಲು ಯಾರ ಒಪ್ಪಿಗೆಯೋ, ಸರ್ಟಿಫಿಕೇಟೋ ಬೇಕಾಗಿಲ್ಲ. ಆದರೆ ಈಶ್ವರನ ಲೋಕ ಮುಟ್ಟಬೇಕಾದರೆ ಮಾತ್ರ ಒಂದು ಇರುವೆಯೆದುರಿಗೂ ಸಹ ತಲೆ ಬಾಗಿಸುವ ಮನೋಭಾವ ನಮಗಿರಬೇಕು. ಭಗವಾನನ ಹತ್ತಿರ ಸೇರಲು ಎನ್.ಓ.ಸಿ. ಬೇಕಾಗಿದ್ದರೆ, ಒಂದು ಇರುವೆಯ ಸಹಿ ಕೂಡಾ ಅವಶ್ಯ. ಅಂದರೆ ಮಾತ್ರ, ಭಗವಂತನು ನಮ್ಮ ಮನಸ್ಸನ್ನು ಆತ್ಮಲೋಕಕ್ಕೊಯ್ಯುವನು. ಅದಕ್ಕಾಗಿ, ಎಲ್ಲಾ ಜೀವಜಂತುಗಳ ಪ್ರತಿ ಪ್ರೇಮವನ್ನೂ, ಕರುಣೆಯನ್ನೂ, ವಿಶಾಲತೆಯನ್ನೂ ಮಕ್ಕಳು ಬೆಳೆಸಿಕೊಳ್ಳಬೇಕು.

ಮಕ್ಕಳೇ, ಅವರವರ ಜಗತ್ತಿನಲ್ಲಿ ಅವರವರು ದೊಡ್ಡವರು. ಒಂದು ಸೊಳ್ಳೆಗೂ ಸಹ ತನ್ನ ಜಗತ್ತೇ ಬೇರೆಲ್ಲದ್ದಕ್ಕಿಂತಲೂ ಮಿಗಿಲು.

ಸ್ನೇಹಿತರಾದ ಇಬ್ಬರು ಜ್ಯೋತಿಷಿಗಳಿದ್ದರು. ತಮ್ಮ ಭಾವೀ ಜನ್ಮದ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಶ್ನೆ ಹಾಕಿ ನೋಡಿದರು. ಮುಂಬರುವ ಜನ್ಮದಲ್ಲಿ ಒಬ್ಬನು ಸೊಳ್ಳೆಯಾಗಿಯೂ ಇನ್ನೊಬ್ಬನು ದನವಾಗಿಯೂ ಹುಟ್ಟುವರೆಂದೂ ಅಲ್ಲದೆ ಪರಸ್ಪರರನ್ನು ಕಂಡು ಹುಡುಕುತ್ತಾರೆಂದೂ ಅವರಿಗೆ ತಿಳಿದು ಬಂತು. ಸೊಳ್ಳೆಯಾಗಿ ಜನಿಸಲಿರುವವನು ತನ್ನ ಗೆಳೆಯನಿಗೆ ಹೇಳುತ್ತಾನೆ, ’ಬರುವ ಜನ್ಮದಲ್ಲಿ ನಾವು ಹೇಗೂ ಭೇಟಿಯಾತ್ತೇವಲ್ಲವೇ. ಆಗ ನೀನು ನನ್ನನ್ನು ಹೊಸಕಿ ಕೊಲ್ಲಬೇಕು. ಹೀಗೆ ಈ ನಿಕೃಷ್ಟ ಜೀವನದಿಂದ ಮೋಕ್ಷ ಗಳಿಸಿ, ಬೇಗನೆ ನನಗೆ ಭಗವಂತನೆಡೆ ಮುಟ್ಟಬಹುದು.’

ಗೆಳೆಯನೂ ಸಮ್ಮತಿಸಿದ. ಇಬ್ಬರೂ ಮರಣಾನಂತರ ಹಿಂದಿನ ಜನ್ಮದಲ್ಲಿ ಅವರು ಕಂಡಿದ್ದಂತೆ, ಸೊಳ್ಳೆಯಾಗಿಯೂ ದನವಾಗಿಯೂ ಜೀವಿಸುತ್ತಾರೆ. ದನಕ್ಕೆ ಪೂರ್ವ ಜನ್ಮದ ಸ್ಮರಣೆ ಸ್ಫುರಿಸಿತು. ಸಂಗಡಿಗ ಸೊಳ್ಳೆಯಾಗಿ ವಾಸಿಸುತ್ತಿರುವ ಕೊಳಕು ಚರಂಡಿಯನ್ನು ಹೇಗಾದರೂ ಬಹಳ ಕಷ್ಟದಿಂದ ದನ ತಲುಪಿತು. ಗೆಳೆಯನ ಪರಿಸ್ಥಿತಿ ನೋಡಿ ದನಕ್ಕೆ ತುಂಬಾ ಪರಿತಾಪವೆನಿಸಿತು. ಕಳೆದ ಜನ್ಮದಲ್ಲಿ ಮಾತುಕೊಟ್ಟಿದ್ದ ಹಾಗೆ ಸೊಳ್ಳೆಯನ್ನು ತನ್ನ ಗೊರಸಿನಡಿಯಲ್ಲಿ ಹೊಸಕಿ ಕೊಲ್ಲಲೆಂದು ಅದು ಮುಂದೆ ಹಾಯಿತು. ಥಟ್ಟನೆ ಸೊಳ್ಳೆ ಚೀತ್ಕರಿಸುತ್ತ ಹೇಳುತ್ತದೆ, ’ನೀನು ಎಂಥ ಕ್ರೂರ ಕೃತ್ಯವೆಸಗಲು ಹೊರಟಿರುವುದು ?’ ’ಅವತ್ತು ನೀನು ಹೇಳಿಲ್ಲವೇ, ಸೊಳ್ಳೆಯಾಗಿದ್ದು ಕಷ್ಟವನುಭವಿಸುವುದನ್ನೊಲ್ಲೆ. ಆ ನಿಕೃಷ್ಟ ಜೀವನದಿಂದ ವಿಮೋಚನೆ ಹೊಂದಿ ಭಗವಂತನೆಡೆ ಮುಟ್ಟಬಹುದು’ ಎಂದು. ದನದ ಮಾತು ಕೇಳಿ ನಕ್ಕೊಂಡು ಸೊಳ್ಳೆ ಹೇಳುತ್ತದೆ, ’ಸರಿಯಾಗಿ ಇರಿದೆ ನೀನು. ಇದು ನಿಕೃಷ್ಟ ಜೀವನವೇ ? ಈ ಬಾಳು ಎಷ್ಟು ಸುಂದರ, ಎಷ್ಟು ಸುಖಕರ ಎಂಬುದರ ಬಗ್ಗೆ ನಿಮಗರಿವಿದೆಯೇ ? ನನಗೂ ಚೆಲುವೆಯಾದ ಹೆಂಡತಿ, ಚಂದದ ಪುಟ್ಟ ಮಕ್ಕಳು, ಇದ್ದಾರೆ. ನನಗೇನೂ ಭಗವಂತನ ಲೋಕದಲ್ಲಿ ಸುತ್ತ ಬೇಕಾಗಿಲ್ಲ. ಈ ಜಗತ್ತೊಂದು ಬಿಟ್ಟರೆ ನನಗೆ ಬೇರೆ ಯಾವ ಲೋಕವೂ ಕಾಣಿಸುತ್ತಿಲ್ಲ. ನನಗೆ ಇಲ್ಲಿಯೇ ಬದುಕಿದರೆ ಸಾಕು.’ ಮಕ್ಕಳೇ, ಇದುವೇ ಪ್ರತಿಯೊಬ್ಬರದ್ದೂ ಕಥೆ.

ಒಂದು ಸೊಳ್ಳೆಗೂ ಸಹ ತನ್ನ ಬದುಕೇ ಶ್ರೇಷ್ಠ. ಹಾಗೆಯೇ, ಲೌಕಿಕದಲ್ಲಿ ಜೀವಿಸುತ್ತಿರುವ ನಾವು ಅದುವೇ ಅತ್ಯಂತ ಉತ್ತಮವೆಂದು ಭಾವಿಸುತ್ತೇವೆ. ಬರೇ ಮನುಷ್ಯನಾಗಿ ಹುಟ್ಟಿ, ಪ್ರಾಣಿಯಾಗಿ ಜೀವನ ನಡೆಸುವವರು ಮಾತ್ರವೇ ಲೌಕಿಕ ಜೀವನದಲ್ಲಿ ಆನಂದವಿದೆಯೆಂದು ಹೇಳುವರು. ಆ ಸೊಳ್ಳೆಯು ಅನುಭವಿಸಿಕೊಂಡಿದ್ದ ಸುಖಕ್ಕಿಂತ ಒಂದಿನಿತೂ ಭಿನ್ನವಲ್ಲ ಪ್ರಾಪಂಚಿಕ ಸುಖವೆಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಈಶ್ವರನನ್ನು ಆಶ್ರಯಿಸುವುದರಿಂದ ಮಾತ್ರವೇ ಸಂಸಾರ ದುಃಖದಿಂದ ವಿಮೋಚನೆ ಹೊಂದಲೂ, ಯಥಾರ್ಥ ಆನಂದ ಸವಿಯಲೂ ಸಾಧ್ಯ”.

ಪ್ರಶ್ನೆ: ಸಾಧಕನು ಸಿಟ್ಟಾಗಬಾರದೆಂದು ಹೇಳುವುದು ಏತಕ್ಕಾಗಿ?

“ನಲ್ಮೆಯ ಮಕ್ಕಳೇ, ಒಬ್ಬ ಆಧ್ಯಾತ್ಮಿಕ ಜೀವಿಯು ಎಂದೂ ಕೋಪ ಮಾಡಬಾರದು. ಕೋಪವು ನಾವು ಸಾಧನೆಯ ಮೂಲಕ ಗಳಿಸಿದ ಶಕ್ತಿಯನ್ನು ನಷ್ಟಪಡಿಸುವುದು. ಗಾಡಿ ಓಡುತ್ತಿರಬೇಕಾದರೆ ಪೆಟ್ರೋಲ್ ಅಷ್ಟಾಗಿ ಖರ್ಚಾಗುವುದಿಲ್ಲ; ಆದರೆ ಬ್ರೇಕ್ ಅದುಮಿದಾಗ ಹೆಚ್ಚು ಖರ್ಚಾಗುತ್ತದೆ. ಇದೇ ರೀತಿ ಮಕ್ಕಳೇ, ಕೋಪ ಬಂದಾಗ. ಕೋಪ ಬಂದಾಗ ಬರೇ ಬಾಯಿಯಿಂದ ಮಾತ್ರವಲ್ಲ, ಪ್ರತಿಯೊಂದು ರೋಮ ಕೂಪದಿಂದಲೂ ಶಕ್ತಿಯ ವ್ಯಯವಾಗುತ್ತದೆ. ಒಂದು ಸಿಗರೇಟು ಲೈಟರನ್ನೂ ಹತ್ತಿಪ್ಪತ್ತು ಬಾರಿ ಅದುಮಿದರೆ ಅದರ ಪೆಟ್ರೋಲ್ ನಷ್ಟವಾಗುತ್ತದೆ. ಆದರೆ ಇದು ನಮಗೆ ಕಾಣಲು ಸಾಧ್ಯವಾಗುವುದಿಲ್ಲ; ಆದರೆ ಗೊತ್ತಾಗುತ್ತದೆ. ಇದೇ ಪ್ರಕಾರವಾಗಿ ಮಕ್ಕಳೇ, ಸದ್ಚಿಂತನೆಗಳಿಂದ ಗಳಿಸಿದ ಶಕ್ತಿಯು ಹಲವಾರು ಕಾರಣಗಳಿಂದಾಗಿ ನಷ್ಟವಾಗುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು.

ಮಕ್ಕಳೇ, ತುಂಬ ಹೆಚ್ಚಿನ ಎಚ್ಚರದಿಂದ ಮಾತ್ರ ಆಧ್ಯಾತ್ಮಿಕ ಜೀವಿಗೆ ಮುಂದುವರಿಯಲು ಸಾಧ್ಯವಾಗುವುದು. ಒಬ್ಬ ಸೂಜಿ ತೆಗೆದರೆ, ತೆಗೆಯುವಾಗಲೂ, ನೂಲು ಪೋಣಿಸುವಾಗಲೂ, ಹೊಲಿಯುವಾಗಲೂ, ಮರಳಿಡುವಾಗಲೂ ಎಷ್ಟೆಲ್ಲ ಎಚ್ಚರದಿಂದ ಮಾಡುತ್ತಾನೋ, ಅಷ್ಟು ಎಚ್ಚರ ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರಬೇಕು. ಮಕ್ಕಳೇ, ನಿರಂತರವಾದ ಎಚ್ಚರ ಮಕ್ಕಳನ್ನು ಜಯಶಾಲಿಗಳನ್ನಾಗಿ ಮಾಡುವುದು. ಏನು ಕಂಡರೂ, ಏನು ಕೇಳಿದರೂ, ಏಕಾಂತದಲ್ಲಿ ವಿಚಾರ ಮಾಡಿ. ಅದರ ನಂತರವೇ ತೀರ್ಮಾನ ಮಾಡಬೇಕು. ಎಂದಿಗೂ, ಪರಿಸ್ಥಿತಿಯ ದಾಸರಾಗಬೇಡಿ. ಅವುಗಳಿಂದ ಪಾರಾಗಲೆತ್ನಿಸಿರಿ.